ಪ್ರಗತಿಯೆಂಬ ಬಿಸಿಲ್ಗುದುರೆಯ ಬೆನ್ನೇರಿ

ಲೌಕಿಕ ಜಗತ್ತಿನಲ್ಲಿ ಪ್ರಗತಿಯೆಂದರೆ, ಅತ್ಯಕ ಹಣ ಸಂಗ್ರಹಿಸುವುದು, ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವುದು, ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿ ಸಾರಿಗೆ ಮತ್ತು ಸಂಪರ್ಕಗಳಲ್ಲಿ ಸುಧಾರಣೆ ತರುವುದು ಇತ್ಯಾದಿ. ಇಂತಹ ಕೃತಕ ಪ್ರಗತಿಗಾಗಿ ಮಾನವನು ತನ್ನ ತನು-ಮನ-ಧನ ಎಲ್ಲವನ್ನೂ ಅಮಿತವಾಗಿ ವಿನಿಯೋಗಿಸುತ್ತಿದ್ದಾನೆ. ಆದರೆ ಅವನು ಆನಂದ ಹೊಂದುವುದು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅವನು `ಸರಳ ಜೀವನ, ಉನ್ನತ ಆಲೋಚನೆ’ ಯಂತೆ  ನಡೆದುಕೊಳ್ಳದೆ, ಉನ್ನತ ಜೀವನಶೈಲಿ, ಕೆಳಮಟ್ಟದ ಆಲೋಚನೆ ಅಥವಾ ಆಲೋಚನಾಶೂನ್ಯ ಜೀವನ ನಡೆಸುತ್ತಿದ್ದಾನೆ.

ಈ ಪ್ರಗತಿಯ ಪೊರೆ ಅವನ ಕಣ್ಣುಗಳನ್ನು ಎಷ್ಟೊಂದು ಮಸುಕಾಗಿಸಿದೆಯೆಂದರೆ, ಕಟ್ಟಡಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ರಸ್ತೆಗಳ ಅಗಲೀಕರಣ ಹೀಗೆ ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತ ಜೀವಿಸಲು ಅತ್ಯಾವಶ್ಯಕವಾದ ಗಿಡ-ಮರಗಳನ್ನು ಕಲ್ಪನಾತೀತ ಪ್ರಮಾಣದಲ್ಲಿ ಕಡಿದುಹಾಕುತ್ತಿದ್ದಾನೆ. ಅರಣ್ಯಗಳೇ ಮಂಗಮಾಯವಾಗುತ್ತಿವೆ. ವಾಹನಗಳಿಗೆ ಬೇಕಾದ ಇಂಧನವನ್ನು ತರಲು ಅವನು ಸಾಗರದಾಳಕ್ಕೆ ಇಳಿಯಬೇಕಾಗಿದೆ. ತೈಲ ಸೋರಿಕೆಗಳಿಂದಾಗಿ ಜಲಚರಗಳು ಅಳಿವಿನಂಚಿಗೆ ತಲಪುವಂತಾಗಿದೆ. ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ರಸ್ತೆ ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತಿವೆ. ಪೆಟ್ರೋಲ್‌ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು ಜೀವನ ಕಬ್ಬಿಣದ ಕಡಲೆಯಂತಾಗಿದೆ. ಒಟ್ಟಿನಲ್ಲಿ ಮಾನವನು ಈ ಪ್ರಪಂಚಕ್ಕೆ ನೀಡಿರುವ ಕಾಣಿಕೆಯೆಂದರೆ ಪ್ರಾಕೃತಿಕ ಅಸಮತೋಲನ ಮತ್ತು ಅನಂತ ಅಸಂತೃಪ್ತಿ. ನಾಯಿಕೊಡೆಯಂತೆ ತಲೆಯೆತ್ತುತ್ತಿರುವ ಕೈಗಾರಿಕಾ ಕೇಂದ್ರಗಳಿಂದಾಗಿ ಜಲ ಮತ್ತು ವಾಯು ಮಾಲಿನ್ಯಗಳು ಹೆಚ್ಚುತ್ತಿವೆ. ಇವುಗಳಿಂದಾಗಿ ಆರೋಗ್ಯ ಮತ್ತು ನೆಮ್ಮದಿ ಅವನತಿಯ ಹಾದಿ ಹಿಡಿದಿವೆ.

ಈ ಗೊಂದಲಕ್ಕೆಲ್ಲ ಕಾರಣ? ಅವನು ನಿಜವಾದ ಸಮಸ್ಯೆಗಳನ್ನು ಬಿಟ್ಟು ಕ್ಷುಲ್ಲಕ ಸಮಸ್ಯೆಗಳಲ್ಲಿ ಹೆಚ್ಚು ಆಸಕ್ತನಾಗಿರುವುದು ಮತ್ತು ನಿಜವಾದ ಗುರಿಯತ್ತ ತನ್ನ ಚಿತ್ತವನ್ನು ಕೇಂದ್ರೀಕರಿಸದೇ ಇರುವುದು. ಭಗವದ್ಗೀತೆಯಲ್ಲಿ ಹೇಳಿರುವಂತೆ, ಮಾನವನು ಲಕ್ಷ್ಯವಹಿಸಬೇಕಾಗಿರುವ ಅತ್ಯಂತ ಪ್ರಮುಖ ಸಮಸ್ಯೆಗಳೆಂದರೆ, ಜನನ, ಮರಣ, ರೋಗ ಮತ್ತು ಮುಪ್ಪು. ಇನ್ನು ಅವನ ಜೀವನದ ಗುರಿ ಆಧ್ಯಾತ್ಮಿಕ ಗುರುವಿನ ಆಶ್ರಯದಡಿಯಲ್ಲಿ ಆಧ್ಯಾತ್ಮಿಕ ಜ್ಞಾನ ಅಂದರೆ ಕೃಷ್ಣಪ್ರಜ್ಞೆಯನ್ನು ಮೈಗೂಡಿಸಿಕೊಂಡು, ಭಗವದ್ಧಾಮಕ್ಕೆ ಮರಳುವುದಾಗಿದೆ.

ಮಾನವ ಜನ್ಮ ದೊರೆಯುವುದೇ ದುರ್ಲಭ. ದೊರೆತ ಅನಂತರ ಅದನ್ನು ಭಗವಂತನ ಸೇವೆಯಲ್ಲಿ ತೊಡಗಿಸುವುದು ಮತ್ತು ಪುನರ್ಜನ್ಮದಂತಹ ಶಾಪದಿಂದ ಮುಕ್ತರಾಗಲು ಸದುಪಯೋಗಪಡಿಸಿಕೊಳ್ಳುವುದೇ ನ್ಯಾಯ. ಅದನ್ನು ಬಿಟ್ಟು ಪ್ರಕೃತಿ ನಿಯಮಗಳಿಗೆ ವಿರುದ್ಧವಾದ ಕೆಲಸಗಳನ್ನೇ ಮಾಡುತ್ತ, ಮರುಜನ್ಮ ಪಡೆಯುತ್ತ ಈ ಸಂಸಾರದ ಕುಲುಮೆಯಲ್ಲಿ ಬೆಂದು ಬಳಲುತ್ತ ಭಗವಂತನ ಯೋಜನೆಗೆ ಅವಮಾನ ಮಾಡಬಾರದು. ನಿಜವಾದ ಪ್ರಗತಿಯೆಂದರೆ, ಅನವಶ್ಯಕ ಜೀವನಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುತ್ತ ಹೋಗುವುದಲ್ಲ. ಮಾನವನ ಜೀವನದಲ್ಲಿ ಅತ್ಯಾವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು, ಅವನು ಭಗವಂತನ ಸೇವೆ ಮಾಡುತ್ತ, ಅವನ ಧಾಮಕ್ಕೆ ಮರಳುವ ಸಿದ್ಧತೆಯಲ್ಲಿ ನಿರತರಾಗಿರುವುದೇ ಅಪ್ಪಟ ಪ್ರಗತಿಯಾಗಿದೆ.

ಕೃಷ್ಣಪ್ರಜ್ಞೆ ಮತ್ತು ಅದರ ಮೂಲಕ ಮುಕ್ತಿ ಗಳಿಸುವುದೇ ನಿಜವಾದ ಪ್ರಗತಿ. ನಾವು ನಿಜವಾಗಲೂ ಪ್ರಗತಿ ಸಾಧಿಸಬೇಕೆಂದುಕೊಂಡಿದ್ದರೆ, ಕೃಷ್ಣಪ್ರಜ್ಞೆಯನ್ನು ಆಶ್ರಯಿಸಬೇಕು. ಅದರಿಂದಾಗಿ ನಮಗೆ ಮುಕ್ತಿ ದೊರೆಯುತ್ತದೆಯಲ್ಲದೇ, ನಾವು ಮತ್ತೆ ಈ ಲೌಕಿಕ ಜಗತ್ತಿಗೆ ಬಂದು ಅಶಾಶ್ವತವಾದ ಲೌಕಿಕ ಶರೀರವನ್ನು ಪಡೆಯುವಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳುತ್ತೇವೆ.  ಭಗವದ್ಗೀತೆಯಲ್ಲಿ (7.14) ಕೃಷ್ಣನ ವಾಣಿ ತುಂಬ ಪ್ರಸ್ತುತ ಮತ್ತು ಮೇಲೆ ಪಟ್ಟಿ ಮಾಡಲಾಗಿರುವ ಸಕಲ ಸಮಸ್ಯೆಗಳಿಗೂ ಪರಿಹಾರವಾಗಿದೆ:

ದೈವೀ ಹಿ ಏಷಾ ಗುಣಮಯೀ ಮಮ ಮಾಯಾ ದುರತ್ಯಯಾ ।

ಮಾಮ್‌ ಏವ ಯೇ ಪ್ರಪದ್ಯಂತೇ ಮಾಯಾಮ್‌ ಏತಾಂ ತರಂತಿ ತೇ ॥

“ಐಹಿಕ ಪ್ರಕೃತಿಯ ತ್ರಿಗುಣಗಳಿಂದ ಆದ ಈ ನನ್ನ ದೈವೀಶಕ್ತಿಯನ್ನು ಮೀರುವುದು ಬಹಳ ಕಷ್ಟ. ಆದರೆ ನನಗೆ ಶರಣಾಗತರಾದವರು ಸುಲಭವಾಗಿ ಅದನ್ನು ದಾಟಿ ಹೋಗಬಲ್ಲರು.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi