ಆದ್ಯಂತ ರಹಿತನಿಗೆ

ತುಂಬಿತೊಂದು ವರ್ಷ !

– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್‌ ಮೂನ

“ಪರಮಪ್ರಭು ಶ್ರೀಕೃಷ್ಣ ವಸುದೇವ-ದೇವಕಿಯರ ಮಗನಾಗಿ ಅವತರಿಸಿದ. ಭಗವತ್ಸಂಕಲ್ಪದಂತೆ ವಸುದೇವ ನವಜಾತ ಶಿಶುವನ್ನು ಗೋಕುಲದ ನಂದ ಮಹಾರಾಜನ ಪತ್ನಿ ಯಶೋದೆಯ ಮಡಿಲಲ್ಲಿರಿಸಿ ಆಕೆಯು ಆಗ ತಾನೆ ಹೆತ್ತಿದ್ದ ಹೆಣ್ಣು ಮಗುವನ್ನು ತಂದ. ದುಷ್ಟ ಕಂಸನ ಕೈಯಿಂದ ಜಾರಿದ ಮಗು ದುರ್ಗೆಯಾಗಿ ಪ್ರಕಟಗೊಂಡು ಕೃಷ್ಣನು ಬೇರೆಡೆ ಇರುವನೆಂದು ಹೇಳುತ್ತಾಳೆ. ಕಂಸನು ವಸುದೇವ-ದೇವಕಿಯರನ್ನು ಮುಕ್ತಗೊಳಿಸಿ ತನ್ನ ಅರಮನೆಗೆ ಹಿಂದಿರುಗುತ್ತಾನೆ. (ಮುಂದೆ ಓದಿ….)”

ಮರುದಿನ ಕಂಸನು ತನ್ನ ಸಲಹೆಗಾರರನ್ನೆಲ್ಲಾ ಒಟ್ಟಿಗೆ ಸಭೆ ಸೇರಿಸಿ ಹಿಂದಿನ ರಾತ್ರಿ ನಡೆದುದೆಲ್ಲವನ್ನೂ ಹೆಮ್ಮೆಯಿಂದ ವಿವರಿಸಿದನು. ‘ನೋಡಿ, ನಾನಿಲ್ಲಿ ಜೀವಂತವಾಗಿರುವುದೇ ಅಶರೀರವಾಣಿಯು ಸುಳ್ಳು ಹೇಳಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನನ್ನ ತಂಗಿ ಮತ್ತು ಭಾವನವರನ್ನು ಬಿಡುಗಡೆ ಮಾಡಿಬಿಟ್ಟಿದ್ದೇನೆ.

ಅವರೀಗ ತಮ್ಮ ಮನೆಯಲ್ಲಿ ಸಂತೋಷದಿಂದಿದ್ದಾರೆ.” ಆದರೆ ಕಂಸನ ಸಲಹೆಗಾರರು ಅವನಂತೆ ಈ ವಿಷಯವನ್ನು ಸಂತೋಷದಿಂದ ಸ್ವೀಕರಿಸಲಿಲ್ಲ. “ಅಶರೀರವಾಣಿಯನ್ನು ದುರ್ಗಾದೇವಿಯು ದೃಢೀಕರಿಸಿದ್ದಾಳೆ. ಅಷ್ಟೇ ಅಲ್ಲವೇ ಸ್ವಾಮಿ?” ಎಂದು ಗೊಣಗಿದ ಕಂಸನ ಒಬ್ಬ ಸ್ನೇಹಿತ “ಕೃಷ್ಣನು ನಮ್ಮನ್ನು ಕೊಲ್ಲಲು ಎಲ್ಲಿಯಾದರೂ ಹೇಗಾದರೂ ಇರಬಹುದಲ್ಲವೇ?” ಎಂದೊಬ್ಬ ಕೇಳಿದ.

“ಹಾಗೆ ನನಗೆ ಹೊಳೆದಿಲ್ಲವಲ್ಲ. ನೋಡಿ ನಿಮ್ಮ ಮುಂದೆ ಆರೋಗ್ಯವಾಗಿ ನಾನು ನಿಂತಿಲ್ಲವೇ” ಎಂದು ಕಂಸನು ಹೇಳಿದರೂ ಏಕೋ ಅವನ ಮನಸ್ಸಿನಲ್ಲಿ ಮತ್ತೆ ದಿಗಿಲು ಕಾಣಿಸಿಕೊಳ್ಳತೊಡಗಿತು. ಅಸಹಾಯಕತೆಯಿಂದ ಅವನು ತನ್ನ ಇನ್ನೊಬ್ಬ ಆಪ್ತ ಸಲಹೆಗಾರನ ಕಡೆಗೆ ತಿರುಗಿದ.

”ಮಹಾಪ್ರಭು, ನಾವೀಗಲೇ, ಎಲ್ಲ ಊರುಗಳು, ದೇಶಗಳು ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಈ ಹತ್ತು ದಿನಗಳಲ್ಲಿ ಹುಟ್ಟಿದ ಎಲ್ಲ ಮಕ್ಕಳನ್ನು ಕೊಲ್ಲಲು ವ್ಯವಸ್ಥೆ ಮಾಡೋಣ ಅವರಿವರೆಂದು ನೋಡದೆ ಇದನ್ನು ಕಾರ್ಯರೂಪಕ್ಕಿಳಿಸೋಣ.’

“ಆಯಿತು. ಎಲ್ಲ ಮಕ್ಕಳನ್ನೂ ಕೂಡಲೇ ಕೊಂದು ಬಿಡಿ. ಆದರೆ ದುರ್ಗೆ ಮತ್ತಿತರ ದೇವತೆಗಳಿಗೇನು ಮಾಡುವುದು?” ಕಂಸ ಭಯದಿಂದ ತೊದಲಿದ.

ಆಗ ಮತ್ತೊಬ್ಬಸಲಹೆಗಾರ ಹೀಗೆ ನುಡಿದ: “ಪ್ರಭುವೇ, ದೇವತೆಗಳಿಗೆ ನಮ್ಮೊಂದಿಗೆ ಹೋರಾಟವೆಂದರೆ ಸದಾ ಭಯವೇ. ನಮ್ಮೆದುರಿಗೆ ನಿಲ್ಲುವ ಧೈರ್ಯವನ್ನೂ ಅವರೆಂದಿಗೂ ಮಾಡಲಾರರು. ಆಕಾಶದಿಂದ ನಮ್ಮ ಮೇಲೆ ಅವರು ಶಾಪಗಳ ಮಳೆಗೆರೆಯಬಹುದು.

ಆದರೆ ನಮ್ಮ ಅಸಮಾನ್ಯ ಶಕ್ತಿಯ ಬಗ್ಗೆ ಅವರಿಗೆ ದಿಗಿಲು ಇದ್ದೇ ಇದೆ. ಅವರು ಶಾಂತಿಯ ಸಮಯದಲ್ಲಿ ದೊಡ್ಡ ಹೋರಾಟಗಾರರಂತೆ ನಟಿಸುತ್ತಾರೆ. ಆದರೆ ನಿಜವಾಗಿ ರಣರಂಗದಲ್ಲಿ ಹೋರಾಡುವ ಕಾಲ ಬಂದಾಗ ಓಡಿಹೋಗಿ ಬಿಡುತ್ತಾರೆ.”

“ಈಗ ವಿಷ್ಣು ಮತ್ತು ಅವನ ಅನುಯಾಯಿಗಳನ್ನು ಎದುರಿಸಿ ದ್ವೇಷ ಕಟ್ಟಿಕೊಳ್ಳಬೇಕೆ?” ಕಂಸ ಅರೆ ಮನಸ್ಸಿನಿಂದ ನುಡಿದ.

ಕೂಡಲೇ ಮಂತ್ರಿಯೋರ್ವನು ನಿಂತು ನುಡಿದನು. “ಪ್ರಭುವೆ, ದೇಹದಲ್ಲಿ ಕಾಯಿಲೆಯು ಸಣ್ಣದಿದ್ದಾಗ ಅದನ್ನು ಅಲಕ್ಷ್ಯ ಮಾಡಿದರೆ ಮುಂದೆ ಅದನ್ನು ಸರಿಪಡಿಸಲು ಆಗುವುದೇ ಇಲ್ಲ. ಹಾಗೆಯೇ ಈ ದೇವತೆಗಳು ನಮಗಿಂತ ಶಕ್ತಿಶಾಲಿಗಳಾಗುವ ಮೊದಲೇ ನಾವು ಎಚ್ಚರದಿಂದಿರಬೇಕು. ದೇವತೆಗಳ ಎಲ್ಲ ಶಕ್ತಿಗೆ ಶ್ರೀ ವಿಷ್ಣುವೇ ಆಧಾರ.

ಬ್ರಾಹ್ಮಣರು ವಿಷ್ಣುವಿನ ಅನನ್ಯ ಆರಾಧಕರು. ಆದ್ದರಿಂದ ನಾವು ವೇದಗಳ ಜ್ಞಾನ ವಿರುವ ಎಲ್ಲ ಬ್ರಾಹ್ಮಣರನ್ನು ಮೇಲೂ ಯಜ್ಞಯಾಗಾದಿಗಳನ್ನು ಮಾಡುವ ಎಲ್ಲ ಋಷಿಗಳನ್ನೂ ಕೊಂದು ಹಾಕಿ ನಮ್ಮ ಕಾರ್ಯವನ್ನು ಪ್ರಾರಂಭಿಸೋಣ. ಯಜ್ಞ ಯಾಗಾದಿಗಳಿಗೆ ಬಹು ಮುಖ್ಯವಾದ ಬೆಣ್ಣೆಯನ್ನು ಕೊಡುವ ಎಲ್ಲ ಗೋವುಗಳನ್ನು ಕೊಂದು ಹಾಕೋಣ.

ಒಟ್ಟಿನಲ್ಲಿ ವಿಷ್ಣುವನ್ನು ಕೊಲ್ಲುವುದೆಂದರೆ ಮಹರ್ಷಿಗಳಿಗೂ ಬ್ರಾಹ್ಮಣರಿಗೂ ತೊಂದರೆ ಕೊಡುವುದೇ… ಈ ಎಲ್ಲ ಕಾರಣಗಳಿಂದಾಗಿ ಓ ಪ್ರಭುವೇ ಈ ಎಲ್ಲರನ್ನೂ ಕೊಂದು ಹಾಕಲು ನಮಗೆ ಅಪ್ಪಣೆ ಕೊಡು…”

”ಹೌದು ನೀವು ನೀಡುವ ಎಲ್ಲ ಸಲಹೆಗಳೂ ಅರ್ಥಪೂರ್ಣವಾಗಿವೆ. ನಿಜಕ್ಕೂ ನಿಮ್ಮಂತಹ ನಂಬಿಕೆಯುಳ್ಳ ಹಾಗೂ ಬುದ್ಧಿವಂತ ಸಲಹೆಗಾರರು ನನಗಿರುವುದು ನನ್ನ ಪುಣ್ಯ. ಈ ಎಲ್ಲ ಯೋಜನೆಗಳನ್ನು ಈ ಕೂಡಲೇ ಕಾರ್ಯರೂಪಕ್ಕಿಳಿಸಿ” ಎಂದ ಕಂಸ, ಇದರಿಂದ ತನ್ನ ಸಾವನ್ನು ತಪ್ಪಿಸಿಕೊಳ್ಳಬಹುದೆ೦ಬ ಭ್ರಮೆಯಿಂದ.

ಮರುದಿನ ವೃಂದಾವನದಲ್ಲಿ ಯಶೋದೆಯು ಗಂಡು ಮಗುವಿಗೆ ಜನ್ಮವಿತ್ತಳೆಂದು ಪ್ರಕಟಿಸಲಾಯಿತು. ನಂದ ಮಹಾರಾಜನು ಕೃಷ್ಣನ ಜನನವನ್ನು ಒಂದು ಉತ್ಸವವನ್ನಾಗಿ ಆಚರಿಸಿದನು. ಮಗುವಿನ ಜಾತಕವನ್ನು ಬರೆಯಲು ವಿದ್ವಾಂಸರನ್ನು ಜೋಯಿಸರನ್ನು ಆಹ್ವಾನಿಸಿದನು. ಅಲ್ಲಿದ್ದ ಬ್ರಾಹ್ಮಣರೆಲ್ಲ ಒಟ್ಟಾಗಿ ವಿಧಿಗನುಸಾರವಾಗಿ ಶುಭ ಮಂತ್ರಗಳನ್ನು ಪಠಿಸಿದರು. ಜೋಯಿಸರು ಮಗುವಿನ ಜನನದ ಸಮಾರಂಭವನ್ನು ನಡೆಸಿದರು.

ನಂದ ಮಹಾರಾಜನು ಅಲಂಕೃತವಾಗಿ ಆಭರಣಗಳಿಂದ ಬೆಳಗುತ್ತಿದ್ದ ಎರಡು ಲಕ್ಷ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ಅಲ್ಲದೆ ಜರತಾರಿ ಅಂಚಿನ ಉಡುಪುಗಳು, ಹಲವು ಆಭರಣಗಳು, ಮತ್ತು ರಾಶಿರಾಶಿ ಧಾನ್ಯಗಳನ್ನು ದಾನ ಮಾಡಿದನು.

ಕೃಷ್ಣನ ಸಾಕು ತಂದೆ ನಂದ ಮಹಾರಾಜನು ತನ್ನ ಮಗನ ಜನನದ ಸಮಾರಂಭವನ್ನು ನಡೆಸುತ್ತಾನೆ ಎಂದು ಸಡಗರದಲ್ಲಿದ್ದ ಗೋಪಾಲಕರು ಕೇಳಿದಾಗ ಅವರಿಗೆ ಆದ ಆನಂದ ಅಷ್ಟಿಷ್ಟಲ್ಲ. ಬಹು ಬೆಲೆ ಬಾಳುವ ಉಡುಪುಗಳನ್ನು ಧರಿಸಿ ಬಗೆಬಗೆಯ ಕರ್ಣಾಭರಣಗಳಿಂದ ಮತ್ತು ಕಂಠಾಭರಣಗಳಿಂದ ಸಿಂಗರಿಸಿಕೊಂಡು ತಲೆಗಳ ಮೇಲೆ ದೊಡ್ಡ ಪೇಟಗಳನ್ನಿಟ್ಟುಕೊಂಡರು.

ಹೀಗೆ ವೈಭವವಾಗಿ ಅಲಂಕರಿಸಿಕೊಂಡು ಅವರು ಬಗೆಬಗೆಯ ಉಡುಗೊರೆಗಳೊಂದಿಗೆ ನಂದ ಮಹಾರಾಜನ ಮನೆಯ ಕಡೆಗೆ ನಡೆದರು. ಎಲ್ಲರೂ ಸಡಗರದಿಂದ ಬೇಗ ಅಲ್ಲಿಗೆ ತಲಪಬೇಕೆಂದು ಕಾತರತೆಯಿಂದ ನಡೆಯುವಾಗ ಅವರು ತಮ್ಮನ್ನು ಅಲಂಕರಿಸಿಕೊಂಡಿದ್ದ ಹೂಗಳು ನೆಲಕ್ಕೆ ಬಿದ್ದವು.

ಆದರಿಂದ ಆಕಾಶದಿಂದ ಪುಷ್ಪವೃಷ್ಟಿಯಾಗಿದೆಯೇನೋ ಎಂಬಂತಿತ್ತು. ಹೀಗೆ ನಂದಮಹಾರಾಜನ ಮನೆಯನ್ನು ಸೇರಿ ಸುಂದರವಾದ ಮಗುವನ್ನು ಕಂಡ ಕೂಡಲೇ ಅವರೆಲ್ಲ ಅತ್ಯಾನಂದ ಹೊಂದಿದವರಾಗಿ, “ಮುದ್ದು ಮಗುವೇ, ನಮ್ಮನ್ನು ಕಾಪಾಡಲು ಬಹುಕಾಲ ಬದುಕು” ಎಂದು ಹೃದಯ ತುಂಬಿ ಆಶೀರ್ವದಿಸುತ್ತಿದ್ದರು. ಗೋಪಿಕೆಯರೆಲ್ಲರೂ ಅರಿಶಿನಪುಡಿ, ಎಣ್ಣೆ, ಮೊಸರು, ಹಾಲು ಮತ್ತು ನೀರನ್ನು ಬೆರೆಸಿದ ಮಿಶ್ರಣವನ್ನು ತಯಾರಿಸಿ ಮಗುವಿನ ಹಾಗೂ ಅಲ್ಲಿದ್ದವರ ಮೇಲೂ ಸಿಂಪಡಿಸಿದರು.

ಗೋಪಿಯರ ಓಕುಳಿಯಾಟವನ್ನು ಕಂಡ ಗೋಪಾಲಕರಿಗೂ ಬಹಳ ಸಂತೋಷವಾಯಿತು. ಅವರು ಮೊಸರು, ಹಾಲು, ತುಪ್ಪ ಮತ್ತು ನೀರನ್ನು ಗೋಪಿಯರ ಮೇಲೆ ಸಿಂಪಡಿಸಿದರು. ಎರಡೂ ಗುಂಪಿನವರು ಒಬ್ಬರ ಮೇಲೊಬ್ಬರು ಬೆಣ್ಣೆಯನ್ನು ಎಸೆಯಲು ಪ್ರಾರಂಭಿಸಿದರು. ಗೋಪಾಲಕ ಮತ್ತು ಗೋಪಿಯರ ಸಂತೋಷದಾಟಗಳನ್ನು ಕಂಡು ನಂದ ಮಹಾರಾಜನ ಮನಸ್ಸಿಗೂ ಆನಂದವಾಯಿತು.

ಅಲ್ಲಿ ನೆರೆದಿದ್ದ ಕೆಲವು ಸಂಗೀತಗಾರರು ಉಪನಿಷತ್ತುಗಳನ್ನು ಪುರಾಣ ಶ್ಲೋಕಗಳನ್ನು ಹಾಡುತ್ತಿದ್ದರು. ಇನ್ನು ಕೆಲವರ ಹಾಡಿನಲ್ಲಿ ಇವರ ಪೂರ್ವಿಕರ ಪ್ರಶಂಸೆಯಿರುತ್ತಿತ್ತು. ನಂದನು ಆ ಸಂಗೀತಗಾರರಿಗೆಲ್ಲ ಉದಾರವಾಗಿ ದಾನ ಮಾಡಿದನು.

ಹೀಗೆ ಅಲ್ಲಿ ನೆರೆದಿದ್ದವರೆಲ್ಲರೂ ಆನಂದ ಸಾಗರದಲ್ಲಿ ಮುಳುಗಿದ್ದರು. ಹಾಗೆಯೇ ಅವರೆಲ್ಲರನ್ನು ಸುಪ್ರೀತಗೊಳಿಸುತ್ತಿದ್ದ ನಂದನಿಗೆ ಇದ್ದ ಒಂದೇ ಅಪೇಕ್ಷೆಯೆಂದರೆ ತನ್ನ ಎಳೆ ಕಂದ ಕೃಷ್ಣ ಸುಖವಾಗಿರಬೇಕು ಎಂಬುದು. ಈ ಮಗುವು ವಿಷ್ಣುವಿನ ಮೂಲ ಎಂದು ಅವನಿಗೆ ತಿಳಿದಿರಲಿಲ್ಲ. ಆ ಮಗುವನ್ನು ರಕ್ಷಿಸುವಂತೆ ಅದೇ ವಿಷ್ಣುವನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದನು.

ಬಲರಾಮನ ತಾಯಿ ರೋಹಿಣಿ ವಸುದೇವನ ಭಾಗ್ಯಶಾಲಿ ಪತ್ನಿ. ಅವಳು ಗಂಡನಿಂದ ದೂರವಿದ್ದಳು. ಆದರೂ ನಂದ ಮಹಾರಾಜನಿಗೆ ಗಂಡು ಮಗು ಹುಟ್ಟಿದ ಸಂದರ್ಭದಲ್ಲಿ ಅವನನ್ನು ಅಭಿನಂದಿಸುವ ಸಲುವಾಗಿ ಸೊಗಸಾದ ಉಡುಪುಗಳನ್ನು ಧರಿಸಿದ್ದಳು.

ಕೃಷ್ಣನ ಜನನದ ಸಂತೋಷವನ್ನೆಲ್ಲಾ ಆಚರಿಸಿದ ಅನಂತರ ನಂದ ಮಹಾರಾಜನು ಕಂಸನ ಸರಕಾರಕ್ಕೆ ವಾರ್ಷಿಕ ಕಂದಾಯವನ್ನು ಸಲ್ಲಿಸಲು ಹೋಗಲು ನಿರ್ಧರಿಸಿದ. ಹೊರಡುವ ಮೊದಲು ತನ್ನ ಗ್ರಾಮದ ದೃಢಕಾಯರನ್ನು ಕರೆದು ತಾನಿಲ್ಲದಾಗ ಗ್ರಾಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಹೇಳಿದ.

ಅನಂತರ ಅವನು ಮಥುರೆಯನ್ನು ತಲಪಿದಾಗ ಈ ಸುದ್ದಿಯು ವಸುದೇವನಿಗೆ ಮುಟ್ಟಿತು. ತನ್ನ ಆತ್ಮೀಯ ಗೆಳೆಯನನ್ನು ಅಭಿನಂದಿಸುವ ತವಕದಿಂದ ನಂದಮಹಾರಾಜನಿದ್ದಲ್ಲಿಗೆ ಹೋದನು. ಸಂತೋಷದಿಂದ ಇಬ್ಬರೂ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡರು. ನಂದನು ವಸುದೇವನನ್ನು ಕೂರುವಂತೆ ಹೇಳಿ ಒಳ್ಳೆಯ ಪೀಠವನ್ನು ನೀಡಿದ.

ನಂದನಿಗೆ ತಿಳಿಯದಂತೆ ಅವನ ರಕ್ಷಣೆಗೆ ನೀಡಿದ್ದ ತನ್ನ ಇಬ್ಬರು ಗಂಡು ಮಕ್ಕಳ ವಿಷಯವಾಗಿ ತಿಳಿಯಲು ಕಾತರನಾಗಿದ್ದ ವಸುದೇವನು ಅವರಿಬ್ಬರ ಬಗ್ಗೆ ನಂದನನ್ನು ಪ್ರಶ್ನಿಸಿದನು. ಬಲರಾಮ ಮತ್ತು ಕೃಷ್ಣ ಇಬ್ಬರೂ ವಸುದೇವನ ಪುತ್ರರು. ಬಲರಾಮನನ್ನೂ ವಸುದೇವನ ಇನ್ನೊರ್ವ ಪತ್ನಿ ರೋಹಿಣಿಯ ಗರ್ಭಕ್ಕೊಯ್ಯಲಾಗಿತ್ತು.

ರೋಹಿಣಿಯು ನಂದ ಮಹಾರಾಜನ ರಕ್ಷಣೆಯಲ್ಲಿ ಉಳಿದಿದ್ದಳು. ಬಲರಾಮ ವಸುದೇವನ ಮಗನೆ೦ಬುದು ನಂದನಿಗೆ ತಿಳಿದಿದ್ದರೂ ಕೃಷ್ಣನೂ ವಸುದೇವನ ಮಗನೇ ಎಂಬ ಸಂಗತಿ ಮಾತ್ರ ತಿಳಿದಿರಲಿಲ್ಲ. ವಸುದೇವನಿಗೆ ಮಾತ್ರ ಈ ವಿಷಯ ತಿಳಿದಿತ್ತು. ಆದ್ದರಿಂದಲೇ ಆ ಇಬ್ಬರೂ ಬಾಲಕರ ರಕ್ಷಣೆಯ ಬಗ್ಗೆ ವಸುದೇವನಿಗೆ ಕಾಳಜಿ ಇತ್ತು.

ವಸುದೇವನು ನಂದನನ್ನು ಕುರಿತು ಹೀಗೆ ಹೇಳಿದ: “ಪ್ರಿಯ ಗೆಳೆಯಾ ಕೃಷ್ಣ ಬಲರಾಮರು ಕ್ಷೇಮವಾಗಿದ್ದಾರೆಂದು ತಿಳಿಯುತ್ತೇನೆ. ನನ್ನ ಸಂಸಾರದೊಂದಿಗೆ ಒಟ್ಟಿಗೆ ಇರುವುದು ನನಗೆ ಸಾಧ್ಯವಾಗಿಲ್ಲ. ಈ ಜೀವನದಲ್ಲಿ ನಾವು ಸಮುದ್ರದ ಮೇಲಿನ ಗಿಡ ಬಳ್ಳಿಗಳಂತೆ. ಅವು ಸಮುದ್ರದ ಅಲೆಗಳ ಮೇಲೆ ತೇಲುತ್ತಿರುತ್ತವೆ. ಒಮ್ಮೊಮ್ಮೆ ಹತ್ತಿರ ಬರುತ್ತವೆ.

ಮತ್ತೊಮ್ಮೆ ದೂರವಾಗುತ್ತವೆ. ಒಂದು ಗಿಡವು ಒಂದು ದಿಕ್ಕಿನಲ್ಲಿ ಹೋದರೆ ಇನ್ನೊಂದು ಬೇರೊಂದು ದಿಕ್ಕಿಗೆ ಚಲಿಸುತ್ತದೆ. ಹಾಗೆಯೇ ನಾವು ಒಟ್ಟಿಗಿರುವಾಗ ನಮ್ಮ ಕುಟುಂಬವು ಬಹಳ ಚೆನ್ನಾಗಿರಬಹುದು. ಆದರೆ ಸ್ವಲ್ಪಸ್ವಲ್ಪ ಕಾಲದ ಅನಂತರ ಕಾಲವೆಂಬ ಸಮುದ್ರದ ಅಲೆಗಳು ನಮ್ಮನ್ನು ಬೇರ್ಪಡಿಸುತ್ತವೆ.”

ಹೀಗೆ ಹೇಳುತ್ತಿದ್ದ ವಸುದೇವ ನಿಜಾಂಶವನ್ನು ನಂದನಿಗೆ ಹೇಳುವಂತಿರಲಿಲ್ಲ. ಹೀಗಾಗಿ ವೃಂದಾವನದ ಯೋಗಕ್ಷೇಮದ ಬಗ್ಗೆ ವಿಚಾರಿಸಿದನು. ಅನಂತರ ದೇವಕಿಯ ಗರ್ಭದಲ್ಲಿ ಹುಟ್ಟಿದ ಮಕ್ಕಳನ್ನೇ ನಾನು ರಕ್ಷಿಸಲು ಸಾಧ್ಯವಾಗಲಿಲ್ಲವೆಂದು ತನ್ನ ದುಃಖವನ್ನು ತೋಡಿಕೊಂಡನು. ಈ ಕಾರಣದಿಂದ ತನ್ನೆಲ್ಲ ಅದೃಷ್ಟವನ್ನೇ ಕಳೆದುಕೊಂಡಿದ್ದೇನೆ ಎಂದೆನಿಸಿತು ಅವನಿಗೆ.

ಇದನ್ನು ಕೇಳಿದ ನಂದಮಹಾರಾಜನು ತನ್ನ ಗೆಳೆಯನನ್ನು ಸಂತೈಸುತ್ತಾ ಹೀಗೆಂದನು: “ನನ್ನ ಪ್ರೀತಿಯ ವಸುದೇವ, ದೇವಕಿಯಲ್ಲಿ ಹುಟ್ಟಿದ ಎಲ್ಲ ಮಕ್ಕಳನ್ನು ಕಂಸನು ಕೊಂದದ್ದರಿಂದ ನಿನಗೆ ಬಹಳ ದುಃಖವಾಗಿದೆಯೆಂಬುದು ನನಗೆ ಗೊತ್ತು. ಕಡೆಯ ಮಗುವು ಹೆಣ್ಣು ಮಗುವಾದರೂ ಅದನ್ನು ಕೊಲ್ಲಲು ಕಂಸನಿಗೆ ಸಾಧ್ಯವಾಗಲಿಲ್ಲ.

ಗೆಳೆಯಾ, ದುಃಖಿಸಬೇಡ. ಕಣ್ಣಿಗೆ ಕಾಣದ ನಮ್ಮ ಹಿಂದಿನ ಕರ್ಮಗಳೇ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಪ್ರತಿಯೊಬ್ಬನೂ ತನ್ನ ಪುಣ್ಯ ಕಾರ್ಯಗಳಿಗೆ ಒಳಪಟ್ಟಿರುತ್ತಾನೆ. ಕರ್ಮ ಮತ್ತು ಅದರ ಪ್ರತಿಫಲದ ಸಿದ್ಧಾಂತವನ್ನು ತಿಳಿದವನು ಜ್ಞಾನಿ. ಅಂತಹ ಮನುಷ್ಯನ ಮೇಲೆ ಸುಖದ ಅಥವಾ ದುಃಖದ ಯಾವುದೇ ಸಂಗತಿಯೂ ಪರಿಣಾಮ ಬೀರುವುದಿಲ್ಲ.’

ವಸುದೇವನಿಗೆ ಗೆಳೆಯನ ಮಾತುಗಳನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು. ಅವನು ಕೂಡಲೇ ನಂದನಿಗೆ, ಗೆಳೆಯಾ, ನೀನು ಸರಕಾರಕ್ಕೆ ಕಂದಾಯವನ್ನು ಕೊಟ್ಟು ಮುಗಿಸಿದ್ದರೆ ಕೂಡಲೇ ನಿನ್ನ ಗ್ರಾಮಕ್ಕೆ ಹಿಂತಿರುಗಿಬಿಡು, ಏಕೆ೦ದರೆ ಗೋಕುಲದಲ್ಲಿ ಏನಾದರೂ  ತೊಂದರೆಯಾಗಬಹುದೇನೋ ಎಂದು ನನಗನ್ನಿಸುತ್ತದೆ.”

ನಂದನು ಸ್ನೇಹಿತನ ಮಾತಿನಂತೆ ಬೇಗ ತೆರಿಗೆಯನ್ನು ಪಾವತಿ ಮಾಡಿ ತನ್ನ ಜೊತೆಗೆ ಬ೦ದಿದ್ದವರೊಡನೆ ಹೊರಟನು. ಹಿಂತಿರುಗುತ್ತಿದ್ದಾಗ ಗೋಕುಲದಲ್ಲಿ ಏನಾದರೂ ತೊಂದರೆಯಾದೀತು ಎಂಬ ವಸುದೇವನ ಮಾತಿನ ಬಗ್ಗೆ ಯೋಚಿಸತೊಡಗಿದ. ನಿಜಕ್ಕೂ ಅದು ಸ್ನೇಹದ ಸೂಚನೆ. ಅದರಲ್ಲಿ ಎಚ್ಚರಿಕೆ ಅಡಗಿದೆ. ಅದರಲ್ಲಿ ಒಂದಿಷ್ಟು ಸತ್ಯವಿದೆ ಎಂದುಕೊಂಡ ನಂದನು ಭಯದಿಂದ ದೇವೋತ್ತಮ ಪರಮ ಪುರುಷನನ್ನು ಪ್ರಾರ್ಥಿಸಲು ಪ್ರಾರಂಭಿಸಿದ.

“ನೀನು ಹಸುಳೆಗಳನ್ನು ಕೊಲ್ಲುವುದರಲ್ಲಿ ಎತ್ತಿದ ಕೈ ಎಂದು ಕೇಳಿದ್ದೇನೆ. ಸರಿಯೋ”  ಕಂಸ, ತನ್ನ ಎದುರಿಗೆ ಬೃಹದಾಕಾರದೊಂದಿಗೆ ಭಯಾನಕವಾಗಿದ್ದ ರಾಕ್ಷಸಿ ಪೂತನಿಯನ್ನು ಕೇಳಿದ.

“ಹೌದು ಮಹಾಪ್ರಭು, ನನಗೆ ಅಸಹಾಯಕ ಮಕ್ಕಳನ್ನು ಸಂಹರಿಸುವುದೆಂದರೆ ಎಲ್ಲಿಲ್ಲದ ಆನಂದ. ನಾನು ಮಾಯಾವಿದ್ಯೆಯಲ್ಲೂ ಪರಿಣತೆ” ಎಂದಳು ಪೂತನಿ ಉತ್ಸಾಹದಿಂದ.

“ಸರಿ, ಬಹಳ ಒಳ್ಳೆಯದು. ನೀನು ಈ ಕೂಡಲೇ ಹೊರಟು ಹೊಸದಾಗಿ ಜನ್ಮತಾಳಿದ ಮಕ್ಕಳನ್ನು ಎಷ್ಟು ಸಾಧ್ಯವೋ ಅಷ್ಟು ಸಾಯಿಸಬೇಕು. ಜೊತೆಗೆ, ಆ ಕೃಷ್ಣನ ಸಂಹಾರವಾಗಲೇಬೇಕು” ಎಂದು ಕಂಸ ಆಜ್ಞೆ ಮಾಡಿದ.

”ಮಹಾಪ್ರಭು ನಾನು ಅತ್ಯಂತ ಸಂತೋಷದಿಂದ ಈ ಕಾರ್ಯವನ್ನು ಮಾಡುತ್ತೇನೆ” ಎಂದ ಪೂತನಿ ವಿಶೇಷವಾದ ಮರವೊಂದರ ಕೊಂಬೆಯ ಮೇಲೆ ಕುಳಿತು ಆಕಾಶದಲ್ಲಿ ಹಾರಿ ಹೋದಳು. (ಈ ತಂತ್ರ ವಿದ್ಯೆಯನ್ನು ಮಾಟಗಾತಿಯರು ಭಾರತದ ಈಶಾನ್ಯ ಪ್ರದೇಶದಲ್ಲಿ ಈಗಲೂ ಮಾಡುತ್ತಾರೆ.)

ವೃಂದಾವನದ ಬಳಿಯಿದ್ದ ಗೋಕುಲದಲ್ಲಿ ಪೂತನಿ ಬ೦ದಿಳಿದಳು. ಯಾರಿಗೂ ಗೊತ್ತಾಗದಿರಲೆಂದು ಒಬ್ಬ ಸುಂದರ ಸ್ತ್ರೀಯ ವೇಷವನ್ನು ಧರಿಸಿದಳು. ನಂದಮಹಾರಾಜನ ಮನೆಯಲ್ಲಿ ಹೊಸದಾಗಿ ಜನಿಸಿದ ಮಗುವಿದೆಯೆಂದು ತಿಳಿದ ಅವಳು ಪರಿಚಿತ ಸ್ತ್ರೀಯಂತೆ ಅಲ್ಲಿಗೆ ತೆರಳಿದಳು. ಹಾದಿಯಲ್ಲಿ ಎಲ್ಲರೊಡನೆ ಮುಗುಳ್ನಗೆ ಬೀರುತ್ತಾ ಎಲ್ಲರನ್ನೂ ಆಕರ್ಷಿಸುತ್ತಾ ನಡೆದಳು.

ಅವಳ ಸೌ೦ದರ್ಯವನ್ನು ಕಂಡು ಯಾರೂ ಅವಳ ಬಗ್ಗೆ ಅನುಮಾನ ಪಡಲಿಲ್ಲ. ಹೀಗೆ ಅನುಮಾನ ಬರದಂತೆ ಅವಳು ಯಶೋದೆಯ ಮನೆಯನ್ನು ಪ್ರವೇಶಿಸಿದಳು. ಅಲ್ಲೇ ಪುಟ್ಟದೊಂದು ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಕಂಡ ಪೂತನಿಗೆ ಆ ಮಗುವಿನಲ್ಲಿ ಬೂದಿ ಮುಚ್ಚಿದ ಕ೦ಡದ೦ತೆ ಯಾವುದೋ ಅಪರಿಮಿತ ಶಕ್ತಿಯಿದೆ ಎಂದೆನಿಸಿತು. ಈ ಮಗು ಇಡಿ ಬ್ರಹ್ಮಾಂಡವನ್ನು ಕೂಡಲೇ ನಾಶಮಾಡುವಂತಿದೆ. ನಾನು ಎಚ್ಚರಿಕೆಯಿಂದಿರಬೇಕು” ಎಂದುಕೊಂಡಳು, ಪೂತನಿ ನೀಲಮೇಘ ಶ್ಯಾಮ ಕೃಷ್ಣನನ್ನು ನೋಡುತ್ತಾ.

ಕೃಷ್ಣನ ಪುಟ್ಟ ಮಗುವಿನಂತೆ ಆಟವಾಡಿಕೊಂಡಿದ್ದರೂ ಪೂತನಿಯ ಮುಖವನ್ನು ನೋಡಿಯೂ ನೋಡದಂತೆ ಕಣ್ಣು ಮುಚ್ಚಿದ್ದನು. ಇಲ್ಲಿಗೆ ಬರುವ ಮೊದಲೇ ಪೂತನಿಯು ತನ್ನ ಸ್ತನಗಳಿಗೆ ಕಠೋರವಾದ ವಿಷವನ್ನು ಸವರಿಕೊಂಡು ಬಂದಿದ್ದಳು. ಮಗುವಿಗೆ ಹಾಲುಣಿಸಲು ಹಸುಳೆಯ ರೂಪದ ಕೃಷ್ಣನನ್ನು ಹಾಸಿಗೆಯಿಂದೆತ್ತಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು.

ಯಶೋದೆ ಮತ್ತು ರೋಹಿಣಿಯರು ಅಲ್ಲೇ ಇದ್ದು ಇದನ್ನು ನೋಡಿದರಾದರೂ ಅವಳ ಮಾತೃಪ್ರೇಮವನ್ನು ಕಂಡು ಅನುಮಾನವೇನೂ ಬರಲಿಲ್ಲ.

ಬಾಲಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡ ಪೂತನಿ ತನ್ನ ವಿಷಪೂರಿತ ಮೊಲೆಯ ತುದಿಯನ್ನು ಮಗುವಿನ ಬಾಯಿಗಿಟ್ಟಳು. ಮಗು ಎದೆಯ ಹಾಲನ್ನು ಹೀರುತ್ತಲೇ ಸತ್ತು ಹೋಗುವುದೆಂದು ಅವಳು ನಿರೀಕ್ಷಿಸಿದ್ದಳು. ಆದರೆ ಕೃಷ್ಣನು ಕೋಪದಿಂದ ಮೊಲೆಯ ತುದಿಯನ್ನು ಚೀಪಿ ಅವಳ ಹಾಲನ್ನಲ್ಲದೆ ಪ್ರಾಣವನ್ನೂ ಹೀರತೊಡಗಿದನು. ಅವಳು ನೋವನ್ನು ತಾಳಲಾರದೆ “ಓ ಮಗು! ಬಿಟ್ಟು ಬಿಡು ಬಿಟ್ಟು ಬಿಡು” ಎಂದು ಚೀರತೊಡಗಿದಳು. ಅವಳ ಮೈ ಬೆವರತೊಡಗಿತ್ತು.

ಪೂತನಿ ಹಾಗೆ ಕಿರುಚತೊಡಗಿದಂತೆ ಎಲ್ಲರೂ ಗಾಬರಿಯಿಂದ ಅವಳ ಕಡೆಗೆ ನೋಡತೊಡಗಿದರು.

ನೋವನ್ನು ತಾಳಲಾರದೆ ಪೂತನಿಯು ತನ್ನ ಬೃಹದಾಕಾರದ ರಾಕ್ಷಸಿಯ ಕುರೂಪದ ನಿಜ ಸ್ವರೂಪವನ್ನು ತಾಳಿದಳು. ಬಾಯನ್ನು ಅಗಲವಾಗಿ ತೆರೆದು ಕೈಕಾಲುಗಳನ್ನು ಭೂಮಿಯ ಮೇಲೆಲ್ಲಾ ಚಾಚಿದಳು. ಅವಳ ಉದ್ದವಾದ ಕೂದಲು ಮೈಮೇಲೆಲ್ಲಾ ಹರಡಿಕೊಂಡಿತ್ತು. ಕೆಳಕ್ಕೆ ಬಿದ್ದ ಅವಳ ದೇಹವು ಹನ್ನೆರಡು ಮೈಲಿಗಳಷ್ಟು ಉದ್ದವಾಗಿತ್ತು.

ಅವಳು ಭಾರಿ ಶಬ್ದದೊಂದಿಗೆ ಕೆಳಗೆ ಬೀಳುವಾಗ ಎಲ್ಲ ಮರಗಳೂ ಮುರಿದುಬಿದ್ದವು. ಭೂಮಿಯೂ ನಡುಗಿತು. ಆಕಾಶವೂ ಬಿರಿಯಿತು. ಬೇರೆ ಸಣ್ಣಪುಟ್ಟ ಗ್ರಹಗಳೂ ಅದುರಿದವು. ಬೆದರಿದ ಜನರಿಗೆ ಆಕಾಶದಿಂದ ಭೀಕರ ಸಿಡಿಲುಗಳ ಆರ್ಭಟ ಎನಿಸಿತು. ಅವರೆಲ್ಲರಿಗೂ ಇವಳ ಬೃಹದಾಕಾರ ಅಚ್ಚರಿಯನ್ನುಂಟು ಮಾಡಿತ್ತು.

ಅವಳ ಹಲ್ಲುಗಳಂತೂ ಉತ್ತ ನೆಲದಂತೆ ತೋರುತ್ತಿತ್ತು. ಅವಳ ಮೂಗಿನ ಹೊಳ್ಳೆಗಳು ಪರ್ವತಗಳಲ್ಲಿನ ಗುಹೆಗಳಂತೆ ಕಂಡವು. ಅವಳ ಸ್ತನಗಳು ಸಣ್ಣ ಗುಡ್ಡಗಳಂತಿದ್ದವು. ಅವಳ ಕೂದಲು ಬಹುದೊಡ್ಡ ಕೆಂಪು ಪೊದೆಯನ್ನು ಹೋಲುತ್ತಿತ್ತು. ಅವಳ ಕಣ್ಣುಗಳು ಆಳವಾದ ಕತ್ತಲೆ ತುಂಬಿದ ಬಾವಿಯಂತಿದ್ದವು. ತೊಡೆಗಳು ನದಿಯ ಎರಡು ದಂಡೆಗಳಂತಿದ್ದವು. ಕೈಗಳು ಎರಡು ಸೇತುವೆಗಳಂತೆಯೂ ಹಾಗೂ ಅವಳ ಹೊಟ್ಟೆ ಒಣಗಿ ಹೋದ ಕೆರೆಯಂತಿತ್ತು.

ಹೀಗೆ ಅವಳ ವಿಲಕ್ಷಣವಾದ ರೂಪವನ್ನು ಕಂಡು ಗೋಪಾಲರು ಹಾಗೂ ಗೋಪಿಯರು ಬೆರಗಾಗಿ ಹೋಗಿದ್ದರು. ಬಾಲಕೃಷ್ಣನು ಇದಾವುದರ ಪರಿವೆಯೂ ಇಲ್ಲದಂತೆ ಪೂತನಿಯ ತೊಡೆಯ ಮೇಲೆ ಆಟವಾಡುತ್ತಾ ಮಲಗಿರುವುದನ್ನು ಕಂಡು ಕೂಡಲೇ ಬಂದು ಎತ್ತಿಕೊಂಡಳು ತಾಯಿ ಯಶೋದೆ.

ರೋಹಿಣಿ ಮತ್ತಿತರ ಹಿರಿಯ ಗೋಪಿಯರು ಕೃಷ್ಣನಿಗೆ ಏನೂ ಕಟ್ಟದಾಗದಿರಲೆಂದು ಗೋವನ್ನು ಅವನ ಸುತ್ತ ಸುತ್ತಿಸಿದರು. ಗೋಮೂತ್ರದಿಂದ ಅವನ ದೇಹವನ್ನು ಸಂಪೂರ್ಣವಾಗಿ ತೊಳೆದರು. ಗೋಧೂಳಿಯನ್ನು ಅವನ ದೇಹದ ಮೇಲೆ ಹಾಕಿದರು.

ಇದಾದ ಅನಂತರ, ಅವರು ವಿಷ್ಣುವಿನ ನಾಮಗಳನ್ನು ಜಪಿಸಿದರು. ಕೃಷ್ಣನಿಗೆ ದೆವ್ವ ಭೂತಗಳಿಂದ ರಕ್ಷಣೆ ನೀಡುವ ಸಲುವಾಗಿ ಇವೆಲ್ಲವನ್ನು ಸಾಂಗವಾಗಿ ನೆರವೇರಿಸಿದರು. ಈ ದೆವ್ವ ಭೂತಗಳು ಕೆಲವೊಮ್ಮೆ ಕನಸಿನಲ್ಲಿ ಕಾಣಿಸಿಕೊಂಡು ಭಯವನ್ನುಂಟು ಮಾಡುತ್ತವೆ ಅಥವಾ ಸಣ್ಣ ಮಕ್ಕಳ ರಕ್ತ ಹೀರುವ ಮುದಿ ಹೆಂಗಸಾಗಿ ಕಾಣಿಸಿಕೊಳ್ಳುತ್ತವೆ.

ಆದರೆ ತಾಯಿ ಯಶೋದೆಗೆ, ಭಗವಂತನ ನಾಮದ ಕೀರ್ತನೆಯಿದ್ದೆಡೆ ಇಂತಹ ದೆವ್ವ, ಭೂತಗಳು ಇರಲಾರವು ಎನ್ನುವ ಗಾಢ ನಂಬಿಕೆಯಿತ್ತು. ನಂದ ಮಹಾರಾಜನು ವಸುದೇವನನ್ನು ಮಥುರೆಯಲ್ಲಿ ಭೇಟಿ ಮಾಡಿದಾಗ ಅವನು ಗೋಕುಲದಲ್ಲಿ ತೊಂದರೆಯಾಗುವ ಬಗ್ಗೆ ಮುಂಚೆಯೇ ತಿಳಿಸಿ ಎಚ್ಚರವಾಗಿರುವಂತೆಯೂ ಸೂಚಿಸಿದ್ದನು. ಈಗ ನಂದನಿಗೆ ಆ ಮಾತಿನ ಅರ್ಥವಾಯಿತು. ಹೀಗೆ ಮುಂದಾಗುವುದನ್ನು ತಿಳಿಯಬಲ್ಲ ವಸುದೇವನು ಮಹಾಸಾಧು ಮತ್ತು ಯೋಗಿ ಎಂದೇ ಭಾವಿಸಿದನು.

ವೃಂದಾವನದ ನಿವಾಸಿಗಳೆಲ್ಲ ಪೂತನಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರು. ಸೌದೆಯೊಂದಿಗೆ ಅದನ್ನು ಸುಡಲು ಪೇರಿಸಿದರು. ಆದರೆ ಪೂತನಿಯ ದೇಹದ ಅಂಗಾಂಗಗಳು ಬೆಂಕಿಯಲ್ಲಿ ಉರಿಯುತ್ತಿದ್ದಾಗ ಎಲ್ಲೆಲ್ಲೂ ಸುವಾಸನೆ ಹರಡಿಕೊಂಡಿತ್ತು. ಇದಕ್ಕೆ ಕಾರಣ ಶ್ರೀಕೃಷ್ಣನು ಅವಳನ್ನು ಕೊಂದದ್ದೇ ಆಗಿತ್ತು.

ಏಕೆಂದರೆ ಪೂತನಿಯು ಕೃಷ್ಣನನ್ನು ಕೊಲ್ಲಲು ಬಂದವಳು. ಆದರೆ ಕೃಷ್ಣನು ಅವಳ ಹಾಲನ್ನು ಕುಡಿದುದರಿಂದ ಅವಳು ತನ್ನ ಎಲ್ಲ ಪಾಪಗಳ ಫಲದಿಂದ ಪರಿಶುದ್ಧಳಾದಳು. ಇದರಿಂದ ಆಕೆಯು ಮುಕ್ತಳಾಗಿ ಆಧ್ಯಾತ್ಮಿಕ ಲೋಕಕ್ಕೆ ಹೋದಳು.

ಇದರಿಂದ ತಿಳಿಯುವುದೇನೆಂದರೆ ಕೃಷ್ಣನು ದೇವೋತ್ತಮ ಪರಮ ಪುರುಷನು. ಆ ಪ್ರಭುವಿನ ಸೇವೆಯಲ್ಲಿ ಸ್ವಲ್ಪ ಶಕ್ತಿಯನ್ನು ವಿನಿಯೋಗಿಸಿದರೂ ಅಂತಹ ಭಕ್ತನಿಗೆ ಅಧಿಕವಾದ ದಿವ್ಯ ಫಲವು ದೊರೆಯುತ್ತದೆ. ಹಗೆಯನ್ನು ಕೊಲ್ಲಲು ಬಂದ ಪೂತನಿಗೆ ಇಂತಹ ಭಾಗ್ಯ ದೊರೆಯಿತು.

ಆ ಪರಮ ಪುರುಷನನ್ನು ಪ್ರೇಮ ಮತ್ತು ಮೈತ್ರಿಯಿಂದ ಪೂಜಿಸುವುದರಿಂದ ಸಿಗುವ ಅತೀವ ಪ್ರಯೋಜನವನ್ನು ಎಣಿಸಬಲ್ಲವರಾರು? ಅವಳಿಗೆ ಇಷ್ಟು ಒಳ್ಳೆಯದಾಗಿರಬೇಕಾದರೆ ಕೃಷ್ಣನನ್ನು ಪ್ರೀತಿ ವಾತ್ಸಲ್ಯಗಳಿಂದ ಪೂಜಿಸಿದರೆ ದೊರಕುವ ಫಲವನ್ನು ವರ್ಣಿಸಲಸಾಧ್ಯ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi