ಭ್ರೂಣ ಹತ್ಯೆ ಸರಿಯೇ?

ಶಶಿಕಲಾ ತನ್ನ ಎರಡು ವರ್ಷದ ಮಗು ಚೈತನ್ಯನೊಂದಿಗೆ ಮನೆಯಲ್ಲಿದ್ದ ಸಣ್ಣ ರಾಧಾಕೃಷ್ಣ ವಿಗ್ರಹಗಳಿಗೆ ಆರತಿ ಬೆಳಗುತ್ತಿದ್ದಳು. ಆರತಿ ಬೆಳಗುವುದರೊಂದಿಗೆ ಸಣ್ಣದಾಗಿ ಭಗವನ್ ಕೀರ್ತನೆಯನ್ನೂ ಅವಳು ಹಾಡುತ್ತಿದ್ದಳು. ಮಗುವು ಅತ್ತಿತ್ತ ಓಡಾಡುತ್ತ ತನ್ನದೇ ಆದ ರೀತಿಯಲ್ಲಿ ಕೈತಟ್ಟುತ್ತಾ ಕೀರ್ತನೆಯನ್ನು ಅನುಸರಿಸಲು ಪ್ರಯತ್ನಿಸುತ್ತಿತ್ತು.

ರಾಧಾಕೃಷ್ಣ ವಿಗ್ರಹಗಳಿಗೆ ಪುಷ್ಪಗಳನ್ನು ಅರ್ಪಿಸಿ, ಆರತಿಯನ್ನು ಮುಗಿಸಿ, ಹಾಲ್‌ಗೆ ಬಂದಳು. ಚೈತನ್ಯ ಅವಳ ಸೆರಗನ್ನು ಹಿಡಿದೆ ಕುಣಿಯುತ್ತಾ ಬಂದನು. ಹಣೆಗೆ ತಿಲಕವನ್ನು ಹಾಕುತ್ತ ದಣಿವಾರಿಸಿಕೊಳ್ಳಲು ಕುಳಿತಾಗ ಮನೆಯ ಕರೆಘಂಟೆ ಹೊಡೆಯಲಾರಂಭಿಸಿತು. “ಯಾರು?” ಎಂದು ಕೂಗುತ್ತಾ ಬಾಗಿಲ ಹತ್ತಿರ ಹೆಜ್ಜೆಯಿಟ್ಟಳು.

“ನಾನು ರಾಗಿಣಿ” ಬಾಗಿಲಿನ ಅತ್ತ ಕಡೆಯಿಂದ ಬಂತು ಉತ್ತರ. ಅದನ್ನು ಕೇಳಿ, ಎಷ್ಟು ವರ್ಷಗಳನಂತರ ತನ್ನ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳಾದ ರಾಗಿಣಿಯು ಈಗ ಮನೆಗೆ ಬಂದಿದ್ದಾಳೆ, ಎಂದು ಶಶಿಕಲಾಗೆ ಎಲ್ಲಿಲ್ಲದ ಸಂತೋಷವಾಯಿತು. ರಾಗಿಣಿ ತನಗಿಂತ ಕಿರಿಯವಳು ಅವಳು ತಾನು ಓದಿದ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ.

ಇನ್ನೂ ಅವಳ ವ್ಯಾಸಂಗ ಮುಗಿದಿರಲಿಲ್ಲ. ಬಾಗಿಲನ್ನು ತೆರೆದು ಪ್ರೀತಿಯಿಂದ ಅವಳನ್ನು ಸ್ವಾಗತಿಸಿದಳು. ಚೈತನ್ಯನನ್ನು ಎತ್ತಿ ಮುದ್ದಾಡಿದಳು ರಾಗಿಣಿ. ಇಬ್ಬರು ಕುಳಿತುಕೊಂಡು ಕುಶಲೋಪರಿಯ ವಿನಿಮಯ ಮುಗಿಯಿತು.

ತುಂಬ ಸುಂದರಳೂ, ಬುದ್ಧಿವಂತೆಯೂ ಆಗಿದ್ದ ರಾಗಿಣಿ ಬಹಳ ಸ್ನೇಹಮಯಿಯೂ ಮತ್ತು ಸದಾ ಬೇರೆಯವರ ಒಳಿತನ್ನು ಬಯಸುವವಳೂ ಆಗಿದ್ದಳು.

ತನ್ನ ಸುಂದರ ಗೆಳತಿಯ ಪುನರ್ ಮಿಲನದಿಂದ ಶಶಿಕಲಾಗೆ ಎಲ್ಲಿಲ್ಲದ ಆನಂದ. ತನ್ನ ಗೆಳತಿಯನ್ನು ಭೇಟಿ ಮಾಡಿ ರಾಗಿಣಿಗೂ ಮಹಾನಂದ. ಇಬ್ಬರು ಗೆಳತಿಯರ ಶುಭ ಮಿಲನದ ವಾರ್ತಾಲಾಪದ ಮಧ್ಯೆ ಚೈತನ್ಯನಿಗೆ ನಿರ್ಲಕ್ಷಿಸಿದ ಭಾವ, ಕುಪಿತನಾಗಿ ಮನೆಯ ರೂಮಿನೊಳಗೆ ಹೋಗಿ ಬೊಂಬೆಗಳೊಡನೆ ಆಟವಾಡಲಾರಂಭಿಸಿದ. ಇತ್ತ ರಾಜಕೀಯ, ಅಧ್ಯಾತ್ಮ ಇನ್ನೂ ಅನೇಕ ವಿಷಯಗಳ ಬಗ್ಗೆ ವಾರ್ತಾಲಾಪದಲ್ಲಿ ಮುಳುಗಿ ಹೋಗಿದ್ದರು ಇಬ್ಬರು ಗೆಳತಿಯರು.

“ನಿನಗೆ ಗರ್ಭಪಾತ ವಿಷಯದ ಬಗ್ಗೆ ಏನಾದರೂ ತಿಳಿದಿದೆಯಾ’? ಎಂದು ಪ್ರಶ್ನಿಸಿದಳು ರಾಗಿಣಿ. ಗೆಳತಿಯ ಪ್ರತಿಕ್ರಿಯೆಗೆ ಕಾಯದೆ ಮುಂದುವರಿಸಿದಳು. “1972 ರಲ್ಲಿ MTP (Medical Termination of Pregnancy Act) ಕಾಯ್ದೆಯನ್ನು ಮಂಡಿಸಲಾಯಿತು. ಭಾರತದಲ್ಲಿ ಗರ್ಭಪಾತವು ಕಾನೂನು ಬಾಹಿರ ಕ್ರಿಯೆಯಲ್ಲ ಎನ್ನುವ ಬಗ್ಗೆ ನ್ಯಾಯಾಂಗದ ಸ್ಪಷ್ಟ ಅಭಿಮತವಾಯಿತು.”

1966ರ ಷಾ ಸಮಿತಿಯ ಗಣನೆಯ ಪ್ರಕಾರ ಆ ವರ್ಷದಲ್ಲಿ 3.9 ದಶಲಕ್ಷ ಗರ್ಭಪಾತಗಳಾಗಿದ್ದವು. ಇವುಗಳಲ್ಲಿ ಹೆಚ್ಚಾಗಿ ಯಾವುದೇ ಸೂಕ್ತ ಕ್ರಿಯೆ ಇಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವಂತಹವಾಗಿದ್ದವು.

ಛಾಬ್ರ ಮತ್ತಿತರ ಸಮಿತಿಯ ಪ್ರಕಾರ 1944ರಲ್ಲಿ ಗರ್ಭಪಾತದ ಸಂಖ್ಯೆ 6.7 ದಶಲಕ್ಷಕ್ಕೆ ಏರಿತ್ತು ಮತ್ತು ಕಾನೂನು ಬದ್ಧದ MTP ನೇರವೇರಿಸಬಲ್ಲ ಕೇಂದ್ರಗಳ ಸಂಖ್ಯೆ 7,121 ಇತ್ತು. ಆದರೆ ಆಗಲೂ ಸಹ ಇಂತಹ ಕ್ರಮಬದ್ಧ MTP ಕೇಂದ್ರಗಳಿಗೆ ಹೋಗದೆ ಗರ್ಭಪಾತ ಮಾಡಿಸುವ ಬಹುಪಾಲು ಜನ ಕಾನೂನು ಬಾಹಿರವಾಗಿ ಮಾಡುತ್ತಿದ್ದರು ಎಂಬುದು ಗಮನಾರ್ಹ ಅಂಶ.

ಭಾರತದಲ್ಲಿ ಪ್ರತಿ ಸಾವಿರ ಗರ್ಭವತಿಯರಲ್ಲಿ 29 ಮಹಿಳೆಯರು (ಕೃತಕ ಹಾಗೂ ಕಾನೂನುಬದ್ಧ) ಗರ್ಭಪಾತವನ್ನು ಮಾಡಿಸಿಕೊಳ್ಳುತ್ತಾರೆ.

“ಈ ಅಂಕಿ ಅಂಶಗಳು ನನ್ನನ್ನು ಬಹಳ ದುಃಖಿಸುವಂತೆ ಮಾಡಿದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ಥಿತಿ ಹೇಗಿದೆ.” ಇನ್ನೇನು ಕಣ್ಣೀರು ಸುರಿಸುವಂತೆ ಕಾಣುತ್ತಿದ್ದ ಶಶಿಕಲಾ ಹೇಳಿದಳು.

“ಅಮೆರಿಕೆ ಬಗ್ಗೆ ಮಾತ್ರ ನಾನು ವಿಶ್ಲೇಷಣೆಗಳನ್ನು ಓದಿದ್ದೇನೆ. 1973ರಲ್ಲಿ ಮೊದಲ ಮೂರು ತಿಂಗಳ ಗರ್ಭಧಾರಣೆಯ ಸಮಯದೊಳಗೆ ನಡೆಸುವ ಗರ್ಭಪಾತ ಕಾನೂನು ಬಾಹಿರವಲ್ಲ ಎಂದು ಅಮೆರಿಕೆಯ ಸರ್ವೋಚ್ಚ ನ್ಯಾಯಾಲಯ ಆದೇಶವಿತ್ತಿತ್ತು. 3 ತಿಂಗಳವರೆಗೆ ಭ್ರೂಣವು ಒಂದು ಮಾಂಸದ ಮುದ್ದೆಯಷ್ಟೆ, 3 ತಿಂಗಳ ಅನಂತರ ಮಾತ್ರ ಅದಕ್ಕೆ ಜೀವ ತುಂಬುತ್ತದೆ ಎಂಬುದು ನ್ಯಾಯಾಲಯದ ತರ್ಕ.

ಈ ಕಾನೂನಿಂದಾಗಿ ಗರ್ಭಪಾತದ ಸಂಖ್ಯೆ ಹೆಚ್ಚುತ್ತಲೇ ಹೋಯಿತು. 1985ರ ದಶಕದಲ್ಲಿ 1000 ಗರ್ಭವತಿಯರಲ್ಲಿ ಸರಿ ಸುಮಾರು 311 ಗರ್ಭವತಿಯರು ಕಾನೂನು ಬದ್ಧವಾಗಿ ಗರ್ಭಪಾತವನ್ನು ಮಾಡಿಕೊಂಡರು ಎಂದು ಅಂಕಿ ಅಂಶ ಹೇಳುತ್ತದೆ. 2000ದಲ್ಲಿ 8.57 ಲಕ್ಷಗರ್ಭಪಾತಗಳು ಅಮೆರಿಕೆಯಲ್ಲಿ ನಡೆಯಿತು.”

“MTPನಲ್ಲಿ ಗರ್ಭಪಾತದ ವಿಧಾನ ಏನು? ಎಂಬುದು ನಿನಗೆ ತಿಳಿದಿದೆಯಾ?’ ಶಶಿಕಲಾ ಪ್ರಶ್ನಿಸಿದಳು. “ಇಲ್ಲ’ ರಾಗಿಣಿ ಉತ್ತರಿಸಿದಳು.

‘ನಾನು ಕೆಲವು ತಿಂಗಳ ಹಿಂದೆ ಒಂದು ವೈದ್ಯಕೀಯ ಪತ್ರಿಕೆಯನ್ನು ಓದುತ್ತಿದ್ದಾಗ ನನ್ನ ಗಮನಕ್ಕೆ ಬಂದ ಅಂಶವಿದು. ಗರ್ಭಪಾತ ನಡೆಸುವ ವಿಧಾನಗಳು ಅನೇಕ. ಗರ್ಭಧಾರಣೆಯ ಸಮಯವನ್ನು ಆಧರಿಸಿ ಸೂಕ್ತ ‘ಕ್ರಮ’ವನ್ನು ವೈದ್ಯರು ನಿರ್ಧರಿಸುತ್ತಾರೆ.

ಗರ್ಭಧಾರಣೆಯಾಗಿ ಹತ್ತು ವಾರ ಮಾತ್ರ ಕಳೆದಿದ್ದರೆ ಗರ್ಭಪಾತದಿಂದ ಭ್ರೂಣವನ್ನು ನಾಶಮಾಡುತ್ತಾರಂತೆ. ಈ ವಿಧಾನದಲ್ಲಿ ಗರ್ಭಾಶಯದೊಳಗೆ ಕೊಳವೆಯನ್ನು ಸೇರಿಸಿ, ನಿರ್ವಾತವನ್ನು ಸೃಷ್ಟಿಸಲಾಗುತ್ತದೆ. ನಿರ್ವಾತದಿಂದ ಭಾರಿ ಪ್ರಮಾಣದ ಒತ್ತಡ ಉಂಟಾಗಿ ಭ್ರೂಣದ ಅಂಗಾಂಗಗಳು ಛಿದ್ರಛಿದ್ರವಾಗುತ್ತವೆ.”

“ಲವಣ ಮಿಶ್ರಣ ಗರ್ಭಪಾತ (Saline Abortion) ದಲ್ಲಿ ಲವಣ ದ್ರವದಲ್ಲಿ ವಿಷವನ್ನು ಮಿಶ್ರಣ ಮಾಡಿ ಗರ್ಭಾಶಯದೊಳಗೆ ತುಂಬಲಾಗುತ್ತದೆ. ಆಗ ಮಗುವು ಬಹಳ ತೊಂದರೆಗೆ ಒಳಪಟ್ಟು ಒದೆಯುತ್ತದೆ ಮತ್ತು ಹಿಂಸೆಗೆ ಒಳಗಾಗುತ್ತದೆ. ಅದು ಸುಟ್ಟು ಹೋಗುತ್ತದೆ ಮತ್ತು ಅದರ ಚರ್ಮ ಸುಲಿದು ಹೋಗುತ್ತದೆ. ಒಂದೋ ಎರಡೋ ದಿನಗಳ ನಂತರ ತಾಯಿಯು ಮೃತ ಜಾತ ಶಿಶುವನ್ನು ಪ್ರಸವಿಸುತ್ತಾಳೆ.”

“ಶಶಿ ನಿಲ್ಲಿಸು ನಿನ್ನ ವರ್ಣನೆಯನ್ನು, ಇದು ಬರ್ಬರ ಕೃತ್ಯದ ಬೀಭತ್ಸ ವರ್ಣನೆಗಳು. ನನಗೆ ಕೇಳಲಾಗದು.” ರಾಗಿಣಿ ಭಾವುಕಳಾಗಿ ಹೇಳಿದಳು.

“ರಾಗಿಣಿ ಹೌದು ಕೃತಕ ಗರ್ಭಪಾತ ಬರಿಯ ಒಂದು ಮಾಂಸದ ಮುದ್ದೆಯನ್ನು ಕೀಳುವ ಪ್ರಕ್ರಿಯೆಯಲ್ಲ, ಒಂದು ಜೀವಂತ ಶಿಶುವಿನ ಹತ್ಯೆ. ಅದು ಹತ್ಯೆಯಷ್ಟು ಭೀಭತ್ಸವಾದುದು.”

ಶಶಿಕಲಾ ಮುಂದುವರಿಸಿದಳು “ವಿಜ್ಞಾನಿಗಳು, ವೈದ್ಯರ ಅಭಿಪ್ರಾಯದಲ್ಲಿ ಜೀವದ ಲಕ್ಷಣಗಳು ಯಾವುದೋ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ. ಪ್ರಜ್ಞೆಯು ರಾಸಾಯನಿಕ ಸಮ್ಮಿಳನದಿಂದಲೇ ಹುಟ್ಟುತ್ತದೆ. ಇದು ಅಭಿಪ್ರಾಯವೇ ಹೊರತು ಸಿದ್ಧ ಸತ್ಯವಲ್ಲ.

ಏಕೆಂದರೆ ವೀರ್ಯ ಅಂಡಾಣುಗಳು ಮಿಶ್ರಿತವಾಗಿ ಅದರಿಂದ ಜೀವಂತ ಶಿಶುವು ಹುಟ್ಟುವಾಗ ಯಾವಾಗ ಜೀವ ಲಕ್ಷಣಗಳು ಸೇರುತ್ತವೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಅವರಿಗೆ ಸಾಧ್ಯವಾಗಿಲ್ಲ. ಸುಮ್ಮನೆ ಊಹೆಯಿಂದ 3ನೆಯ ತಿಂಗಳಲ್ಲಿ ಹಾಗಾಗುತ್ತದೆ ಎಂದಿದ್ದಾರೆ. ಇದು ವಿಜ್ಞಾನವಲ್ಲ ಸ್ವಕಪೋಲ ಕಲ್ಪನೆ.”

ರಾಗಿಣಿ ನೀನು ಹೇಳುತ್ತಿರುವುದು ಸರಿ ಅನಿಸುತ್ತದೆ. ಆದರೆ ಬಹಳ ದೊಡ್ಡ ಆಪಾದನೆಯನ್ನೇ ಮಾಡಿದೆ. ಆದರೆ ಯಾವಾಗ ಭ್ರೂಣವು ‘ಶಿಶು’ ವಾಗುತ್ತದೆ ?”

ಶಶಿಕಲಾ ಹೇಳಿದಳು. “ಜೀವವು ಯಾವುದೋ ಲೌಕಿಕ ರಸಾಯನದಿಂದ ಹುಟ್ಟುವುದಿಲ್ಲ. ಅದು ಆತ್ಮದಿಂದಲೇ ಬರುತ್ತದೆ. ಲೌಕಿಕವು ಎಂದೂ ಜೀವಂತವಾಗಲಾರದು, ಪ್ರಜ್ಞೆಯನ್ನು ಸೃಷ್ಟಿಸಲಾರದು. ಅದು ಆತನ ಲಕ್ಷಣ, ಆತನು ತನ್ನ ಕರ್ಮಫಲದನುಸಾರವಾಗಿ ಪುರುಷನ ವೀರ್ಯವನ್ನು ಆಶ್ರಯಿಸುತ್ತದೆ.

ಅಂತಹ ವೀರ್ಯವು ಹೇಗೆ ಗರ್ಭಕೋಶವನ್ನು ಪ್ರವೇಶಿಸಿ ಅಂಡಾಣುವಿನೊಂದಿಗೆ ಮಿಳಿತವಾಗಿ, ಸಣ್ಣ ಬಟಾಣಿಯಾಕಾರದ ಭ್ರೂಣವಾಗುತ್ತದೆ. ಅದು ಬೆಳೆದು ಮುಂದೆ ಶಿಶುವಾಗುತ್ತದೆ. ಆದ್ದರಿಂದ ಭ್ರೂಣವು ಎಂದೂ ಮಾಂಸದ ಮುದ್ದೆಯಲ್ಲ ಅದು ಒಂದು ಜೀವಂತ ವಸ್ತು.

ಅದನ್ನು ಕೊಲ್ಲುವ ಹಕ್ಕು ನಮಗಿಲ್ಲ. ಶಾಸ್ತ್ರಗಳ ಪ್ರಕಾರ ಕೃತಕ ಗರ್ಭಪಾತವು ಬಹಳ ಘೋರ ಪಾಪ ಹಾಗೆ ಮಾಡುವವನು ಭಾರಿ ಪಾಪ ಪ್ರತಿಕ್ರಿಯೆಯನ್ನು ಅನುಭವಿಸಬೇಕಾಗುತ್ತದೆ. ಹಾಗೆ ಮಾಡುವ ಸ್ತ್ರೀ ಪುರುಷರು ಮುಂದಿನ ಜನ್ಮದಲ್ಲಿ ಗರ್ಭ ಪ್ರವೇಶ ಮಾಡಿ ಗರ್ಭಪಾತಕ್ಕೆ ಗುರಿಯಾಗಬೇಕಾಗುತ್ತದೆ. ಸೂರ್ಯನ ಬೆಳಕನ್ನೂ ಕಾಣದಾಗಬೇಕಾಗುತ್ತದೆ.

“ಇದು ಕರ್ಮ ಸಿದ್ಧಾಂತ, ಆದರೆ ಸಾಯಿಸುವಾಗ ಆತ್ಮವು ಸಾಯುವುದಿಲ್ಲ ದೇಹವು ಮಾತ್ರ ತಾನೇ. ಆದ್ದರಿಂದ ಯಾಕೆ ಅದು ಪಾಪ?” ಪ್ರಶ್ನಿಸಿದಳು ರಾಗಿಣಿ.

“ಕರ್ಮ ಸಿದ್ಧಾಂತ ಬರಿಯ ತತ್ತ್ವ ವಿಚಾರವಲ್ಲ ಅದು ವಾಸ್ತವಿಕ. ನೀವು ನಂಬಿರಿ ನಂಬದಿರಿ, ಅದು ಕಾರ್ಯ ಮಾಡೇ ಮಾಡುತ್ತದೆ. ಪಾಪ ಪುಣ್ಯಗಳ ಪ್ರತಿಕ್ರಿಯೆ ಅನುಭವಿಸಲೇ ಬೇಕು. ಆದ್ದರಿಂದ ಗರ್ಭಪಾತ ಮಾಡುವ ಸ್ತ್ರೀ ಪುರುಷರು ಅವರು ಮಾಡಿದ ಪಾಪದ ಫಲವನ್ನು ಅನುಭವಿಸಲೇಬೇಕು.

“ದೇಹವು ಆತ್ಮದ ವಾಹನ. ಅದು ಆತ್ಮದ ಲೌಕಿಕ ಹಾಗು ಆಧ್ಯಾತ್ಮಿಕ ಆಸೆಗಳನ್ನು ಪೂರೈಸಬಲ್ಲ ಸಾಧನ. ಸತ್ ಸಂತಾನವನ್ನು ನೀಡುವುದು ಗೃಹಸ್ಥರ ಒಂದು ಕರ್ತವ್ಯ. ಅದನ್ನು ಅವರು ಸರಿಯಾಗಿ ಮಾಡಬೇಕು. ಹೀಗಿದ್ದರೂ ಆತ್ಮ ಸಾಯುವುದಿಲ್ಲ. ಆದ್ದರಿಂದ ದೇಹವನ್ನು ನಾಶಮಾಡೋಣ ಎಂದು ಯೋಚಿಸಿ ಗರ್ಭಪಾತ ಮಾಡಕೂಡದು. ಬದಲಾಗಿ ಮಗುವಾಗಿ ಬರುವ ಆತ್ಮಕ್ಕೆ ಲೌಕಿಕ, ಆಧ್ಯಾತ್ಮಿಕ ಒತ್ತಾಸೆ ನೀಡಬೇಕು.

”ಸಂತಾನ ಪಡೆಯುವುದಕ್ಕಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಪಾಪವಲ್ಲ. ಬದಲಾಗಿ ಅದು ವಿಧಿತ ಕರ್ತವ್ಯ. ಇದನ್ನು ಗರ್ಭಾಧಾನ ಸಂಸ್ಕಾರ ಎಂದು ಕರೆಯುತ್ತಾರೆ. ಅದು ಷೋಡಶ ಸಂಸ್ಕಾರಗಳಲ್ಲಿ ಒಂದು. ಆದರೆ ಯಾವ ಪುರುಷರು ಬರಿಯ ಇಂದ್ರಿಯ ತೃಪ್ತಿಯ ತಾತ್ಕಾಲಿಕ ಸುಖಕ್ಕಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೋ ಅಂತಹವರು ಪಾಪ ಫಲಕ್ಕೆ ತುತ್ತಾಗಬೇಕಾಗುತ್ತದೆ.

ಅಂತಹ ಸ್ತ್ರೀ ಪುರುಷರಿಗೆ ಸಂತಾನ ಕೆಲವೊಮ್ಮೆ ಬೇಡದ ತೊಡಕಾಗಿ ಕಾಣುತ್ತಾರೆ. ಆದ್ದರಿಂದಲೇ ಅವರು ತಮ್ಮ ಕ್ಷಣಿಕ ತೃಪ್ತಿಗಾಗಿ ಅಸಹಾಯಕ ಗರ್ಭಸ್ಥ ಶಿಶುವನ್ನು ಕೊಲ್ಲುವುದಕ್ಕೂ ಹೇಸುವುದಿಲ್ಲ.”

“ಹಾಗಾದರೆ ಪತಿ ಪತ್ನಿಯರ ನಡುವೆ ಪ್ರೀತಿ ಪ್ರೇಮವಿರಬಾರದೆ”, ರಾಗಿಣಿ.

“ಹಾಗೆ ಹೇಳಲಿಲ್ಲವಲ್ಲ ನಾನು. ಅವರು ಒಟ್ಟಿಗೆ ಸೇರುತ್ತಿರುವುದು ಉನ್ನತ ಮೌಲ್ಯಗಳ ಪೂರೈಕೆಗಾಗಿ ಅಂದರೆ, ಭಗವಂತನನ್ನು ಸೇರುವ ಉದ್ದೇಶದಿಂದ ಗೃಹಸ್ಥರಾಗುತ್ತಿದ್ದಾರೆಯೇ ಹೊರತು, ಕ್ಷಣ ಮಾತ್ರದ ಸುಖದ ಮರೀಚಿಕೆಯನ್ನು ಬೆನ್ನಟ್ಟುವುದರಲ್ಲಿ ಅಲ್ಲ.” “ಪತಿ ಪತ್ನಿಯರು ತಮ್ಮ ಮಕ್ಕಳಿಗೆ ಮೊದಲು ಗುರುವಾಗಿ, ಅಧ್ಯಾತ್ಮಿಕದೆಡೆಗೆ ಅವರನ್ನು ಒಯ್ಯುವ ಕಾರ್ಯವನ್ನು ಮಾಡಬೇಕು.

ಲೌಕಿಕ ಹಾಗು ಆಧ್ಯಾತ್ಮಿಕ ಆಶ್ರಯಗಳೆರಡನ್ನೂ ಅವರು ಸಂತಾನಕ್ಕೆ ನೀಡಬೇಕು. ಪ್ರೀತಿಯಿಂದ ಕಾಣದೇ ಗರ್ಭದಲ್ಲೇ ಕೊಲ್ಲುವ ಹೀನ ಕೃತ್ಯವನ್ನು ಮಾಡಬಾರದು. ಬದಲಾಗಿ ಪುತ್ರನಿಗೆ ಮತ್ತೊಂದು ಜನ್ಮವು ಬಾರದಿರುವಂತೆ ನೋಡಿಕೊಳ್ಳಬೇಕು. ಹಾಗೆ ಆಗದಿದ್ದಲ್ಲಿ ಪತಿಯೋ ಪತ್ನಿಯೋ, ತ೦ದೆಯೋ ತಾಯಿ ಆಗಲೇಬಾರದು.

”ಹಾಗೆ ಎಲ್ಲ ಪತಿ ಪತ್ನಿಯರು ಸಂತಾನ ಪಡೆದರೆ ಜನಸಂಖ್ಯೆ ಏರುತ್ತಾ ಹೋಗುತ್ತದೆ. ಲೈಂಗಿಕ ತೃಪ್ತಿಯಿಂದ ವಂಚಿಸುವುದು ಮಾನಸಿಕವಾಗಿ ಕ್ಷೋಭೆ ಉಂಟುಮಾಡುತ್ತದೆ. ಅದಕ್ಕಾಗಿ ಗರ್ಭವೇ ಧಾರಣೆಯಾಗದಂತೆ ಗರ್ಭ ನಿರೋಧಕವನ್ನು ಬಳಸುವುದು ಸೂಕ್ತ ಎನ್ನುತ್ತಾರೆ ಕೆಲವು ಚಿಂತಕರು.” ರಾಗಿಣಿ ಹೇಳುತ್ತಾ ಟೇಬಲ್ ಮೇಲಿದ್ದ ಹಣ್ಣಿನ ರಸವನ್ನು ಕುಡಿಯಲಾರಂಭಿಸಿದಳು.

ಇದ್ದಕ್ಕಿದ್ದ ಹಾಗೆ ಹೊರಗಡೆ ಬಹಳ ದೊಡ್ಡ ಕೋಲಾಹಲದ ಶಬ್ದವುಂಟಾಯಿತು. ಹೊರಗೆ ಹೋಗಿ ನೋಡಿದಾಗ, ಕೆಲವು ಯುವಕರು ತಮ್ಮ ಕಾರಿನಲ್ಲಿ ಜೋರಾಗಿ ಸಿನಿಮಾ ಸಂಗೀತವನ್ನು ಹಾಕಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂತು. ರಾಗಿಣಿ ಮತ್ತು ಶಶಿಕಲಾ ಒಳಗಡೆ ಬಂದರು ವಾರ್ತಾಲಾಪ ಮತ್ತೆ ಹಿಂದಿನ ವಿಷಯಕ್ಕೆ ಬಂತು.

”ಜನಸಂಖ್ಯಾ ಸ್ಫೋಟ ಎನ್ನುವುದು ಬರಿಯ ಮೋಸದ ಮಾತು. ಜನಸಂಖ್ಯೆ ಸ್ಫೋಟ ಎನ್ನುವುದಕ್ಕಿಂತ ಸೂಕ್ತ ನಿರ್ವಹಣೆಯೇ ಇಲ್ಲದಿರುವುದು ನಿಜವಾದ ಸಮಸ್ಯೆ. ಇನ್ನು ಲೈಂಗಿಕ ತೃಪ್ತಿ ಬೇಕೆ ಬೇಕು ಎನ್ನುವುದು ಶುದ್ಧಸುಳ್ಳು. ಉನ್ನತ ರುಚಿಯನ್ನು ಬೆಳಸಿಕೊಂಡಾಗ ನಿಮ್ಮ ರುಚಿಗಳ ಬಗ್ಗೆ ಆಸಕ್ತಿ ಹೊರಟು ಹೋಗುತ್ತದೆ.

ಈಗಿನ ಮಾಧ್ಯಮಗಳು ಮತ್ತು ಇಡೀ ಜನಮಾನಸವು ಲೈಂಗಿಕ ತೃಪ್ತಿಯನ್ನು ಬಹಳವಾಗಿ ವಿಜೃಂಭಣೆಯಿಂದ ಗುಣಗಾನ ಮಾಡುತ್ತವೆ. ಆದ್ದರಿಂದಲೇ ಅದು ಅತ್ಯಗತ್ಯ ಎನಿಸಿಬಿಟ್ಟಿದೆ. ಆದರೆ ನಿಜವಾದ ಮಾನವ ಜೀವನದಲ್ಲಿ ಇಂಥ ಪ್ರಚೋದನೆಗಳೇ ಇರಬಾರದು. ಮೊದಲೇ ಹೇಳಿದೆನಲ್ಲ ಸತ್ ಸಂತಾನ ಪ್ರಾಪ್ತಿ ಗೃಹಸ್ಥಾಶ್ರಮದ ಮುಖ್ಯ ಕರ್ತವ್ಯ.

ಅದರಂತೆ ಗರ್ಭಾಧಾನ ಸಂಸ್ಕಾರ ಮಾಡುವುದು ಪ್ರತಿಯೊಬ್ಬ ಗೃಹಸ್ಥನ ಕರ್ತವ್ಯ. ಕೃಷ್ಣನೇ ಹೇಳುವ ಹಾಗೆ ಧರ್ಮೋ ವಿರುದ್ಧೋ ಕಾಮೋSಸ್ಮಿ.

ಗರ್ಭನಿರೋಧಕ ಬಳಸುವುದೂ ಗರ್ಭಪಾತಕ್ಕೆ ಸಮವೇ ಆಗುತ್ತದೆ. ಆದ್ದರಿಂದಲೇ ಮಾನವರಿಗೆ ನಿಷಿದ್ದ ಲೈಂಗಿಕತೆ” ಗರ್ಭಾಧಾನದ ಉದ್ದೇಶವಿಲ್ಲದ ಲೈಂಗಿಕ  ಕ್ರಿಯೆಯು ವರ್ಜ್ಯ. ಇದು ಮಾನವ ಜೀವನದ ನಾಲ್ಕು ನಿಯಂತ್ರಕ ತತ್ತ್ವಗಳಲ್ಲಿ (ಮಾಂಸಾಹಾರ ವರ್ಜನೆ, ನಿಷಿದ್ಧ ಲೈಂಗಿಕತೆ, ಮದ್ಯಪಾನ ಮತ್ತು ಜೂಜು)ಒಂದು.

“ನಿಜವಾದ ಕುಟು೦ಬ ಕಲ್ಯಾಣ ಯೋಜನೆಯೆಂದರೆ ಆಧ್ಯಾತ್ಮಿಕವಾಗಿ ಬೆಳೆಯುವುದು ಮತ್ತು ಅನಾವಶ್ಯಕ ಗರ್ಭಧಾರಣೆಯನ್ನು ತಂತಾನೆ ನಿಲ್ಲಿಸುವುದು. ಮೋಕ್ಷಾಭಿಮುಖರಾದ ಗೃಹಸ್ಥಾಶ್ರಮಿಗಳಿಂದ ನಾವು ಸಮೃದ್ಧ, ಶಾಂತ ಜನಸಂಖ್ಯೆತಯನ್ನು ಸೃಷ್ಟಿಸಬಹುದು.”

”ಕೃತಕ ಗರ್ಭಪಾತ ಇತ್ಯಾದಿ ಕರ್ಮಠಗಳು ಅನಿರ್ಬಂಧಿತ ಕಾಮ ತೃಷೆಯಿಂದಲೇ ಹುಟ್ಟುತ್ತವೆ. ಅದರಿಂದ ಲೌಕಿಕವಾಗಿಯಾಗಲಿ, ಆಧ್ಯಾತ್ಮಿಕವಾಗಿ ಯಾಗಲಿ ತೃಪ್ತರಾಗುವುದು ಸಾಧ್ಯವಿಲ್ಲ. ಕೃತಕ ಗರ್ಭಪಾತ ಮಾಡುವ ಸ್ತ್ರೀಯರು ಶಾರೀರಕವಾಗಿ ಮಾನಸಿಕವಾಗಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಮಾನಸಿಕವಾಗಿ ತಪ್ಪಿತಸ್ಥ ಮನೋಭಾವ, ಆತ್ಮಹತ್ಯಾ ಮನೋಭಾವ, ಶೋಷಣೆ, ಹೀನ ಭಾವನೆ, ತನ್ನನ್ನೇ ತಾನು ಕ್ಷಮಿಸಲಾಗದಂತಹ ಮನೋಭಾವ, ಇತ್ಯಾದಿ ತೊಂದರೆಗಳು ಕಾಡುತ್ತವೆ. ಶಾರೀರಕವಾಗಿ ಕೆಲವೊಮ್ಮೆ ಬಂಜೆತನ, ಗರ್ಭಸ್ರಾವ, ರಕ್ತಸ್ರಾವ, ಋತುಚಕ್ರ ದೋಷ ಇತ್ಯಾದಿ ತೊಂದರೆ ತೊಡಕುಗಳು ಉಂಟಾಗಬಹುದು. ಪಾಪ ಕಾರ್ಯದಿ೦ದ ನಾವು ಈಗಲೂ ಸಂತೋಷವಾಗಿರಲಾರೆವು ಮತ್ತು ಮುಂದೆಯೂ ಅದು ನಮ್ಮನ್ನು ಸಂತೋಷವಾಗಿ ಇರಗೊಡುವುದಿಲ್ಲ.”

ಅಷ್ಟರಲ್ಲಿ ಚೈತನ್ಯ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಬಂದನು. ಅಮ್ಮನಿಗೆ ತನ್ನ ಕೈಯಲ್ಲಿದ್ದ ಆಟಿಕೆಯನ್ನು ತೋರಿಸಿದ. ಅದರಲ್ಲಿದ್ದ ಕೃಷ್ಣನ ಚಿತ್ರವನ್ನು ತೋರಿಸಿ ತೊದಲು ನುಡಿಗಳಲ್ಲಿ “ಕೃ….. .ಷ್ಣ, ಕೃಷ್ಣ” ಎನ್ನುತ್ತ ಅಮ್ಮನ ತೊಡೆಯನ್ನೇರ ಹತ್ತಿದ. ರಾಗಿಣಿಗೆ ಮುದ್ದಾಗಿ ಕಂಡ ಮಗನನ್ನು ನೋಡಿ ಆನಂದವಾಯಿತು. ಅವನನ್ನು ಎತ್ತಿ ಮುದ್ದಾಡಿದಳು.

”ಶಶಿಕಲಾ ನೀನು ಹೇಳುವುದು ಸರಿ, ಇಂತಹ ಮುದ್ದಾದ ಕಂದನನ್ನು ಬೆಳೆಸುವುದು ತಂದೆ ತಾಯಿಯರ ಭಾಗ್ಯವಲ್ಲವೆ. ಅದರಿಂದ ಏಕೆ ದೂರ ಸರಿಯಬೇಕಲ್ಲವೆ?” ಎಂದಳು ರಾಗಿಣಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi