ಮಕ್ಕಳೇ, ಶ್ರೀ ಕೃಷ್ಣನ ಜೊತೆ ಇರುವ ಬಲರಾಮನು ಕೃಷ್ಣನ ಅಣ್ಣ. ವೃಂದಾವನದಲ್ಲಿ ಇವರಿಬ್ಬರು ಚಿಕ್ಕವರಿದ್ದಾಗ ಬಹಳ ತುಂಟಾಟ ಮಾಡಿದ್ದರು. ಆ ಬಲರಾಮನ ಕಥೆ ತುಂಬಾ ಚೆನ್ನ.
ವಿಷ್ಣುವು ಆದಿಶೇಷನ ಮೇಲೆ ಮಲಗಿರುವ ಚಿತ್ರಗಳನ್ನು ನೋಡಿದ್ದೀರಲ್ಲವೇ? ಆ ಆದಿಶೇಷನೇ ಬಲರಾಮ. ಬಲರಾಮ ಹುಟ್ಟಿದ್ದು ಶ್ರಾವಣ ಮಾಸದ ಹುಣ್ಣಿಮೆಯಂದು. ಅವನು ತುಂಬಾ ಬಲಶಾಲಿ. ಆದುದರಿಂದ ಬಲದೇವ ಎಂದೂ ಅವನಿಗೆ ಹೆಸರು.

ಕೃಷ್ಣನು ವಸುದೇವ-ದೇವಕಿಯರ ಮಗ. ಬಲರಾಮ ಕೂಡ ವಸುದೇವನ ಮಗ. ಆದರೆ ಅವನ ತಾಯಿ ರೋಹಿಣಿ. ವಸುದೇವ-ದೇವಕಿಯರನ್ನು ಕಂಸನು ಮಥುರಾದ ಸೆರೆಮನೆಯಲ್ಲಿ ಇಟ್ಟಿದ್ದ. ಆದುದರಿಂದ ಕೃಷ್ಣ, ಬಲರಾಮರನ್ನು ಗೋಕುಲಕ್ಕೆ ಕಳುಹಿಸಲಾಯಿತು. ಅಲ್ಲಿ ನಂದ ಮಹಾರಾಜ ಮತ್ತು ಅವನ ಹೆಂಡತಿ ಯಶೋದೆಯು ಅವರಿಬ್ಬರನ್ನು ಚೆನ್ನಾಗಿ ನೋಡಿಕೊಂಡರು. ಬಲರಾಮನ ತಾಯಿ ರೋಹಿಣಿಯೂ ಗೋಕುಲದಲ್ಲಿಯೇ ಇದ್ದಳು.
ಇವರಿಬ್ಬರೂ ಏನು ಮಾಡುತ್ತಿದ್ದರು? ವೃಂದಾವನದಲ್ಲಿ ಗೋಪಿಯರು ಬೆಣ್ಣೆ ತೆಗೆದು ಮಡಕೆಗಳಲ್ಲಿ ತುಂಬಿ ಇಡುತ್ತಿದ್ದರು. ಕೃಷ್ಣ, ಬಲರಾಮ ಮತ್ತು ಅವರ ಸ್ನೇಹಿತರು ಮನೆಮನೆಗೆ ನುಗ್ಗುತ್ತಿದ್ದರು. ಮಡಕೆಗಳಲ್ಲಿ ಇದ್ದ ಬೆಣ್ಣೆಯನ್ನು ತಿನ್ನುತ್ತಿದ್ದರು. ಅಷ್ಟೇ ಅಲ್ಲ, ಮಂಗಗಳಿಗೂ ತಿನ್ನಿಸುತ್ತಿದ್ದರು. ಹೀಗೆ ದಿನವೂ ಬೆಣ್ಣೆಯೆಲ್ಲ ಖಾಲಿ. ಕಷ್ಟಪಟ್ಟು ಬೆಣ್ಣೆ ತೆಗೆದಿದ್ದ ಗೋಪಿಯರಿಗೆ ವಿಪರೀತ ಸಿಟ್ಟು. ಅವರೆಲ್ಲ ಕೃಷ್ಣನ ತಾಯಿ ಯಶೋದ ಬಳಿ ಹೋಗಿ,“ನಮ್ಮ ಮನೆಯ ಬೆಣ್ಣೆಯನ್ನೆಲ್ಲ ಕದಿಯುತ್ತಾರೆ. ಇವರನ್ನು ಮನೆಯಲ್ಲೇ ಇಟ್ಟುಕೊ” ಎಂದು ದೂರಿದರು. ಕೃಷ್ಣ, ಬಲರಾಮರಿಗೆ ಭಯವಾಯಿತು. ಅವರಿಬ್ಬರೂ ಮುಖ ಕೆಳಗೆ ಮಾಡಿ ನಿಂತರು. ಯಶೋದಾಗೆ ಅವರನ್ನು ಬಯ್ಯಲೂ ಆಗಲಿಲ್ಲ.
ನಂದ ಮಹಾರಾಜನು ಕೃಷ್ಣ, ಬಲರಾಮರನ್ನು ಕರುಗಳನ್ನು ಮೇಯಿಸಲು ಕಳುಹಿಸಿದ. ಅವರು ಕರುಗಳನ್ನು ಮೇಯಿಸಲು ಬಿಟ್ಟು ಗೆಳೆಯರೊಂದಿಗೆ ಆಟವಾಡುತ್ತಿದ್ದರು. ಗೆಳೆಯರು ಹಣ್ಣು ಬೇಕೆಂದಾಗ ಬಲರಾಮ ಮರವನ್ನೇ ಅಳ್ಳಾಡಿಸಿ ಬಿಡುತ್ತಿದ್ದ. ಬಲರಾಮ ಅಷ್ಟು ಬಲವಾನ್! ಬಿದ್ದ ಹಣ್ಣನ್ನು ಎಲ್ಲರೂ ತಿನ್ನುತ್ತಿದ್ದರು. ತನ್ನ ಗೆಳೆಯರು ಏನು ಕೇಳಿದರೂ ಬಲರಾಮ ಇಲ್ಲ ಎನ್ನುತ್ತಿರಲಿಲ್ಲ.
ಬಲರಾಮ ಶಕ್ತಿಶಾಲಿ ಎಂದೆನಲ್ಲವೆ? ಒಮ್ಮೆ ಏನಾಯಿತೆಂದರೆ, ಪ್ರಲಂಬಾಸುರನೆಂಬ ರಾಕ್ಷಸನು ಬಲರಾಮನನ್ನು ಹೊತ್ತುಕೊಂಡು ಓಡಿದ. ಗೆಳೆಯರಿಗೆ ಭಯ. ಆದರೆ ಬಲರಾಮ ಆ ರಾಕ್ಷಸನನ್ನು ಕೊಂದು ಹಾಕಿದೆ. ಮಿತ್ರರೆಲ್ಲರೂ ಚಪ್ಪಾಳೆ ತಟ್ಟಿ ಕುಣಿದರು.
ಬಲರಾಮ ದೊಡ್ಡವನಾದ. ಒಮ್ಮೆ ನೈಮಿಷಾರಣ್ಯದಲ್ಲಿ ಋಷಿಗಳು ಯಾಗ ಮಾಡುವಾಗಲೆಲ್ಲ ಬಲ್ವಲ ಎನ್ನುವ ರಾಕ್ಷಸ ಅಡ್ಡಿ ಮಾಡುತ್ತಿದ್ದ. ಇದನ್ನು ನೋಡಿ ಬಲರಾಮ “ಈ ರಾಕ್ಷಸನನ್ನು ಬಿಡುವುದಿಲ್ಲ” ಎಂದು ಅವನನ್ನು ಸಂಹರಿಸಿದ. ಕೃಷ್ಣನ ಸೋದರಮಾವ ಕಂಸ. ಅವನನ್ನು ಕೃಷ್ಣನು ಸಂಹರಿಸಿದ. ಆಗ ಬಲರಾಮನು ಕಂಸನ ಸೋದರರನ್ನು ಕೊಂದು ಹಾಕಿದ.
ಇದೇ ಆಗಸ್ಟ್ 31 ಬಲರಾಮನ ಹುಟ್ಟಿದ ದಿನ. ನಾವೆಲ್ಲ ಕೂಡಿ ಆಚರಿಸೋಣವೇ?






Leave a Reply