ಚಾತುರ್ಮಾಸ್ಯ ವ್ರತಾಚರಣೆಯ ಕುರಿತು ಶ್ರೀಲ ಪ್ರಭುಪಾದರ ನಿರ್ದೇಶನಗಳು ಹೀಗಿವೆ:

ಚಾತುರ್ಮಾಸ್ಯ ಅವಧಿ ಪ್ರಾರಂಭವಾಗುವುದು ಆಷಾಢ ಮಾಸದ (ಜೂನ್-ಜುಲೈ) ಸಾಯಣ ಏಕಾದಶಿಯ ದಿನದಿಂದ. ಮತ್ತು ಮುಗಿಯುವುದು, ಕಾರ್ತಿಕ ಮಾಸ (ಅಕ್ಟೋಬರ್ – ನವೆಂಬರ್) ದ ಉತ್ಥಾನ ಏಕಾದಶಿಯ ದಿನದಂದು. ಈ ನಡುವಿನ ನಾಲ್ಕು ತಿಂಗಳ ಅವಧಿಯೇ “ಚಾತುರ್ಮಾಸ್ಯ.”
ಕೆಲವು ವೈಷ್ಣವರು ಇದನ್ನು ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರೆಗೆ ಆಚರಿಸುತ್ತಾರೆ. ಇದು ಕೂಡ ನಾಲ್ಕು ತಿಂಗಳ ಅವಧಿಯದ್ದಾಗಿರುತ್ತದೆ. ಇದನ್ನೂ “ಚಾತುರ್ಮಾಸ್ಯʼವೆಂದೇ ಕರೆಯುತ್ತಾರೆ. ಇದು, ಚಾಂದ್ರಮಾನ ಪಂಚಾಂಗದ ಪ್ರಕಾರ ಆಚರಿಸಲ್ಪಡುವಂಥದ್ದು.
ಇದಲ್ಲದೆ ಮತ್ತೆ ಕೆಲವರು ಸೌರಮಾನ ಪಂಚಾಂಗದ ರೀತ್ಯಾ ಚಾತುರ್ಮಾಸ್ಯವನ್ನು ಶ್ರಾವಣದಿಂದ ಕಾರ್ತಿಕದವರೆಗೆ ಆಚರಿಸುತ್ತಾರೆ.ಸೌರಮಾನ ಅಥವಾ ಚಾಂದ್ರಮಾನ – ಅದೇನೆ ಇದ್ದರೂ ಈ ಆಚರಣೆಯನ್ನು ನಡೆಸುವುದು ಮಳೆಗಾಲದಲ್ಲಿಯೇ.
ಚಾತುರ್ಮಾಸ್ಯವನ್ನು ಪ್ರತಿಯೊಬ್ಬರೂ ಆಚರಿಸಲೇಬೇಕು. ಇದನು ಗೃಹಸ್ಥ, ಇವನು ಸಂನ್ಯಾಸಿ ಎನ್ನುವ ರಿಯಾಯಿತಿಗಳು ಇದಕ್ಕಿಲ್ಲ. ಇದು ಎಲ್ಲ ಆಶ್ರಮಗಳಿಗೂ (ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ) ಅನ್ವಯಿಸುವಂಥದ್ದು. ಈ ಚಾತುರ್ಮಾಸ್ಯ ವ್ರತಾಚರಣೆಯ ಹಿಂದಿನ ಸ್ಪಷ್ಟ ಉದ್ದೇಶ – “ಇಂದ್ರಿಯ ಭೋಗಗಳ ಲಾಲಸೆಯನ್ನು ಸಾಧ್ಯವಾದಷ್ಟು ಕಡಮೆ ಮಾಡಿಕೊಳ್ಳುವುದೇ ಆಗಿದೆ.” ಇದು ಅಷ್ಟೊಂದು ಕಠಿಣವೇನಲ್ಲ.
ಶ್ರಾವಣ ಮಾಸದಲ್ಲಿ ಸೊಪ್ಪು – ಕಾಯಿಪಲ್ಲೆ ವರ್ಜಿಸಬೇಕು.
ಭಾದ್ರಪದದಲ್ಲಿ ಮೊಸರನ್ನು ವರ್ಜಿಸಬೇಕು.
ಆಶ್ವೀಜ ಮಾಸದಲ್ಲಿ ಹಾಲನ್ನು ವರ್ಜಿಸಬೇಕು.

ಕಾರ್ತಿಕ ಮಾಸದಲ್ಲಿ ಮೀನು ಇನ್ನಿತರ ಮಾಂಸಾಹಾರವನ್ನು ವರ್ಜಿಸಬೇಕು.
ಹಾಗೆಯೇ, ಉದ್ದಿನಬೇಳೆ ಮತ್ತು ಕಡಲೆಬೇಳೆಗಳು ಕೂಡ ಮಾಂಸಾಹಾರದಂತೆ ಪರಿಗಣಿತವಾಗಿದ್ದು, ಅವನ್ನು ಕೂಡ ಕಾರ್ತಿಕ ಮಾಸದಲ್ಲಿ ವರ್ಜಿಸಬೇಕು. ಈ ಎರಡು ಬೇಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ತ್ವವನ್ನು ಹೊಂದಿದ್ದು, ಅತಿ ಹೆಚ್ಚಿನ ಜೀವಸತ್ತ್ವದ ಆಹಾರವನ್ನು “ಮಾಂಸಾಹಾರ” ಎಂದು ಪರಿಗಣಿಸಲಾಗುತ್ತದೆ.
ಒಟ್ಟಾರೆಯಾಗಿ ಚಾತುರ್ಮಾಸ್ಯ ಈ ನ್ಕಾಲು ತಿಂಗಳಲ್ಲೂ ಇಂದ್ರಿಯ ತೃಪ್ತಿಗಾಗಿ ಸೇವಿಸುವ ಈ ಎಲ್ಲ ಆಹಾರವನ್ನು ವರ್ಜಿಸಬೇಕು. (ಚೈ.ಚ.ಮ.ಲೀ.4.169 ಭಾವಾನುವಾದ)
ಚಾತುರ್ಮಾಸ್ಯ ವ್ರತಾಚರಣೆಯ ನಿರ್ದೇಶನಗಳು:
ತಿಂಗಳು: ಶ್ರಾವಣ, ಪಥ್ಯ: ಸೊಪ್ಪು, ವರ್ಜಿಸಬೇಕಾದ ಆಹಾರಗಳು: ಕೆಂಪು – ಹಸಿರು ಸೊಪ್ಪುಗಳು (ಹಸಿರೆಲೆಯ ಎಲ್ಲ ತರಕಾರಿಗಳು), ರಿಯಾಯಿತಿಗಳು: ಕೊತ್ತಂಬರಿ ಸೊಪ್ಪು, ಮೆಂತೆಸೊಪ್ಪು, ಪುದೀನಾ, ಕರಿಬೇವು – ಇವು ಮೂಲಿಕೆ ಗುಂಪಿಗೆ ಸೇರುತ್ತವೆ.
ತಿಂಗಳು: ಭಾದ್ರಪದ, ಪಥ್ಯ: ಮೊಸರು, ವರ್ಜಿಸಬೇಕಾದ ಆಹಾರಗಳು: ಮೊಸರು ಪ್ರಧಾನವಾಗಿರುವ ಎಲ್ಲ ಆಹಾರಗಳು: ಕಡಿ, ಪಚಡಿ, ಮಜ್ಜಿಗೆ, ಲಸ್ಸಿ, ರಿಯಾಯಿತಿಗಳು: ಸಬ್ಜಿ ರುಚಿಗಾಗಿ ಸೇರಿಸಿದ 2 ರಿಂದ 3 ಚಮಚ ಮೊಸರಿಗೆ ದೋಷವಿಲ್ಲ. ಮೊಸರು ಸೇರಿಸಲ್ಪಟ್ಟಿದ್ದರೂ ಚರಣಾಮೃತವನ್ನು ಸ್ವೀಕರಿಸಲೇಬೇಕು.
ತಿಂಗಳು: ಆಶ್ವೀಜ, ಪಥ್ಯ: ಹಾಲು, ವರ್ಜಿಸಬೇಕಾದ ಆಹಾರಗಳು: ಹಾಲು ಪ್ರಧಾನವಾಗಿರುವ ಎಲ್ಲ ಆಹಾರಗಳು. ಹಾಲಿನಿಂದ ಮಾಡಿದ ಸಿಹಿ ಅನ್ನ, ಮಿಲ್ಕ್‌ಶೇಕ್, ಐಸ್‌ಕ್ರೀಮ್ ಇತ್ಯಾದಿ. ರಿಯಾಯಿಗಳು: ಹಾಲಿನ ಸಿಹಿತಿಂಡಿಗಳು (ಉದಾ: ಪೇಡ, ರಸಗುಲ್ಲ, ಸಂದೇಶ) ಹಾಲು ಉತ್ಪನ್ನಗಳು (ಪನ್ನೀರ್, ಚೀಸ್) ಇವು ಹಾಲಿನ ರೂಪಾಂತರಿತ ಉತ್ಪನ್ನಗಳು. ಹಾಲು ಸೇರಿಸಿದ ಚರಣಾಮೃತವನ್ನು ಸ್ವೀಕರಿಸಲೇಬೇಕು.
ತಿಂಗಳು: ಕಾರ್ತಿಕ, ಪಥ್ಯ: ಉದ್ದಿನಬೇಳೆ, ವರ್ಜಿಸಬೇಕಾದ ಆಹಾರಗಳು: ಇಡ್ಲಿ, ದೋಸೆ ಅಥವಾ ಉದ್ದಿನ ಬೇಳೆ/ಕಾಳಿನಿಂದ ಮಾಡಿದ ಆಹಾರಗಳನ್ನು ವರ್ಜಿಸಬೇಕು. ಒಗ್ಗರಣೆಯಲ್ಲಿ ಕೂಡ ಉದ್ದಿನಬೇಳೆಯನ್ನು ಬಳಸಬಾರದು.






Leave a Reply