ನಿಜವಾದ ಜಾಗತಿಕ ಒಗ್ಗಟ್ಟು

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಬಾಸ್ಟನ್‌ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಂಘದಲ್ಲಿ 1969ರಲ್ಲಿ ನೀಡಿದ ಒಂದು ಉಪನ್ಯಾಸ.

ನಮ್ಮೊಡನೆ ಈ ಕೃಷ್ಣಪ್ರಜ್ಞಾ ಆಂದೋಲನದಲ್ಲಿ ಭಾಗವಹಿಸುತ್ತಿರುವುದಕ್ಕೆ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಸಂಘವು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಂಘವೆಂದು ಪ್ರಸಿದ್ಧಿಯಾಗಿದೆಯೆಂದು ನನಗೆ ತಿಳಿದುಬಂದಿದೆ. ಇತರೆ ಅನೇಕ ಅಂತಾರಾಷ್ಟ್ರೀಯ ಸಂಘಗಳಿವೆ. ಉದಾಹರಣೆಗೆ, ವಿಶ್ವಸಂಸ್ಥೆ. ಆದ್ದರಿಂದ ಅಂತಾರಾಷ್ಟ್ರೀಯ ಸಂಘ ಎಂಬ ಕಲ್ಪನೆಯು ಬಹಳ ಸೊಗಸಾಗಿದೆ. ಆದರೆ ಒಂದು ಅಂತಾರಾಷ್ಟ್ರೀಯ ಸಂಘದ ಕೇಂದ್ರ ಕಲ್ಪನೆ ಏನಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು.

ಒಂದು ಕೊಳದ ನೀರಿನ ಮಧ್ಯಭಾಗಕ್ಕೆ ನೀವು ಒಂದು ಕಲ್ಲನ್ನು ಎಸೆದರೆ, ಒಂದು ವರ್ತುಳವು ದಂಡೆಯವರೆಗೆ ವಿಸ್ತರಿಸುತ್ತಾ ಹೋಗುತ್ತದೆ. ಅದೇ ರೀತಿಯಲ್ಲಿ ರೇಡಿಯೋ ತರಂಗಗಳು ವರ್ತುಳಾಕಾರವಾಗಿ ವಿಸ್ತರಿಸುತ್ತವೆ. ನಿಮ್ಮ ರೇಡಿಯೋ ಉಪಕರಣದಲ್ಲಿ ಆ ತರಂಗಗಳನ್ನು ನೀವು ಗ್ರಹಿಸಿದಾಗ, ಸಂದೇಶವನ್ನು ಕೇಳಬಹುದು. ಅದೇ ರೀತಿಯಲ್ಲಿ ನಮ್ಮ ಪ್ರೇಮ ಭಾವನೆ ಕೂಡ ವಿಸ್ತರಿಸಬಲ್ಲದು.

ನಮ್ಮ ಜೀವನದ ಪ್ರಾರಂಭ ಕಾಲದಲ್ಲಿ ನಮಗೆ ಕೇವಲ ತಿನ್ನುವುದಷ್ಟೇ ಗೊತ್ತು. ಮಗು ಏನನ್ನೇ ಹಿಡಿದುಕೊಳ್ಳಲಿ ಅದನ್ನು ತಿನ್ನಲು ಬಯಸಿ ಬಾಯಿಗಿಟ್ಟುಕೊಳ್ಳುತ್ತದೆ. ಮಗುವಿಗೆ ಇರುವುದು ಕೇವಲ ವೈಯಕ್ತಿಕ ಆಸಕ್ತಿ ಮಾತ್ರ. ಅನಂತರ ಮಗುವು ಸ್ವಲ್ಪ ಬೆಳೆದು ದೊಡ್ಡವನಾದಾಗ ತನ್ನ ಸೋದರ ಸೋದರಿಯರೊಡನೆ ಭಾಗವಹಿಸಲು ಬಯಸುತ್ತದೆ: “ಆಗಲಿ, ನೀನೂ ಕೊಂಚ ತೆಗೆದುಕೋ.” ಸಹಭಾಗಿತ್ವದ ಭಾವನೆಯಲ್ಲಿ ಇದು ಒಂದು ವರ್ಧನೆ. ಅನಂತರ ಅವನು ಬೆಳೆದಂತೆಲ್ಲ ತನ್ನ ತಂದೆತಾಯಿಗಳ ಬಗೆಗೆ, ಅನಂತರ ತನ್ನ ಸಮುದಾಯದ ಬಗೆಗೆ, ಅನಂತರ ತನ್ನ ದೇಶದ ಬಗೆಗೆ, ಮತ್ತು ಕೊನೆಯದಾಗಿ ಎಲ್ಲ ದೇಶಗಳ ಬಗೆಗೆ ಅವನಲ್ಲಿ ಪ್ರೀತಿಯ ಭಾವನೆ ಬೆಳೆಯಲಾರಂಭಿಸುತ್ತದೆ. ಆದರೆ ಕೇಂದ್ರವು ಸರಿಯಾಗಿಲ್ಲದಿದ್ದರೆ ಭಾವನೆಯ ವಿಸ್ತರಣೆಯು ಅದು ರಾಷ್ಟ್ರೀಯವಾಗಿರಲಿ ಅಥವಾ ಅಂತಾರಾಷ್ಟ್ರೀಯವಾಗಿರಲಿ ಪರಿಪೂರ್ಣವಾಗಿರುವುದಿಲ್ಲ.

ಉದಾಹರಣೆಗೆ, ಒಂದು ರಾಷ್ಟ್ರದ ಪ್ರಜೆ ಎಂಬ ಶಬ್ದಕ್ಕೆ “ಒಂದು ನಿರ್ದಿಷ್ಟ ದೇಶದಲ್ಲಿ ಜನ್ಮ ತಾಳಿದವನು” ಎಂದು ಅರ್ಥ. ಬೇರೆ ಅಮೆರಿಕನ್ನರಿಗಾಗಿ ನೀವು ಮಿಡಿಯುತ್ತೀರಿ, ಏಕೆಂದರೆ ಅವರು ಈ ದೇಶದಲ್ಲಿ ಜನ್ಮ ತಾಳಿದ್ದಾರೆ. ನೀವು ನಿಮ್ಮ ದೇಶದ ಜನರಿಗಾಗಿ ನಿಮ್ಮ ಜೀವನವನ್ನೇ ಬಲಿದಾನವನ್ನಾಗಿ ಕೊಡಬಲ್ಲಿರಿ. ಆದರೆ ಇದರಲ್ಲೊಂದು ದೋಷವಿದೆ. ರಾಷ್ಟ್ರದ ಪ್ರಜೆ ಎನ್ನುವುದಕ್ಕೆ “ಒಂದು ನಿರ್ದಿಷ್ಟ ದೇಶದಲ್ಲಿ ಜನ್ಮ ತಾಳಿದವನು” ಎನ್ನುವುದು ವ್ಯಾಖ್ಯೆಯಾದರೆ, ಅಮೆರಿಕದಲ್ಲಿ ಜನ್ಮ ತಳೆದ ಪ್ರಾಣಿಗಳನ್ನು ಏಕೆ ಅಮೆರಿಕನ್ನರು ಎಂದು ಪರಿಗಣಿಸುವುದಿಲ್ಲ? ಸಮಸ್ಯೆಯೇನೆಂದರೆ ನಾವು ನಮ್ಮ ಕಾಳಜಿಗಳನ್ನು ಮಾನವ ಸಮಾಜದ ಆಚೆಗೆ ವಿಸ್ತರಿಸುತ್ತಿಲ್ಲ. ಪ್ರಾಣಿಗಳು ಕೂಡ ನಮ್ಮ ದೇಶದ ಪ್ರಜೆಗಳು ಎಂದು ನಾವು ಯೋಚಿಸುವುದಿಲ್ಲವಾದ ಕಾರಣ, ನಾವು ಅವುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತೇವೆ.

ಆದ್ದರಿಂದ ನಮ್ಮ ರಾಷ್ಟ್ರೀಯ ಭಾವನೆ ಅಥವಾ ನಮ್ಮ ಅಂತಾರಾಷ್ಟ್ರೀಯ ಭಾವನೆಯ ಕೇಂದ್ರವು ಸೂಕ್ತವಾದ ವಿಷಯದ ಮೇಲೆ ಬೇರೂರಿಲ್ಲ. ಕೇಂದ್ರವು ಸರಿಯಾಗಿದ್ದರೆ ಅದರ ಸುತ್ತ ನೀವು ಎಷ್ಟು ಬೇಕಾದರೂ ವೃತ್ತಗಳನ್ನು ರಚಿಸಬಹುದು. ಅವು ಎಂದೂ ಒಂದರ ಮೇಲೊಂದು ವ್ಯಾಪಿಸುವುದಿಲ್ಲ. ಅವು ಸುಮ್ಮನೆ ಬೆಳೆಯುತ್ತ, ಬೆಳೆಯುತ್ತ, ಬೆಳೆಯುತ್ತ ಹೋಗುತ್ತವೆ. ಕೇಂದ್ರವು ಸರಿಯಾಗಿದ್ದರೆ ಅವು ಪರಸ್ಪರ ಛೇದಿಸುವುದಿಲ್ಲ. ದುರದೃಷ್ಟವಶಾತ್‌ ಪ್ರತಿಯೊಬ್ಬನೂ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಪರಿಭಾವಿಸುತ್ತಿದ್ದರೂ, ಕೇಂದ್ರವೇ ನಾಪತ್ತೆಯಾಗಿದೆ. ಆದ್ದರಿಂದ ನಿಮ್ಮ ಅಂತಾರಾಷ್ಟ್ರೀಯ ಪರಿಭಾವನೆ ಮತ್ತು ನನ್ನ ಅಂತಾರಾಷ್ಟ್ರೀಯ ಪರಿಭಾವನೆ, ನಿಮ್ಮ ರಾಷ್ಟ್ರೀಯ ಪರಿಭಾವನೆ ಮತ್ತು ನನ್ನ ರಾಷ್ಟ್ರೀಯ ಪರಿಭಾವನೆಗಳು ಪರಸ್ಪರ ಅತಿವ್ಯಾಪಿಸುತ್ತಿವೆ ಹಾಗೂ ಸಂಘರ್ಷಿಸುತ್ತಿವೆ. ಆದ್ದರಿಂದ ನಾವು ನಮ್ಮ ಪ್ರೇಮಭಾವನೆಗಳಿಗೆ ಯುಕ್ತವಾದ ಕೇಂದ್ರವನ್ನು ಕಂಡುಕೊಳ್ಳಬೇಕು. ಆಗ ನೀವು ನಿಮ್ಮ ಭಾವನೆಗಳ ವೃತ್ತವನ್ನು ವಿಸ್ತರಿಸಬಹುದು ಮತ್ತು ಅದು ಇತರರ ಭಾವನೆಗಳೊಡನೆ ಅತಿ ವ್ಯಾಪಿಸುವುದಿಲ್ಲ ಅಥವಾ ಸಂಘರ್ಷಿಸುವುದಿಲ್ಲ.

ಆ ಕೇಂದ್ರವೇ ಕೃಷ್ಣ.

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾಸಂಘವಾದ ನಮ್ಮ ಸಂಸ್ಥೆಯು, ಪ್ರೀತಿಯ ಕೇಂದ್ರವು ಕೃಷ್ಣನಾಗಿರಬೇಕು ಎಂದು ಎಲ್ಲ ದೇಶಗಳ ಜನರಿಗೂ ಬೋಧಿಸುತ್ತಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನಾವು ಜನರಿಗೆ ಮಹಾತ್ಮರಾಗಲು ಬೋಧಿಸುತ್ತಿದ್ದೇವೆ. ಈ ಮಹಾತ್ಮ ಎಂಬ ಶಬ್ದವನ್ನು ನೀವು ಈ ಹಿಂದೆ ಕೇಳಿರಬಹುದು. ಅದು ಸಂಸ್ಕೃತ ಶಬ್ದ. ಯಾರ ಮನಸ್ಸು ವಿಸ್ತಾರವಾಗಿದೆಯೋ, ಯಾರ ಭಾವನೆಯ ವೃತ್ತವು ಬಹಳಷ್ಟು ವಿಸ್ತಾರಗೊಂಡಿದೆಯೋ ಅಂತಹ ವ್ಯಕ್ತಿಗೆ ಈ ಶಬ್ದವನ್ನು ಅನ್ವಯಿಸಲಾಗುತ್ತದೆ. ಅಂತಹವರೇ ಮಹಾತ್ಮರು. `ಮಹಾ’ ಎಂದರೆ ದೊಡ್ಡ ಅಥವಾ ಉನ್ನತ, ಮತ್ತು `ಆತ್ಮ’ ಎಂದರೆ ಚೇತನಾತ್ಮ. ಆದ್ದರಿಂದ ಯಾರು ತಮ್ಮ ಆತ್ಮವನ್ನು ಬಹಳ ವಿಸ್ತಾರವಾಗಿ ವಿಸ್ತರಿಸಿಕೊಂಡಿದ್ದಾರೋ ಅವರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ.

ತನ್ನ ಭಾವನೆಗಳನ್ನು ಬಹಳ ವ್ಯಾಪಕವಾಗಿ ವಿಸ್ತರಿಸಿಕೊಂಡಿರುವ ವ್ಯಕ್ತಿಯ ವರ್ಣನೆಯನ್ನು ಭಗವದ್ಗೀತೆಯು (7.19) ನೀಡುತ್ತದೆ.

ಬಹೂನಾಂ ಜನ್ಮನಾಮಂತೇ ಜ್ಞಾನವಾನ್‌ ಮಾಂ ಪ್ರಪದ್ಯತೇ

ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ

ಈ ಶ್ಲೋಕದ ಮೊದಲನೆಯ ವಿಚಾರವೆಂದರೆ, ಒಬ್ಬ ವ್ಯಕ್ತಿಯು ಅನೇಕ ಜನ್ಮಗಳ ಅನಂತರ ಮಾತ್ರ ಒಬ್ಬ ಮಹಾತ್ಮನಾಗಬಹುದು (ಬಹೂನಾಂ ಜನ್ಮಾನಾಮ್‌ ಅಂತೇ). ಆತ್ಮವು ಒಂದಾದ ಮೇಲೊಂದರಂತೆ ಅನೇಕ ದೇಹಗಳನ್ನು ಹಾದು ದೇಹಾಂತರವನ್ನು ಮಾಡುತ್ತದೆ. 84,00,000 ಬಗೆಯ ವಿವಿಧ ಜೀವಜಾತಿಗಳಿವೆ. ಅವುಗಳನ್ನೆಲ್ಲ ಹಾದು ವಿಕಾಸ ಕ್ರಮದ ಕೊನೆಯಲ್ಲಿ ನಾವು ಈ ಮಾನವ ಜನ್ಮವನ್ನು ಪಡೆಯುತ್ತೇವೆ. ಈ ಜನ್ಮದಲ್ಲಿ ಮಾತ್ರ ನಾವು ಮಹಾತ್ಮರಾಗಬಹುದು. ಅದರಿಂದಾಗಿಯೇ ಕೃಷ್ಣನು ಬಹೂನಾಂ ಜನ್ಮನಾಮ್‌ ಅಂತೇ “ಅನೇಕಾನೇಕ ಜನ್ಮಗಳ ಅನಂತರ ಒಬ್ಬ ವ್ಯಕ್ತಿಯು ಮಹಾತ್ಮನಾಗಬಹುದು” ಎಂದು ಹೇಳುತ್ತಾನೆ.

ಶ್ರೀಮದ್‌ ಭಾಗವತದಲ್ಲಿ ಇದೇ ರೀತಿಯ ಒಂದು ಶ್ಲೋಕವಿದೆ. ಲಬ್ಧ್ವಾ ಸುದುರ್ಲಭಮ್‌ ಇದಂ ಬಹುಸಂಭವಾಂತೇ “ಅನೇಕಾನೇಕ ಜನ್ಮಗಳ ಅನಂತರ ನೀನು ಈ ಮಾನವ ದೇಹವನ್ನು ಪಡೆದಿದ್ದೀಯೆ. ಅದನ್ನು ಪಡೆಯುವುದು ಬಹಳ ಕಷ್ಟದ ಕಾರ್ಯ.” ಈ ಮಾನವ ರೂಪದ ಜೀವನವು ಅಗ್ಗವಾದುದಲ್ಲ. ಬೆಕ್ಕುಗಳು ಮತ್ತು ನಾಯಿಗಳ ದೇಹಗಳು ಅಗ್ಗ. ಆದರೆ ಈ ಮಾನವ ರೂಪವು ಅಗ್ಗವಾದುದಲ್ಲ. ಕನಿಷ್ಠ ಪಕ್ಷ 80,00,000 ವಿವಿಧ ಜೀವಜಾತಿಗಳಲ್ಲಿ ಜನಿಸಿದ ಅನಂತರ ನಮಗೆ ಈ ಮಾನವ ರೂಪ ಪ್ರಾಪ್ತವಾಗುತ್ತದೆ. ಆದ್ದರಿಂದ ಭಾಗವತ ಮತ್ತು ಭಗವದ್ಗೀತೆ ಒಂದೇ ಸಂಗತಿಯನ್ನು ಹೇಳುತ್ತವೆ. ಎಲ್ಲ ವೈದಿಕ ಸಾಹಿತ್ಯಗಳು ಪರಸ್ಪರ ತಾರ್ಕಣೆಯಾಗುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗೆ ಯಾವುದೇ ವಿರೋಧಾಭಾಸವೂ ಗೋಚರವಾಗುವುದಿಲ್ಲ.

ಆದ್ದರಿಂದ ಈ ಮಾನವ ರೂಪವು, ಮಾನವರಲ್ಲದ ಇತರ ಅನೇಕಾನೇಕ ಜನ್ಮಗಳ ಅನಂತರ ಪ್ರಾಪ್ತವಾದದ್ದು. ಆದರೆ ಈ ಮಾನವ ರೂಪದ ಜನ್ಮದಲ್ಲಿ ಕೂಡ ಅಸ್ತಿತ್ವದ ಕೇಂದ್ರ ಬಿಂದುವಿನ ಅರಿವನ್ನು ಬೆಳೆಸಿಕೊಳ್ಳಲು ಅನೇಕಾನೇಕ ಜನ್ಮಗಳು ಬೇಕಾಗುತ್ತವೆ. ಒಬ್ಬ ವ್ಯಕ್ತಿಯು ನಿಜವಾಗಿಯೂ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಂಡರೆ – ಒಂದು ಜನ್ಮದಲ್ಲಲ್ಲ, ಅನೇಕಾನೇಕ ಜನ್ಮಗಳಲ್ಲಿ – ಜ್ಞಾನದ ಅತ್ಯುನ್ನತವಾದ ವೇದಿಕೆಗೆ ಬರುತ್ತಾನೆ. ಅವನನ್ನು  ಜ್ಞಾನವಾನ್‌ ಎಂದು ಕರೆಯಲಾಗುತ್ತದೆ – ಅಂದರೆ “ನಿಜವಾದ ಜ್ಞಾನವನ್ನು ಪಡೆದವನು”. ಆಗ ಕೃಷ್ಣ ಹೇಳುತ್ತಾನೆ, ಮಾಂ ಪ್ರಪದ್ಯತೇ “ಅವನು ನನಗೆ, ಕೃಷ್ಣನಿಗೆ ಅಥವಾ ದೇವರಿಗೆ ಶರಣಾಗತನಾಗುತ್ತಾನೆ.”

ಹಾಗಾದರೆ ಜ್ಞಾನಿಯಾದವನೊಬ್ಬ ಕೃಷ್ಣನಿಗೇಕೆ ಶರಣಾಗತನಾಗಬೇಕು? ವಾಸುದೇವಃ ಸರ್ವಮ್‌ ಇತಿ  ಏಕೆಂದರೆ ವಾಸುದೇವ, ಕೃಷ್ಣನು ಸರ್ವಸ್ವ ಎಂದು ಅವನಿಗೆ ಗೊತ್ತಿದೆ. ಅವನು ಎಲ್ಲ ಪ್ರೇಮ ಭಾವನೆಗಳ ಕೇಂದ್ರಬಿಂದು ಎಂದು ಅವರಿಗೆ ಗೊತ್ತಿದೆ. ಅನಂತರ, ಸ ಮಹಾತ್ಮಾ ಸುದುರ್ಲಭಃ ಇಲ್ಲಿ ಮಹಾತ್ಮಾ ಎಂಬ ಶಬ್ದವನ್ನು ಉಪಯೋಗಿಸಲಾಗಿದೆ. ಅನೇಕ ಜನ್ಮಗಳ ಕಾಲ ಜ್ಞಾನವನ್ನು ಬೆಳೆಸಿಕೊಳ್ಳುತ್ತಾ ದೇವರನ್ನು ಪ್ರೀತಿಸುವ ಹಂತದವರೆಗೆ ತನ್ನ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುವ ವ್ಯಕ್ತಿಯೇ ಮಹಾತ್ಮ. ದೇವರು ದೊಡ್ಡವನು, ಅವನ ಭಕ್ತ ಕೂಡ ದೊಡ್ಡವನೇ. ಆದರೆ ಕೃಷ್ಣ ಹೇಳುತ್ತಾನೆ, ಸ ಮಹಾತ್ಮಾ ಸುದುರ್ಲಭಃ ಅಂತಹ ಮಹಾತ್ಮನನ್ನು ಕಾಣುವುದು ಬಹಳ ಅಪರೂಪ. ಭಗವದ್ಗೀತೆಯಲ್ಲಿ ನಮಗೆ ದೊರಕುವ ಮಹಾತ್ಮನ ವರ್ಣನೆ ಇದು.

ನಾವು ಈಗ ನಾನಾ ಬಗೆಯ ವಸ್ತುಗಳನ್ನು ಪ್ರೀತಿಸಲು ನಮ್ಮ ಭಾವನೆಗಳನ್ನು ವಿಸ್ತರಿಸಿಕೊಂಡಿದ್ದೇವೆ. ನಾವು ನಮ್ಮ ದೇಶವನ್ನು ಪ್ರೀತಿಸಬಹುದು, ನಾವು ನಮ್ಮ ಕುಟುಂಬವನ್ನು ಪ್ರೀತಿಸಬಹುದು, ನಾವು ನಮ್ಮ ಬೆಕ್ಕುಗಳು ಮತ್ತು ನಾಯಿಗಳನ್ನು ಪ್ರೀತಿಸಬಹುದು. ಏನೇ ಆಗಲಿ, ನಾವು ಪ್ರೀತಿಸಬಲ್ಲೆವು. ನಾವು ಅದನ್ನು ನಮ್ಮ ತಿಳಿವಳಿಕೆಗೆ ಅನುಗುಣವಾಗಿ ವಿಸ್ತರಿಸುತ್ತೇವೆ. ನಮ್ಮ ತಿಳಿವಳಿಕೆಯು ಪರಿಪೂರ್ಣವಾಗಿದ್ದಾಗ ನಾವು ಕೃಷ್ಣನನ್ನು ಪ್ರೀತಿಸುವ ಹಂತಕ್ಕೆ ಬರುತ್ತೇವೆ. ಅದೇ ಪರಿಪೂರ್ಣತೆ. ಕೃಷ್ಣನನ್ನು ಪ್ರೀತಿಸುವುದೇ ಎಲ್ಲ ಚಟುವಟಿಕೆಗಳ ಗುರಿ, ಜೀವನದ ಗುರಿ.

ಜೀವನದ ಗುರಿಯು ಕೃಷ್ಣ ಎಂದು ಶ್ರೀಮದ್‌ ಭಾಗವತವು ದೃಢಪಡಿಸುತ್ತದೆ (1.2.8):

ಧರ್ಮಃ ಸ್ವನುಷ್ಠಿತಃ ಪುಂಸಾಂ ವಿಷ್ವಕ್ಸೇನ ಕಥಾಸು ಯಃ

ನೋತ್ಪಾದಯೇದ್‌ ಯದಿ ರತಿಂ ಶ್ರಮ ಏವ ಹಿ ಕೇವಲಮ್‌

ಈ ಶ್ಲೋಕದ ಮೊದಲನೆಯ ಶಬ್ದಗಳು ಧರ್ಮಃ ಸ್ವನುಷ್ಠಿತಃ ಪುಂಸಾಂ ಅಂದರೆ ಪ್ರತಿಯೊಬ್ಬನೂ ತನ್ನ ಸ್ಥಾನಮಾನಕ್ಕೆ ಅನುಗುಣವಾಗಿ ತನ್ನ ಕರ್ತವ್ಯವನ್ನು ಮಾಡುತ್ತಾನೆ. ಒಬ್ಬ ಗೃಹಸ್ಥನಿಗೆ ಒಂದು ಕರ್ತವ್ಯವಿದೆ, ಒಬ್ಬ ಸಂನ್ಯಾಸಿಗೆ ಒಂದು ಕರ್ತವ್ಯವಿದೆ, ಒಬ್ಬ ಬ್ರಹ್ಮಚಾರಿಗೆ ಒಂದು ಕರ್ತವ್ಯವಿದೆ. ವಿವಿಧ ಉದ್ಯೋಗಗಳಿಗೆ ಅನುಗುಣವಾಗಿ ವಿವಿಧ ಬಗೆಯ ಕರ್ತವ್ಯಗಳಿವೆ. ಆದರೆ ಭಾಗವತವು ಹೇಳುತ್ತದೆ: ನಿಮ್ಮ ಕರ್ತವ್ಯವನ್ನು ನೀವು ಬಹಳ ಸೊಗಸಾಗಿ ನಿರ್ವಹಿಸಿರಬಹುದು, ಆದರೂ ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳುವ ನೆಲೆಗೆ ಬರದಿದ್ದರೆ, ನೀವು ಮಾಡಿದುದೆಲ್ಲ ವ್ಯರ್ಥ ಶ್ರಮ (ಶ್ರಮ ಏವ ಹಿ ಕೇವಲಮ್‌). ಆದ್ದರಿಂದ ನೀವು ಪರಿಪೂರ್ಣತೆಯ ಹಂತಕ್ಕೆ ಬರಬೇಕೆಂದು ಬಯಸಿದರೆ, ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರೀತಿಸಲು ಪ್ರಯತ್ನಿಸಬೇಕು. ಆಗ ನಿಮ್ಮ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಪ್ರೇಮ ಭಾವನೆಗಳು ನಿಜವಾಗಿಯೂ ಗರಿಷ್ಠ ಮಿತಿಯವರೆಗೆ ವಿಸ್ತಾರವಾಗುತ್ತವೆ.

“ಹೌದು ಬಹಳ ವ್ಯಾಪಕವಾಗಿ ಪ್ರೀತಿಸಲು ನನ್ನ ಭಾವನೆಗಳನ್ನು ವಿಸ್ತರಿಸಿಕೊಂಡಿದ್ದೇನೆ” ಎಂದು ಒಬ್ಬ ಮನುಷ್ಯ ಹೇಳಿದ ಎಂದಿಟ್ಟುಕೊಳ್ಳಿ. ಅದೇನೋ ಸರಿ. ಆದರೆ ಅವನ ಪ್ರೀತಿಯ ಭಾವನೆಗಳು ಹೇಗೆ ವಿಸ್ತಾರಗೊಂಡಿವೆ ಎಂಬ ಲಕ್ಷಣಗಳನ್ನು ಅವನು ತೋರಿಸಬೇಕು. ಭಗವದ್ಗೀತೆಯಲ್ಲಿ (5.18) ಕೃಷ್ಣ ಹೇಳುವಂತೆ:

ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ

ಒಬ್ಬ ವ್ಯಕ್ತಿಯು ನಿಜವಾಗಲೂ ಪಂಡಿತನಾಗಿದ್ದರೆ, ಪರಿಪೂರ್ಣ ಜ್ಞಾನದ ನೆಲೆಗೆ ಉನ್ನತೀಕರಣಗೊಂಡಿದ್ದರೆ, ಆಗ ಅವನು ಪ್ರತಿಯೊಬ್ಬರನ್ನೂ ಸಮಾನ ನೆಲೆಯಲ್ಲಿ ನೋಡಬೇಕು (ಸಮ ದರ್ಶಿನಃ). ಏಕೆಂದರೆ ಒಬ್ಬ ಪಂಡಿತನ ದೃಷ್ಟಿಯು ಕೇವಲ ದೇಹದಲ್ಲಿ ಮಗ್ನವಾಗಿಲ್ಲದಿರುವುದರಿಂದ, ಒಬ್ಬ ಪ್ರಾಜ್ಞ ಬ್ರಾಹ್ಮಣನನ್ನು ಅವನು ಚೇತನಾತ್ಮನೆಂದು ನೋಡುತ್ತಾನೆ, ಒಂದು ನಾಯಿಯನ್ನು ಚೇತನಾತ್ಮನೆಂದು ನೋಡುತ್ತಾನೆ,  ಒಂದು ಆನೆಯನ್ನು ಚೇತನಾತ್ಮನೆಂದು ನೋಡುತ್ತಾನೆ, ಅಲ್ಲದೆ ಕೀಳು ದರ್ಜೆಯಲ್ಲಿ ಹುಟ್ಟಿದ ಒಬ್ಬ ಮನುಷ್ಯನನ್ನೂ ಚೇತನಾತ್ಮನೆಂದು ನೋಡುತ್ತಾನೆ. ಕುಲೀನ ಬ್ರಾಹ್ಮಣನಿಂದ ಹಿಡಿದು ಚಂಡಾಲನವರೆಗೆ ಮಾನವ ಸಮಾಜದಲ್ಲಿ ಅನೇಕ ಸಾಮಾಜಿಕ ವರ್ಗಗಳು ಇವೆ. ಆದರೆ ಒಬ್ಬ ಮನುಷ್ಯನು ನಿಜವಾಗಿಯೂ ವಿದ್ವಾಂಸನಾಗಿದ್ದರೆ ಪ್ರತಿಯೊಬ್ಬರನ್ನೂ, ಪ್ರತಿಯೊಂದು ಜೀವಿಯನ್ನೂ ಸಮಾನ ನೆಲೆಯಲ್ಲಿ ನೋಡುತ್ತಾನೆ. ಅದೇ ನಿಜವಾದ ಶಿಕ್ಷಣದ ನೆಲೆ.

ನಾವು ನಮ್ಮ ಭಾವನೆಯನ್ನು ಸಾಮಾಜಿಕವಾಗಿ, ಸಾಮುದಾಯಿಕವಾಗಿ, ರಾಷ್ಟ್ರೀಯವಾಗಿ, ಅಂತಾರಾಷ್ಟ್ರೀಯವಾಗಿ ಅಥವಾ ಜಾಗತಿಕವಾಗಿ ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಜ್ಞೆಯನ್ನು ವಿಸ್ತರಿಸುವುದೇ ನಮ್ಮ ಸಹಜವಾದ ಕಾರ್ಯ. ಆದರೆ ನಾನು ಹೇಳಬೇಕಾಗಿರುವ ಸಂಗತಿ ಏನೆಂದರೆ, ನಾವು ನಮ್ಮ ಪ್ರಜ್ಞೆಯನ್ನು ಪರಾಕಾಷ್ಠೆಗೆ ವಿಸ್ತರಿಸಬೇಕೆಂದು ನಿಜವಾಗಿಯೂ ಬಯಸಿದ್ದರೆ, ಅಸ್ತಿತ್ವದ ನಿಜವಾದ ಕೇಂದ್ರವನ್ನು ಕಂಡುಹಿಡಿಯಬೇಕು. ಆ ಕೇಂದ್ರವೇ ಕೃಷ್ಣ ಅಥವಾ ದೇವರು. ಕೃಷ್ಣನು ದೇವರೆಂದು ನಮಗೆ ಹೇಗೆ ಗೊತ್ತು? ಕೃಷ್ಣನೇ ಸ್ವತಃ ಭಗವದ್ಗೀತೆಯಲ್ಲಿ ತಾನು ದೇವರೆಂದು ಘೋಷಿಸಿಕೊಂಡಿದ್ದಾನೆ. ಕೃಷ್ಣಪ್ರಜ್ಞಾ ಆಂದೋಲನವು ಭಗವದ್ಗೀತೆಯನ್ನು ಯಥಾರೂಪವಾಗಿ ಅರ್ಥಮಾಡಿಕೊಳ್ಳುವುದರ ಮೇಲೆ ಅವಲಂಬಿಸಿದೆ ಎನ್ನುವುದನ್ನು ದಯವಿಟ್ಟು ಸದಾ ನೆನಪಿನಲ್ಲಿಡಿ. ನಾನು ಏನೆಲ್ಲಾ ಮಾತನಾಡುತ್ತಿದ್ದೇನೆಯೋ ಅದು ಭಗವದ್ಗೀತೆಯಲ್ಲಿದೆ. ದುರದೃಷ್ಟವಶಾತ್‌ ಅನೇಕ ವ್ಯಾಖ್ಯಾನಕಾರರು ಭಗವದ್ಗೀತೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಅದರಿಂದ ಜನರು ಅದನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ವಾಸ್ತವವಾಗಿ ಭಗವದ್ಗೀತೆಯ ಭಾವಾರ್ಥವು ಕೃಷ್ಣಪ್ರಜ್ಞೆಯನ್ನು, ಅಂದರೆ ಕೃಷ್ಣನನ್ನು ಕುರಿತ ಪ್ರೀತಿಯನ್ನು ಬೆಳೆಸಿಕೊಳ್ಳುವುದು. ನಾವು ಅದನ್ನೇ ಬೋಧಿಸಲು ಪ್ರಯತ್ನಿಸುತ್ತಿದ್ದೇವೆ.

ಭಗವದ್ಗೀತೆಯಲ್ಲಿ ಕೃಷ್ಣನು ಮಹಾತ್ಮನನ್ನು ಕುರಿತು ಅನೇಕ ವಿವರಣೆಗಳನ್ನು ಕೊಟ್ಟಿದ್ದಾನೆ. ಅವನು ಹೇಳುತ್ತಾನೆ, ಮಹಾತ್ಮಾನಸ್‌ ತು ಮಾಂ ಪಾರ್ಥ ದೈವೀಂ ಪ್ರಕೃತಿಮ್‌ ಆಶ್ರಿತಾಃ  “ವಾಸ್ತವವಾಗಿ ವಿವೇಕಿಯೂ ವಿಶಾಲ ಮನಸ್ಸಿನವನೂ ಆದ ಒಬ್ಬ ಮಹಾತ್ಮನು ನನ್ನ ಆಧ್ಯಾತ್ಮಿಕ ಶಕ್ತಿಯ ಆಶ್ರಯದಲ್ಲಿ ಇದ್ದಾನೆ.” ಅವನು ಐಹಿಕ ಶಕ್ತಿಯ ಪ್ರಭಾವದಲ್ಲಿ ಇರುವುದಿಲ್ಲ.

ನಾವು ಏನನ್ನು ನೋಡುತ್ತೇವೆಯೋ ಅದೆಲ್ಲವೂ ದೇವರ ನಾನಾ ಶಕ್ತಿಗಳಿಂದ ಸೃಷ್ಟಿಯಾದವು. ಉಪನಿಷತ್ತಿನಲ್ಲಿ ಪರಾಸ್ಯ ಶಕ್ತಿಃ ವಿವಿಧೈವ ಶ್ರೂಯತೇ ಎಂದು ಹೇಳಿದೆ. ಅಂದರೆ, “ಪರಮ ಸಂಪೂರ್ಣ ಸತ್ಯವು ನಾನಾ ಬಗೆಯ ಶಕ್ತಿಗಳನ್ನು ಹೊಂದಿದೆ.” ಈ ಶಕ್ತಿಗಳು ಎಷ್ಟು ಸೊಗಸಾಗಿ ಕೆಲಸ ಮಾಡುತ್ತಿವೆಯೆಂದರೆ ಅವು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತಿರುವಂತೆ ತೋರುತ್ತದೆ (ಸ್ವಾಭಾವಿಕೀ ಜ್ಞಾನ ಬಲ ಕ್ರಿಯಾ ಚ). ಉದಾಹರಣೆಗೆ, ನಾವೆಲ್ಲರೂ ಹೂವು ಅರಳುವುದನ್ನು ನೋಡಿದ್ದೇವೆ. ಅದು ತನ್ನಷ್ಟಕ್ಕೆ ತಾನೇ ಅರಳಿತು ಮತ್ತು ಅಷ್ಟೊಂದು ಸುಂದರ ಆಕಾರವನ್ನು ತಾಳಿತು ಎಂದು ನಾವು ಭಾವಿಸಬಹುದು. ಆದರೆ ಅದು ಹಾಗಲ್ಲ. ದೇವರ ಐಹಿಕ ಶಕ್ತಿಯು ಅಲ್ಲಿ ಕೆಲಸ ಮಾಡುತ್ತಿದೆ.

ಅದೇ ರೀತಿಯಲ್ಲಿ ಕೃಷ್ಣನಿಗೆ ಒಂದು ಆಧ್ಯಾತ್ಮಿಕ ಶಕ್ತಿಯೂ ಇದೆ. ವಿಶಾಲ ಮನಸ್ಸಿನ ಒಬ್ಬ ಮಹಾತ್ಮನು ಆ ಆಧ್ಯಾತ್ಮಿಕ ಶಕ್ತಿಯ ರಕ್ಷಣೆಯಲ್ಲಿದ್ದಾನೆ. ಅವನು ಐಹಿಕ ಶಕ್ತಿಯ ಪ್ರಭಾವದಲ್ಲಿರುವುದಿಲ್ಲ. ಈ ಎಲ್ಲ ಸಂಗತಿಗಳನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಕೃಷ್ಣನ ಶಕ್ತಿಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಬಣ್ಣಿಸುವ ಅನೇಕ ಶ್ಲೋಕಗಳು ಭಗವದ್ಗೀತೆಯಲ್ಲಿವೆ. ನಮ್ಮ ಅಭಿಯಾನವು ಯಾವುದೇ ಅರ್ಥಹೀನ ವ್ಯಾಖ್ಯಾನವಿಲ್ಲದೆ ಭಗವದ್ಗೀತೆಯನ್ನು ಯಥಾರೂಪದಲ್ಲಿ ನಿರೂಪಿಸುವುದು. ಅರ್ಥಹೀನವಾದ ವ್ಯಾಖ್ಯಾನದ ಆವಶ್ಯಕತೆಯಿಲ್ಲ. ಭಗವದ್ಗೀತೆಯು ಸೂರ್ಯರಶ್ಮಿಯಷ್ಟು ಸ್ಪಷ್ಟ. ಸೂರ್ಯನನ್ನು ನೋಡಲು ಒಂದು ಹಣತೆಯ ಅಗತ್ಯವು ಹೇಗೆ ನಿಮಗೆ ಇಲ್ಲವೋ ಹಾಗೆಯೇ ಭಗವದ್ಗೀತೆಯನ್ನು ಅಧ್ಯಯನ ಮಾಡಲು ಅಜ್ಞಾನಿಯಾದ ಸಾಮಾನ್ಯ ಮನುಷ್ಯನ ವ್ಯಾಖ್ಯಾನದ ಅಗತ್ಯವಿಲ್ಲ. ನೀವು ಭಗವದ್ಗೀತೆಯನ್ನು ಯಥಾರೂಪದಲ್ಲಿ ಅಧ್ಯಯನ ಮಾಡಬೇಕು. ಆಗ ನೀವು ಎಲ್ಲ ಆಧ್ಯಾತ್ಮಿಕ ಜ್ಞಾನವನ್ನು ಪಡೆಯುತ್ತೀರಿ. ನೀವು ವಿವೇಕಿಗಳಾಗುತ್ತೀರಿ ಮತ್ತು ಕೃಷ್ಣನನ್ನು ಅರ್ಥಮಾಡಿಕೊಳ್ಳುತ್ತೀರಿ. ಅನಂತರ ನೀವು ಅವನಿಗೆ ಶರಣಾಗುತ್ತೀರಿ ಮತ್ತು ಒಬ್ಬ ಮಹಾತ್ಮನಾಗುತ್ತೀರಿ.

ಮಹಾತ್ಮನೊಬ್ಬನ ಚಟುವಟಿಕೆಗಳು ಏನಾಗಿರುತ್ತವೆ? ಮಹಾತ್ಮನು ಕೃಷ್ಣನ ಆಧ್ಯಾತ್ಮಿಕ ಶಕ್ತಿಯ ರಕ್ಷಣೆಯಲ್ಲಿ ಇರುತ್ತಾನೆ. ಆದರೆ ಆ ರಕ್ಷಣೆಯ ಲಕ್ಷಣವೇನು? ಕೃಷ್ಣನು ಹೇಳುತ್ತಾನೆ, “ಒಬ್ಬ ಮಹಾತ್ಮನು ಸದಾ ನನ್ನ ಭಕ್ತಿಸೇವೆಯಲ್ಲಿ ನಿರತನಾಗಿರುತ್ತಾನೆ.” ಅದೇ ಮಹಾತ್ಮನ ಮುಖ್ಯ ಲಕ್ಷಣ: ಅವನು ಸದಾ ಕೃಷ್ಣನಿಗೆ ಸೇವೆ ಸಲ್ಲಿಸುತ್ತಿರುತ್ತಾನೆ. ಅವನು ಕುರುಡು ನಂಬಿಕೆಯಿಂದ ಈ ಭಕ್ತಿಸೇವೆಯಲ್ಲಿ ಮಗ್ನನಾಗಿರುತ್ತಾನೆಯೇ? ಇಲ್ಲ. ಕೃಷ್ಣನು ಹೇಳುತ್ತಾನೆ: ಜ್ಞಾತ್ವಾ ಭೂತಾದಿಮ್‌ ಅವ್ಯಯಮ್‌ “ನಾನೇ ಸಮಸ್ತದ ಆಕರ ಎನ್ನುವುದನ್ನು ಅವನು ಪರಿಪೂರ್ಣನಾಗಿ ತಿಳಿದಿರುತ್ತಾನೆ.”

ಹೀಗೆ ಕೃಷ್ಣನು ಪ್ರತಿಯೊಂದನ್ನೂ ಭಗವದ್ಗೀತೆಯಲ್ಲಿ ವಿವರಿಸುತ್ತಾನೆ. ಯಾವುದೇ ಅರ್ಥಹೀನ ವ್ಯಾಖ್ಯಾನವನ್ನೂ ಸೇರಿಸದೆ, ಭಗವದ್ಗೀತೆಯಲ್ಲಿರುವ ಜ್ಞಾನವನ್ನು ಪ್ರಸಾರ ಮಾಡುವುದೇ ಕೃಷ್ಣಪ್ರಜ್ಞಾ ಆಂದೋಲನದಲ್ಲಿನ ನಮ್ಮ ಉದ್ದೇಶ. ಆಗ ಮಾನವ ಸಮಾಜವು ಈ ಜ್ಞಾನದಿಂದ ಲಾಭವನ್ನು ಪಡೆಯುತ್ತದೆ. ಈಗ ಸಮಾಜವು ಸುಭದ್ರವಾದ ಸ್ಥಿತಿಯಲ್ಲಿಲ್ಲ. ಆದರೆ ಜನರು ಭಗವದ್ಗೀತೆಯನ್ನು ಅರ್ಥಮಾಡಿಕೊಂಡರೆ, ಮತ್ತು ಅವರು ದಿಟವಾಗಿಯೂ ತಮ್ಮ ದೃಷ್ಟಿಕೋನವನ್ನು ವಿಸ್ತಾರಗೊಳಿಸಿಕೊಂಡರೆ, ಎಲ್ಲ ಸಾಮಾಜಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳೂ ತಮ್ಮಷ್ಟಕ್ಕೆ ತಾವೇ ಪರಿಹಾರಗೊಳ್ಳುತ್ತವೆ. ಇದರಲ್ಲಿ ಯಾವ ತೊಂದರೆಗಳೂ ಇರುವುದಿಲ್ಲ. ಆದರೆ ಅಸ್ತಿತ್ವದ ಕೇಂದ್ರ ಯಾವುದು ಎಂದು ನಾವು ಕಂಡುಕೊಳ್ಳದಿದ್ದರೆ, ನಮ್ಮ ಪ್ರೇಮ ಭಾವನೆಗಳನ್ನು ವಿಸ್ತರಿಸಲು ನಮ್ಮದೇ ಆದ ವಿಧಾನಗಳನ್ನು ನಾವು ತಯಾರಿಸಿಕೊಂಡರೆ, ಅಲ್ಲಿ ಉಳಿಯುವುದು ಸಂಘರ್ಷ ಮಾತ್ರ – ಅದು ವ್ಯಕ್ತಿ ವ್ಯಕ್ತಿಗಳ ನಡುವೆಯಲ್ಲ, ಜಗತ್ತಿನ ವಿವಿಧ ರಾಷ್ಟ್ರಗಳ ನಡುವೆ. ರಾಷ್ಟ್ರಗಳು ಒಗ್ಗಟ್ಟಿನಿಂದಿರಲು ಪ್ರಯತ್ನಿಸುತ್ತಿವೆ. ನಿಮ್ಮ ರಾಷ್ಟ್ರದಲ್ಲಿ ವಿಶ್ವಸಂಸ್ಥೆ ಇದೆ. ದುರದೃಷ್ಟವಶಾತ್‌, ರಾಷ್ಟ್ರಗಳು ಒಂದಾಗುವ ಬದಲು ಧ್ವಜಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಭಾರತವು ಒಂದು ಕಾಲದಲ್ಲಿ ಅಖಂಡ ರಾಷ್ಟ್ರವಾಗಿತ್ತು; ಹಿಂದೂಸ್ತಾನ್‌. ಈಗ ಪಾಕಿಸ್ತಾನವೂ ಬೇರೆಯಾಗಿದೆ. ಮುಂದೆ ಎಂದೋ ಸಿಖಿಸ್ತಾನ್‌ ಆಗುವುದು. ಅನಂತರ ಮತ್ತಾವುದೋ `ಸ್ಥಾನ್‌’ ಆಗುವುದು.

ಒಂದಾಗಿರುವ ಬದಲು ನಾವು ಒಡೆದುಹೋಗುತ್ತಿದ್ದೇವೆ. ಏಕೆಂದರೆ ನಾವು ಕೇಂದ್ರವನ್ನು ತಪ್ಪಿಸಿಕೊಂಡಿದ್ದೇವೆ. ನೀವೆಲ್ಲರೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಾಗಿರುವುದರಿಂದ, ನನ್ನ ಪ್ರಾರ್ಥನೆ ಏನೆಂದರೆ, ನಿಮ್ಮ ಅಂತಾರಾಷ್ಟ್ರೀಯ ಆಂದೋಲನದ ನಿಜವಾದ ಕೇಂದ್ರವನ್ನು ದಯವಿಟ್ಟು ಕಂಡುಕೊಳ್ಳಿ. ಆ ಕೇಂದ್ರವು ಕೃಷ್ಣ ಎಂದು ನೀವು ಅರ್ಥಮಾಡಿಕೊಂಡಾಗ ನಿಜವಾದ ಅಂತಾರಾಷ್ಟ್ರೀಯ ಪ್ರೇಮ ಭಾವನೆಯು ಸಾಧ್ಯವಾಗುತ್ತದೆ. ಆಗ ನಿಮ್ಮ ಅಂತಾರಾಷ್ಟ್ರೀಯ ಆಂದೋಲನವು ಪರಿಪೂರ್ಣವಾಗುತ್ತದೆ.

ಭಗವದ್ಗೀತೆಯ ಹದಿನಾಲ್ಕನೆಯ ಅಧ್ಯಾಯದಲ್ಲಿ (14.4) ಕೃಷ್ಣ ಹೇಳುತ್ತಾನೆ:

ಸರ್ವ ಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ

ತಾಸಾಂ ಬ್ರಹ್ಮ ಮಹದ್ಯೋನಿಃ ಅಹಂ ಬೀಜಪ್ರದಃ ಪಿತಾ

ಇಲ್ಲಿ  ಕೃಷ್ಣನು ಹೇಳುತ್ತಾನೆ, “ನಾನು ಎಲ್ಲ ಬಗೆಯ ಜೀವಜಾತಿಗಳ ತಂದೆ. ಐಹಿಕ ಪ್ರಕೃತಿಯು ತಾಯಿ ಮತ್ತು ನಾನು ಬೀಜವನ್ನು ನೀಡುವ ತಂದೆ.” ತಂದೆ, ತಾಯಿ ಇಲ್ಲದೆ ಯಾರೂ ಜನ್ಮ ತಳೆಯಲು ಸಾಧ್ಯವಿಲ್ಲ. ತಂದೆಯು ಬೀಜವನ್ನು ನೀಡುತ್ತಾನೆ, ತಾಯಿಯು ದೇಹವನ್ನು ನೀಡುತ್ತಾಳೆ. ಈ ಐಹಿಕ ಜಗತ್ತಿನಲ್ಲಿ ಬ್ರಹ್ಮನಿಂದ ಹಿಡಿದು ಇರುವೆಯವರೆಗೆ ನಮ್ಮೆಲ್ಲರ ತಾಯಿಯು ಐಹಿಕ ಪ್ರಕೃತಿ. ನಮ್ಮ ದೇಹವು ಐಹಿಕವಾದದ್ದು. ಆದ್ದರಿಂದ ಅದು ನಮ್ಮ ತಾಯಿಯಾದ ಐಹಿಕ ಪ್ರಕೃತಿಯ ಕೊಡುಗೆ. ಆದರೆ ನಾನು, ಚೇತನಾತ್ಮ, ಪರಮ ಪಿತ ಕೃಷ್ಣನ ವಿಭಿನ್ನಾಂಶ. ಕೃಷ್ಣನು ಹೇಳುತ್ತಾನೆ, ಮಮೈವಾಂಶೋ… ಜೀವಭೂತಃ “ಈ ಎಲ್ಲ ಜೀವಿಗಳೂ ನನ್ನ ವಿಭಿನ್ನಾಂಶ.”

ಆದ್ದರಿಂದ ನೀವು ನಿಮ್ಮ ಸೌಹಾರ್ದತೆಯ ಭಾವನೆಗಳನ್ನು ಗರಿಷ್ಠ ಮಿತಿಗೆ ವಿಸ್ತರಿಸಿಕೊಳ್ಳಲು ಬಯಸುವುದಾದರೆ, ದಯವಿಟ್ಟು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಜ್ಞಾನೋದಯವಾಗುತ್ತದೆ; ನೀವು ನಿಜವಾದ ಮಹಾತ್ಮರಾಗುತ್ತೀರಿ. ನಾಯಿಗಳು, ಬೆಕ್ಕುಗಳು ಮತ್ತು ಸರೀಸೃಪಗಳ ಬಗೆಗೂ ನಿಮಗೆ ವಾತ್ಸಲ್ಯಭಾವ ಉಂಟಾಗುತ್ತದೆ. ಶ್ರೀಮದ್‌ ಭಾಗವತದ ಏಳನೆಯ ಸ್ಕಂಧದಲ್ಲಿ ನಾರದ ಮುನಿಗಳ ಒಂದು ಮಾತನ್ನು ನೀವು ಗಮನಿಸಬಹುದು: ನಿಮ್ಮ ಮನೆಯಲ್ಲಿ ಒಂದು ಹಾವು ಇದ್ದರೆ ಅದಕ್ಕೆ ತಿನ್ನಲು ನೀವು ಏನಾದರೂ ಕೊಡಬೇಕು. ನಿಮ್ಮ ಭಾವನೆಗಳು ಹೇಗೆ ವಿಸ್ತಾರಗೊಳ್ಳಬಹುದು ಎಂದು ನೋಡಿ! ನೀವು ಒಂದು ಹಾವಿನ ಬಗೆಗೂ ಕಾಳಜಿ ವಹಿಸುತ್ತೀರಿ, ಇತರ ಪ್ರಾಣಿಗಳು ಮತ್ತು ಮಾನವರ ಬಗೆಗೆ ಇನ್ನು ಹೇಳುವುದೇನು?

ಆದ್ದರಿಂದ ದೇವರು ಅಥವಾ ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಹಂತಕ್ಕೆ ಬರುವವರೆಗೂ ನಾವು ಪ್ರಬೋಧಿತರಾಗುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಬೋಧಿಸುತ್ತಿದ್ದೇವೆ. ಈ ಕೃಷ್ಣಪ್ರಜ್ಞಾ ಆಂದೋಲನವು ಹೊಸದೇನಲ್ಲ. ನಾನು ಈಗಾಗಲೇ ಹೇಳಿದಂತೆ ಅದು ಭಗವದ್ಗೀತೆಯ ತತ್ತ್ವಗಳನ್ನು ಆಧರಿಸಿದೆ. ಭಗವದ್ಗೀತೆಯು ಒಂದು ಪ್ರಾಚೀನವಾದ ಧರ್ಮಗ್ರಂಥ. ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಅದು ಐದು ಸಾವಿರ ವರ್ಷಗಳಷ್ಟು ಪ್ರಾಚೀನ. ಇತಿಹಾಸ ಪೂರ್ವ ದೃಷ್ಟಿಯಿಂದ ನೋಡಿದರೆ ಅದು ಮಿಲಿಯಾಂತರ ವರ್ಷಗಳಷ್ಟು ಪ್ರಾಚೀನ. ನಾಲ್ಕನೆಯ ಅಧ್ಯಾಯದಲ್ಲಿ ಕೃಷ್ಣ ಹೇಳುತ್ತಾನೆ, ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನ್‌ ಅಹಮ್‌ ಅವ್ಯಯಮ್‌  “ನಾನು ಮೊದಲು ಈ ಪ್ರಾಚೀನವಾದ ಯೋಗ ವಿಜ್ಞಾನವನ್ನು ಸೂರ್ಯದೇವನಿಗೆ ಹೇಳಿದೆ.” ಅಂದರೆ ಕೃಷ್ಣನು ಈ ಭಗವದ್ಗೀತೆಯನ್ನು ಕೆಲವು ಕೋಟಿ ವರ್ಷಗಳ ಹಿಂದೆ ಬೋಧಿಸಿದನು. ಆದರೆ ಕೇವಲ ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಕುರುಕ್ಷೇತ್ರ ಯುದ್ಧದ ದಿನಗಳಿಂದ ಇದು ಅಸ್ತಿತ್ವದಲ್ಲಿದೆ. ಆ ಯುದ್ಧ ನಡೆದದ್ದು ಐದು ಸಾವಿರ ವರ್ಷಗಳ ಹಿಂದೆ. ಆದ್ದರಿಂದ ಇದು ಜಗತ್ತಿನ ಬೇರಾವುದೇ ಧರ್ಮಗ್ರಂಥಕ್ಕಿಂತ ಪುರಾತನವಾದದ್ದು.

ಯಾವುದೇ ಅನಗತ್ಯ ವ್ಯಾಖ್ಯಾನವಿಲ್ಲದೆ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಭಗವದ್ಗೀತೆಯ ನುಡಿಗಳು ನಿಮಗೆ ಜ್ಞಾನೋದಯವನ್ನು ಕೊಡುವಷ್ಟು ಸಮರ್ಥವಾಗಿವೆ. ಆದರೆ ದುರದೃಷ್ಟವಶಾತ್‌ ಜನರು ಭಗವದ್ಗೀತೆಯ ಜನಪ್ರಿಯತೆಯ ದುರ್ಲಾಭವನ್ನು ಪಡೆದುಕೊಂಡು, ಭಗವದ್ಗೀತೆಯ ಆಶ್ರಯದಲ್ಲಿ ತಮ್ಮದೇ ಆದ ತತ್ತ್ವಜ್ಞಾನವನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿದ್ದಾರೆ. ಅದು ನಿಷ್ಪ್ರಯೋಜಕವಾದದ್ದು. ಭಗವದ್ಗೀತೆಯನ್ನು ಯಥಾರೂಪದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆಗ ನಿಮಗೆ ಜ್ಞಾನೋದಯವಾಗುತ್ತದೆ; ಕೃಷ್ಣನೇ ಎಲ್ಲ ಚಟುವಟಿಕೆಗಳ ಕೇಂದ್ರ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ. ನೀವು ಕೃಷ್ಣಪ್ರಜ್ಞಾವಂತರಾದರೆ ಪ್ರತಿಯೊಂದೂ ಪರಿಪೂರ್ಣವಾಗುತ್ತದೆ ಮತ್ತು ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ.

ವಂದನೆಗಳು. ಏನಾದರೂ ಪ್ರಶ್ನೆಗಳಿವೆಯೆ?

ಭಾರತೀಯ ವಿದ್ಯಾರ್ಥಿ: ನನಗೆ ಗೀತೆಯ ಸರಿಯಾದ ಸಂಸ್ಕೃತ ಶ್ಲೋಕ ಯಾವುದೆಂದು ತಿಳಿಯದು. ಆದರೆ ಎಲ್ಲೋ ಒಂದು ಕಡೆ ಕೃಷ್ಣ ಹೇಳುತ್ತಾನೆ, “ಎಲ್ಲ ಮಾರ್ಗಗಳೂ ನನ್ನೆಡೆಗೇ ಬರುತ್ತವೆ. ವ್ಯಕ್ತಿಯು ಏನನ್ನೇ ಮಾಡಲಿ, ಏನನ್ನೇ ಯೋಚಿಸಲಿ, ಯಾವುದರಲ್ಲೇ ಮಗ್ನರಾಗಿರಲಿ, ಅಂತಿಮವಾಗಿ ಅವನು ವಿಕಾಸಗೊಂಡು ನನ್ನೆಡೆಗೇ ಬರುತ್ತಾನೆ.” ಹಾಗಾದರೆ ಜ್ಞಾನೋದಯವು ನೈಸರ್ಗಿಕವಾದ ಒಂದು ವಿಕಾಸ ಕ್ರಮವೆ?

ಶ್ರೀಲ ಪ್ರಭುಪಾದ : ಇಲ್ಲ . ನೀನು ಏನನ್ನೇ ಮಾಡು, ಏನನ್ನೇ ಯೋಚಿಸು, ನೀನು ನೈಸರ್ಗಿಕವಾಗಿ ವಿಕಾಸಗೊಂಡು ನನ್ನೆಡೆಗೇ ಬರುತ್ತೀಯೆ ಎಂದು ಕೃಷ್ಣ ಎಂದೂ ಹೇಳುವುದಿಲ್ಲ. ಬದ್ಧಾತ್ಮನು ಕೃಷ್ಣಪ್ರಜ್ಞೆಯಲ್ಲಿ ಜ್ಞಾನೋದಯವನ್ನು ಪಡೆಯುವುದು ನೈಸರ್ಗಿಕವಾದ ಕ್ರಿಯೆಯಲ್ಲ. ಒಬ್ಬರು ಗುರುಗಳ ಬೋಧನೆಯು ನಿಮಗೆ ಆವಶ್ಯಕ. ಹಾಗಲ್ಲದಿದ್ದರೆ ಕೃಷ್ಣನು ಏಕೆ ಅರ್ಜುನನಿಗೆ ಉಪದೇಶಿಸುತ್ತಿದ್ದನು? ನೀವು ಒಬ್ಬ ಸರ್ವೋತ್ಕೃಷ್ಟ ವ್ಯಕ್ತಿಯಿಂದ ಜ್ಞಾನವನ್ನು ಪಡೆಯಬೇಕು ಮತ್ತು ಅವನ ಬೋಧನೆಗಳನ್ನು ಅನುಸರಿಸಬೇಕು.

ಅರ್ಜುನ ದಿಗ್ಭ್ರಾಂತನಾಗಿದ್ದ. ಯುದ್ಧ  ಮಾಡಬೇಕೇ ಅಥವಾ ಬೇಡವೇ ಎಂದು ಅವನು ಅರ್ಥಮಾಡಿಕೊಳ್ಳಲಾರದವನಾಗಿದ್ದ. ಅದೇ ರೀತಿಯಲ್ಲಿ ಈ ಐಹಿಕ ಲೋಕದಲ್ಲಿರುವ ಪ್ರತಿಯೊಬ್ಬನೂ ದಿಗ್ಭ್ರಾಂತನಾಗಿದ್ದಾನೆ. ಆದ್ದರಿಂದ ನಮಗೆ ಕೃಷ್ಣನಿಂದ ಅಥವಾ ಅವನ ವಿಶ್ವಾಸಾರ್ಹ ಪ್ರತಿನಿಧಿಯಿಂದ ಮಾರ್ಗದರ್ಶನ ಬೇಕು. ಆಗ ನಾವು ಜ್ಞಾನೋದಯವನ್ನು ಪಡೆಯಬಹುದು.

ಪ್ರಾಣಿ ಜೀವಿ ಜಾತಿಗಳವರೆಗೆ ವಿಕಾಸವು ಒಂದು ನೈಸರ್ಗಿಕವಾದ ಪ್ರಕ್ರಿಯೆ. ಆದರೆ ನಾವು ಮಾನವ ಜನ್ಮಕ್ಕೆ ಬಂದಾಗ, ನಾವು ನಮ್ಮದೇ ಆದ ವಿವೇಚನೆಯನ್ನು ಬಳಸಿಕೊಳ್ಳಬಹುದು. ನೀವು ಬಯಸಿದಂತೆ ಯಾವ ಪಥವನ್ನು ಅನುಸರಿಸಬೇಕೆಂಬ ಆಯ್ಕೆಯನ್ನು ನೀವು ಮಾಡಬಹುದು. ನೀವು ಕೃಷ್ಣನನ್ನು ಇಷ್ಟಪಟ್ಟರೆ ಕೃಷ್ಣನ ಕಡೆಗೆ ಹೋಗಬಹುದು; ಬೇರೆ ಏನನ್ನಾದರೂ ಇಷ್ಟಪಟ್ಟರೆ ಆ ಕಡೆಗೆ ಹೋಗಬಹುದು. ಅದು ನಿಮ್ಮ ವಿವೇಚನೆಯನ್ನು ಅವಲಂಬಿಸಿರುತ್ತದೆ.

ಪ್ರತಿಯೊಬ್ಬರಿಗೂ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವಿರುತ್ತದೆ. ಭಗವದ್ಗೀತೆಯ ಕೊನೆಯಲ್ಲಿ (18.66) ಕೃಷ್ಣನು ಹೇಳುತ್ತಾನೆ, ಸರ್ವಧರ್ಮಾನ್‌ ಪರಿತ್ಯಜ್ಯ ಮಾಮ್‌ ಏಕಂ ಶರಣಂ ವ್ರಜ “ಎಲ್ಲವನ್ನೂ ಪರಿತ್ಯಜಿಸಿ ನನಗೆ ಶರಣಾಗು.” ಈ ಶರಣಾಗತಿಯು ನೈಸರ್ಗಿಕವಾದುದಾಗಿದ್ದಿದ್ದರೆ “ಹೀಗೆ ಮಾಡು” ಎಂದು ಕೃಷ್ಣ ಏಕೆ ಹೇಳುತ್ತಿದ್ದ? ಇಲ್ಲ. ನಮ್ಮ ಈ ಐಹಿಕವಾಗಿ ಬದ್ಧವಾಗಿರುವ ಸ್ಥಿತಿಯಲ್ಲಿ ಕೃಷ್ಣನಿಗೆ ಶರಣಾಗುವುದು ನೈಸರ್ಗಿಕವಾದುದಲ್ಲ. ನಾವು ಅದನ್ನು ಕಲಿಯಬೇಕಾಗುತ್ತದೆ. ಆದ್ದರಿಂದ ನಾವು ಒಬ್ಬ ಸದ್ಗುರುವಿನಿಂದ – ಕೃಷ್ಣ ಅಥವಾ ಅವನ ಅಕೃಧಿತ ಪ್ರತಿನಿಧಿ – ಕೇಳಬೇಕು ಮತ್ತು ಅವರ ಉಪದೇಶಗಳನ್ನು ಅನುಸರಿಸಬೇಕು. ಇದು ನಮ್ಮನ್ನು ಕೃಷ್ಣಪ್ರಜ್ಞೆಯಲ್ಲಿ ಪೂರ್ಣವಾದ ಜ್ಞಾನೋದಯದ ಹಂತಕ್ಕೆ ಕರೆತರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi