ಆಷಾಢ ಪೌರ್ಣಿಮೆ ವ್ಯಾಸಪೂರ್ಣಿಮೆ. ಜಗತ್ತಿನ ಜ್ಞಾನ ಭಂಡಾರದ ಕೀಲಿಕೈ ಎನ್ನಬಹುದಾದ ಸಾಹಿತ್ಯದ ನಿರ್ಮಾತೃ ವ್ಯಾಸರು.

ವ್ಯಾಸಂ ವಸಿಷ್ಠನಪ್ತಾರಂ ಶಕ್ತೋಃಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕಕಾತಂ ತಪೋನಿಧಿಮ್ ||
ಎಂಬ ಶ್ಲೋಕ ವ್ಯಾಸರ ಗೋತ್ರ ವಂಶಗಳನ್ನು ಹೇಳುತ್ತದೆ. ವೇದರಾಶಿಯನ್ನು ವಿಭಾಗ ಮಾಡಿ ವೇದಾಂತ ನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರವನ್ನು ರಚಿಸಿದ್ದಲ್ಲದೆ ವೇದಾರ್ಥಗಳನ್ನು ವಿವರಿಸುವ ಪುರಾಣಗಳನ್ನು ರಚಿಸಿದವರು ಇವರೆ ಎಂದು ಸಂಪ್ರದಾಯ ಹೇಳುತ್ತದೆ.
ಮಹಾಭಾರತದ ಕರ್ತೃ, ಸತ್ಯವತಿ ಪರಾಶರ ಪುತ್ರರಾದ ಕೃಷ್ಣದ್ವೈಪಾಯನರು ದ್ವೀಪದಲ್ಲಿ ಹುಟ್ಟಿದುದರಿಂದ ದ್ವೈಪಾಯನರೆಂದು ಪರಾಶರ ಪುತ್ರರಾದ್ದರಿಂದ ಪಾರಾಶರ್ಯರೆಂದು ವೇದಗಳನ್ನು ವಿಭಾಗ ಮಾಡಿದುದರಿಂದ ವೇದವ್ಯಾಸರೆಂದು ಬದರೀ ಕ್ಷೇತ್ರದಲ್ಲಿ ಆಶ್ರಯ ಮಾಡಿಕೊಂಡು ವಾಸಿಸುತ್ತಿದ್ದುದರಿಂದ ಬಾದರಾಯಣರೆಂದು ಪ್ರಸಿದ್ಧರಾಗಿದ್ದಾರೆ.
ಮುನೇಶಾ ಮುನೀನಾಮಚ್ಯಹಮ್ ವ್ಯಾಸಃ ಎಂದು ಗೀತೆಯ ಬೋಧಕನೂ ಪರಮ ದೇವೋತ್ತಮನೂ ಆದ ಕೃಷ್ಣ ಘೋಷಿಸಿದ್ದಾನೆ. ಲೋಕಕ್ಕೆ ಜ್ಞಾನ ಪ್ರಕಾಶವನ್ನು ನೀಡಲು ಅವತರಿಸಿದ ದಿವ್ಯ ಮಹರ್ಷಿಯೇ ವ್ಯಾಸರು. ಇವರು ಸಾಕ್ಷಾತ್ ಶಕ್ತ್ಯಾವೇಶ ನಾರಾಯಣನ ಅವತಾರ.
“ಅಪಾಂತರ ತಮೋ ನಾಮ ವೇದಾಚಾರ್ಯ ಪುರಾಣರ್ಷಿ: ವಿಷ್ಣುನಿಯೋಗಾತ್ ಕಲಿದ್ವಾಪರಯೋಃ ಸಂದೌ ಕೃಷ್ಣದ್ವೈ ಪಾಯನಃ ಸಂಬಭೂವ” ಪರಂಪರೆಯಿಂದ ವೇದಾಂತ ಸೂತ್ರಭಾಷ್ಯ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಸಂದರ್ಭದಲ್ಲಿ ಸ್ತುತಿಯನ್ನು ಮಾಡುತ್ತೇವೆ.

ಶ್ರೀಮನ್ ಮಧ್ವಾಚಾರ್ಯರು, ಶ್ರೀರಾಮಾನುಜರು, ಶಂಕರಾಚಾರ್ಯರು, ತಮ್ಮ ಭಾಷ್ಯಗಳಲ್ಲಿ ಬಾದರಾಯಣರನ್ನು ಆಚಾರ್ಯರೆಂದು ಗುರುತಿಸಿದ್ದಾರೆ. ಇತ್ತೀಚಿನ ಮಹಾಕಾವ್ಯ ರಾಮಾಯಣ ದರ್ಶನಂನಲ್ಲಿ ಕುವೆಂಪುರವರು ಕಾವ್ಯ ಪರಂಪರೆಯ ಪೂರ್ವ ಸೂರಿಗಳಿಗೆ ವ್ಯಾಸ ಭಾಸ ಕಾಳಿದಾಸರಾದ್ಯರಿಗೆ… ಕಾವ್ಯಾಚಾರ್ಯರೆಂದು ನಮಿಸುತ್ತಾರೆ.
ವ್ಯಾಸ ಸಾಹಿತ್ಯದಲ್ಲಿ ಮಹಾಭಾರತವು ಗಾತ್ರದಲ್ಲಿ ಜಗತ್ತಿನ ಮೊದಲ ಗ್ರಂಥ ಎಂಬ ಖ್ಯಾತಿಗೆ ಪಾತ್ರವಾಗಿದೆ. ಶ್ರೀಮನ್ ಮಧ್ವಾಚಾರ್ಯರು ಮಹಾಭಾರತದ ತಾತ್ಪರ್ಯ ನಿರ್ಣಯ ಎಂಬ ಗ್ರಂಥವನ್ನು ರಚಿಸಿದರು. ಶ್ರೀವಾದಿರಾಜ, ಶ್ರೀವ್ಯಾಸತೀರ್ಥಾದಿಗಳು ಟೀಕೆಗಳನ್ನು ಬರೆದಿದ್ದಾರೆ.
ವ್ಯಾಸ ರಹಸ್ಯ ಎಂದು ಕರೆಯಲ್ಪಡುವ ಕೂಟ ಶ್ಲೋಕಗಳನ್ನು ವಿವರಿಸುವ ವ್ಯಾಸಕೂಟ ಎಂಬ ಗ್ರಂಥವೇ ಇದೆ. ವಿವಿಧ ಟೀಕಾ ಗ್ರಂಥಗಳು, ಸಾರಾಂಶ ಗ್ರಂಥಗಳು, ಪಾಠಾಂತರ ಗ್ರಂಥಗಳು, ರೂಪಾಂತರ ಗ್ರಂಥಗಳು, ಖಿಲ ಗ್ರಂಥಗಳು, ಪ್ರಸಿದ್ಧವಾಗಿವೆ. ನೀಲಕಂಠ, ಸರ್ವಜ್ಞ ನಾರಾಯಣ, ಯಜ್ಞನಾರಾಯಣ, ವೈಶಂಪಾಯನ, ವಾದಿರಾಜ, ಅರ್ಜುನ ಮಿಶ್ರ ವಿಮಲದೇವ, ಶ್ರೀನಂದನ ಮುಂತಾದವರು ಈ ಪಂಕ್ತಿಯಲ್ಲಿ ಬರುತ್ತಾರೆ.
ಶ್ರೀಧರಾಚಾರ್ಯರು ಮಹಾಭಾರತದ ಮೋಕ್ಷ ಧರ್ಮದ ಮೇಲೆ ವ್ಯಾಖ್ಯಾನ ಬರೆದಿದ್ದಾರೆ. ಮಹಾಭಾರತದ ಶ್ಲೋಕಗಳನ್ನು ಸ್ಮೃತಿ ಎಂದು ಗೌರವಿಸಿ ಉದಾಹರಿಸುತ್ತಾರೆ. ಮಹಾಭಾರತದ ಭಾಗವಾದ ಭಗವದ್ಗೀತೆಯು ಪ್ರಸ್ಥಾನ ತ್ರಯಗಳಲ್ಲಿ ಒಂದಾಗಿದೆ.
ವ್ಯಾಸ ಸಾಹಿತ್ಯ ಕವಿಗಳಿಗೆ ಅಕ್ಷಯವಾದ ಆಕರವಾಗಿದೆ. ಸಂಸ್ಕೃತ ಮತ್ತು ದೇಶ ಭಾಷೆಗಳು ಮಹಾಭಾರತವನ್ನು ಆಧರಿಸಿ ಸಹಸ್ರಾರು ವರ್ಷಗಳಿಂದ ಅಸಂಖ್ಯ ನಾಟಕ, ಮಹಾಕಾವ್ಯ, ಚಂಪೂ, ಮುಂತಾದ ಎಲ್ಲ ಪ್ರಕಾರಗಳ ಸಾಹಿತ್ಯ ಸೃಷ್ಟಿ ನಡೆದಿದೆ.
ಭಾಸ ಕವಿಯ ದೂತವಾಕ್ಯ, ದೂತ ಘಟೋದ್ಗಜ, ಪಂಚರಾತ್ರ, ಕರ್ಣಭಾರ, ಊರು ಭಂಗ, ಮಧ್ಯಮ ವ್ಯಾಯೋಗ, ಭಟ್ಟ ನಾರಾಯಣನ ವೇಣಿ ಸಂಹಾರ, ಶ್ರೀಹರ್ಷ, ಭಾರವಿಯ ಕಿರುತಾರ್ಜುನೀಯ, ಮಾಘನ ಶಿಶುಪಾಲ ವಧೆ, ಅನಂತ ಭಟ್ಟನ -ಭಾರತ ಚಂಪೂ, ಕಾಳಿದಾಸನ – ಅಭಿಜ್ಞಾನ ಶಾಕುಂತಲ, ಕ್ಷೇಮೇಂದ್ರನ – ಭಾರತ ಮಂಜರಿ, ನಾರಣಪ್ಪನ – ಗದುಗಿನ ಭಾರತ, ಕೃಷ್ಣ ಶಾಸ್ತ್ರಿಗಳ – ವಚನ ಭಾರತ, ಪಂಪನ – ವಿಕ್ರಮಾರ್ಜುನ ವಿಜಯ, ಶ್ರೀಯವರ ಗದಾಯುದ್ಧ ಹೀಗೆ ತಲೆ ತಲೆಮಾರುಗಳಿಗೆ ಅಕ್ಷಯವಾದ ಆಕರ ವ್ಯಾಸ ಮಹಾಭಾರತ.






Leave a Reply