ಸಿಹಿ ತಿನಿಸುಗಳು

ವನಿತಾ ಕೃಷ್ಣ ಪಾಕಶಾಲೆ

– ಎಸ್‌.ವಿಜಯಾ ಗುರುರಾಜ, ಬೆಂಗಳೂರು

ಸಿಹಿ ಪಕೋಡ

ಬೇಕಾಗುವ ಪದಾರ್ಥಗಳು :

ಮೈದಾಹಿಟ್ಟು- 1 ಬಟ್ಟಲು

ಚಿರೋಟಿ ರವೆ – 2 ಚಮಚ

ಸಕ್ಕರೆ – 1/2 ಬಟ್ಟಲು

ಕಾಯಿತುರಿ – 1/2 ಬಟ್ಟಲು

ಬಾಳೆಹಣ್ಣು – 1

ಏಲಕ್ಕಿಪುಡಿ – 1 ಚಮಚ

ಅಡಿಗೆ ಸೋಡಾ – ಚಿಟಿಕೆ

ಮಾಡುವ ವಿಧಾನ : ಮೈದಾಹಿಟ್ಟು, ಚಿರೋಟಿ ರವೆಯೊಂದಿಗೆ ಬಾಳೆಹಣ್ಣು ನುಣ್ಣಗಾಗುವಂತೆ ಮುದ್ದೆ ಮಾಡಿಕೊಳ್ಳಿ. ಅದಕ್ಕೆ ಸಕ್ಕರೆ, ಕಾಯಿತುರಿ, ಏಲಕ್ಕಿಪುಡಿ ಅಡಿಗೆ ಸೋಡಾ ಮತ್ತು ಸ್ವಲ್ಪ ನೀರು ಹಾಕಿ ವಡೆ ಹಿಟ್ಟಿನ ಹದಕ್ಕೆ ಕಲೆಸಿ ಕಾಯುತ್ತಿರುವ ಎಣ್ಣೆಗೆ ಪಕೋಡಗಳಂತೆ ಮಾಡಿ ಹಾಕಿ. ಸಣ್ಣ ಉರಿಯಲ್ಲಿ ಬಂಗಾರ ಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಈ ರುಚಿಯಾದ ಸಿಹಿ ಪಕೋಡವನ್ನು ಶ್ರೀಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿ ಮನ ಮಂದಿಗೆಲ್ಲ ಹಂಚಿ ತಿನ್ನಿ.

ಅದ್ದೊಬ್ಬಟ್ಟು

ಬೇಕಾಗುವ ಪದಾರ್ಥಗಳು :

ಬೆಲ್ಲ – 1 ಅಚ್ಚು

ಗಸಗಸೆ – 100 ಗ್ರಾಂ

ಹುರಿಗಡಲೆ – 1/2 ಲೋಟ

ಗೋಧಿಹಿಟ್ಟು – 1 ಲೋಟ

ತೆಂಗಿನ ತುರಿ – 1 ಲೋಟ

ತುಪ್ಪ- ಸ್ವಲ್ಪ

ಏಲಕ್ಕಿಪುಡಿ – 1/2 ಚಮಚ

ಉಪ್ಪು – ಚಿಟಿಕೆ

ಮಾಡುವ ವಿಧಾನ: ಗೋಧಿಹಿಟ್ಟು, ಏಲಕ್ಕಿಪುಡಿ, ತುಪ್ಪ, ಸ್ವಲ್ಪ ಉಪ್ಪನ್ನು ಸೇರಿಸಿ ಮೃದುವಾಗಿ ಕಲಸಿ ಚಪಾತಿಗಳನ್ನು ಮಾಡಿಟ್ಟುಕೊಳ್ಳಿ. ಗಸಗಸೆಯನ್ನು ನಸುಕೆಂಪಗೆ ಹುರಿದು ಹುರಿಗಡಲೆ ಮತ್ತು ಕಾಯಿತುರಿಯೊಂದಿಗೆ ಪುಡಿಮಾಡಿಕೊಳ್ಳಿ. ಬೆಲ್ಲಕ್ಕೆ ಒಂದು ಲೋಟ ನೀರು ಹಾಕಿ ಕುದಿಸಿ ಶೋಧಿಸಿ. ಬೆಲ್ಲದ ಪಾಕಕ್ಕೆ ಮಾಡಿಟ್ಟ ಪುಡಿ ಮತ್ತು ಏಲಕ್ಕಿಪುಡಿ ಹಾಕಿ ಇಡ್ಲಿ ಹಿಟ್ಟಿನಂತಹ ಹೂರಣ ತಯಾರಿಸಿಕೊಳ್ಳಿ.

ಈಗ ಒ೦ದೊ೦ದು ಚಪಾತಿ ಹೂರಣವನ್ನು ಬಳಿದು ತ್ರಿಕೋನಕಾರವಾಗಿ ಮಡಚಿ ಸ್ವಲ್ಪ ಹೂರಣವನ್ನು ಎರಡೂ ಬದಿಗೂ ಸವರಿ ಒಂದರ ಮೇಲೊಂದು ಜೋಡಿಸಿ ಅರ್ಧಗಂಟೆ ನೆನೆಸಿಡಿ. ಅನಂತರ ಒಂದೊಂದಾಗಿ ತೆಗೆದು ತಟ್ಟೆಯಲ್ಲಿ ಜೋಡಿಸಿ ಸ್ವಲ್ಪ ತುಪ್ಪಹಾಕಿ ಕೃಷ್ಣ ಪರಮಾತ್ಮನಿಗರ್ಪಿಸಿ ಅನಂತರ ಸೇವಿಸಿ.

ಬಾಳೆಹಣ್ಣಿನ ಬನ್

ಬೇಕಾಗುವ ಪದಾರ್ಥಗಳು:

ಚೆನ್ನಾಗಿ ಕಳಿತ ಬಾಳೆಹಣ್ಣು – 2

ಮೈದಾಹಿಟ್ಟು – 1/4 ಬಟ್ಟಲು

ಗೋಧಿಹಿಟ್ಟು – 1/4 ಬಟ್ಟಲು

ಪುಡಿಸಕ್ಕರೆ – 1/4 ಬಟ್ಟಲು

ಚಿರೋಟಿ ರವೆ – 4 ಚಮಚ

ಅಡಿಗೆಸೋಡಾ – ಚಿಟಿಕೆ

ಉಪ್ಪು – ಚಿಟಿಕೆ

ಕರಿಯಲು – ವನಸ್ಪತಿ

ತುಪ್ಪ – 1 ಚಮಚ

ಮಾಡುವ ವಿಧಾನ : ಹಿಟ್ಟುಗಳು ಮತ್ತು ಬಾಳೆಹಣ್ಣು ಸಕ್ಕರೆ ಉಪ್ಪು, ಸೋಡಾ ಸೇರಿಸಿ ನೀರು ಹಾಕದೆ ತುಪ್ಪ ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 1/2 ಘಂಟೆಕಾಲ ಒದ್ದೆಬಟ್ಟೆಯಲ್ಲಿ ಮುಚ್ಚಿಡಿ. ಅನಂತರ ಕಾದ ಎಣ್ಣೆಯಲ್ಲಿ ಪೂರಿ ಲಟ್ಟಿಸಿ ಬಂಗಾರ ಬಣ್ಣದ ಪೂರಿಗಳನ್ನು ಕರಿದು ಎಲ್ಲವನ್ನೂ ರಾಧಾಕೃಷ್ಣನಿಗರ್ಪಿಸಿ ತಿನ್ನಿ.

ಸಿಹಿಗುಳಿಯಪ್ಪ

ಬೇಕಾಗುವ ಪದಾರ್ಥಗಳು :

ಮಂಗಳೂರು ಸೌತೆ – 1

ಅಕ್ಕಿ – 1 ಪಾವು

ಬೆಲ್ಲ – 1 ಅಚ್ಚು

ದ್ರಾಕ್ಷಿ ಗೋಡಂಬಿ, ಬಾದಾಮಿ – ಸ್ವಲ್ಪ

ಏಲಕ್ಕಿಪುಡಿ – 1/2 ಚಮಚ

ತುಪ್ಪ- 1/2 ಬಟ್ಟಲು

ಮಾಡುವ ವಿಧಾನ : ಅಕ್ಕಿಯನ್ನು 6 ಘಂಟೆಕಾಲ ನೆನೆಸಿ ಸೌತೆಯ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.  ಅದಕ್ಕೆ ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಗೋಡಂಬಿ, ಬಾದಾಮಿ, ದ್ರಾಕ್ಷಿಯನ್ನು ಹಾಕಿ 1 ಘಂಟೆಕಾಲ ಮುಚ್ಚಿಡಿ. ಅನಂತರ ಏಲಕ್ಕಿಪುಡಿ ಹಾಕಿ ಚೆನ್ನಾಗಿ ಕಲೆಸಿ.

ಗುಳಿಯಪ್ಪದ ತವಾಗೆ ತುಪ್ಪ ಹಚ್ಚಿ ಅವುಗಳಿಗೆ ಹಿಟ್ಟನ್ನು ತುಂಬಿ ಮುಚ್ಚಳ ಮುಚ್ಚಿ ಎರಡೂ ಬದಿ ತುಪ್ಪ ಹಾಕಿ ಬೇಯಿಸಿ, ಈ ಘಂ ಎನ್ನುವ ಗುಳಿಯಪ್ಪಗಳನ್ನು ಪರಮಾತ್ಮನಿಗರ್ಪಿಸಿ ಅನಂತರ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi