ನೀವು ನಿಮ್ಮ ದೇಹದ ಯಜಮಾನರೆ?

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಹಾಗೂ ಅವರ ಕೆಲವು ಶಿಷ್ಯರ ನಡುವೆ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಂಭಾಷಣೆ. ಪ್ರಭುಪಾದರ ಬೆಳಗಿನ ವಾಯುವಿಹಾರದ ವೇಳೆ ಪೆಸಿಫಿಕ್ ತೀರದಲ್ಲಿ ಮಾತುಕತೆ ನಡೆದದ್ದು 1973ರ ಡಿಸೆಂಬರ್‌ ತಿಂಗಳ 13ನೇ ತಾರೀಖಿನಂದು.

ಶ್ರೀಲ ಪ್ರಭುಪಾದ: (ಮೊದಲ ಭಕ್ತನಿಗೆ) ಹಾಗಾದರೆ, ನೀವು ನಿಮ್ಮ ದೇಹದ ಯಜಮಾನರೇ?

ಎರಡನೆಯ ಭಕ್ತ: (ಇವರೂ ಮೊದಲ ಭಕ್ತನನ್ನೇ ಉದ್ದೇಶಿಸಿ) ತಿಂದದ್ದನ್ನು ಹೇಗೆ ಜೀರ್ಣಿಸಿಕೊಳ್ಳಬೇಕು. ಅಂತ ಹೊಟ್ಟೆಗೆ ಹೇಳುತ್ತೀರಾ? ಹೇಗೆ ಬೆಳೆಯಬೇಕೆಂದು ಕೂದಲಿಗೆ ಹೇಳುತ್ತೀರಾ?

ಶ್ರೀಲ ಪ್ರಭುಪಾದ: ಇಲ್ಲ, ನೀವು ಹೇಳುತ್ತಿಲ್ಲ.

ಮೊದಲ ಭಕ್ತ: ಹೇಳುತ್ತಿಲ್ಲ. ಆದರೆ ಚೇತನಾತ್ಮದ ನನಗೂ ಹಾಗೂ ನನ್ನ ದೇಹದ ಜೀವಕೋಶಗಳಲ್ಲಿ ವಾಸಿಸುತ್ತಿರುವ ಅಸಂಖ್ಯಾತ ಆತ್ಮಗಳಿಗೂ ಏನೋ ಸಂಬಂಧವಿರಬೇಕೆಂದೇ ನನಗೆ ಇನ್ನೂ ಅನಿಸುತ್ತದೆ.

ಶ್ರೀಲ ಪ್ರಭುಪಾದ: ಎಲ್ಲೇ ನೋಡಿ, ಇತರ ಆತ್ಮಗಳಿಗೂ ನಮಗೂ ಅಷ್ಟಿಷ್ಟು ಸಂಬಂಧ ಇದ್ದೇ ಇದೆ. ಈ ಸಂಬಂಧ ಈಗಾಗಲೇ ಇರುವಂತಹದು. ಉದಾಹರಣೆಗೆ ನಾನು ಮರಳ ಮೇಲೆ ನಡೆಯುತ್ತಿದ್ದೇನೆ. ಆದ್ದರಿಂದ ಅದರ ಜೊತೆ ನನಗೆ ಒಂದು ಸ್ವಲ್ಪ ಸಂಬಂಧವಿದೆ. ಹೀಗೆ ಇತರರೊಂದಿಗೆ ಸಂಬಂಧ ಈಗಾಗಲೇ ಇದ್ದದ್ದು.

ನೀವು ಈಗಾಗಲೇ ಅದರೊಂದಿಗೆ ಮಿಳಿತರಾಗಿದ್ದೀರಿ. ಆದರೆ ಈ ಆಗಾಧ ಜಗತ್ತಿನ ಸಂದರ್ಭದಲ್ಲಿ ಇಷ್ಟೊಂದು ಆತ್ಮಗಳು ಇಲ್ಲಿರುವಾಗ, ಬಹು ಮುಖ್ಯವಾದ ಸಂಬಂಧ ಯಾವುದು? ಈ ಕುರಿತು ಜ್ಞಾನ ಬೇಕಾಗಿದೆ. ಈ ಅಸಂಖ್ಯಾತ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಬಹುಮುಖ್ಯವಾದ ಸಂಬಂಧವೆಂದರೆ ದೇವರೊಂದಿಗೆ ಸಂಬಂಧ.

ಮೊದಲ ಭಕ್ತ: ಆದರೆ, ಶ್ರೀಲ ಪ್ರಭುಪಾದರೆ, ನನ್ನ ಈಗಿನ ಐಹಿಕ ದೇಹದಲ್ಲಿನ ಜೀವಕೋಶಗಳು ಕೆಲಸ ಮಾಡದಿದ್ದ ಪಕ್ಷದಲ್ಲಿ ‘ನಾನು’ – ಎಂದರೆ – ನನ್ನ ಆತ್ಮ – ಹೊರಟು ಹೋಗುತ್ತದೆ. ಆದ್ದರಿಂದ ಈ ನಿರ್ದಿಷ್ಟ ಸಂಬಂಧವೂ ಬಹು ಮುಖ್ಯವಾದದ್ದು ಎಂದು ನನಗೆ ತೋರುತ್ತದೆ.

ಶ್ರೀಲ ಪ್ರಭುಪಾದ: ಜೀವಕೋಶಗಳು ಕೆಲಸ ಮಾಡುತ್ತಿವೆಯಾದ್ದರಿಂದ ಆತ್ಮವು ಬದುಕಿದೆ ಎಂಬುದು ನಿಮ್ಮ ವಿಚಾರ ಸರಣಿ ಅಷ್ಟೆ ಅದು ನಿಮ್ಮ ಸಿದ್ಧಾಂತ. ಆದರೆ ನಮ್ಮ ಸಿದ್ಧಾಂತ ಯಾವುದೆಂದರೆ ಈ ಬಗ್ಗೆ ವೇದಗಳು ಏನನ್ನುತ್ತವೆ ಎಂಬುದು. ವೈದಿಕ ಗ್ರಹಿಕೆಯ ಪ್ರಕಾರ ದೇಹದೊಳಗೆ ಆತ್ಮವು ಇರುವುದರಿಂದ ಜೀವಕೋಶಗಳು ಕೆಲಸ ಮಾಡುತ್ತಿವೆ. ಇದು ನಮ್ಮ ಸಿದ್ಧಾಂತ. ಆತ್ಮ ಇದೆ. ಮತ್ತು ಅದು ಇರುವುದರಿ೦ದ ಜೀವಕೋಶಗಳು ಕಾರ್ಯಮಾಡುತ್ತಿವೆ. ಇದನ್ನೆಲ್ಲಾ ನಾನು ಈಗಾಗಲೇ ವಿವರಿಸಿದ್ದೇನೆ.

ವಿಜ್ಞಾನಿಗಳಿಗೆ ನಾನೊಂದು ಮಾತು ಹೇಳುತ್ತೇನೆ. “ಈ ದೇಹ ಪರಿಣಾಮ’, ಆದರೆ ನೀವು ಪರಿಣಾಮವು ಆದ ಈ ದೇಹವನ್ನು ಕಾರಣ ಎಂದು ಬಗೆದಿದ್ದೀರಿ. ಆತ್ಮದ ಇರುವಿಕೆ ಪರಿಣಾಮ ಎಂದುಕೊಂಡಿದ್ದೀರಿ. ಈ ತಪ್ಪು ಗ್ರಹಿಕೆ ನಿಮಗಿರುವ ಅಲ್ಪ ಜ್ಞಾನದಿಂದ ಉಂಟಾದುದು. ನೀವು ಮಾಯೆಯಲ್ಲಿದ್ದೀರಿ.

ಎರಡನೆಯ ಭಕ್ತ: ಆದರೆ ಶ್ರೀಲ ಪ್ರಭುಪಾದರೆ, ನುರಿತ ವೈದ್ಯಕೀಯ ವಿಜ್ಞಾನಿಗಳು ತೀರ ಜ್ಞಾನಶೂನ್ಯರು ಎನ್ನುವ ಹಾಗೇನೂ ಕಾಣುವುದಿಲ್ಲ. ಉದಾಹರಣೆ ಅವರು ಒಬ್ಬನನ್ನು ಪರೀಕ್ಷಿಸಿ, ‘ಈ ವ್ಯಕ್ತಿಗೆ ರಕ್ತ ಸಂಬಂಧಿತ ಕಾಯಿಲೆ ಇದೆ. ಈತ ಇನ್ನು ಆರು ತಿಂಗಳಲ್ಲಿ ಸಾಯುತ್ತಾನೆ” ಎಂದು ಹೇಳಬಲ್ಲರು.

ಶ್ರೀಲ ಪ್ರಭುಪಾದ: ಅದು ವಾಸ್ತವ ಜ್ಞಾನವಲ್ಲ. ಅದೇನಿದ್ದರೂ ಕೇವಲ ಅನುಭವ. ಈಗ ನಾವು ಸಮುದ್ರತೀರಕ್ಕೆ ಸಮಾನಾಂತರವಾಗಿ ನಡೆಯುತ್ತಿದ್ದೇವೆ. “ನೀವು ಸಮುದ್ರ ತೀರಕ್ಕೆ ಸಮಾನಾಂತರವಾಗಿ ನಡೆಯುವುದನ್ನು ಬಿಟ್ಟು ತೊಂಬತ್ತು ಡಿಗ್ರಿ ನೇರವಾಗಿ ಸಮುದ್ರಕ್ಕೆ ಅಭಿಮುಖವಾಗಿ ನಡೆದರೆ ನೀರು ನಿಮ್ಮನ್ನು ನುಂಗಿ ಹಾಕುತ್ತದೆ” ಎಂದು ಹೇಳಿದರೆ ಅದು ಅದ್ಭುತವಾದ ವೈಜ್ಞಾನಿಕ ತಿಳಿವು ಆಗಿಬಿಟ್ಟಿತೆ? (ನಗು)

ಆ ಹೆಸರಿಗೆ ಮಾತ್ರದ ಜ್ಞಾನ ಕೇವಲ ಅನುಭವ, ಅಷ್ಟೆ ಅದು ಅದ್ಭುತವಾದದ್ದೆಂದು ನೀವೇಕೆ ಭಾವಿಸುತ್ತೀರಿ? ಸಮುದ್ರ ತೀರಕ್ಕೆ ಸಮಾನಾಂತರವಾಗಿ ಅಲ್ಲದೆ ಸಮುದ್ರದ ಅಲೆಗಳಿಗೆ ಎದುರಾಗಿ ನೂರು ಅಡಿ ನಡೆದರೆ ನೀರು ನಿಮ್ಮನ್ನು ನುಂಗಿಹಾಕುತ್ತದೆ ಎಂದು ಈತ ಹೇಳಿದ.

ಈಗ ನನ್ನನ್ನು ನೀರು ನುಂಗಿ ಹಾಕಿತು!” ಅದು ದೊಡ್ಡ ಜ್ಞಾನ ಎನ್ನುವುದು ನಿಮ್ಮ ಹೆಡ್ಡತನ. ಯಾವ ಮೂರ್ಖನೂ ಇಂತಹ ಹೇಳಿಕೆಗಳನ್ನು ಕೊಡಬಲ್ಲ ಅವನಿಗೆ ಸ್ವಲ್ಪ ಅನುಭವವಿರಬೇಕು, ಅಷ್ಟೆ, ಈ ‘ಜ್ಞಾನ’ ಅದ್ಭುತವಾದದ್ದೇನೂ ಅಲ್ಲ. ಇದನ್ನು ಹೇಳಿದ ಮೂರ್ಖ ಏನನ್ನೂ ಸೃಷ್ಟಿಸಿಲ್ಲ. ಅವನಿಗೆ ಸ್ವಲ್ಪ ಅನುಭವ ಇದೆ, ಅಷ್ಟೆ.

ಎರಡನೆಯ ಭಕ್ತ: ಸರಿ, “ನಮಗೆ ಯಾವ ವಿಷಯದ ಬಗೆಗಾಗಲಿ ನಿರ್ದಿಷ್ಟ ಜ್ಞಾನ ಇಲ್ಲ. ನಮಗಿರುವುದು ಬರೀ ಅನುಭವ. ಇಂಥದನ್ನು ಪ್ರಯತ್ನಿಸಿದರೆ ಫಲ ಇಂಥದು ಬರುತ್ತದೆ. ಇನ್ನೊಂದು ಮಾಡಿದರೆ ಇನ್ನೊಂದು ಫಲ ಬರುತ್ತದೆ ಎಂಬ ಅನುಭವ ಅಷ್ಟೆ. ನಿಮಗೆಷ್ಟು ಬೇಕೋ ಅಷ್ಟು ನಗಿ. ಆದರೆ ಒಬ್ಬ ವ್ಯಕ್ತಿಗೆ ಅವನ ರಕ್ತದ ಕಾಯಿಲೆಯನ್ನು ಗುಣಪಡಿಸುವ ಔಷಧವನ್ನು ನಾವು ನೀಡಿದಾಗ ನೀವು ನಗುವುದಿಲ್ಲ” ಎಂದು ವಿಜ್ಞಾನಿಗಳು ಹೇಳಬಹುದಾಗಿದೆ.

ಶ್ರೀಲ ಪ್ರಭುಪಾದ: ಬಹಳ ವರ್ಷಗಳ ಹಿಂದಿನ ಮಾತು. ಒಂದು ದಿನ ಒಬ್ಬ ವೈದ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿಹೋಕನೊಬ್ಬನು ಕೆಮ್ಮುತ್ತಿದ್ದುದನ್ನು ಕಂಡ. ಆಗ ವೈದ್ಯ ದಾರಿ ಹೋಕನನ್ನು ಕುರಿತು, “ನನ್ನಲಿಗೆ ಬಾ. ಎಲ್ಲಿಗೆ ಹೊರಟಿರುವೆ?” ಎಂದ.

ದಾರಿಹೋಕ ಒಬ್ಬ ರೈತನಾಗಿದ್ದ. “ಹೊಲಕ್ಕೆ ಹೊರಟಿದ್ದೇನೆ” ಎಂದು ಅವನು ಉತ್ತರ ಕೊಟ್ಟ.

ವೈದ್ಯ ಹೇಳಿದ: “ನೀನೀಗ ಹೊಲಕ್ಕೆ ಹೋಗಬೇಡ. ಮನೆಗೆ ಹಿಂತಿರುಗುವುದು ಒಳ್ಳೆಯದು.”

ವೈದ್ಯನಿಗೆ ಊರಿನಲ್ಲಿ ತುಂಬ ಮರ್ಯಾದೆ ಇತ್ತು. ಅವನ ಮಾತು ಕೇಳಿ ರೈತ ಮನೆಗೆ ಹೊರಟುಹೋದ.

ಆ ವೈದ್ಯನ ವಿದ್ಯಾರ್ಥಿಗಳು ಅವನನ್ನು ಕೇಳಿದರು: ‘ಮನೆಗೆ ಹಿಂತಿರುಗೆಂದು ನೀವು ಆ ರೈತನಿಗೆ ಹೇಳಿದ್ದೇಕೆ?”

ವೈದ್ಯ ತನ್ನ ವಿದ್ಯಾರ್ಥಿಗಳನ್ನು ಛೇಡಿಸಿದ: “ಆ ಮನುಷ್ಯ ಒಂದು ತರಹ ಕೆಟ್ಟ ಶಬ್ದ ಹೊರಡಿಸುತ್ತ ಕೆಮ್ಮುತ್ತಿದ್ದುದನ್ನು ನೀವು ನೋಡಲಿಲ್ಲವೆ? ಅವನು ಇನ್ನು ಎಂಟು ಗಂಟೆಗಳಲ್ಲಿ ಸತ್ತುಹೋಗುತ್ತಾನೆ.”

ವಾಸ್ತವವಾಗಿ ಆ ವೈದ್ಯನ ಜ್ಞಾನ ಎನ್ನುವುದು ಕೇವಲ ಅನುಭವ. ವೈದ್ಯನ ವಿದ್ಯಾರ್ಥಿಗಳು ರೈತನ ಅವಸ್ಥೆಯನ್ನು ವರ್ಣಿಸುತ್ತಿದ್ದ ಕೆಮ್ಮನ್ನು ಗಮನಿಸಿರಲಿಲ್ಲ.

ಈ ರೀತಿ ಶಬ್ದ ಹೊರಡಿಸುತ್ತ ಕೆಮ್ಮುವುದು ಇಂತಿಷ್ಟು ಹೊತ್ತಿಗೆ ಹಾಗೆ ಕೆಮ್ಮುವ ವ್ಯಕ್ತಿ ಸಾಯುತ್ತಾನೆಂಬುದರ ಗುರುತು ಎಂದು ವಿದ್ಯಾರ್ಥಿಗಳಿಗೆ ವೈದ್ಯ ವಿವರಿಸಿದ.

ಹೌದು. ಕವಿರಾಜ-ಪಂಡಿತ ವೈದ್ಯ – ಇಂಥ ಕೆಲಸಗಳನ್ನೇ ಚೆನ್ನಾಗಿ ಮಾಡುವುದು. ತಮ್ಮ ತಂದೆಗೆ ಕಾಯಿಲೆಯಾಗಿದ್ದಾಗ ಕವಿರಾಜರು, “ಈಗ ನೀನು ಅದೇನೇನು ಶಾಸ್ತ್ರಗಳಿವೆಯೋ ಅವನ್ನೆಲ್ಲಾ ಮಾಡಿಬಿಡಿ. ಈ ಮನುಷ್ಯ ಬೆಳಗಾಗುವ ವೇಳೆಗೆ ಸಾಯುತ್ತಾನೆ’ ಎಂದು ಇದೇ ಮಾತನ್ನು ಹೇಳಿದರು.

ಅದು ಹಾಗೆಯೇ ಆಯಿತು ಕೂಡ. ಈ ವಿಚಾರವನ್ನು ಕವಿರಾಜವೈದ್ಯರು – ಹೇಳಿದ್ದು ರಾತ್ರಿ ಹತ್ತು ಅಥವಾ ಹನ್ನೊಂದು ಘಂಟೆಯ ಸುಮಾರಿನಲ್ಲಿ ಮತ್ತು ಆತ ಖಚಿತವಾಗಿ, ”ಬೆಳಗಾಗುವುದರ ಒಳಗಾಗಿ ಈತ ಸಾಯುತ್ತಾರೆ” ಎಂದು ಹೇಳಿದ್ದರು.

ಇಷ್ಟೆಲ್ಲ ಆದರೂ ವೈದ್ಯನದು ಬರೀ ಅನುಭವ ಅಷ್ಟೆ. “ಈ ಹೊತ್ತು ಡಿಸೆಂಬರ್ ತಿಂಗಳ ಹದಿಮೂರನೆಯ ತಾರೀಖು. ಇನ್ನು ಹದಿನೆಂಟು ದಿನ ಕಳೆದರೆ ನಾವು ಜನವರಿ ತಿಂಗಳಿಗೆ ಹೋಗುತ್ತೇವೆ’ ಎಂದು ನೀವು ಹೇಳಿದರೆ ನೀವು ಇದನ್ನು ಹೇಗೆ ಹೇಳಿದಿರಿ, ಭವಿಷ್ಯ ನಿಮಗೆ ಹೇಗೆ ಗೊತ್ತಾಯಿತು ಎಂಬುದು ಒಂದು ಸಣ್ಣ ಮಗುವಿಗೆ ಮಾತ್ರ ಅರ್ಥವಾಗದಿರಬಹುದು.

“ಇವತ್ತಿನಿಂದ ಸರಿಯಾಗಿ ಹದಿನೆಂಟು ದಿನಗಳ ಬಳಿಕ ಜನವರಿ ಬರುತ್ತದೆ ಅಂತ ಅಪ್ಪ ಹೇಳಿದರಲ್ಲ, ಇದು ಹೇಗೆ?” ಎಂದು ಆ ಕೂಸು ಬೆರಗಾಗಬಹುದು. ಆದರೆ ಹೆಚ್ಚು ವಿಸ್ತಾರ ಅನುಭವದ ಕಾರಣದಿಂದಾಗಿಯೇ ನೀವು “ಹದಿನೆಂಟು ದಿನಗಳ ತರುವಾಯ ಜನವರಿ ಬರುತ್ತದೆ” ಎಂದು ಹೇಳಬಹುದು.

ನಮಗೆ ತಿಳಿದಿರುವುದೆಲ್ಲ ಅನುಭವವೇ ಮತ್ತು ಪರಮೋನ್ನತ ಅನುಭವವೆಂದರೆ ಕೃಷ್ಣ. ಆದ್ದರಿಂದ ನಾವು ನಮ್ಮ ಅನುಭವವನ್ನು ಅವನಿಂದ ಸ್ವೀಕರಿಸಿದರೆ ಆಗ ನಮ್ಮ ಅನುಭವ ಪರಿಪೂರ್ಣ. ಇದನ್ನೇ ನಾವು ಹೇಳುತ್ತಿರುವುದು.

ಮೊದಲ ಭಕ್ತ: ಹೇಗೇ ಆಗಲಿ ಶ್ರೀಲ ಪ್ರಭುಪಾದ, ಒಂದು ಅರ್ಥದಲ್ಲಿ ನಾನು ನನ್ನ ದೇಹದ ಯಜಮಾನ ಎಂದೇ ಅನುಭವ ಹೇಳುತ್ತಿರುವಂತೆ ನನಗೆ ತೋರುತ್ತದೆ.

ಶ್ರೀಲ ಪ್ರಭುಪಾದ: ಸ್ವಲ್ಪ ಮಟ್ಟಿಗೆ ಮಾತ್ರ ಎಂಬ ಅರ್ಥದಲ್ಲಿ ನೀವು ನಿಮ್ಮ ದೇಹದ ಯಜಮಾನ ಎನ್ನುವ ಮಾತು ಸರಿ. ನೀವು ನಿಮ್ಮ ದೇಹವನ್ನು ನಿಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು. ಆದರೆ ನಿಮ್ಮ ಹತೋಟಿಗೆ ನಿಲುಕದ ಸಂಗತಿಗಳು ಕೆಲವಿವೆ.

ಉದಾಹರಣೆಗೆ, ನೀವು ನಿಮ್ಮ ಈಗಿನ ದೇಹದಲ್ಲಿ ಜೀವಿಸಿರುವತನಕ ಅದನ್ನು ನೀವು ಜೀವನದ ಅಂತಿಮ ಧ್ಯೇಯವನ್ನು ಅರ್ಥ ಮಾಡಿಕೊಳ್ಳಲು ಬಳಸಬಹುದು. ಆದರೆ ನೀವು ಸಾಯದೆಯೇ ಇರುವ ಹಾಗೆ ನಿಮ್ಮ ದೇಹವನ್ನು ಬಳಸಿಕೊಳ್ಳಲಾರಿರಿ. ಅದು ಸಾಧ್ಯವಿಲ್ಲ.

ಮೊದಲ ಭಕ್ತ: ಹಾಗಾಗಿ ಬಹುಮಟ್ಟಿಗೆ ನಾನು ನನ್ನ ದೇಹದ ಯಜಮಾನನಲ್ಲ. ನಾನು ಯಾರ ನಿಯಂತ್ರಣದಲ್ಲೋ ಇರುವವ.

ಶ್ರೀಲ ಪ್ರಭುಪಾದ: ಹೌದು, ನೀವು ಅದನ್ನೇಕ ಅರ್ಥ ಮಾಡಿಕೊಳ್ಳಬಾರದು? ನೀವು ಸದಾ ಯಾರದೋ ನಿಯಂತ್ರಣದಲ್ಲಿರುವವರು. ಉದಾಹರಣೆಗೆ ನೀವು ನಡೆಯುತ್ತಿದ್ದೀರಿ. ಇದು ಕೂಡ ಹತೋಟಿಗೆ ಒಳಪಟ್ಟಿದ್ದೇ. ಯಾವುದೇ ಕ್ಷಣದಲ್ಲಿ ನಿಮ್ಮ ದೇಹ ಪಾರ್ಶ್ವ ವಾಯುವಿಗೆ ಈಡಾಗಬಹುದು. ಯಾವುದೇ ಕ್ಷಣದಲ್ಲೂ ಆಗಬಹುದು.

ಮೊದಲ ಭಕ್ತ: ಹಾಗೆಂದಮೇಲೆ ನಾನು ನನ್ನ ದೇಹದ ಯಜನಾದ ಎಂದು ಭಾವಿಸುವುದು ಅಷ್ಟೇನೂ ವ್ಯಾವಹಾರಿಕವಲ್ಲ.

ಶ್ರೀಲ ಪ್ರಭುಪಾದ: ಅಲ್ಲವೇ ಅಲ್ಲ. ಈ ಮಾತನ್ನು ಭಗವದ್ಗೀತೆಯಲ್ಲಿ ಹೇಳಿದೆ. ಈ ಮೂಢ ವಿಜ್ಞಾನಿಗಳು ಅದನ್ನೇಕೆ ಓದುವುದಿಲ್ಲ? ಪ್ರಕೃತೇಃ ಕ್ರಿಯಾಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ | ಅಹಂಕಾರ ವಿಮೂಢಾತ್ಮಾ ಕರ್ತಾಹಮ್ ಇತಿ ಮನ್ಯತೇ: “ಮಿಥ್ಯಾಹಂಕಾರದ ಪ್ರಭಾವದಿಂದ ಮೂಢತನದ ವಶವಾಗುವ ಚೇತನಾತ್ಮವು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳು ಮಾಡಿದ ಕಾರ್ಯವನ್ನು ತಾನೇ ಮಾಡಿದ್ದಾಗಿ ಆಲೋಚಿಸುತ್ತದೆ.”

ವಸ್ತುತಃ ಈ ಐಹಿಕ ಪ್ರಕೃತಿಯು ಎಲ್ಲರ ಕಿವಿ ಹಿಂಡುತ್ತಿದೆ. ಆದರೂ ಮೂಢನು “ನಾನೇ ನನ್ನ ದೇಹದೊಡೆಯ” ಎಂದುಕೊಳ್ಳುತ್ತಾರೆ.

ಇದೆಲ್ಲವನ್ನೂ ಭಗವದ್ಗೀತೆ’ ಯಲ್ಲಿ ವಿವರಿಸಲಾಗಿದೆ. ಪ್ರಕೃತೇಃ ಕ್ರಿಯಾಮಣಾನಿ. ಅವಿವೇಕಿ ವಿಜ್ಞಾನಿಗಳು ಇದನ್ನು ಓದಿಲ್ಲವೆ? ಪ್ರಕೃತೇಃ ಕ್ರಿಯಾಮಾಣಾನಿಸರ್ವಶಃ | ಅಹಂಕಾರ ವಿಮೂಢಾತ್ಮಾ… ಮಿಥ್ಯಾಹಂಕಾರದಿಂದ ಹಾಗೂ ಆತ್ಮವನ್ನು ಐಹಿಕ ದೇಹದೊಡನೆ ಹುಸಿಯಾಗಿ ಗುರುತಿಸಿಕೊಂಡು ಉಬ್ಬಿಹೋಗಿರುವ ಇಲ್ಲಿನ ಪ್ರತಿಯೊಬ್ಬರೂ ತಾವೇ (ತಮ್ಮ ದೇಹದ) ಯಜಮಾನರೆಂದು ಆಲೋಚಿಸುತ್ತಿದ್ದಾರೆ.

/ಅದು ಭ್ರಮೆ. ಮನುಷ್ಯ ತನ್ನ ದೇಹದ ಒಡೆಯನಲ್ಲ ಆದರೆ ತಾನು ಒಡೆಯನೆಂದು ಅವನು ಆಲೋಚಿಸುತ್ತಿದ್ದಾನೆ.

ಅಹಂಕಾರ ವಿಮೂಢಾತ್ಮಾಃ ಮಿಥ್ಯಾಹಂಕಾರ ದಿಂದ ”ನಾನೇ ನನ್ನ ದೇಹದೊಡೆಯ” ಎಂದು ಯಾವನು ಆಲೋಚಿಸುತ್ತಿದ್ದಾನೋ ಅವನು ಮೊದಲ ದರ್ಜೆಯ ಕತ್ತೆ. ಅವನೊಬ್ಬ ಧೂರ್ತ. ಮತ್ತು ಈ ಐಹಿಕ ಜಗತ್ತಿನಲ್ಲಿನ ಪ್ರತಿಯೊಬ್ಬರೂ “ನಾನೇ ಈ ದೇಹ” ಎಂಬ ಹುಸಿ ಕಲ್ಪನೆಯಲ್ಲಿರುವುದರಿಂದ ನಾವು ಅವನನ್ನು ಸಾಮಾನ್ಯವಾಗಿ “ಧೂರ್ತ” ಎನ್ನುತ್ತೇವೆ.

“ಈ ಮನುಷ್ಯ ಎಲ್ಲರನ್ನೂ ಅವಿವೇಕಿಗಳು ಎನ್ನುತ್ತಾರಲ್ಲ ಏಕೆ?” ಎಂದು ಜನಕ್ಕೆ ಆಶ್ಚರ್ಯವಾಗಬಹುದು. ಆದರೆ ಭಗವದ್ಗೀತೆಯಲ್ಲಿ ಸ್ವಯಂ ಪ್ರಭುವೇ ಪ್ರಕೃತೇಃ ಕ್ರಿಯಾಮಾಣಾನಿ… ವಿಮೂಢಾತ್ಮಾ ಎಂದಿದ್ದಾನೆ. ಆ ಮಾತಿನ ಅರ್ಥ : “ತಾನು ಈ ದೇಹದೊಡೆಯ ಎಂದು ಭಾವಿಸುವ ಯಾರೇ ಆದರೂ ರ್ಯಸ್ಕಲ್‌ – ಅವಿವೇಕಿ,”

ವಿಜ್ಞಾನಿಯೆಂದು ಕರೆಸಿಕೊಳ್ಳುವ ವ್ಯಕ್ತಿಯು ಹೊಡೆದಾಟ ನಡೆಸುತ್ತಿರುವುದು ಏಕೆಂದರೆ ಅವನು ಈ ಐಹಿಕ ಪ್ರಕೃತಿ ಕಾರ್ಯಮಾಡುವುದನ್ನು ನಿಲ್ಲಿಸಬಯಸುತ್ತಾನೆ. ಅದು ಅವನ ಮೂರ್ಖತನ. ನೀವು ಪ್ರಕೃತಿಯ ಯಜಮಾನನಾಗಲಾರಿರಿ. ಅದು ಸಾಧ್ಯವಿಲ್ಲ. ನೀವು ಪ್ರಕೃತಿಯ ಕೈಕೆಳಗಿದ್ದೀರಿ.

ಪ್ರಕೃತಿಯ ಯಜಮಾನ – ಮಾಯಾಧೀಶ – ಕೃಷ್ಣ ಪುರುಷಃ ಪ್ರಕೃತಿಷ್ಠೋ ಹಿ ಭುಂಕ್ತೇ ಪ್ರಕೃತಿ ಜಾನ್-ಗುಣಾನ್ / ಕಾರಣಮ್ ಗುಣ ಸಂಗೋಸ್ಯ ಸದಾಸದ್‌ಯೋನಿ ಜನ್ಮಸು. ನೀವು ಪ್ರಕೃತಿ ಗುಣಗಳ ಸಂಗದಲ್ಲಿರುವುದರಿಂದ ವಿವಿಧ ಬಗೆಯ ದೇಹಗಳನ್ನು ಸ್ವೀಕಾರ ಮಾಡಬೇಕಾದ ಬಲಾತ್ಕಾರ ನಿಮ್ಮ ಮೇಲಿದೆ. ಒಂದು ಆತ್ಮಕ್ಕೆ ನಾಯಿಯ ದೇಹ ಏಕೆ ಇದೆ? ಇನ್ನೊಂದು ಆತ್ಮಕ್ಕೆ ಮನುಷ್ಯರ ದೇಹ ಇದೆಯೇಕೆ? ಪ್ರತಿಯೊಂದೂ ಪ್ರಕೃತಿಯಿಂದ ನಿಯಂತ್ರಿತವಾಗುತ್ತಿದೆ.

ನೀವು ಮನುಷ್ಯ ದೇಹ ಪಡೆದಿದ್ದೀರಾದ್ದರಿಂದ ನಿಮಗೆ ವಿವೇಚನೆ ಮಾಡುವ ಅವಕಾಶವಿದೆ. ಆದರೆ ಮನುಷ್ಯ ಜನ್ಮ ಇರುವಾಗ ನೀವು ಬೆಕ್ಕು ನಾಯಿಗಳಂತೆ ವರ್ತಿಸಿದರೆ ಬೆಲೆ ಕಟ್ಟಲಾಗದ ಈ ಅವಕಾಶವನ್ನು ನೀವು ಕಳೆದುಕೊಳ್ಳುತ್ತಿದ್ದೀರಿ. ನಿಮಗೆ ನೀಡಲಾಗಿರುವ ಈ ವಿಶೇಷ ಕೊಡುಗೆಯ ಲಾಭವನ್ನು ನೀವು ಪಡೆದುಕೊಳ್ಳದಿದ್ದರೆ, ಸೂಕ್ತ ವಿವೇಚನೆಯ ಶಕ್ತಿಯನ್ನು ನೀವು ಬಳಸದಿದ್ದರೆ, ಭಗವದ್ಗೀತೆಯು ಹೇಳುವಂತೆ – ದೇಹಾಂತರ ಆದಮೇಲೆ – ಎಂದರೆ ನಿಮ್ಮ ಮುಂದಿನ ಜನ್ಮದಲ್ಲಿ ನೀವು ಇನ್ನೊಂದು ಐಹಿಕ ದೇಹವನ್ನು ಪಡೆಯುತ್ತೀರಿ.

ಮತ್ತು ಆ ನಿಮ್ಮ ಮುಂದಿನ ಜನ್ಮದಲ್ಲಿ ನೀವು ಒಂದು ನಾಯಿಯ ದೇಹವನ್ನು ಪಡೆಯಬಹುದು. ಮನುಷ್ಯ ದೇಹದಲ್ಲಿರುವ ನಿಮಗಿರುವ ಅವಕಾಶವೆಂದರೆ ನೀವು ಮುಂದೆ ನಾಯಿಯಾಗಿ ಹುಟ್ಟದಿರುವುದನ್ನು ನೀವು ಆಯ್ದುಕೊಳ್ಳಬಹುದು. ಇದಕ್ಕೆ ಪ್ರತಿಯಾಗಿ ದೇವತೆಗಳ ದೇಹವನ್ನು ಪಡೆಯುವ ಅವಕಾಶವೂ ನಿಮಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi