ಭಗವಂತನು ಆಕಾರನೋ ನಿರಾಕಾರನೋ ಎನ್ನುವುದರ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಮೂಡುವುದು ಸಹಜ. ಕೃಷ್ಣನ ಚಿತ್ರವನ್ನು ನೋಡಿದಾಗ ಇಂತಹ ಪ್ರಶ್ನೆ ಸಹಜವಾಗಿ ಏಳುತ್ತದೆ. ಭೂಮಿಯ ಮೇಲಿರುವ ಸಕಲ ಜೀವಿಗಳಿಗೂ ತಂದೆ ಎನಿಸಿರುವ ಭಗವಂತನ ಆಕಾರದ ಬಗ್ಗೆ ನಮಗೆ ಪಾಶ್ಚಾತ್ಯ ತತ್ವಶಾಸ್ತ್ರದಿಂದ ಸಿಗುವ ಮಾಹಿತಿ ಅತ್ಯಲ್ಪವಾದದ್ದು. ದೇವರು ಆಕಾರ ಸ್ವರೂಪ ಉಳ್ಳವನು ಎಂದು ಪಾಶ್ಚಾತ್ಯ ತತ್ವಶಾಸ್ತ್ರ ಹೇಳುತ್ತದೆಯಾದರೂ ಅದರಿಂದ ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ.

ಪರಮ ಪದದ ಬಗ್ಗೆ ಚಿಂತಿಸಿದಷ್ಟೂ, ಈ ಕಾರಣಕ್ಕಾಗಿಯೇ ಭಗವಂತ ನಿರಾಕಾರ ಸ್ವರೂಪನೂ, ಶೂನ್ಯನೂ ಎಂಬ ಭಾವನೆ ಬಹಳಷ್ಟು ಜನರಲ್ಲಿ ಮನೆಮಾಡಿದೆ. ಸರಿಯಾದ ರೀತಿಯಲ್ಲಿ ವಿವೇಚನೆ ಮಾಡಿದಲ್ಲಿ, ದೇವರು ಚಿರಂತನವಾದವನು, ರೂಪ ಉಳ್ಳವನು ಎಂದು ತಿಳಿಯುತ್ತದೆ.
ನಮಗೆ ಒಂದು ನಿರ್ದಿಷ್ಟವಾದ ರೂಪವಿದೆ ಹಾಗೆಯೇ ನಮ್ಮ ತಂದೆಗೂ, ಅವರ ತಂದೆಗೂ ಅಂತಹದೇ ರೂಪವಿತ್ತು. ಹೀಗಿರುವಾಗ ಪರಿಪೂರ್ಣವಾದ ತಂದೆ (ದೇವರು) ನಿರಾಕಾರ ಸ್ವರೂಪನು, ಅವನು ವ್ಯಕ್ತಿಯೇ ಅಲ್ಲ ಎಂದು ಹೇಳುವುದಾದರೂ ಹೇಗೆ? ‘ವ್ಯಕ್ತಿ’ ಎನ್ನುವ ಪದವೇ ರೂಪವನ್ನೂ ಸೂಚಿಸುತ್ತದೆ, ನಿರಾಕಾರ ಸ್ವರೂಪನು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ.
ಭಗವಂತ ಚೈತನ್ಯ ಸ್ವರೂಪಿ, ಅವನಿಗೆ ಆಕಾರ ಎನ್ನುವುದು ಇಲ್ಲ ಎಂದೇ ಹಲವರು ನಂಬಿದ್ದಾರೆ. ಅವರು ಆ ಚೇತನವನ್ನು ಪಾರದರ್ಶಕವೆಂದೂ, ಪಾರಲೌಕಿಕ ‘ಶಕ್ತಿ’ ಎಂದೂ ಭಾವಿಸಿದ್ದಾರೆ. ‘ಚೇತನ’ ಎನ್ನುವುದೇ ಒಂದು ಅಸ್ಫುಟ ಕಲ್ಪನೆ. ಜಗತ್ತಿನ ಯಾವುದೇ ಧರ್ಮಗ್ರಂಥವೂ ‘ಭಗವಂತನು ಚೈತನ್ಯ ಸ್ವರೂಪಿ’ ಎನ್ನುವುದನ್ನು ಎತ್ತಿಹಿಡಿಯುವುದಿಲ್ಲ.
ಇದಕ್ಕೆ ವೈಜ್ಞಾನಿಕ ವಿಶ್ಲೇಷಣೆಗಳನ್ನು ವೇದೋಪನಿಷತ್ತುಗಳಲ್ಲಿ ಕಾಣಬಹುದಾಗಿದೆ. ಆಧುನಿಕ ವಿಜ್ಞಾನ ಯಾವುದನ್ನು ಅಭೌತಿಕವಾದದ್ದು ಎನ್ನುತ್ತದೆಯೋ ಅದರ ಕುರಿತೂ ವಿಶ್ಲೇಷಣೆಗಳನ್ನು ಕಾಣಬಹುದಾಗಿದೆ.
ದೇವರ ನಿರಾಕಾರ ಸ್ವರೂಪವನ್ನು ವೇದೋಪನಿಷತ್ತುಗಳು ಅಲ್ಲಗಳೆಯುವುದಿಲ್ಲ. ನಿರಾಕಾರ ಸ್ವರೂಪವನ್ನೂ ಮೀರಿದ ಪರಮ ಸತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಮಹತ್ವದ ಕೆಲಸವನ್ನು ವೇದೋಪನಿಷತ್ತುಗಳು ಮಾಡುತ್ತವೆ. ವೇದಗಳು ಕೃಷ್ಣನನ್ನು ವ್ಯಕ್ತಿಯಾಗಿ ಬಿಂಬಿಸುತ್ತದೆ. ಕೃಷ್ಣನೂ ನಮ್ಮ ಹಾಗೆ ವ್ಯಕ್ತಿ ಎಂದು ವೇದಗಳು ಹೇಳುತ್ತವೆ.
ಆದರೆ ಕೃಷ್ಣ ನಮ್ಮ ಹಾಗೆ ಸಾಮಾನ್ಯ ಮನುಷ್ಯನಲ್ಲ. ಅವನೊಬ್ಬ ಅತೀಂದ್ರಿಯ ನಿತ್ಯೋ ನಿತ್ಯಾನಾಮ್ ಚೇತನಸಾ ಚೇತಾನಾಮ್. ಅವನ ವ್ಯಕ್ತಿತ್ವವನ್ನು ತಿಳಿಯುವುದೆಂದರೆ ಅವನ ಅತೀಂದ್ರಿಯ ಕ್ಷಣಗಳನ್ನು ಅಂದರೆ ಅವನ ಹೆಸರು, ಗುಣ, ಕಾರ್ಯಕ್ಷೇತ್ರ, ಒಡನಾಟ, ಅವನ ರೂಪವನ್ನು ಕಂಡುಕೊಳ್ಳುವುದು.
ಪರಿಪೂರ್ಣವಾದ ದೇವರು ನಿರಾಕಾರನಾಗಿ ಇರಲು ಸಾಧ್ಯವಿಲ್ಲ. ದೇವರ ಪ್ರತಿಯೊ೦ದು ಸೃಷ್ಟಿಯ ಆಕಾರ ಪೂರ್ಣವಾಗಿರ ಬೇಕಾದರೆ, ದೇವರೇ ನಿರಾಕಾರನಾಗಿರಲು ಹೇಗೆ ಸಾಧ್ಯ? ಹೀಗೆ ಹೇಳುವುದಾದಲ್ಲಿ ದೇವರು ತನ್ನ ಸೃಷ್ಟಿಗಿಂತಲೂ ಚಿಕ್ಕವನು ಎಂದು ಹೇಳಿದ ಹಾಗೆ ಆಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ- ಪರಿಪೂರ್ಣನೇ ಅಪೂರ್ಣ ಎನ್ನಬೇಕಾಗುತ್ತದೆ.

ಇದು ಅತಾರ್ಕಿಕ. ಪರಿಪೂರ್ಣತೆಯಲ್ಲಿ ನಮ್ಮ ಅನುಭವ ಮತ್ತು ಅನುಭವಕ್ಕೆ ನಿಲುಕದಂತಹ ಎಲ್ಲವೂ ಸೇರಿಕೊಂಡಿರುತ್ತವೆ. ಇದಿಲ್ಲದೆ ಹೋದಲ್ಲಿ ಪರಿಪೂರ್ಣತೆ ಸಾಧ್ಯವೇ ಇಲ್ಲ. ಇದರ ಜೊತೆಗೆ ಜಗತ್ತಿನ ಎಲ್ಲ ಧರ್ಮಗ್ರಂಥಗಳು ದೇವರನ್ನು ಪ್ರೀತಿಸು ಎಂದು ಹೇಳುತ್ತದೆ. ನಿರಾಕಾರ ಸ್ವರೂಪ ಅಥವಾ ಶೂನ್ಯವನ್ನು ಪ್ರೀತಿಸಲು ಹೇಗೆ ಸಾಧ್ಯ? ಮಾನವರಾದ ನಾವು ಇತರರ ಪ್ರೀತಿಯನ್ನು ಬಯಸುತ್ತೇವೆ. ಅವರ ಒಡನಾಟ, ಸಂಬಂಧಕ್ಕೆ ಹೇಗೆ ಹಾತೊರೆಯುತ್ತೇವೆಯೋ ಹಾಗೆಯೇ ನಮ್ಮ ಹಾಗೂ ದೇವೋತ್ತಮನ ನಡುವಿನ ಸಂಬಂಧ.
ಕೃಷ್ಣನ ನೀಲವರ್ಣ, ಕಮಲದಂತಹ ಕಣ್ಣುಗಳು, ಯೌವನೋತ್ಸವ, ಶ್ಯಾಮಲನಗು-ಇವೆಲ್ಲವೂ ಕಲಾವಿದನ ಕುಂಚದಲಿ ಅರಳಿದ ಚಿತ್ರವಲ್ಲ. ಐಹಿಕ ಜಗತ್ತಿನ ವಿಶಾಲವಾದ ಪ್ರಾಕೃತಿಕ ಸೌಂದರ್ಯವನ್ನು ನೋಡಿ ತತ್ವಜ್ಞಾನಿ, ಕವಿ ಬರೆದ ಮಾತುಗಳೂ ಅಲ್ಲ. ಹಾಗಾದರೆ ಪ್ರಕೃತಿಯ ಈ ಸೌಂದರ್ಯ ಎಲ್ಲಿಂದ ಬಂತು? ಹೇಗೆ ರೂಪುಗೊಂಡಿತು ಎನ್ನುವ ಚಿಂತನೆಗೆ ಉತ್ತರ ನಮ್ಮಲ್ಲೇ ಇದೆ.
ಇವೆಲ್ಲವೂ ಕೂಡ ಕೃಷ್ಣನ ಮೂಲ ಸೌಂದರ್ಯದ ಪ್ರತಿರೂಪವೇ ಆಗಿದೆ. ಭಗವದ್ಗೀತೆಯಲ್ಲಿ ಕೃಷ್ಣನೇ ವರ್ಣಿಸುವಂತೆ (10.41) ಅವನು ಮೂಲ ಸ್ವರೂಪನು. ‘ಯದ್ ಯದಾ ವಿಭೂತಿಮತ್ ಸತ್ವಂ ಶ್ರೀಮದ್ ಊರ್ಜಿತ ಏವವ/ತತ್ ತದ್ ಏವಾವಗಚ್ಛತ್ವಂ ಮಮ ತೇಜೋ ವಸ ಸಂಭವಂ – ಪ್ರತಿಯೊಂದು ಸೌಂದರ್ಯ, ವೈಭವ, ಸೃಷ್ಟಿಯೂ ಕೂಡ ನನ್ನ ತೇಜಸ್ಸಿನಿಂದ ಹೊಮ್ಮಿದ ಕಿರಣಗಳು.’
ವೇದೋಪನಿಷತ್ತುಗಳಲ್ಲಿ ದೇವರ ರೂಪದ ಕುರಿತು ಇರುವ ಹೇಳಿಕೆಗಳನ್ನು ಏಕೆ ಒಪ್ಪಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗ ಉದ್ಭವಿಸಿರಬಹುದು. ನಾವೀಗ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ನಾವು ನಿತ್ಯವೂ ನಮಗೆ ಗೊತ್ತಿಲ್ಲದೇ ಇರುವ, ನಾವು ಒಮ್ಮೆಯೂ ನೋಡದೇ ಇರುವ ಹಲವಾರು ಸಂಗತಿಗಳ ಬಗ್ಗೆ ಮಾಹಿತಿಗಳನ್ನು ಅಧಿಕೃತವಾದದ್ದು ಎಂದೇ ಭಾವಿಸಿ ತಿಳಿದುಕೊಳ್ಳುತ್ತೇವೆ.
ಚೀನಾ ದೇಶವನ್ನು ಕಣ್ಣಾರೆ ಕಂಡಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಆ ದೇಶ ಎನ್ನುವುದೊಂದು ಇದೆ, ಅಲ್ಲಿ ಲಕ್ಷಾಂತರ ಜನ ವಾಸಿಸುತ್ತಾರೆ ಎನ್ನುವ ಸಂಗತಿಯನ್ನು ಚೀನಾ ನೋಡದವರೂ ಒಪ್ಪುತ್ತಾರೆ. ಚೀನಾ ಕುರಿತು ನಮಗೆ ಅಗತ್ಯ ಮಾಹಿತಿಗಳನ್ನು ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ರೇಡಿಯೋ, ಟಿವಿ ಮೊದಲಾದವುಗಳು ಒದಗಿಸುತ್ತವೆ. ಇವೆಲ್ಲವೂ ಕೂಡ ಜ್ಞಾನದ ಮೂಲಗಳು ಎನಿಸಿವೆ.
ಈ ಮಾಹಿತಿಯನ್ನು ನಾವು ದೃಢಪಡಿಸಿಕೊಳ್ಳಬೇಕಾದಲ್ಲಿ ಚೀನಾಕ್ಕೆ ಹೋಗಿ ಬರಬಹುದು. ಇದೇ ರೀತಿ ವೇದೋಪನಿಷತ್ತುಗಳು ಕೂಡ ನಮಗೆ ಕೃಷ್ಣನ ಸ್ವರೂಪವನ್ನು ಕುರಿತ ಮಾಹಿತಿಯನ್ನು ನೀಡುತ್ತವೆ. ಅದನ್ನು ನಾವು ದೃಢಪಡಿಸಿಕೊಳ್ಳಬೇಕಾದಲ್ಲಿ ವೇದಗಳನ್ನು ಅಗತ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆ ಮೂಲಕ ನಾವು ಕೃಷ್ಣನ ಸ್ವರೂಪವನ್ನು ಕಾಣಬಹುದು.
ವೇದ ಪಾಠಗಳ ಸಾರವನ್ನು ನಾವು ತಿಳಿಯಬೇಕಾದಲ್ಲಿ ಆ ಬಗ್ಗೆ ಉತ್ತಮವಾದ ಜ್ಞಾನ ಉಳ್ಳವರ, ಅಧಿಕೃತವಾಗಿ ಹೇಳುವವರ ಮಾರ್ಗದರ್ಶನವನ್ನು ಪಡೆಯಬೇಕಾಗುತ್ತದೆ. ಅಂತಹ ಆಧ್ಯಾತ್ಮಿಕ ಗುರುಗಳಲ್ಲಿ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರೂ ಒಬ್ಬರು. ಇವರು ಕೃಷ್ಣನ ರೂಪದ ಕುರಿತು ಭಗವದ್ಗೀತೆ ಅಂದರೆ ಶ್ರೀಮದ್ ಭಕ್ತಿವೇದಾತಮ್ ಹಾಗೂ ಬ್ರಹ್ಮ ಸಂಹಿತ ಕೃತಿಗಳಲ್ಲಿ ನಮಗೆ ಅಧಿಕೃತ ಮಾಹಿತಿಯನ್ನು ನೀಡುತ್ತಾರೆ. ಈ ಅಮೂಲ್ಯ ಕೃತಿಗಳು ಐದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಇವೆ.

ಈ ಕೃತಿಗಳನನು ಅಳವಾಗಿ ಅಭ್ಯಾಸ ಮಾಡುವ ಮೂಲಕ, ಅದರಲ್ಲಿ ಅಧ್ಯಯನಶೀಲರಾಗುವ ಮೂಲಕ ಪೂರ್ಣ ಜ್ಞಾನವನ್ನು ಸಂಪಾದಿಸಿದವರು ಬೆರಳೆಣಿಕೆಯಷ್ಟು ಮಂದಿ. ಕೃಷ್ಣನ ಆಕಾರ, ಸ್ವರೂಪವನ್ನು ಕುರಿತು, ಜಗನ್ನಿಯಾಮಕನಾದ ಬ್ರಹ್ಮನೇ ವಿವರಣೆ ನೀಡಿರುವ ಸಂಗತಿ ಬ್ರಹ್ಮಸಂಹಿತದಲ್ಲಿ ವಿವರವಾಗಿ ಬರುತ್ತದೆ. ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿ ಬ್ರಹ್ಮನಿಗೆ ಕೃಷ್ಣನನ್ನು ಮುಖತಃ ಭೇಟಿಯಾಗಲು ಸಾಧ್ಯವಾಯಿತು. ಬ್ರಹ್ಮನು ಕೃಷ್ಣನನ್ನು ನೋಡಿದಾಗ ಹೇಳುತ್ತಾನೆ-
ವೇಣುಂ ಕ್ವಣಂತಂ ಅರವಿಂದ ದಳಾಯತಾಕ್ಷಂ
ಬರ್ಹಾವತಾಂಸಮ್ ಅಸಿತಾಂಬುದ-ಸುಂದರಾಂಗಂ |
ಕಂದರ್ಪ ಕೋಟಿ ಕಾಮಿನಿಯ ವಿಶೇಷ ಶೋಭಂ
ಗೋವಿಂದಂ ಆದಿ ಪುರುಷಂ ತಂ ಅಹಂ ಭಜಾಮಿ ||
ಸೃಷ್ಟಿಕರ್ತನೂ, ಕೊಳಲು ನುಡಿಸುವುದರಲ್ಲಿ ನಿಪುಣನೂ ಕಮಲದ ದಳದಂತಹ ಕಣ್ಣುಳ್ಳವನೂ, ನವಿಲುಗರಿಯಿಂದ ಶೋಭಾಯಮಾನವಾದಂತಹ ಶಿರವನ್ನು ಪಡೆದವನೂ, ನೀಲ ಮೇಘ ಬಣ್ಣದಿಂದ ಕೂಡಿದವನೂ, ಸಹಸ್ರಾರು ಪ್ರಣಯ ದೇವತೆಗಳನ್ನು ತನ್ನ ಪ್ರೀತಿಯಿಂದ ಸಂತುಷ್ಟಗೊಳಿಸುವವನೂ ಆದ ಗೋವಿಂದನಿಗೆ ನಾನು ನಮಸ್ಕರಿಸುತ್ತೇನೆ, (ಬ್ರಹ್ಮ ಸಂಹಿತ 5.38)
ಅಂಗಾನಿ ಯಸ್ಯ ಸಕಲೇಂದ್ರಿಯ-ವೃತ್ತಿ ಮಂತಿ
ಪಶ್ಯಂತಿ ಪಾಂತಿ ಕಲಯಾಂತಿ ಚಿರಂ ಜಗಂತಿ |
ಆನಂದ-ಚಿನ್ಮಯ ಸದ್ ಉಜ್ವಲ ವಿಗ್ರಹಸ್ಯ
ಗೋವಿಂದಂ ಆದಿ ಪುರುಷಂ ತಂ ಅಹಂ ಭಜಾಮಿ ||
ಸೃಷ್ಟಿಕರ್ತನೂ, ತನ್ನ ದಿವ್ಯವಾದ ರೂಪದಿಂದ ಪರಮ ಸುಖವನ್ನೂ ಸತ್ಯವನ್ನೂ ಸತ್ವವನ್ನೂ ಕಂಗೊಳಿಸುವ ತೇಜಸ್ಸನ್ನೂ ಪಡೆದವನಾಗಿದ್ದಾನೆ. ಈ ದಿವ್ಯ ರೂಪದ ಪ್ರತಿಯೊಂದು ಅಂಗವೂ ತನ್ನತನವನ್ನು ಹೊಂದಿ, ಪರಿಪೂರ್ಣವಾಗಿ ಉಳಿದ ಅಂಗಗಳು ಕಾರ್ಯನಿರ್ವಹಿಸುವಂತೆ ಮಾಡುವ, ಹಾಗೂ ನಿರಂತರವಾಗಿ ಇದನ್ನು ನೋಡುತ್ತಾ, ನಿರ್ವಹಿಸುತ್ತಾ ಲೌಕಿಕ ಹಾಗೂ ಆಧ್ಯಾತ್ಮಿಕವನ್ನು ಹೊಂದಿರುವ ಈ ಅನಂತ ಜಗತ್ತನ್ನು ರೂಪಿಸುವ ಗೋವಿಂದನಿಗೆ ನಾನು ನಮಸ್ಕರಿಸುತ್ತೇನೆ.
ಭಕ್ತಿ-ಯೋಗದ ವಿಜ್ಞಾನಿಗಳು ಜ್ಞಾನದ ಮೂಲಕ ನಮಗೆ ಕೃಷ್ಣನ ರೂಪವನ್ನು ತಮ್ಮದೇ ಆದ ರೀತಿಯಲ್ಲಿ ತೋರಿಸಿಕೊಡುವ, ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಸಾಗಿದಾಗ ನಮಗೆ ಕೃಷ್ಣನ ಸ್ವರೂಪವನ್ನು ಕಾಣಲು ಸಾಧ್ಯವಾಗುತ್ತದೆ. ಇದನ್ನು ಅನುಸರಿಸುವುದರಿಂದ ನಮ್ಮಲ್ಲೇ ನಾವು ಕೃಷ್ಣನ ದರ್ಶನವನ್ನು ಪಡೆಯಬಹುದಾಗಿದೆ.
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಪುಸ್ತಕಗಳನ್ನೂ ಓದುವ ಮೂಲಕ ನಾವು ಕೃಷ್ಣನ ನಾಮ, ಗುಣ, ಲೀಲೆ ರೂಪಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ದೃಢವಾದ ಸಂಕಲ್ಪ, ಕೃಷ್ಣಪ್ರಜ್ಞೆಯನ್ನು ಈ ಮೂಲಕ ವೈಜ್ಞಾನಿಕವಾಗಿ ಬೆಳೆಸಿಕೊಳ್ಳುವ ಮೂಲಕ ನಾವು ಭಗವಂತನ ಶುದ್ಧ ಪ್ರೇಮವನ್ನು ಗಳಿಸಲು ಸಾಧ್ಯ.
ಮನಸ್ಸನ್ನು ಆಕರ್ಷಿಸುವ ಕೃಷ್ಣನ ತೇಜಸ್ಸು ಪಚ್ಚೆಗಿಂತಲೂ ಮಿಗಿಲಾದದ್ದು. ಮಳೆಗಾಲದಲ್ಲಿ ಆಗ ತಾನೆ ಮೂಡಿದ ಹೊಸ ಮೊಡಗಳ ಹಾಗೆ ಅವನ ದೇಹದ ಕಾಂತಿ ಕಂಗೊಳಿಸುತ್ತದೆ. ಮಳೆಯ ಹನಿಗಳು ಹೊಳೆಯುವಂತೆ ಅವನ ದೇಹವೂ ಹೊಳೆಯುತ್ತದೆ. ಕೃಷ್ಣನೇ ಸಕಲ ಸೌಂದರ್ಯಗಳ ಸಮಗ್ರ ರೂಪ. ಕಾಲುಗಳನ್ನು ಬಳಸಿ ಹರಸುತ್ತಾ ನಿಂತಿದ್ದಾನೆ.
ಅವನ ದೆಃ ಬಾಗಿದ್ದು, ತಲೆ ಕೊಂಚ ಬಾಗಿದೆ. ಆಗಷ್ಟೇ ಹೊಳೆಯುವ ಮಿಂಚನ್ನೂ ಮೀರಿಸುವಂತಹ ಪೀತಾಂಬರವನ್ನು ಅವನು ಧರಿಸಿದ್ದಾನೆ. ನವಿಲುಗರಿ ಅವನ ಶಿರವನ್ನು ಸಿಂಗರಿಸಿದೆ. ಪ್ರಕಾಶಮಾನವಾದ ಮುತ್ತುಗಳಿಂದ ಕೂಡಿದ ಕಂಠೀಹಾರ ಅವನ ಕೊರಳಲ್ಲಿ ಶೋಭಿಸುತ್ತಿದೆ. ಶ್ವೇತ ಕಮಲಗಳ ಸೊಬಗನ್ನು ಕೃಷ್ಣನ ಕಣ್ಣುಗಳು ಸೋಲುವಂತೆ ಮಾಡುತ್ತವೆ. ಕಮಲದಂತೆ ಅರಳಿರುವ ಅವನ ಮುಖದಲ್ಲಿ ಹುಬ್ಬುಗಳು ದುಂಬಿಗಳಂತೆ ಸರಿದಾಡುತ್ತವೆ. ಅವನು ಕೊಳಲು ಹಿಡಿದು ನುಡಿಸುತ್ತಿದ್ದಂತೆ ಅವನ ಮುಖ ಶರತ್ಕಾಲದ ಚಂದ್ರನಂತೆ ಅರಳುತ್ತದೆ.






Leave a Reply