ಏಕಾದಶಿ

ವಿಧಗಳು ಮತ್ತು ವೈಶಿಷ್ಟ್ಯಗಳು

ಭಕ್ತ ವೈಷ್ಣವರ ಪಾಲಿಗೆ ಏಕಾದಶಿ ವ್ರತಾಚರಣೆ ಅತ್ಯಂತ ಪ್ರಮುಖವಾದುದು. ಏಕಾದಶಿಯು ಪ್ರತಿ ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಈ ಎಲ್ಲ ಏಕಾದಶಿಗಳಿಗೂ ವಿಭಿನ್ನ ಹೆಸರುಗಳಿವೆ. ಈ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಪಾಪ ಮೋಚನಿ ಏಕಾದಶಿ, ಮೋಹಿನಿ ಏಕಾದಶಿ, ಯೋಗಿನಿ ಏಕಾದಶಿ, ಪವಿತ್ರೋಪಣ ಏಕಾದಶಿ,  ಇಂದಿರಾ ಏಕಾದಶಿ, ಪಾಶಾಂಕುರ ಏಕಾದಶಿ, ಉತ್ಪನ್ನ ಏಕಾದಶಿ, ಪುತ್ರದಾ ಏಕಾದಶಿ, ವಿಜಯ ಏಕಾದಶಿ, ಕಾಮದಾ ಏಕಾದಶಿ, ಅಪರ ಏಕಾದಶಿ,  ಶಾಯನಿ ಏಕಾದಶಿ, ಅನ್ನದಾ ಏಕಾದಶಿ, ಪದ್ಮಿನಿ ಏಕಾದಶಿ, ರಮಾ ಏಕಾದಶಿ, ಮೋಕ್ಷದಾ ಏಕಾದಶಿ, ಸತ್‌ತಿಲ ಏಕಾದಶಿ,  ಆಮಲಕ ಏಕಾದಶಿ,  ವರೂಥಿನಿ ಏಕಾದಶಿ, ಪಾಂಡವ ಏಕಾದಶಿ, ಕಾಮಿಕ ಏಕಾದಶಿ, ಪಾರ್ಶ್ವ ಏಕಾದಶಿ, ಪರಮ ಏಕಾದಶಿ ಉತ್ಥಾನ ಏಕಾದಶಿ, ಸಫಲ ಏಕಾದಶಿ, ಭೈಮಿ ಏಕಾದಶಿ.

ಪ್ರಮುಖ ಏಕಾದಶಿಗಳು

ವೈಕುಂಠ ಏಕಾದಶಿ : ಏಕಾದಶಿಗಳಲ್ಲಿ ಅತ್ಯಂತ ಮಹತ್ತ್ವದ ಸ್ಥಾನವನ್ನು “ವೈಕುಂಠ ಏಕಾದಶಿ”ಗೆ ನೀಡಲಾಗಿದೆ. ಇದು ಸಾಮಾನ್ಯವಾಗಿ ಡಿಸೆಂಬರ್ – ಜನವರಿ ತಿಂಗಳಲ್ಲಿ ಅಂದರೆ ಮಾರ್ಗಶಿರ ಮಾಸದಲ್ಲಿ ಬರುತ್ತದೆ. ಈ ದಿನದಂದು ವೈಕುಂಠ ದ್ವಾರವು ತೆರೆದಿದ್ದು, ಶ್ರದ್ಧೆ-ಭಕ್ತಿಗಳಿಂದ ಉಪವಾಸ ಆಚರಿಸಿದವರಿಗೆ ಅನೇಕ ಸತ್ಫಲಗಳು ದೊರೆಯುತ್ತವೆ.

ವೈಕುಂಠ ಏಕಾದಶಿ ಉತ್ಸವವನ್ನು ಎಲ್ಲ ವಿಷ್ಣು ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ಅಂದು ದೇವಾಲಯದ ಮುಖ್ಯ ದ್ವಾರವನ್ನು ಅಲಂಕರಿಸಲಾಗುತ್ತದೆ. ಈ ‘ವೈಕುಂಠ ದ್ವಾರ’ ದ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಭಗವಂತನ ದರ್ಶನ ಪಡೆದು ಪುನೀತರಾಗುತ್ತಾರೆ.

ವಿಷ್ಣು ಪುರಾಣದಲ್ಲಿ ವೈಕುಂಠ ಏಕಾದಶಿಯ ದಿನ ಉಪವಾಸ ಮಾಡುವುದು ಉಳಿದೆಲ್ಲ ಏಕಾದಶಿಗಳ ಉಪವಾಸಕ್ಕೆ ಸಮ ಎಂದು ಹೇಳಲಾಗಿದೆ.

ಶಾಯನಿ ಏಕಾದಶಿ : ಶಾಯನಿ ಏಕಾದಶಿ “ಮಹಾ ಏಕಾದಶಿ” ಎಂದು ಕರೆಯಲ್ಪಡುತ್ತದೆ. ಇದು ಆಷಾಢ ಮಾಸದಲ್ಲಿ ಬರುತ್ತದೆ. ಆದ್ದರಿಂದ ಶಾಯನಿ ಏಕಾದಶಿಯನ್ನು “ಆಷಾಢ ಏಕಾದಶಿ” ಎಂದೂ ಕರೆಯುತ್ತಾರೆ. ಈ ದಿನದಂದು ಕ್ಷಿರೋದಕ ಶಾಯಿ ವಿಷ್ಣುವು ಅನಂತ ಶೇಷನ ಮೇಲೆ ಮಲಗಿ ನಿದ್ದೆ ಹೋಗುತ್ತಾನೆ. ಆದ್ದರಿಂದಲೇ ಈ ಏಕಾದಶಿಯು “ಶಯನ” ಅಥವಾ “ಶಾಯನಿ ಏಕಾದಶಿ” ಎನಿಸಿದೆ.

ಇತಿಹಾಸ ಪ್ರಸಿದ್ಧ ಪಂಢರಾಪುರ ಯಾತ್ರೆಯು ಅಂತ್ಯಗೊಳ್ಳುವುದು ಶಾಯನಿ ಏಕಾದಶಿಯಂದು. ದೇಶದ ವಿವಿಧ ಭಾಗಗಳಿಂದ ಭಕ್ತರು ಯಾತ್ರೆ ಹೊರಟು ಶಾಯನಿ ಏಕಾದಶಿಯಂದು ಪಂಢರಾಪುರಕ್ಕೆ ಬಂದು ಸೇರುತ್ತಾರೆ. ಅಲ್ಲಿ ವಿಠೋಬನ ಆರಾಧನೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

ನಿರ್ಜಲ ಏಕಾದಶಿ : ವರ್ಷದಲ್ಲಿ ಸುಮಾರು 26 “ಏಕಾದಶಿ”ಗಳು ಬರುತ್ತವೆ. ಭಕ್ತ ವೈಷ್ಣವರೆಲ್ಲರೂ ತಪ್ಪದೆ ಏಕಾದಶಿಯಂದು “ಉಪವಾಸ” ಆಚರಿಸುವುದು ರೂಢಿ. ಕಾರಣಾಂತರಗಳಿಂದ ಯಾವುದಾದರೊಂದು ಏಕಾದಶಿ ಆಚರಣೆಗೆ ಅಡ್ಡಿಯಾದರೆ, ಅದಕ್ಕೆ ಪರಿಹಾರ “ನಿರ್ಜಲ ಏಕಾದಶಿ” ಎಂದು ಹೇಳಲಾಗಿದೆ.

ಎಲ್ಲ ಏಕಾದಶಿಗಳ ಆಚರಣೆಯ ಫಲ ನಿರ್ಜಲ ಏಕಾದಶಿಯಂದು ದೊರೆಯುತ್ತದೆ. ಜೇಷ್ಠ ಶುಕ್ಲ ಏಕಾದಶಿಯ ಈ ದಿನದಂದು ನೀರನ್ನು ಸಹ ಕುಡಿಯದೆ ಉಪವಾಸ ಆಚರಿಸುವವರು ವರ್ಷಪೂರ್ತಿ ಆಚರಣೆಯ ಫಲ ಪಡೆಯುತ್ತಾರೆ.

ನಿರ್ಜಲ ಏಕಾದಶಿಗೆ  “ಪಾಂಡವ ಏಕಾದಶಿ” ಎಂದೂ ಹೆಸರಿದೆ. ಇದರ ಹಿನ್ನೆಲೆ ಸ್ವಾರಸ್ಯಕರವಾದುದು.

ಭಕ್ತ ವೈಷ್ಣವರಾದ ಪಾಂಡವರೆಲ್ಲರೂ – ಭೀಮಸೇನನ್ನುಳಿದು ಏಕಾದಶಿಯನ್ನು ತಪ್ಪದೆ ಆಚರಿಸುತ್ತಿರುತ್ತಾರೆ. ವೃಕೋದರನಾದ ಭೀಮನಿಗೆ ಮಾತ್ರ ಉಪವಾಸ ಶಕ್ಯವೇ ಆಗುವುದಿಲ್ಲ. ಇದರಿಂದ ಬಹಳ ಕಸಿವಿಸಿಗೊಂಡ ಆತ ವೇದವ್ಯಾಸರ ಬಳಿ ಬಂದು ತನಗೂ ಏಕಾದಶಿಯ ಪುಣ್ಯ ಲಭಿಸುವಂತೆ ಏನು ಮಾಡಬಹುದು ಎಂಬುದಾಗಿ ಕೇಳಿಕೊಳ್ಳುತ್ತಾನೆ.

ಅದಕ್ಕೆ ವೇದವ್ಯಾಸರು ವರ್ಷದಲ್ಲೊಂದು ಏಕಾದಶಿಯ ದಿನ – ಜೇಷ್ಠ ಶುಕ್ಲ ಏಕಾದಶಿಯ ದಿನ – ನೀರನ್ನು ಕುಡಿಯದೆ ಉಪವಾಸ ಮಾಡುವಂತೆ ತಿಳಿಸುತ್ತಾರೆ. ಭೀಮಸೇನ ಅತಿ ಶ್ರದ್ಧೆಯಿಂದ, ನಿರಾಹಾರಿಯಾಗಿ ಉಪವಾಸ ಮಾಡಿ ಏಕಾದಶಿ ವ್ರತಾಚರಣೆಯ ಪುಣ್ಯಗಳಿಸುತ್ತಾನೆ. ಹೀಗೆ ಏಕಾದಶಿಯ ಸೂರ್ಯೋದಯದಿಂದ ದ್ವಾದಶಿಯ ಸೂರ್ಯೋದಯ ಕಾಲದವರೆಗೂ ನೀರನ್ನು ಕೂಡ ಸೇವಿಸದೆ ಆಚರಿಸುವ ವ್ರತ ಇದಾದ್ದರಿಂದ, “ನಿರ್ಜಲ” ಏಕಾದಶಿ ಎಂಬ ಹೆಸರು ಬಂದಿದೆ.

ಜ್ಯೇಷ್ಠ ಮಾಸದ ಬಿರುಬೇಸಿಗೆಯಲ್ಲಿ ಇಂತಹ ಕಠಿಣ ವ್ರತ ಕೈಗೊಂಡು ಭಗವನ್ನಾಮ ಸ್ಮರಣೆ ಮಾಡುವ ಭಕ್ತರು ಸಹಜವಾಗಿ ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಲವಡೆ ಈ ದಿನದಂದು ಕುಂಭಗಳಲ್ಲಿ ‘ಜಲದಾನ’ ನೀಡುವ ರೂಢಿಯಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi