ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಕರ್ನಾಟಕದಲ್ಲೂ ಈ ಮೊದಲೇ ಒಂದು ಸುಂದರ ಅಯೋಧ್ಯಾ ಕ್ಷೇತ್ರ ನಿರ್ಮಾಣವಾಗಿದೆ! ದಕ್ಷಿಣದ ಅಯೋಧ್ಯೆಯೆಂದು ಕರೆಯಲ್ಪಡುವ ಈ ರಾಮಕ್ಷೇತ್ರ, ಒಂದು ಭಕ್ತಿವರ್ಧಕ ತೀರ್ಥಕ್ಷೇತ್ರವೂ ಹೌದು, ಶ್ರೀಮಂತ ಕಲೆಯ ಔತಣ ಬಡಿಸುವ ಸುಂದರ ಪ್ರವಾಸೀ ತಾಣವೂ ಹೌದು! ಇದು ಶ್ರೀರಾಮನ ಅರಮನೆ! ಶ್ರೀರಾಮನ ದೇವತಾಬಳಗದ ದೇಗುಲ! ಸಂತ, ಭಕ್ತರ ಭಜನಾಲಯ! ಇದನ್ನು ನೋಡಿದರೆ ಧನ್ಯರಾಗುತ್ತಾರೆ ಭಕ್ತರು!
ಧರ್ಮಸ್ಥಳದ ಹೆಸರನ್ನು ಯಾರು ತಾನೇ ಕೇಳಿಲ್ಲ? ಶ್ರೀ ಮಂಜುನಾಥನೆಂಬ ಹೆಸರಿನಲ್ಲಿ ಆರಾಧನೆಗೊಳ್ಳುವ ಶಿವನ, ಮಾಧ್ವವೈಷ್ಣವರು ಪೂಜೆ ಮಾಡುವ, ಜೈನ ಧರ್ಮಾಧಿಕಾರಿಗಳಿರುವ, ಅಂತೆಯೇ ಚಂದ್ರನಾಥ ಜೈನ ಬಸದಿ, ಗೊಮ್ಮಟೇಶ್ವರನ ಮೂರ್ತಿಗಳಿರುವ, ಬೌದ್ಧ ವಜ್ರಯಾನ, ನಾಥಪಂಥಗಳ ಪ್ರಭಾವವಿರುವ, ಭೂತಾರಾಧನೆಯಿರುವ, ಧರ್ಮದೇವತೆಗಳು ನೆಲೆಸಿರುವ, ಸರ್ವ ಮತಸೌಹಾರ್ದಕ್ಷೇತ್ರವಾದ ಧರ್ಮಸ್ಥಳ, ದಕ್ಷಿಣ ಕನ್ನಡದ ಒಂದು ವಿಶಿಷ್ಟ ಕ್ಷೇತ್ರ. ಅನುದಿನವೂ ಅನೇಕ ಜನರು ಧರ್ಮಸ್ಥಳಕ್ಕೆ ಯಾತ್ರೆ ಬರುತ್ತಾರೆ. ಧರ್ಮಸ್ಥಳವೆಂದ ಕೂಡಲೇ ಹತ್ತಿರವೇ ಇರುವ ಕುಕ್ಕೆಸುಬ್ರಹ್ಮಣ್ಯ, ಉಡುಪಿ, ಕಟೀಲು, ಗೋಕರ್ಣ, ಮುರ್ಡೇಶ್ವರ ಮೊದಲಾದ ತೀರ್ಥಕ್ಷೇತ್ರಗಳನ್ನು ದರ್ಶಿಸಿ ನಾಲ್ಕು ದಿನಗಳ ಯೋಜಿತ ಪ್ರವಾಸ ಮಾಡುವವರನೇಕರು. ಇಷ್ಟಾದರೂ ಧರ್ಮಸ್ಥಳದ ಬಳಿಯೇ ಇರುವ ಈ ದಕ್ಷಿಣ ಅಯೋಧ್ಯೆಯ ಬಗ್ಗೆ ಇನ್ನೂ ಅನೇಕ ಮಂದಿ ತಿಳಿಯರು! ಈ ಸುಂದರ ರಾಮಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಧರ್ಮಸ್ಥಳ ಗ್ರಾಮದ ಕನ್ಯಾಡಿ ಎಂಬಲ್ಲಿದೆ. ಬೆಳ್ತಂಗಡಿಯ ಉಜಿರೆ ಎಂಬ ಪಟ್ಟಣದ ಮೂಲಕ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ, ಧರ್ಮಸ್ಥಳಕ್ಕೆ ಸ್ವಲ್ಪ ಮೊದಲೇ ಈ ರಾಮಕ್ಷೇತ್ರ ಸಿಗುತ್ತದೆ.

ಎರಡು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿರುವ ಈ ರಾಮಕ್ಷೇತ್ರ, ಒಂದು ಭವ್ಯವಾದ ಕಲಾತ್ಮಕ ದೇವಾಲಯ. ನೂತನ ಮಾದರಿಯ ಈ ದೇಗುಲದ ವಾಸ್ತುಶಿಲ್ಪ ಅದ್ಭುತವಾಗಿದೆ. ಮೂರು ಅಂತಸ್ತುಗಳನ್ನು ಹೊಂದಿರುವ ಇದು, ಹೊರಗೋಡೆಗಳ ಮೇಲೆ ಅನೇಕ ದೇವತಾವಿಗ್ರಹಗಳೂ ಶ್ರೀರಾಮನ ಲೀಲೆಗಳ ವರ್ಣಮಯ ಕೆತ್ತನೆಗಳೂ ಹೊಂದಿದ್ದು ಇವು ಮನಸೆಳೆಯುತ್ತವೆ. ಮೊದಲನೆಯ ಅಂತಸ್ತಿನಲ್ಲಿ ವಿಶಾಲವಾದ ಪ್ರವಚನ ಮಂದಿರವಿದ್ದು ಅದನ್ನು ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಲಾಗುತ್ತದೆ. ಎರಡನೆಯ ಅಂತಸ್ತಿಗೆ 54 ಮೆಟ್ಟಿಲುಗಳನ್ನೇರಿ ಹೋಗಬೇಕು. ಹಾಗೆ ಹತ್ತಿ ಹೋಗುವಾಗ ಸುತ್ತಲೂ ಇರುವ ಹೂದೋಟವನ್ನು ನೋಡುತ್ತಾ ಹೋಗುವುದು ಆಹ್ಲಾದಕರವಾಗಿರುತ್ತದೆ. ಈ ಹೂದೋಟದ ಒಂದು ಸ್ಥಳದಲ್ಲಿ ನಾಗಬನವಿದೆ. ಮೆಟ್ಟಿಲು ಹತ್ತಿ ಹೋಗುವಾಗಲೇ, ಪಕ್ಕದಲ್ಲಿ ಸೊಗಸಾಗಿ ಹರಿದು ಬರುವ ತಂಪಾದ ತಿಳಿನೀರಿನಲ್ಲಿ ಕಾಲು ತೊಳೆದು ಹೋಗಬಹುದು. ದೇವಾಲಯದ ಎದುರು ಒಂದು ಕೊಳವಿದ್ದು ಅದರ ಬಳಿ ಧ್ಯಾನಸ್ಥ ಬುದ್ಧವಿಗ್ರಹವೊಂದು ಸುಂದರವಾಗಿದೆ. ಗರ್ಭಗೃಹದ ಮೇಲ್ಛಾವಣಿಯು ಗುಮ್ಮಟದಂತಿದ್ದು ಸುಂದರವಾಗಿದೆ. ಈ ಗರ್ಭಗೃಹಕ್ಕೆ ತೀರ್ಥಮಂಟಪವೊಂದು ಹೊಂದಿಕೊಂಡಿದ್ದು ಅದರ ಎಡ, ಬಲಗಳಲ್ಲಿ ಗಣೇಶ ಮತ್ತು ಅನ್ನಪೂರ್ಣೇಶ್ವರೀದೇವಿಯರ ಗುಡಿಗಳಿವೆ. ತೀರ್ಥಮಂಟಪದ ಮೇಲೂ ನಾಲ್ಕು ಪುಟ್ಟ ಮಂಟಪಗಳಿದ್ದು ಅಲ್ಲಿ ವಿವಿಧ ದೇವತಾಮೂರ್ತಿಗಳಿವೆ. ಭಗವಂತನ ದರ್ಶನಕ್ಕೆ ಮೊದಲು ಅವನ ಭಕ್ತರ ದರ್ಶನ ಮಾಡುವುದು ಶ್ರೇಯಸ್ಕರವಲ್ಲವೇ? ಹಾಗಾಗಿಯೇ ಮೂರನೆಯ ಅಂತಸ್ತಿನಲ್ಲಿ ಶ್ರೀರಾಮನ ದರ್ಶನ ಮಾಡುವ ಮೊದಲು ಎರಡನೆಯ ಅಂತಸ್ತಿನಲ್ಲಿ ಸಂತರ ದರ್ಶನ ಮಾಡುವ ಇಲ್ಲಿನ ಕ್ರಮ ವಿಶಿಷ್ಟವಾಗಿದೆ. ಅಲ್ಲದೇ ಈ ಮಹಾನ್ ಸಂತರು ಶ್ರೀರಾಮನನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡಿರುವಂತೆಯೂ ಇದೆ. ಎರಡನೆಯ ಅಂತಸ್ತಿನಂತೆಯೇ ಇರುವ ಮೂರನೆಯ ಅಂತಸ್ತಿನಲ್ಲಿ ಮುಖ್ಯಗರ್ಭಗುಡಿಯಲ್ಲಿ ಪಟ್ಟಾಭಿರಾಮನು ಸೀತೆಯೊಂದಿಗೂ ಲಕ್ಷ್ಮಣ, ಶತ್ರುಘ್ನ, ಭರತ, ಹನುಮಂತರೊಂದಿಗೂ ನೆಲೆಸಿದ್ದಾನೆ. ಪರಿವಾರದೊಂದಿಗೆ ಪಟ್ಟಾಭಿಷಿಕ್ತನಾಗಿರುವ ಶ್ರೀರಾಮಚಂದ್ರನ ಶ್ರೀವಿಗ್ರಹ ಅತ್ಯಂತ ಸುಂದರವಾಗಿದೆ. ಇಲ್ಲಿಯೂ ತೀರ್ಥಮಂಟಪ, ಮೇಲಿನ ನಾಲ್ಕು ಮಂಟಪಗಳಲ್ಲಿ ದೇವತೆಗಳು ಮತ್ತು ಎಡಬಲಗಳಲ್ಲಿ ದುರ್ಗಾಪರಮೇಶ್ವರಿ ಹಾಗೂ ಕ್ಷೇತ್ರಪಾಲ ಗಣಪತಿ ವಿಗ್ರಹಗಳಿವೆ. ಶ್ರೀರಾಮ ಪರಿವಾರಕ್ಕೆ ಎದುರು, ಮೂರು ಪ್ರತ್ಯೇಕ ಗುಡಿಗಳಿದ್ದು ಅವುಗಳಲ್ಲಿ ಹನುಮಂತ, ಶ್ರೀಕೃಷ್ಣ, ಮತ್ತು ದತ್ತಾತ್ರೇಯ ವಿಗ್ರಹಗಳಿವೆ. ಅಂತೆಯೇ ಪಟ್ಟಾಭಿರಾಮನ ಗರ್ಭಗುಡಿಯ ಎಡಬಲಗಳಲ್ಲಿ ಪುಟ್ಟ ಗುಡಿಗಳಿದ್ದು ಅವುಗಳಲ್ಲಿ ನವಗ್ರಹಗಳೂ ನವದುರ್ಗೆಯರೂ ನೆಲೆಸಿದ್ದಾರೆ. ಹೀಗೆ ಈ ರಾಮಕ್ಷೇತ್ರದಲ್ಲಿ ಶ್ರೀರಾಮನೊಂದಿಗೆ ಅವನ ಪರಿವಾರ ಮತ್ತು ಸಕಲ ದೇವತೆಗಳೂ ನೆಲೆಸಿದ್ದಾರೆ! ಈ ಎಲ್ಲ ವಿಗ್ರಹಗಳೂ ಬೆಳ್ಳಗೆ ಕಂಗೊಳಿಸುವ ಅಮೃತಶಿಲೆಯವಾಗಿದ್ದು ಜಯಪುರದ ಶಿಲ್ಪಿಗಳು ನಿರ್ಮಿಸಿದ್ದವಾಗಿವೆ. ಬಹಳ ಮನಮೋಹಕವಾದ ಈ ವಿಗ್ರಹಗಳು ಭಕ್ತಿಭಾವವನ್ನು ಸುರಿಸುತ್ತವೆ.
ದಕ್ಷಿಣದ ಅಯೋಧ್ಯೆಯೆಂದು ಪ್ರಸಿದ್ಧವಾಗಿರುವ ಈ ರಾಮಕ್ಷೇತ್ರ ನೋಡಲೇಬೇಕಾದ ದೇವಾಲಯವಾಗಿದೆ.






Leave a Reply