(ಆಧಾರ : ಶ್ರೀ ಮದ್ಭಾಗವತಮ್, 3ನೇ ಸ್ಕಂಧ, ಅಧ್ಯಾಯ 13)
ವಸತಿ ದಶನ ಶಿಖರೇ ಧರಣೀ ತವ ಲಗ್ನಾ
ಶಶಿನಿ ಕಲಂಕ ಕಲೇವ ನಿಮಗ್ನಾ |
ಕೇಶವ ಧೃತ ಶೂಕರ ರೂಪ
ಜಯ ಜಗದೀಶ ಹರೇ ||
(ರಚನೆ : ಜಯದೇವ ಗೋಸ್ವಾಮಿ)

“ಓ ಕೇಶವ! ವರಾಹ ರೂಪಧಾರಿಯಾದ ಪರಮಪ್ರಭುವೆ! ಭೂಗ್ರಹವು ನಿನ್ನ ಕೋರೆದಾಡೆಗಳ ಮೇಲೆ ನೆಲೆಸಿತು. ಅದು ಕಲೆಗಳಿಂದ ಅಲಂಕೃತವಾದ ಚಂದ್ರನಂತೆ ಗೋಚರಿಸಿತು!”
ಪರಮಪ್ರಭುವಿನ ಅವತಾರ ಲಕ್ಷಣವೇ ಅಂತಹುದು. ತಮ್ಮ ಕಲ್ಪನೆಯಿಂದ ಭಾವಜೀವಿಗಳು ಸೃಷ್ಟಿಸುವಂಥವಲ್ಲ ಇವು. ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ಭಗವಂತ ವಿಶಿಷ್ಟ ರೂಪಗಳಿಂದ ಅವತಾರ ತಾಳುತ್ತಾನೆ. ಮಾನವನ ಅಲ್ಪಬುದ್ಧಿಯು ಯೋಚಿಸಲೂ ಸಾಧ್ಯವಾಗದಂಥ ಅನೇಕ ಕಾರ್ಯಭಾರವನ್ನು ಈ ಅವತಾರಗಳು ನಿರ್ವಹಿಸುತ್ತವೆ. ಭಗವಂತನು ಸೂಕರ ರೂಪ ತಳೆದು ಭೂದೇವಿಯನ್ನು ರಕ್ಷಿಸಿದ ‘ವರಾಹವತಾರ’ ಅಂಥವುಗಳಲ್ಲೊಂದು.
ಈ ವರಾಹಾವತಾರದ ಆವಿರ್ಭಾವ ಬಹಳ ಕುತೂಹಲಕಾರಿಯಾದುದು. ಜೀವ ಸೃಷ್ಟಿಗಾಗಿ ದೇವೋತ್ತಮನಿಂದ ಆದೇಶ ಪಡೆದ ಬ್ರಹ್ಮ ತನ್ನ ಮಗನಾದ ಮನುವಿಗೆ ಸೃಷ್ಟಿಕ್ರಿಯೆಯ ಕುರಿತು ನಿರ್ದೇಶನಗಳನ್ನು ನೀಡುತ್ತಿರುತ್ತಾನೆ. ಆಗ ಮನುವಿಗೆ ತನ್ನಿಂದ ಸೃಜಿಸಲ್ಪಡುವ ಜೀವಿಗಳು ನೆಲೆಯಾಗುವುದೆಲ್ಲಿ? ಎಂಬ ಸಂಶಯ ಮೂಡುತ್ತದೆ.
ಅಂತೆಯೇ ಆತನು ತನ್ನ ತಂದೆಯಾದ ಭಗವಂತನನ್ನು ಕುರಿತು, “ಎಲೈ ದೇವತೆಗಳ ಪ್ರಭುವೇ, ಮಹಾಜಲಧಿಯಲ್ಲಿ ಮುಳುಗಿರುವ ಮಹಿಯನ್ನು (ಭೂಮಿಯನ್ನು) ಮೇಲೆತ್ತಲು ಯತ್ನಿಸು. ಸಕಲ ಜೀವಿಗಳಿಗೂ ಅದು ವಾಸಯೋಗ್ಯ ಸ್ಥಳವಾಗಿದೆ. ಪರಮಪ್ರಭುವಿನ ಅನುಗ್ರಹದಿಂದ ಆ ಕಾರ್ಯವನ್ನು ಮಾಡಲು ನಿನ್ನಿಂದ ಮಾತ್ರ ಸಾಧ್ಯ” ಎನ್ನುತ್ತಾನೆ.
ಮನುವಿನ ಸಲಹೆಯಂತೆ ಬ್ರಹ್ಮನು ಭೂಮಿಯನ್ನು ಮಹಾಜಲಧಿಯಿಂದ ಮೇಲೆತ್ತುವ ಬಗೆಯನ್ನು ಯೋಚಿಸತೊಡಗುತ್ತಾನೆ. ಹೀಗೆ ತನ್ನ ಕಾರ್ಯ ಸಾಫಲ್ಯಕ್ಕಾಗಿ ಭಗವಂತನ ಅನುಗ್ರಹವನ್ನು ಕುರಿತು ಚಿಂತಿಸುತ್ತಿರುವಾಗ ಅವನ ಮೂಗಿನ ಹೊಳ್ಳೆಯಿಂದ ಹೆಬ್ಬೆರಳು ಗಾತ್ರದ ವರಾಹವೊಂದು ಹೊರಬರುತ್ತದೆ.

ಏನಾಶ್ಚರ್ಯ ! ಬ್ರಹ್ಮನು ನೋಡನೋಡುತ್ತಲೇ ಅಂಗುಷ್ಠಗಾತ್ರದ ಸೂಕರ ಬೆಳೆದು ಬೃಹದಾಕಾರ ತಾಳಿ ಗಗನದಲ್ಲಿ ಉಪಸ್ಥಿತವಾಗಿ ಬಿಡುತ್ತದೆ. ಆಗ ಬ್ರಹ್ಮನು ಯೋಚಿಸುತ್ತಾನೆ, “”ಇದೇನು ಆಶ್ಚರ್ಯ! ಬೆರಳ ತುದಿಯಷ್ಟಿದ್ದ ಸಾಧಾರಣ ಹಂದಿಯು ಪರ್ವತದೆತ್ತರ ಬೆಳೆದು ಅಸಾಧಾರಣವಾದ ದಿವ್ಯ ಶರೀರದಿಂದ ಕಂಗೊಳಿಸುತ್ತಿದೆಯಲ್ಲ!? ಬಹುಶಃ ಇದು ಪರಮಪುರುಷನಾದ ವಿಷ್ಣುವೇ ಇರಬೇಕು!”
ಬ್ರಹ್ಮನಿಗೆ ಸಂದೇಹ… ಈ ಅಸಾಧಾರಣ ಸೂಕರ ವಿಷ್ಣುವೇ ಇರಬಹುದೇ ಎಂದು! ಇಂಥದೊಂದು ಆಲೋಚನೆ ಆತನ ಮನಸ್ಸಿನಲ್ಲಿ ಸುಳಿಯುತ್ತಲೇ ವರಾಹವು ಅದಕ್ಕೆ ಪ್ರತ್ಯುತ್ತರವೆಂಬಂತೆ ಘನಘೋರ ಗರ್ಜನೆ ಮಾಡುತ್ತದೆ. ಅವನ ಗರ್ಜನೆಯು ಎಲ್ಲ ದಿಕ್ಕುಗಳಲ್ಲೂ ಪ್ರತಿಧ್ವನಿಗೊಳ್ಳುತ್ತದೆ.
ವರಾಹ ಮೂರ್ತಿಯ ಗರ್ಜನೆಯಿಂದ ಬ್ರಹ್ಮನಿಗೆ ಅದು ಅದು ಮಹಾವಿಷ್ಣುವಿನ ಲೀಲೆಯೆಂಬುದು ಅರ್ಥವಾಗುತ್ತದೆ. ಈ ಅಖಂಡ ದನಿಯನ್ನು ಕೇಳುತ್ತಲೇ ಬ್ರಾಹ್ಮಣರು ಸಹರ್ಷರಾಗಿ ವೇದ ಪಠಣವನ್ನಾರಂಭಿಸುತ್ತಾರೆ.
ವೇದಗಳು, ಪರಮಪ್ರಭುವಿನ ಗುಣಗಾನವಲ್ಲದೆ ಬೇರೇನೂ ಅಲ್ಲ. ಅವು ಭಗವಂತನ ಉಸಿರಾಟವೇ ಎಂದು ಹೇಳಲಾಗಿದೆ. ಭಗವಂತನ ಪ್ರಥಮ ಶಿಷ್ಯನಾದ ಬ್ರಹ್ಮನು ತನ್ನ ಉಚ್ಚ್ವಾಸದ ಮೂಲಕ ವೇದಗಳೆಂಬ ಉಸಿರನ್ನು ಪಡೆದಿದ್ದಾನೆ.
ಈಗ ವರಾಹವತಾರದ ಆವಿರ್ಭಾವವಾಗಿದ್ದು ಬ್ರಹ್ಮನ ಶ್ವಾಸದಿಂದಲೇ. ಅಲ್ಲಿಗೆ ವರಾಹವತಾರವು ವೇದಗಳ ಸಾಕಾರರೂಪ ಎಂದಂತಾಯಿತು! ಹೀಗೆಂದೇ ಋಷಿ ಮುನಿಗಳು ವೇದ ಪಠಣದಿಂದ ವರಾಹಮೂರ್ತಿಯನ್ನು ಮತ್ತಷ್ಟು ಸಂಪ್ರೀತಗೊಳಿಸಿದರು.
ಹೀಗೆ ಅತ್ಯಂತ ಬಲಿಷ್ಠನಾದ ಕೋರೆದಾಡೆಗಳಿಂದ ಶೋಭಿತನಾದ, ವರಾಹದ ಭವ್ಯ ಅವತಾರ ತಳೆದ ಪರಮಪ್ರಭುವು ಮದಗಜದಂತೆ ಕ್ರೀಡಿಸುತ್ತ ಜಲಧಿಯನ್ನು ಪ್ರವೇಶಿಸುತ್ತಾನೆ. ಆ ಬೃಹತ್ ಕಾಯವು ನೀರಿನಲ್ಲಿ ಮುಳುಗಿದಾಗ ಸಾಗರವು ಎರಡು ಸೀಳಾಗುವಂತೆ ತೋರುತ್ತದೆ. ಜಲಧಿಯ ತಳದಲ್ಲಿ ಎಲ್ಲ ಜೀವಿಗಳ ಆಶ್ರಯ ತಾಣವಾದ ಭೂಮಿಯು ಸೃಷ್ಟಿಯ ಪ್ರಾರಂಭಿಕ ಆವಸ್ಥೆಯಲ್ಲಿ ಮಲಗಿರುತ್ತದೆ.

ಭಗವಾನ್ ವರಾಹನು ಲೀಲಾಜಾಲವಾಗಿ ಅದನ್ನು ತನ್ನ ಕೋರೆದಾಡೆಗಳಿಂದೆತ್ತಿ ಮೇಲೆ ತರುತ್ತಾನೆ. ಈ ಕಾರ್ಯಕ್ಕೆ ಅಡ್ಡಿ ಪಡಿಸಿದ ಸೃಷ್ಟಿಯ ಪ್ರಥಮ ದೈತ್ಯ (ಆದಿ ದೈತ್ಯ) ಹಿರಣ್ಯಾಕ್ಷನನ್ನು ಕ್ಷಣ ಮಾತ್ರದಲ್ಲಿ ಸಂಹರಿಸುತ್ತಾನೆ. ಗಜವೊಂದನ್ನು ಕೊಂದ ಸಿಂಹದಂತೆ ಜಲಸಾಗರದಲ್ಲಿ ದೈತ್ಯನ ನಿರ್ನಾಮ ಮಾಡಿದ ಭಗವಂತನ ಕಪೋಲಗಳು ಮತ್ತು ನಾಲಗೆಯು ಅವನ ರಕ್ತದಿಂದ ಸಂಚಿತವಾಗುತ್ತವೆ.
ಹೀಗೆ ಭೂದೇವಿಯನ್ನು ಉದ್ಧರಿಸಿ ಮೇಲಕ್ಕೆತ್ತಿದ ವರಾಹ ಮೂರ್ತಿಯು ತಮಾಲವೃಕ್ಷದಂತೆ ನೀಲವರ್ಣವನ್ನು ತಳೆಯುತ್ತಾನೆ. ದೇವತಾ ಸಮೂಹವೆಲ್ಲ ಪರಮಪ್ರಭುವಿಗೆ ಜಯಘೋಷ ಹಾಡುತ್ತ ಮತ್ತೆ ಮತ್ತೆ ಆತನ ಗುಣಗಾನ ಮಾಡುತ್ತ ಶಿರಬಾಗಿ ವಂದಿಸುತ್ತದೆ. ಭಗವಂತನು ಭೂಮಿಯನ್ನು ನೀರಿನ ಮೇಲೆ ಸ್ಥಾಪಿಸುತ್ತಾನೆ.
ಇದು ಶ್ರೀ ಮದ್ಭಾಗವತದ ಮೂರನೆ ಸ್ಕಂಧದಲ್ಲಿ ಹೇಳಲಾಗಿರುವ ವರಾಹಾವತಾರದ ವರ್ಣನೆ.
ನಾಸ್ತಿಕರು ಮತ್ತು ಮೂಢಜನರು ವರಾಹಾವತಾರವನ್ನು ‘ಹಂದಿ’ಯ ರೂಪ ಎಂದು ಹೀಗೆಳೆಯುತ್ತಾರೆ. ಮೊದಲೇ ಹೇಳಿದಂತೆ ಅವರು ಅಜ್ಞರು, ಅವರು ಭಗವಂತ ಮತ್ತು ಭಕ್ತರ ಬಗೆಗೆ ಮತ್ಸರವುಳ್ಳವರಾಗಿರುತ್ತಾರೆ. ಆದರೆ ಭಕ್ತರ ಪಾಲಿಗೆ, ಜ್ಞಾನಿಗಳ ಪಾಲಿಗೆ ವರಾಹವತಾರ ದಿವ್ಯ ಮಂಗಳ ರೂಪವೇ ಸರಿ. ಇದಕ್ಕೆ ಪೃಥ್ವೀ ವಿಮೋಚನೆಯ ಅನಂತರ ಋಷಿಗಳು ವರಾಹ ಮೂರ್ತಿಯನ್ನು ಸ್ತುತಿಸುವ ಶ್ಲೋಕಗಳೇ ಸಾಕ್ಷಿ.
“ಹೇ ಭಗವನ್! ಸಕಲ ಯಜ್ಞಗಳ ಭೋಕ್ತೃವೇ! ಆಜೇಯನೇ! ವೇದಗಳೇ ಮೂರ್ತಿವೆತ್ತಂಥ ರೂಪದಲ್ಲಿ ನೀನು ಚಲಿಸುತ್ತಿರುವೆ. ನಿನ್ನ ರೋಮಕೂಪಗಳಲ್ಲಿ ಸಾಗರಗಳು ಮುಳುಗಿಹೋಗಿವೆ. ಭಗವನ್! ನಿನ್ನ ರೂಪವು ಯಜ್ಞಾಚರಣೆಗಳಿಂದ ಪೂಜನೀಯವಾದುದು. ಗಾಯತ್ರಿ ಮತ್ತಿತರೆಲ್ಲ ವೇದ ಮಂತ್ರಗಳೂ ನಿನ್ನ ದೇಹದ ಸ್ಪರ್ಶ ಹೊಂದಿವೆ.

ನಿನ್ನ ಶರೀರದ ರೋಮಗಳಲ್ಲಿ ಮಂಗಳಕರವಾದ ದರ್ಭೆಗಳಿವೆ. ನಿನ್ನ ಕಣ್ಣುಗಳಲ್ಲಿ ಆಜ್ಯವಿದೆ. ನಿನ್ನ ಕಾಲುಗಳಲ್ಲಿ ನಾಲ್ಕು ಬಗೆಯ ಕಾಮ್ಯ ಕರ್ಮಗಳಿವೆ! ಎಲೈ ಪ್ರಭುವೇ! ನಿನ್ನ ನಾಲಗೆಯು ಯಜ್ಞದ ಹರಿವಾಣವಾದರೆ, ನಿನ್ನ ನಾಸಿಕವು ಮತ್ತೊಂದು ಹರಿವಾಣ. ನಿನ್ನ ಉದರದಲ್ಲಿ ಯಜ್ಞಭೋಜನದ ಹರಿವಾಣವಿದೆಯಾದರೆ, ಕಿವಿಯ ರಂಧ್ರಗಳಲ್ಲಿ ಮತ್ತೊಂದು ಯಜ್ಞದ ಹರಿವಾಣವಿದೆ.
ನಿನ್ನ ಬಾಯಿಯಾದರೋ ಅದು ಬ್ರಹ್ಮಯಜ್ಞದ ಹರಿವಾಣವಾಗಿದೆ. ನಿನ್ನ ಗಂಟಲು ಸೋಮವೆಂಬ ಯಜ್ಞದ ಹರಿವಾಣವಾಗಿದೆ ಮತ್ತು ನೀನು ಚರ್ವಣ ಮಾಡುವ ಎಲ್ಲವೂ ಅಗ್ನಿಹೋತ್ರವೇ ಆಗಿದೆ!
ಎಲೈ ಭಗವಂತನೆ! ಎಲ್ಲದಕ್ಕಿಂತ ಹೆಚ್ಚಾಗಿ, ನಿನ್ನ ಅವತಾರಗಳು ಸಕಲ ದೀಕ್ಷೆಗಳ ಬಯಕೆಯಾಗಿವೆ ಮತ್ತು ನಿನ್ನ ಕಂಠವು ಮೂರು ಇಚ್ಛೆಗಳ ನೆಲೆ ಮತ್ತು ನಿನ್ನ ಕೋರೆದಾಡೆಗಳು ದೀಕ್ಷಾಫಲವಾಗಿವೆ. ನಿನ್ನ ನಾಲಗೆಯಾದರೋ, ಅದು ದೀಕ್ಷಾಪೂರ್ವ ಚಟುವಟಿಕೆಗಳ ಸ್ಥಾನ. ನಿನ್ನ ತಲೆಯು ಯಜ್ಞರಹಿತ ಅಗ್ನಿ ಮತ್ತು ಪೂಜನೀಯ ಹೋಮಾಗ್ನಿಯೂ ಆಗಿರುವುದು. ನಿನ್ನ ಪ್ರಾಣವಾಯುವು ಸಕಲ ಇಚ್ಛೆಗಳ ಸಮಷ್ಟಿಯಾಗಿರುವುದು.
ಪರಮ ಪ್ರಭುವೇ! ನಿನ್ನ ವೀರ್ಯವು ಸೋಮವೆಂಬ ಯಜ್ಞವಾಗಿರುವುದು. ನಿನ್ನ ಬೆಳವಣಿಗೆಯು ಪ್ರಾತಃ ವಿಧಿಗಳ ಆಚರಣೆಯು. ನಿನ್ನ ಚರ್ಮ ಮತ್ತು ಸ್ಪರ್ಶೇಂದ್ರಿಯಗಳು ಅಗ್ನಿಸ್ತೋಮ ಯಜ್ಞದ ಸಪ್ತಧಾತುಗಳು. ನಿನ್ನ ಶರೀರದ ಸಂಧಿಗಳು ಹನ್ನೆರಡು ಇತರ ಯಜ್ಞಗಳ ಸಂಕೇತಗಳು. ಆದ್ದರಿಂದ ಭಗವಂತನೇ, ನೀನು ಸೋಮ ಮತ್ತು ಅಸೋಮ ಎಂದು ಕರೆಯಲಾಗಿರುವ ಯಜ್ಞಗಳ ಗುರಿಯಾಗಿರುವೆ. ಸರ್ವತಂತ್ರ ಸ್ವತಂತ್ರವಾದ ನೀನು ನಿನ್ನ ಇಚ್ಛೆಯಿಂದಲೇ ಯಜ್ಞಗಳಿಂದ ಬಂಧಿತನಾಗಿದ್ದೀಯೆ.”
ಹೀಗೆ, ಭಗವದ್ಭಕ್ತರೂ ಜ್ಞಾನಿಗಳೂ ಆದ ಋಷಿಗಳು ವರಾಹಮೂರ್ತಿಯನ್ನು ಸ್ತುತಿಸುತ್ತಾರೆ. ಮತ್ತು ಮುಂದುವರಿದು ಪರ್ವತಸಹಿತವಾದ ಭೂಮಿಯನ್ನು ಎತ್ತಿ ಹಿಡಿದ ಭಗವಂತನ ಸುಂದರ ಮನೋಹರ ರೂಪವನ್ನು ಕೀರ್ತಿಸುತ್ತ, “ಎಲೈ ಭೂಮಿಯ ಉದ್ಧಾರಕನೇ! ನೀನು ಕೋರೆಗಳಿಂದ ಎತ್ತಿ ಹಿಡಿದ ಸಪರ್ವತ ಪೃಥ್ವಿಯು ನೀರಿನಿಂದ ಹೊರಬರುವ ಮದ್ದಾನೆಯು ಹಿಡಿದ ಪತ್ರ ಸಹಿತ ಕಮಲ ಪುಷ್ಪದಂತೆ ಸುಂದರವಾಗಿ ಉಪಸ್ಥಿತವಾಗಿದೆ” ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇದು, ನಿಜವಾದ ಭಕ್ತರು ಭಗವಂತನನ್ನು ಕಾಣುವ ಬಗೆ.
ಶ್ರೀ ಶ್ರೀಮದ್ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಶ್ರೀಮದ್ಭಾಗವತಕ್ಕೆ ಬರೆದ ತಮ್ಮ ಭಾವಾರ್ಥದಲ್ಲಿ “ಭಗವಂತನ ವರಾಹರೂಪವು ವೇದಗಳ ಮೂರ್ತಿ ಸ್ವರೂಪವಾಗಿದ್ದು, ದಿವ್ಯವಾದದ್ದು. ಪರಮ ಪ್ರಭುವಿನ ಅಂಗುಷ್ಠದಿಂದ ಉದಿಸಿದ ಗಂಗೆಗೂ ಶ್ರೀ ವರಾಹನ ಭುಜದ ರೋಮಗಳ ತುದಿಯಿಂದ ತೊಟ್ಟಿಕ್ಕುವ ನೀರಿಗೂ ಯಾವುದೇ ವ್ಯತ್ಯಾಸವಿಲ್ಲ. ಅವೆರಡೂ ಪರತರವಾದದ್ದು ಮತ್ತು ದಿವ್ಯವಾದದ್ದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. (3.13.44)






Leave a Reply