ನಿನ್ನ ಭಕ್ತರ ಮನೆಗೀಗ…
– ದರ್ಶನ್ ಕುಮಾರ್
ಮಥುರೆಯ ಕಾರಾಗೃಹ. ಕಡುಗತ್ತಲು. ಶ್ರಾವಣದ ಅಷ್ಟಮಿ, ರೋಹಿಣಿ ನಕ್ಷತ್ರ.

ಹುಟ್ಟಿಲ್ಲದವನೂ, ಹುಟ್ಟುತ್ತಾನೆಯೇ
ಸಾವಿರಾರು ವರ್ಷಗಳಿಂದ ಕಾಡುವ ಈ ತಾತ್ವಿಕ ಪ್ರಶ್ನೆಗೆ ಶ್ರೀಮದ್ಭಾಗವತವು ಮಥುರೆಯ ಸೆರೆಮನೆಯಲ್ಲಿ ನಿಂತು ಉತ್ತರಿಸುತ್ತದೆ. ಭಗವಂತನ ಜನನ ಸಾಮಾನ್ಯರ ಹಾಗೆ ಕರ್ಮದ ಬಂಧನವಲ್ಲ, ಅದು ಆವಿರ್ಭಾವ. ಒಂದು ಶುದ್ಧ ಇಚ್ಛೆ. ಜೀವಿಗಳು ಅನಿವಾರ್ಯವಾಗಿ ಗರ್ಭವಾಸವನ್ನು ಅನುಭವಿಸಿದರೆ, ಆತ ಭಕ್ತರ ಮೇಲಿನ ವಾತ್ಸಲ್ಯದಿಂದ ತಾನಾಗಿಯೇ ಒಲಿದು ಬರುತ್ತಾನೆ.
ಇಸ್ಕಾನ್ ಸಂಸ್ಥಾಪಕ ಆಚಾರ್ಯರಾದ ಶ್ರೀಲ ಪ್ರಭುಪಾದರು ‘ಕೃಷ್ಣ’ ಪುಸ್ತಕದಲ್ಲಿ ಬಿಚ್ಚಿಡುವ ಈ ಲೀಲೆಯ ಪರದೆಯ ಹಿಂದಿನ ಸತ್ಯಗಳು ಕೇವಲ ಭಕ್ತಿಯ ಕಥೆಯಲ್ಲ, ಅದು ಮನುಷ್ಯನ ಪ್ರಜ್ಞೆ ಮತ್ತು ದೈವದ ನಡುವಿನ ಅತಿ ಸೂಕ್ಷ್ಮ ಅನುಸಂಧಾನ.
ಕಥೆ ಆರಂಭವಾಗುವುದು ಭೂಮಿಯ ಕಣ್ಣೀರಿನಿಂದ. ಅಸುರಿ ಪ್ರವೃತ್ತಿಯ ರಾಜರುಗಳ ದಬ್ಬಾಳಿಕೆಗೆ ನಲುಗಿದ ಭೂಮಿ, ಹಸುವಿನ ರೂಪ ತಾಳಿ ಬ್ರಹ್ಮನ ಬಳಿ ಬಂದು ರೋಧಿಸುತ್ತಾಳೆ. ಕ್ಷೀರಸಾಗರದ ತೀರದಲ್ಲಿ ನಿಂತು ದೇವತೆಗಳು ಪುರುಷಸೂಕ್ತ ಪಠಿಸುತ್ತಾ ಬೇಡಿದಾಗ, ಧ್ಯಾನದಲ್ಲಿದ್ದ ಬ್ರಹ್ಮನ ಅಂತರಾಳದಲ್ಲಿ ಒಂದು ದನಿ ಕೇಳಿಸುತ್ತದೆ. ಭಗವಂತ ಯದುವಂಶದಲ್ಲಿ ಬರುವ ಮುನ್ಸೂಚನೆ ಅದು.
ಆದರೆ ಅವನು ಮೈದಾಳುವುದು ಎಲ್ಲಿ? ಯಾರು ಅವನನ್ನು ಹೊರಬಲ್ಲರು?
ಮಥುರೆಯ ಆ ಸೆರೆಮನೆ ಕೇವಲ ಕಲ್ಲುಗಳಿಂದ ಕಟ್ಟಿದ್ದ ಕಟ್ಟಡವಾಗಿರಲಿಲ್ಲ. ಅದು ಅಹಂಕಾರ, ಕ್ರೌರ್ಯ ಮತ್ತು ಸಾವಿನ ಭೀತಿ ಮಡುಗಟ್ಟಿದ್ದ ಜಾಗ. ದೇವಕಿಯ ಆರು ಮಕ್ಕಳನ್ನು ಕಂಸ ಕಲ್ಲಿಗಪ್ಪಳಿಸಿ ಕೊಂದಿದ್ದ. ಈಗ ಎಂಟನೇ ಗರ್ಭ. ವಾಸ್ತವದಲ್ಲಿ, ಕೃಷ್ಣನು ನೇರವಾಗಿ ದೇವಕಿಯ ಗರ್ಭವನ್ನು ಪ್ರವೇಶಿಸಲಿಲ್ಲ.
ಪ್ರಭುಪಾದರು ಬಹಳ ಸ್ಪಷ್ಟವಾಗಿ ವಿವರಿಸುವಂತೆ, ಇದು ಜೀವಶಾಸ್ತ್ರದ ನಿಯಮಗಳಿಗೆ ಒಳಪಟ್ಟ ಜನನವಲ್ಲ. ಪರಮಪುರುಷನು ಮೊದಲು ವಸುದೇವನ ಶುದ್ಧ ಪ್ರಜ್ಞೆಯಲ್ಲಿ, ಅವನ ಮನಸ್ಸಿನಲ್ಲಿ ಪ್ರಕಟನಾದ. ಅಲ್ಲಿಂದ ಆತ ದೇವಕಿಯ ಹೃದಯಕ್ಕೆ ವರ್ಗಾವಣೆಯಾದ. ಅದು ಕೇವಲ ಒಂದು ದಿವ್ಯ ತೇಜಸ್ಸಿನ ಹಸ್ತಾಂತರ.

ದೇವಕಿಯ ಮುಖದಲ್ಲಿ ಆ ದಿನಗಳಲ್ಲಿ ಒಂದು ವಿಚಿತ್ರ ಹೊಳಪಿತ್ತು. ಕತ್ತಲ ಕೋಣೆಯನ್ನು ಸೀಳುವಂತಹ ಕಾಂತಿ ಅವಳನ್ನು ಆವರಿಸಿತ್ತು. ಕಂಸನಿಗೆ ಆ ಬೆಳಕು ಕಣ್ಣು ಕುಕ್ಕಿತು. ತನ್ನನ್ನು ಕೊಲ್ಲುವವನು ಈಗಾಗಲೇ ಅವಳೊಳಗೆ ಆಶ್ರಯ ಪಡೆದಿದ್ದಾನೆಂಬ ಸತ್ಯ ಕಂಸನ ಎದೆಯಲ್ಲಿ ನಡುಕ ಹುಟ್ಟಿಸಿತು.
ಇಲ್ಲಿ ಭಾಗವತವು ಮನುಷ್ಯನ ಮನೋವಿಜ್ಞಾನದ ಅಚ್ಚರಿಯೊಂದನ್ನು ತೆರೆದಿಡುತ್ತದೆ. ಕಂಸ ಕೃಷ್ಣನನ್ನು ಪ್ರೀತಿಸಲಿಲ್ಲ, ಭಜಿಸಲಿಲ್ಲ. ಆದರೆ ತೀವ್ರವಾದ ಭಯ ಮತ್ತು ದ್ವೇಷದಿಂದಾಗಿ ಅವನ ಪ್ರತಿ ಉಸಿರಿನಲ್ಲೂ ಕೃಷ್ಣನೇ ತುಂಬಿಕೊಂಡಿದ್ದ. ತಿಂದರೂ, ಮಲಗಿದರೂ, ಎದ್ದರೂ ಕಂಸನಿಗೆ ಕೃಷ್ಣನದ್ದೇ ಧ್ಯಾನ. ಇದೊಂಥರಾ ವಿಲೋಮವಾದ ಕೃಷ್ಣಪ್ರಜ್ಞೆ.
ಇದೇ ಹೊತ್ತಿಗೆ ಯಾರ ಕಣ್ಣಿಗೂ ಬೀಳದಂತೆ ಬ್ರಹ್ಮ, ಶಿವ ಮತ್ತಿತರ ದೇವತೆಗಳು ಆ ಕತ್ತಲ ಸೆರೆಮನೆಗೆ ಬರುತ್ತಾರೆ. ದೇವಕಿಯ ಗರ್ಭವನ್ನು ಕುರಿತು ಅವರು ಮಾಡುವ ಸ್ತುತಿಯೇ ‘ಗರ್ಭ-ಸ್ತುತಿ’. “ನೀನು ಸತ್ಯಸಂಕಲ್ಪ. ಈ ಜಗತ್ತು ಹುಟ್ಟುವ ಮುನ್ನವೂ ನೀನಿದ್ದೆ, ಅಳಿದ ಮೇಲೂ ಇರುತ್ತೀಯೆ. ನಿನ್ನ ಪಾದಗಳೇ ನಮಗೆ ಆಶ್ರಯ” ಎಂದು ಪ್ರಾರ್ಥಿಸಿ ಅವರು ಕಣ್ಮರೆಯಾಗುತ್ತಾರೆ. ಪರಮಸತ್ಯವೊಂದು ಭೌತಿಕ ಜಗತ್ತಿನಲ್ಲಿ ಮೈದಳೆಯುವಾಗ ಪ್ರಕೃತಿಯೂ ಮೌನವಾಗುತ್ತದೆ.
ಅದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ, ರೋಹಿಣಿ ನಕ್ಷತ್ರ.
ದಿಕ್ಕುಗಳು ನಿರ್ಮಲವಾಗಿದ್ದವು. ಆಕಾಶದಲ್ಲಿ ನಕ್ಷತ್ರಗಳು ಅಸಾಮಾನ್ಯವಾಗಿ ಮಿನುಗುತ್ತಿದ್ದವು. ಹರಿಯುವ ನದಿಗಳ ನೀರು ಸ್ಫಟಿಕದಂತೆ ತಿಳಿಯಾಗಿತ್ತು. ಕಾಡಿನಲ್ಲಿ ಹಕ್ಕಿಗಳಿಗೂ ಒಳಗೆಲ್ಲೋ ಅಕಾರಣವಾದ ಆನಂದ. ತಂಗಾಳಿ ಬೀಸುತ್ತಿತ್ತು. ಆ ಮಧ್ಯರಾತ್ರಿಯ ಕತ್ತಲಲ್ಲಿ, ಪೂರ್ವ ದಿಕ್ಕಿನಲ್ಲಿ ಹುಣ್ಣಿಮೆಯ ಚಂದ್ರ ಉದಯಿಸುವಂತೆ ಭಗವಂತ ಪ್ರಕಟನಾದ.
ಅದು ಶಿಶುವಿನ ಜನನವಾಗಿರಲಿಲ್ಲ. ಅಲ್ಲಿ ಅಳುವಿರಲಿಲ್ಲ. ಮಥುರೆಯ ಆ ಕತ್ತಲ ಕೋಣೆಯಲ್ಲಿ ನಿಂತಿದ್ದು ಸಾಕ್ಷಾತ್ ನಾರಾಯಣ. ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದ ನಾಲ್ಕು ತೋಳುಗಳು. ಹೊಸ ಕಾರ್ಮೋಡದಂತಹ ಕಡುನೀಲಿ ಮೈಬಣ್ಣ. ಕತ್ತಿನಲ್ಲಿ ಹೊಳೆಯುವ ಕೌಸ್ತುಭ ಮಣಿ. ಎದೆಯ ಮೇಲೆ ಶ್ರೀವತ್ಸ ಲಾಂಛನ.
ರೇಷ್ಮೆಯ ಪೀತಾಂಬರ, ತಲೆಯ ಮೇಲೆ ವೈಡೂರ್ಯದ ಕಿರೀಟ. ಅವನ ದೇಹದ ಕಾಂತಿಗೆ ಸೆರೆಮನೆಯ ಕತ್ತಲು ಬೆಚ್ಚಿ ಓಡಿತ್ತು. ಭಗವಂತ ತಾನು ಯಾರು, ಯಾವ ಕಾರಣಕ್ಕಾಗಿ ಬಂದಿದ್ದೇನೆ ಎಂಬುದನ್ನು ವಸುದೇವ ದೇವಕಿಯರಿಗೆ ನೆನಪಿಸಲು ಆರಿಸಿಕೊಂಡ ರೂಪವದು.

ಮಗನನ್ನು ಆ ರೂಪದಲ್ಲಿ ನೋಡಿದ ವಸುದೇವನ ಕೈಗಳು ತಾನಾಗಿಯೇ ಮುಗಿದುಕೊಂಡವು. “ನೀನು ಪ್ರಕೃತಿಗೂ ಮೀರಿದವನು. ನೀನೇ ಎಲ್ಲವನ್ನೂ ಸೃಷ್ಟಿಸಿ ಅದರೊಳಗೆ ಇದ್ದಂತೆ ಕಾಣುತ್ತೀಯೆ. ಆದರೆ ನಿನಗೆ ಯಾವ ಅಂಟೂ ಇಲ್ಲ” ಎಂದು ಆತ ಸ್ತುತಿಸಿದ. ವಾಸ್ತವದ ಅರಿವಾದ ಮೇಲೆ ವಸುದೇವನಿಗೆ ಕಂಸನ ಭಯ ಉಳಿದಿರಲಿಲ್ಲ.
ಆದರೆ ದೇವಕಿ? ಆಕೆಯೂ ಪರಮಾತ್ಮನನ್ನು ಗುರುತಿಸಿದಳು. “ಕಾಲ ನಿನ್ನದೊಂದು ಅಂಶ. ಶರಣಾದವರಿಗೆ ಸಾವಿನ ಭಯವಿಲ್ಲ” ಎಂದು ಸ್ತುತಿಸಿದಳು. ಆದರೆ ಆಕೆಯೊಳಗಿನ ತಾಯಿಯ ಕರುಳು, ದೈವಿಕ ಜ್ಞಾನವನ್ನು ಮೀರಿ ನಿಂತಿತ್ತು. ಮಗ ಎಷ್ಟೇ ದೊಡ್ಡವನಾದರೂ ತಾಯಿಗೆ ಆತ ಮಗುವೇ ಅಲ್ಲವೇ?
ಕಂಸನಿಗೆ ತನ್ನ ಮಗ ಸಿಕ್ಕಿಬಿದ್ದರೆ ಏನಾಗಬಹುದು ಎಂಬ ಹೆದರಿಕೆ ಅವಳನ್ನು ಆವರಿಸಿತು. “ನಿನ್ನ ಈ ದಿವ್ಯ ರೂಪವನ್ನು ಕಂಸ ನೋಡಿದರೆ ಅಪಾಯ. ದಯವಿಟ್ಟು ಈ ನಾಲ್ಕು ತೋಳುಗಳನ್ನು ಮುಚ್ಚಿಕೊಂಡು, ಒಂದು ಸಾಮಾನ್ಯ ಮಗುವಾಗಿಬಿಡು ತಂದೆ” ಎಂದು ಅವಳು ಅಂಗಲಾಚಿದಳು.
ಅವಳ ಮಾತಿಗೆ ಓಗೊಡುವ ಮುನ್ನ ಭಗವಂತ, ಅವರಿಬ್ಬರ ಜನ್ಮಾಂತರದ ರಹಸ್ಯವನ್ನು ಬಿಚ್ಚಿಟ್ಟ. ಸ್ವಾಯಂಭುವ ಮನುವಿನ ಕಾಲದಲ್ಲಿ ಅವರು ಪೃಶ್ನಿ ಮತ್ತು ಸುತಪ ಎಂಬ ಹೆಸರಿನಲ್ಲಿದ್ದರು. ಹನ್ನೆರಡು ಸಾವಿರ ದೇವಮಾನ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ್ದ ಅವರನ್ನು ಮೆಚ್ಚಿ ಭಗವಂತ ದರ್ಶನವಿತ್ತಿದ್ದ.
ಆಗ ಅವರು ‘ನಿನ್ನಂತಹುದೇ ಮಗ ಬೇಕು’ ಎಂದು ಬೇಡಿದ್ದರು. ಜಗತ್ತಿನಲ್ಲಿ ತನಗೆ ಸಮಾನರಾದವರು ತಾನೇ ಆದಕಾರಣ, ಸ್ವತಃ ತಾನೇ ಮಗನಾಗಿ ಬರುವುದಾಗಿ ಭಗವಂತ ಮಾತುಕೊಟ್ಟಿದ್ದ. ಅದರಂತೆ ಮೊದಲ ಜನ್ಮದಲ್ಲಿ ‘ಪೃಶ್ನಿಗರ್ಭ’ನಾಗಿ, ಎರಡನೇ ಜನ್ಮದಲ್ಲಿ ಅದಿತಿ-ಕಶ್ಯಪರ ಮಗನಾಗಿ ‘ವಾಮನ’ನಾಗಿ ಅವತರಿಸಿದ್ದ. ಇದು ಮೂರನೇ ಜನ್ಮ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆತ ಮತ್ತೆ ಬಂದಿದ್ದ.
ಇಷ್ಟು ಹೇಳಿ ಆತ ಪುಟ್ಟ ಶಿಶುವಾಗಿ ಬದಲಾದ.
ಅದೇ ಕ್ಷಣಕ್ಕೆ ದೂರದ ಗೋಕುಲದಲ್ಲಿ ನಂದಮಹಾರಾಜ ಮತ್ತು ಯಶೋದೆಯ ಮನೆಯಲ್ಲಿ ಭಗವಂತನ ಆಂತರಿಕ ಶಕ್ತಿಯಾದ ಯೋಗಮಾಯೆ ಜನ್ಮತಾಳಿದ್ದಳು. ಭಗವಂತನ ಪ್ರೇರಣೆಯಂತೆ ವಸುದೇವ ಮಗುವನ್ನು ಎತ್ತಿಕೊಂಡ. ಕಾವಲುಗಾರರು ಗಾಢ ನಿದ್ದೆಗೆ ಜಾರಿದರು. ಸರಪಳಿಗಳು ಕಳಚಿಕೊಂಡವು. ಬೀಗಗಳು ಒಡೆದು ಬಾಗಿಲು ತೆರೆದುಕೊಂಡವು.

ಹೊರಗೆ ಧಾರಾಕಾರ ಮಳೆ. ಮಗುವನ್ನು ಬುಟ್ಟಿಯಲ್ಲಿ ಹೊತ್ತು ವಸುದೇವ ಹೆಜ್ಜೆ ಹಾಕಿದಾಗ, ಆದಿಶೇಷ ತನ್ನ ಹೆಡೆಗಳನ್ನು ಛತ್ರಿಯಂತೆ ಚಾಚಿದ. ಎದುರಿಗೆ ಉಕ್ಕಿ ಹರಿಯುತ್ತಿದ್ದ ಯಮುನೆಗೆ ಒಡೆಯನ ಪಾದ ಸ್ಪರ್ಶಿಸುವ ತವಕ. ಒಮ್ಮೆ ಪಾದವನ್ನು ಸೋಕಿದ ಕೂಡಲೇ ಆಕೆ ದಾರಿ ಮಾಡಿಕೊಟ್ಟಳು.
ಗೋಕುಲ ಮಲಗಿತ್ತು. ಹೆರಿಗೆಯ ಆಯಾಸದಲ್ಲಿ ಯಶೋದೆಗೆ ತಾನು ಹೆತ್ತದ್ದು ಗಂಡೋ ಹೆಣ್ಣೋ ಎಂಬ ಅರಿವೂ ಇರಲಿಲ್ಲ. ವಸುದೇವ ತನ್ನ ಮಗನನ್ನು ಆಕೆಯ ಮಗ್ಗುಲಲ್ಲಿಟ್ಟು, ಅಲ್ಲಿ ಹುಟ್ಟಿದ್ದ ಹೆಣ್ಣುಮಗುವನ್ನು ಎತ್ತಿಕೊಂಡು ಮತ್ತೆ ಮಥುರೆಯ ಕತ್ತಲೆಗೆ ಮರಳಿದ. ಸೆರೆಮನೆ ಹೊಕ್ಕ ಕೂಡಲೇ ಸರಪಳಿಗಳು ಮತ್ತೆ ಬಂಧಿಯಾದವು. ಕಾವಲುಗಾರರಿಗೆ ಎಚ್ಚರವಾಯಿತು.
ಬೆಳಗಾಗುವಷ್ಟರಲ್ಲಿ ಗೋಕುಲದಲ್ಲಿ ಸಂಭ್ರಮದ ಹೊನಲು. ಗೋಪಾಲಕರೆಲ್ಲರೂ ಮೊಸರು, ಬೆಣ್ಣೆಗಳನ್ನು ಎರಚಿಕೊಳ್ಳುತ್ತಾ ಕುಣಿದಾಡಿದರು.
ಆದರೆ, ಈ ಇಡೀ ಜನ್ಮಾಷ್ಟಮಿಯ ವೃತ್ತಾಂತದಲ್ಲಿ ವೇದವ್ಯಾಸರು ಮತ್ತು ಆಚಾರ್ಯರು ಬಿಟ್ಟುಹೋಗುವ ಒಂದು ಮೌನವಾದ, ಆದರೆ ಅತ್ಯಂತ ಆಳವಾದ ಸತ್ಯವಿದೆ. ಮಥುರೆಯಲ್ಲಿದ್ದ ವಸುದೇವ ದೇವಕಿಯರಿಗೆ ಕೃಷ್ಣನೆಂದರೆ ‘ದೇವರು’. ಅಲ್ಲಿ ಜ್ಞಾನವಿತ್ತು, ಭಕ್ತಿ ಇತ್ತು, ಜೊತೆಗೆ ಒಂದು ಅಂಜಿಕೆಯೂ ಇತ್ತು.
ಆದರೆ ವೃಂದಾವನದಲ್ಲಿ ಯಶೋದೆಗೆ ಕೃಷ್ಣ ಕೇವಲ ಅವಳ ಕರುಳಿನ ಕುಡಿ. ಅಲ್ಲಿ ದೇವರಲ್ಲ, ಇರುವುದು ಕೇವಲ ‘ಮಗು’. ಜ್ಞಾನಕ್ಕಿಂತ, ಐಶ್ವರ್ಯಕ್ಕಿಂತ, ತಾಯ್ತನದ ಈ ಶುದ್ಧ ಪ್ರೀತಿಗೆ ಭಗವಂತ ಹೆಚ್ಚು ಒಲಿಯುತ್ತಾನೆ. ಇಸ್ಕಾನ್ ತತ್ತ್ವಜ್ಞಾನದ ತಿರುಳೇ ಇದು. ಇಡೀ ಜಗತ್ತನ್ನೇ ಸೃಷ್ಟಿಸಿ ಆಳುವ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ, ಯಶೋದೆಯ ಮಡಿಲಲ್ಲಿ ಸಾಮಾನ್ಯ ಹಸುಗೂಸಿನಂತೆ ಹಾಲು ಕುಡಿಯುತ್ತಿದ್ದ. ಆಕೆ ಗದರಿದರೆ ಹೆದರಿ ಅಳುತ್ತಿದ್ದ.
ಜ್ಞಾನವು ಭಗವಂತನನ್ನು ಅರಿಯಲು ಸಹಾಯ ಮಾಡಬಹುದು, ಆದರೆ ವಾತ್ಸಲ್ಯ ಮಾತ್ರ ಅವನನ್ನು ಕಟ್ಟಿಹಾಕಬಲ್ಲದು. ಮಥುರೆಯ ಸೆರೆಮನೆಯಲ್ಲಿ ಹುಟ್ಟಿದ ಕೃಷ್ಣ, ಗೋಕುಲದಲ್ಲಿ ಪ್ರೇಮದ ಸೆರೆಮನೆಗೆ ತಾನಾಗಿಯೇ ಒಳಪಟ್ಟಿದ್ದು ಭಾಗವತದ ಅತಿ ಸುಂದರ ಕಾವ್ಯ.






Leave a Reply