ಶ್ರೀಲ ಪ್ರಭುಪಾದ
ಶತಮಾನ ಕಂಡ ಪರಮಾದ್ಭುತ ಘಟನೆ!
ಯಾರಿವರು?
ಎಲ್ಲರೂ ಇಳಿಗಾಲ, ಉತ್ಸಾಹ ಆಸಕ್ತಿಗಳು ಬತ್ತಿಹೋಗಿ, ಎಲ್ಲದರಲ್ಲೂ ಹಕಾಶೆ, ವೈರಾಗ್ಯ, ಆಶಕ್ತಿಯ ಕಾಲವೆಂದು ಪರಿಭಾವಿಸುವ ವಯಸ್ಸಿನಲ್ಲಿ ಅವರು ಅಮೆರಿಕಕ್ಕೆ ಹೊರಟು ನಿಂತವರು. ಗುರುಗಳ ಆದೇಶ ಪರಿಪಾಲಿಸುವ ಛಲ, ಪಾಶ್ಚಾತ್ಯ ಜಗತ್ತಿನಲ್ಲಿ ಕೃಷ್ಣಭಕ್ತಿಯನ್ನು ಪ್ರಸರಿಸುವ ಸಂಕಲ್ಪದಿಂದ 69ನೆಯ ವಯಸ್ಸಿನಲ್ಲಿ ಅವರು ಹಡಗಿನಲ್ಲಿ ಹೊರಟಾಗ ಅವರ ಬಳಿ ಇದ್ದದ್ದು ನಲವತ್ತು ರೂಪಾಯಿಗಳು, ಭಾಗವತ ಪುಸ್ತಕ ಹಾಗೂ ಕೃಷ್ಣ ರಕ್ಷಿಸುತ್ತಾನೆಂಬ ನಂಬಿಕೆ, ಭರವಸೆ.

ಯಾರಿವರು? ಮುಂದೆ ಎರಡು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ “ಭಗವದ್ಗೀತೆ” ಗ್ರಂಥ ರಚಿಸಿದ ಇವರು ಯಾರು? ಹಿಂದಿ ಭಾಷೆಯೊಂದರಲ್ಲೇ ಮೂವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡ ಕೃತಿಯನ್ನು ಬರೆದ ಈ ಕೃತಿಕಾರ ಯಾರು? ಕನ್ನಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ‘ಭಗವದ್ಗೀತೆ’ ಗ್ರಂಥದ ಈ ಮೂಲ ಲೇಖಕ ಯಾರು?
ಈ ಲೇಖಕ ಬರೆದ ಗ್ರಂಥಗಳ ಇಂಗ್ಲಿಷ್ ಆವೃತ್ತಿಯ ನಾಲ್ಕೂವರೆ ಕೋಟಿ ಸಂಖ್ಯೆಯ ಪ್ರತಿಗಳು ಮಾರಾಟವಾಗಿವೆ. ಹಾಗಿದ್ದರೆ ಈ ಮಹಾನ್ ಲೇಖಕ ಯಾರು? ಒಬ್ಬಭಾರತೀಯ ಲೇಖಕನ ಗ್ರಂಥಗಳು ನಾನಾ ವಿದೇಶಿ ಭಾಷೆಗಳಲ್ಲಿ ಪ್ರಕಟವಾಗಿದ್ದು ಆರು ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಅವು ಮಾರಾಟವಾಗಿವೆ.
ಯಾರೀ ಭಾರತೀಯ ಲೇಖಕ? ಒಮ್ಮೆ ಭಾರತೀಯ ವಿದ್ವಾಂಸರೊಬ್ಬರ ಗ್ರಂಥದ ಮುದ್ರಣಕ್ಕಾಗಿ ಅಗತ್ಯವಿದ್ದ ಕಾಗದಗಳನ್ನು ಎಪ್ಪತ್ತಾರು ರೈಲ್ವೆ ಭೋಗಿಗಳಲ್ಲಿ ಸಾಗಿಸಲಾಯಿತು.
ಆ ವಿದ್ವಾಂಸರು ಯಾರು? ಭಾರತೀಯ ಧಾರ್ಮಿಕ ಲೇಖಕರೊಬ್ಬರು ಬರೆದ ಭಗವದ್ಗೀತಾ ಗ್ರಂಥವು ಫ್ರೆಂಚ್, ರಷ್ಯನ್, ಡಚ್, ಜರ್ಮನ್, ಪೋರ್ಚುಗೀಸ್, ಸ್ವೀಡಿಷ್, ಸ್ಪಾನಿಷ್, ಚೈನೀಸ್, ಅರೇಬಿಕ್, ಹೀಬ್ರೂ, ಇಟಾಲಿಯನ್ ಮುಂತಾದ ನಲವತ್ತಕ್ಕೂ ಹೆಚ್ಚು ವಿದೇಶೀ ಭಾಷೆಗಳಿಗೆ ಹಾಗೂ ಎಲ್ಲ ಭಾರತೀಯ ಭಾಷೆಗಳಲ್ಲೂ ಅನುವಾದಗೊಂಡು ಸಕ್ರಮವಾಗಿ ವಿಕ್ರಮ ಸ್ಥಾಪಿಸಿತು.
ಆ ಗ್ರಂಥಕರ್ತ ಯಾರು? ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಅವರೇ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವೆಂಬ, ‘ಇಸ್ಕಾನ್’ ಎಂದೇ ಪ್ರಸಿದ್ಧವಾದ ಸಂಸ್ಥೆಯ ಸಂಸ್ಥಾಪನಾಚಾರ್ಯ ಶ್ರೀ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು.
ಆ ಸಂನ್ಯಾಸಿ ಸಹಸ್ರಾರು ವರ್ಷಗಳ ಭಾರತೀಯ ಸನಾತನ ಧರ್ಮ ಹಾಗೂ ಪರಂಪರೆಯ ಸತ್ತ್ವ, ತತ್ತ್ವ, ಮಹತ್ತ್ವ ಕುರಿತಂತೆ ತಲಸ್ಪರ್ಶಿ ಅಧ್ಯಯನ ಮಾಡಿದ್ದರು, ವೇದ ವೇದಾಂತ ವೇದಾಂಗಳಲ್ಲಿ ಪರಿಣತರಾಗಿದ್ದ ಅವರು ಭಗವದ್ಗೀತ ಹಾಗೂ ಭಾಗವತದ ಸಂದೇಶಗಳನ್ನು ಜಗತ್ತಿನಾದ್ಯಂತ ಪ್ರಸರಿಸಬೇಕೆಂದು ಹಂಬಲಿಸುತ್ತಿದ್ದರು.
ಪ್ರಶಾಂತ ಮನಸ್ಸಿನವರೂ, ಸಮಚಿತ್ತರೂ, ಸಂಭಾವಿತರೂ, ವಿನೀತರೂ, ವಿಶಿಷ್ಟ ಕಾಂತಿ ಪ್ರತಿಭಾ ಸಂಪನ್ನರೂ, ವಿದ್ಮನ್ಮಣಿಗಳೂ ಆದ ಅವರು ಪರಮಾತ್ಮ ಪ್ರಭೆಯ ಪ್ರಸರಣಕ್ಕಾಗಿ ಮನೆ, ಮಡದಿ, ಮಕ್ಕಳು ಹಾಗೂ ಎಲ್ಲ ಲೌಕಿಕ ವ್ಯಾಮೋಹ ತ್ಯಜಿಸಿದ್ದರು. ವಿಶ್ವದಾದ್ಯಂತ ಕೃಷ್ಣ ಭಕ್ತಿಯ, ಭಾಗವತ ಶಕ್ತಿಯ ಪ್ರಚಾರ ಮಾಡಲು ಒಂದು ಸುವರ್ಣ ಕ್ಷಣಕ್ಕಾಗಿ ಕಾದಿದ್ದರು.
ಅಂತಹದೊಂದು ಅವಕಾಶವೂ ಬಂತು, 1961 ಮೇ 10 ರಿಂದ 20ರವರೆಗೆ ಜಪಾನಿನ ಟೋಕಿಯೋದಲ್ಲಿ ಮಾನವ ಚೈತನ್ಯ ಸಂಸ್ಕಾರದ ಅಂತಾರಾಷ್ಟ್ರೀಯ ಸಮಾವೇಶವೊಂದು ವ್ಯವಸ್ಥೆಯಾಗಿತ್ತು. ಸ್ವಾಮಿಗಳು ಈ ಸಮಾವೇಶಕ್ಕೆ ವಿಶಿಷ್ಟ ಯೋಜನೆಯೊಂದನ್ನು ಸೂಚಿಸಿದರು.

ಭಾಗವತದ ದಶಮ ಸ್ಕಂಧದಲ್ಲಿ ಬರುವ ವೃಂದಾವನದ ಶರತ್ಕಾಲದ ಹಿನ್ನಲೆಯಲ್ಲಿ ಐವತ್ತು ವರ್ಣಚಿತ್ರಗಳು ಹಾಗೂ ಐವತ್ತು ವ್ಯಾಖ್ಯಾನಗಳು ಅದ್ಭುತ ಪ್ರದರ್ಶನದ ವಿವರವಾದ ಸಲಹೆ ನೀಡಿದ್ದರು. ಈ ಸಂಗತಿ ಮೆಚ್ಚಿದ ಸಮ್ಮೇಳನದ ವ್ಯವಸ್ಥಾಪಕರು ಸ್ವಾಮೀಜಿಯವರನ್ನು ಸಮ್ಮೇಳನದ ಅಧಿಕೃತ ಅತಿಥಿಯೆಂದು, ಸಮ್ಮೇಳನದ ಕಾಲದಲ್ಲಿ ಹೋಟಲಿನ, ಊಟ ವಸತಿ ವೆಚ್ಚ ಹಾಗೂ ಜಪಾನಿನೊಳಗೆ ಮಾಡುವ ಪ್ರಯಾಣದ ವ್ಯವಸ್ಥೆಗಳನ್ನು ಭರಿಸಲು ಒಪ್ಪಿದರು.
ಆದರೆ ಭಾರತದಿಂದ ಜಪಾನ್ ತಲಪುವ ವೆಚ್ಚ ಮಾತ್ರ ಸ್ವಾಮಿಯವರೇ ನೋಡಿಕೊಳ್ಳಬೇಕಾಗಿತ್ತು. ಆಗ ವಿಮಾನ ಪ್ರಯಾಣದ ವೆಚ್ಚ ಮೂರು ಸಾವಿರದ ಐದುನೂರು ರೂಪಾಯಿಗಳು. ಅಷ್ಟು ಹಣವನ್ನು ಹೊಂದಿಸಲು ಸ್ವಾಮೀಜಿ ಬಹುವಾಗಿ ಪ್ರಯತ್ನಿಸಿದರು. ಸರ್ಕಾರದ ಸಚಿವಾಲಯಕ್ಕೆ ಅನೇಕ ಪತ್ರಗಳನ್ನು ಬರೆದರು. ದೊಡ್ಡ ದೊಡ್ಡದಾನಿಗಳಿಗೆ, ಪ್ರತಿಷ್ಠಿತ ಶ್ರೀಮಂತರಿಗೆ ಪತ್ರ ಬರೆದರು.
ಕಡೆಗೆ ತಮ್ಮ ಗ್ರಂಥದ ಉತ್ಕೃಷ್ಟತೆಯ ಬಗ್ಗೆ ತಮ್ಮ ಆಶಯದ ಮಹತ್ತದ ಬಗ್ಗೆ ಗೊತ್ತಿದ್ದ ತುಂಬ ಹತ್ತಿರದ ಪರಿಚಯವಿದ್ದ ತತ್ತ್ವಜ್ಞಾನಿ ಹಾಗೂ ಭಾರತದ ಉಪಾಧ್ಯಕ್ಷ ಡಾ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದರು. ಭಾರತದ ಆಧ್ಯಾತ್ಮಿಕ ಸಾಂಸ್ಕೃತಿಯ ಪ್ರಚಾರಕ್ಕೆ ಇದೊಂದು ಸದಾವಕಾಶ, ದಯಮಾಡಿ ಉಪಕರಿಸಿ ಎಂದು ಕೋರಿದರು. ಇಷ್ಟೆಲ್ಲಾ ಶತಪ್ರಯತ್ನ ಮಾಡಿದರೂ ಅವರಿಗೆ ಎಲ್ಲಿಂದಲೂ ಸಹಾಯ ಒದಗಿಬರಲಿಲ್ಲ. ಅವರು ಹೋಗಲಾಗಲಿಲ್ಲ. ಅವರ ಪ್ರಯತ್ನ ಕನಸಾಗಿಯೇ ಉಳಿಯಿತು.
ಆದರೆ ನಾಲ್ಕು ವರ್ಷದ ಅನಂತರ ಅವರಿಗೆ ಕನಸು ನನಸಾಗುವದಿನ ಬಂತು. ಕಲ್ಕತ್ತದಿಂದ 1965ರ ಆಗಸ್ಟ್ 13 ರಂದು ನ್ಯೂಯಾರ್ಕಿಗೆ ತೆರಳುತ್ತಿದ್ದ “ಜಲದೂತ” ಹಡಗಿನಲ್ಲಿ 69 ವರ್ಷದ ಆ ಸಂನ್ಯಾಸಿ ಹೊರಟಾಗ ಅವರ ಬಳಿ ಇದ್ದದ್ದು ಕೇವಲ ನಲವತ್ತು ರೂಪಾಯಿ ಹಾಗೂ ಭಾಗವತದ ಪುಸ್ತಕ.
ಹಡಗಿನಲ್ಲಿಯೇ ಎರಡು ಬಾರಿ ಹೃದಯಾಘಾತವಾಯಿತು. ಕೃಷ್ಣ ನಾಮಸ್ಮರಣೆಯಿಂದಲೇ ಅದನ್ನು ತಡೆದುಕೊಂಡರು. ಶ್ರೀಕೃಷ್ಣ ದೋಣಿಗೆ ಹುಟ್ಟು ಹಾಕಿ ಸುಖವಾಗಿ ತನ್ನನ್ನು ಕರೆದೊಯ್ದಂತೆ ಕಂಡಿತು. ಈಗ ಬಾಸ್ಟನ್ ನೆಲದ ಮೇಲೆ ಕಾಲಿಟ್ಟರು. ಅಲ್ಲಿಂದ ಪೆನ್ಸಿಲ್ವೇನಿಯಾದ ಬಟ್ಲರಿಗೆ ತೆರಳಿದರು.
ಬಟ್ಲರ್ ಈಗಲ್ ಎನ್ನುವ ಪತ್ರಿಕೆ ಅವರ ನಡೆನುಡಿ ಕಂಡು ಭಕ್ತಿಯೋಗದ ರಾಯಭಾರಿ ಎಂದು ಬರೆಯಿತು. ಅಲ್ಲಿಂದ ನ್ಯೂಯಾರ್ಕಿಗೆ ಬಂದರು. ಅವರು ಅಮೆರಿಕಕ್ಕೆ ಬಂದದ್ದು 1965ರಲ್ಲಿ ಅಲ್ಲಿಯವರಿಗೆ ಅವರು ಮೂರು ಪುಸ್ತಕಗಳನ್ನು ಭಾರತದಲ್ಲಿ ಬರೆದಿದ್ದರು. ಆದರೆ ಮುಂದಿನ 12 ವರ್ಷಗಳಲ್ಲಿ ಅಷ್ಟು ಸಾಧನೆ, ಪ್ರಚಾರ, ಜನ ಸಂಗ್ರಹ, ಪ್ರವಚನ, ಸಂಕೀರ್ತನೆ, ಪ್ರಯಾಣಗಳ ಮಧ್ಯದಲ್ಲಿ ಅವರು ಅರವತ್ತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಶತಮಾನಗಳ ಕಾಲ ಉಳಿಯಬಲ್ಲ ಮೌಲಿಕ ಗ್ರಂಥಗಳನ್ನು ಬರದರು.
ಭಾರತ ಬಿಡುವ ಮೊದಲು ಅವರು ಉಪದೇಶ ದೀಕ್ಷೆ ನೀಡಿದ್ದು ಒಬ್ಬ ಶಿಷ್ಯನಿಗೆ ಮಾತ್ರ. ಮುಂದಿನ ಹನ್ನೆರಡು ವರ್ಷಗಳಲ್ಲಿ ಒಬ್ಬೊಬ್ಬರೂ ವಿಶ್ವಮಟ್ಟದ ಸಾಧನೆ ಮಾಡಬಲ್ಲ ಶ್ರದ್ಧಾಭಕ್ತಿ ನಿಷ್ಠೆಯ ನಾಲ್ಕು ಸಾವಿರಕ್ಕೂ ಹೆಚ್ಚು ಜಗತ್ತಿನ ನಾನಾ ರಾಷ್ಟ್ರಗಳು ಶಿಷ್ಯರಿಗೆ ದೀಕ್ಷೆ ನೀಡಿದರು. ಭಾರತವನ್ನು ಬಿಡುವ ಮುಂಚೆ ಅವರಿಗಿದ್ದಿದ್ದು ಗುರು ಪ್ರೇರಣೆ, ಕೃಷ್ಣಾನುಗ್ರಹ ಹಾಗೂ ದೇವಸ್ಥಾನ ನಿರ್ಮಿಸುವ ಹಂಬಲ ಮಾತ್ರ.
ಆದರೆ ಮುಂದಿನ ಹನ್ನೆರಡು ವರ್ಷಗಳಲ್ಲಿ ಇಡೀ ಜಗತ್ತನ್ನು ಬೆಳಗಬಲ್ಲ ಇಸ್ಕಾನ್ ಸಂಸ್ಥೆಯನ್ನು ಸ್ಥಾಪಿಸಿ, ಮಹಾನ್ ದೇವಾಲಯಗಳನ್ನು ಊರೂರುಗಳಲ್ಲಿ ದೇಶದೇಶಗಳಲ್ಲಿ ಸ್ಥಾಪಿಸಿದರು. ಭಾರತ ಬಿಡುವ ಮೊದಲು ಕೇವಲ 3500 ರೂಪಾಯಿ ಸಂಗ್ರಹಿಸಲು ಹರ ಸಾಹಸ ಮಾಡಿ ಸಫಲರಾಗಿರಲಿಲ್ಲ. ಆದರೆ ಮುಂದಿನ ಹನ್ನೆರಡು ವರ್ಷಗಳಲ್ಲಿ ವಿಶ್ವದಾದ್ಯಂತ ತನ್ನ ಪ್ರಭಾವದ ಪ್ರವಾಹವನ್ನು ಹರಿಸಬಲ್ಲ ಬಲಿಷ್ಠ ಸಂಸ್ಥೆಗಳನ್ನು ಶಕ್ತಿಯುತ ವ್ಯಕ್ತಿಗಳನ್ನು ರೂಪಿಸುವಲ್ಲಿ ಯಶಸ್ವಿಯಾದರು.

ನ್ಯೂಯಾರ್ಕಿಗೆ ಬಂದೊಡನೆಯೇ ಕೊರೆಯುವ ಛಳಿಯಲ್ಲಿ ಭಾಗವತ ರಚನೆ ಮುಂದುವರಿಸಿದರು. ಗೀತೋಪನಿಷತ್ ಪ್ರವೇಶಿಕೆ ಎಂಬ ತತ್ತ್ವಜ್ಞಾನ ಪ್ರಬಂಧ ಬರೆದು ಮುದ್ರಿಸಿದರು.
ನ್ಯೂಯಾರ್ಕಿನ ಬೊವಿರಿಯಲ್ಲಿ ಅವರು ವಾಸಿಸುತ್ತಿದ್ದ ಅವಧಿಯಲ್ಲಿ ಭಾಗವತದ ಹಲವಾರು ಸಂಪುಟಗಳ ಅನುವಾದ ಮಾಡಿದರೂ ನ್ಯೂಯಾರ್ಕ್, ಸ್ಯಾನ್‌ಫ್ರಾನ್ಸಿಸ್ಕೋ ನಗರದ ಲೋಯರ್ ಈಸ್ಟ್ ಸೈಡ್ ಹಾಗೂ ಹಾಯ್‌ಟ್ ಆಷ್‌ಬರಿಯಲ್ಲಿ ಲೈಂಗಿಕ ಜೀವನಾಸಕ್ತರೂ, ಮಾದಕ ದ್ರವ್ಯವ್ಯಸನಿಗಳೂ, ಎಲ್ಲ ಬಗೆಯ ಅಧಿಕಾರ, ನಿಯಂತ್ರಣಗಳನ್ನು ತಾತ್ವಿಕವಾಗಿ ಧಿಕ್ಕರಿಸುವಂತಹ ಸ್ವಚ್ಛಂದ ಪ್ರವೃತ್ತಿಯ ಹಿಪ್ಪಿಗಳ ಸಮೂಹಗಳನ್ನೇ ಸ್ವಾಮಿ ಪ್ರಭುಪಾದರು ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸಿದರು,
ಪರಿವರ್ತಿಸಿದರು. ಪ್ರಭುಪಾದರ ತಾಳ್ಮೆ ಅಸಾಧಾರಣ ಸಾಮರ್ಥ್ಯ, ಸಂವಹನಾಸಿದ್ಧಿ ಹಾಗೂ ನಿಸ್ಪೃಹವಾದ ಪ್ರೀತಿಯ ಧಾರೆ ಹಾಗೂ ಮಗುವಿನಿಂತಹ ಮನಸ್ಸು, ಐಹಿಕ ಸುಖಭೋಗಗಳೇ ಸರ್ವಸ್ವವೆಂಬ ಭ್ರಮೆಯಲ್ಲಿದ್ದ ನೂರಾರು ಯುವಜನರನ್ನು ಕೃಷ್ಣಪ್ರಜ್ಞೆಯ ರಾಜಮಾರ್ಗಕ್ಕೆ ಬರುವಂತೆ ಪ್ರೇರೇಪಿಸಿತು.
ತಮ್ಮ ವೈದಿಕ ಹಾಗೂ ಪರಂಪರೆಯ ಉದಾತ್ತ ತತ್ತ್ವಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಡದೆ, ಹಿಪ್ಪಿಗಳ ಮಾದಕ ವ್ಯಸನ ಪ್ರವೃತ್ತಿಯನ್ನು ಅನುಮೋದಿಸದೆ, ಜೇನಿಸ್ ಜಾಪ್ಲಿನ್ ಹಾಗೂ ಗ್ರೇಟ್‌ಫುಲ್ ಡೆಡ್‌ನಂತಹ ಪ್ರಬಲರನ್ನೊಳಗೊಂಡ ತಂಡಗಳನ್ನು ಮಂತ್ರರಾಕ್ ಡ್ಯಾನ್ಸ್‌ಗಳಲ್ಲಿ ತೊಡಗಿಸುವ ಪ್ರಚಂಡ ಧೈರ್ಯವನ್ನು ಪ್ರಭುಪಾದರು ತೋರಿಸಿದರು.
ಸುಗಂಧ ಧೂಪದ ಹಾಗೂ ಮಾರಿಜುವಾ ಧೂಮದ ವಿಲಕ್ಷಣ ಮಿಶ್ರಣದ ಹಾಗೂ ಕೃಷ್ಣನ ಚಿತ್ರಗಳನ್ನು ಭಿತ್ತಿಗಳ ಮೇಲೆ ಬಿಂಬಿಸುವ ವಿಶಿಷ್ಟ ಬೆಳಕಿನ ವ್ಯವಸ್ಥೆಯ ನಡುವೆ ಶ್ರೀಲ ಪ್ರಭುಪಾದರು ತಮ್ಮ ಕೃಷ್ಣಪ್ರಜ್ಞೆಯ ಸಂದೇಶದ ಕಾಲಾತೀತ ಸುಖಾನುಭವದ ಎತ್ತರ ಬಿತ್ತರಗಳನ್ನು ಸಮರ್ಥವಾಗಿ ತೋರಿಸಿಕೊಟ್ಟರು.
ಹಾಗೆಯೇ ಕ್ಷಣಾರ್ಧದಲ್ಲಿ ಅಲೆನ ಗಿನ್ಸ್‌ಬರ್ಗ್‌ನಂತಹ ಕವಿಯ ನೆರವಿನಿಂದ ಅಲ್ಲಿ ನೆರೆದ ಸಹಸ್ರ ಸಹಸ್ರ ಹಿಪ್ಪಿಸಮೂಹ, ಯುವ ಜನಾಂಗ ‘ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ’ ಎಂಬ ಮಹಾ ಮಂತ್ರವನ್ನು ಸಂಕೀರ್ತಿಸುತ್ತಾ, ಹಾಡುತ್ತಾ ತೊನೆಯುತ್ತಾ, ದೈವಿಕ ನರ್ತನದಲ್ಲಿ ತೊಡಗುವಂತೆ ಪವಾಡ ಸದೃಶ ಘಟನೆಯನ್ನು ನಿರೂಪಿಸಿದರು.
ಅವರ ನೈತಿಕ ಸಾಮರ್ಥ್ಯ, ಆತ್ಮಬಲ, ವಿನೀತಭಾವ, ಪಾವಿತ್ರ್ಯ ಹಾಗೂ ಶಿಷ್ಯರೊಡನೆ ಶಿಷ್ಯರಂತೆಯೇ ಬದುಕುವ ಕಲೆಯಿಂದಾಗಿ ಕೆಲವೇ ದಿನಗಳಲ್ಲಿ ಅಮೆರಿಕದ ಸಹಸ್ರಾರು ಯುವ ಜನರ ಕಣ್ಮಣಿಯಾದರು. ಮಾನವ ಪ್ರೀತಿಯ ಅಭಾವವಿದ್ದ ಅಮೆರಿಕದಲ್ಲಿ ಅದರ ಗಾಳಿಗಂಧವನ್ನು ಸುತ್ತಲೂ ಹರಡಿ ನೂರಾರು ದೇವಾಲಯಗಳ ನಿರ್ಮಾಣಕ್ಕೆ ಕಾರಣಪುರುಷರಾದರು.
ಈ ಸರ್ವಜನಾಂಗದ ಸುಂದರ ತೋಟದ ಎಲ್ಲ ಹೂವುಗಳೂ ಕೃಷ್ಣನಿಗೇ ಸಮರ್ಪಿತ. ಪ್ರಾರಂಭದಲ್ಲಿ ಹಿಪ್ಪಿಗಳು, ಹಾಡುಗಾರರು, ಕಲಾವಿದರು ಆಧ್ಯಾತ್ಮ ಪಿಪಾಸುಗಳು ಈ ನದಿಗೆ ಬಂದು ಸೇರಿದರೂ, ಬರುಬರುತ್ತಾ ಧೀಮಂತರೂ, ಸಾಧಕರೂ, ಮಹೋನ್ನತ ಶಿಕ್ಷಣ ಪಡೆದ ಸುಜ್ಞಾನಿ ವಿಜ್ಞಾನಿಗಳೂ, ವೈದ್ಯರೂ ತಾಂತ್ರಿಕಪರಿಣತರು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಗತ್ತಿನ ನಾನಾ ಭಾಗಗಳಿಂದ ಬಂದು ಸೇರಿ ಕೃಷ್ಣ ಭಕ್ತಿ ಎನ್ನುವ ಈ ನದಿಯ ಪಾತ್ರದ ವ್ಯಾಪ್ತಿಯನ್ನು ವಿಸ್ತರಿಸಿದರು.

ಕೃಷ್ಣನಾಮ ಸ್ಮರಣೆಯನ್ನು ಹರೇ ರಾಮ ಹರೇ ಕೃಷ್ಣಮಂತ್ರವನ್ನು ಸಕ್ರಮವಾಗಿ, ಸಕ್ರಿಯವಾಗಿ ಹೇಳಿಕೊಡುತ್ತಿರುವ ಜಗತ್ತಿನ ಮಹಾನ್ ಗುರುಕುಲವೆಂದರೆ ಇಸ್ಕಾನ್. ಇಸ್ಕಾನ್‌ನ ಅನೇಕ ದೇವಾಲಯಗಳಲ್ಲಿ ಇಂದು ವೇದೋಪನಿಷತ್ತುಗಳ ಮಂಗಳಶ್ಲೋಕ ಮೊಳಗುತ್ತಿದ್ದು, ನಭೋಮಂಡಲದಲ್ಲಿ ಅದು ಮಾರ್ದನಿಸುತ್ತಿದೆ. ಕೃಷ್ಣನಿಗೆ ನಿವೇದನವಾದ ಇಸ್ಕಾನ್‌ನ ಪ್ರಸಾದವೆಂದರೆ ಅನೇಕ ದೇಶಗಳ ಪ್ರಧಾನಿಗಳೂ, ರಾಷ್ಟ್ರಾಧ್ಯಕ್ಷರೂ ಸಹ ಸ್ವೀಕರಿಸಬೇಕೆಂದು ಹಂಬಲಿಸುತ್ತಾ ಇರುತ್ತಾರೆ, ಏಕೆಂದರೆ ಅದು ಅಷ್ಟು ರುಚಿ, ಅಷ್ಟು ಸವಿ, ಅಷ್ಟು ಪವಿತ್ರ.
ಕೃಷ್ಣಪ್ರಜ್ಞೆಯ ವಿಶೇಷ ಧರ್ಮ ದೇಶ ದೇಶಗಳಲ್ಲಿ ದಿಕ್ಕು ದಿಕ್ಕುಗಳಲ್ಲಿ ಮೊಳಗಿ ಬೆಳಗುವಂತೆ ಮಾಡಿದ ತ್ರಿವಿಕ್ರಮಶಕ್ತಿ ಸ್ವಾಮಿ ಪ್ರಭುಪಾದರು. ಕ್ರೌರ್ಯ, ಮಾಂಸಾಹಾರ, ಅಸಂಸ್ಕೃತಿ, ಕುಸಂಸ್ಕಾರ, ಆಕ್ರಮಣ ಪ್ರವೃತ್ತಿ, ಹಾಗೂ ಅನಾಥ ಪ್ರಜ್ಞೆಗಳಿದ್ದ ಮನಸ್ಸು, ಬುದ್ಧಿ ಹಾಗೂ ದೇಶಗಳಲ್ಲಿ ಕರುಣೆ, ದಯೆ, ಧರ್ಮ, ವಿವೇಕ, ಶಾಂತಿ, ತ್ಯಾಗ, ಉತ್ತಮ ಸಂಸ್ಕಾರ, ಕೃಷ್ಣಪ್ರಜ್ಞೆ ಹಾಗೂ ದೈವೀ ಸಂಸ್ಕೃತಿಯ ಹೊಸದೊಂದು ಲೋಕವನ್ನೇ ಸೃಷ್ಟಿಸಿದ ಪವಾಡ ಪುರುಷರಾದರು ಶ್ರೀಲ ಪ್ರಭುಪಾದರು.
ಸಂಕುಚಿತ ಮನೋಭಾವ ಹಾಗೂ ಅಜ್ಞಾನದ ಕತ್ತಲನ್ನು ದೂಡಿದರು. ಕೃಷ್ಣ ಭಕ್ತಿಯ ಹಾಡುಗಳನ್ನು ಹಾಡಿದರು. ಕೃಷ್ಣಪ್ರಜ್ಞೆಯ ಸಂದೇಶಗಳನ್ನು ಬಿತ್ತರಿಸಿದರು. ಅನಾಥ ಪ್ರಜ್ಞೆಯ ಭ್ರಮೆಗಳನ್ನು ಕತ್ತರಿಸಿದರು.
ಅಮೆರಿಕದಲ್ಲಿ, ಇಂಗ್ಲೆಂಡಿನಲ್ಲಿ, ರಷ್ಯಾದಲ್ಲಿ ಕೆನಡಾದಲ್ಲಿ, ಯೂರೋಪಿನಲ್ಲಿ, ಜಪಾನಿನಲ್ಲಿ, ಆಸ್ಟ್ರೇಲಿಯಾದಲ್ಲಿ, ಆಫ್ರಿಕಾದಲ್ಲಿ ಭಾರತದ ನಾನಾ ಊರುಗಳಲ್ಲಿ ಲಕ್ಷ ಲಕ್ಷ ಸಂಖ್ಯೆಯ ನೊಂದವರ, ಬೆಂದವರ, ಅನಾಥರ, ದಿಕ್ಕುಗಾಣದ ಮೂಕರಾಗಿದ್ದವರ, ಬಾಳಿನಲ್ಲಿ ಭವ್ಯ ಭವಿತವ್ಯದ ಜ್ಯೋತಿ ಬೆಳಗಿಸಿದವರು, ಜಾಗೃತಿಯ ಕರೆಗಂಟೆ ಬಾರಿಸಿದವರು, ಕೃಷ್ಣಭಕ್ತಿಯ ವಾಣಿಯನ್ನು ಕೋಟಿ ಕೋಟಿ ಜನ ಭಕ್ತಿಯಿಂದ ಕೇಳುವಂತೆ ಮೊಳಗಿಸಿದವರು ಸ್ವಾಮಿ ಶ್ರೀಲ ಪ್ರಭುಪಾದರು.
ಪ್ರಭುಪಾದರ ಬಾಲ್ಯದ ಹೆಸರು ಅಭಯ ಚರಣ್ ಡೇ. 1896ರ ಸೆಪ್ಟೆಂಬರ್ 1 ರಂದು ಗೌರಮೋಹನಡೇ ಹಾಗೂ ರಜನಿ ದಂಪತಿಗಳ ಮಗುವಾಗಿ ಕಲ್ಕತ್ತದಲ್ಲಿ ಜನಿಸಿದರು. ಆಗ ಜಾತಕ ಬರೆದಿದ್ದ ಜ್ಯೋತಿಷಿಯೊಬ್ಬರು ಈ ಮಗು ಎಪ್ಪತ್ತನೆಯ ವಯಸ್ಸಿನಲ್ಲಿ ಸಮುದ್ರದಾಟಿ ಧರ್ಮ ಪ್ರಚಾರ ಮಾಡಿ, 108 ದೇವಾಲಯಗಳನ್ನು ನಿರ್ಮಿಸುತ್ತಾನೆ ಎಂದು ನುಡಿದಿದ್ದರು.
ಮನೆಯ ಬಳಿಯೇ ಇದ್ದ ರಾಧಾ ಗೋವಿಂದ ದೇವಸ್ಥಾನಕ್ಕೆ ಪ್ರತಿನಿತ್ಯ ತಾಯ್ತಂದೆಯರು ಕರೆದೊಯ್ದು ಕೃಷ್ಣಪ್ರಜ್ಞೆಯ ಸಂಸ್ಕಾರವನ್ನು ಬಾಲ್ಯದಲ್ಲೇ ನೀಡಿದ್ದರು. ಆ ದೇವಸ್ಥಾನದ ರಥಯಾತ್ರೆಯಿಂದ ಪ್ರೇರಿತನಾದ ಬಾಲಕ ತಾನೇ ಪುಟ್ಟ ರಥ ಮಾಡಿ ಎಂಟು ದಿನಗಳ ಕಾಲ ಮನೆಯವರ ನೆರವಿನಿಂದ ರಥಯಾತ್ರ ನಡೆಸಿಯೇ ಬಿಟ್ಟ. ಆ ಪ್ರಭಾವವೇ ಇಂದು ಜಗತ್ತಿನ ನಾನಾ ದೇಶಗಳಲ್ಲಿ ವೈಭವ ವಿಜೃಂಭಣೆಗಳಿಂದ ನಡೆಯುತ್ತಿರುವ ಇಸ್ಕಾನ್ ರಥಯಾತ್ರೆ.
ಕಾಲೇಜಿನಲ್ಲಿ ಓದುತ್ತಿರುವಾಗ ರಾಧಾರಾಣಿ ದತ್ತ ಎಂಬ ಕನ್ಯೆಯೊಡನೆ ವಿವಾಹವಾಯಿತು. ಕಾಲೇಜಿನಲ್ಲಿ ತನಗಿಂತ ಒಂದು ತರಗತಿಯಲ್ಲಿ ಮುಂದಿದ್ದ ಸುಭಾಸ್‌ಚಂದ್ರ ಬೋಸ್ ಅವರ ಸ್ವಾತಂತ್ರ್ಯ ಹೋರಾಟದಿಂದ ಪ್ರೇರಣೆ ಪಡೆದ ಅಭಯ ಮುಂದೆ ಮಹಾತ್ಮಾ ಗಾಂಧಿಯವರ ಚಿಂತನೆಯಿಂದಲೂ ಪ್ರಭಾವಿತನಾದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ, ಕಾಲೇಜು ಪದವಿಯನ್ನು ತಿರಸ್ಕರಿಸಿದ.
ಪ್ರಭುಪಾದರ ಗುರುಗಳು :

1922ರಲ್ಲಿ ಮೊದಲ ಬಾರಿಗೆ ಭಕ್ತಿಸಿದ್ಧಾಂತ ಸರಸ್ವತೀಯೆನ್ನುವ ಸ್ವಾಮಿಯನ್ನು ಅಭಯ ಭೇಟಿಯಾದ. ಚೈತನ್ಯರ ಅನುಗ್ರಹ ವಿಶೇಷದಿಂದ ರೂಪುಗೊಂಡಿದ್ದ ಅವರ ವ್ಯಕ್ತಿತ್ವ ಅಭಯನ ಮೇಲೆ ಪ್ರಭಾವ ಬೀರಿತು. “ನೀವು ಸುಸಂಸ್ಕೃತರು, ವಿದ್ಯಾವಂತರು, ತರುಣರು, ಚೈತನ್ಯ ಪ್ರಭುಗಳ ಅಮರ ಸಂದೇಶವನ್ನು ಜಗತ್ತಿನಾದ್ಯಂತ ಬೋಧಿಸಲು ನೀವು ಸಮರ್ಥರು’ ಎಂದು ನುಡಿದ ಅವರ ಮಾತು ಮುಂದೆ ಮಂತ್ರವಾಯಿತು.
“ಮುಂದೆ ನಿನಗೆ ಎಂದಾದರೂ ಹಣ ದೊರತರೆ ಗ್ರಂಥಗಳನ್ನು ರಚಿಸಿ ಮುದ್ರಿಸು” ಎಂಬ ಆದೇಶವನ್ನು ಅಭಯನಿಗೆ ನೀಡಿದರು ಆ ಗುರುಗಳು. ಗುರು ಉಪದೇಶವಿಲ್ಲದ ಜ್ಞಾನ, ಗಾನ, ಸ್ನಾನ, ದಾನ, ಮೌನ, ಮಾನ ಎಲ್ಲವೂ ಉರಗನ ಉಪವಾಸದಂತೆ ವ್ಯರ್ಥ ಎನ್ನುತ್ತದೆ ದಾಸವಾಣಿ. ಈ ಜಗತ್ತಿನ ಪರಮ ಗುರು ಹಾಗೂ ಅಂತಿಮ ಗುರಿ ಶ್ರೀಕೃಷ್ಣ. ಹಾಗಾಗಿಯೇ ‘ಕೃಷ್ಣಂ ವಂದೇ ಜಗದ್ಗುರುಂ’ ಎನ್ನುತ್ತದೆ ಆರ್ಷವಾಣಿ.
ಶ್ರೀಕೃಷ್ಣಪಥದಲ್ಲೇ ಸಾಗಿ, ಕೃಷ್ಣಪಂಥದ ಉದ್ಘಾಟನೆ ಮಾಡಿ, ಜಗತ್ತಿಗೆಲ್ಲಾ ಕೃಷ್ಣಪ್ರಜ್ಞೆಯ ಬೆಳಕು ತೋರಿದ ಮಹಾನ್ ಚೇತನ ಶ್ರೀಲ ಪ್ರಭುಪಾದರು ಗುರುಶ್ರೇಷ್ಠರು. ಚೈತನ್ಯರ ಪ್ರೇರಣೆಯೊಡನೆ ಕೃಷ್ಣಪ್ರಜ್ಞೆಯ ವಿಶ್ವ ಪ್ರಚಾರದ ದೀಕ್ಷೆಯನ್ನು ಪ್ರಭುಪಾದರಿಗೆ ಕೊಟ್ಟ ಗುರುಸ್ಥಾನೀಯಾಗಿ ಮಾರ್ಗದರ್ಶನ ಮಾಡಿದವರು ಅವರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀಗಳು.
ಭಕ್ತಿ ಹಾಗೂ ವೇದಾಂತಗಳ ಸಂಗಮ ರಂಗಸ್ಥಳವಾದ ಭಕ್ತಿವೇದಾಂತ ಪ್ರಭುಪಾದರ ಭಕ್ತಿಸಿದ್ಧಾಂತರೂ ಸಹ. ನಾನಾ ರಾಷ್ಟ್ರಗಳಲ್ಲಿ ನೆಲೆಸಿರುವ ಕೃಷ್ಣ ಭಕ್ತರ ಪಾಲಿಗೆ ಭಕ್ತಿ ಸಿದ್ಧಾಂತರ ಜೀವನ, ಭಕ್ತಿ ವೇದಾಂತದ ಸಾಧನ ಎರಡೂ ಸ್ಫೂರ್ತಿಯ ಸೆಲೆಯಾಗಿವೆ. ಪ್ರಭುಪಾದರ ಗುರುಗಳಾದ ಭಕ್ತಿಸಿದ್ಧಾಂತರು 1847ರ ಫೆಬ್ರವರಿ 6ರಂದು ರಥಯಾತ್ರೆಗೆ ಪ್ರಸಿದ್ಧವಾದ ಜಗನ್ನಾಥಪುರಿಯಲ್ಲಿ ಜನಿಸಿದರು.
ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಪಡೆದಿದ್ದ ಅವರು ಮುಂದೆ ಸೂರ್ಯಸಿದ್ಧಾಂತ ಎಂಬ ಗ್ರಂಥ ರಚಿಸಿದಾಗ ಅದರ ಯಶಸ್ಸಿನಿಂದಾಗಿ ಅವರಿಗೆ ಸಿದ್ಧಾಂತ ಸರಸ್ವತಿ ಎಂಬ ಪ್ರಶಸ್ತಿ ಸಂದಿತು. ಇಪ್ಪತ್ತಾರನೆಯ ವಯಸ್ಸಿನಲ್ಲಿ ಗೌರ ಕಿಶೋರದಾಸ ಬಾಬಾಜಿ ಅವರಿಂದ ದೀಕ್ಷೆ ಪಡೆದರು. 1905ರಲ್ಲಿ ಹರೇ ಕೃಷ್ಣ ಮಂತ್ರವನ್ನು ಒಂದು ಕೋಟಿ ಬಾರಿ ಜಪಿಸುವ ಛಲದಿಂದ ನವದ್ವೀಪದ ಕಾಡಿನಲ್ಲಿ ಗುಡಿಸಲು ಕಟ್ಟಿ ಅಲ್ಲೇ ಹಗಲಿರುಳು ಸತತವಾಗಿ ಕೋಟಿ ಹರೇಕೃಷ್ಣ ಮಂತ್ರ ಜಪಿಸಿದರು.
ಮುಂದೆ ತಮ್ಮ ಕರ್ತೃತ್ವ ಶಕ್ತಿಯಿಂದ ಅರವತ್ನಾಲ್ಕು ಮಠಗಳನ್ನು ಸ್ಥಾಪಿಸಿದರು. ಎಲ್ಲ ಮಠಗಳಲ್ಲೂ ಒಂದೊಂದು ಮುದ್ರಣಾಲಯ ಸ್ಥಾಪಿಸಿ, ಶ್ರೀಮದ್ಭಾಗವತ, ಚೈತನ್ಯ ಚರಿತಾಮೃತ ಮುಂತಾದ ಗ್ರಂಥಗಳು ಸೇರಿದಂತೆ ಎಪ್ಪತ್ತು ಗ್ರಂಥಗಳನ್ನು ರಚಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವವ್ಯಾಪಿ ಕೃಷ್ಣಭಕ್ತಿ ಪ್ರಚಾರಕ್ಕೆ ಶ್ರೀಲ ಪ್ರಭುಪಾದರಿಗೆ ಮಹತ್ವದ ಪ್ರೇರಣೆ ನೀಡಿ ಇಸ್ಕಾನ್ ರೂಪ ಕಲ್ಪನೆಗೆ ಬೀಜಾಂಕುರ ಮಾಡಿದರು. 1936ರಲ್ಲಿ ಕೃಷ್ಣ ಸಾನ್ನಿಧ್ಯ ಸೇರಿದರು.
ಭಾರತದ ಶ್ರೇಷ್ಠ ಚಿಂತನೆಗಳನ್ನು ಗ್ರಂಥರೂಪದಲ್ಲಿ ತರುವ ಸಲುವಾಗಿಯೇ ಪ್ರಭುಪಾದರು ಭಕ್ತಿವೇದಾಂತ ಬುಕ್ ಟ್ರಸ್ಟ್ ಸ್ಥಾಪಿಸಿದರು. ಜನ ಏನು ಓದುತ್ತಾರೆಯೋ ಅದೇ ಚಿಂತನವಾಗುತ್ತದೆ. ಆ ಚಿಂತನವೇ ಬದುಕು ಹಾಗೂ ಸಂಸ್ಕೃತಿಯಾಗುತ್ತದೆ ಎಂದ ಅವರು ಭಗವದ್ಗೀತೆ, ಭಾಗವತ, ಚೈತನ್ಯ ಚರಿತಾಮೃತ, ಈಶೋಪನಿಷತ್, ಕೃಷ್ಣಪ್ರಜ್ಞೆ, ಯೋಗ, ಸನಾತನ ಧರ್ಮ ಮುಂತಾದ ಅನೇಕ ಉತ್ಕೃಷ್ಟ ಗ್ರಂಥಗಳನ್ನು ರಚಿಸಿ ಪ್ರಕಟಿಸಿದರು.
ಕತ್ತಲಿನಿಂದ ಬೆಳಕಿನೆಡೆಗೆ ಜನರನ್ನು ಕರೆದೊಯ್ಯಬಲ್ಲ ಮಹತ್ವದ ಸಾಧನವೆಂದರೆ ಪುಸ್ತಕ ಎಂದು ಸಾರಿದ ಪ್ರಭುಪಾದರು ಈ ಶತಮಾನದ ಪುಸ್ತಕ ಸಂಸ್ಕೃತಿಯ ಪ್ರಧಾನ ಹರಿಕಾರರಾದರು. ಪುಸ್ತಕಗಳು ಬೃಹತ್ ಮೃದಂಗಗಳಂತೆ, ಪುಸ್ತಕಗಳೇ ನನ್ನ ಆತ್ಮ. ನಾನು ಗ್ರಂಥರೂಪದಲ್ಲಿ ಎಂದೆಂದಿಗೂ ಅಜರಾಮರವಾಗಿರುತ್ತೇನೆ” ಎಂಬ ದೃಢನಂಬಿಕೆ ಹಾಗೂ ವಿಶ್ವಾಸ ಅವರದಾಗಿತ್ತು.

1965ರಲ್ಲಿ ಅಮೆರಿಕೆಗೆ ಬಂದಿಳಿದ ಪ್ರಭುಪಾದರು 1967ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ದೇವಾಲಯ ಸ್ಥಾಪನೆಗೆ ನಾಂದಿ ಹಾಡಿದರು. 1968ರಲ್ಲಿ ಲಾಸ್ ಏಂಜಲೀಸ್ ದೇವಾಲಯ ಸ್ಥಾಪಿತವಾಯಿತು. ಜಗತ್ಪ್ರಸಿದ್ಧ ಲೈಫ್ ಪತ್ರಿಕೆಯು ಸ್ವಾಮಿಯವರ ಸಂದರ್ಶನ ಲೇಖನವನ್ನು ಪ್ರಧಾನವಾಗಿ ಪ್ರಕಟಿಸಿತು.
1968ರಲ್ಲಿ ಬಾಸ್ಟನ್‌ನಲ್ಲಿ ಕೃಷ್ಣ ದೇಗುಲ ಸ್ಥಾಪಿಸಲು ಹೋದಾಗ ವಿಶ್ವದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯ ಹಾಗೂ ಎಂ.ಐ.ಟಿ.ಗಳಲ್ಲಿ ಪ್ರಭುಪಾದರ ವಿಶೇಷ ಉಪನ್ಯಾಸಗಳು ನಡೆದವು. ಇದೇ ವರ್ಷದಲ್ಲಿ ಭಕ್ತಿ ರಸಾಮೃತ ಸಿಂಧು ಹಾಗೂ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಎಂಬ ಗ್ರಂಥಗಳನ್ನು ರಚಿಸತೊಡಗಿದರು. ಮಾಂಟ್ರಿಯಲ್‌ನಲ್ಲಿ ದೇವಾಲಯ ಸ್ಥಾಪಿಸಿದರು.
1969ರಲ್ಲಿ ಲಾಸ್ ಏಂಜಲಿಸ್‌ನ ಇನ್ನೊಂದು ಕೃಷ್ಣ ದೇವಾಲಯದಲ್ಲಿ ಕಟ್ಟು ನಿಟ್ಟಾದ ಆರಾಧನಾ ಹಾಗೂ ಉತ್ಸವ ಸಂಪ್ರದಾಯಗಳನ್ನು ಬಳಕೆಗೆ ತಂದರು. ಓಹೈಒ ರಾಜ್ಯದ ಕೊಲಂಬಸ್‌ನಲ್ಲಿರುವ ಓಹೈಒ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಮೂರು ಸಹಸ್ರ ಜನ ವಿದ್ಯಾರ್ಥಿಗಳಿಗೆ ಹರೇ ಕೃಷ್ಣ ಸಂಕೀರ್ತನೆಯ ಮಹತ್ತ್ವ ಹೇಳುತ್ತಲೇ ಅವರನ್ನು ಅದರಲ್ಲಿ ತೊಡಗಿಸಿದರು.
ಭಾರತದ ಪ್ರಾಚೀನ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಉದ್ಘಾಟಿತವಾದ ಪಶ್ಚಿಮ ವರ್ಜೀನಿಯಾದ ನವ ವೃಂದಾವನದ ಫಾರ್ಮ್ ಕಮ್ಯೂನಿಟಿ ದೇವಾಲಯಕ್ಕೆ ಭೇಟಿ ನೀಡಿದರು. ಲಾಸ್ ಏಂಜಲೀಸ್ ದೇವಾಲಯದಲ್ಲಿ ರಾಧಾಕೃಷ್ಣ ಮೂರ್ತಿ ಸ್ಥಾಪಿಸಿದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ರಥಯಾತ್ರೆಯ ನೇತೃತ್ವ ವಹಿಸಿದರು.
ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಇಸ್ಕಾನ್ ಕೇಂದ್ರಕ್ಕೆ ಭೇಟಿಯಿತ್ತರು. ಲಂಡನ್ನಿನಲ್ಲಿ ಪ್ರಪ್ರಥಮ ಗೌಡೀಯ ವೈಷ್ಣವ ದೇವಾಲಯವನ್ನು ಉದ್ಘಾಟಿಸಿದರು. ಆಕ್ಸ್‌ಫರ್ಡ್‌ನಲ್ಲಿ ಉಪನ್ಯಾಸ ನೀಡಿದರು. ಲಂಡನ್ನಿನ ದೂರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಗತ್ಪ್ರಸಿದ್ಧ ಗಾಯಕ ಜಾರ್ಜ್ ಹ್ಯಾರಿಸನ್ ಅವರು ಪ್ರಭುಪಾದರಿಂದ ಪ್ರಭಾವಿತರಾಗಿ, “ದೇವೋತ್ತಮ ಪರಮ ಪುರುಷ ಕೃಷ್ಣ” ಗ್ರಂಥದ ಪ್ರಕಟನೆಗಾಗಿ 19,000 ಡಾಲರ್ ಗಳನ್ನು ನೀಡಿದಾಗ ಅದನ್ನು ಪ್ರೀತಿಯಿಂದ ಸ್ವೀಕರಿಸಿದರು.
1970ರಲ್ಲಿ ಇಸ್ಕಾನ್ ಜಗತ್ತಿನ ಮುಖ್ಯ ಕೇಂದ್ರವಾದ ಹಾಗೂ ಎಲ್ಲ ಇಸ್ಕಾನ್ ದೇವಾಲಯಗಳಿಗೆ ಮಾದರಿಯಾದ ಅವೆನ್ಯೂ ದೇವಾಲಯಕ್ಕೆ ಬಂದರು. ಸ್ಯಾನ್ ಫ್ರಾನ್ಸಿಸ್ಕೋ ರಥಯಾತ್ರೆಯಲ್ಲಿ ಪಾಲ್ಗೊಂಡರು. ಅನೇಕ ಶಿಷ್ಯರಿಗೆ ಸಂನ್ಯಾಸಾಶ್ರಮ ದೀಕ್ಷೆ ನೀಡಿದರು. ಎಲ್ಲ ಇಸ್ಕಾನ್ ಸಂಸ್ಥೆಗಳ ಸಮರ್ಥ ಹಾಗೂ ನಿರಂತರ ಆಡಳಿತ ನಿರ್ವಹಣೆಗಾಗಿ ಜಿ.ಬಿ.ಸಿ. ಎಂಬ ಗವರ್ನಿಂಗ್ ಬಾಡಿ ಕಮಿಷನ್ ರಚನೆ ಮಾಡಿದರು. ಭಕ್ತಿವೇದಾಂತ ಬುಕ್ ಟ್ರಸ್ಟ್ ಸ್ಥಾಪಿಸಿದರು. ಹವಾಯಿ ಟೋಕಿಯೋಗಳಿಗೆ ಭೇಟಿ ನೀಡಿದರು.

1970ರ ಆಗಸ್ಟ್ ನಿಂದ 1971ರ ಮೇ ವರೆಗೆ ಭಾರತದಲ್ಲಿ ಕಲ್ಕತ್ತಾ ಮುಂಬಯಿ, ಅಮೃತಸರ, ಇಂದೂರು, ಸೂರತ್, ಅಲಹಾಬಾದ್, ಗೋರಖ್ ಪುರ, ವಾರಣಾಸಿ ಮುಂತಾದ ನಾನಾ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ಮಾಡಿ ಕೃಷ್ಣಪ್ರಜ್ಞೆಯನ್ನು ಭಾರತದಲ್ಲಿ ವ್ಯಾಪಕವಾಗಿ ವಿಸ್ತರಿಸಿದರು.
1971 ರಲ್ಲಿ ಮಲೇಷಿಯಾ, ಕೌಲಾಲಂಪುರಗಳಲ್ಲಿ ಉಪನ್ಯಾಸ ನೀಡಿದರು. ಸಿಡ್ನಿಯಲ್ಲಿ ರಾಧಾ ಗೋಪೀನಾಥ ಮಂದಿರ ಸ್ಥಾಪಿಸಿದರು, ಶಿಷ್ಯರಿಗೆ ದೀಕ್ಷೆ ನೀಡಿದರು. ಭಗವದ್ಗೀತಾ ಯಥಾರೂಪ ಗ್ರಂಥಕ್ಕೆ ಮುನ್ನುಡಿ ಬರೆದರು. 1971ರಲ್ಲಿ ಮತ್ತೆ ಭಾರತಕ್ಕೆ ಬಂದರು. ಕಲ್ಕತ್ತಾದ ಉತ್ಸವದಲ್ಲಿ ಪ್ರಭುಪಾದರ ಉಪನ್ಯಾಸಗಳಿಗೆ ನಲವತ್ತು ಸಹಸ್ರಕ್ಕೂ ಹೆಚ್ಚು ಜನ ಕಿಕ್ಕಿರಿದು ನೆರೆಯುತ್ತಿದ್ದರು.
ಮಾಯಾಪುರ ದೇವಸ್ಥಾನಕ್ಕಾಗಿ ಭೂಮಿ ಖರೀದಿಸಿದರು. ರಷ್ಯಾ ದೇಶಕ್ಕೆ ಹೋಗಿ ಮಾಸ್ಕೋ ನಗರ ಸಂದರ್ಶಿಸಿದರು. ರಷ್ಯಾದ ತರುಣರಿಗೆ ಕೃಷ್ಣಪ್ರಜ್ಞೆಯ ಉಪದೇಶ ನೀಡಿದರು. ಪ್ಯಾರಿಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 1971ರ ಜೂನ್ ಜುಲೈಗಳಲ್ಲಿ ಅಮೆರಿಕದ ನಾನಾ ಭಾಗಗಳಲ್ಲಿ ನೂರಾರು ಜನ ಶಿಷ್ಯರಿಗೆ ದೀಕ್ಷೆ ನೀಡಿದರು.
ಆಗಸ್ಟ್ 1971 ರಲ್ಲಿ ಲಂಡನ್ನಿಗೆ ಬಂದಾಗ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಸ್ವಲ್ಪ ಚೇತರಿಸಿಕೊಂಡೊಡನೆಯೇ ನೈರೋಬಿಗೆ ತೆರಳಿ ನೈರೋಬಿ ವಿಶ್ವವಿದ್ಯಾನಿಲಯದ 2000 ಜನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಇಂಗ್ಲೆಂಡಿನಲ್ಲಿ ಪ್ರಭುಪಾದರು ರಾಧಾಕೃಷ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂದರ್ಭ. ಮೂರ್ತಿಗಳಿಗೆ ಜಲಾಭಿಷೇಕವಾಗಿದೆ. ಇನ್ನೇನು ಅವುಗಳನ್ನು ತಂದು ಅಮೃತ ಶಿಲೆಯ ಪೀಠದ ಮೇಲೆ ಪ್ರತಿಷ್ಠಾಪಿಸಬೇಕು. ಅಷ್ಟರಲ್ಲಿ ವೇದಿಕೆಯ ಸ್ತಂಭಗಳು ಉರುಳುವಂತಾದವು. ಪ್ರಭುಪಾದರು ತತ್‌ಕ್ಷಣ ವೇದಿಕೆಗೆ ಜಿಗಿದು, ಆ ಸ್ತಂಭಗಳನ್ನು ಕಷ್ಟಪಟ್ಟು ಹಿಡಿದು ನಿಲ್ಲಿಸಿ ಮೂರ್ತಿಗಳನ್ನು ರಕ್ಷಿಸಿದರು. ಆಗಬಹುದಿದ್ದ ಭಾರೀ ದುರಂತವನ್ನು ತಪ್ಪಿಸಿದರು.
1972ರಲ್ಲಿ ಆಂಧ್ರ ಪ್ರದೇಶದಲ್ಲಿ ನೀರಿಲ್ಲದೆ ಎಲ್ಲೆಲ್ಲೂ ಹಾಹಾಕಾರವೆದ್ದಿತ್ತು. ಪ್ರಚಂಡ ಬರಗಾಲ, ಇಂತಹ ಭೀಕರ ಆಪತ್ತಿನ ಬರಗಾಲದಲ್ಲಿ ಪ್ರಭುಪಾದರು ಹೈದರಾಬಾದಿಗೆ ಬಂದರು. ಅವರ ಭೇಟಿಯ ಸಂದರ್ಭದಲ್ಲೇ ಒಳ್ಳೆಯ ಮಳೆಯಾಯಿತು, ನೆಲ ತಂಪಾಯಿತು. ಪ್ರಭುಪಾದರ ದರ್ಶನ, ಸ್ಪರ್ಶನ ಹಾಗೂ ಅವರ ಸಂಕೀರ್ತನೆಯ ಫಲಶ್ರುತಿಯಾಗಿ ಧಾರಾಕಾರ ಮಳೆ ಬಂತು ಎಂದು ಪತ್ರಿಕೆಗಳು ಬರೆದವು.






Leave a Reply