ಭಗವದ್ಗೀತಾ ಯಥಾರೂಪ

ಗಣ್ಯರು ಕಂಡಂತೆ…

ಎಲ್ಲರಿಗೂ ಮಾರ್ಗದರ್ಶಿ

-ನ್ಯಾ.ಮೂ.(ನಿವೃತ್ತ) ಎಂ.ರಾಮಾ ಜೋಯಿಸ್‌

ಆಧ್ಯಾತ್ಮಿಕತೆಯ ಆಧಾರದ ಮೇಲೆ ರಚಿತವಾದ “ಧರ್ಮ”ವನ್ನು ಅನುಸರಿಸುವುದೇ ಎಲ್ಲಾ ಮಾನವರಿಗೆ ಸುಖ ಮತ್ತು ಶಾಂತಿಯನ್ನು ಪಡೆಯಲು ಇರುವ ಏಕೈಕ ಮಾರ್ಗ. ಇದು ಮಾನವ ಕೋಟಿಗೆ ಭಾರತದ ಅತ್ಯಮೂಲ್ಯ ಕೊಡುಗೆ. ವಿಶಾಲವಾದ “ಧರ್ಮ”ದ ಸಾರವನ್ನು ಒಂದೇ ಕಡೆ ಸುಲಭವಾಗಿ ಎಲ್ಲ ಮಾನವರಿಗೂ ಸಿಗುವಂತೆ ಮಾಡಿರುವ ಗ್ರಂಥ ಭಗವದ್ಗೀತೆ. ಅದು ಮಾನವನಿಗೆ ದಾರಿ ದೀಪ.

ಇದನ್ನು ಪ್ರತಿಯೊಬ್ಬರಿಗೂ ಮನದಟ್ಟಾಗುವ ರೀತಿಯಲ್ಲಿ ವಿವರಿಸುವ ಮಹತ್ಕಾರ್ಯವನ್ನು ‍ಶ್ರೀಲ ಪ್ರಭುಪಾದರು ಮಾಡಿದ್ದಾರೆ. ಅದನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಿ, ಲಕ್ಷಾಂತರ ಪ್ರತಿಗಳನ್ನು ಅಚ್ಚು ಹಾಕಿಸಿ ಕೋಟಿ ಕೋಟಿ ಮಾನವರಿಗೆ ತಲುಪಿಸಿರುವ ಹಿಮಾಲಯ ಗಾತ್ರದ ಕಾರ್ಯ ಮಾಡಿರುವ ಕೀರ್ತಿ ಕೃಷ್ಣ ಪ್ರಜ್ಞೆಯ ಪ್ರಸಾರದ ವ್ರತ ಕೈಗೊಂಡಿರುವ ಇಸ್ಕಾನ್‌ ಸಂಸ್ಥೆಯದು. ಇದು ಸಕಲ ಮಾನವರಿಗೆ ಮುಖ್ಯವಾಗಿ ಭಾರತಕ್ಕೆ ಇಸ್ಕಾನ್‌ ಮಾಡಿರುವ ಅನುಪಮ ಸೇವೆ.

ಭಗವದ್ಗೀತೆ ಯಾವ ಮತ, ಸಂಪ್ರದಾಯ ಪಂಥಕ್ಕೆ ಸೀಮಿತವಾದ ಗ್ರಂಥವಲ್ಲ. ಪರಮಾತ್ಮನಿದ್ದಾನೆಂದು ನಂಬುವ ಎಲ್ಲ ಮಾನವರಿಗೂ ಮಾರ್ಗದರ್ಶಿಯಾಗಿದೆ ಮಾತ್ರವಲ್ಲ ಪರಮಾತ್ಮನಿದ್ದಾನೆಂದು ನಂಬದವರಿಗೂ ಸಹ, ಸುಖ, ಶಾಂತಿ ಪಡೆಯಲು ಅನುಸರಿಬೇಕಾದ ನಿಯಮಗಳನ್ನು ಭಗವದ್ಗೀತೆ ಒಳಗೊಂಡಿದೆ.

ಸಕಲ ಜೀವಗಳಲ್ಲೂ ಪರಮಾತ್ಮನ ಅಂಶವಾದ ಆತ್ಮವಿದೆ. ಅದು ಶರೀರದಿಂದ ಭಿನ್ನ. ಅದು ಅವಿನಾಶಿ. ಈ ತತ್ವವನ್ನು ಹೇಳಿರುವುದು ಭಗವದ್ಗೀತೆಯ ವಿಶೇಷತೆ. ಆ ಶ್ಲೋಕ ಈ ರೀತಿ ಇದೆ.

ನೈನಂ ಛಿನ್ದನ್ತಿ ಶಸ್ತ್ರಾಣಿ ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯಾನ್ತ್ಯಾಪೋ ನ ಶೋಷಯತಿ ಮಾರುತಃ (2-23)

ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು. ಅಗ್ನಿಯು ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು.

ಇದರಿಂದ ಪರಮಾತ್ಮನ ಮಕ್ಕಳು ನಾವೆಂಬುದನ್ನು ಎಲ್ಲರೂ ತಿಳಿಯಬೇಕು. ಆತ್ಮಕ್ಕೆ ಸಾವಿಲ್ಲ. ಜಾತಿಯಿಲ್ಲ. ಮತವಿಲ್ಲ, ಲಿಂಗಭೇದವಿಲ್ಲ. ಆ ಭೇದಗಳೆಲ್ಲಾ ಶರೀರದ ಆಧಾರದ ಮೇಲೆ ನಾವು ಕಟ್ಟಿರುವ ಗೋಡೆಗಳು. ನಮ್ಮ ನಮ್ಮಲ್ಲಿ ಭೇದ ಭಾವನೆಗೆ ದ್ವೇಷಕ್ಕೆ ಕಾರಣ- ಅದು ಸರಿಯಲ್ಲ.

ಫಲಾ ಫಲಗಳ ಬಗ್ಗೆ ಚಿಂತಿಸದೆ ಪ್ರತಿಯೊಬ್ಬ ಮಾನವನೂ ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ತತ್ವವನ್ನು ಭಗವದ್ಗೀತೆಯ ಅ‍ಧ್ಯಾಯ ಎರಡರ ನಲವತ್ತೇಳನೆ ಶ್ಲೋಕದಲ್ಲಿದೆ.

ಇದರ ಸಾರವೇನೆಂದರೆ: “ಕರ್ಮಣ್ಯೇವಾಧಿಕಾರಸ್ತೇ” “ನಿನಗೆ ನಿನ್ನ ಕರ್ತವ್ಯ ಮಾಡುವ ಮೂಲಭೂತ ಹಕ್ಕಿದೆ”. ಹಕ್ಕಿನ ಬದಲು ಕರ್ತವ್ಯ ಮುಖ್ಯವೆಂಬ ವಿಚಾರ ಈ ಶ್ಲೋಕದಲ್ಲಿದೆ. ಹಕ್ಕಿನ ಜ್ಞಾನ ವ್ಯಕ್ತಿಯಲ್ಲಿ ಸ್ವಾರ್ಥದ ಭಾವನೆ ಜಾಗೃತಗೊಳಿಸುತ್ತದೆ. ಇದರ ಬದಲು ವ್ಯಕ್ತಿಯಲ್ಲಿ ಕರ್ತವ್ಯ ಜ್ಞಾನವುಂಟಾದರೆ ಅವನಲ್ಲಿ ನಿಸ್ವಾರ್ಥ ಹಾಗೂ ಇತರರಿಗಾಗಿ ಸೇವೆ ಮಾಡುವ ಭಾವನೆ ಜಾಗೃತಗೊಳ್ಳುತ್ತದೆ. ಆದುದರಿಂದಲೇ ನಮ್ಮ ಪೂರ್ವಜರು ಕರ್ತವ್ಯ ಆಧಾರಿತ ಸಮಾಜ ನಿರ್ಮಿಸಿದರು. ಈ ತತ್ವವನ್ನು ವಿಷ್ಣು ಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವ ಶ್ಲೋಕ ಈ ರೀತಿ ಇದೆ.

ಅತ್ರಾಪಿ ಭಾರತಂ ಶ್ರೇಷ್ಠಂ

ಜಂಬೂ ದ್ವೀಪೇ ಮಹಾಮುನೇ|

ಯತೋಹೀಕರ್ಮಭೂರೇಷ

ಅತೋನ್ಯಾ ಭೋಗಭೂಮಯಃ||

ಜಂಬೂ ದ್ವೀಪದಲ್ಲಿರುವ ಭಾರತ ಶ್ರೇಷ್ಠವಾದುದು. ಇದಕ್ಕೆ ಕಾರಣ ಇದು ಕರ್ಮಭೂಮಿ ಮತ್ತು ಪ್ರದೇಶಗಳು ಭೋಗಭೂಮಿಗಳು.

ಈ ಅಂಶದ ಮತ್ತು ಈ ವಿಚಾರದ ಸಂಸ್ಕಾರ ನೀಡುವ ಪ್ರಕ್ರಿಯೆ ಶಿಕ್ಷಣದ ಮೂಲಕ ಆಗಬೇಕು. ಇದರಿಂದ ಮಾತ್ರ ಸ್ವಾರ್ಥಕ್ಕಾಗಿ ಬದುಕುವ ಬದಲು, ಇತರರ ಸುಖಕ್ಕಾಗಿ ಬದುಕುವ ಕರ್ತವ್ಯ ಪ್ರೇರಿತವಾದ ಹೆಚ್ಚು ಹೆಚ್ಚು ಜನರನ್ನು ನಿರ್ಮಾಣ ಮಾಡಬಹುದು.

ಈ ಮಾರ್ಗವನ್ನು ಅನುಸರಿಸುವುದರಿಂದ ಭಾರತದಲ್ಲೂ ಮತ್ತು ವಿಶ್ವದಲ್ಲೂ ಸುಖ, ಶಾಂತಿಗಳನ್ನು ಪಡೆಯಬಹುದು.

ಆದರ್ಶ ಮಾನವ ಹೇಗಿರಬೇಕು ಎಂಬ ವಿಷಯವನ್ನು ಶ್ರೀಕೃಷ್ಣನು ಎಂತಹ ಭಕ್ತ ತನಗೆ ಪ್ರಿಯನು ಎನ್ನುವ ಮೂಲಕ 12ನೇ ಅಧ್ಯಾಯದಲ್ಲಿ ಬಹು ಸುಂದರವಾಗಿ ವಿವರಿಸಿದ್ದಾನೆ.

ಅದ್ವೇಷ್ಟಾ ಸರ್ವಭೂತಾನಂ ಮೈತ್ರಃ ಕರುಣ ಏವ ಚ

ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ

ಸಂತುಷ್ಟಃ ಸತತಂ ಯೋಗೀ ಯತಾತ್ಮ ದೃಢನಿಶ್ಚಯಃ

ಮಯ್ಯರ್ಪಿತಮನೋಬುದ್ಧಿಃ ರ್ಯೋಮದ್ಭಕ್ತಃಸ ಮೇ ಪ್ರಿಯಃ

ನನ್ನ ಯಾವ ಭಕ್ತನು ದ್ವೇಷರಹಿತನೋ, ಎಲ್ಲ ಜೀವಿಗಳಿಗೆ ಮಿತ್ರನೋ, ಅಹಂಭಾವವಿಲ್ಲದವನೋ, ನಿರಹಂಕಾರಿಯೋ, ಸುಖ ದುಃಖಗಳಲ್ಲಿ ಸಮಚಿತ್ತನೋ, ಕ್ಷಮಾಶೀಲನೋ, ಸದಾತೃಪ್ತನೋ, ಆತ್ಮಸಂಯಮಿಯೋ, ದೃಢಚಿತ್ತವುಳ್ಳವನೋ ಮತ್ತು ತನ್ನ ಮನಸ್ಸನ್ನೂ ಬುದ್ಧಿಯನ್ನೂ ನನ್ನಲ್ಲಿ ಸಮರ್ಪಿಸಿರುವನೋ, ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು. (12-13.14)

ಈ ಶ್ಲೋಕದ ಸಂದೇಶವೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯೂ ಅದರಲ್ಲಿ ಹೇಳಿರುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.

ಮನುಷ್ಯ ಕೆಟ್ಟ ಆಸೆಯಿಂದ ಹೇಗೆ ತಪ್ಪುದಾರಿ ಹಿಡಿದು ತನ್ನನ್ನೇ ತಾನು ನಾಶ ಮಾಡಿಕೊಳ್ಳುತ್ತಾನೆ ಎಂಬುದನ್ನು ಮನಮುಟ್ಟುವಂತೆ ಎರಡನೇ ಅಧ್ಯಾಯದ 62-63ನೇ ಶ್ಲೋಕಗಳಲ್ಲಿ ಹೇಳಲಾಗಿದೆ:

ಧ್ಯಾಯತೋ ವಿಷಯಾನ್‌

ಪುಂಸಃ ಸಂಗಸ್ತೇಷೂಜಾಯತೇ

ಸಂಗಾತ್ಸಸಂಜಾಯತೇ ಕಾಮಃ

ಕಾಮಾತ್ಕ್ರೋಧೋಭಿಜಾಯತೇ (2-62)

ಕ್ರೋಧಾದ್‌ ಭವತಿ ಸಮ್ಮೋಹಃ

ಸಮ್ಮೋಹಾತ್ಸ್ಮ ತಿವಿಭ್ರಮಃ

ಸ್ಮೃತಿಭ್ರಂಶಾದ್‌ ಬುದ್ಧಿನಾಶೋ

ಬುದ್ಧಿನಾಶಾತ್ಪ್ರಣಶ್ಯತಿ (2-63)

ತಾನು ಇಷ್ಟಪಟ್ಟ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಅದನ್ನು ಪಡೆಯಲೇಬೇಕೆಂಬ ಆಸೆ ಹುಟ್ಟುತ್ತದೆ. ಅದು ಸಿಗದಿದ್ದಾಗ ಕ್ರೋಧವು ಉದ್ಭವವಾಗುತ್ತದೆ.

ಕ್ರೋಧದಿಂದ ಆವೇಶ ಉಂಟಾಗುತ್ತದೆ. ಆವೇಶದಿಂದ ಬುದ್ಧಿ ಭ್ರಮಣೆ ಉಂಟಾಗುತ್ತದೆ. ಬುದ್ಧಿ ಭ್ರಮಣೆಯಿಂದ ವಿವೇಕ ಬುದ್ಧಿ ನಾಶವಾಗುತ್ತದೆ. ವಿವೇಕ ಬುದ್ಧಿನಾಶವಾದಾಗ ಮನುಷ್ಯ ನಾಶ ಹೊಂದುತ್ತಾನೆ.

ಇಂತಹ ಘಟನೆಗಳು ಪ್ರತಿದಿನ ನೋಡಲು ಸಿಗುತ್ತದೆ. ಆದರೆ ಆಶ್ವರ್ಯವೆಂದರೆ ಇದರಿಂದ ಪಾಠಕಲಿಯುವವರು ವಿರಳ. ಪತಂಗ ಬೆಂಕಿಗೆ ಬೀಳುವಂತೆ ಅನೇಕ ಮಾನವರು ಕ್ಷಣಿಕವಾದ ಶಾರೀರಿಕ ಸುಖ ಅಥವಾ ಹಣಕ್ಕಾಗಿ ಕಾಮ ಮತ್ತು ಕ್ರೋಧಗಳಿಂದ ಪ್ರೇರಿತವಾಗಿ ಹೀನವಾದ ಅಪರಾಧಗಳನ್ನು ಮಾಡಿ, ತಮಗೂ, ತಮ್ಮ ನೆಂಟರಿಷ್ಟರಿಗೂ ಅಪಾರವಾದ ಮನೋವೇದನೆ, ಅವಮಾನ ಜೀವನ ಪೂರ್ತಿ ಉಂಟುಮಾಡಿಕೊಳ್ಳುತ್ತಾರೆ.

/ಹಾಗೆ ಮಾಡಬಾರದು, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂಬುದೇ ಈ ಶ್ಲೋಕದಿಂದ ಕಲಿಯಬೇಕಾದ ಪಾಠ.

ಶ್ರೀಕೃಷ್ಣನು, ತನ್ನ ಚಿಂತನೆಯೊಂದರಲ್ಲೇ ಮಗ್ನರಾಗಿದ್ದು ತನ್ನನ್ನು ಉಪಾಸನೆ ಮಾಡುವವರಿಗೆ ಸಂಪೂರ್ಣ ರಕ್ಷಣೆಯ ಭರವಸೆಯನ್ನು 9ನೇ ಅ‍ಧ್ಯಾಯದ 22 ನೇ ಶ್ಲೋಕದಲ್ಲಿ ಕೊಟ್ಟಿದ್ದಾನೆ.

ಅನನ್ಯಾಶ್ಚಿನ್ತಯನ್ತೋ ಮಾಂ ಯೇ

ಜನಾಃ ಪರ್ಯುಪಾಪಸತೇ|

ತೇಷಾಂ ನಿತ್ಯಾಭಿಯುಕ್ತಾನಂ

ಯೋಗಕ್ಷೇಮಂ ವಹಾಮ್ಯಹಮ್‌||

ಅನ್ಯಚಿಂತೆಯಿಲ್ಲದೆ ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನ ದಿವ್ಯರೂಪವನ್ನು ಯಾರು ಧ್ಯಾನಿಸುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.

ಅಲ್ಲದೆ, ಧರ್ಮಶಿಥಿಲವಾದಾಗ ಧರ್ಮವನ್ನು ಪುನರ್‌ ಸಂ‍ಸ್ಥಾಪನೆ ಮಾಡಲು ಪುನಃ ಅವತರಿಸುತ್ತೇನೆ ಎಂಬ ಭರವಸೆಯನ್ನು ಶ್ರೀಕೃಷ್ಣ ಗೀತೆಯ 4ನೇ ಅಧ್ಯಾಯದ ಏಳನೇ ಶ್ಲೋಕದಲ್ಲಿ ನೀಡಿದ್ದಾನೆ.

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ

ಆಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್‌ (4-7)

ಭರತ ವಂಶಜನಾದ ಅರ್ಜುನನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ.

ಬಹುಶಃ ಇದೇ ಭರವಸೆಯನ್ನು ಈಡೇರಿಸಲು ಅನನ್ಯ ಕೃಷ್ಣಭಕ್ತರಾದ ಶ್ರೀಲ ಪ್ರಭುಪಾದರು ಹುಟ್ಟಿ ಅವರ ಮೂಲಕ ಅತ್ಯಲ್ಪ ಕಾಲದಲ್ಲಿ ಇಸ್ಕಾನ್‌ ನಂತಹ ವಿಶ್ವವ್ಯಾಪಿ ಸಂಘಟನೆ ನಿರ್ಮಾಣವಾಗಿದೆಯೆಂದೆನಿಸುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಮನುಷ್ಯರು ಆದರ್ಶ ಮಾನವನಾಗಿ, ಜಗತ್ತಿನಲ್ಲಿ ಶಾಶ್ವತವಾದ ಸುಖ, ಶಾಂತಿಯುತ, ಹಿಂಸೆರಹಿತ ಸ್ಥಿತಿಯನ್ನು ನಿರ್ಮಿಸಲು ಭಗವದ್ಗೀತೆಯ ಪಠನ ಮತ್ತು ಅನುಕರಣೆ ಏಕೈಕ ಮಾರ್ಗ. ಆ ರೀತಿಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಕೈಗೊಂಡಿರುವ ಬೃಹತ್‌ ಪ್ರಯತ್ನ ಈ ಪ್ರಕಟಣೆ. ಇದಕ್ಕಾಗಿ ಇಸ್ಕಾನ್‌ ಸಂಸ್ಥೆ ಅತ್ಯಂತ ಅಭಿನಂದನೀಯ. ಇಸ್ಕಾನ್‌ ಕೈಗೊಳ್ಳುವ ಇಂತಹ ಅನೇಕ ಪ್ರಯತ್ನಗಳನ್ನು ಸಫಲವನ್ನಾಗಿ ಮಾಡುವ ಶಕ್ತಿಯನ್ನು ಇಸ್ಕಾನ್‌ ಸಂಸ್ಥೆಗೆ ನೀಡಲೆಂದು ಶ್ರೀಕೃಷ್ಣನಲ್ಲಿ ನನ್ನ ಪ್ರಾರ್ಥನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi