ಭಗವದ್‌ ವಿಜ್ಞಾನ : ಭಾಗವತ

ರಾಜನು ಹೀಗೆಂದನು : ನಾವು ಅರ್ಜುನನ ಕೀರ್ತಿಯ ಉತ್ತರಾಧಿಕಾರಿಗಳಾಗಿದ್ದೇವೆ. ಆದುದರಿಂದ ನೀನು ಕೈಮುಗಿದು ಶರಣಾಗತನಾಗಿರುವ ಕಾರಣ ನಿನ್ನ ಜೀವಕ್ಕಾಗಿ ಹೆದರಬೇಕಾಗಿಲ್ಲ. ಆದರೆ ನೀನು ಅಧರ್ಮ ಬಂಧುವಾಗಿರುವುದರಿಂದ ನಮ್ಮ ರಾಜ್ಯದಲ್ಲಿ ಉಳಿದಿರಲು ಸಾಧ್ಯವಿಲ್ಲ. (ಶ್ರೀಮದ್‌ ಭಾಗವತ, 1.17.31).

ಪರೀಕ್ಷಿತ ಮಹಾರಾಜನು ಪಾಂಡು ಕುಲಕ್ಕೆ ಸೇರಿದವನು. ಅರ್ಜುನನ ಕೀರ್ತಿಗೆ ಉತ್ತರಾಧಿಕಾರಿ. ಅವನಿಗೆ ತನ್ನ ಸ್ಥಾನದ ಬಗೆಗೆ ಅರಿವಿತ್ತು. ಆದುದರಿಂದ ಅವನು ಪಾದಗಳಿಗೆರಗಿದ್ದ ಕಲಿಪುರುಷನ ಬಳಿ ಎಚ್ಚರಿಕೆಯಿಂದ ವ್ಯವಹರಿಸಿದನು. ಶರಣಾದವರಿಗೆ ರಕ್ಷೆ ನೀಡುವುದು ಕ್ಷತ್ರಿಯ ಧರ್ಮ. ಆದುದರಿಂದ ಪರೀಕ್ಷಿತನು ಕಲಿಗೆ ಜೀವದಾನ ಮಾಡಿದನು. ಆದರೆ ಅಧರ್ಮದ ಮಿತ್ರನಾದ ಕಾರಣ ಅವನು ತನ್ನ ಕಲ್ಯಾಣ ರಾಜ್ಯದಲ್ಲಿ ಇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿ ರಾಜ ಧರ್ಮವನ್ನು ತೋರಿದ. ಇಲ್ಲಿ ಪ್ರಭುಪಾದರು `ಕಲ್ಯಾಣ ರಾಜ್ಯ’ ಎಂಬ ಪದ ಬಳಸಿರುವುದು ಸ್ವಾರಸ್ಯಕರವಾಗಿದೆ. ಇಲ್ಲಿ ರಾಜ್ಯ ಎಂದರೆ ಸರಕಾರ. `ಕಲ್ಯಾಣ ಸರಕಾರ’ ಎಂದರೆ ಎಲ್ಲ ನಾಗರಿಕರ ಹಿತವನ್ನು ಕಾಪಾಡುವುದು ತನ್ನ ಹೊಣೆ ಎಂದು ಭಾವಿಸುವ ಸರಕಾರ ಎಂದು ಅರ್ಥ. ಮೊದಲನೆಯ ಮತ್ತು ಎರಡನೆಯ ಮಹಾ ಯುದ್ಧದ ಸಂದರ್ಭದಲ್ಲಿ ಕಲ್ಯಾಣ ರಾಜ್ಯವಲ್ಲ, ಸಮರ ರಾಜ್ಯವೆಂದು ಪರಿಗಣಿಸಲಾಗಿತ್ತು. ಅಂದರೆ ಸರಕಾರವು ಸಂಪೂರ್ಣವಾಗಿ ಸಮರದಲ್ಲಿ ಮಗ್ನವಾಗಿತ್ತು. ಸರಕಾರಗಳು ಪ್ರಜೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸ್‌ ರಾಜ್ಯಗಳ ಉದಾಹರಣೆಗಳು ಇತಿಹಾಸ ಪುಟಗಳಲ್ಲಿವೆ.

ಪ್ರಭುಪಾದರು ಶ್ರೀಮದ್‌ ಭಾಗವತಕ್ಕೆ ಭಾವಾರ್ಥ ಬರೆಯುವಾಗಲೇ ಈ ಕಲ್ಯಾಣ ರಾಜ್ಯದ ಬಗೆಗೆ ಪ್ರಸ್ತಾವಿಸಿದ್ದಾರೆ. ಯುಧಿಷ್ಠಿರ ಅಥವಾ ಪರೀಕ್ಷಿತ ಮಹಾರಾಜರಿಗೆ ಕಲ್ಯಾಣ ರಾಜ್ಯದ ಬಗೆಗೆ ಅರಿವಿದ್ದದ್ದು ಸಹಜವೇ ಆಗಿತ್ತು. ಅನೇಕ ರಾಜ ಮಹಾರಾಜರಿಗೆ ಕಲ್ಯಾಣ ರಾಜ್ಯದ ಕಲ್ಪನೆ ಇತ್ತು ಎಂದು ಇತಿಹಾಸಕಾರರು ಶೋಧಿಸಿದ್ದಾರೆ ಆದರೆ ಆಧುನಿಕ ಕಲ್ಯಾಣ ರಾಜ್ಯಗಳು ಆರ್ಥಿಕ ಮತ್ತು ಸಾಮಾಜಿಕ ಅಂಶಗಳ ಮೇಲೆಯೇ ತಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸುತ್ತವೆ. ಆದರೆ ವೈದಿಕ ಕಾಲದಲ್ಲಿ ಲೌಕಿಕ, ಆರ್ಥಿಕ ಮತ್ತು ಸಾಮಾಜಿಕವಲ್ಲದೆ ಪ್ರಜೆಗಳ ಆಧ್ಯಾತ್ಮಿಕ ವಿಷಯಗಳಿಗೂ ಗಮನ ಕೊಡಲಾಗುತ್ತಿತ್ತು. ಅದು ಜನರ ಕಲ್ಯಾಣದ ಪ್ರಮುಖ ಅಂಶವೆಂದು ಭಾವಿಸಲಾಗಿತ್ತು. ಕೃಷ್ಣ ಪ್ರಜ್ಞೆಯ, ವೈದಿಕ ಕಾಲದ ರಾಜರುಗಳಿಗಷ್ಟೇ ಅದರ ಅರಿವಿತ್ತು.

ಪ್ರಭುಪಾದರು ಅದನ್ನು ಇನ್ನಷ್ಟು ವಿಸ್ತರಿಸಿದ್ದಾರೆ. “ನನ್ನ ಪೂರ್ವಜರಾದ ಪಾಂಡವರ ಕೀರ್ತಿಯ ಹೊಣೆ ಹೊತ್ತಿದ್ದೇನೆ” ಎಂದು ಪರೀಕ್ಷಿತನು ಹೇಳುತ್ತಾನೆ. ಪಾಂಡವರು ಶ್ರೀಕೃಷ್ಣನಿಂದ ನಿಯುಕ್ತರಾದ ಪ್ರತಿನಿಧಿಗಳು. ಅವನು ಅವರನ್ನು ಸಮರ ಭೂಮಿಗೆ ಕರೆತರುತ್ತಾನೆ. ಯಾವುದೇ ವೈಯಕ್ತಿಕ ಆಶಯಗಳಿಗೆ ಅಲ್ಲ. ಯುಧಿಷ್ಠಿರ ಮತ್ತು ಮುಂದೆ ಪರೀಕ್ಷಿತ ಮಹಾರಾಜರಂತಹ ಆದರ್ಶ ದೊರೆಗಳು ರಾಜ್ಯವಾಳಲಿ ಎಂಬುವುದೇ ಪ್ರಭುವಿನ ಉದ್ದೇಶವಾಗಿತ್ತು. ಆದುದರಿಂದ ಅಧರ್ಮ ಮಿತ್ರರು ತನ್ನ ರಾಜ್ಯದಲ್ಲಿ ಇರಲು ಪರೀಕ್ಷಿತನು ಅವಕಾಶ ನೀಡಲಿಲ್ಲ.

ಯುದ್ಧ ತಂತ್ರ

ಯುದ್ಧ ನಡೆಯಬೇಕು ಮತ್ತು ಅದರಲ್ಲಿ ಪಾಂಡವರು ವಿಜಯಿಗಳಾಗಬೇಕು ಎಂಬುವುದೇ ಕೃಷ್ಣನ ಉದ್ದೇಶವಾಗಿತ್ತು. ಅವನು ಅದಕ್ಕಾಗಿ ಯುದ್ಧ ತಂತ್ರಗಳನ್ನು ರೂಪಿಸಿದ ಎಂದು ಪ್ರಭುಪಾದರು ಭಾಗವತಕ್ಕೆ ಭಾವಾರ್ಥ ಬರೆಯುವಾಗ ಅನೇಕ ಕಡೆಗಳಲ್ಲಿ ಉಲ್ಲೇಖಿಸಿದ್ದಾರೆ. ಏಕೆ? ಕೃಷ್ಣನಿಗೆ ಯುಧಿಷ್ಠಿರನು ರಾಜ್ಯವಾಳಬೇಕೆಂದಿತ್ತು. ಕುರುಕ್ಷೇತ್ರ ಯುದ್ಧವು 18 ದಿನ ನಡೆಯಿತೆಂದು ಮಹಾಭಾರತದಲ್ಲಿ ವಿವರಿಸಲಾಗಿದೆ. ಭೀಷ್ಮ, ದ್ರೋಣ, ದುರ್ಯೋಧನ, ಕರ್ಣರಂತಹ ಶ್ರೇಷ್ಠ ಯೋಧರಿಂದ ಕೌರವ ಸೇನೆಯು ಶಕ್ತಿಯುತವಾಗಿತ್ತು. ಹತ್ತು ದಿನ ಸರಿದರೂ ಏನೂ ಪ್ರಗತಿ ಇಲ್ಲ. ಉಭಯ ಪಕ್ಷಗಳಲ್ಲಿಯೂ ಅಸಂಖ್ಯ ಸೈನಿಕರು, ಆನೆ ಮತ್ತು ಕುದುರೆಗಳು ಸಾಯುತ್ತಿದ್ದವು. ಇದರಿಂದ ಏನು ಉಪಯೋಗ?

ಆ ಸಮಯದಲ್ಲಿ ಕೃಷ್ಣನು ಪಾಂಡವರನ್ನು ಕರೆದು “ನೀವು ಮುಗಿಸಲೇ ಬೇಕು, ನೀವು ಭೀಷ್ಮರನ್ನು ಕೊಲ್ಲಬೇಕು. ಅವರು ಸೋಲರಿಯದವರು.” ಅವರನ್ನು ಕೊಲ್ಲುವುದು ಹೇಗೆ? ಅವರು ಸ್ತ್ರೀ ಹತ್ಯೆ ಮಾಡುವುದಿಲ್ಲವೆಂದು ಶಪಥ ಮಾಡಿದ್ದಾರೆ. ಸ್ತ್ರೀಯರು ಸಮರ ಭೂಮಿಗೆ ಬರುವುದಿಲ್ಲ. ಆದುದರಿಂದ ಕೃಷ್ಣನ ಬಳಿ ಒಂದು ಉಪಾಯವಿತ್ತು. ಶಿಖಂಡಿಯನ್ನು ಕರೆತರಬೇಕೆಂದು ಕೃಷ್ಣ ಹೇಳಿದ. ವಾಸ್ತವವಾಗಿ ಸ್ತ್ರೀಯಾಗಿದ್ದ ಶಿಖಂಡಿ ಮುಂದೆ ಯಕ್ಷನ ಅನುಗ್ರಹದಿಂದ ಲಿಂಗ ಪರಿವರ್ತಿತಳಾದಳು. ಮುಂದೆ ಅವಳು `ಅವನು’ ಆದಳು. ಶಿಖಂಡಿಯನ್ನು ಕಂಡು ಭೀಷ್ಮರು ತಮ್ಮ ಅಸ್ತ್ರಗಳನ್ನು ಬದಿಗಿಟ್ಟರು. ಆಗ ಅರ್ಜುನನು ಬಾಣಗಳ ಮಳೆ ಸುರಿಸಿದ. ಭೀಷ್ಮ ಕೆಳಗುರುಳಿದರು.

ಕೌರವರ ಪಡೆಯಲ್ಲಿದ್ದ ಮತ್ತೊಬ್ಬ ದೊಡ್ಡ ಯೋಧರೆಂದರೆ ದ್ರೋಣರು. ಈ ಬಾರಿ ಕೂಡ ಕೃಷ್ಣ ಪಾಂಡವರನ್ನು ಕರೆದು ತನ್ನ ತಂತ್ರ ತಿಳಿಸಿದ. ಅಶ್ವತ್ಥಾಮ ಎಂಬ ಗಜವಿದೆ, ಅದನ್ನು ಕೊಂದು ದ್ರೋಣನ ಪುತ್ರ ಅಶ್ವತ್ಥಾಮನ ಹತ್ಯೆಯಾಯಿತೆಂದು ವದಂತಿ ಹರಡಿ ಎಂದು ಸೂಚಿಸಿದ. ಪುತ್ರನ ವಧೆಯಾಯಿತೆಂದು ದ್ರೋಣರು ಕೇಳಿದರು. ಅದೇ ಸಮಯದಲ್ಲಿ ಅವರು ಯುಧಿಷ್ಠಿರನನ್ನು ಭೇಟಿ ಮಾಡುವ ಅವಕಾಶ ಉಂಟಾಯಿತು. ಆಗ ಅವರು “ಅಶ್ವತ್ಥಾಮನ ಹತ್ಯೆಯಾಯಿತೆಂದು ನೀನೂ ಕೇಳಿದೆಯಾ?” ಎಂದು ಪ್ರಶ್ನಿಸುತ್ತಾರೆ. ಯುಧಿಷ್ಠಿರ ಹೇಳುವುದೆಲ್ಲ ಸತ್ಯ. ಕೃಷ್ಣನ ಆದೇಶದಂತೆ ಯುಧಿಷ್ಠಿರನು ಹೌದೆನ್ನುತ್ತಾನೆ. ಆದರೆ ಅವನು ಕೆಳ ಧ್ವನಿಯಲ್ಲಿ `ಗಜ’ ಎಂದದ್ದು ಯಾರಿಗೂ ಕೇಳಿಸುವುದಿಲ್ಲ. ಆದರೆ ದ್ರೋಣರು ಅಶ್ವತ್ಥಾಮನ ಹತ್ಯೆಯಾಯಿತೆಂದು ಕೇಳಿ ಖಿನ್ನರಾದರು. ಅನಂತರ ಅವರನ್ನು ಸೋಲಿಸುವುದು ಸುಲಭವಾಯಿತು.

ಮುಂದಿನ ಪ್ರಬಲ ಯೋಧನೇ ಕರ್ಣ. ಕೃಷ್ಣನು ಕರ್ಣನಿಗೆ ಅವನ ಜನ್ಮ ರಹಸ್ಯವನ್ನು ಅರುಹುತ್ತಾನೆ. ಅವನು ಪಾಂಡುವಿನ ಹಿರಿಯ ಪುತ್ರನೆಂದು ಕೃಷ್ಣನು ಹೇಳಿದಾಗ ಕರ್ಣನಿಗೆ ಅದನ್ನು ಸ್ವೀಕರಿಸುವುದೇ ಕಷ್ಟವಾಗುತ್ತದೆ. ಈವರೆಗೆ ಶೂದ್ರ ಪುತ್ರನೆಂದುಕೊಂಡಿದ್ದ ಅವನಿಗೆ ಕೃಷ್ಣನ ಮಾತು ಆಘಾತ ತರುತ್ತದೆ. “ಪಾಂಡವರೊಂದಿಗೆ ಸೇರಿಕೋ. ಹಿರಿಯವನಾದ ಕಾರಣ ನಿನಗೇ ರಾಜ್ಯ ಸಿಗುತ್ತದೆ. ದುರ್ಯೋಧನನೊಂದಿಗೆ ಇದ್ದರೆ ರಾಜನ ಮಿತ್ರನಾಗಿ ಉಳಿಯಬೇಕಾಗುತ್ತದೆ” ಎಂದು ಕೃಷ್ಣನು ಒತ್ತಾಯಿಸುತ್ತಾನೆ. ದೊಡ್ಡ ಆಮಿಷವೇ. ಆದರೆ ಕರ್ಣನು ಪಕ್ಷಾಂತರಗೊಳ್ಳಲಿಲ್ಲ. ಅನಂತರ ಅರ್ಜುನ ಮತ್ತು ಕರ್ಣರ ಮಧ್ಯೆ ಯುದ್ಧ. ಕರ್ಣನ ಒಂದು ಬಾಣವು ಅರ್ಜುನನ ಶಿರವನ್ನೇ ಛೇದಿಸುವಂತಿತ್ತು. ಆಗ ಕೃಷ್ಣನು ತನ್ನ ಅಲೌಕಿಕ ತಂತ್ರದಿಂದ ರಥವನ್ನು ಸ್ವಲ್ಪ ಬಗ್ಗುವಂತೆ ಮಾಡಿದಾಗ ಬಾಣವು ಅರ್ಜುನನ ಕಿರೀಟಕ್ಕೆ ಹೊಡೆಯಿತು. ಅನಂತರ ಕರ್ಣನ ಚಕ್ರವು ನೆತ್ತರಿನ ಕೆಸರಿನಲ್ಲಿ ಹೂತುಹೋಯಿತು. ಅವನು ರಥದಿಂದ ಇಳಿದು “ಅರ್ಜುನ, ನಾನು ಚಕ್ರವನ್ನು ಎತ್ತುತ್ತಿರುವೆ. ನೀನು ಈಗ ಆಕ್ರಮಣ ಮಾಡಲಾರೆ” ಎಂದನು. ಆದರೆ ಕೃಷ್ಣನು ಆಕ್ರಮಣ ಮಾಡಲು ಹೇಳಿದನು. ಆಗ ಅರ್ಜುನನು ಕರ್ಣನನ್ನು ವಧಿಸಿದ.

ಇನ್ನುಳಿದವನು ದುರ್ಯೋಧನ. ಅವನೂ ಪ್ರಬಲ ಯೋಧನೇ. ಅವನು ಭೀಮನೊಂದಿಗೆ ಗದಾಯುದ್ಧದಲ್ಲಿದ್ದ. ಕ್ಷತ್ರಿಯ ಧರ್ಮದಂತೆ ಸೊಂಟದ ಕೆಳಗೆ ಹೊಡೆಯುವಂತಿಲ್ಲ. ದುರ್ಯೋಧನನ ದೇಹವು ಸೊಂಟದ ಭಾಗ ಬಿಟ್ಟು ಉಳಿದಂತೆ ಉಕ್ಕಿನಂತಿತ್ತು. ದುರ್ಯೋಧನನ ತೊಡೆಗೆ ಹೊಡಿ ಎಂದು ಕೃಷ್ಣನು ಭೀಮನಿಗೆ ಸೂಚನೆ ನೀಡಿದ. ಕ್ಷತ್ರಿಯ ಧರ್ಮಕ್ಕೆ ವಿರುದ್ಧವಾಗಿ ಭೀಮನು ದುರ್ಯೋಧನನ ತೊಡೆಗೆ ಹೊಡೆದ. ಕುರು ವೀರ ಕೆಳಗೆ ಬಿದ್ದ.

ಕೃಷ್ಣ ನಿಸ್ವಾರ್ಥಿ

ಇದೆಲ್ಲ ಕೃಷ್ಣನೇ ರೂಪಿಸಿದ್ದು. ಯಾಕೆ? ಕುರುಕ್ಷೇತ್ರ ಯುದ್ಧ ನಡೆಯುವಂತೆ ಮಾಡಿದ ಕೃಷ್ಣನಿಗೆ ಯಾವ ಸ್ವಾರ್ಥವೂ ಇರಲಿಲ್ಲ. ಆದರ್ಶ ರಾಜ ಯುಧಿಷ್ಠಿರನು ರಾಜ್ಯವನ್ನಾಳಲಿ ಎಂಬುವುದೇ ಸದುದ್ದೇಶ. ಕೃಷ್ಣನಿಗಿದ್ದ ಆಸಕ್ತಿ ಎಂದರೆ ಪ್ರಜೆಗಳ ಆಧ್ಯಾತ್ಮಿಕ ಕಲ್ಯಾಣ. ಸಾಮಾನ್ಯ ಲೇಖಕರು ಮತ್ತು ವಿದ್ವಾಂಸರು ಮಹಾಭಾರತವನ್ನು ಓದುವಾಗ ಈ ಅಂಶವನ್ನು ಪರಿಗಣಿಸುವುದಿಲ್ಲ. “ನೋಡಿ, ಹೇಗೆ ಅನ್ಯಾಯದಿಂದ ಕೃಷ್ಣ ಮತ್ತು ಪಾಂಡವರು ಕೌರವರನ್ನು ಪರಾಜಯಗೊಳಿಸಿದರು” ಎಂದೇ ಹೇಳುತ್ತಾರೆ. ನೀವು ಪ್ರಬಲ ಸೇನೆ ಹೊಂದಿರುವ ಬಲಶಾಲಿ ರಾಜರಾಗಿರಬಹುದು. ಆದರೆ ನಿಮಗೆ ಶ್ರೀ ಕೃಷ್ಣನ ಅನುಗ್ರಹ ಇಲ್ಲದಿದ್ದರೆ ನೀವು ನಾಶವಾದಂತೆ ಎಂದು ಆಚಾರ್ಯರು ಹೇಳುತ್ತಾರೆ. ಇದೇ ಮಹಾಭಾರತದ ಸಂದೇಶ.

ಕೃಷ್ಣನಲ್ಲಿ ಸಂದೇಶವಿದೆ. ಪ್ರಭುಪಾದರು ಅದನ್ನು ಈ ಲೋಕದಲ್ಲಿ ಕೃಷ್ಣನ ಅಲೌಕಿಕ ವ್ಯವಹಾರ ಎನ್ನುತ್ತಾರೆ. ಕೃಷ್ಣನು ಕುಪ್ರಸಿದ್ಧನಾಗಬಹುದು. ಆದರೆ ಅವನು ಅದನ್ನು ಲಕ್ಷಿಸುವುದಿಲ್ಲ. ಆದರೆ ಅವನಿಗೆ ತನ್ನ ಭಕ್ತರ ರಕ್ಷಣೆ ಮಾತ್ರ ಮುಖ್ಯ. ತನ್ನ ಭಕ್ತರು ರಾಜ್ಯಭಾರ ವಹಿಸಿಕೊಳ್ಳಬೇಕೆಂಬುದೇ ಅವನ ಅಪೇಕ್ಷೆ. ಏಕೆಂದರೆ ಭಕ್ತರು ಪ್ರಜೆಗಳ ಆಧ್ಯಾತ್ಮಿಕ ಕಲ್ಯಾಣವನ್ನು ಸಾಕಾರಗೊಳಿಸುತ್ತಾರೆ. ಅದೇ ಕೃಷ್ಣನ ಆಸಕ್ತಿ. ಭಾಗವತದ ಎರಡನೆಯ ಸ್ಕಂಧದಲ್ಲಿ ಶ್ಲೋಕವೊಂದು ನನ್ನ ಗಮನ ಸೆಳೆಯಿತು. ಅದು ಆಧ್ಯಾತ್ಮಿಕ ಕಲ್ಯಾಣ ಕುರಿತಂತೆ ಕೃಷ್ಣನಿಗಿರುವ ಕಾಳಜಿಯನ್ನು ಬಿಂಬಿಸುತ್ತದೆ. ಬ್ರಹ್ಮನು ಮೂಲ ಭಾಗವತ, ಚತುಸ್‌ ಶ್ಲೋಕಿ ಭಾಗವತವನ್ನು ಸ್ವೀಕರಿಸಿದ್ದು ಮತ್ತು ಮುಂದೆ ಈ ಜ್ಞಾನವನ್ನು ನಾರದ ಮುನಿಗಳಿಗೆ ಅರುಹಿದ ಭಾಗ ಇದು. ಅವನು ಹೇಳಿದ್ದೇನು?

ಇದಂ ಭಾಗವತಂ ನಾಮ ಯನ್ಮೇ ಭಗವತೋದಿತಮ್‌ ॥

“ಓ ನಾರದನೆ, ಈ ಭಗವದ್‌ ವಿಜ್ಞಾನವಾದ ಶ್ರೀಮದ್ಭಾಗವತವನ್ನು ದೇವೋತ್ತಮ ಪರಮ ಪುರುಷನೇ ನನಗೆ ಹೇಳಿದನು. ಅದು ಅವನ ವೈವಿಧ್ಯಮಯ ಶಕ್ತಿ ಮತ್ತು ಪ್ರಭಾವವನ್ನು ವಿವರಿಸುವ ಸಂಚಯ. ಈ ವಿಜ್ಞಾನವನ್ನು ದಯವಿಟ್ಟು ನೀನೇ ವಿಸ್ತರಿಸಿ ಹೇಳಬೇಕು.”

ಆ ರೀತಿಯ ವಿಸ್ತರಣೆಗೆ ಏನು ಆಧಾರವಾಗಬೇಕು? ಈ ಶ್ಲೋಕದಲ್ಲಿ ಬ್ರಹ್ಮನು ಅದನ್ನು ಹೇಳುತ್ತಾನೆ ಮತ್ತು ಶ್ರೀಲ ಪ್ರಭುಪಾದರು ಅದಕ್ಕೆ ಸ್ವಾರಸ್ಯಕರವಾದ ಭಾವಾರ್ಥ ನೀಡಿದ್ದಾರೆ.

ಯಥಾ ಹರೌ ಭಗವತಿ ನೃಣಾಂ ಭಕ್ತಿರ್‌ ಭವಿಷ್ಯತಿ ।

ಸರ್ವಾತ್ಮನಿ ಅಖಿಲಾಧಾರೇ ಇತಿ ಸಂಕಲ್ಪ್ಯ ವರ್ಣಯ ॥

“ದೃಢ ಸಂಕಲ್ಪದಿಂದ ಭಗವದ್‌ ವಿಜ್ಞಾನವನ್ನು ದಯವಿಟ್ಟು ವಿವರಿಸು. ಇದರಿಂದ ಮಾನವ ಜೀವಿಗಳಿಗೆ ದೇವೋತ್ತಮ ಪರಮ ಪುರುಷನಾದ ಶ್ರೀ ಹರಿಯ ಬಗೆಗೆ ದಿವ್ಯಭಕ್ತಿಸೇವೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಶ್ರೀ ಕೃಷ್ಣನು ಎಲ್ಲ ಜೀವಿಗಳ ಪರಮಾತ್ಮನಾಗಿದ್ದಾನೆ ಮತ್ತು ಎಲ್ಲ ಶಕ್ತಿಗಳ ಮೂಲ ಆಧಾರ.”

ಮಾನವ ಸಮಾಜದಲ್ಲಿ ಭಕ್ತಿಯನ್ನು ವೃದ್ಧಿಸುವಂತೆ ಮಾಡುವುದೇ ಇಂತಹ ವಿಸ್ತರಣೆಯ ಉದ್ದೇಶ. ಶ್ರೀಕೃಷ್ಣನು ಎಲ್ಲ ಆತ್ಮಗಳ ಆತ್ಮ, ಸರ್ವಾತ್ಮ. ಪ್ರತಿಯೊಂದಕ್ಕೂ ಆಧಾರ. ಇದೇ ಭಗವದ್‌ ವಿಜ್ಞಾನ ಎಂದು ಬ್ರಹ್ಮ ಹೇಳುತ್ತಾನೆ.

ಭಕ್ತಿ ಸೇವೆಯ ದರ್ಶನ

ಶ್ರೀಲ ಪ್ರಭುಪಾದರು ಭಾವಾರ್ಥದಲ್ಲಿ ಈ ಶ್ಲೋಕದ ಕೆಲವು ಸ್ವಾರಸ್ಯವಾದ ಅಂಶಗಳನ್ನು ಪ್ರಸ್ತಾವಿಸುತ್ತಾರೆ. ಜ್ಞಾನ ಪ್ರಸರಣದ ಮುಖ್ಯ ಉದ್ದೇಶ ಮಾನವ ಸಮಾಜದಲ್ಲಿ ಭಕ್ತಿಯನ್ನು ವೃದ್ಧಿಸುವುದು. ಅದನ್ನು ಭಾವನಾತ್ಮಕವಾಗಿ ಅಲ್ಲ, ವೈಜ್ಞಾನಿಕವಾಗಿ ಪ್ರಸ್ತುತಪಡಿಸಬೇಕು. ಏಕೆಂದರೆ ಭಾಗವತವು ಭಗವದ್‌ ವಿಜ್ಞಾನ.

ಶ್ರೀಮದ್ಭಾಗವತವು ಭಕ್ತಿಸೇವೆಯ ದರ್ಶನ ಶಾಸ್ತ್ರವಾಗಿದೆ ಮತ್ತು ದೇವೋತ್ತಮ ಪರಮ ಪುರುಷನೊಂದಿಗೆ ಮಾನವನ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸುತ್ತದೆ. ಶ್ರೀಮದ್ಭಾಗವತವು ಎಷ್ಟು ವೈಜ್ಞಾನಿಕವಾಗಿ ನಿರೂಪಿತವಾಗಿದೆಯೆಂದರೆ, ಈ ಮಹಾವಿಜ್ಞಾನದ ಪ್ರಾಮಾಣಿಕ ವಿದ್ಯಾರ್ಥಿಯಾದವನು ಗಮನವಿಟ್ಟು ಓದಿದರೆ ಸಾಕು ಅಥವಾ ಯೋಗ್ಯ ಪ್ರವಚನಕಾರನಿಂದ ತಪ್ಪದೆ ಕೇಳಿದರೆ ಸಾಕು, ಭಗವದ್‌ ವಿಜ್ಞಾನವನ್ನು ತಿಳಿಯಲು ಸಮರ್ಥನಾಗುತ್ತಾನೆ. ಹಾಗಾಗಿ ನಾರದರಿಗೆ ಅವರ ಗುರುಗಳು ವಿಜ್ಞಾನವನ್ನು ದೃಢಮನಸ್ಕರಾಗಿ ಮತ್ತು ಯೋಜಿತವಾಗಿ ನಿರೂಪಿಸುವಂತೆ ಅಪ್ಪಣೆ ಮಾಡಿದರು. ನಾರದರು ತಮ್ಮ ಜೀವನೋಪಾಯಕ್ಕಾಗಿ ಭಾಗವತದ ತತ್ತ್ವಗಳನ್ನು
ಬೋಧಿಸಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. ಅವರ ಗುರುಗಳು ಅವರಿಗೆ ಈ ವಿಷಯದ ಬಗ್ಗೆ ಬಹಳ ಗಂಭೀರವಾಗಿ ಮತ್ತು ಧರ್ಮಪ್ರಚಾರದ ಉತ್ಸಾಹದಿಂದ ಕಾರ್ಯನಿರ್ವಹಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದರು.

ಧರ್ಮ ಪ್ರಚಾರದ ಸ್ಫೂರ್ತಿಯು ಕ್ರಿಶ್ಚಿಯನ್ನರಲ್ಲಿ ಮಾತ್ರ ಇದೆ ಎಂದು ಕೆಲವರು ಭಾವಿಸುತ್ತಾರೆ. ಏಕೆಂದರೆ ಕ್ರೈಸ್ತ ಧರ್ಮ ಪ್ರಚಾರಕರಿದ್ದರು ಮತ್ತು ಮತಾಂತರಕ್ಕಾಗಿ ಅವರು ಅನೇಕ ವಿಧಾನಗಳನ್ನು ಅಳವಡಿಸಿದ್ದರು. ಅವರಲ್ಲಿ ಮತ ಪ್ರಚಾರದ ಉತ್ಸಾಹವಿದೆ. ಆದರೆ ಶ್ರೀಲ ಪ್ರಭುಪಾದರು “ಅದು ಹಾಗಲ್ಲ, ನೀವು ಈ ವಿಷಯವನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕು, ಧರ್ಮ ಪ್ರಚಾರದ ಸ್ಫೂರ್ತಿ ಹೊಂದಿ ದೃಢ ಸಂಕಲ್ಪದಿಂದ ಮಾಡಬೇಕು” ಎಂದು ಹೇಳಿದ್ದಾರೆ. ಒಂದು ನಿರ್ದಿಷ್ಟ ಗುರಿ ಅಥವಾ ಧ್ಯೇಯವನ್ನು ಸಾಧಿಸುವುದೇ ಧರ್ಮ ಪ್ರಚಾರದ ಅರ್ಥ ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ. ಅಪಲೋ ಮಿಷನ್‌ ಸುದ್ದಿಯಲ್ಲಿದ್ದಾಗ, ವಿಜ್ಞಾನಿಗಳೂ ಸೇರಿದಂತೆ ಇಡೀ ದೇಶ ಅದರ ಕಾರ್ಯ ಸಾಧನೆಯತ್ತ ಮುಖ ಮಾಡಿತ್ತು. ಅಪಲೋ ಕಾರ್ಯಾಚರಣೆಗೆ ಮುನ್ನ ಕ್ಷಣ ಗಣನೆ ನಡೆದಿತ್ತು. ನಗರಗಳಲ್ಲಿ ಈ ಬಗೆಗೆ ದೊಡ್ಡ ಭಿತ್ತಿಪತ್ರಗಳನ್ನೂ ಹಾಕಲಾಗಿತ್ತು. ಅದನ್ನು ಒಂದು ಧ್ಯೇಯವನ್ನಾಗಿ ಸ್ವೀಕರಿಸಲಾಗಿತ್ತು.

ಧರ್ಮ ಪ್ರಚಾರ

ಆದುದರಿಂದ ಶ್ರೀಲ ಪ್ರಭುಪಾದರು ಹೇಳುತ್ತಾರೆ, “ನನಗೆ ನನ್ನ ಆಧ್ಯಾತ್ಮಿಕ ಗುರುಗಳು ಈ ವಿಷಯವನ್ನು ಧರ್ಮ ಪ್ರಚಾರದ ಸ್ಫೂರ್ತಿಯಿಂದ ಕೈಗೊಳ್ಳಬೇಕು” ಎಂದು ಸೂಚಿಸಿದ್ದರು. ಆಚಾರ್ಯರಲ್ಲಿದ್ದ ಸ್ಫೂರ್ತಿಯ ರೀತಿಯದು, ಮಾನವ ಸಮಾಜದಲ್ಲಿ ಆಧ್ಯಾತ್ಮಿಕ ಅಥವಾ ಅಲೌಕಿಕ ಕಲ್ಯಾಣವನ್ನು ಸ್ಥಾಪಿಸಿ ನಿರ್ವಹಿಸುವ ವಿಧಾನವದು. ಶ್ರೀಕೃಷ್ಣನು ಮಹಾಭಾರತದಲ್ಲಿ ಎಲ್ಲ ರೀತಿಯ ತಂತ್ರಗಳನ್ನು ಹೂಡಲೂ ಅದೇ ಕಾರಣ. ಅವನಿಗೆ ಪಾಂಡವರು ರಾಜ್ಯವನ್ನಾಳುವುದು ಅಗತ್ಯವಾಗಿತ್ತು.

“ಅಂತಹ ಕೀರ್ತಿವಂತ ವಂಶಕ್ಕೆ ನಾನು ಉತ್ತರಾಧಿಕಾರಿಯಾಗಿದ್ದೇನೆ. ನನ್ನ ಪೂರ್ವಜರ ಪ್ರತಿಷ್ಠೆ ಮತ್ತು ಕೀರ್ತಿಗೆ ನಾನು ಕಳಂಕ ಉಂಟು ಮಾಡುವುದು ಸಾಧ್ಯವೇ? ಈಗ ನೀನು ನನಗೆ ಶರಣಾಗಿರುವೆ. ಕೈ ಜೋಡಿಸಿ ಬೇಡುತ್ತಿರುವೆ. ಹೆದರಬೇಡ. ನಾನು ನಿನ್ನ ಜೀವಕ್ಕೆ ಹಾನಿ ಮಾಡುವುದಿಲ್ಲ. ನೀನು ಬದುಕಿರಬಹುದು, ಆದರೆ ನನ್ನ ರಾಜ್ಯದಲ್ಲಿ ನೀನು ಇರಲಾಗದು. ಏಕೆಂದರೆ ನೀನು ಅಧರ್ಮದ ಮಿತ್ರ. ಇದಕ್ಕೆಲ್ಲ ಅವಕಾಶವಿಲ್ಲ.” ಇದೇ ಪರೀಕ್ಷಿತ ಮಹಾರಾಜನ ಆದರ್ಶ.

ಈ ಲೇಖನ ಶೇರ್ ಮಾಡಿ