ಕೇರಳದ ತಿರುವನಂತಪುರದ ಶ್ರೀ ಅನಂತಪದ್ಮನಾಭ ದೇವಾಲಯದ ಹೆಸರನ್ನು ಕೇಳದವರು ಯಾರೂ ಇಲ್ಲ ಎಂದರೆ ಪ್ರಾಯಶಃ ತಪ್ಪಾಗಲಾರದು. ಈ ಭವ್ಯ ಬೃಹತ್ ದೇವಾಲಯವೂ ಅದರಲ್ಲಿನ ಶ್ರೀ ಅನಂತಪದ್ಮನಾಭ ಸ್ವಾಮಿಯ ಬೃಹತ್ ಮೂರ್ತಿಯೂ ಒಂದು ಬಗೆಯ ವಿಸ್ಮಯವನ್ನುಂಟುಮಾಡಿದೆ. ಈ ಕಾರಣಗಳಿಂದಲೇ ಈ ಪ್ರಾಚೀನ ದೇವಾಲಯಕ್ಕೆ ಅನೇಕರು ಭೇಟಿ ನೀಡಿರುತ್ತಾರೆ. ಆದರೆ ಈ ದೇವಾಲಯಕ್ಕೂ ಮೂಲವಾದ ಇನ್ನೊಂದು ದೇವಾಲಯದ ಬಗ್ಗೆ ಇನ್ನೂ ಅನೇಕರಿಗೆ ತಿಳಿದಿಲ್ಲ. ಒಂದು ಕೆರೆಯಲ್ಲಿ ನೆಲೆಯಾಗಿರುವ ಮೊಸಳೆಯೊಂದಕ್ಕೆ ಆಶ್ರಯ ನೀಡಿರುವ, ಸುತ್ತಲೂ ಸರ್ಪಕಣ್ಣಿನಂಥ ವಿಶಿಷ್ಟವಾದ ಕಲ್ಲಿನ ಪ್ರಾಕಾರ ಹೊಂದಿರುವ, ಕಡುಶರ್ಕರಪಾಕವೆಂಬ ವಿಶಿಷ್ಟ ಕ್ರಮದಿಂದ ರಚನೆಯಾದ ಭಗವದ್ವಿಗ್ರಹ ಹೊಂದಿರುವ, ಹೀಗೆ ಹಲವಾರು ವಿಸ್ಮಯಗಳಿಗೆ ಆಗರವಾಗಿರುವ ಈ ಮೂಲ ದೇವಾಲಯವಿರುವುದೂ ಕೇರಳದಲ್ಲೇ.
ಎಲ್ಲಿದೆ?
ಸರೋವರಕ್ಷೇತ್ರವೆಂದೂ ಕರೆಯಲಾಗಿರುವ ಈ ದೇವಾಲಯವಿರುವುದು ಕಾಸರಗೋಡಿನ ಕುಂಬಳೆಯಲ್ಲಿನ ಅನಂತಪುರದಲ್ಲಿ. ಕರ್ನಾಟಕಕ್ಕೇ ಸೇರಿದ್ದ, ಈಗಲೂ ಕನ್ನಡಿಗರಿರುವ, ಕೇರಳಕ್ಕೆ ಸೇರಿಕೊಂಡಿರುವ ಕಾಸರಗೋಡು ಜಿಲ್ಲೆ, ಮಂಗಳೂರಿಗೆ ಬಹಳ ಹತ್ತಿರ. ಹಾಗಾಗಿ ಮಂಗಳೂರಿನಿಂದ ಮಂಗಳೂರು-ಕಾಸರಗೋಡು ಹೆದ್ದಾರಿಯಲ್ಲಿ 39 ಕಿ.ಮೀ. ದೂರ ಕ್ರಮಿಸಿದರೆ ಕುಂಬಳೆ ಎಂಬ ನಗರವನ್ನು ತಲಪಬಹುದು. ಕುಂಬಳೆಯಿಂದ ಕುಂಬಳೆ-ಬದಿಯಡ್ಕ ಮಾರ್ಗವಾಗಿ 4 ಕಿ.ಮೀ. ಪೂರ್ವಕ್ಕೆ ಹೋದರೆ ನಾಯ್ಕಾಪು ಎಂಬ ಸ್ಥಳ ಸಿಗುತ್ತದೆ. ನಾಯ್ಕಾಪುವಿನಿಂದ ಒಂದು ಕಿ.ಮೀ. ದಕ್ಷಿಣದ ಮಾರ್ಗವಾಗಿ ಹೋದರೆ ಅನಂತಪುರ ಸಿಗುತ್ತದೆ. ಇಲ್ಲೇ ಈ ದೇವಾಲಯವಿರುವುದು. ಕಾಸರಗೋಡಿನಿಂದ ಹೋದರೆ ಕಾಸರಗೋಡು ಪೇಟೆಯಿಂದ 11 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಮಿಸಿ ಕುಂಬಳೆ ತಲಪಿ ಮುಂದುವರಿಯಬೇಕು.
ಸ್ಥಳ ಪುರಾಣ
ತಿರುವನಂತಪುರದ ಅನಂತಪದ್ಮನಾಭ ದೇವಾಲಯದ ಸ್ಥಳ ಪುರಾಣ ಆರಂಭವಾಗುವುದು ಇಲ್ಲಿಂದಲೇ. ಹಾಗಾಗಿ ಇಲ್ಲಿರುವ ದೇವಾಲಯವನ್ನು ಮೂಲದೇವಾಲಯವೆನ್ನುತ್ತಾರೆ. ಕೃಷ್ಣಕರ್ಣಾಮೃತ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀಕೃಷ್ಣನ ಮಹಾಭಕ್ತರಾದ ಶ್ರೀಬಿಲ್ವಮಂಗಲ ಅಥವಾ ದಿವಾಕರ ಮುನಿಗಳು ಇಲ್ಲಿಯೇ ವಾಸವಾಗಿರುತ್ತಾ ಶ್ರೀಕೃಷ್ಣನನ್ನು ಸಾಲಿಗ್ರಾಮ ಶಿಲೆಯ ರೂಪದಲ್ಲಿ ಪೂಜಿಸುತ್ತಿದ್ದರು. ಹೀಗಿರಲು ಒಂದು ಮಗುವು ದಿನವೂ ಅವರೊಂದಿಗೆ ಆಡಲು ಬರುತ್ತಿತ್ತು. ಆದರೆ ಒಂದು ದಿನ ಚೇಷ್ಟೆ ಮಾಡುತ್ತಾ ಅವರ ಸಾಲಿಗ್ರಾಮವನ್ನೇ ಮಗುವು ಬಾಯಿಗಿಟ್ಟುಕೊಳ್ಳಲು ಹೋದಾಗ, ಬಿಲ್ವಮಂಗಲರು ಕೋಪದಿಂದ ಮಗುವನ್ನು ತಳ್ಳಿಬಿಟ್ಟರು. ಆ ಮಗುವು ಒಂದು ಗುಹೆಯನ್ನು ಪ್ರವೇಶಿಸಿ ಮಾಯವಾಯಿತು. ಆಗಲೇ ಬಿಲ್ವಮಂಗಲರಿಗೆ ಆ ಮಗುವು ಸಾಕ್ಷಾತ್ ಶ್ರೀಕೃಷ್ಣನೆಂದು ಅರಿವಾದುದು. ನಾನೆಂಥ ತಪ್ಪು ಮಾಡಿದೆನೆಂದು ಮರುಗುತ್ತಾ ಆ ಮಗುವನ್ನು ಹಿಂಬಾಲಿಸಿಕೊಂಡು ಆ ಗುಹೆಯೊಳಗೆ ಹೋದರು. ಹಾಗೆ ಆ ಗುಹೆಯೊಳಗೆ ಸಂಚರಿಸುತ್ತಾ ಅವರು ಹೊರಬಂದುದು ಇಂದು ತಿರುವನಂತಪುರವೆಂದು ಪ್ರಸಿದ್ಧವಾಗಿರುವ ಅಂದಿನ ಅನಂತನ್ಕಾಡು ಎಂಬ ಪ್ರದೇಶದಲ್ಲಿ. ಅಲ್ಲಿ ಅವರಿಗೆ ಪುನಃ ಆ ದಿವ್ಯಶಿಶುವು ಕಾಣಿಸಿಕೊಂಡು ಒಂದು ಮರದಲ್ಲಿ ಮರೆಯಾಯಿತು. ಮರುಕ್ಷಣವೇ ಆ ಮರವು ಉರುಳಿಬಿದ್ದು ಸರ್ಪಶಯನನಾದ ಶ್ರೀಮನ್ನಾರಾಯಣನ ಬೃಹತ್ ವಿಗ್ರಹವಾಯಿತು. ಅನಂತರ, ಬಿಲ್ವಮಂಗಲರ ಪ್ರಾರ್ಥನೆಯಂತೆ ಆ ವಿಗ್ರಹವು ಸಂಕ್ಷೇಪಗೊಂಡಿತು. ಆಗ ಆ ಮಗುವಿಗೆ ಆದಿವಾಸಿ ದಂಪತಿಗಳೊಬ್ಬರು ತೆಂಗಿನ ಗೆರಟೆಯಲ್ಲಿ ಗಂಜಿಯನ್ನು ಕುಡಿಸಿದ್ದುದನ್ನು ನೋಡಿದ್ದ ಬಿಲ್ವಮಂಗಲರು, ಆ ಗೆರಟೆಯಲ್ಲೇ ಮಾವಿನಕಾಯಿಯೊಂದನ್ನು ಇಟ್ಟು ನೈವೇದ್ಯ ಮಾಡಿ ಭಗವದ್ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮುಂದೆ ದೇವಾಲಯವನ್ನು ನಿರ್ಮಿಸಲಾಯಿತು. ಈಗಲೂ ದೇವರಿಗೆ ಚಿನ್ನದ ಗೆರಟೆಯಲ್ಲಿ ಮಾವಿನಕಾಯಿ ಅರ್ಪಣೆ ನಡೆಯುತ್ತದೆ.
ಮುಂದೆ ಒಮ್ಮೆ ದೇವಾಲಯಕ್ಕೆ ಬೆಂಕಿ ಬಿದ್ದಾಗ ಮರದ ಆ ವಿಗ್ರಹವೂ ಅಗ್ನಿಗೆ ಆಹುತಿಯಾಗಿ ಹೋಗಲು, ಅಷ್ಟಮಂಗಲ ಪ್ರಶ್ನಾವಿಧಿಯಿಂದ ದೇವಾಲಯದ ತಂತ್ರಿಗಳು ಕಡುಶರ್ಕರ ಯೋಗವೆಂಬ ವಿಧಾನದಿಂದ ನೂತನ ವಿಗ್ರಹ ರಚಿಸಿ ಸ್ಥಾಪಿಸಿದರು. ಈ ವಿಗ್ರಹವೇ ಈಗ ಅಲ್ಲಿರುವುದು. ಮಹಾರಾಜ ಮಾರ್ತಾಂಡವರ್ಮನು ನೂತನ ದೇವಾಲಯವನ್ನು ನಿರ್ಮಿಸಿ ತನ್ನ ಅತುಳೈಶ್ವರ್ಯವನ್ನೂ ದೇವರಿಗೆ ಅರ್ಪಿಸಿ ತನ್ನನ್ನು ತಾನು ಪದ್ಮನಾಭದಾಸನೆಂದು ಕರೆದುಕೊಂಡನು.
ಸ್ಥಳ ಪುರಾಣವನ್ನು ಹೇಳುತ್ತಾ ಸಾಂದರ್ಭಿಕವಾಗಿ ತಿರುವನಂತಪುರದ ದೇವಾಲಯದ ಬಗ್ಗೆಯೂ ಸ್ವಲ್ಪ ಹೇಳಿದಂತಾಯಿತು. ಈಗ ಕಾಸರಗೋಡಿನ ಅದರ ಮೂಲ ದೇವಾಲಯದ ಕೆಲವು ವಿಶೇಷಗಳನ್ನು ಗಮನಿಸೋಣ.
ದೇವಾಲಯದ ವಿಶೇಷಗಳು

ಈ ದೇವಾಲಯವು ಹಲವು ವಿಸ್ಮಯಗಳ ಆಗರ. ನಗರಪ್ರದೇಶ, ಜನವಸತಿಯಿಂದ ದೂರವಿರುವ ಈ ದೇವಾಲಯದ ಪ್ರದೇಶ, ವಿಶಾಲವಾದ ನೆಲ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ್ದು ಒಂದು ರೀತಿಯ ನಿಗೂಢತೆ ಮತ್ತು ದೈವೀ ವಾತಾವರಣದಿಂದ ನಮ್ಮನ್ನು ಸೆಳೆಯುತ್ತದೆ. ಆದರೆ ಅಲ್ಲಿ ದೇವಾಲಯವಿರುವಂತೆಯೇ ಅನಿಸುವುದಿಲ್ಲ. ದೇವಾಲಯದ ಸ್ಥಳಕ್ಕೆ ಬಂದಾಗ, ಮೆಟ್ಟಿಲುಗಳ ಮೂಲಕ ಕೆಳಗಿಳಿದರೆ, ನಿರ್ಮಲವಾದ ಸರೋವರದ ಮಧ್ಯದಲ್ಲಿ ಕೇರಳೀಯ ಶೈಲಿಯಲ್ಲಿರುವ ದೇವಾಲಯವು ಗೋಚರಿಸುತ್ತದೆ. ದೇವಾಲಯದ ಬಳಿಗೆ ಕೆರೆಯ ಮೇಲೆ ಹೋಗಲು ಅದಕ್ಕೆ ಹೊಂದಿಕೊಂಡಂತೆಯೇ ಒಂದು ಸೇತುವೆ ಇದೆ. ಸುತ್ತಲೂ ಸರ್ಪಕಟ್ಟಿನಂಥ ಕೋಟೆಯ ರೀತಿ ಕಾಣುವ ಪ್ರಾಕಾರ. ಇಲ್ಲಿಗೆ ಬರಲು ಪುರುಷರು ಮೇಲಿನ ಅಂಗಿಯನ್ನು ತೆಗೆಯಬೇಕಾಗುತ್ತದೆ. ಗರ್ಭಗುಡಿಗೆ ಸಮೀಪ, ಸೇತುವೆಯ ಎರಡು ಬದಿಗಳಲ್ಲಿ ನಿಂತು ದೇವರ ದರ್ಶನ ಮಾಡಬಹುದಾಗಿದೆ. ಸರಿಯಾದ ಸಮಯಕ್ಕೆ ಹೋದರೆ ದೇವರ ಮಂಗಳಾರತಿಯನ್ನು ಕಣ್ತುಂಬಿಕೊಳ್ಳಬಹುದು. ಇದೊಂದು ದಿವ್ಯಾನುಭವ. ಸ್ವಲ್ಪ ಕತ್ತಲಿರುವ ಗರ್ಭಗುಡಿಯಲ್ಲಿನ ವಿಗ್ರಹಗಳನ್ನು ಅರ್ಚಕರೇ ದೀಪದ ಬೆಳಕಿನಲ್ಲಿ ತೋರಿಸಿ ಪರಿಚಯಿಸುತ್ತಾರೆ. ಇಲ್ಲಿ ಅನಂತಪದ್ಮನಾಭ ಸ್ವಾಮಿಯು ಐದು ಹೆಡೆಗಳ ಆದಿಶೇಷ ಅಥವಾ ಅನಂತನ ತಲ್ಪದಲ್ಲಿ ಕುಳಿತಿದ್ದಾನೆ. ಅವನ ಎರಡೂ ಬದಿಗಳಲ್ಲಿ ಪತ್ನಿಯರಾದ ಶ್ರೀದೇವಿ, ಭೂದೇವಿಯರು ಆಸೀನರಾಗಿದ್ದಾರೆ. ಇವರ ಬದಿಗಳಲ್ಲಿ ಹನುಮಂತ ಹಾಗೂ ಗರುಡರು ಭಕ್ತಿಯಿಂದ ನಮಸ್ಕರಿಸುತ್ತಿರುವ ವಿಗ್ರಹಗಳು. ಎಡ, ಬಲ ಗೋಡೆಗಳಲ್ಲಿ ಚಾಮರ ಬೀಸುತ್ತಿರುವ ನಾಗಕನ್ನಿಕೆಯರ ವಿಗ್ರಹಗಳು. ಹೀಗೆ ಒಟ್ಟು ಏಳು ವಿಗ್ರಹಗಳಿವೆ. ಗರ್ಭಗುಡಿಯ ಪ್ರವೇಶದಲ್ಲಿ ದ್ವಾರಪಾಲಕರಾದ ಜಯವಿಜಯರ ವಿಗ್ರಹಗಳೂ ಇವೆ. ಹೀಗೆ, ಕ್ಷೀರಸಾಗರ ಪ್ರತೀಕವಾದ ಸರೋವರದ ಮಧ್ಯೆಯಿಂದ ಈ ಗರ್ಭಗುಡಿ ವೈಕುಂಠ ಸದೃಶವಾಗಿದೆ. ಗರ್ಭಗುಡಿಯ ಹೊರಗಿನ ಗೋಡೆಯಲ್ಲಿ ಭಗವಂತನ ಲೀಲೆಗಳು ಮತ್ತು ದೇವತೆಗಳ ಸುಂದರವಾದ ಭಿತ್ತಿಚಿತ್ರಗಳಿವೆ. ಪ್ರಾಕೃತಿಕ ವರ್ಣಗಳಿಂದ ರಚಿಸಲಾಗಿರುವ ಇವು ಮನಸೆಳೆಯುತ್ತವೆ. ಅಂತೆಯೇ ಗರ್ಭಗುಡಿಯ ವಿಗ್ರಹಗಳ ಚಿತ್ರವೂ ಸಹ ಇಲ್ಲಿದೆ.

ಗರ್ಭಗುಡಿಯಲ್ಲಿರುವ ಏಳೂ ವಿಗ್ರಹಗಳು ಕಡುಶರ್ಕರಪಾಕ ಎಂಬ ವಿಧಾನದಿಂದ ನಿರ್ಮಿಸಲ್ಪಟ್ಟಿರುವವು. ಇದು ಈ ದೇವಾಲಯದ ಇನ್ನೊಂದು ವಿಶೇಷ. ತಿರುವನಂತಪುರದ ಶ್ರೀ ವಿಗ್ರಹವೂ ಇದೇ ವಿಧಾನದಿಂದ ನಿರ್ಮಿಸಲಾಗಿದ್ದು, ಇದು ವಿಗ್ರಹನಿರ್ಮಾಣದ ಒಂದು ವಿಶೇಷ ವಿಧಾನವಾಗಿದೆ. ವಿಗ್ರಹವನ್ನು ಮಾನವ ಶರೀರದಂತೆಯೇ ಕದಿರೆ ಮರದಿಂದ ಮೊದಲು ಅಸ್ಥಿಪಂಜರವನ್ನು ಸ್ಥೂಲವಾಗಿ ನಿರ್ಮಿಸಿ ಅರವತ್ತು ನಾಲ್ಕು ಆಯುರ್ವೇದ ಔಷಧಗಳನ್ನು ಸೇರಿಸಿ ಒಟ್ಟು 108 ವಸ್ತುಗಳೊಂದಿಗೆ ಪಾಕ ಮಾಡಿ ಮನುಷ್ಯ ಶರೀರದ ಮಾಂಸ, ಮಜ್ಜೆ ಮೊದಲಾದ ಭಾಗಗಳನ್ನು ಸಂಕೇತಿಸುವಂತೆ ಬಿಸಿಯಾಗಿ ಹಲವು ಲೇಪನಗಳನ್ನು ಮಾಡುತ್ತಾ ಹೋಗುತ್ತಾರೆ. ಆಗ ವಿಗ್ರಹವು ಶಿಲೆಯಂತೆ ಗಟ್ಟಿಯಾಗಿ ಒಂದು ರೂಪಕ್ಕೆ ಬರುತ್ತದೆ. ಇದೇ ಕಡುಶರ್ಕರಪಾಕ. ಇದಕ್ಕೆ ತ್ರಿವೇಣಿಸಂಗಮದ ಮಣ್ಣು, ಗಂಗಾಮಣ್ಣು, ಗಂಗಾಜಲ, ಮುತ್ತಿನ ಚಿಪ್ಪು, ಹಲಸಿನ ಮೇಣ, ಕಸ್ತೂರಿ, ಗೋರೋಚನ, ಗುಲ್ಗುಲ್, ಹಸುವಿನ ಹಾಲು, ಮೊಸರು, ತುಪ್ಪ, ಶಂಖ, ಆನೆ ಕುಟ್ಟಿದ ಮಣ್ಣು, ಹುತ್ತದ ಮಣ್ಣು ಮೊದಲಾದ ಸಸ್ಯ ಮತ್ತು ಪ್ರಾಣಿಜನ್ಯ ಹಾಗೂ ಪ್ರಾಕೃತಿಕ ವಸ್ತುಗಳನ್ನು ಆಯುರ್ವೇದೀಯ ನಿಯಮಗಳಂತೆ ಬಳಸಿ ಈ ಕಡುಶರ್ಕರಪಾಕ ತಯಾರಿಸುತ್ತಾರೆ. ಈ ವಿಧಾನದ ವಿಸ್ತೃತ ವಿವರವು ದೇವಾಲಯದಲ್ಲಿ ದೊರೆಯುವ ಪುಸ್ತಿಕೆಯಲ್ಲಿ ಕೊಡಲಾಗಿದೆ. ಇದೊಂದು ಪ್ರಾಚೀನ ರೀತಿಯದ್ದಾಗಿದ್ದು, ಕಡುಶರ್ಕರಪಾಕವೆಂದರೆ ಕಠಿಣವಾದ ಪಾಕವೇ ವಿಗ್ರಹ ನಿರ್ಮಾಣದ ಮೂಲವೆಂದು ಅರ್ಥ. ಆಗಮೋಕ್ತವಾದ ಏಕ ಬೇರ ಮತ್ತು ಬಹು ಬೇರ ಎಂಬ ವಿಧಗಳ ವಿಗ್ರಹ ನಿರ್ಮಾಣದಲ್ಲಿ ಇದು ಬಹುಬೇರ ವಿಧವಾಗಿದ್ದು ಈ ವಿಗ್ರಹಕ್ಕೆ ಅಭಿಷೇಕವಿರುವುದಿಲ್ಲ. ಹಾಗಾಗಿ ಅಭಿಷೇಕಕ್ಕೆಂದೇ ಬೇರೆ ವಿಗ್ರಹವಿರುತ್ತದೆ.
ದೇವರ ಮೊಸಳೆ
ಈ ದೇವಾಲಯದ ಅತ್ಯಂತ ಕುತೂಹಲಕರ ವಿಷಯವೆಂದರೆ ಇಲ್ಲಿರುವ ಮೊಸಳೆಯದು. ಈ ದೇವಾಲಯದ ಕೆರೆಯಲ್ಲಿ ಅರವತ್ತು ವರ್ಷಗಳಿಂದಲೂ ವಾಸವಾಗಿರುವ ಬಬಿಯಾ ಎಂಬ ಒಂದು ಪ್ರಾಯಶಃ ಹೆಣ್ಣು ಮೊಸಳೆಯಿದೆ. ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿರುವ ಈ ಮೊಸಳೆ ಮಧ್ಯಾಹ್ನ ಅರ್ಚಕರು ಕೊಡುವ ನೈವೇದ್ಯದ ಅನ್ನ ತಿಂದು ಬದುಕುತ್ತಿದೆ ಎಂದರೆ ಆಶ್ಚರ್ಯವಾಗುವುದಲ್ಲವೇ? ಅಷ್ಟೇ ಅಲ್ಲ, ಸಾಧು ಸ್ವಭಾವದ ಈ ಮೊಸಳೆ ಯಾರ ಮೇಲೂ ಆಕ್ರಮಣ ಮಾಡಿಲ್ಲವಂತೆ. ಅರ್ಚಕರು ಕೆರೆಯಲ್ಲಿ ಮುಳುಗಿ ಸ್ನಾನ ಮಾಡುವಾಗ ಕೆಲವೊಮ್ಮೆ ಇದರ ಮೇಲೆ ಕಾಲಿಟ್ಟಾಗಲೂ ಇದು ಏನೂ ಮಾಡದೇ ತನ್ನ ಪಾಡಿಗೆ ತಾನು ಹೊರಟು ಹೋಗಿದೆಯಂತೆ. ಇಂಥ ಇನ್ನೂ ಹಲವು ನೈಜ ಘಟನೆಗಳನ್ನು ಇಲ್ಲಿ ಹೇಳುತ್ತಾರೆ. ಸಾಮಾನ್ಯವಾಗಿ ಕೆರೆಯ ಬದಿಯಲ್ಲಿರುವ ಎರಡು ಗುಹೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಇದನ್ನು ನೋಡುವುದು ಕಷ್ಟವಾದರೂ ಇದಕ್ಕೆ ತೊಂದರೆ ಕೊಡದೇ ಕೆರೆಯ ಕಟ್ಟೆಯಿಂದ ಬಗ್ಗಿ ಪ್ರಯತ್ನಪಟ್ಟರೆ ನೋಡಬಹುದು. ಈ ಮೊಸಳೆಗೆ ಮೊದಲು ಇಲ್ಲಿ ಇನ್ನೊಂದು ಮೊಸಳೆಯಿತ್ತಂತೆ! ಬಬಿಯಾ ಎಂಬ ಹೆಸರಿಡಲಾಗಿದ್ದ ಇದನ್ನ ಹೆಸರು ಹಿಡಿದು ಕೂಗಿದರೆ ಓಡಿ ಬರುತ್ತಿತ್ತಂತೆ. ಭಕ್ತರು ಕೊಟ್ಟ ತಿಂಡಿಗಳನ್ನು ಸ್ವೀಕರಿಸುತ್ತಿತ್ತಂತೆ. 1945ರ ಇಸವಿಯ ಆ ಕಾಲದಲ್ಲಿ, ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದಾಗ, ಒಬ್ಬ ಬ್ರಿಟಿಷ್ ಸೈನಿಕ ಆಟಕ್ಕೆಂದು ಇದನ್ನು ಗುಂಡು ಹಾರಿಸಿ ಕೊಂದುಬಿಟ್ಟನಂತೆ. ಆಗ ಕೂಡಲೇ ಸನಿಹದಲ್ಲಿರುವ ಅಶ್ವತ್ಥ ವೃಕ್ಷದಿಂದ ಒಂದು ವಿಷಜಂತು ಅವನ ಮೇಲೆರಗಿ ಅವನನ್ನು ಕಚ್ಚಿ ಕೊಂದುಬಿಟ್ಟಿತಂತೆ. ಮೊಸಳೆಯ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ ಮರಿ ಮೊಸಳೆಯೊಂದು ಆ ಕೆರೆಯಲ್ಲಿ ಪ್ರತ್ಯಕ್ಷವಾಯಿತೆಂದು ಹೇಳುತ್ತಾರೆ. ಆಶ್ಚರ್ಯಗೊಂಡ ಅರ್ಚಕರೇ ಮೊದಲಾದವರು ಇದಕ್ಕೂ ಬಬಿಯಾ ಎಂದೇ ಹೆಸರಿಟ್ಟರು.
ಇಲ್ಲಿ ಮುಖ್ಯ ದೇವಾಲಯವಲ್ಲದೇ ಗೋಶಾಲೆ ಕೃಷ್ಣನ ದೇವಾಲಯ ಮತ್ತು ಗಣಪತಿಯ ದೇವಾಲಯವೂ ಇವೆ. ಕೆರೆಯ ಸುತ್ತಲಿನ ಮೈದಾನ, ವೃಕ್ಷಗಳು, ಕಲ್ಲಿನ ಪ್ರಾಕಾರ, ಇವೆಲ್ಲವೂ ಒಂದು ಬಗೆಯ ದಿವ್ಯ ಸೆಳೆತವನ್ನುಂಟುಮಾಡುತ್ತವೆ. ಅಂತೆಯೇ ಇಲ್ಲಿ ಪ್ರತಿದಿನವೂ ಯಾತ್ರಿಕರಿಗೆ ಪ್ರಸಾದ ಭೋಜನದ ವ್ಯವಸ್ಥೆಯಿದೆ. ಬಹಳ ರುಚಿಯೂ ಶುಚಿಯೂ ದಿವ್ಯವೂ ಆದ ಭೋಜನವಿದು. ಇಲ್ಲಿನ ಅರ್ಚಕರು ಮತ್ತು ದೇವಾಲಯಕ್ಕೆ ಸಂಬಂಧಿಸಿದ ಇತರರು ಕನ್ನಡ, ತುಳು, ಮಲಯಾಳಂ ಭಾಷೆಗಳನ್ನು ಬಲ್ಲವರಾಗಿದ್ದು ಈ ಯಾವ ಭಾಷೆಯಲ್ಲಾದರೂ ದೇವಾಲಯದ ವಿಚಾರಗಳನ್ನು ತಿಳಿಸುವಲ್ಲಿ ಸಹಕರಿಸುತ್ತಾರೆ.
ಹೀಗೆ ಅನೇಕ ವಿಸ್ಮಯಗಳಿಗೆ ಆಗರವಾಗಿರುವ ಈ ದೇವಾಲಯ, ನೋಡಲೇಬೇಕಾದ ಒಂದು ಕ್ಷೇತ್ರವಾಗಿದೆ.






Leave a Reply