ಸಂಪೂರ್ಣ ಗಮನವಿಟ್ಟು ಮಾಡುವ ಭಗವಂತನ ನಾಮಗಳ ಜಪವು
ಪರಿಶುದ್ಧ ಜಪಕ್ಕೆ ಇರುವ ಅಡೆತಡೆಗಳನ್ನು ತೊಡೆದುಹಾಕುತ್ತದೆ.

ಒಂದು ದಿನ ನಾನು ಆ ದಿನದ ವ್ಯವಹಾರಗಳ ಬಗೆಗೆ ಮಾತನಾಡುತ್ತ ಮಿತ್ರರ ಗುಂಪಿನಲ್ಲಿ ಕುಳಿತಿದ್ದೆ. ಆಗ ಅಲ್ಲಿ ಕೆಲವರು ಹಾದುಹೋಗುತ್ತಿದ್ದರು. ನನ್ನ ಮಿತ್ರರಲ್ಲಿ ಒಬ್ಬರಿಗೆ ತನ್ನ ಹೆಸರನ್ನು ಕೇಳಿದಂತಾಯಿತು. ಅವರು ಹಾದುಹೋಗುತ್ತಿದ್ದವರನ್ನು ಕೇಳಿದರು, “ನೀವು ನನ್ನ ಹೆಸರು ಹೇಳಿದಿರಾ?” ಅವರೆಂದರು, “ಇಲ್ಲ, ನಾವು ಇನ್ನೇನೋ ಹೇಳಿದೆವು.” ನಿರಾಶೆಗೊಂಡ ಅವರು ಪುನಃ ನಮ್ಮ ಸಂವಾದದತ್ತ ತಿರುಗಿದರು. ನಾವು ಜನ ತುಂಬಿದ ಕೊಠಡಿಯಲ್ಲಿದ್ದಾಗ ಇತರರ ಮಾತು ಗಿಜಿಗಿಜಿ ಶಬ್ದ ಉಂಟು ಮಾಡುತ್ತದೆ. ಆದರೆ ನಮ್ಮ ಹೆಸರನ್ನು ಯಾರಾದರೂ ಹೇಳಿದರೆ ಅದು ಹೇಗೋ ನಾವು ಅದನ್ನು ಗುರುತಿಸುತ್ತೇವೆ ಮತ್ತು ಜಾಗರೂಕರಾಗುತ್ತೇವೆ. ನಾವು ಕೃಷ್ಣನನ್ನು ಕರೆಯುತ್ತಿರುವಂತೆ ಕಂಡಾಗ ಕೃಷ್ಣನೂ ಆಸಕ್ತಿ ತೋರುತ್ತಾನೆ.
“ಓ, ನಿಮಗೆ ನಾನು ಬೇಕೆ?”, ಎಂದು ಅವನು ಕೇಳುತ್ತಾನೆ.
ಆದರೆ ನಿಜವಾಗಿಯೂ ನಾವು ಬೇರೆ ಏನನ್ನೋ ಹೇಳಿದ್ದರೆ ಅಥವಾ ನಾವು ಅವನ ಹೆಸರನ್ನು ನಿರ್ಲಕ್ಷ್ಯದಿಂದ ಹೇಳಿದರೆ, ನಿಜವಾಗಿಯೂ ನಮಗೆ ಬೇಕಾಗುವವರೆಗೂ ಅವನು ನಮಗಾಗಿ ಕಾಯುತ್ತಾನೆ. ಆದುದರಿಂದ ಹರೇ ಕೃಷ್ಣ ಮಂತ್ರವನ್ನು ಗುಣಾತ್ಮಕವಾಗಿ ಜಪಿಸಬೇಕೆಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ. ಇಂತಿಷ್ಟು ಬಾರಿ ಜಪಿಸುವ ಬಗೆಗೆ ಪ್ರಮಾಣ ಮಾಡುವುದು ಖಂಡಿತ ಒಳ್ಳೆಯದು, ಅದು ಆಧ್ಯಾತ್ಮಿಕ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಆದರೆ ಗುಣಮಟ್ಟವೂ ಇರಬೇಕು. ಆರಂಭಿಕರಿಗೆ ತಮ್ಮ ನಿಯಮಿತಾಂಶದಷ್ಟು ಮಾಡಿದರೇ ಸಾಕೆಂದು ಕಾಣಬಹುದು. ಆದರೂ ನಾವು ಒಳ್ಳೆಯ ಜಪದಲ್ಲಿ ಪ್ರಗತಿ ಸಾಧಿಸಬೇಕು.

ನಾವು ಪೂರ್ಣವಾಗಿ ಗಮನವಿಟ್ಟು, ಶರಣಾಗತಿಯ ಮನೋಭಾವದಲ್ಲಿ ಜಪಿಸಿದರೆ ಕೃಷ್ಣನು ಸಹಜವಾಗಿ ಪ್ರತಿಯಾಗಿ ಪ್ರೀತಿ ತೋರುತ್ತಾನೆ. ಆಗ ಜಪಕ್ಕೆ, ಒಟ್ಟಾರೆ ಆಧ್ಯಾತ್ಮಿಕ ಜೀವನಕ್ಕೆ ಮತ್ತು ಭಗವಂತನನ್ನು ಕುರಿತ ಪರಿಪೂರ್ಣ ಪ್ರೀತಿಯ ನಮ್ಮ ಗುರಿಗೆ ಇರುವ ಎಲ್ಲ ಅಡೆತಡೆಗಳನ್ನು ನಾವು ತ್ವರಿತವಾಗಿ ಎದುರಿಸಿ ಜಯಗಳಿಸಬಹುದು. ಆದರೆ ಗಮನವಿಲ್ಲದ ಜಪವಾದರೆ, ಅಡ್ಡಿಗಳು ವರ್ಧಿಸದಿದ್ದರೂ, ಹಾಗೇ ಉಳಿಯುತ್ತವೆ.
ಲಕ್ಷ್ಯವಿಟ್ಟು ಮಾಡುವ ಜಪವು ಏಕೆ ಪವಿತ್ರ ನಾಮವನ್ನು ಕುರಿತ ಇತರ ಎಲ್ಲ ಅಪರಾಧಗಳನ್ನು ಮುಕ್ತಗೊಳಿಸುವ ಸಾಧನವಾಗುತ್ತದೆ? ಗಮನವಿಟ್ಟು ಜಪಿಸಿದಾಗ, ನಾವು ಕೃಷ್ಣನೊಂದಿಗೆ ಸಂಪರ್ಕದಲ್ಲಿರುತ್ತೇವೆ. ನಾವು ಇತರ ಭಕ್ತರೊಂದಿಗೆ ಹೇಗೆ ವ್ಯವಹರಿಸುತ್ತಿದ್ದೇವೆ ಎನ್ನುವುದನ್ನು ಮೊದಲುಮಾಡಿ ನಾವು ಎಸಗುತ್ತಿರುವ ಅಪರಾಧಗಳನ್ನು ಅವನು ನಮಗೆ ತೋರಿಸಿಕೊಡುತ್ತಾನೆ.
ನಿರ್ಲಕ್ಷ್ಯದ ಮೂಲವು ಗಮನಭಂಗ ಅಥವಾ ನಾವು ಜಪಿಸುತ್ತಿರುವ ನಾಮಕ್ಕಿಂತ ಬೇರೆಯದರ ಮೇಲಿರುವ ಆಸಕ್ತಿ. ಇದು ಸಂಪತ್ತು, ಲೌಕಿಕ ಯಶಸ್ಸು, ಭಿನ್ನ ಲಿಂಗ, ಸಮಾಜದಲ್ಲಿ ಸ್ಥಾನಮಾನ ಅಥವಾ ಇತರ ಅನೇಕ ವಿಷಯಗಳ ಮೇಲಿನ ಆಸಕ್ತಿಯಾಗಿರಬಹುದು. ಅನ್ಯಮನಸ್ಕತೆಯಿಂದ ಜಪಿಸುವುದು ಎಂದರೆ ಯಾರ ಬಳಿಯೋ ಪ್ರಶ್ನೆ ಕೇಳುವುದು ಮತ್ತು ಅವರು ಉತ್ತರಿಸುವಾಗ ಕಿಟಕಿಯಾಚೆ ನೋಡುವುದರ ಹಾಗೆ.
ಮೂಲ ಗಮನಭಂಗವಲ್ಲದೆ, ಒಬ್ಬರ ನಿಷ್ಕ್ರಿಯ ಮನಸ್ಸು ಪವಿತ್ರ ನಾಮದ ಮೇಲೆ ಕೇಂದ್ರೀಕೃತವಾಗುವುದನ್ನು ನಿಲ್ಲಿಸಿ ಸೋಮಾರಿಯಾದಾಗಲೂ ಜಪವು ನಿರ್ಲಕ್ಷ್ಯ ಎನ್ನಿಸಿಕೊಳ್ಳುತ್ತದೆ. ಅನ್ಯಮನಸ್ಕರಾಗಿರುವುದೂ ನಿರ್ಲಕ್ಷ್ಯ ತೋರಿದಂತೆ.
ಲಕ್ಷ್ಯದ ಜಪಕ್ಕೆ ನೆರವು
ಜಾಗರೂಕತೆಯಿಂದ ಮತ್ತು ಗಮನವಿಟ್ಟು ಜಪಿಸಲು ನಾವು ಪ್ರತಿ ದಿನ ಹರೇ ಕೃಷ್ಣ ಮಂತ್ರವನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಜಪಿಸುವುದನ್ನು ಪೂರ್ಣಗೊಳಿಸಲು ಮೊದಲು ಗಮನಕೊಡಬೇಕು. ಇಸ್ಕಾನಿನಲ್ಲಿ ದೀಕ್ಷೆ ಪಡೆದ ಶಿಷ್ಯನು ದಿನಕ್ಕೆ ಕೊನೆಪಕ್ಷ 1,728 ಮಂತ್ರಗಳನ್ನು ಜಪಿಸಬೇಕು. (108 ಜಪ ಮಣಿಗಳಿರುವ ಹಾರದ ಸುತ್ತ 16 ಬಾರಿ). ಆದರೆ ಆರಂಭಿಕರು ಎಷ್ಟೇ ಸಂಖ್ಯೆಯಿಂದಲಾದರೂ ಆರಂಭಿಸಬಹುದು. ಆದರೆ ಸ್ಥಿರತೆ ಇರಬೇಕು. ಸಮಾಜದ ಯಾವುದೇ ವರ್ಗದಲ್ಲಿ ಸ್ಥಿರತೆ, ಕ್ರಮಬದ್ಧ ಸೇವೆಯನ್ನು ಮೆಚ್ಚಲಾಗುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ಇದು ಆ ಪಥಕ್ಕೆ ತೋರುವ ನಿಷ್ಠೆ ಮತ್ತು ಭಕ್ತಿಯ ಚಿಹ್ನೆ.

ಪೂರ್ಣವಾಗಿ ಏಕಾಗ್ರತೆಯಿಂದ ಜಪಿಸಲು, ಪ್ರಶಾಂತ ಸ್ಥಳದಲ್ಲಿ ಜಪಿಸುವುದು ಒಳ್ಳೆಯದು. ಉತ್ತಮ ಸ್ಥಳಗಳೆಂದರೆ ಲೌಕಿಕ ಪ್ರಭಾವವಿಲ್ಲದ ಸ್ಥಳಗಳು. ಕೃಷ್ಣನ ಲೀಲೆಗಳ ಪವಿತ್ರ ಸ್ಥಳ, ಮಂದಿರದಲ್ಲಿ ಜಪಿಸಬಹುದು. ಅಥವಾ ಯಾವುದೇ ನಿಶ್ಶಬ್ದ ಸ್ಥಳದಲ್ಲಿ ಜಪಿಸಬಹುದು. ಕೃಷ್ಣನ ವಿಗ್ರಹ ಮತ್ತು ಕೃಷ್ಣನ ಆನಂದವನ್ನು ಬದುಕಿನ ಕೇಂದ್ರವಾಗಿ ಮಾಡಿಕೊಂಡರೆ ಮನೆಯೇ ದೇವಾಲಯ. ಜನರು ಪೂಜಿಸಲು ಮತ್ತು ಶಿಕ್ಷಣ ಪಡೆಯಲು ಹರೇ ಕೃಷ್ಣ ಆಂದೋಲನವು ಅನೇಕ ಮಂದಿರಗಳನ್ನು ಸ್ಥಾಪಿಸಿದೆ. ಭಾರತದಲ್ಲಿ ಶ್ರೀ ಕೃಷ್ಣನಿಗೆ ಅರ್ಪಿಸಿರುವ ಅನೇಕ ಹಳೆಯ ದೇವಸ್ಥಾನಗಳಿವೆ. ಕೃಷ್ಣನು ಅವತರಿಸಿದ, ಲೀಲೆಗಳನ್ನು ತೋರಿದ ಸ್ಥಳಗಳಲ್ಲಿ ಅನೇಕ ಮಂದಿರಗಳಿವೆ.
ಆಧ್ಯಾತ್ಮಿಕ ಗ್ರಹಿಕೆಯಲ್ಲಿ ಪ್ರಗತಿ ಹೊಂದಿದವರೊಂದಿಗೆ ಜಪಿಸುವುದೂ ನೆರವಾಗುತ್ತದೆ. ನಿರುಪಯುಕ್ತ ದಿಕ್ಕುಗಳಲ್ಲಿ ಕಾಲ ಹರಣ ಮಾಡದೆ ಜಪದಲ್ಲಿ ತಮ್ಮ ಪ್ರಜ್ಞೆಯನ್ನು ತಲ್ಲೀನಗೊಳಿಸುವವರು ನಮ್ಮ ಮಿತ್ರರಾಗಿದ್ದರೆ, ಸೋಮಾರಿತನವು ಹಾರಿಹೋಗುತ್ತದೆ. ಸಹಜವಾಗಿ, ಅವರ ಸಂಗದಲ್ಲಿ ನಾವೂ ಕೂಡ ತುರ್ತುಭಾವ ಮತ್ತು ದೃಢತೆಯನ್ನು ಮೈಗೂಡಿಸಿಕೊಳ್ಳಬಹುದು.
ನಿಶ್ಶಬ್ದವಾದ ಸಮಯದಲ್ಲಿ (ಮುಂಜಾನೆ) ಜಪಿಸುವುದು ಒಳ್ಳೆಯದು. ಕೃಷ್ಣನ ಕೃಪೆಗಾಗಿ ಬೇಡುವ ಆಂತರಿಕ ಮನೋಭಾವವೂ ಅಗತ್ಯ. ಪವಿತ್ರ ನಾಮದ ಬಗೆಗೆ ನಮಗಿರುವ ಅವಿವೇಕತನದ ಅಲಕ್ಷ್ಯವನ್ನು ಈ ಪರಿಹಾರಗಳು ಮಾಯಮಾಡುತ್ತವೆ.
ಲಕ್ಷಾಂತರ ಬಾಯಿಗಳಿಗೆ ಆಶಯ
ನಿರ್ಲಕ್ಷ್ಯದ ಒಳಗೆ ಅಡಗಿರುವ ತತ್ತ್ವದೊಂದಿಗೆ ವ್ಯವಹರಿಸಲು, ಅಂದರೆ ಕೃಷ್ಣ ಮತ್ತು ಅವನ ನಾಮಕ್ಕಿಂತ ಬೇರೆಯದರ ಬಗೆಗೆ ಆಸಕ್ತಿ ಹೊಂದಿರುವುದನ್ನು ದೂರಮಾಡಲು, ರಾತ್ರಿ ಹಗಲು ಜಪವಲ್ಲದೆ ಬೇರೇನೂ ಮಾಡದ ದಿನಗಳನ್ನು ಗುರುತಿಸುವುದು ವಿವೇಕತನ. ಏಕಾದಶೀ ಅಥವಾ ಕೃಷ್ಣನ ಜನ್ಮಾಷ್ಟಮಿಯಂದು ನಾವು ತಿನ್ನುವುದು, ಮಲಗುವುದು, ನಿತ್ಯ ವ್ಯವಹಾರಗಳನ್ನು ಬಿಟ್ಟುಬಿಟ್ಟು ಯಾವುದೇ ತಡೆ ಇಲ್ಲದೆ ಗಂಟೆಗಟ್ಟಲೆ ಜಪ ಮಾಡಿದರೆ, ಕ್ರಮೇಣ ನಮ್ಮ ಮನಸ್ಸು ಕೃಷ್ಣನಲ್ಲಿ ಆನಂದಿಸುತ್ತದೆ. ಅಂತಹ ಸಂಪೂರ್ಣ ತಲ್ಲೀನತೆಯು ನಮ್ಮ ಸಾಮಾನ್ಯ ದಿನದ ಜಪದ ಏಕಾಗ್ರತೆಗೆ ಸಹಾಯ ಮಾಡುತ್ತದೆ.
ಗಮನಭಂಗ, ಆಲಸ್ಯ ಮತ್ತು ನಿರ್ಲಕ್ಷ್ಯವನ್ನು ಜಯಿಸಿದ ಮೇಲೆ, ಪ್ರಭುಪಾದರು ಹೇಳುವಂತೆ, ಮಗುವು ತಾಯಿಯನ್ನು ತೀವ್ರ ಭಾವೋತ್ಕರ್ಷ, ಆಸೆ ಮತ್ತು ಅಸಹಾಯಕತೆಯಿಂದ ಕರೆಯುವಂತೆ ನಾವು ಜಪಿಸಬಹುದು.

ಯಾವಾಗ ನಮ್ಮ ಜಪವು ಮನಸ್ಸು ಮತ್ತು ಹೃದಯದ ಪೂರ್ಣ ಏಕಾಗ್ರತೆಯಿಂದ ಕೂಡಿರುವುದೋ ಆಗ ನಮಗೆ ಬೇಸರವೇ ಆಗುವುದಿಲ್ಲ ಅಥವಾ ಪರಿಪೂರ್ಣತೆಯ ಪಥದಲ್ಲಿ ಬರುವ ಅಡೆತಡೆಗಳ ಬಗೆಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯವೂ ಇರುವುದಿಲ್ಲ. ಅಡ್ಡಿಗಳು ನಮ್ಮ ಹಾದಿ ಮತ್ತು ಯಾತ್ರೆಯನ್ನು ಸುಗಮಗೊಳಿಸಿ ರಸ್ತೆಯಲ್ಲಿಯೇ ಕರಗಿಹೋಗುತ್ತವೆ. ಆಗ ನಾವೂ ಶ್ರೇಷ್ಠ ಬೋಧಕ ರೂಪ ಗೋಸ್ವಾಮಿ ಅವರಂತೆ, “ಕೃಷ್ಣ ಎಂಬ ಎರಡು ಅಕ್ಷರಗಳು ಎಷ್ಟು ಮಧುವನ್ನು, ಅಮೃತವನ್ನು ಹರಿಸಿದೆಯೋ ನಾ ಕಾಣೆ. ಕೃಷ್ಣನ ಪವಿತ್ರ ನಾಮವನ್ನು ಜಪಿಸಿದಾಗ, ಅದು ಬಾಯಿಯೊಳಗೇ ನರ್ತಿಸುತ್ತಿರುವಂತೆ ಕಾಣುತ್ತದೆ. ಆಗ ನಾವು ಅನೇಕ ಬಾಯಿಗಳಿಗಾಗಿ ಅಪೇಕ್ಷಿಸುತ್ತೇವೆ. ಆ ಪವಿತ್ರ ನಾಮವು ಕಿವಿಗಳ ರಂಧ್ರಗಳನ್ನು ಹೊಕ್ಕಾಗ, ನಾವು ಲಕ್ಷಾಂತರ ಕಿವಿಗಳಿಗಾಗಿ ಅಪೇಕ್ಷಿಸುತ್ತೇವೆ. ಹೃದಯದ ಆಸ್ಥಾನದಲ್ಲಿ ಪವಿತ್ರ ನಾಮವು ನರ್ತಿಸಿದಾಗ, ಅದು ಮನಸ್ಸಿನ ಚಟುವಟಿಕೆಗಳನ್ನು ಜಯಿಸುತ್ತದೆ ಮತ್ತು ಎಲ್ಲ ಇಂದ್ರಿಯಗಳು ಜಡಗೊಳ್ಳುತ್ತವೆ” ಎಂದು ಹೇಳಬಹುದು.






Leave a Reply