ಆಳ್ವಾರರು

ಸಾ.ಕೃ.ರಾಮಚಂದ್ರರಾವ್‌

ಆಳದಲಿ ಮುಳುಗಿಹರು ಸೂರಿಗಳು ಅನುಭವದ ಕಡಲಿನಾಳದಲಿ

ಮುಗಿಲ ಬೆಳಗುವ ಮಣಿಗಳನೆ ಕಂಡು ಒಡಲ ಹರುಷದ ನೂಲಿನಲಿ ಕೋದು ಮಾಡಿಹರು ಮಂಗಳವ ಜಗದ ಜನಕೆಲ್ಲ

ಆಳ್ವಾರರು “ವೇಗಾಡದೊಡಯ” (ತಿರುಪತಿಯ ವೆಂಕಟೇಶ್ವರನ) ಕುರಿತು ರಚಿಸಿರುವ ಪಾಶರಗಳ ಕನ್ನಡ ಅನುವಾದ ಅನುವಾದಕರು : ಎಸ್.ಕೆ. ರಾಮಚಂದ್ರರಾವ್.

ಆಳ್ವಾರ್ ಎನ್ನುವ ತಮಿಳು ಮಾತಿಗೆ “ಆಳವಾಗಿ ಮುಳುವಾಗಿರುವವರು” ಎಂದು ಅರ್ಥ. ಭಗವದನುಭವವೆಂಬ ಕಡಲಲ್ಲಿ ಮುಳುಗಿ ತಳವನ್ನು ಮುಟ್ಟಿದವರೆಂದು ವಿವರಣೆ. ಭಗವದನುಭವವನ್ನು ಪಡೆದುಕೊಂಡು ಮೈಮರೆತ ಯಾವ ಸಂತನಿಗಾಗಲಿ ಈ ವಿಶೇಷಣ ಒಪ್ಪುವುದಾದರೂ ವಿಶೇಷವಾಗಿ ಶ್ರೀ ವೈಷ್ಣವ ಸಂಪ್ರದಾಯದಲ್ಲಿ ಮಾನ್ಯರೆನಿಸಿದ ಹತ್ತು-ಹನ್ನೆರಡು ಮಂದಿ ಭಕ್ತ ಕವಿಗಳನ್ನು ಈ ಹೆಸರಿನಿಂದ ಕರೆಯುವುದು ವಾಡಿಕೆ.

ಇವರೆಲ್ಲ ತಮಿಳುನಾಡಿನ ಪ್ರಾಚೀನ ಸಂತರು; ಬೇರೆ ಬೇರೆ ಕಾಲದವರು, ಬೇರೆ ಬೇರೆ ಊರಿನವರು, ಬೇರೆ ಬೇರೆ ಜಾತಿಯವರು, ಬೇರೆ ಬೇರೆ ವೃತ್ತಿಗಳನ್ನು ಹಿಡಿದಿದ್ದವರು, ಬೇರೆ ಬೇರೆ ಮನೋವೃತ್ತಿಗಳನ್ನು ಪಡದಿದ್ದವರು. ಆದರೆ ಇರಲ್ಲರಿಗೂ ಸಮಾನವಾಗಿದ್ದ ಧರ್ಮವೆಂದರೆ ಗಾಢವಾದ ವಿಷ್ಣುಭಕ್ತಿ; ಮತ್ತು ಅದಕ್ಕೆ ಹೊಂದಿಕೊಂಡು ಬಂದ ಅದ್ಭುತವಾದ ಕವಿತಾ ಶಕ್ತಿ.

ವಿಷ್ಣು ಭಕ್ತರಾದರೂ ನಿರ್ದಿಷ್ಟವಾದ ಯಾವೊಂದು ಸಂಪ್ರದಾಯಕ್ಕಾಗಲೀ, ಪಂಥಕ್ಕಾಗಲೀ ಇವರು ಸೇರಿದ್ದಂತೆ ತೋರುವುದಿಲ್ಲ. ಶ್ರೀ ವೈಷ್ಣವ ಸಂಪ್ರದಾಯವೇನೋ ಅವರನ್ನು ತನ್ನವರೆಂದು ಗುರುತಿಸಿ ಆದರಿಸಿತು. ಆದರೆ ಅದು ನಡೆದದ್ದು ಅವರ ಕಾಲ ಮುಗಿದು ನೂರಾರು ವರ್ಷಗಳು ಕಳೆದ ಮೇಲೇ.

ಅವರು ತಮ್ಮ ಕಾಲದಲ್ಲಿ ತಮಿಳುನಾಡಿನಲ್ಲೆಲ್ಲ ತಿರುಗಾಡುತ್ತ, ವಿಷ್ಣು ಕೇತ್ರಗಳಲ್ಲಿ ತಂಗಿ ಅಲ್ಲಿನ ಅರ್ಚಾಮೂರ್ತಿಗಳನ್ನು ಕಂಡಾಗ ತಮಗಾದ ಅನುಭವವನ್ನು ತಮಗೊದಗಿದ ಭಾವನೆಗಳನ್ನು ಸರಳವಾದ ಮಾತಿನಲ್ಲಿ ನೇರವಾದ ರೀತಿಯಲ್ಲಿ ಮನಮುಟ್ಟುವಂತೆ ಹಾಡಿದರು.

ಅವರು ಹಾಡಿದ ಹಾಡುಗಳಲ್ಲಿ ಎದ್ದು ಕಾಣುವ ವಿವರಗಳೆಂದರೆ ಕ್ಷೇತ್ರವರ್ಣನೆ, ಉತ್ಸವ ವರ್ಣನೆ, ಪ್ರಕೃತಿ ವರ್ಣನೆ, ಅರ್ಚಾ ಮೂರ್ತಿಯ ವೈಭವ, ಬರಡು ಬಾಳುವೆಯ ಅಳಲು, ಭಕ್ತನ ಕಾತರ, ಸಾಕ್ಷಾತ್ಕಾರದ ದಾರಿ, ಭಗವದನುಭವದಿಂದ ಬಂದ ಆನಂದ ಇವು. ಬಾಳಿಗೆ ಬೆಳಕನ್ನು ನೀಡುವಂಥ ಆಲೋಚನೆಗಳು ಇಲ್ಲಿವೆ.

ಇವರ ಕವಿತೆಗಳು ಗೇಯಗುಣ ಪ್ರಧಾನವಾಗಿರುವುದರಿಂದ, ಜನರು ಅವನ್ನು ಕ್ಷೇತ್ರಗಳಲ್ಲಿ, ಉತ್ಸವ ಸಂದರ್ಭಗಳಲ್ಲಿ, ಅರ್ಚಾ ಮೂರ್ತಿಗಳೆದುರು ಹಾಡಿಕೊಳ್ಳುತ್ತಿದ್ದು ಉಳಿದುಕೊಂಡು ಬಂದಿವೆ.

ಅವರ ಹಿರಿಮೆಯನ್ನು ಪಂಡಿತವರ್ಗವೂ ಕಂಡು ಕೊಂಡುದು ಶ್ರೀ ವೈಷ್ಣವ ಸಂಪ್ರದಾಯದ ಆಚಾರ್ಯರಲ್ಲಿ ಮೊದಲಿಗರಾದ ನಾಥಮುನಿಗಳ ಕಾಲದಲ್ಲಿ ಎಂದರೆ ಹತ್ತನೆಯ ಶತಮಾನದಲ್ಲಿ ಶ್ರೀ ವೈಷ್ಣವ ಸಂಪ್ರದಾಯದ ಆಚಾರ್ಯತ್ರಯರಲ್ಲಿ ಇವರು ಮೊದಲನೆಯವರು; ಇವರ ಮಗ ಯಾಮುನಮುನಿಗಳು (ಆಳವಂದಾರ್ ಎಂದು ಇವರ ಹೆಸರು) ಎರಡನೆಯವರು; ಯಾಮುನರ ಮೊಮ್ಮಗ ತಿರುಮಲೆನಂಬಿ ಅಥವಾ ಶ್ರೀ ಶೈಲಪೂರ್ಣರ ಸೋದರಳಿಯ ರಾಮಾನುಜರು (1019-1139) ಮೂರನೆಯವರು.

ನಾಥಮುನಿಗಳಿ೦ದ ಮೊದಲಾಗಿ ರಾಮಾನುಜರಿಂದ ವ್ಯವಸ್ಥಿತವಾಗಿ ಶ್ರೀ ವೈಷ್ಣವ ಸಂಪ್ರದಾಯದಲ್ಲಿ ನಮ್ಮಾಳ್ವಾರರು ಸೇರಿಕೊಂಡದ್ದು ಹೀಗೆ.

ಈ ಸಂಪ್ರದಾಯದ ಆಚಾರ್ಯ ಪರಂಪರೆಯಲ್ಲಿ ಅಸ್ಮದೇಶಿಕ (ಎಂದರೆ, ತಮಗೆ ನೇರವಾದ ಆಚಾರ್ಯರು), ಪರಮಾಚಾರ್ಯ, ರಾಮಾನುಜ, ಮಹಾಪೂರ್ಣ (ಪೆರಿಯ ನಂಬಿ), ಯಾಮುನ ಮುನಿ, ರಾಮ (ಮಣಕ್ಕಾಲ್ ನಂಬಿ), ಪದ್ಮವಿಲೋಚನ (ಉಯ್ಯಕೊಂಡರ್), ನಾಥಮುನಿ (ಆಳವಂದಾರ್), ಶಠದ್ವೇಷಿ (ಅಥವಾ ಶಠಕೋಪ, ಎಂದರೆ ನಮ್ಮಾಳ್ವಾರ್), ಸೇನೇಶ (ವಿಷ್ವಕ್ಸೇನ), ಶ್ರೀ (ಲಕ್ಷ್ಮಿ), ನಾರಾಯಣ ಎಂಬ ಕ್ರಮವಿದೆ. ಈ ಪರಂಪರೆಯಲ್ಲಿ ಉಳಿದ ಆಳ್ವಾರರು ಸೇರುವುದಿಲ್ಲ.

ಆದರೆ ವ್ಯವಹಾರದಲ್ಲಿ ಎಲ್ಲ ಆಳ್ವಾರರನ್ನೂ ದಿವ್ಯ ಸೂರಿಗಳೆಂದು ಕರೆದು ಮೂವರು ಆಚಾರ್ಯರಿಗೆ (ಎಂದರೆ, ನಾಥಮುನಿ, ಯಾಮುನ, ರಾಮಾನುಜ) ಪೂರ್ವಸೂರಿಗಳೆಂದೂ ಮಾರ್ಗದರ್ಶಿಗಳೆಂದೂ ಹೇಳುವುದಿದೆ. ಆಳ್ವಾರರ ಗೋಷ್ಠಿಯಲ್ಲೇ ರಾಮಾನುಜರನ್ನೂ ಸೇರಿಸಿ ಹದಿಮೂರನೆಯ ಆಳ್ವಾರರೆಂದು ಕರೆವುದೂ ಉಂಟು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi