ಬಕಾಸುರ ವಧೆ

ಅದೊಂದು ಎಳೆ ಬಿಸಿಲಿನ ಸುಂದರ ದಿನ. ನೀಲಾಕಾಶದಲ್ಲಿ ಅಲ್ಲಲ್ಲಿ ಬಿಳಿ ಮೋಡಗಳು ಚದುರಿ ತೇಲುತ್ತಿದ್ದವು. ಕೃಷ್ಣ ತನ್ನ ಗೋಪಬಾಲರ ಗುಂಪಿನೊಡನೆ ತಾನೂ ಎಳೆಗರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ದಿದ್ದ. ಕರುಗಳು ಮೇಯುತ್ತಿರುವಾಗ ಈ ಹುಡುಗರು ಆಟೋಟಗಳಲ್ಲಿ ಮುಳುಗಿಹೋದರು. ಕಾಡು ಪ್ರಾಣಿಗಳ ಅನುಕರಣೆ ಮಾಡುತ್ತ ಕಪ್ಪೆಯಂತೆ ವಟಗುಡುವುದು, ಕಪಿಗಳ ಹಾಗೆ ಮರದಿಂದ ಮರಕ್ಕೆ ಜಿಗಿಯುವುದು, ಹಂಸಗಳ ಹಾಗೆ ಈಜುವುದು, ನವಿಲಿನ ಹಾಗೆ ಕುಣಿಯುವುದು, ಗಿಳಿಗಳ ಹಾಗೆ ಕೀರಲು ದನಿಯಲ್ಲಿ ಕೂಗುವುದೇ ಮೊದಲಾದ ಚೇಷ್ಟೆಗಳನ್ನು ಮಾಡುತ್ತ ಮೋಜು ಪಡೆಯುತ್ತಿದ್ದರು.

ಕೃಷ್ಣನ ಅಣ್ಣ ಬಲರಾಮ ಹುಲಿಯಂತೆ ನಟಿಸುತ್ತ, ಸಿಹಿ ತಿಂಡಿಯೆಂದರೆ ಜೊಲ್ಲು ಸುರಿಸುತ್ತಿದ್ದ ಡುಮ್ಮ ಹುಡುಗ ಮಧುಮಂಗಳನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ. ಕೃಷ್ಣ, ಜಿಂಕೆಯಂತೆ ಕಾಲೂರಿಕೊಂಡು ನಿಂತಿದ್ದ ಸುಬಲನ ಬೆನ್ನು ಚಪ್ಪರಿಸುತ್ತ `ಬಾಲ’ ಎಳೆಯುವ ಮೋಜಿನಲ್ಲಿ ತೊಡಗಿದ್ದ. ಸುಬಲ ಇದ್ದಕ್ಕಿದ್ದ ಹಾಗೆ ಛಂಗನೆದ್ದು, ಜಿಂಕೆಯ ಅನುಕರಣೆ ಮಾಡುತ್ತ ನಾಗಾಲೋಟದಲ್ಲಿ ಓಡತೊಡಗಿದ. ಕೃಷ್ಣ ಅವನನ್ನೆ ಹಿಂಬಾಲಿಸಲು, ಉಳಿದ ಗೆಳೆಯರು ಈ ವಿನೋದವನ್ನು ಆನಂದಿಸಲು ಸುತ್ತಲೂ ನೆರೆದರು. ಕೃಷ್ಣ ಸುಬಲನನ್ನು ಆರಾಮವಾಗಿ ಹಿಡಿದುಬಿಡುತ್ತಾನೆ ಎಂದು ಅವರಿಗೆ ಗೊತ್ತಿತ್ತು.

ಸುಬಲ ಓಡುತ್ತ ಕಾಡಿನ ನಡುವೆ ಬಯಲಿನಂತೆ ಇದ್ದ ಜಾಗವೊಂದಕ್ಕೆ ಬಂದ. ಆದರೆ ಅಲ್ಲಿ ಅವನು ಕತ್ತೆತ್ತಿ ನೋಡುತ್ತಿದ್ದಂತೆ ಅವಾಕ್ಕಾಗಿ ಹೋದ. ಅಲ್ಲಿ ಅವರೆದುರು ಒಂದು ದೈತ್ಯಾಕಾರದ ಪಕ್ಷಿ ನಿಂತಿತ್ತು. ನೋಡಲು ಕೊಕ್ಕರೆಯಂತೆ ಇದ್ದ ಅದರ ರೆಕ್ಕೆಗಳು ಕತ್ತಿಯ ಅಲಗಿನಂತೆ ಹರಿತವಾಗಿದ್ದವು. ಅದರ ಕೊಕ್ಕುಗಳು ಚೂಪಾಗಿಯೂ ಉದ್ದವಾಗಿಯೂ ಇದ್ದವು. ಆ ಹಕ್ಕಿಯ ಕಾಲುಗಳು ಹೆಚ್ಚೂ ಕಡಮೆ ಒಂದು ಮರದಷ್ಟು ಎತ್ತರವಿದ್ದವು!

ಹುಡುಗರನ್ನು ನೋಡಿದ ಪಕ್ಷಿಯು ತನ್ನ ಕೊಕ್ಕನ್ನು ಅಗಲಿಸಿಕೊಂಡು ಅವರತ್ತ ಧಾವಿಸಿ ಬಂತು. ಭಯಗೊಂಡ ಹುಡುಗರು ಕೂಗಾಡುತ್ತಾ ಮರಗಿಡಗಳ ಹಿಂದೆ ಅಡಗಿಕೊಳ್ಳಲು ಓಡತೊಡಗಿದರು. ಆದರೆ ಕೃಷ್ಣ ಮಾತ್ರ ಅದರ ಎದುರು ದೃಢವಾಗಿ ನಿಂತು ಅಡ್ಡಗಟ್ಟಿದ. ಅದು ತನ್ನ ಚೂಪಾದ ಕೊಕ್ಕನ್ನು ಮತ್ತಷ್ಟು ಹಿಗ್ಗಿಸಿ ಅವನನ್ನು ಒಂದೇ ಏಟಿಗೆ ನುಂಗಿಹಾಕಿತು.

ಮರಗಳ ಹಿಂದೆ ಅಡಗಿ ನಿಂತು ಇದನ್ನೆಲ್ಲ ಹಣಕಿ ನೋಡುತ್ತಿದ್ದ ಹುಡುಗರು ಭೀತಿಯಿಂದಲೂ ದುಃಖದಿಂದಲೂ ಅಳತೊಡಗಿದರು. ಅಳುವಿನ ದನಿ ಕೇಳಿಬಂದ ದಿಕ್ಕಿನತ್ತ ಪಕ್ಷಿಯು ತನ್ನ ಕತ್ತನ್ನು ತಿರುಗಿಸಿತು. ಆದರೆ ಅಲ್ಲಿ ಯಾರೂ ಕಾಣಿಸಲಿಲ್ಲ. ಅಲ್ಲಿ ಭಯಾನಕ ಮೌನ ಆವರಿಸಿತ್ತು. ಇದ್ದಕ್ಕಿದ್ದ ಹಾಗೇ ಅದು ಒಳಗಿಂದ ಯಾರೋ ತಿವಿಯುತ್ತಿದ್ದಾರೆ ಎನ್ನುವಂತೆ ತನ್ನ ತಲೆಯನ್ನು ಕೊಡವಿತು. ತಡೆಯಲಾರದೆ ತನ್ನ ಕೊಕ್ಕನ್ನು ಅಗಲಿಸಿ ಕೃಷ್ಣನನ್ನು ಹೊರಗೆ ಕಕ್ಕಿತು. ಕೃಷ್ಣ ಅದರ ಗಂಟಲು ಸೇರಿದ್ದರೂ ಉಸಿರುಕಟ್ಟಿ ಜೀವ ತೊರೆದಿರಲಿಲ್ಲ. ಬದಲಿಗೆ ತನ್ನ ಉಷ್ಣತೆಯನ್ನು ಹೆಚ್ಚಿಸಿಕೊಂಡು ಉರಿಯುವ ಕೆಂಪು ಕಲ್ಲಿದ್ದಿಲಿನ ಹಾಗೆ ಆಗಿಹೋಗಿದ್ದ!

ಕೃಷ್ಣ ಕೆಳಗೆ ಬಿದ್ದವನೇ ಎದ್ದು ಪಕ್ಷಿಗೆ ಮುಖ ಕೊಟ್ಟು ತಿರುಗಿನಿಂತ. ಪಕ್ಷಿ ಪುನಃ ಅವನನ್ನು ನುಂಗಲು ಮುಂದಾಯಿತು. ಆದರೆ ಅವನು ಅದರ ಕೊಕ್ಕಿನ ಎರಡು ಭಾಗಗಳನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿದುಕೊಂಡ. ಮಿಂಚು ಮಿಂಚಿದಷ್ಟೇ ವೇಗವಾಗಿ ಅವನು ಆ ಕೊಕ್ಕುಗಳನ್ನು ವಿರುದ್ಧ ದಿಕ್ಕುಗಳತ್ತ ಎಳೆದು ಸಿಗಿದು ಹಾಕಿದ. ಆ ಪಕ್ಷಿ ಭೀಕರವಾಗಿ ಚೀರುತ್ತಾ ಸತ್ತು ಬಿದ್ದಿತು.

ದೂರದ ಮಥುರಾ ನಗರದಲ್ಲಿ ಕುಳಿತಿದ್ದ ದುಷ್ಟ ಕಂಸನಿಗೆ ಸಾಯುತ್ತಿರುವ ಪಕ್ಷಿಯ ಆರ್ತನಾದ ಕೇಳಿಸಿತು. ವಾಸ್ತವದಲ್ಲಿ ಆ ದೈತ್ಯ ಪಕ್ಷಿ ಬಕಾಸುರನೆಂಬ ಅಸುರನಾಗಿದ್ದ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi