ಆಪದ್ಬಾಂಧವ ಶ್ರೀಕೃಷ್ಣ ಪಾಶುಪತಾಸ್ತ್ರದ ಗಳಿಕೆ

– ಡಾ.ಬಿ.ಆರ್‌.ಸುಹಾಸ್‌

ಆರಂಭದಲ್ಲಿ ಯುದ್ಧಮಾಡೆನೆಂದು ಹಿಂಜರಿಯುವ ಅರ್ಜುನನಿಗೆ ಗೀತೆಯ ಮೂಲಕ ಉಪದೇಶ ನೀಡಿದ ಕೃಷ್ಣ ಹುರಿದುಂಬಿಸುತ್ತಾನೆ. ಯುದ್ಧ ಶುರುವಾದಾಗಿನಿಂದಲೂ ಭೀಷ್ಮರ ಪ್ರತಾಪ ಮೇಲಾಗುತ್ತದೆ.

ಅವರ ವಧೆಗೆ ಅರ್ಜುನ ಮನಸ್ಸು ಮಾಡದಿದ್ದುದನ್ನು ಗಮನಿಸಿದ ಕೃಷ್ಣ, ತಾನೇ ಚಕ್ರ ಹಿಡಿದು ಮುಂದಾಗುತ್ತಾನೆ. ಕೊನೆಗೆ ತಾನೇ ಭೀಷ್ಮರನ್ನು ಹೊಡೆದುರುಳಿಸುವ ಪ್ರತಿಜ್ಞೆ ಮಾಡುವ ಅರ್ಜುನ ಶಿಖಂಡಿಯನ್ನು ಮುಂದಿಟ್ಟು ಕೊಂಡು ಅವರನ್ನು ಸೋಲಿಸುತ್ತಾನೆ. ಭೀಷ್ಮರು ಶರಶಯ್ಯೆಯ ಮೇಲೆ ಒರಗಿ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸತೊಡಗಿದರು. ಮುಂದೆ ಓದಿ….

ಅಂದು ಯುದ್ಧದ ಹದಿಮೂರನೆಯ ದಿನ; ಬೆಳಗಾಗುತ್ತಲೇ ದುರ್ಯೋಧನು ದ್ರೋಣರನ್ನು ನಿಂದಿಸಿದ, “ಆಚಾರ್ಯರೇ! ನಾವೇನು ನಿಮ್ಮ ಶತ್ರುಗಳೇ? ಯುಧಿಷ್ಠಿರನು ನಿನ್ನೆ ಅಷ್ಟು ಹತ್ತಿರವಿದ್ದರೂ ನೀವು ಅವನನ್ನು ಬಂಧಿಸಲಿಲ್ಲ! ನನಗೆ ವರದಾನ ಮಾಡಿ ಹೀಗೆ ಆಶಾಭಂಗ ಮಾಡುವುದು ಸರಿಯಲ್ಲ!”

ದ್ರೋಣರು ಅವನ ಕೊಂಕು ನುಡಿಗಳಿಗೆ ನೊಂದು ಹೇಳಿದರು, ‘ನಾನು ನನ್ನೆಲ್ಲಾ ಶಕ್ತಿಯನ್ನೂ ಬಳಸಿ ಯುದ್ಧ ಮಾಡುತ್ತಿದ್ದೇನೆ! ಆದರೆ ನಾನು ಮೊದಲೇ ಹೇಳಿದಂತೆ ಸಕಲ ಲೋಕಗಳ ಜೀವಿಗಳು ಸೇರಿ ಬಂದರೂ ಅರ್ಜುನನನ್ನು ಎದುರಿಸಲಾಗುವುದಿಲ್ಲ!

ಈ ವಿಶ್ವವನ್ನೇ ಸೃಷ್ಟಿಸಿರುವ ಕೃಷ್ಣನೂ ಅರ್ಜುನನೂ ಎಲ್ಲಿರುವರೋ ಅಲ್ಲಿ ಶಿವನೊಬ್ಬನು ತನ್ನ ಬಲವನ್ನು ತೋರಿಸಿಯಾನಷ್ಟೆ! ಆಗಲಿ…! ಈಗ ನನ್ನ ಪ್ರತಿಜ್ಞೆ ಕೇಳು! ಇಂದು ಒಂದು ಅಭೇದ್ಯ ವ್ಯೂಹ ರಚಿಸಿ ಒಬ್ಬ ಮಹಾರಥನನ್ನು ಬಲಿತೆಗೆದುಕೊಳ್ಳುತ್ತೇನೆ! ಆದರೆ ಅರ್ಜುನನನ್ನು ಮಾತ್ರ ಬೇರೆಡೆಗೆ ಕರೆದೊಯ್ಯಬೇಕು!”

ಅಂತೆಯೇ ಅಂದೂ ಸಂಶಪ್ತಕರು ಅರ್ಜುನನನ್ನು ದೂರ ಕರೆದೊಯ್ದರು. ದ್ರೋಣರು ಸೈನ್ಯವನ್ನು ಅದ್ಭುತವಾದ ಚಕ್ರವ್ಯೂಹದಲ್ಲಿ ನಿಲ್ಲಿಸಿದರು! ಆ ವ್ಯೂಹವನ್ನು ಭೇದಿಸುವುದು ಕೃಷ್ಣಾರ್ಜುನರನ್ನು ಬಿಟ್ಟರೆ ಅರ್ಜುನನ ಪುತ್ರ ಅಭಿಮನ್ಯುವೊಬ್ಬನಿಗೇ ತಿಳಿದದ್ದು. ಆದರೆ ಅವನಿಗೆ ಒಳಗೆ ಹೋಗುವುದು ತಿಳಿದಿತ್ತೇ ವಿನಾ ಹೊರಬರುವುದು ತಿಳಿದಿರಲಿಲ್ಲ.

ಪಾಂಡವರು ಅವನಿಗೆ ಒಳಹೋಗುವಂತೆ ಕೇಳಿಕೊಳ್ಳುತ್ತಾ ಅವನು ಒಳಹೋದಂತೆ ತಾವು ಅವನನ್ನು ಹಿಂಬಾಲಿಸಿ ರಕ್ಷಿಸುವವೆಂದು ಹೇಳಿದರು. ಅದಕ್ಕೆ ಒಪ್ಪಿ ಅಭಿಮನ್ಯುವು ಚಕ್ರವ್ಯೂಹವನ್ನು ಛೇದಿಸಿಕೊಂಡು ಒಳನುಗ್ಗಿದ. ಆದರೆ ಪಾಂಡವರನ್ನು ದ್ವಾರದಲ್ಲೇ ಸಿಂಧೂನರೇಶ ಜಯದ್ರಥ ತಡೆದುಬಿಟ್ಟ! ಇದಕ್ಕೆ ಕಾರಣ, ಅವನಿಗಿದ್ದ ಶಿವವರ!

ಹಿಂದೆ, ಪಾಂಡವರು ವನವಾಸಿಗಳಾಗಿದ್ದಾಗ ಅವನು ದ್ರೌಪದಿಯನ್ನು ಅಪಹರಿಸಿದ್ದ! ಆಗ ಪಾಂಡವರು ಅವನನ್ನು ಹಿಡಿದು ತಲೆಬೋಳಿಸಿ ಅವಮಾನಿಸಿದ್ದರು! ಈ ಅಪಮಾನ ತಾಳಲಾರದೇ ಪಾಂಡವರನ್ನು ಜಯಿಸಬೇಕೆಂಬ ವರಕ್ಕಾಗಿ ಶಿವನನ್ನು ಕುರಿತು ತಪಸ್ಸನ್ನಾಚರಿಸಿದ್ದ. ಆದರೆ ಶಿವನು, ಅರ್ಜುನನೊಬ್ಬನನ್ನು ಬಿಟ್ಟು ಇತರ ಪಾಂಡವರನ್ನು ಒಂದು ದಿನದ ಮಟ್ಟಿಗೆ ಅವನು ಸೋಲಿಸುವನೆಂದು ವರ ನೀಡಿದ್ದ. ಜಯದ್ರಥನು ಆ ವರವನ್ನು ಈಗ ಬಳಸಿಕೊಂಡಿದ್ದ!

ಅಭಿಮನ್ಯುವು ವೀರಾವೇಶದಿ೦ದ ಕಾದಲು, ಕೌರವರು ಅವನನ್ನು ಒಟ್ಟಾಗಿ ಆಕ್ರಮಿಸಿ ಮೋಸದಿಂದ ಕೊಂದುಬಿಟ್ಟರು! ದ್ರೋಣರ ಸೂಚನೆಯಂತೆ ಕರ್ಣನು ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸಿ ಸಾರಥಿಯನ್ನು ಕೊಂದನು! ಆಗ ಅವರು ಅವನ ರಥವನ್ನು ಕುದುರೆಗಳನ್ನೂ ನಾಶಪಡಿಸಿದರು ಇತರ ರಥಿಕರು ಅವನ ಮೇಲೆ ಒಟ್ಟಾಗಿ ಬಾಣಗಳನ್ನು ಸುರಿಸಲು, ದುಃಶಾಸನನ ಮಗನು ಅವನನ್ನು ಕೊಂದನು!

ಇತ್ತ ಅರ್ಜುನನು ಸಂಶಪ್ತಕರನ್ನು ಸೋಲಿಸಿ ಶಿಬಿರಕ್ಕೆ ಹಿಂದಿರುಗುತ್ತಿರಲು, ಅವನ ಮನದಲ್ಲಿ ಒಂದು ರೀತಿಯ ಭೀತಿ, ಅಳುಕು ತುಂಬಲು ಅದನ್ನು ಕೃಷ್ಣನ ಬಳಿ ಹೇಳಿಕೊಂಡನು. ಆಗ ಕೃಷ್ಣ ಅವನಿಗೆ ಧೈರ್ಯ ತುಂಬಿದ, “ನಿನ್ನ ಅಣ್ಣತಮ್ಮಂದಿರು ಕ್ಷೇಮವಾಗಿದ್ದಾರೆ’; ಬೇರೇನೋ ತೊಂದರೆಯಾಗಿರಬೇಕು.”

ಅರ್ಜುನನು ಪಾಳಯಕ್ಕೆ ಬರಲು ರಣವಾದ್ಯಗಳ ದನಿಯಿಲ್ಲದೆ ಅದು ಮಂಕಾಗಿದ್ದುದನ್ನು ನೋಡಿ ಕಳವಳಗೊಂಡ; ತನ್ನನ್ನು ಸ್ವಾಗತಿಸಲು ಮಗ ಅಭಿಮನ್ಯು ಬರದಿದ್ದಾಗ ವಿಷಯವನ್ನರಿತ ಅವನು ಅತ್ಯಂತ ಶೋಕಾವಿಷ್ಟನಾದ; ಒಬ್ಬ ಹುಡುಗನನ್ನು ರಕ್ಷಿಸಲಾಗಲಿಲ್ಲವೆಂದು ಅಣ್ಣತಮ್ಮಂದಿರನ್ನು ಹಳಿದ! ಹುಚ್ಚನಂತೆ ದುಃಖಿಸತೊಡಗಿದ. ಆಗ ಕೃಷ್ಣನು ಅವನನ್ನು ಅಪ್ಪಿಕೊಂಡು ಅವನನ್ನು ಸಂತೈಸಿದ, “ಶೋಕಿಸುತ್ತಾ ಕೂರಬೇಡ ಪಾರ್ಥ! ಅಭಿಮನ್ಯುವು ಶೌರ್ಯದಿಂದ ಕಾದಾಡಿ ವೀರಸ್ವರ್ಗ ಪಡೆದಿದ್ದಾನೆ! ಕ್ಷತ್ರಿಯರಿಗೆ ಇದೇ ಧರ್ಮವೆಂದು ಹೇಳಲ್ಪಟ್ಟಿದೆ!”

ಅರ್ಜುನನು ಅಭಿಮನ್ಯುವು ಸತ್ತ ಬಗೆಯನ್ನು ಕೇಳಬಯಸಲು, ಯುಧಿಷ್ಠಿರನು ಆರು ಮಹಾರಥರು ಒಟ್ಟಾಗಿ ಅಭಿಮನ್ಯುವನ್ನು ಹೇಗೆ ಕೊಂದರು, ಜಯದ್ರಥನು ಹೇಗೆ ರುದ್ರವರಬಲದಿಂದ ತಮ್ಮೆಲ್ಲರನ್ನೂ ತಡೆದ ಎಂದೆಲ್ಲಾ ನಿರೂಪಿಸಲು, ಅರ್ಜುನನ ಕೋಪವೆಲ್ಲಾ ಜಯದ್ರಥನ ಮೇಲೆ ತಿರುಗಿತು!

ಆಗ ಅವನು ಭೀಕರ ಪ್ರತಿಜ್ಞೆಯೊಂದನ್ನು ಮಾಡಿದ, “ನಾಳೆ ಸಂಜೆಯೊಳಗೆ ನಾನು ಜಯದ್ರಥನನ್ನು ಕೊಲ್ಲುತ್ತೇನೆ; ಅವನು ಪಾತಾಳಕ್ಕೆ ಹೋದರು ಬಿಡುವುದಿಲ್ಲ! ಅವನನ್ನು ತಡೆಯಲು ಯಾರೇ ಬಂದರೂ ಅವರನ್ನು ಸಂಹರಿಸುತ್ತೇನೆ! ಒಂದು ವೇಳೆ ಸಂಜೆಯೊಳಗೆ ಅವನನ್ನು ಕೊಲ್ಲದಿದ್ದರೆ ನಾನೇ ಅಗ್ನಿ ಪ್ರವೇಶ ಮಾಡುತ್ತೇನೆ!” ಭೇರಿಕಹಳೆಗಳೂ ಸಿಂಹನಾದಗಳೂ ಮೊಳಗಿದವು!

ಗೂಢಚಾರರ ಮೂಲಕ ಅರ್ಜುನನ ಪ್ರತಿಜ್ಞೆಯನ್ನು ಕೇಳಿ ಜಯದ್ರಥನು ಹೆದರಿ ನಡುಗುತ್ತಾ, ಸಿಂಧೂದೇಶಕ್ಕೆ ಹೊರಟು ಹೋಗುವೆನೆಂದ. ದ್ರೋಣರು ಅವನಿಗೆ ಆಶ್ವಾಸನೆಯಿತ್ತರು, “ನಾಳೆ ನಾನು ಅತ್ಯಂತ ಅಭೇದ್ಯವಾದ ಶಕಟ, ಪದ್ಮವ್ಯೂಹವನ್ನು ರಚಿಸಿ ನಿನಗೆ ಏನೂ ಆಗದಂತೆ ನೋಡಿಕೊಳ್ಳುತ್ತೇನೆ!” ದುರ್ಯೋಧನನೂ ಆಶ್ವಾಸನೆಯಿತ್ತನು.

ಶ್ರೀಕೃಷ್ಣನು ಅರ್ಜುನನನ್ನು ಬಯ್ದನು, “ನನ್ನನ್ನೂ ಕೇಳದೇ ಅಂಥ ಪ್ರತಿಜ್ಞೆ ಮಾಡುವುದೇ? ಹೀಗೆ ದುಡುಕುವುದು ಸರಿಯೇ? ಈಗ ಕೌರವರು ಜಯದ್ರಥನನ್ನು ರಕ್ಷಿಸಿಕೊಳ್ಳಲು ಮಹಾ ಮಹಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ! ನಿನ್ನ ಕಾರ್ಯ ಈಡೇರದಿದ್ದರೆ ನಾವು ನಗೆಪಾಟಲಿಗೀಡಾಗುತ್ತೇವೆ!”

“ಕೃಷ್ಣ! ಆ ಆರು ಮಹಾರಥರು ನನ್ನ ಪರಾಕ್ರಮಕ್ಕೆ ಅರ್ಧದಷ್ಟೂ ಇಲ್ಲ! ನಾಳೆ ಆ ಜಯದ್ರಥನನ್ನು ನಾನು ವಧಿಸುವುದನ್ನು ನೀನೇ ನೋಡುವೆ! ನಾರಾಯಣನಾದ ನೀನೆಲ್ಲಿರುವೆಯೋ ಅಲ್ಲೇ ವಿಜಯ! ನಾಳೆ ಬೆಳಗಾದೊಡನೆ ರಥವನ್ನು ಸಜ್ಜುಗೊಳಿಸು!” ಅರ್ಜುನನು ಶ್ರೀಕೃಷ್ಣನನ್ನೇ ಧ್ಯಾನಿಸುತ್ತಾ ಹೇಳಿ ಗರ್ಜಿಸಿದ!

ಶ್ರೀಕೃಷ್ಣನು ಆಗ ಅರ್ಜುನನಿಂದ ಶಿವಪೂಜೆ ಮಾಡಿಸಿ, ಸುಭದ್ರೆ, ಉತ್ತರೆಯರನ್ನು ಸಮಾಧಾನಪಡಿಸಿ ತನ್ನ ಶಿಬಿರಕ್ಕೆ ಮಲಗಲು ಹೋದ. ಆದರೆ ಮಧ್ಯರಾತ್ರಿಯಾದರೂ ನಿದ್ರೆ ಬಾರದೇ, ತನ್ನ ಸಾರಥಿಯಾದ ದಾರುಕನನ್ನು ಕರೆದ. ದಾರುಕನು ಓಡೋಡಿ ಬರಲು, ಕೃಷ್ಣನು ಅವನಿಗೆ ಹೇಳಿದ, “ದಾರುಕ! ಅರ್ಜುನನು ನಾಳೆ ಸಂಜೆಯೊಳಗೆ ಜಯದ್ರಥನನ್ನು ಕೊಲ್ಲುವೆನೆಂದು ಭೀಕರ ಪ್ರತಿಜ್ಞೆ ಮಾಡಿದ್ದಾನೆ!

ಅತ್ತ ದ್ರೋಣರೂ ಜಯದ್ರಥನಿಗೆ ಅದ್ಭುತ ರಕ್ಷಣೆ ನೀಡುವೆನೆಂದು ಭರವಸೆಯಿತ್ತಿದ್ದಾರೆ! ದ್ರೋಣರಿಂದ ರಕ್ಷಿತನಾದವನನ್ನು ಇಂದ್ರನೂ ಏನೂ ಮಾಡಲಾರ! ಅಯ್ಯಾ ದಾರುಕ, ಅರ್ಜುನನೆಂದರೆ ನನಗೆ ಪ್ರಾಣ…! ನನಗೆ ಪತ್ನಿಯರಾಗಲೀ, ಮಿತ್ರಬಾಂಧವರಾಗಲೀ ಅರ್ಜುನನಷ್ಟು ಪ್ರಿಯರಲ್ಲ! ಅರ್ಜುನನನ್ನು ದ್ವೇಷಿಸುವವರು ನನ್ನನ್ನೂ ದ್ವೇಷಿಸಿದಂತೆ!

ಅವನನ್ನು ಅನುಸರಿಸುವವರು ನನ್ನನ್ನೂ ಅನುಸರಿಸಿದಂತೆ! ಹೆಚ್ಚೇನು ಹೇಳಲಿ ದಾರುಕ, ಅರ್ಜುನನು ನನ್ನ ದೇಹದ ಅರ್ಧ ಭಾಗವಿದ್ದಂತೆ…! ಅರ್ಜುನನಿಲ್ಲದೇ ನಾನೊಂದು ಕ್ಷಣವೂ ಬದುಕಿರಲಾರೆ! ಆದ್ದರಿಂದ ನಾನೊಂದು ನಿಶ್ಚಯ ಮಾಡಿದ್ದೇನೆ! ಅವಶ್ಯ ಬಿದ್ದರೆ ನಾಳೆ ನಾನೇ ಯುದ್ಧ ಮಾಡಿ ಆ ಜಯದ್ರಥನನ್ನು ಸಂಹರಿಸುತ್ತೇನೆ! ದ್ರೋಣ, ಕರ್ಣ ದುರ್ಯೋಧನಸಹಿತವಾದ ಇಡೀ ಕೌರವ ಸೇನೆಯೊಡನೆಯೂ ಭಯಂಕರವಾಗಿ ಕಾದಾಡುತ್ತೇನೆ!

ಆದ್ದರಿಂದ ನಾಳೆ ಮುಂಜಾನೆ ನನ್ನ ರಥವನ್ನು ಚಕ್ರ, ಕೌಮೋದಕೀ ಗದೆ, ಧನುಸ್ಸು, ಬಾಣಗಳು, ಶಕ್ತ್ಯಾಯುಧ, ಮೊದಲಾದ ಎಲ್ಲಾ ಆಯುಧಗಳಿಂದ ತುಂಬಿ ಯಥಾವತ್ತಾಗಿ ಸಜ್ಜುಗೊಳಿಸಿ, ನಮ್ಮ ಕುದುರೆಗಳನ್ನು ಕಟ್ಟಿ ರಣರಂಗಕ್ಕೆ ತೆಗೆದುಕೊಂಡು ಹೋಗು! ನೀನು ಕವಚಧರಿಸಿ ಸಿದ್ಧನಾಗಿದ್ದು, ನನ್ನ ಶಂಖದ ಧ್ವನಿಯನ್ನು ಕೇಳಿದೊಡನೆ ನನ್ನ ಬಳಿಗೆ ಬಂದು ಬಿಡು! ನಾಳೆ ಅರ್ಜುನನಿಗೆ ಜಯವಾಗಲೇಬೇಕು!”

“ಭಗವನ್!’ ದಾರುಕನು ಹೇಳಿದ, “ಅರ್ಜುನನಿಗೆ ಜಯವೆ೦ಬುದು ಸದಾ ಸಿದ್ಧ! ಯಾರಿಗೆ ನೀನೇ ಸಾರಥಿಯೋ ಅವನಿಗೆ ಅಪಜಯವೆಲ್ಲಿಯದು? ಆದರೂ ನೀನು ಹೇಳಿದಂತೆಯೇ ಮಾಡುವೆ!”

ಭಕ್ತರು ಭಗವಂತನ ಹೃದಯ; ಭಗವಂತನು ಭಕ್ತರಿಗೆ ಹೃದಯ! ತೊಂಡರಿಗೆ ತೊಂಡನೆಂಬಂತೆ, ಹೂ ತರುವವರ ಮನೆಗೆ ಹುಲ್ಲು ತರುವ ಭಗವಂತನು ತನ್ನ ಸೇವಕರಿಗೇ ಸೇವಕ! ಭಕ್ತರಿಗಿಂತಲೂ ಇನ್ನಾರೂ ಹೆಚ್ಚಿಲ್ಲದ ಭಗವಂತನು, ಒಬ್ಬಭಕ್ತನು ಕೂಗಿದ ಕೂಡಲೇ ಕಂಬದಲ್ಲಿ ಪ್ರತ್ಯಕ್ಷನಾದ ಆನೆಯ ರೂಪದ ಇನ್ನೊಬ್ಬ ಭಕ್ತನು ಮೊಸಳೆಗೆ ಸಿಕ್ಕಿ ನೋವಿನಿಂದ ಮೊರೆಯಿಟ್ಟ ಕೂಡಲೇ, ಸಿರಿಯೊಂದಿಗೆ ಸರಸದಲ್ಲಿದ್ದರೂ ಓಡೋಡಿ ಬಂದ!

ಮಾನಾಪಹರಣಕ್ಕೊಳಗಾಗುತ್ತಿದ್ದ ಭಕ್ತಿಯೊಬ್ಬಳು ಆರ್ತಳಾಗಿ ಬೇಡಲು, ಯುದ್ಧದಲ್ಲಿ ತೊಡಗಿದ್ದರೂ ಅಕ್ಷಯ ವಸ್ತ್ರ ಪ್ರದಾನ ಮಾಡಿದ! ಈಗ ಮಿತ್ರರೂಪದ ಭಕ್ತನಾದ ಅರ್ಜುನನನ್ನು ಹೆಜ್ಜೆಹೆಜ್ಜೆಗೂ ರಕ್ಷಿಸುವ ಮುತುವರ್ಜಿ ಹೊತ್ತಿದ್ದ!

ಭಗವಂತನು ಮತ್ತೊಂದು ಪವಾಡ ಮಾಡಿದ!

ಅಂದು ರಾತ್ರಿ ಅರ್ಜುನನು ಮಗನನ್ನೇ ಕುರಿತು ಚಿಂತಿಸುತ್ತಾ ನಿದ್ರೆ ಹೋದನು. ಆಗ ಅವನಿಗೆ ಒಂದು ಕನಸು ಬಿತ್ತು! ಆ ಕನಸಿನಲ್ಲಿ ಶ್ರೀಕೃಷ್ಣನು ಅವನ ಬಳಿಗೆ ಆಗಮಿಸಲು, ಜಾಗ್ರತಾವಸ್ಥೆಯಲ್ಲಿ ಅವನು ಭಕ್ತಿಯಿಂದ ಕೈಮುಗಿದು ಸ್ವಾಗತಿಸುವಂತೆ ಸ್ವಪ್ನದಲ್ಲಿಯೂ ಮಾಡಿ ಕೃಷ್ಣನಿಗೆ ಒಂದು ಆಸನವನ್ನರ್ಪಿಸಿ ತಾನು ವಿನಿತನಾಗಿಯೇ ನಿಂತನು.

ಅರ್ಜುನನು ಶೋಕದಿಂದ ಕೂಡಿದ್ದುದನ್ನು ಗಮನಿಸಿ ಕೃಷ್ಣನು ಕೇಳಿದನು, “ಪಾರ್ಥ! ಏಕಿಷ್ಟು ಶೋಕಪೂರಿತನಾಗಿರುವೆ? ಕಾಲವನ್ನು ಯಾರಿಂದಲೂ ತಡೆಯಲಾಗದು! ಅದು ಎಲ್ಲಾ ಜೀವಿಗಳನ್ನೂ ಭಗವಂತನ ನಿಯಮದಂತೆ ನಡೆಸುವುದು! ಶೋಕವು ನೀನು ಮಾಡಬೇಕಾಗಿರುವ ಕಾರ್ಯವನ್ನು ನಾಶಪಡಿಸಿ ನಿನಗೇ ಶತ್ರುವಾಗುತ್ತದೆ! ಆದರಿಂದ ಶತ್ರುಗಳು ಸಂತೋಷಿಸುತ್ತಾರೆ!”

“ಕೃಷ್ಣ!” ಅರ್ಜುನನು ಹೇಳಿದನು, “ನಾಳೆಯೇ ನಾನು ಜಯದ್ರಥನನ್ನು ಸೂರ್ಯಾಸ್ತಮವಾಗುವುದರೊಳಗೆ ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ಆದರೆ ಕೌರವರು ದ್ರೋಣಾಚಾರ್ಯರ ಮಾರ್ಗದರ್ಶನದಲ್ಲಿ ಮಹಾರಥರ ಸಹಾಯದಿಂದ ಜಯದ್ರಥನನ್ನು ಕೋಟೆಯಂತೆ ಸುತ್ತುವರಿದು ರಕ್ಷಿಸುತ್ತಾರೆ. ಹೀಗಿರುವಾಗ ಅವನನ್ನು ಸಮೀಪಿಸುವಾದರೂ ಎಂತು?! ಈಗೀಗ ಸೂರ್ಯನೂ ಬೇಗನೆ ಅಸ್ತಮಿಸುತ್ತಿದ್ದಾನೆ! ಜಯದ್ರಥನನ್ನು ವಧಿಸದಿದ್ದರೆ ನಾನು ಜೀವಿಸಿರಲಾರೆ…”

“ಅರ್ಜುನ!” ಶ್ರೀಕೃಷ್ಣನು ಹೇಳಿದ, “ಪಾಶುಪತವೆಂಬ ಒಂದು ಮಹಾಸ್ತ್ರವಿದೆ! ಹಿಂದೆ, ಮಹಾದೇವನಾದ ಪರಶಿವನು ಈ ಅಸ್ತ್ರದಿಂದಲೇ ಅನೇಕ ದೈತ್ಯರನ್ನು ಸಂಹರಿಸಿದನು. ನೀನೂ ಇದನ್ನು ವನವಾಸ ಕಾಲದಲ್ಲಿ ಶಿವನಿಂದಲೇ ಪಡೆದಿದ್ದೆ. ಈಗ ಅದು ನಿನ್ನ ಸ್ಮೃತಿಯಲ್ಲಿದ್ದರೆ ನಾಳೆ ನೀನು ಖಂಡಿತವಾಗಿಯೂ ಜಯದ್ರಥನನ್ನು ಕೊಲ್ಲುವೆ! ಒಂದು ವೇಳೆ ಅದು ನಿನ್ನ ಸ್ಮೃತಿಯಲ್ಲಿಲ್ಲದಿದ್ದರೆ ಈಗಲೇ ಪರಶಿವನನ್ನು ಧ್ಯಾನಿಸುತ್ತಾ ಕೂರು; ಅವನ ಪ್ರಸಾದದಿಂದ ನೀನು ಅದನ್ನು ಪುನಃ ಪಡೆದುಕೊಳ್ಳುವೆ.”

ಅರ್ಜುನನ ಸ್ಮೃತಿಯಲ್ಲಿ ಈಗ ಪಾಶುಪತಾಸ್ತ್ರದ ಮಂತ್ರವಿರಲಿಲ್ಲ. ಆದ್ದರಿಂದ ಅವನು ಶ್ರೀಕೃಷ್ಣನು ಹೇಳಿದಂತೆ ನೆಲದ ಮೇಲೆಯೇ ಕುಳಿತು ಶಿವನನ್ನು ಧ್ಯಾನಿಸತೊಡಗಿದನು. ಆಗ ಅವನು ಮನಸ್ಸಿನ ಮೂಲಕವೇ ಶ್ರೀ ಕೃಷ್ಣನೊಡನೆ ಆಕಾಶದಲ್ಲಿ ಹೋಗತೊಡಗಿದನು! ಹಾಗೆ ಅವರಿಬ್ಬರೂ ವೇಗವಾಗಿ ಆಕಾಶದಲ್ಲಿ ಸಂಚರಿಸುತ್ತಾ ಕೈಲಾಸಕ್ಕೆ ಹೋದರು!

ಅಲ್ಲಿ ಅವರು ಪ್ರಮಥಗಣಗಳಿಂದಲೂ ಮಹರ್ಷಿಗಳಿಂದಲೂ ಸ್ತುತಿಸಲ್ಪಡುತ್ತಿದ್ದ ಪರಶಿವನನ್ನು ಕಂಡು ಅವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಭಕ್ತಿಯಿಂದ ಸ್ತುತಿಸಿದರು. ಶಿವನು ಪ್ರಸನ್ನನಾಗಿ ಅವರಿಬ್ಬರನ್ನೂ ಸ್ವಾಗತಿಸುತ್ತಾ ಕೇಳಿದನು, “ನರ ಶ್ರೇಷ್ಠರೇ! ನಿಮಗೆ ಸ್ವಾಗತ! ಯಾವ ಕಾರ್ಯಸಾಧನೆಗಾಗಿ ನೀವಿಲ್ಲಿ ಬಂದಿರುವಿರಿ? ನೀವು ಏನೇ ವರ ಬೇಡಿದರೂ ನಾನು ನಿಮಗೆ ನೀಡುತ್ತೇನೆ!”

ಆಗ ಅರ್ಜುನನು ಮನದಲ್ಲೇ ಶಿವ, ಕೇಶವರಿಬ್ಬರನ್ನೂ ಧ್ಯಾನಿಸುತ್ತಾ ಕೇಳಿದನು, “ಮಹಾದೇವ! ನಿನ್ನಿಂದ ನಾನು ಪಾಶುಪತವೆಂಬ ದಿವ್ಯಾಸ್ತ್ರವನ್ನು ಪಡೆಯಲಿಚ್ಛಿಸುತ್ತೇನೆ”

‘ಖಂಡಿತವಾಗಿಯೂ ನಾನದನ್ನು ನಿಮಗೆ ನೀಡುತ್ತೇನೆ. ಅನತಿದೂರದಲ್ಲಿಯೇ ಒಂದು ದಿವ್ಯ ಸರೋವರವಿದೆ. ನಾನು ದೈತ್ಯರನ್ನು ಸಂಹರಿಸಲು ಬಳಸಿದ ಧನುರ್ಬಾಣಗಳು ಅಲ್ಲಿವೆ ಅವನ್ನು ತೆಗೆದುಕೊಂಡು ಬನ್ನಿ!” ಶಿವನು ಹೇಳಿದನು.

ಕೃಷ್ಣಾರ್ಜುನರು ಆ ಸರೋವರಕ್ಕೆ ಹೋಗಲು ಅದರಲ್ಲಿ ಸಾವಿರ ಹೆಡೆಗಳ ಎರಡು ಸರ್ಪಗಳಿದ್ದವು! ಶತರುದ್ರೀಯವನ್ನು ಪಠಿಸುತ್ತಾ ಅವರು ಆ ಸರ್ಪಗಳನ್ನು ಹಿಡಿಯಲು ಅವು ಧನುರ್ಬಾಣಗಳಾದವು. ಇಬ್ಬರೂ ಆ ಧನುರ್ಬಾಣಗಳನ್ನೆತ್ತಿಕೊಂಡು ಬಂದು ಶಿವನಿಗೆ ನೀಡಿದರು.

ಆಗ ಶಿವನ ಪಾರ್ಶ್ವದಿಂದ ಬ್ರಹ್ಮಚಾರಿಯೊಬ್ಬನು ಹೊರಬಂದು ವಿಶೇಷ ರೀತಿಯಲ್ಲಿ ನಿಂತು ಧನುಸ್ಸಿನ ಶಿಂಜಿನಿಯನ್ನು ಬಾಣದೊಡನೆ ಸೆಳೆದನು. ಇದನ್ನೆಲ್ಲಾ ಅರ್ಜುನನು ನೋಡಿಕೊಂಡನು. ಆನಂತರ ಶಿವನು ಅರ್ಜುನನಿಗೆ ಆ ಪಾಶುಪತಾಸ್ತ್ರವನ್ನು ನೀಡಿ ಅದರ ಮಂತ್ರವನ್ನು ಉಪದೇಶಿಸಿದನು. ಕೃಷ್ಣಾರ್ಜುನರಿಬ್ಬರೂ ಸಂತೋಷಗೊಂಡು ಶಿವನಿಗೆ ಪುನಃ ತಲೆಬಾಗಿ ನಮಿಸಿ ಹಿಂದಿರುಗಿದರು.

ಅರ್ಜುನನು ಈಗಾಗಲೇ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದಿದ್ದರೂ ವನವಾಸ, ಅಜ್ಞಾತವಾಸಗಳ ಜಂಜಾಟದಲ್ಲಿ ಯುದ್ಧಗಳ ಭರಾಟೆಯಲ್ಲಿ ಅದನ್ನು ಮರೆತುಬಿಟ್ಟಿದ್ದನ್ನು! ಆದ್ದರಿಂದ ಭಗವಾನ್ ಕೃಷ್ಣನು, ಅವನು ಅದನ್ನು ಪುನಃ ಪಡೆದುಕೊಳ್ಳಲು ಹೀಗೆ ಅನುಗ್ರಹಿಸಬೇಕಾಯಿತು. ಯಾವ ದೇವತೆಯೇ ಏನೇ ವರ ನೀಡಿದರೂ ಅದು ಸಫಲಗೊಳ್ಳಲು ಸರ್ವದೇವೋತ್ತಮ ಪುರುಷನ ಅನುಗ್ರಹವಿರಬೇಕು.

ವಾಸ್ತವವಾಗಿ ಅವನೇ ಎಲ್ಲ ದೇವತೆಗಳ ಮೂಲಕ ವಾಂಛಿತ ಅಭೀಷ್ಟಗಳನ್ನು ನೆರವೇರಿಸುವನು. ಆ ದೇವತೆಗಳನ್ನು ಅವನೇ ನಿಯಮಿಸಿರುವುದರಿಂದ ಅವನೂ ಅವರಿಗೆ ನಮಿಸುವನು. ಹೀಗೆ ಮಾಡಿ ಅವನು ಲೋಕಕ್ಕೆ ಶಿಕ್ಷಣ ನೀಡುವನು.

ಶ್ರೀಕೃಷ್ಣನು ಯಾರಲ್ಲಾದರೂ ಪ್ರಸನ್ನಗೊಂಡರೆ ಸಕಲ ದೇವತೆಗಳೂ ಅವನಲ್ಲಿ ಪ್ರಸನ್ನರಾಗುವರು. ಆದರೆ ಶ್ರೀಕೃಷ್ಣನು ಯಾರಲ್ಲಾದರೂ ಅಪ್ರಸನ್ನನಾದರೆ, ದೇವತೆಗಳೂ ಅವನನ್ನು ಕಾಪಾಡಲಾರರು!

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi