ಅದು 15ನೇ ಶತಮಾನ. ಆಗ ಜಗನ್ನಾಥ ಪುರಿಯ ಆಸುಪಾಸಿನ ಪ್ರದೇಶದಲ್ಲಿ ಭೀಕರ ಬರಗಾಲ. ಬರಗಾಲ ಎಷ್ಟೊಂದು ತೀವ್ರವಾಗಿತ್ತೆಂದರೆ ಆ ಪ್ರದೇಶದ ಸಾವಿರಾರು ಮಂದಿ ಭಿಕ್ಷುಕರಾಗಿ ಅಕ್ಷರಶಃ ಬೀದಿಗೆ ಬಿದ್ದರು. ಇಡೀ ದೇಶವನ್ನು ದುರ್ಭಿಕ್ಷ ಕಾಡುತ್ತಿರುವಾಗ, ಮಳೆ-ಬೆಳೆ ಇಲ್ಲದೇ ಭೂಮಿಯೇ ಬಾಯ್ತೆರೆದಿರುವಾಗ ಭಿಕ್ಷೆ ಬೇಡುವುದರಿಂದ ತಾನೇ ಏನು ಪ್ರಯೋಜನ? ಭಿಕ್ಷೆ ಹಾಕುವವರು ಬೇಕಲ್ಲ! ಹೀಗಾಗಿ ಸಾವಿರಾರು ಮಂದಿ ಸಾವನ್ನಪ್ಪಿದರು.

ಆದರೆ ಜಗದೊಡೆಯ, ಸಕಲ ಜೀವ ರಾಶಿಗಳ ಸೃಷ್ಟಿಕರ್ತ ಜಗನ್ನಾಥನಲ್ಲಿ ಅಚಲ ನಂಬಿಕೆ ಉಳ್ಳವರು ಮಾತ್ರ ಹಾಗೂ ಹೀಗೂ ಕಷ್ಟಪಟ್ಟು ಬದುಕು ಸವೆಸುತ್ತಿದ್ದರು. ಅಂಥವರಲ್ಲಿ ಪುರಿಯ ಹೆಸರಾಂತ ಪಂಡಿತ ಗೀತಾ ಪಾಂಡ ಕೂಡಾ ಒಬ್ಬ. ಅತಿವೃಷ್ಟಿ-ಅನಾವೃಷ್ಟಿ, ಸುಭಿಕ್ಷ-ದುರ್ಭಿಕ್ಷ ಎಲ್ಲವೂ ಜಗನ್ನಾಥನ ಲೀಲೆ ಎಂಬುವುದಾಗಿ ಆತ ನಂಬಿದ್ದ.
ಹೀಗಾಗಿ ಬರಗಾಲ ಬಂದು, ನಾವೆಲ್ಲಾ ಭಿಕ್ಷೆ ಬೇಡುವ ಪರಿಸ್ಥಿತಿ ಬಂತಲ್ಲಾ ಎಂದು ಆತ ಕೊರಗಲಿಲ್ಲ. ಬದಲಿಗೆ ತನ್ನ ಪಾಡಿಗೆ ತಾನು ಭಗವದ್ಗೀತೆ ಅಧ್ಯಯನ ಮಾಡುತ್ತಾ, ಜನರಿಗೆ ಅದನ್ನು ಬೋಧಿಸುತ್ತಾ ಹಸಿವಿನೊಂದಿಗೆ ರಾಜಿ ಮಾಡಿಕೊಂಡು ಬದುಕುತ್ತಿದ್ದ. ಅವನೇನೋ ಧೈರ್ಯದಿಂದಿದ್ದ. ಆದರೆ ಆತನ ಹೆಂಡತಿ, ಮಕ್ಕಳು ಸಮ್ಮನಿರಬೇಕಲ್ಲ?
“ಏನಾಗಿದೆ ನಿಮಗೆ? ಮೂರು ಮಕ್ಕಳು ಕಳೆದ ಮೂರು ದಿನಗಳಿಂದ ಏನನ್ನೂ ತಿಂದಿಲ್ಲ. ಹಸಿವಿನಿಂದ ನರಳುತ್ತಿವೆ. ಹೊಟ್ಟೆಗೆ ಹಿಟ್ಟಿಲ್ಲದೆ ಅವು ಎಷ್ಟು ದಿನ ತಡೆದುಕೊಳ್ಳಬಲ್ಲವು? ಕೆಲಸಕ್ಕೆ ಬಾರದ ಆ ಪುಸ್ತಕಗಳನ್ನು ಓದುವುದು ಮೊದಲು ನಿಲ್ಲಿಸಿ. ಹೋಗಿ ಎಲ್ಲಾದರೂ ಭಿಕ್ಷೆ ಬೇಡಿ ತಿನ್ನಲು ಏನಾದರೂ ತನ್ನಿ…”
ಹೆಂಡತಿಯ ಕಿರುಚಾಟ ನಿರಂತರವಾಗಿ ಸಾಗಿತ್ತು. ಬೆಳಗ್ಗೆಯಿಂದಲೂ ಹೀಗೆಯೇ ಕಿರುಚಾಡುತ್ತಿದ್ದಾಳೆ. ಆದರೆ ಯಾವುದಕ್ಕೂ ಪಾಂಡ ಉತ್ತರ ನೀಡುವ ಗೋಜಿಗೆ ಹೋಗಿರಲಿಲ್ಲ. ಎಂದಿನಂತೆ ಮುಂಜಾನೆ ನಿತ್ಯಕರ್ಮಗಳನ್ನು ಮುಗಿಸಿ ಭಗವದ್ಗೀತೆ ಓದುವುದರಲ್ಲಿ ಮಗ್ನನಾಗಿದ್ದ.
ಕೆಲ ಕ್ಷಣ ಕಳೆದಂತೆ ಹೆಂಡತಿಯ ಗಂಟಲು ಜೋರಾಗ ತೊಡಗಿತು.
“ಎಂಥ ನಾಚಿಕೆಗೆಟ್ಟ ಮನುಷ್ಯ ನೀವು. ಮಕ್ಕಳು ಇಲ್ಲಿ ಹಸಿವಿನಿಂದ ರೋದಿಸುತ್ತಿದ್ದರೆ ನೀವಲ್ಲಿ ಗೀತೆ ಓದುತ್ತಾ ಕುಳಿತಿದ್ದೀರಿ. ಗೀತೆ ಹಸಿದ ಹೊಟ್ಟೆ ತುಂಬಿಸುವುದೇ? ತಕ್ಷಣ ಹೊರಡಿ, ಭಿಕ್ಷೆ ಬೇಡಿ ತಿನ್ನಲು ಏನಾದರೂ ತನ್ನಿ. ಇಲ್ಲದಿದ್ದರೆ ನಾನು ಸುಮ್ಮನಿರುವುದಿಲ್ಲ”! ಹೆಂಡತಿಯ ಕೂಗಾಟದಲ್ಲಿ ಗೀತೆ ಅಧ್ಯಯನದಲ್ಲಿ ಮನಸ್ಸು ಕೇಂದ್ರೀಕರಿಸುವುದು ಪಾಂಡನಿಗೆ ಸಾಧ್ಯವಾಗಲೇ ಇಲ್ಲ. ಕೊನೆಗೂ ಆತ ಮೌನ ಮುರಿದ.

“ಓ ಜಗನ್ನಾಥ! ಎಂಥ ಕಟುಕ ಹೆಂಗಸು ನೀನು. ನನ್ನ ನಿತ್ಯ ಪಠನವನ್ನಾದರೂ ಮುಗಿಸುವುದಕ್ಕೆ ಬಿಡು. ನಿನಗೆ ಗೀತೆ ಬಗ್ಗೆ ಗೌರವವಿಲ್ಲದಿದ್ದರೆ ಹೋಗಲಿ. ಬೇರೆಯವರಿಗಾದರೂ ನೆಮ್ಮದಿಯಿಂದ ಓದಲು ಬಿಡು. ನಾನು ನಿನ್ನನ್ನು ಕಟ್ಟಿಕೊಂಡಿದ್ದೇನೆಂಬ ಕಾರಣಕ್ಕಾದರೂ ನನಗೆ ಗೀತೆ ಓದಲು ಅವಕಾಶ ಮಾಡಿಕೊಡುವೆಯಾ”? ಪಾಂಡ ಬೇಸರದಿಂದ ಹೆಂಡತಿಯನ್ನು ಕೇಳಿಕೊಂಡ.
ಆಕೆ ಬಡಪೆಟ್ಟಿಗೆ ಬಗ್ಗುವವಳಲ್ಲ. “ಮೊದಲು ಆ ಪುಸ್ತಕವನ್ನು ದೂರ ಎಸೆಯಿರಿ. ನಿತ್ಯ ಇದೇ ನಿಮ್ಮ ಕೆಲಸವಾದರೆ ನನ್ನನ್ನು ಯಾಕೆ ಮದುವೆಯಾದಿರಿ? ಮೂರು ಮಕ್ಕಳು ನಿಮಗೆ ಯಾಕೆ ಬೇಕಿತ್ತು?” ಆಕೆ ಜೋರಾಗಿಯೆ ದಬಾಯಿಸಿದಳು. “ನೆನಪಿಟ್ಟುಕೋ. ಇದು ಮನುಷ್ಯ ಬರೆದ ಪುಸ್ತಕವಲ್ಲ.
ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ದೇವೋತ್ತಮ ಶ್ರೀಕೃಷ್ಣನೇ ಇದನ್ನು ಉಪದೇಶಿಸಿದ. ನೀನು ತಿಳಿದುಕೊಂಡಂತೆ ಇದು ಸಾಧಾರಣ ಕಥೆ ಪುಸ್ತಕವಲ್ಲ. ಒಮ್ಮೆ ಓದಲು ಆರಂಭಿಸಿದರೆ ಇದನ್ನು ಮುಗಿಸಲೇಬೇಕು. ಇದು ಆ ದೇವನ ಆದೇಶ. ಸ್ವಲ್ಪ ಸಹನೆಯಿಂದಿರು. ಮೊದಲು ಇದನ್ನು ಮುಗಿಸುತ್ತೇನೆ” ಎಂದು ಸಹನೆಯಿಂದಲೇ ಉತ್ತರಿಸಿದ ಪಾಂಡ.
ಹೆಂಡತಿಗೆ ಇನ್ನು ತಡೆಯಲಾಗಲಿಲ್ಲ. ದುಃಖದ ಕಟ್ಟೆಯೊಡೆಯಿತು. ಜೋರಾಗಿ ಅಳಲಾರಂಭಿಸಿದಳು. “ಎಂಥ ಕ್ರೂರಿ ನೀವು? ಇನ್ನು ನಮ್ಮ ಗತಿ ಏನು? ನೀವೊಬ್ಬ ಅರ್ಚಕ. ಹೆಸರಾಂತ ಪಾಂಡ. ಈಗಷ್ಟೇ ನನಗೆ ಗೀತೆ ಬಗ್ಗೆ ಉಪದೇಶ ಮಾಡಿದಿರಲ್ಲವೇ? ನನಗೂ ಗೀತೆ ಬಗ್ಗೆ ಒಂದಿಷ್ಟು ತಿಳಿದಿದೆ. ಮೊದಲು ನಿಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿ ಎಂದು ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾನೆ. ಬರೀ ಇದನ್ನು ಓದುವುದೇ ನಿಮ್ಮ ಕರ್ತವ್ಯವೇ?” ಆಕೆ ಬಿಕ್ಕುತ್ತಲೇ ಪ್ರಶ್ನಿಸಿದಳು.
ಪಾಂಡನಿಗೆ ಮುಜುಗರವಾಯಿತು. “ನೋವಿರಲಿ, ನಲಿವಿರಲಿ, ಸಿರಿತನವಿರಲಿ, ಬಡತನವಿರಲಿ. ಎಲ್ಲವನ್ನೂ ಭಗವಂತನಿಗೆ ಅರ್ಪಿಸಬೇಕೆಂದು ಗೀತೆ ಹೇಳುತ್ತದೆ. ಗೀತೆಯ ಮೂಲ ಸಾರ ಇದೇ. ಎಲ್ಲವನ್ನೂ ಸೃಷ್ಟಿಸುವವನು ಅವನೇ. ಪ್ರತಿಯೊಂದೂ ಅವನನ್ನೇ ಅವಲಂಬಿಸಿದೆ. ಸುಖವಿದ್ದಾಗ ಕುಣಿದು ಕುಪ್ಪಳಿಸುವ ಅಥವಾ ಕಷ್ಟ ಬಂದಾಗ ಕಣ್ಣೀರಿಡುವ ಅವಶ್ಯಕತೆ ಇಲ್ಲ.
ಇದರಿಂದ ಯಾವುದೇ ಲಾಭವಾಗಲೀ, ನಷ್ಟವಾಗಲೀ ಇಲ್ಲ. ನೀನಾಗಲೀ, ನಾನಾಗಲೀ, ಬೇರೆಯವರೇ ಆಗಲೀ, ಈ ಮಾತನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಸುಮ್ಮನೆ ಏಕೆ ಹುಚ್ಚುಚ್ಚಾಗಿ ಮಾತನಾಡುತ್ತಿರುವೆ?” ಎಂದು ಆತ ತೀವ್ರ ಅಸಮಾಧಾನದಿಂದ ಪ್ರಶ್ನಿಸಿದ.

ಪತ್ನಿಯ ಕೋಪ ನೆತ್ತಿಗೇರಿತು. “ಲೇಖನಿ ಕೊಡಿ ಇಲ್ಲಿ. ನಾನು ಆ ಸಾಲುಗಳನ್ನು ಹೊಡೆದು ಹಾಕುತ್ತೇನೆ” ಎಂದು ಕಿರುಚಿದಳು.
ಪಾಂಡ ಲೇಖನಿ ನೀಡಿದ. “ಸರಿ, ಹೊಡೆದು ಹಾಕು” ಎಂದು ಸವಾಲೆಸೆದ.
ಲೇಖನಿ ಕಿತ್ತುಕೊಂಡು ಗೀತೆ ಪುಸ್ತಕದಲ್ಲಿದ್ದ ಆ ಮುಖ್ಯ ಸಾಲುಗಳ ಮೇಲೆ ಮನಬಂದಂತೆ ಗೀಚಿದಳು. “ನೋಡು, ಇದನ್ನು ಎಷ್ಟು ಸುಲಭದಲ್ಲಿ ಅಳಿಸಿಹಾಕಬಹುದು” ಎಂದು ವ್ಯಂಗ್ಯವಾಗಿ ನುಡಿದಳು.
ಪತ್ನಿಯ ದುರಾಚಾರ ಕಂಡು ಪಾಂಡನಿಗೆ ಕೋಪ, ಬೇಸರ ಎರಡೂ ಒಟ್ಟಿಗೆ ಉಕ್ಕಿ ಬಂದವು. “ಸಾಕ್ಷಾತ್ ಶ್ರೀ ಕೃಷ್ಣನೇ ನುಡಿದ ಸಾಲುಗಳನ್ನು ನಿನಗೆ ಬೇಕಾದಂತೆ ತಿರುಚಿ ಬರೆಯುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಭಗವಂತನ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ನಾನು ಭಗವದ್ಗೀತೆ ಪಠನದಿಂದ ಸಂಪಾದಿಸಿದ ಪುಣ್ಯವನ್ನೆಲ್ಲಾ ನಿನ್ನ ಹೀನ ಬುದ್ಧಿಯಿಂದ, ಕುಚೋದ್ಯದಿಂದ, ರಾಕ್ಷಸೀ ಗುಣದಿಂದ ಒಂದೇ ಕ್ಷಣದಲ್ಲಿ ನಾಶಮಾಡಿದೆ” ಎಂದು ಪ್ರಲಾಪಿಸಿದ.
ಅವನಿಂದ ಒತ್ತರಿಸಿ ಬಂದ ದುಃಖ ತಡೆದುಕೊಳ್ಳಲಾಗಲಿಲ್ಲ. ನೆಲದ ಮೇಲೆ ಅಂಗಾತ ಮಲಗಿದ. ಗೀತೆ ಪುಸ್ತಕವನ್ನು ಎದೆಗವಚಿ ಹಿಡಿದುಕೊಂಡ. ಕೋಪ ಮತ್ತು ವಿಷಾದ ಒಟ್ಟೊಟ್ಟಿಗೆ ನುಗ್ಗಿ ಬಂದವು. ಕಣ್ಣೀರು ಧಾರಾಕಾರಾವಾಗಿ ಹರಿಯಲಾರಂಭಿಸಿತು. ಇದನ್ನು ಕಂಡು ಕಂಗಾಲಾದ ಪತ್ನಿಯೂ ಬಿಕ್ಕಿ ಬಿಕ್ಕಿ ಅಳಲಾಂಭಿಸಿದಳು.
ಮಕ್ಕಳೂ ಏನೂ ಮಾಡಲು ತೋಚದೆ ತಾವೂ ಅಪ್ಪ-ಅಮ್ಮನನ್ನು ಅನುಸರಿಸಿದವು. ಪತಿಯ ಮನನೋಯಿಸಿ, ಭಗವದ್ಗೀತೆಗೆ ಅಗೌರವ ತೋರಿ ತಪ್ಪು ಮಾಡಿದೆ ಎಂಬುದು ಸ್ವಲ್ಪ ಹೊತ್ತಿನಲ್ಲೇ ಪತ್ನಿಗೆ ಅರಿವಾಯಿತು. ಸಿಟ್ಟಿನ ಭರದಲ್ಲಿ ಮಾಡಿದ ತಪ್ಪನ್ನು ಮನ್ನಿಸುವಂತೆ ಆಕೆ ಪತಿಯನ್ನು ಕೇಳಿಕೊಂಡಳು. ಅಂದು ರಾತ್ರಿಯಿಡೀ ಆಕೆಗೆ ನಿದ್ದೆ ಬರಲೇ ಇಲ್ಲ.
ಮನಸ್ಸು ವಿಚಿತ್ರವಾಗಿ ಹೋಯ್ದಾಡತೊಡಗಿತು. ಮನದೊಳಗೆ ಪ್ರಶ್ನೆಗಳು ಸುಳಿಸುಳಿಯಾಗಿ ಮೂಡತೊಡಗಿದವು. ಜಗನ್ನಾಥ ನನ್ನನ್ನು ಕ್ಷಮಿಸುವನೇ? ಆ ಜಗನ್ನಾಥನ ಕೋಪ ಎದುರಿಸಿ ಬದುಕಲು ನಮ್ಮಿಂದ ಸಾಧ್ಯವೇ? ತಟ್ಟನೆ ಪತಿ, ಮಕ್ಕಳ ನೆನಪಾಯಿತು. ಪತಿ, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಸೇರಿ ಐದು ಮಂದಿಯ ಕುಟುಂಬವನ್ನು ಸಲಹುವ ಜವಾಬ್ದಾರಿ ಆಕೆಯ ಮೇಲಿತ್ತು.
ಮೊದಲಿನಿಂದಲೂ ಕಿತ್ತು ತಿನ್ನುವ ಬಡತನ. ಪತಿಗೆ ಭಿಕ್ಷಾಟನೇ ವೃತ್ತಿ. ನಿರಂತರ ಗೀತಾಧ್ಯಯನವೇ ಆತನ ಬದುಕು. ಜಗನ್ನಾಥ ದೇವಾಲಯದ ಮುಖ್ಯ ದ್ವಾರದ ಮುಂದೆ 22 ಮಟ್ಟಿಲುಗಳ ಮೇಲೆ ಓಡಾಡುತ್ತಾ ಭಿಕ್ಷೆ ಬೇಡಿ, ಪತಿ ಏನನ್ನಾದರೂ ತಂದರಷ್ಟೆ ಆವತ್ತು ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೆ ಉಪವಾಸವೇ ಗತಿ.

ಸಾಕ್ಷಾತ್ ಶ್ರೀಕೃಷ್ಣನ ಬಾಯಿಂದ ಹರಿದು ಬಂದ ಭಗವದ್ಗೀತೆಗಿಂತ ಶ್ರೇಷ್ಠವಾದ ಸಂಗತಿ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದು ಗೀತಾ ಪಾಂಡನ ಅಚಲ ನಂಬಿಕೆಯಾಗಿತ್ತು. ಹೀಗೆಂದೇ ಆತ ಗೀತೆಯ ಅಧ್ಯಯನ ಮತ್ತು ಅಧ್ಯಾಪನವನ್ನೇ ತನ್ನ ಬದುಕಿನ ಧ್ಯೇಯವನ್ನಾಗಿಸಿಕೊಂಡಿದ್ದ. ಪುರಿಯ ರಸ್ತೆ ರಸ್ತೆಗಳಲ್ಲಿ ಗೀತೆ ಬೋಧನೆ ಮಾಡುತ್ತಾ ಆತ ಸಾಗುತ್ತಿದ್ದ.
ಹೀಗೆ ಗೀತೆ ಎಂಬುದು ಆತನ ಪಾಲಿಗೆ ಸರ್ವಸ್ವವಾಗಿತ್ತು. ಗೀತೆಯಲ್ಲಿ ಈತನಿಗಿದ್ದ ಗೌರವ, ಪಾಂಡಿತ್ಯ ಗುರುತಿಸಿಯೇ ಅಲ್ಲಿನ ಜನರು ಈತನನ್ನು ಪಂಡಿತ ಅಥವಾ ಪಾಂಡ ಎಂದು ಕರೆಯುತ್ತಿದ್ದರು. ಇವನಿಗೆ ಗೀತಾ ಪಾಂಡ ಎಂಬ ಹೆಸರು ಬರಲು ಇದೇ ಕಾರಣ.
ಅಂದು ಪತ್ನಿ ಜತೆ ವಾಗ್ವಾದ ನಡೆಸಿ, ಉರಿ ಬಿಸಿಲಿನಲ್ಲಿ ಸುತ್ತಾಡಿ, ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಬಳಲಿದ್ದ ಪಾಂಡ. ಕುಳಿತಲ್ಲೇ ಹಾಗೇ ಗೋಡೆಗೊರಗಿದ. ಬಳಲಿಕೆಯಿಂದ ಜೊಂಪು ಹತ್ತಿತು. ಮನಸ್ಸು ಜಗನ್ನಾಥನತ್ತ ವಾಲಿತು. ಏನೇನೋ ವಿಚಿತ್ರ ಕನಸುಗಳು. ಈ ಜಗನ್ನಾಥ ಪುರಿಯಲ್ಲಿ ಎಲ್ಲವೂ ನೀಲಿ. ಇಲ್ಲಿನ ಆಗಸ, ಸಮುದ್ರ, ಗಿರಿ-ಶಿಖರ ಎಲ್ಲವೂ ನೀಲಿಮಯ. ಅದಕ್ಕೇ ಇರಬೇಕು, ಈ ಸ್ಥಳವನ್ನು ನೀಲಾಚಲ ಧಾಮ ಎನ್ನುವುದು. ನಿಜ, ಇಲ್ಲಿನ ನೀಲಿ ವರ್ಣಕ್ಕೂ ವಿಶೇಷ ಅರ್ಥವಿದೆ.
ನೀಲಿ ಎಂದರೆ ಅಗಾಧತೆಯ ಸಂಕೇತ. ಜಗನ್ನಾಥನ ಸನ್ನಿಧಿ ಎಂದರೆ ಅಲ್ಲಿ ಎಲ್ಲವೂ ಇರಬೇಕಲ್ಲವೇ? ಹಾಗಾಗಿ ಇಲ್ಲಿ ನೀಲ ವರ್ಣಕ್ಕೆ ವಿಶೇಷ ಅರ್ಥ. ಜಗನ್ನಾಥನ ಸನ್ನಿಧಿಯಲ್ಲಿ ಸಕಲ ಚರಾಚರಗಳೂ ಇವೆ. ಐಶ್ವರ್ಯದ ಅಧಿದೇವತೆ ಮಹಾಲಕ್ಷ್ಮಿಯೂ ಆತನ ಮಂದಿರದೊಳಗೇ ಇದ್ದಾಳೆ. ಹೀಗಿರುವಾಗ ನಮಗೆ ಹಸಿವಿನ ಚಿಂತೆ ಏಕೆ? ಹಸಿವಿನಿಂದ ನರಳಿ ಸಾಯುತ್ತೇವೆ ಎಂಬ ಭೀತಿ ಏಕೆ? ಗೀತಾ ಪಾಂಡ ಕನಸಿನಲ್ಲೂ ತರ್ಕ ಮುಂದುವರಿಸಿದ್ದ.
ಇದೇ ಸಮಯಕ್ಕೆ ಸರಿಯಾಗಿ ಆತನ ಮನೆಯ ಬಾಗಿಲನ್ನು ಯಾರೋ ಮೆಲ್ಲಗೆ ತಟ್ಟಿದರು!
ಪತ್ನಿ ಬಂದು ಬಾಗಿಲು ತೆರೆದಳು. ಆಕೆಗೆ ಅಚ್ಚರಿ ಕಾದಿತ್ತು. ಅಕ್ಕಿ, ಬೇಳೆ, ಉಪ್ಪು, ತರಕಾರಿ, ಸೊಪ್ಪು, ಸಾಂಬಾರ ಪದಾರ್ಥ, ಬೆಲ್ಲಗಳ ಮೂಟೆ, ಮೊಸರು, ತುಪ್ಪ, ಬೆಣ್ಣೆಗಳ ಕುಡಿಕೆಗಳನ್ನು ಹೊರಲಾರದೇ ಹೊತ್ತುಕೊಂಡು ಗಟ್ಟಿ ಮುಟ್ಟಾದ ಅಜಾನುಬಾಹು ಯುವಕನೊಬ್ಬ ಬೆವರುತ್ತಾ ನಿಂತಿದ್ದ!

“ನೀವು ಯಾರ ಮನೆಗೆ ಹೋಗಬೇಕಿತ್ತು” ಆತನನ್ನು ಮೇಲಿನಿಂದ ಕೆಳಕ್ಕೆ ಪ್ರಶ್ನಾರ್ಥಕವಾಗಿ ನೋಡುತ್ತಾ ಪಾಂಡಾ ಪತ್ನಿ ಕೇಳಿದಳು.
“ಗೀತಾ ಪಾಂಡ ಎಂಬುವರ ಮನೆ ಇದೇನಾ?” ಆತ ತಲೆ ಮೇಲಿದ್ದ ಗಂಟು ಕೆಳಗಿಳಿಸುತ್ತಾ ಪ್ರಶ್ನಿಸಿದ.
“ಹೌದು, ಇದೇ ಮನೆ” ಆಕೆ ಮತ್ತಷ್ಟು ಅಚ್ಚರಿಯಿಂದ ಉತ್ತರಿಸಿದಳು.
“ಗೀತಾ ಪಾಂಡ ಅವರ ಸ್ನೇಹಿತ ಜಗ್ಗು ಎಂಬುವರು ಈ ಆಹಾರ ಪದಾರ್ಥಗಳನ್ನು ಕಳಿಸಿಕೊಟ್ಟಿದ್ದಾರೆ. ತೆಗೆದುಕೊಳ್ಳಿ” ಎನ್ನುತ್ತಾ ಆ ಗಂಟು-ಮೂಟೆಗಳತ್ತ ತೋರಿಸಿದ. ಅಂತೂ ಈ ಪದಾರ್ಥಗಳನ್ನು ತಲುಪಬೇಕಾದವರಿಗೆ ತಲುಪಿಸಿದೆನೆಲ್ಲಾ ಎಂಬ ಕೃತಾರ್ಥ ಭಾವ ಅವನ ಮುಖದಲ್ಲಿ ಮೂಡಿತು.
ಪಾಂಡ ಪತ್ನಿಗೆ ಇದು ಕನಸೋ, ನನಸೋ ಒಂದೂ ತಿಳಿಯಲಿಲ್ಲ. ಅಚಾನಕ್ಕಾಗಿ ಆಗಮಿಸಿದ ಈ ಸೌಭಾಗ್ಯ ಆಕೆಯಲ್ಲಿ ಅತಿಶಯವಾದ ಆನಂದವನ್ನುಂಟುಮಾಡಿತ್ತು. ಆಕೆ ತರಾತುರಿಯಲ್ಲಿ ಅಷ್ಟೂ ಪದಾರ್ಥಗಳನ್ನು ಮನೆಯೊಳಕ್ಕೆ ಸಾಗಿಸಿದಳು. ಸ್ವಲ್ಪ ಹೊತ್ತಿಗೆ ಮೊದಲು ಬಿಡಿಕಾಳೂ ಇಲ್ಲದೇ ಬಣಗುಡುತ್ತಿದ್ದ ಪಾಂಡ ಮನೆ ಈಗ ದವಸ ಧಾನ್ಯಗಳಿಂದ ತುಂಬಿ ತುಳುಕುತ್ತಿತ್ತು.
ಮತ್ತೆ ಹೊರಗೋಡಿ ಬಂದ ಆಕೆ, ಆ ಯುವಕನನ್ನು ಪ್ರಶ್ನಿಸಿದಳು. “ಯಾರಾಪ್ಪ ನೀನು. ಮನೆ ತುಂಬುವಷ್ಟು ಪದಾರ್ಥಗಳನ್ನು ಒಬ್ಬನೇ ಹೇಗೆ ಹೊತ್ತು ತಂದೆ?”
“ತಾಯಿ ನಾನೊಬ್ಬ ಗೋಪಾಲಕ. ನನ್ನ ತಂದೆ ಹೆಸರು ವ್ರಜರಾಜ. ನಿಮಗೆ ಅವರ ಪರಿಚಯವಿಲ್ಲ. ನಿಮ್ಮ ಪತಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಸ್ನೇಹಿತ ಜಗ್ಗು ಅವರು ಈ ಆಹಾರ ಪದಾರ್ಥಗಳನ್ನು ಕಳಿಸಿಕೊಟ್ಟರು ಎಂದು ನಿಮ್ಮ ಪತಿ ದೇವರಿಗೆ ತಿಳಿಸಿ. ನನಗಿನ್ನೂ ತುಂಬಾ ಕೆಲಸವಿದೆ. ನಾನು ತುರ್ತಾಗಿ ಹೋಗಬೇಕಿದೆ. ದಯವಿಟ್ಟು ಹೊರಡಲು ಅನುಮತಿ ನೀಡಿ” ಎಂದು ವಿನಮ್ರವಾಗಿ ಉತ್ತರಿಸಿದ ಆ ಯುವಕ.
ಅಬ್ಬ! ಈ ವ್ಯಕ್ತಿ ಎಷ್ಟೊಂದು ಅದ್ಭುತವಾಗಿ ಮಾತನಾಡುತ್ತಾನೆ. ಈತನಲ್ಲೇನೋ ವಿಚಿತ್ರ ಶಕ್ತಿ ಇರುವಂತಿದೆ ಎಂದು ಆಕೆ ಮನದಲ್ಲೇ ಯೋಚಿಸಿದಳು. “ನೋಡಪ್ಪಾ ನನ್ನ ಪತಿ ನಿದ್ರಿಸುತ್ತಿದ್ದಾರೆ. ನಾನು ಬೇಗ ಅಡುಗೆ ಮಾಡುತ್ತೇನೆ. ದಯವಿಟ್ಟು ಸ್ವಲ್ಪ ಸಮಯ ಕಾದು ಊಟ ಮಾಡಿಕೊಂಡು ಹೋಗು. ನಮಗೋಸ್ಕರ ಕಷ್ಟಪಟ್ಟು ಇಷ್ಟೆಲ್ಲಾ ಪದಾರ್ಥಗಳನ್ನು ಹೊತ್ತು ತಂದಿದ್ದೀಯ. ಊಟ ಮಾಡದೇ ಹೋಗಬೇಡ” ಆಕೆ ವಿನಯದಿಂದ ಆತನನ್ನು ಕೇಳಿಕೊಂಡಳು.
“ತಾಯಿ ನಿಮ್ಮ ಆಹ್ವಾನಕ್ಕೆ ವಂದನೆಗಳು. ಆದರೆ ನನಗೆ ಊಟ ಮಾಡುವಷ್ಟು ಸಮಯವಿಲ್ಲ. ಮೇಲಾಗಿ ನನ್ನಿಂದ ಊಟ ಮಾಡಲು ಆಗುವುದಿಲ್ಲ. ನನ್ನ ನಾಲಿಗೆಯಲ್ಲಿ ಹುಣ್ಣಾಗಿದೆ. ಬೇಕಿದ್ದರೆ ನೋಡಿ…” ಎನ್ನುತ್ತಾ ಆತ ಬಾಯಿ ತೆರೆದು ನಾಲಿಗೆ ಹೊರಚಾಚಿದ. ನಿಜಕ್ಕೂ ನಾಲಿಗೆಯಲ್ಲಿ ಗಾಯದ ಗುರುತ್ತಿತ್ತು.

“ಅಯ್ಯೋ ಪಾಪ. ಇದು ಹೇಗಾಯಿತು?” ಆಕೆ ಅಷ್ಟೇ ಕನಿಕರದಿಂದ ಪ್ರಶ್ನಿಸಿದಳು.
“ಆ ಬಗ್ಗೆ ಪಾಂಡ ಅವರಿಗೆ ಗೊತ್ತಿದೆ. ಅವರನ್ನೇ ಕೇಳಿ. ನಾನು ಊಟ ಮಾಡದೇ ಹೊರಟು ಹೋದೆ ಎಂದು ಹೇಳಿದರೆ ಅವರೇನೂ ತಪ್ಪು ತಿಳಿದುಕೊಳ್ಳುವುದಿಲ್ಲ. ನನಗೆ ಸಮಯವಾಯಿತು. ನಾನು ಹೊರಡುತ್ತೇನೆ” ಎನ್ನುತ್ತಾ ಆತ ಹೊರಡಲನುವಾದ.
ಮತ್ತೆ ಆಕೆ ಅವನನ್ನು ಒತ್ತಾಯಿಸಲಿಲ್ಲ. ಆತ ಕ್ಷಣಮಾತ್ರದಲ್ಲಿ ಮಾಯವಾದ. ಆಕೆ ಅಡುಗೆ ಮಾಡಲೆಂದು ಮನೆಯೊಳಕ್ಕೆ ಹೊರಟಳು. ಸ್ವಲ್ಪ ಹೊತ್ತಿನಲ್ಲೇ ಅಡುಗೆ ಸಿದ್ಧವಾಯಿತು. ಅದೇ ಸಮಯಕ್ಕೆ ಸರಿಯಾಗಿ ಗೀತಾ ಪಾಂಡನಿಗೆ ಎಚ್ಚರವಾಯಿತು. ಕಣ್ಣು ಬಿಟ್ಟವನಿಗೆ ಅಚ್ಚರಿ ಕಾದಿತ್ತು.
“ಅರೆ ಇದೇನಿದು? ಮನೆಯಲ್ಲಿ ಒಂದು ಕಾಳೂ ಇರಲಿಲ್ಲ. ಅದ್ಹೇಗೆ ಅಡುಗೆ ಮಾಡಿದೆ?” ಆತ ಒಂದೇ ಉಸುರಿಗೆ ಹೆಂಡತಿಯನ್ನು ಪ್ರಶ್ನಿಸಿದ.
“ಯಾರೋ ನಿಮ್ಮ ಸ್ನೇಹಿತರು ಜಗ್ಗು ಅಂತೆ. ಒಬ್ಬ ಸಹಾಯಕನ ಮೂಲಕ ಇಷ್ಟೆಲ್ಲಾ ಪದಾರ್ಥಗಳನ್ನು ಕಳಿಸಿಕೊಟ್ಟಿದ್ದಾರೆ. ಬನ್ನಿ ಇಲ್ಲಿ ನೋಡಿ. ಆ ಪುಣ್ಯಾತ್ಮಕಳಿಸಿಕೊಟ್ಟ ಪದಾರ್ಥಗಳಿಂದ ನಮ್ಮ ಅಡುಗೆ ಮನೆ ತುಂಬಿ ತುಳುಕುತ್ತಿದೆ” ಆಕೆ ಸಂಭ್ರಮದಿಂದ ಉತ್ತರಿಸಿದಳು. ಅಡುಗೆ ಮನೆಯನ್ನು ನೋಡಿ ಗೀತಾ ಪಾಂಡನ ಮನ ತುಂಬಿ ಬಂತು.
“ಪಾಪ ಇಷ್ಟೆಲ್ಲಾ ಪದಾರ್ಥಗಳನ್ನು ಒಬ್ಬನೇ ಹೊತ್ತು ತಂದ. ಸ್ವಲ್ಪ ಊಟ ಮಾಡಿಕೊಂಡು ಹೋಗುವಂತೆ ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಅವನಿಗೆ ಊಟ ಮಾಡಲೂ ಆಗುತ್ತಿರಲಿಲ್ಲ. ಅವನ ನಾಲಿಗೆಯಲ್ಲಿ ಹುಣ್ಣಾಗಿತ್ತು.” ಆಕೆ ಮತ್ತಷ್ಟು ವಿವರಣೆ ನೀಡಿದಳು. ಪಾಂಡ ಸ್ತಂಭೀಭೂತನಾದ.
“ಓ, ದೇವರೇ…!” ಅವನಿಗರಿವಿಲ್ಲದಂತೆ ಉದ್ಗಾರ ಹೊರಬಿತ್ತು. “ಹೋಗು,” ಜಗನ್ನಾಥ ವಿಗ್ರಹವನ್ನು ಹತ್ತಿರದಿಂದ ಒಮ್ಮೆ ನೋಡಿಕೊಂಡು ಬಾ…” ಆತ ಪತ್ನಿಗೆ ಆದೇಶಿಸಿದ.
ಇಬ್ಬರೂ ಜಗನ್ನಾಥ ಮಂದಿರಕ್ಕೆ ಹೋಗಿ ಜಗನ್ನಾಥನ ವಿಗ್ರಹ ನೋಡಿದರು. ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು. ಹೊರ ಚಾಚಿದ್ದ ಜಗನ್ನಾಥನ ನಾಲಿಗೆ ಮೇಲೆ ಗಾಯವಾಗಿತ್ತು.; ರಕ್ತ ವಸರುತ್ತಿತ್ತು!
ಇಬ್ಬರೂ ಭಕ್ತಿ ಪರವಶರಾಗಿ ಕಣ್ಣೀರಿಡತೊಡಗಿದರು. ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾ “ಓ ಜಗನ್ನಾಥ, ನಾವು ಪಾಪಿಗಳು ನಮ್ಮನ್ನು ಉದ್ಧರಿಸು. ನಮ್ಮನ್ನು ಕ್ಷಮಿಸು…” ಎಂದು ಪ್ರಲಾಪಿಸಿದರು.
ಗರ್ಭಗುಡಿಯ ಒಳಗಿಂದ ಅಶರೀರ ವಾಣಿ ಕೇಳಿಬಂತು. “ಯಾರು ನನ್ನನ್ನು ಪ್ರಾರ್ಥಿಸುತ್ತಾರೋ ಅವರನ್ನು ನಾನು ಕಾಪಾಡುತ್ತೇನೆ.!”
ನಿಜ. ತನ್ನ ನಿಜ ಭಕ್ತರಾದ ಗೀತಾ ಪಾಂಡ ದಂಪತಿಯನ್ನು ಜಗನ್ನಾಥನೇ ಕಾಪಾಡಿದ. ಆತನೇ ಯುವಕನ ರೂಪದಲ್ಲಿ ಬಂದು ಅವರಿಗೆ ಮನೆ ತುಂಬುವಷ್ಟು ಆಹಾರ ಪದಾರ್ಥಕೊಟ್ಟು ಹೋಗಿದ್ದ.!!






Leave a Reply