ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ತಮ್ಮ ಕೆಲ ಶಿಷ್ಯರೊಡನೆ
1974ರ ಮಾರ್ಚ್ ತಿಂಗಳು ಭಾರತದ ವೃಂದಾವನದಲ್ಲಿ ನಡೆಸಿದ ಸಂವಾದ.
ಶ್ರೀಲ ಪ್ರಭುಪಾದ: ಈಗಿನ ಕಾಲದಲ್ಲಿ ಬಡ ನಾಗರಿಕರ ಶೋಷಣೆಯೇ ರಾಜಕಾರಣಿಗಳ ವೃತ್ತಿಯಾಗಿದೆ. ನಾಗರಿಕರಿಗೆ ಇರಸುಮುರುಸು. ಕಿರುಕುಳಕ್ಕೆ ಒಳಗಾಗುತ್ತಾರೆ. ಒಂದೆಡೆ ಅನಾವೃಷ್ಟಿ ಮತ್ತೊಂದೆಡೆ ದುರ್ಭಿಕ್ಷ, ಮಗದೊಂದೆಡೆ ಸರ್ಕಾರಿ ತೆರಿಗೆಯಲ್ಲಿ ಹೆಚ್ಚಳ. ಅತಿಯಾದ ಕಿರುಕುಳಕ್ಕೆ ಒಳಗಾಗಿ, ಮನೆಬಿಟ್ಟು ಕಾಡಿಗೆ ಹೋಗುವ ಪರಿಸ್ಥಿತಿ.
ಶಿಷ್ಯ: ಈಗೆಲ್ಲ ಸರ್ಕಾರ ಧನಸಂಗ್ರಹಣೆ ಮಾಡುತ್ತದೆಯಷ್ಟೆ. ಪ್ರತಿಯಾಗಿ ಏನೊಂದೂ ಕಾರ್ಯಕ್ರಮವಿಲ್ಲ.
ಶ್ರೀಲ ಪ್ರಭುಪಾದ: ಪ್ರತಿಯೊಬ್ಬ ಮನುಷ್ಯನಿಗೂ ಅವನ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗವಕಾಶ ಕಲ್ಪಿಸಬೇಕಾದುದು ಸರ್ಕಾರದ ಕರ್ತವ್ಯ. ನಿರುದ್ಯೋಗ ಇರಬಾರದು, ಸಮಾಜಕ್ಕೆ ಅದು ಅಪಾಯಕಾರಿ. ಸರ್ಕಾರ ಜನರನ್ನು ಗ್ರಾಮೀಣ ಪ್ರದೇಶದಿಂದ ಭಗಾಯಿಸಿ ನಗರಕ್ಕೆ ಅಟ್ಟಿದೆ. `ಜಮೀನಿನಲ್ಲಿ ಇಷ್ಟೊಂದು ಜನರ ಪ್ರಯೋಜನವಾದರೂ ಏನು? ಬದಲಾಗಿ ಪ್ರಾಣಿಗಳನ್ನು ಕೊಂದು ತಿನ್ನಬಹುದಲ್ಲವೆ?’ ಎಂಬುದು ಅವರ ವಾದ. ಅವರು ಕರ್ಮ ನಿಯಮವನ್ನು ಲೆಕ್ಕಿಸುವುದಿಲ್ಲ. ಪಾಪಕೃತ್ಯಗಳ ಪರಿಣಾಮ ಅರಿಯರು. “ನಾವು ಗೋಮಾಂಸ ಭಕ್ಷಣ ಮಾಡುವ ಹಾಗಿದ್ದರೆ, ಭೂಮಿಯನ್ನು ಉಳುವುದಾದರೂ ಏಕೆ?” ಇದು ವಿಶ್ವಾದ್ಯಂತ ಕಂಡುಬರುತ್ತಿರುವ ಸಂಗತಿ.
ಶಿಷ್ಯ: ಹೌದು, ರೈತರ ಮಕ್ಕಳು ಬೇಸಾಯ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ.
ಶ್ರೀಲ ಪ್ರಭುಪಾದ: ಈ “ತೆರೆದೆದೆ, ತೆರೆದ ನಡು”ವಿನ ಅವಿವೇಕ ಬಲ್ಲಿರಾ? ನಮ್ಮ ಮುಖಂಡರಿಗೆ ಅದು ಬೇಕು. ಕಾಲೇಜು ಹುಡುಗಿಯರನ್ನು ಕರೆದೊಯ್ದು, ಅವರ ಅತಿಥಿಗಳಿಗೆ ಲೈಂಗಿಕ ತೃಪ್ತಿಯೊದಗಿಸಬೇಕೆಂಬುದು ಅವರ ಬಯಕೆ. ವಿಶ್ವಾದ್ಯಂತ ಜನಸಮುದಾಯ ಕಲುಷಿತಗೊಂಡಿದೆ. ಹೀಗಿರುವಾಗ, ಜನತೆ, ಉತ್ತಮ ಸರ್ಕಾರವನ್ನು ನಿರೀಕ್ಷಿಸುವುದು ಹೇಗೆ? ಇವರಲ್ಲೇ ಕೆಲವರು ಸರ್ಕಾರದ ಆಡಳಿತ ಸೂತ್ರವನ್ನು ವಹಿಸಿಕೊಳ್ಳುತ್ತಾರೆ.

ಹೀಗಾಗಿ, ಎಲ್ಲೆಲ್ಲಿ ನಮ್ಮ `ಹರೇಕೃಷ್ಣ’ ಕೇಂದ್ರ ಇದೆಯೋ, ಅಲ್ಲಿ ಜನರ ತರಬೇತಿಗಾಗಿ ಒಂದು ಕಾಲೇಜು ತೆರೆಯಬೇಕು – ಮೊದಲು ಅವರ ಸ್ವಾಭಾವಿಕ ಪ್ರತಿಭೆಗೆ ಅನುಗುಣವಾಗಿ (ಬೌದ್ಧಿಕ, ಆಡಳಿತಾತ್ಮಕ, ಉತ್ಪಾದಕತೆ ಮತ್ತು ಕಾರ್ಮಿಕ ಪರಿಣತಿ). ನಾವು ಸೂಚಿಸುವ ಆಧ್ಯಾತ್ಮಿಕ ಚಟುವಟಿಕೆಗಳ ಅಭ್ಯಾಸದಿಂದ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಪ್ರಜ್ಞೆಯ ಉನ್ನತಿಗೇರುವ ಅವಕಾಶವಿದೆ – ಹರೇಕೃಷ್ಣ ಮಂತ್ರಪಠಣ, ಭಗವದ್ಗೀತೆಯಿಂದ ಆತ್ಮಾವಲೋಕನ ವಿಜ್ಞಾನದ ಕೇಳ್ಮೆ. ಪ್ರತಿಯೊಂದನ್ನೂ ಕೃಷ್ಣಾರ್ಪಣ ಮನೋಭಾವದಿಂದ ನಿರ್ವಹಿಸುವುದು. ಪ್ರತಿಯೊಬ್ಬನ ಜೀವನವೂ ಪರಮಪುರುಷನ ಭಕ್ತಿಪೂರ್ವಕ ಸೇವೆಯಾಗಿ ರೂಪುಗೊಳ್ಳುವುದು.
ಇದರ ಜೊತೆಗೆ, ಪ್ರಾಯೋಗಿಕವಾಗಿ ನಡೆಸಬೇಕಾದ ವ್ಯವಹಾರಗಳಿಗೆ ನಾವು ಬೇರೆ ಬೇರೆ ಸಾಮಾಜಿಕ ವಿಭಾಗಗಳನ್ನು ತೆರೆಯುವ ವ್ಯವಸ್ಥೆ ಮಾಡಬೇಕು. ಏಕೆಂದರೆ ಇಲ್ಲಿ ವಿಭಿನ್ನ ಬುದ್ಧಿ – ಪ್ರತಿಭೆಗಳ ಪಾತ್ರವಿದೆ. ಬೌದ್ಧಿಕ ಪ್ರತಿಭೆ ಇರುವವರು ಬ್ರಾಹ್ಮಣರು, ಅರ್ಚಕರು, ಪುರೋಹಿತರು, ಶಿಕ್ಷಕರು, ಸಲಹಾಕಾರರು. ದೇಹದಾರ್ಢ್ಯವುಳ್ಳವರು, ಮಿಕ್ಕವರ ಸಂರಕ್ಷಣೆಗಾಗಿ, ಆಡಳಿತವ್ಯವಸ್ಥೆ, ಸೈನ್ಯದಲ್ಲಿ ಸೇವೆ ಸಲ್ಲಿಸುವ ಕ್ಷತ್ರಿಯರಾಗಬೇಕು. ಆಹಾರೋತ್ಪಾದನೆ, ಗೋಸಂರಕ್ಷಣೆ – ಇವು ವೈಶ್ಯರ ಕರ್ತವ್ಯವಾಗಬೇಕು. ಕೊನೆಯದು ಕಾರ್ಮಿಕವರ್ಗ; ಎಂದರೆ – ಶೂದ್ರರು ಸಹಾಯಕರಾಗಬೇಕು, ಕುಶಲಕರ್ಮದಲ್ಲಿ ತೊಡಗಬೇಕು.

ನಿಮ್ಮ ದೇಹದ ಅಂಗರಚನೆಯಲ್ಲಿರುವಂತೆ, ಸಾಮುದಾಯಿಕವಾಗಿಯೂ, ಕಾಯಕದ ವಿಭಜನೆ ಇರಬೇಕು. ಎಲ್ಲರೂ ಮಿದುಳಾಗಲು (ಬೌದ್ಧಿಕ ಪರಿಣತರು – ಬುದ್ಧಿಜೀವಿ), ಅಥವಾ ಬಾಹುಗಳಾಗಲು (ಆಡಳಿತಗಾರರು), ಉದರ (ರೈತರು), ಕಾಲುಗಳು (ಕಾರ್ಮಿಕರು) ಯಾರಾಗುತ್ತಾರೆ? ಪ್ರತಿಯೊಂದೂ ಕಸುಬಿನ ಅಗತ್ಯವಿದೆ; ಮಿದುಳಿನ ಅಗತ್ಯವಿದೆ. ಬಾಹುಗಳ ಆವಶ್ಯಕತೆಯಿದೆ; ಉದರದ ಅಗತ್ಯವಿದೆ, ಕಾಲುಗಳ ಅಗತ್ಯ ಇದೆ. ಆದುದರಿಂದ ಸಮುದಾಯವನ್ನು ಸಂಘಟಿಸಬೇಕು. ಪರಮಾತ್ಮನು ನಿಯಮಿಸಿರುವ ಸಾಮಾಜಿಕ ವಿಭಜನೆಯನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕರಿಗೆ ಸಹಾಯವೊದಗಿಸಬೇಕು. ಕೆಲವರು `ಬುದ್ಧಿ’ಯಂತೆ, ಮತ್ತೆ ಕೆಲವರು `ಬಾಹು’ಗಳಂತೆ, ಇನ್ನೂ ಕೆಲವರು `ಉದರ’ದಂತೆ ಮತ್ತೂ ಕೆಲವರು `ಕಾಲು’ಗಳಂತೆ. ಇದರ ಮುಖ್ಯ ಉದ್ದೇಶ ಸಮುದಾಯವನ್ನು ಸದೃಢಗೊಳಿಸುವುದು.
ಪ್ರತಿಯೊಬ್ಬನಿಗೂ ಸೂಕ್ತವಾದ ಕಾಯಕದಲ್ಲಿ ಅವನನ್ನು ತೊಡಗಿಸುವುದು ಖಾತರಿಯಾಗಬೇಕು. ಭಗವಂತನ ಕೈಂಕರ್ಯದಲ್ಲಿ ಪ್ರತಿಯೊಬ್ಬನನ್ನು ಅವನವನ ಸಾಮರ್ಥ್ಯಕ್ಕನುಸಾರ ತೊಡಗಿಸಬೇಕು. ಪ್ರತಿಯೊಬ್ಬರೂ ಅವರವರ ಕಾರ್ಯದಲ್ಲಿ ತೊಡಗುವ ಭಾವರೂಢಿಯಾಗುವುದು ಮುಖ್ಯ. ಉದಾ: ನೀವು ನಡೆಯುತ್ತಿರುವಾಗ ನಿಮ್ಮ ಮಿದುಳು ಕಾರ್ಯನಿರ್ವಹಿಸುತ್ತದೆ – “ಹೀಗೆ ಹೋಗು, ಹಾಗೆ ನಡೆ, ಕಾರು ಬರುತ್ತಿದೆ” – ನಿಮ್ಮ ಮಿದುಳು ಕಾಲಿಗೆ ಹೇಳುತ್ತದೆ – “ಇತ್ತ ಬಾ”. ಮಿದುಳಿನ ಮತ್ತು ಕಾಲಿನ ಕಾರ್ಯಗಳು ಬೇರೆ ಬೇರೆ; ಆದರೆ ಗುರಿ ಒಂದೇ – ನಿಮ್ಮನ್ನು ಸುರಕ್ಷಿತವಾಗಿ ರಸ್ತೆಯ ಆ ಬದಿಗೆ ಕರೆದೊಯ್ಯುವುದು. ಹಾಗೆಯೇ ಸಮುದಾಯದ ಕೇಂದ್ರಸ್ಥಾನ ಒಂದೇ – ಕೃಷ್ಣಸೇವೆಯಲ್ಲಿ ಪ್ರತಿಯೋರ್ವನ ಸಹಾಯ.
ಶಿಷ್ಯ: ಈ ಮಹಾವಿದ್ಯಾಲಯವನ್ನು ಸಾರ್ವಜನಿಕ ಸೌಲಭ್ಯಕ್ಕಾಗಿ ತೆರೆಯಲಾಗುತ್ತಿದೆಯೇ?
ಶ್ರೀಲ ಪ್ರಭುಪಾದ: ಹೌದು, ಯಾರಿಗಾದರೂ ಇದು ಲಭ್ಯ. ಉದಾಹರಣೆಗೆ ಇಂಜಿನಿಯರಿಂಗ್ ಕಾಲೇಜು ಎಲ್ಲರಿಗೂ ಲಭ್ಯ. ಒಂದೇ ಅರ್ಹತೆಯೆಂದರೆ, ತರಬೇತಿ ಪಡೆಯಲು ಜನರು ಸಿದ್ಧರಿರಬೇಕು. ಇದು ನಮ್ಮ ಕಾರ್ಯಕ್ರಮಗಳಲ್ಲೆಲ್ಲ ಅತಿಮುಖ್ಯವಾದುದು. ನಾಮ್ ಕೇವಾಸ್ತೆ ಮುಖಂಡರು ಸಾರ್ವಜನಿಕರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ. ಕೃಷ್ಣಪ್ರಜ್ಞಾ ಪ್ರಾಥಮಿಕ ಶಾಲೆಗೆ ಮಕ್ಕಳು ಸೇರಬಹುದು; ಅವರು ಪ್ರೌಢರಾದಾಗ ಕೃಷ್ಣಪ್ರಜ್ಞೆ ಮಹಾವಿದ್ಯಾಲಯಕ್ಕೆ ಸೇರಬಹುದು; ಇದರಿಂದ ತಮ್ಮ ವೃತ್ತಿ ಸಂಬಂಧಿತ ಕೌಶಲ ಬೆಳೆಯುತ್ತೆ ಮತ್ತು ಅವರ ಭಕ್ತಿ ಸಾಂದ್ರಗೊಳ್ಳುತ್ತದೆ.
ಶಿಷ್ಯ: ನಾವು ವ್ಯಾಪಾರವನ್ನೂ ಕಲಿಸುತ್ತೇವೆಯೇ?
ಶ್ರೀಲ ಪ್ರಭುಪಾದ: ಈ ಆಧುನಿಕ ವ್ಯಾಪಾರವಲ್ಲ – ಅಲ್ಲ, ಅದು ಅಯೋಗ್ಯವಾದುದು. “ವ್ಯಾಪಾರ” ಎಂದರೆ ಸಾಕಷ್ಟು ಧಾನ್ಯ ಮತ್ತಿತರ ಬೆಳೆ ಉತ್ಪಾದನೆ. ನೀವು ಸಾಕಷ್ಟು ತೃಪ್ತಿಯಾಗುವಷ್ಟು ಉಣ್ಣಬಹುದು, ಇತರರಿಗೂ ಹಂಚಬಹುದು – ಮನುಷ್ಯರು, ಪ್ರಾಣಿಗಳು. ಅದರಿಂದ ಅವರು ದೃಢಕಾಯರಾಗುತ್ತಾರೆ. ಹಸುಗಳಿಗೆ ಮೇವು ಸಿಕ್ಕರೆ, ಹೆಚ್ಚು ಹಾಲು ಉತ್ಪಾದನೆ ಸಾಧ್ಯ; ಮಾನವ ಜನಾಂಗ ಶ್ರಮಜೀವಿಗಳಾಗಲು ಮೈಯಲ್ಲಿ ಬಲ ತುಂಬಿಕೊಳ್ಳುತ್ತೆ. ನಾವು ಗಿರಣಿಗಳನ್ನು, ಕಾರ್ಖಾನೆಗಳನ್ನು ತೆರೆಯುವುದಿಲ್ಲ – ಇಲ್ಲ.

ಶಿಷ್ಯ: ಶ್ರೀಲ ಪ್ರಭುಪಾದ, ಕಲಾಕೌಶಲ ತರಗತಿಗಳು ಇಲ್ಲಿ ಹೇಗೆ ಹೊಂದಿಕೊಳ್ಳುತ್ತವೆ? ಸಮಾಜದಲ್ಲಿ ಕಲಾಕಾರರು, ಸಂಗೀತಗಾರರೆಲ್ಲರನ್ನೂ ತತ್ತ್ವಜ್ಞರುಗಳೆಂದು ಗುರುತಿಸಿದ್ದೇವೆ.
ಶ್ರೀಲ ಪ್ರಭುಪಾದ: ಇಲ್ಲ, ಒಬ್ಬ ಕಲಾವಿದ, ಕಾರ್ಮಿಕನಿಗೆ ಸಮಾನ. ವರ್ತಮಾನದಲ್ಲಿ ನಿಮ್ಮ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ, ಕಲಾಕೌಶಲದ ಬಗ್ಗೆ ಅಗತ್ಯಮೀರಿ ಒತ್ತುಕೊಡಲಾಗಿದೆ. ಹಾಗಾಗಿ ಇಡೀ ಪ್ರಜಾಸಂಖ್ಯೆ ಕಾರ್ಮಿಕರ ವರ್ಗಕ್ಕೆ ಸೇರಿಹೋಗಿದೆ. ನೈಜವೇದಾಂತಿಗಳಿಲ್ಲ, ವಿವೇಕವಿಲ್ಲ, ಇದು ಸಮಸ್ಯೆ. ಪ್ರತಿಯೊಬ್ಬರಿಗೂ ಅಧಿಕ ವೇತನದ ಆಕರ್ಷಣೆ. ಹೆಸರಿಗೆ ಮಾತ್ರ ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣ. ಕೊನೆಗೆ ಅವರು ಸೇರುವುದು ಕಾರ್ಖಾನೆ ಕಾರ್ಮಿಕರಾಗಿ. ನಿಜ, ಅವರು ಭೂಮಿಯಲ್ಲಿ ಬೇಸಾಯ ಮಾಡಿ ಬೆಳೆ ತೆಗೆಯಲಾರರು. ಅವರು ವೇದಾಂತಿಗಳಲ್ಲ. ಪರತತ್ತ್ವದ ಅನ್ವೇಷಣೆಯಲ್ಲಿ ತೊಡಗಿರುವವನೆ ವೇದಾಂತಿ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲೈಂಗಿಕ ಕ್ರಿಯೆಯ ತತ್ತ್ವದರ್ಶನದ ಬಗ್ಗೆ ಅಯೋಗ್ಯರು ಬರೆಯುತ್ತಾರೆ. ಅದು ನಾಯಿಗೂ ಗೊತ್ತು. ಈ ತೆರನಾದ ತತ್ತ್ವವನ್ನು ಅಯೋಗ್ಯರು ಹೊಗಳುತ್ತಾರೆ. ನಾವು ಅದನ್ನು ಹೊಗಳಲಾರೆವು. ಪರತತ್ತ್ವದ ಅನ್ವೇಷಣೆಯಲ್ಲಿ ಯಾರಾದರೂ ತೊಡಗಿದ್ದರೆ ಅವನೇ ವೇದಾಂತಿ, ಈ ಅಯೋಗ್ಯ ಫ್ರಾಯ್ಟ್ ಅಲ್ಲ – ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಹೇಗಂತ ವಿಸ್ತರಿಸುವುದಕ್ಕೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಜನರೆಲ್ಲ ಕೀಳುವರ್ಗಕ್ಕೆ ಸೇರಿದವರಾದರೆ, ಫ್ರಾಯ್ಟ್ ಅವರ ವೇದಾಂತಿ. “ಕಾಡಿನಲ್ಲಿ ನರಿಯೇ ಅರಸ” ಅಷ್ಟೆ .
ಈ ಪಾಶ್ಚಾತ್ಯರ ದರ್ಶನವೇನು? – ಇಡೀ ಪಾಶ್ಚಾತ್ಯರ ಪ್ರಪಂಚವೇ ಕಾರ್ಖಾನೆಗಾಗಿ ಹೋರಾಡುತ್ತಿದೆ; ಹಣಗಳಿಕೆಗಾಗಿ – “ತಿನ್ನು, ಕುಡಿ, ಮಜಮಾಡು” ಮದಿರೆ, ಮಾನಿನಿ ಅಷ್ಟೆ. ಅವರೆಲ್ಲ ಕೀಳುದರ್ಜೆಯವರು. ಮೊಟ್ಟ ಮೊದಲಬಾರಿಗೆ ಅವರನ್ನು ಮಾನವರನ್ನಾಗಿ ಮಾಡುವ ಪ್ರಯತ್ನ ನಮ್ಮದು. ನಾನು ತೀಕ್ಷ್ಣವಾದ ಪದಗಳನ್ನು ಬಳಸುತ್ತಿದ್ದೇನೆ. ಯೋಚನೆ ಮಾಡಬೇಡಿ. ಇದು ವಾಸ್ತವ. ಅವರೆಲ್ಲ ಪ್ರಾಣಿಗಳು – ದ್ವಿಪಾದಿ ಪ್ರಾಣಿಗಳು. ಅವರೆಲ್ಲರನ್ನು ನೀಚರೆಂದು ವೈದಿಕ ಸಂಸ್ಕೃತಿ ಪರಿಗಣಿಸುತ್ತದೆ – ಆದರೆ ಅವರನ್ನು ಪುನರುಜ್ಜೀವನಗೊಳಿಸಬಹುದು.

ಪಾಶ್ಚಾತ್ಯರು ಪುನರುಶ್ಚೇತನಗೊಳ್ಳಬಹುದು. ನೀವು ನನ್ನ ಪಾಶ್ಚಾತ್ಯ ವಿದ್ಯಾರ್ಥಿಗಳು ಹೇಗೆ ಪುನರುಜ್ಜೀವಿತರಾಗಿದ್ದೀರೋ ಹಾಗೆ. ನೀವೆಲ್ಲ ಸಮಾಜದ ಅತಿಕೆಳಸ್ತರದಿಂದ ಬಂದವರಾದರೂ, ತರಬೇತಿ ಪಡೆದು ವಿಪ್ರೋತ್ತಮರಾಗುತ್ತಿದ್ದೀರಿ. ಇಲ್ಲಿ ಯಾರ ಮೇಲೂ ನಿರ್ಬಂಧ ಹೇರಿಲ್ಲ. ದುರದೃಷ್ಟವಶಾತ್ ಈ ಅಯೋಗ್ಯರು ಇಂಥ ಅವಕಾಶವನ್ನು ಬಳಸಿಕೊಳ್ಳಲಾರರು. “ಇನ್ನು ಅನೈತಿಕ ಲೈಂಗಿಕತೆ ಸಾಕು” “ಮಾಂಸಭಕ್ಷಣ ಸಾಕು” ಎಂದು ಹೇಳುತ್ತಿದ್ದಂತೆ, ಅವರು ಕುಪಿತರಾಗುತ್ತಾರೆ. ಅಯೋಗ್ಯರು, ಮೂರ್ಖರು. ಅವರಿಗೆ ಒಳ್ಳೆಯ ನೀತಿಪಾಠ ಕಲಿಸಿಕೊಡಿ – ಒಳ್ಳೆಯ ಶಿಕ್ಷಣ ಕೊಡಿ – ಮತ್ತೆ ಅವರಿಗೆ ಮುನಿಸು. ಹಾವಿಗೆ ರುಚಿಕರ ಹಾಲು, ಬಾಳೆಹಣ್ಣು ಕೊಡಿ, ಅದರ ವಿಷ ಹೆಚ್ಚುತ್ತದೆ. ಆದರೆ ಅದು ಹೇಗೋ ಏನೋ, ಕೃಷ್ಣನ ಕೃಪೆಯಿಂದ, ನೀವು ತರಬೇತಿ ಪಡೆಯುತ್ತಿದ್ದೀರಿ. ನೀವು ತರಬೇತಿ ಪಡೆಯಿರಿ; ಪಾಶ್ಚಾತ್ಯ ನಾಗರಿಕತೆಯ, ವಿಶೇಷವಾಗಿ ಅಮೆರಿಕದ ನಾಗರಿಕತೆಯ ಸ್ವರೂಪವನ್ನು ಬದಲಾಯಿಸಿ. ಆಗ ಒಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತೆ. ಹಾಗಾಗಿ ಕೃಷ್ಣಪ್ರಜ್ಞಾ ಮಹಾವಿದ್ಯಾಲಯಗಳು ಅಗತ್ಯ.






Leave a Reply