ದೊಡ್ಡ ಪ್ರಾಣಿಗಳು, ಸಣ್ಣ ಪ್ರಾಣಿಗಳು

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಮನೋವಿಜ್ಞಾನಿ ಡಾ. ಕ್ರಿಶ್ಚಿಯನ್‌ ಹೌಸರ್‌ ನಡುವೆ ಸೆಪ್ಟೆಂಬರ್‌ 1975ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ.

ಡಾ. ಹೌಸರ್‌ : ಡಾರ್ವಿನ್‌ ಬಗೆಗೆ ನೀವೆನ್ನುವುದು ತಿಳಿಯುತ್ತಿದೆ.

ಶ್ರೀಲ ಪ್ರಭುಪಾದ : ಎಂತಹ ಠಕ್ಕ. ಮೂಢ, ದೊಡ್ಡ ಕತ್ತೆ. ಅವನಿಗೆ ಸತ್ತ ವಸ್ತು ಮತ್ತು ಜೀವಂತ ಆತ್ಮದ ನಡುವಣ ವ್ಯತ್ಯಾಸ ಗೊತ್ತಿಲ್ಲ. ಅವನಿಗೆ ದೈಹಿಕ ಹೊದಿಕೆ ಮತ್ತು ಅದರೊಳಗಿನ ಆತ್ಮದ ವ್ಯತ್ಯಾಸವೇ ತಿಳಿಯದು. ಅವನನ್ನು ಅನುಸರಿಸುವ ದೊಡ್ಡ ಆಧುನಿಕ ಕತ್ತೆಗಳಿಗೂ ಗೊತ್ತಿಲ್ಲ. ಸರಿಯಾದ ಜ್ಞಾನವಿಲ್ಲ. ಸುಮ್ಮನೆ ನಟನೆ, ವಂಚನೆ.

ಖಚಿತವಾಗಿಯೂ ಆತ್ಮವು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಹೋಗಬಹುದು. ಒಂದು ಮಂಗನ ದೇಹದಿಂದ ಒಂದು ಮಾನವ ದೇಹಕ್ಕೆ. ಅಥವಾ ಅದೇ ರೀತಿ ಮಾನವ ದೇಹದಿಂದ ಮಂಗನ ದೇಹಕ್ಕೆ ಹೋಗಬಹುದು. ಈ ಗ್ರಹಿಕೆಯು ಚೆನ್ನಾಗಿದೆ. ಆದರೆ, ಮಂಗನ ದೇಹವು ಮಾನವ ದೇಹವಾಗಿ ಪರಿವರ್ತಿತವಾಗುತ್ತದೆ ಎಂಬುವುದಲ್ಲ. ಈ `ಗ್ರಹಿಕೆಯು’ ಮೂರ್ಖತನ. ವಂಚನೆ.

ಡಾ. ಹೌಸರ್‌ : ಆದರೆ, ನೀವು ಕರೆಯುವಂತೆ ಈ ವಂಚನೆಯು ಈಗಲೂ ಮಾನವ ಕುಲಕ್ಕೆ ಸಹಾಯವಾಗುತ್ತಿದೆ. ಏಕೆಂದರೆ ಶತ ಶತಮಾನಗಳಿಂದ ಹೆಚ್ಚಿನದೇನೂ ಗೊತ್ತಿಲ್ಲ. ಆದುದರಿಂದ ಈ ವಿಜ್ಞಾನಿಗಳು ತಾವು ತಲಪಿರುವ ಜ್ಞಾನದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಮತ್ತು…

ಶ್ರೀಲ ಪ್ರಭುಪಾದ : ಹೌದು, ಅದನ್ನು ಭಾಗವತದಲ್ಲಿ ವಿವರಿಸಲಾಗಿದೆ: ಅರಣ್ಯದಲ್ಲಿ ಸಣ್ಣ ಪ್ರಾಣಿಗಳು ದೊಡ್ಡ ಪ್ರಾಣಿಯನ್ನು ನಾಯಕನನ್ನಾಗಿ ನೋಡುತ್ತವೆ. ಆದರೂ ಅದು ಪ್ರಾಣಿಯಲ್ಲವೇ?

ಡಾ. ಹೌಸರ್‌ : ನನಗೆ ನಿಜವಾಗಿಯೂ ಅರ್ಥವಾಗಲಿಲ್ಲ.

ಶ್ರೀಲ ಪ್ರಭುಪಾದ : ಅರಣ್ಯದಲ್ಲಿ …

ಡಾ. ಹೌಸರ್‌ : ಹೌದು.

ಶ್ರೀಲ ಪ್ರಭುಪಾದ : … ಉದಾಹರಣೆಗೆ ಸಿಂಹವನ್ನು ಪ್ರಾಣಿಗಳ ರಾಜನೆಂದು ಪರಿಗಣಿಸಲಾಗಿದೆ. ಆದುದರಿಂದ ಸಿಂಹವು ದೊಡ್ಡ ಪ್ರಾಣಿಯಾಗಿರಬಹುದು. ಆದರೆ ಅದೂ ಕೂಡ ಪ್ರಾಣಿಯೇ.

ಡಾ. ಹೌಸರ್‌ : ಅಂದರೆ, ಆಧುನಿಕ ವಿಜ್ಞಾನಿಯು ದೊಡ್ಡ ಸಿಂಹ ಎಂದೇ ನೀವು ಹೇಳುವುದು?

ಶ್ರೀಲ ಪ್ರಭುಪಾದ : ಹೌದು. ದೊಡ್ಡ ಠಕ್ಕ. ಅದೇ, ದೊಡ್ಡ ಠಕ್ಕ. ಸಣ್ಣ ಠಕ್ಕರು ದೊಡ್ಡ ಠಕ್ಕನನ್ನು ಪ್ರಸಿದ್ಧ ಪುರುಷನನ್ನಾಗಿ ಮಾಡುವುದು. ಅಷ್ಟೆ.

ಡಾ. ಹೌಸರ್‌ : ದೊಡ್ಡ ಠಕ್ಕನು ಸಣ್ಣ ಠಕ್ಕರನ್ನು ದುರ್ಮಾರ್ಗಕ್ಕೆ ಎಳೆಯುವುದು.

ಶ್ರೀಲ ಪ್ರಭುಪಾದ : ಹೌದು. ಅದು ಪರಿಸ್ಥಿತಿ. ಈಗ ಎಲ್ಲವೂ ಹಾಗೆ ನಡೆಯುತ್ತಿದೆ. ವಿಜ್ಞಾನದಲ್ಲಿ ಮಾತ್ರವಲ್ಲ, ತತ್ತ್ವ ಶಾಸ್ತ್ರ, ಧರ್ಮ, ಸಮಾಜ ಶಾಸ್ತ್ರ ಮತ್ತು ರಾಜಕೀಯದಲ್ಲಿ ಕೂಡ. ದೊಡ್ಡ ಠಕ್ಕರು ಮತ್ತು ಸಣ್ಣ ಠಕ್ಕರು. ಅಷ್ಟೆ.

ಡಾ. ಹೌಸರ್‌ : ಆದರೆ ಉದಾಹರಣೆಗೆ, ಐನ್‌ಸ್ಟೀನ್‌ ದೊಡ್ಡ ಠಕ್ಕ ಎಂದು ಹೇಳುವಾಗ ನೀವು ತುಂಬ ಭಾವನೆಗಳನ್ನು ಹೊರಹೊಮ್ಮಿಸಬೇಕು.

ಶ್ರೀಲ ಪ್ರಭುಪಾದ : ಇಲ್ಲ. ಐನ್‌ಸ್ಟೀನ್‌ಗೆ ದೇವರಲ್ಲಿ ನಂಬಿಕೆ ಇತ್ತು. ಹೌದು, ಅವನು ದೇವರನ್ನು ನಂಬಿದ್ದ. ಆದುದರಿಂದ ಅವನು ಠಕ್ಕನಲ್ಲ. ಅವನು ವಿವೇಕಿ. ಅವನು ದೇವರಲ್ಲಿ ನಂಬಿಕೆ ಇಟ್ಟಿದ್ದ. ಅವನು ಭಗವಂತನ ಅಸೀಮಿತ ಬುದ್ಧಿ, ದೇವರ ಮಿದುಳನ್ನು ಕಂಡು ಹಿಡಿಯಲು ಪ್ರಯತ್ನಿಸಿದ. ಅನೇಕ ವಿಜ್ಞಾನಿಗಳು ದೇವರಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಆದರೆ ದುರದೃಷ್ಟವೆಂದರೆ ಠಕ್ಕರು ಪ್ರಮುಖ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ.

ದೇವರನ್ನು ಕಡೆಗಣಿಸುತ್ತಿರುವ ಜನರು ಠಕ್ಕರು, ಪ್ರಾಣಿಗಳು. ಹರಾವ್‌ ಅಭಕ್ತಸ್ಯ ಕುತೋ ಮಹದ್‌ ಗುಣಾಃ. ದೈವ ಪ್ರಜ್ಞೆ ಇಲ್ಲದಿದ್ದರೆ, ಅಂತಹವರು ಠಕ್ಕರು.

ದೇವರನ್ನು ಅರ್ಥಮಾಡಿಕೊಳ್ಳುವಲ್ಲಿ ಪರಿಪೂರ್ಣತೆ ಇಲ್ಲದಿರಬಹುದು. ಆದರೆ ದೇವರಿದ್ದಾನೆ ಎಂದು ಅವನು ಭಾವಿಸಿದರೆ, ಅದು ಬುದ್ಧಿವಂತಿಕೆ. ಆದರೆ ಠಕ್ಕರು, ಎರಡು ಕಾಲುಗಳ ಪ್ರಾಣಿಗಳು, ಎಂದಿಗೂ ದೇವರನ್ನು ಅಥವಾ ತಮ್ಮದೇ ಆತ್ಮವನ್ನು ಒಪ್ಪುವುದಿಲ್ಲ. ರಷ್ಯದಂತೆ. ಠಕ್ಕರ ತಂಡ. ಅವರು ದೇವರನ್ನು ನಂಬುವುದಿಲ್ಲ.

ಡಾ. ಹೌಸರ್‌ : ಆದರೆ ರಷ್ಯದಲ್ಲಿ ಧಾರ್ಮಿಕ ಆಸಕ್ತಿ ಇದೆ. ಯೂರೋಪಿನ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು. ಆದರೆ ನಾಯಕರಲ್ಲ. ನಾಯಕರು…

ಶ್ರೀಲ ಪ್ರಭುಪಾದ : ನಾನು ನಾಯಕರ ಬಗೆಗೆ ಮಾತನಾಡುತ್ತಿದ್ದೇನೆ. ರಷ್ಯದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ. ನಾಯಕರು ದೊಡ್ಡ ಪ್ರಾಣಿಗಳು. ಸಾಮಾನ್ಯ ಮನುಷ್ಯರನ್ನು ಸಣ್ಣ ಪ್ರಾಣಿಗಳನ್ನಾಗಿ ಮಾಡಿದರೆ ಮಾತ್ರ ಅವರು ಸಂತೋಷದಿಂದ ಇರುತ್ತಾರೆ. ಠಕ್ಕ ನಾಯಕರು ಇಡೀ ಜಗತ್ತಿನ ಪರಿಸ್ಥಿತಿಯನ್ನು ಹಾಳುಮಾಡುತ್ತಿದ್ದಾರೆ. ಭಾರತದಲ್ಲಿಯೂ ಕೂಡ. ಭಾರತದಲ್ಲಿ ಸ್ವಭಾವತಃ ಶೇಕಡ 80ರಷ್ಟು ಜನರು ನಾಲ್ಕು ಮುಖ್ಯವಾದ ಪಾಪ ಕ್ರಿಯೆಗಳಿಂದ ದೂರವೇ ಇರುತ್ತಾರೆ. ಆದರೆ ಪ್ರಸ್ತುತದಲ್ಲಿ, ಸರಕಾರ, ನಾಯಕರು ಮಾಂಸ ಭಕ್ಷಣೆ, ಮದ್ಯಪಾನ, ಜೂಜು ಮತ್ತು ಅಕ್ರಮ ಲೈಂಗಿಕ ಪ್ರಕ್ರಿಯೆಗೆ ಜನರನ್ನು ಪ್ರಚೋದಿಸುತ್ತಿದ್ದಾರೆ.

ಓ, ಹೌದು, ಈಗೆಲ್ಲ ಸರಕಾರವೆಂದರೆ ಠಕ್ಕತನವೇ. ನಿಕ್ಸನ್‌ ಅವರನ್ನೇ ತೆಗೆದುಕೊಳ್ಳಿ. ಅಕಾರದಲ್ಲಿದ್ದಾಗ ಅವರು ತಾವು ಠಕ್ಕರೆಂಬುವುದನ್ನು ಸಾಬೀತು ಪಡಿಸಿದರು. ವಾಸ್ತವಿಕವಾಗಿ, ಸರಕಾರಿ ನಾಯಕರೆಂದರೆ ಠಕ್ಕರು ಎಂಬ ಅರ್ಥ ಬಂದಿದೆ.

ಡಾ. ಹೌಸರ್‌ : ತಾವು ದೇವರಲ್ಲಿ ನಂಬಿಕೆ ಉಳ್ಳವರು ಎಂದು ನಿಕ್ಸನ್‌ ಟೆಲಿವಿಷನ್‌ ಭಾಷಣಗಳಲ್ಲಿ ಹೇಳುತ್ತಲೇ ಇದ್ದಾರೆ.

ಶ್ರೀಲ ಪ್ರಭುಪಾದ : ಅದು ಬರೀ ರಾಜಕೀಯ.

ಡಾ. ಹೌಸರ್‌ : ಹೌದು.

ಶ್ರೀಲ ಪ್ರಭುಪಾದ : ಅವರು ದೇವರಲ್ಲಿ ನಂಬಿಕೆ ಉಳ್ಳವರಿರಬಹುದು. ಆದರೆ ಅವರ ಕ್ರಿಯಾಶೀಲ ಬದುಕಿನಲ್ಲಿ ದೇವರಿಗೆ ಅಲ್ಪ ಕಾಲದ ವಿನಿಯೋಗವಿದೆ. ಮನುಷ್ಯನು ತನ್ನ ಕ್ರಿಯಾಶೀಲ ಬದುಕನ್ನು ತನ್ನ ಸುಪ್ತ ಭಗವತ್‌ ಪ್ರಜ್ಞೆ ಅಥವಾ ಕೃಷ್ಣಪ್ರಜ್ಞೆಯನ್ನು ಎಚ್ಚರಗೊಳಿಸಲು ಬಳಸದಿದ್ದರೆ, ಅವನು ಸುಮ್ಮನೆ ಕಾಲಹರಣ ಮಾಡಿದ್ದಾನೆ ಎನ್ನಬಹುದು.

ಡಾ. ಹೌಸರ್‌ : ಆದರೆ, ಉದಾಹರಣೆಗೆ ಈ ದೇಶದಲ್ಲಿ ಯಾರೋ ಒಬ್ಬರು, ಚರ್ಚ್‌ಗೆ ಹೋಗುವ ಕ್ರಿಶ್ಚಿಯನ್‌… ಇದೂ ಕೂಡ ಮಹತ್ತ್ವದ್ದಲ್ಲವೇ? ನೀವು ಅವರನ್ನು ಅದರಿಂದ, ಮತಾಂತರಗೊಳಿಸಲು ಪ್ರಯತ್ನಿಸುವುದಿಲ್ಲ, ಅಲ್ಲವೇ?

ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ. ನಮ್ಮಲ್ಲಿ ಅಂತಹ ವಿಧಾನಗಳೇನಿಲ್ಲ.

ಡಾ. ಹೌಸರ್‌ : ಏಕೆಂದರೆ, ನಿಮ್ಮ ಆಂದೋಲನವು ತುಂಬ ವಿಶೇಷವಾದುದು.

ಶ್ರೀಲ ಪ್ರಭುಪಾದ : ಹೌದು. ಆದರೆ ನಾವು ಯಾರನ್ನೂ ಮತಾಂತರಿಸಲು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ, “ಈ ಯುವತಿಯರು ಏಕೆ ಭಾರತೀಯರಂತೆ ಸೀರೆಗಳನ್ನು ಉಟ್ಟಿದ್ದಾರೆ?” ಎಂದು ಯಾರೋ ಕೇಳಿದರು. ನಾನು ಅವರಿಗೆ `ಹೀಗೆ ಮಾಡಿ’ ಎಂದು ಏನೂ ಆದೇಶಿಸಲಿಲ್ಲ. ಆದರೆ ಅವರು ತಮ್ಮ ಇಚ್ಛೆಯಂತೆ ಮಾಡುತ್ತಿದ್ದಾರೆ. ಹಿಂದೂಗಳಾಗಿ ಎಂದು ನಾನು ಎಂದೂ ಪ್ರಚಾರ ಮಾಡಿಲ್ಲ. ಇಲ್ಲ. “ದೈವಪ್ರಜ್ಞೆ ಹೊಂದಿ” ಎಂಬುದಷ್ಟೇ ನಮ್ಮ ಮನವಿ. ಯಾವುದೇ ರೀತಿಯ ಬಾಹ್ಯ ರೀತಿಯ ಧರ್ಮ ಸರಿ. ಅದೇನೂ ಮುಖ್ಯವಲ್ಲ. ಅನುಸರಿಸುವವರು ತಮ್ಮ ಸುಪ್ತ ಭಗವಂತ – ಪ್ರಜ್ಞೆಯನ್ನು ಎಚ್ಚರಿಸಬೇಕು, ಅಷ್ಟೆ. ಆಗ ಅದು ಪ್ರಥಮ ದರ್ಜೆಯ ಧರ್ಮ.

ದೈವಪ್ರಜ್ಞೆ ಗುಣ ಮಟ್ಟಕ್ಕೆ ಯಾರೋ ಎಚ್ಚರಗೊಳ್ಳಲಿಲ್ಲ ಎಂದುಕೊಳ್ಳಿ. ಆಗ ಅವರು ಯಾವುದೋ ರೂಪದ ಧರ್ಮವನ್ನು ಅನುಸರಿಸುತ್ತಾರೆ, ಆದರೆ ಅದು ಕಾಲಹರಣ. ಅದೇ ನಮಗೆ ಕಳವಳಕಾರಿ. ನಮಗೆ ಅಧಿಕೃತ ಅಥವಾ ತೋರ್ಕೆಯ ಧರ್ಮನಿಷ್ಠೆ ಬೇಡ. ಸಂಸ್ಕೃತದಲ್ಲಿ ಅದನ್ನು `ಧರ್ಮ ಧ್ವಜ’ ಎನ್ನುತ್ತಾರೆ. ಧ್ವಜ ಎಂದರೆ ಪತಾಕೆ. ಆದುದರಿಂದ ಮನುಷ್ಯನಿಗೆ ಸುಮ್ಮನೆ ಒಂದು ಧ್ವಜ ಬೇಕಾಗುತ್ತದೆ, “ನಾನು ಈ ಧರ್ಮಕ್ಕೆ ಸೇರಿದವನು.” ಅಷ್ಟೆ.

“ನಿನಗೆ ಧರ್ಮದ ಬಗೆಗೆ ಏನು ಗೊತ್ತು” ಎಂದು ನಾನು ಅವನನ್ನು ಕೇಳಿದರೆ, ಅವನಿಗೆ ವಿವರಿಸಲಾಗುವುದಿಲ್ಲ. “ಭಗವಂತನ ಸ್ವಭಾವ ಏನು?” ಅವನಿಗೆ ವಿವರಿಸುವುದು ಸಾಧ್ಯವಿಲ್ಲ. “ನಿನ್ನ ದೇಹದ ಆಚೆಗೆ, ನೀನು ಯಾರು?” ಅವನಿಗೆ ವಿವರಿಸುವುದು ಸಾಧ್ಯವಿಲ್ಲ. ಸುಮ್ಮನೆ ಅವನ ಬಳಿ ಧ್ವಜವಿರುತ್ತದೆ. `ನಾನು ಹಿಂದೂ’, `ನಾನು ಮುಸಲ್ಮಾನ’, `ನಾನು ಕ್ರಿಶ್ಚಿಯನ್‌’. ಅವನು ಬೇರೆಯದೇ ಧ್ವಜ ಉಳ್ಳವರೊಂದಿಗೆ ಹೋರಾಡುತ್ತಾನೆ. `ನಾನು ದೊಡ್ಡ ಮನುಷ್ಯ, ಶ್ರೇಷ್ಠ ಆತ್ಮ’ ಎಂದು ಅವನು ಯೋಚಿಸುತ್ತಿರಬಹುದು. ಆದರೆ ನಿಜವಾಗಿ ಅವನು ಸಣ್ಣ ಪ್ರಾಣಿ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi