ಭಗವಂತನ ನಾಮದಲ್ಲಿರುವ ವಿಶೇಷವೇನು?

ಆಂಗ್ಲ ಮೂಲ: ಭಕ್ತಿಚಾರು ಸ್ವಾಮಿ, ಅನುವಾದ: ಗೀತಾ ಶ್ರೀನಾಥ್

ಬೈಬಲ್, ಕುರಾನ್ ಸೇರಿದಂತೆ ಪ್ರಪಂಚದಲ್ಲಿರುವ ಎಲ್ಲ ಧರ್ಮಗ್ರಂಥಗಳು ಭಗವಂತನ ನಾಮವನ್ನು ವೈಭವೀಕರಿಸುತ್ತವೆ. ಈ ರೀತಿಯ ಅದ್ವಿತೀಯ ಪ್ರಾರ್ಥನೆಯಲ್ಲಿ ಏನಿದೆ?

ವೇದಗಳ ಲೆಕ್ಕಾಚಾರದ ಪ್ರಕಾರ, ಕಾಲದ ವ್ಯಾಪ್ತಿಯನ್ನು ಯುಗಗಳಾಗಿ ಅಳೆಯಲಾಗುತ್ತದೆ. ವೇದಗಳು ನಾಲ್ಕು ಯುಗಗಳನ್ನು ಹೆಸರಿಸುತ್ತವೆ – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ. ನಾಲ್ಕು ಋತುಗಳ ಹಾಗೆ ಇವುಗಳಿಗೂ ಋತುಚಕ್ರ ಅನ್ವಯವಾಗುತ್ತದೆ.

ಅದರಂತೆ ಕಾಲಗಳೂ ಆವರ್ತಗೊಳ್ಳುತ್ತವೆ. ಸತ್ಯಯುಗದ ಅವಧಿ 1,728,000 ವರ್ಷಗಳು; ತ್ರೇತಾಯುಗದ ಅವಧಿ 1,296,000 ವರ್ಷಗಳು; ದ್ವಾಪರಯುಗದ ಅವಧಿ 864,000 ವರ್ಷಗಳು ಮತ್ತು ಕಲಿಯುಗದ ಅವಧಿ 432,000 ವರ್ಷಗಳು.

ಸತ್ಯಯುಗದಲ್ಲಿ ಜನರು ಧರ್ಮಶ್ರದ್ಧೆ ಉಳ್ಳವರಾಗಿದ್ದರು. ಪಾಪಕೃತ್ಯಗಳನ್ನು ಅವರು ಬಹುತೇಕ ಮಾಡುತ್ತಿರಲಿಲ್ಲ. ತ್ರೇತಾಯುಗದಲ್ಲಿ ಜನರು ಪಾಪಕೃತ್ಯಗಳಲ್ಲಿ ಹೆಚ್ಚು ಪ್ರವೃತ್ತರಾಗಿದ್ದರು. ದ್ವಾಪರ ಯುಗದಲ್ಲಿ ಇದು ಇನ್ನೂ ಹೆಚ್ಚಿತು. ಅಂತಿಮವಾಗಿ ಕಲಿಯುಗದಲ್ಲಿ ಸಂಪೂರ್ಣವಾಗಿ ಪಾಪಕೃತ್ಯವೇ ಮೇಲುಗೈ ಸಾಧಿಸಿದೆ. ಯುಗಗಳ ಋತುವಿನಲ್ಲಿ ಕಲಿಯುಗವು ಚಳಿಗಾಲದ ಹಾಗೆ.

ಪ್ರತಿಯೊಂದು ಯುಗದಲ್ಲಿಯೂ ಕೂಡ ಒಂದು ನಿರ್ದಿಷ್ಟ ಬಗೆಯ ಧಾರ್ಮಿಕ ಪ್ರಕ್ರಿಯೆಯನ್ನು ವೈದಿಕ ಧರ್ಮಗ್ರಂಥಗಳು ವಿಧಿಸುತ್ತವೆ. ಭಗವಂತನ ರೂಪದ ಮೇಲಿನ ಕುರಿತ ಧ್ಯಾನ ಪ್ರಕ್ರಿಯೆ ಸತ್ಯಯುಗದಲ್ಲಿ ನಡೆಯುತ್ತದೆ. ಭಗವಂತನಿಗೆ ಬಲಿ ಕೊಡುವ ಪ್ರಕ್ರಿಯೆ ತ್ರೇತಾಯುಗದಲ್ಲಿ ನಡೆಯುತ್ತದೆ.

ದೇವಾಲಯಗಳಲ್ಲಿರುವ ದೇವತಾ ವಿಗ್ರಹಗಳಿಗೆ ಆಡಂಬರದ ಪೂಜೆಯನ್ನು ನೆರವೇರಿಸುವ ಪ್ರಕ್ರಿಯೆ ದ್ವಾಪರ ಯುಗದಲ್ಲಿ ನಡೆಯುತ್ತದೆ. ಕಲಿಯುಗದಲ್ಲಿ ಭಗವಂತನ ನಾಮವನ್ನು ಜಪಿಸುವ ಪ್ರಕ್ರಿಯೆ ನಡೆಯುತ್ತದೆ. ಜನರಲ್ಲಿ ಪಾಪದ ಜೀವನವು ಹೆಚ್ಚಿ ಅವರು ಅರ್ಹತೆಯನ್ನು ಕಳೆದುಕೊಂಡಾಗ ಕರುಣಾಮಯನಾದ ಭಗವಂತನು ಪ್ರತಿಯೊಂದು ಯುಗದ ಪ್ರಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತಾನೆ.

ನಾಲ್ಕು ಯುಗಗಳಲ್ಲಿ ಅತ್ಯ೦ತ ಹೀನಾಯವಾದದ್ದು ಇಂದಿನ ಈ ಕಲಿಯುಗ. ಜನ ಹೇಗೆ ಪಾಪಿಷ್ಠರಾಗುತ್ತಿದ್ದಾರೆ ಎನ್ನುವುದನ್ನು ನಮ್ಮ ಜೀವಮಾನದಲ್ಲೇ ನಾವು ನೋಡುತ್ತಿದ್ದೇವೆ. ಪಾಪದ ಬದುಕಿನ ನಾಲ್ಕು ಕಂಬಗಳಾದ ಮಾಂಸಾಹಾರ, ಜೂಜು, ಮದ್ಯಪಾನ ಮತ್ತು ಅನೈತಿಕ ಸಂಬಂಧಗಳು ಎಲ್ಲೆಡೆ ವ್ಯಾಪಿಸುತ್ತಿವೆ.

ಈ ಚಟುವಟಿಕೆಗಳು ಹೆಚ್ಚಿದಷ್ಟು ಜಗತ್ತು ಹೆಚ್ಚು ಹೆಚ್ಚು ಶೋಚನೀಯವಾಗುತ್ತದೆ. ಎನ್ನುವುದನ್ನು ನಾವು ನೋಡುತ್ತೇವೆ. ಈ ದುಃಖದಿಂದ ಹೊರಬರಲು ಕೃಷ್ಣನ ನಾಮಸ್ಮರಣೆ ಮಾಡುವಂತೆ ಎಲ್ಲ ಧರ್ಮಗ್ರಂಥಗಳೂ ಸಲಹೆ ಮಾಡುತ್ತವೆ.

ಈ ಯುಗದಲ್ಲಿ ಜಪ ಮಾಡುವುದೇ ಉತ್ತಮ ಎಂದು ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ. ಏಸುಕ್ರಿಸ್ತ ಹೇಳಿದ ‘ನಿನ್ನ ಸೃಷ್ಟಿಕರ್ತನ ನಾಮವನ್ನು ವೈಭವೀಕರಿಸು’. ಇದೇ ರೀತಿ ಮೊಹಮದ್ ಕೂಡ ಹೇಳಿದ, ನಾವು ಅಲ್ಲಾನನ್ನು ವೈಭವೀಕರಿಸಬೇಕು’. ಪ್ರಪಂಚದ ಎಲ್ಲ ಮಹತ್ವದ ಧರ್ಮಗಳೂ ಇವನ್ನೇ ಮತ್ತೆ ಮತ್ತೆ ಬೋಧಿಸುತ್ತವೆ.

‘ಭಗವಂತನ ನಾಮದಲ್ಲಿರುವ ವಿಶೇಷವೇನು?’ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ನಮ್ಮ ಹಾಗೆ ಭಗವಂತನಿಗೆ ಹೆಸರಿಲ್ಲ. ನಮ್ಮ ಗುರುತನ್ನು ತಿಳಿಯುವುದಕ್ಕಾಗಿ ನಾವು ಹೆಸರನ್ನು ಕೊಟ್ಟು ಕೊಳ್ಳುತ್ತೇವೆ. ಭಗವಂತನಿಗೆ ಅಂತಹ ಗುರುತಿನ ಅಗತ್ಯವಿಲ್ಲ.

ಅವನಿಗೊಂದು ಲೌಕಿಕ ಗುರುತು ಇಲ್ಲ; ಅವನು ಸಂಪೂರ್ಣ ಆಧ್ಯಾತ್ಮಿಕ.

ಅಗಣಿತ ಗುಣಗಳು ಮತ್ತು ಲೀಲೆಗಳಿಂದ ಕೂಡಿರುವ ಭಗವಂತ ಅಸಂಖ್ಯಾತ ಹೆಸರುಗಳನ್ನು ಹೊಂದಿದ್ದಾನೆ. ಉದಾಹರಣೆಗೆ, ಬೈಬಲ್‌ನಲ್ಲಿ ಅವನನ್ನು ‘ಸರ್ವಶಕ್ತ’ ಮತ್ತು ‘ದೇವರು’ ಎಂದು ವಿವರಿಸುವ ಹೆಸರುಗಳಿವೆ. ಅದರಂತೆಯೇ, ಸಂಸ್ಕೃತ ವೈದಿಕ ಧರ್ಮಗಳಲ್ಲಿಯೂ ಅವನಿಗೆ ಅಸಂಖ್ಯಾತ ಹೆಸರುಗಳಿವೆ. ಕೃಷ್ಣ ಎಂಬ ಹೆಸರಿನ ಅರ್ಥ ‘ಸರ್ವಾಕರ್ಷಕ’, ರಾಮ ಎಂಬ ಹೆಸರಿನ ಅರ್ಥ “ಪರಮಾನಂದ” ನೀಡುವವನು.

ಭಗವ೦ತನಿಗೆ ಲೌಕಿಕ ಗುಣಗಳು ಇಲ್ಲದಿರುವುದರಿಂದ ಅವನ ಹೆಸರು ಕೂಡ ಲೌಕಿಕವಾಗಿರುವುದಿಲ್ಲ. ಅದು ಆಧ್ಯಾತ್ಮಿಕ ಮತ್ತು ಅವನಿಗಿಂತ ಭಿನ್ನವಾದುದಲ್ಲ, ಭಗವಂತ ಪರಾತ್ಪರನಾಗಿರುವುದರಿಂದಲೇ ಅವನ ನಾಮಗಳು ಪರಾತ್ಪರ. ಒಮ್ಮೆ ಅವನ ನಾಮಸ್ಮರಣೆ ಮಾಡಿದರೆ, ಅವನು ಭಗವಂತನ ಸಂಪರ್ಕದಲ್ಲಿ ಇರುತ್ತಾನೆ.

ನಾವು ಅವನ ನಾಮಸ್ಮರಣೆ ಮಾಡುವುದರಿಂದ ಅವನ ಇರವನ್ನು ಅನುಭವಿಸಬಹುದು. ಅದರ ಪ್ರಾಪಂಚಿಕವಾದ ನಮ್ಮ ಕಲುಷಿತ ಪ್ರಜ್ಞೆಯಿಂದಾಗಿ ಕೂಡಲೇ ಇದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

ಆದರೆ ಅವನು ದೇವೋತ್ತಮ ಪುರುಷನಾಗಿರುವುದರಿಂದ ಅವನನ್ನು ಹೆಸರಿನಿಂದ ಕರೆಯುವುದು ಹೆಚ್ಚು ವೈಯಕ್ತಿಕವಾದದ್ದು ಮತ್ತು ಪ್ರಾರ್ಥನೆಯ ಒಂದು ತೀವ್ರ ರೂಪ. ನಾವು ಪ್ರಾಮಾಣಿಕವಾಗಿ ಅವನ ನಾಮಸ್ಮರಣೆ ಅಭ್ಯಾಸ ಮಾಡಿದ್ದೇ ಆದಲ್ಲಿ, ಭಗವಂತನ ಸಾನ್ನಿಧ್ಯದ ಅನುಭವವನ್ನು ಪಡೆಯುತ್ತೇವೆ.

ಭಗವಂತನನ್ನು ಸ್ತುತಿಸುವ ಹಲವಾರು ಮಂತ್ರಗಳು ವೈದಿಕ ಸಾಹಿತ್ಯದಲ್ಲಿ ಇದೆ. ಆದರೆ ಒಂದೇ ಒಂದು ಮಹಾಮಂತ್ರವಿದೆ. ಅದೆಂದರೆ ‘ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.’ ಇದು ಭಗವಂತನ ಪರಮೋದಾತ್ತ ವೈಶಿಷ್ಟ್ಯವನ್ನು ಸೂಚಿಸುತ್ತದೆ.

ಕೃಷ್ಣನನ್ನು ಸದಾಕರ್ಷಕನನ್ನಾಗಿಯೂ, ರಾಮನನ್ನು ಪರಮಾನಂದಕಾರಕನಾಗಿಯೂ ಇದು ಸೂಚಿಸುತ್ತದೆ. ಇದರ ಅರ್ಥ ‘ಮನೋಹರನಾದ ಪರಮಾನಂದಕಾರಕನಾದ ದೇವೋತ್ತಮ ಪುರುಷನೇ, ಸರ್ವೋತ್ತಮ ಸುಖಿ, ದಯವಿಟ್ಟು ನನ್ನನ್ನು ಈ ಲೌಕಿಕ ಅಸ್ತಿತ್ವದಿಂದ ಬಿಡುಗಡೆಗೊಳಿಸು. ನಿನ್ನ ಪ್ರೀತಿಯ ದೈವಿಕ ಸೇವೆಯಲ್ಲಿ ನನ್ನನ್ನು ತೊಡಗಿಕೊಳ್ಳುವಂತೆ ಮಾಡು’.

ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ಮನವಿಯೇ ಪ್ರಾರ್ಥನೆ, ಲೌಕಿಕ ಪ್ರಜ್ಞೆಯಿಂದ ನಾವು ಹೀಗೆ ಪ್ರಾರ್ಥಿಸುತ್ತೇವೆ. ‘ಭಗವಂತ, ನಮಗೆ ಆಹಾರ ನೀಡು, ಭಗವಂತ ನನಗೆ ಧನ ನೀಡು! ಆದರೆ, ಆಧ್ಯಾತ್ಮಿಕ ಜೀವನದಲ್ಲಿ ನನಗಾಗಿ ಎಲ್ಲವನ್ನು ಕೊಡು ಎಂದು ಪ್ರಾರ್ಥಿಸುವ ಬದಲು ಭಗವಂತನಿಗೆ ಏನೆಲ್ಲವನ್ನೂ ಕೊಡುವುದಕ್ಕೆ ಸಾಧ್ಯವೋ ಅದೆಲ್ಲವನ್ನು ಕೊಡುವ ಬಯಕೆ ಇರಬೇಕು.

ಭಗವಂತನ ಸೇವೆಯ ಬಯಕೆ ಇರಬೇಕು. ಅದಕ್ಕಾಗಿಯೇ ಹರೇ ಕೃಷ್ಣ ಮಂತ್ರ ಪ್ರಾರ್ಥನೆಯ ಅತ್ಯುತ್ತಮ ರೂಪ; ಭಗವಂತನ ಬಳಿ ಸ್ವಾರ್ಥ ಬೇಡಿಕೆಗಳನ್ನು ಇಡುವಂತೆ ಅದು ಮಾಡುವುದಿಲ್ಲ. ಭಗವಂತನ ದೈವಿಕ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಒಂದು ಕೋರಿಕೆಯಷ್ಟೇ.

ತನ್ನ ಪವಿತ್ರನಾಮವನ್ನು ಸ್ತುತಿಸುವ ರೀತಿಯನ್ನು ಬೋಧಿಸಲೆಂದೇ ಕೃಷ್ಣ ಈ ಯುಗದಲ್ಲಿ ಅದ್ಭುತವಾದ ರೂಪದಲ್ಲಿ ಆವಿರ್ಭವಿಸಿದ. ದೇವೋತ್ತಮ ಒಡೆಯ, ಸರ್ವೋತ್ತಮ ಸುಖಿ, ಸಕಲ ಸಮೃದ್ಧಿಯ ಒಡೆಯನಾಗಿದ್ದರೂ ಕೂಡ ಅವನು ಈ ಯುಗದಲ್ಲಿ ಶ್ರೀ ಚೈತನ್ಯ ಮಹಾಪ್ರಭುವಿನ ರೂಪದಲ್ಲಿ ಭಿಕ್ಷುಕನಾಗಿ ಅವಿರ್ಭವಿಸಿದ.

ಅವನು ಸಂನ್ಯಾಸವನ್ನು ಒಪ್ಪಿಕೊಂಡು, ಭಾರತದಾದ್ಯಂತ ಸಂಚರಿಸಿ ವಿದ್ವಾಂಸರು, ರಾಜರು, ಭಿಕ್ಷುಕರಾದಿಯಾಗಿ ಎಲ್ಲರಿಗೂ ಮಹಾಮಂತ್ರವನ್ನು ದೃಢವಾದ ನಂಬಿಕೆಯಿಂದ ಸ್ತುತಿಸುವಂತೆ ಬೋಧಿಸಿದ.

ಶ್ರೀ ಚೈತನ್ಯರು ಚಿತ್ತವೃತ್ತಿಯಲ್ಲ, ಭಗವಂತ ಎನ್ನುವುದನ್ನು ನಾನು ಅವರ ಅನುಯಾಯಿಯಾಗಿ ಹೇಳುತ್ತೇನೆ. ಇಲ್ಲ, ಶ್ರೀಮದ್ ಭಾಗವತಮ್‌, ಮಹಾಭಾರತ ಇನ್ನಿತರ ಧರ್ಮಗ್ರಂಥಗಳು ಅವರ ಅನನ್ಯತೆಯನ್ನು ವ್ಯಾಖ್ಯಾನಿಸುತ್ತವೆ ಮತ್ತು ಅವರ ಆವಿರ್ಭಾವವನ್ನು ಸವಿವರವಾಗಿ ದೃಢೀಕರಿಸುತ್ತವೆ.

ಯುಗಧರ್ಮವನ್ನು ಸ್ಥಾಪಿಸುವುದಕ್ಕಾಗಿಯೇ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು ಎಂದು ಅವು ವ್ಯಾಖ್ಯಾನಿಸುತ್ತವೆ. ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಆವಿರ್ಭಾವದ ಕಾಲದಲ್ಲಿ ಸಂಕೀರ್ತನ ಚಳವಳಿ ಅ೦ದರೆ ಭಗವಂತನ ನಾಮಸ್ಮರಣೆ ವಿಶ್ವದಾದ್ಯಂತ ಹರಡಬೇಕು ಮತ್ತು ಅದು ನಿಜವಾಗಬೇಕು ಎನ್ನುವುದನ್ನು ದೃಢೀಕರಿಸಿದರು.

ಎಲ್ಲವರ್ಗದ ಪರಿಕಲ್ಪನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ, ಯಾರೇ ಆಗಲಿ ಶ್ರೀ ಚೈತನ್ಯರ ನಿಜವಾದ ಅನನ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ಅವರೇ ದೇವೋತ್ತಮ ಪರಮ ಪುರುಷ ಎನ್ನುವುದನ್ನು ಸುಲಭವಾಗಿ ಗುರುತಿಸುತ್ತಾರೆ.

ಶ್ರೀ ಚೈತನ್ಯರು ಭಾರತದಲ್ಲಿ ಅವಿರ್ಭವಿಸಿದರು ಎನ್ನುವುದು ತರ್ಕದ ವಿಚಾರವಲ್ಲ. ಭಗವಂತ ಯಾವುದೇ ಭೌಗೋಳಿಕ ಸನ್ನಿವೇಶಕ್ಕೆ ಸೇರಿದವನಲ್ಲ. ಪ್ರತಿಯೊಬ್ಬರನ್ನೂ ಕರುಣಿಸಲೆಂದೇ ಅವರು ಅವತರಿಸಿದ್ದು. ಭಗವಂತ ಎಲ್ಲಿಯೇ ಆವಿರ್ಭವಿಸಲಿ, ನಾವು ಅವನ ಬೋಧನೆಗಳನ್ನು ಅನುಸರಿಸುವುದು ನಮ್ಮ ಲಾಭಕ್ಕಾಗಿ.

ಉದಾಹರಣೆಗೆ, ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಜನ ಏಸುಕ್ರಿಸ್ತನ ಅನುಯಾಯಿಗಳಾಗಿದ್ದಾರೆ. ಕ್ರಿಸ್ತ ಎಲ್ಲಿ ಅವತರಿಸಿದ ಎನ್ನುವ ಕಾರಣಕ್ಕಾಗಿ ಅವರು ಅವನ ಅನುಯಾಯಿಗಳಾಗಲಿಲ್ಲ. ಅವನು ದೇವರ ಮಗ ಎನ್ನುವ ಕಾರಣಕ್ಕೆ ಅವರ ಅನುಯಾಯಿಗಳಾದರು.

ಭಗವಂತ ಅಥವಾ ಅವನ ಪ್ರತಿನಿಧಿಗಳು ಎಲ್ಲೋ ಆವಿರ್ಭವಿಸಲಿ, ಪ್ರಾಮಾಣಿಕ ಭಕ್ತರು ಅವರ ಅನುಯಾಯಿಗಳಾಗುತ್ತಾರೆ. ಭಗವಂತ ಮತ್ತು ಅವನ ಪ್ರತಿನಿಧಿಗಳು ದಿವ್ಯ ಕ್ಷೇತ್ರದಿಂದ ಬಂದವರು, ಅವರು ಸಾಮಾನ್ಯರಲ್ಲ. ಯಾವುದೋ ನಿರ್ದಿಷ್ಟ ಭೌಗೋಳಿಕ ಪ್ರದೇಶದಿಂದ ಬಂದ ಲೌಕಿಕರಲ್ಲ ಎನ್ನುವುದನ್ನು ಭಕ್ತರು ಅರಿತಿರುತ್ತಾರೆ. ಪ್ರಪಂಚದ ಯಾವುದೇ ಭಾಗದಲ್ಲಿ ಇಂತಹ ಅಸಾಮಾನ್ಯ ಪುರುಷರು ಆವಿರ್ಭವಿಸಿದಾಗ ಅದೊಂದು ಆಧ್ಯಾತ್ಮಿಕ ಜಗತ್ತಿನ ವಿಸ್ತರಣೆಯಾಗುತ್ತದೆ.

ಇಷ್ಟಾಗಿಯೂ ಕೂಡ ಒಬ್ಬ “ಬಾರತೀಯ”ನನ್ನು ದೇವೋತ್ತಮ ಪರಮ ಭರುಷ ಎಂದು ಒಪ್ಪಿಕೊಳ್ಳಲು ಯಾರಿಗಾದರೂ ಕಷ್ಟವಾದಲ್ಲಿ ಅದನ್ನು ಒಪ್ಪಿಕೊಳ್ಳೋಣ. ಯಾರೊಬ್ಬರೂ ಕೂಡ ಕುರುಡಾಗಿ ಒಪ್ಪಿಕೊಳ್ಳಬಾರದು, ನಾವು ಹೇಳುವುದೂ ಅದನ್ನೇ. ಆದರೆ, ಕನಿಷ್ಠ ಪಕ್ಷ ಶ್ರೀ ಚೈತನ್ಯರ ಜೀವನ ಹಾಗೂ ಬೋಧನೆಗಳನ್ನು ಅವರು ಅಭ್ಯಾಸ ಮಾಡಿ ಅದರಿಂದ ಅವರ ಆಧ್ಯಾತ್ಮಿಕ ಜೀವನಕ್ಕೆ ಲಾಭವಾಯಿತೇ ಎನ್ನುವುದನ್ನು ನೋಡಬೇಕು. ಇದು ಪ್ರಾಯೋಗಿಕ ಪರೀಕ್ಷೆ.

ಭಗವಂತ ನಮ್ಮ ಆದ್ಯ ಮತ್ತು ಪರಮೋನ್ನತ ತಂದೆ ಎನ್ನುವುದನ್ನು ನಾವು ತಿಳಿದುಕೊಂಡಾಗ, ನಾವು ಅವನ ಬಳಿ ಮತ್ತೆ ಮರಳಿಹೋಗುವುದನ್ನು ಅವನು ಬಯಸುತ್ತಾನೆ ಎನ್ನುವುದನ್ನು ತಿಳಿಯಲು ಕಷ್ಟವಾಗುವುದಿಲ್ಲ. ನಮ್ಮನ್ನು ಮರಳಿ ಪಡೆಯುವುದಕ್ಕೆ ಅವನು ಮಾಡುವ ವಿವಿಧ ಏರ್ಪಾಟುಗಳನ್ನು ತಿಳಿದುಕೊಳ್ಳುವುದೂ ಕಷ್ಟವಾಗುವುದಿಲ್ಲ.

ಹೀನಾಯವಾಗಿರುವ ಈ ಕಲಿಯುಗದಲ್ಲಿ ನಾವು ನಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಕಳೆದುಕೊಂಡಿದ್ದೇವೆ. ತನ್ನ ಅವ್ಯಾಜ ಕರುಣೆಯಿಂದ ನಮ್ಮನ್ನು ತನ್ನ ಬಳಿ ಕರೆದುಕೊಳ್ಳಲು ಅವರೇ ಮಾರ್ಗವನ್ನು ನೀಡಿದ್ದಾರೆ. ಆ ಮಾರ್ಗವೇ ಪವಿತ್ರ ನಾಮಜಪ. ಅವನ ಪವಿತ್ರ ನಾಮವೇ ಅವನ ಬಳಿ ಸಾಗುವ ಕರುಣೆ.

ಭಗವಂತನ ನಾಮಸ್ಮರಣೆಯ ಮೂಲಕ ಅವನ ರೂಪ, ನೆಲೆ, ಗುಣ, ಚಟುವಟಿಕೆ ಮತ್ತು ಸಂಗಾತಿಗಳ ಬಗೆಗೆ ತಿಳಿದುಕೊಳ್ಳಬಹುದಾಗಿದೆ. ದಿವ್ಯಜ್ಞಾನದಲ್ಲಿ ನೆಲೆಸುವ ಮೂಲಕ ಎಲ್ಲವೂ ಭಗವಂತನಿಗೆ ಸೇರಿದ್ದು ಎಂದು ತಿಳಿದು ತನ್ನನ್ನು ತಾನು ಭಕ್ತಿಯ ಸೇವೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ. ಇದರ ಸಾಕ್ಷಾತ್ಕಾರವೇ ಎಲ್ಲ ಯುಗಗಳಲ್ಲಿಯ ನಡೆಯುವ ಧರ್ಮದ ಪರಿಪೂರ್ಣತೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi