ಬಾಸ್ಟನ್ ನಲ್ಲಿ ಹೊಸ ಕೃಷ್ಣ ಮಂದಿರ

ಶ್ರೀ ಕೃಷ್ಣನ ಭಕ್ತರಿಗೆ ಅಮೆರಿಕದಲ್ಲಿ ಮತ್ತೊಂದು ನೂತನ ಮಂದಿರ. ಇತ್ತೀಚೆಗಷ್ಟೇ ಅಮೆರಿಕದ ಭಕ್ತಾದಿಗಳಿಗೆ ತೆರೆದುಕೊಂಡ ಭವ್ಯವಾದ ಹರೇ ಕೃಷ್ಣ ಮಂದಿರವು ಈಗ ಅಪಾರ ಸಂಖ್ಯೆಯಲ್ಲಿ ಜನಮನವನ್ನು ಆಕರ್ಷಿಸುತ್ತಿದೆ.

ಅಮೆರಿಕದ ನ್ಯೂ ಇಂಗ್ಲೆಂಡ್ ಪ್ರದೇಶದ ಶ್ರೂಸ್ಬರಿಯಲ್ಲಿ (ಮ್ಯಸಾಚುಸೆಟ್ಸ್) ಒಂಬತ್ತು ಎಕರೆ ಪ್ರದೇಶದಲ್ಲಿ ನಿಮಾರ್ಣಗೊಂಡಿರುವ ಈ ಮಂದಿರವು ಸಂದರವಾದ ಭೂದೃಶ್ಯ ಒಳಗೊಂಡಿದೆ.

ಶ್ರೀ ಶ್ರೀ ರಾಧಾ ದಾಮೋದರ ಮಂದಿರವು 226 ಆರ್, ಗ್ರೇಟನ್ ಸ್ಟ್ರೀಟ್ನಲ್ಲಿ ವಿಜೃಂಭಿಸುತ್ತಿದೆ. ಬಾಸ್ಟನ್ನಿಂದ ಸುಮಾರು 40 ಮೈಲಿ ದೂರದಲ್ಲಿದೆ. ಕೃಷ್ಣಪ್ರಜ್ಞೆಯನ್ನು ಪಸರಿಸುವ ಮತ್ತು ಆಧ್ಯಾತ್ಮಿಕ ಅರಿವನ್ನು ಹೆಚ್ಚು ಹೆಚ್ಚು ಜನರಲ್ಲಿ ಬೆಳೆಸುವ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಧ್ಯೇಯವನ್ನು ಎತ್ತಿ ಹಿಡಿಯುತ್ತ ಮಂದಿರವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜ್ಞಾನದಾಹಿಗಳಿಗೆ ಕೇಂದ್ರವಾಗಿದೆ. ಶ್ರೀಲ ಪ್ರಭುಪಾದರು 1966ರಲ್ಲಿ ನ್ಯೂಯಾರ್ಕ್ ನಲ್ಲಿ ಇಸ್ಕಾನ್ ಸ್ಥಾಪಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು.

ಇದು ಬೃಹದಾಕಾರವಾಗಿದೆಯಷ್ಟೇ ಅಲ್ಲ, ಭವ್ಯವಾಗಿದೆ ಕೂಡ. ಇದರ ಅಮೋಘ ವರ್ಣ ಸಂಯೋಜನೆ ಮತ್ತು ಸಂಸ್ಕೃತಿಯನ್ನು ಬಿಂಬಿಸಿರುವ ರೀತಿ ವರ್ಣನಾತೀತ. ರಾಜಸ್ತಾನಿ ಶಿಲ್ಪಕಲೆ ಮತ್ತು ಹರ್ಷದ ಹೊನಲು ಹರಿಸುವ ಭೂದೃಶ್ಯವು ಜನರನ್ನು ದಿಗ್ಮೂಢಗೊಳಿಸುತ್ತಿದೆ.

ಸುಂದರವಾಗಿ ನಿರ್ಮಿಸಿರುವ ಪೂಜಾಸ್ಥಳವನ್ನು ಜೈಪುರದಲ್ಲಿ ರೂಪಿಸಲಾಗಿದೆ. ಶ್ರೀ ಶ್ರೀ ರಾಧಾ ದಾಮೋದರ (ಮೂಲ ಮತ್ತು ಉತ್ಸವರ್) ವಿಗ್ರಹಗಳು, ಶ್ರೀ ಶ್ರೀ ಗೌರ ನಿತಾಯ್ (ಮೂಲ ಮತ್ತು ಉತ್ಸವರ್) ಹಾಗೂ ಶ್ರೀಲ ಪ್ರಭುಪಾದರ ವಿಗ್ರಹಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಎರಡು ಅಂತಸ್ತಿನ ಮಂದಿರದಲ್ಲಿ ನೋಡಲು ಬಹಳಷ್ಟಿದೆ. ವಿಶಾಲವಾದ ಮಂದಿರದ ಅಂಗಳ, ಪೂಜಾ ಸಾಮಗ್ರಿಗಳನ್ನು ಇಡುವ ಸಿದ್ಧತಾ ಕೊಠಡಿಗಳು, ಬೋಧನಾ ಕೋಣೆಗಳು ಮತ್ತು ಹೊರಾಂಗಣದ ಉಪ್ಪರಿಗೆಗಳು (ಬಾಲ್ಕನಿ) ಮಂದಿರದಲ್ಲಿ ಒಳಗೊಂಡಿವೆ.

ಸಡಗರ ಸಂಭ್ರಮದದಿಂದ ಮಂದಿರವು ತೆರದುಕೊಂಡಿತು. ಆರಂಭದ ಅಂಗವಾಗಿ ನಾಲ್ಕು ದಿನಗಳ ಕಾಲ ವಿವಿಧ ಆಚರಣೆಗಳು, ಉತ್ಸವಗಳು ನಡೆದವು. ಇವುಗಳ ಜೊತೆಗೆ ಧಾರ್ಮಿಕ ಸಂವಾದವೂ ಜನರನ್ನು ಸೆಳೆಯಿತು. ಶ್ರೀ ಮಧು ಪಂಡಿತ ದಾಸ, ಶ್ರೀ ಜೈ ಚೈತನ್ಯ ದಾಸ ಮತ್ತು ಶ್ರೀ ಚಂಚಲಾಪತಿ ದಾಸ ಅವರು ಕೃಷ್ಣಪ್ರಜ್ಞೆಯನ್ನು ಕುರಿತು ನೆರೆದಿದ್ದವರಲ್ಲಿ ಅರಿವು ಮೂಡಿಸಿದರು. ಈ ಆಧ್ಯಾತ್ಮಿಕ ಸಂವಾದದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಯಿತು.

ಈ ಮೇಲಿನ ಗಣ್ಯರಲ್ಲದೆ ಸೆನೆಟರ್ ಮೈಕ್ ಮೂರ್, ಹಾರ್ವರ್ಡ್ನ ಪ್ರೊ. ಫ್ರಾನ್ಸ್ಸಿಸ್ ಎಕ್ಸ್. ಕೋಲನಿ, ಹೃದ್ರೋಗ ತಜ್ಞ ರಾಮ್ ಎಮಾನಿ ಮತ್ತು ಎಂಐಟಿಯ ಅಸೋಸಿಯೆಟ್ ಡೀನ್ ತಿಯಾ ಕೀತ್ ಲೂಕಸ್ ಅವರುಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಲಾಸ್ಯ ನೃತ್ಯ ಶಾಲೆ ಮತ್ತು ಶ್ರುತಿಲಯ ತಂಡದವರಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಹಾರ್ವರ್ಡ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಅಮೋಘ ಕೀರ್ತನೆಯು ಕಾರ್ಯಕ್ರಮದ ಹೈಲೈಟ್.

ಭಾರತ ಪರಂಪರೆ ಪ್ರತಿಷ್ಠಾನದಿಂದ ನಿಯೋಜಿಸಲ್ಪಟ್ಟ ಮಂದಿರಕ್ಕೆ ಸ್ಥಳೀಯ ಭಾರತೀಯ ವಲಸಿಗರ ಸಹಕಾರ ಲಭಿಸಿದೆ.

ಭಾನುವಾರವನ್ನು ಸಂತೃಪ್ತವಾಗಿ ಕಳೆಯಲು ಮಂದಿರವು ಅತ್ಯುತ್ತಮ ಸ್ಥಳವಾಗಿದೆ. ಮುಂಜಾನೆಯ ಆರತಿಯಿಂದ ಆರಂಭ. ಅನಂತರ ಶ್ರೀ ನರಸಿಂಹ ಪ್ರಾರ್ಥನೆ, ತುಳಸಿ ಆರತಿ ನಡೆಯುತ್ತದೆ. ಹರೇ ಕೃಷ್ಣ ಮಂತ್ರ ಪ್ರತಿಧ್ವನಿಸುತ್ತದೆ.

ಇದೊಂದು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರ. ಈ ನೂತನ ಮಂದಿರದ ಚಟುವಟಿಕೆಗಳು, ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಹೆಚ್ಚಿನ ವಿವರಗಳನ್ನು ಪಡೆಯಲು ಮಂದಿರದ ವೆಬ್ಸೈಟ್ – https://www.rdmandir.org/ ಮತ್ತು ಸಾಮಾಜಿಕ ಜಾಲ ತಾಣಗಳನ್ನು ನೋಡಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi