ದಕ್ಷಿಣ ಕನ್ನಡದ ಪೋಡಿಗಳು
• ಎಸ್.ವಿ. ಗಾಯತ್ರಿ ಶೆಣೈ
ಆಲೂಗಡ್ಡೆ ಪೋಡಿ

ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 500 ಗ್ರಾಂ (ದೊಡ್ಡ ಗಾತ್ರದ್ದು)
ಅಕ್ಕಿಹಿಟ್ಟು – 200 ಗ್ರಾಂ
ಹಿಂಗಿನ ಪುಡಿ – 3 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಒಣಮೆಣಸಿನಕಾಯಿ ಪುಡಿ – ರುಚಿಗೆ ತಕ್ಕಷ್ಟು
ಖಾದ್ಯ ತೈಲ – ಹುರಿಯಲು ಬೇಕಾಗುವಷ್ಟು
ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ 2-3 ಬಾರಿ ತೊಳೆದು 1/4 ಇಂಚು ದಪ್ಪ ಬಿಲ್ಲೆಗಳನ್ನಾಗಿ ಕತ್ತಿರಿಸಿಟ್ಟುಕೊಳ್ಳಿ. ಅನಂತರ ಆಲೂಗಡ್ಡೆಗೆ ಬೇಕಾಗುವಷ್ಟು ಉಪ್ಪು ಹಾಕಿ 10-15 ನಿಮಿಷಗಳ ಕಾಲ ಮುಚ್ಚಿಡಿ. ಆನಂತರ ಒಂದು ಅಗಲವಾದ ತಟ್ಟೆಯಲ್ಲಿ ಅಕ್ಕಿಹಿಟ್ಟು ಹಿಂಗಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಒಣಮೆಣಸಿನ ಕಾಯಿ ಪುಡಿಯನ್ನು ಬೆರೆಸಿಟ್ಟುಕೊಳ್ಳಿ. ಆಲೂಗಡ್ಡೆಗೆ ತಗುಲಿ ಬಂದ ಉಪ್ಪಿನ ದ್ರಾವಣವನ್ನು ಸೋಸಿ ತೆಗೆಯಿರಿ.
ಅನಂತರ ಚಪಾತಿ ತವೆಯನ್ನು ಒಲೆಯ ಮೇಲಿಟ್ಟು ಬಿಸಿಮಾಡಿ. ಅದಕ್ಕೆ 2 ಚಮಚ ಖಾದ್ಯತೈಲವನ್ನು ಸವರಿ, ಸಣ್ಣ ಉರಿಯಲ್ಲಿಟ್ಟು ಒಂದೊಂದೇ ಆಲೂಗಡ್ಡೆ ಬಿಲ್ಲೆಯನ್ನು ಅಕ್ಕಿಹಿಟ್ಟಿನ ಮಿಶ್ರಣದಲ್ಲಿ ಹೊರಳಿಸಿ (ಎರಡೂಬದಿ) ತವೆಯ ಮೇಲೆ ಹಾಕಿ.
(ಒಂದು ಬಾರಿಗೆ ಹೀಗೆ 7-8 ಬಿಲ್ಲೆಗಳನ್ನು ಹುರಿಯಬಹುದು) ಒಂದೊಂದು ಆಲೂಗಡ್ಡೆ ಬಿಲ್ಲೆಯ ಮೇಲೂ ಪ್ರತ್ಯೇಕವಾಗಿ ಖಾದ್ಯತೈಲವನ್ನು ಹಾಕಿ ಮುಚ್ಚಳ ಮುಚ್ಚಿಡಿ. ಮತ್ತೆ 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ, ಮಗುಚಿರಿ. ಅಗತ್ಯವಿದ್ದಲ್ಲಿ ಖಾದ್ಯತೈಲವನ್ನು ಮತ್ತೊಮ್ಮೆ ಹಾಕಿ ಚೆನ್ನಾಗಿ ಹುರಿಯಿರಿ. ಆಲೂಗಡ್ಡೆ ಪೋಡಿ ಸಿದ್ಧ.
ಇದೇ ಕ್ರಮದಲ್ಲಿ ಸೌತೇಕಾಯಿ, ಗುಳ್ಳ (ಮಂಗಳೂರು ಬದನೆಕಾಯಿ), ಸೀಮೆ ಬದನೆಕಾಯಿ, ಹೀರೆಕಾಯಿ, ಸಿಹಿಗೆಣಸು, ಜೀವ್ ಕಡಿಗಿ (ದುಂಡು), ಬಾಳೆಕಾಯಿ, ಹಾಗಲಕಾಯಿ, ಕ್ಯಾರೆಟ್ (ಉದ್ದುದ್ದ ತುಂಡುಗಳನ್ನಾಗಿ ಮಾಡಿ) ಪೋಡಿಗಳನ್ನು ಮಾಡಬಹುದು. ಸಾಮಾನ್ಯವಾಗಿ ಇದನ್ನು ಬೇಳೆಕಟ್ಟಿನ ಸಾರಿನೊಂದಿಗೆ ಪಲ್ಯದಂತೆ ಬಳಸುವರು.
ಜೀವ್ ಕಡಿಗಿ (ಚಿಕ್ಕ ದುಂಡನೆಯ ಹಲಸಿನಕಾಯಿ ) ಪೋಡಿ

ಬೇಕಾಗುವ ಪದಾರ್ಥಗಳು:
ಚಿಕ್ಕ ಹಲಸು 1 (ಹದಗಾತ್ರದ್ದು)
ಅಕ್ಕಿಹಿಟ್ಟು 150 ಗ್ರಾಂ
ಜೀರಿಗೆ 1 ಚಿಕ್ಕ ಚಮಚ
ಸಾಸಿವೆ 1/2 ಚಿಕ್ಕ ಚಮಚ
ಒಣ ಮೆಣಸಿನಕಾಯಿ ಪುಡಿ ರುಚಿಗೆ ತಕ್ಕಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಹಿಂಗಿನ ಪುಡಿ 2-3 ಚಿಟಿಕೆ
ಖಾದ್ಯತೈಲ ಕರಿಯಲು ಬೇಕಾಗುವಷ್ಟು
ಮಾಡುವ ವಿಧಾನ: ಹಲಸಿನಕಾಯಿ ಸಿಪ್ಪೆ ತೆಗೆದು 1/4 ಇಂಚು ದಪ್ಪ ಬಿಲ್ಲೆಗಳನ್ನಾಗಿ (ಆಲೂಗಡ್ಡೆ ಪೋಡಿಯಂತೆ 2-3 ಇಂಚು ಉದ್ದ) ಕತ್ತರಿಸಿಟ್ಟುಕೊಳ್ಳಿ ಸ್ವಲ್ಪ ಉಪ್ಪು ಸೇರಿಸಿ 5-6 ನಿಮಿಷ ಮುಚ್ಚಿಡಿ.
ಅನಂತರ ಅಕ್ಕಿಹಿಟ್ಟು ಒಣಮೆಣಸಿನಕಾಯಿ, ಹಿಂಗಿನಪುಡಿ, 1/2 ಚಮಚ ಖಾದ್ಯತೈಲ (ಸ್ವಲ್ಪ ಬಿಸಿ ಮಾಡಿದ್ದು) ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಸ್ವಲ್ಪ ನೀರು ಸೇರಿಸಿ ಬೋಂಡಾಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಇದಕ್ಕೆ ಸಾಸಿವೆ ಹಾಗೂ ಜೀರಿಗೆ ಒಗ್ಗರಣೆಯನ್ನು ಸೇರಿಸಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಖಾದ್ಯತೈಲವನ್ನು ಬಿಸಿ ಮಾಡಿಕೊಳ್ಳಿ. ಅನಂತರ ಹಲಸಿನಕಾಯಿ ಬಿಲ್ಲೆಯಿಂದ ಉಪ್ಪು ನೀರು ಬಿಟ್ಟುಕೊಂಡಿದ್ದಲ್ಲಿ ಸೋಸಿ ತೆಗೆದು ಒಂದೊಂದೇ ಹಲಸಿನಕಾಯಿ ಬಿಲ್ಲೆಯನ್ನು ಅಕ್ಕಿಹಿಟ್ಟಿನ ಮಸಾಲೆಯಲ್ಲಿ ಹೊರಳಿಸಿ ತೆಗೆದು ಕಂದು ಬಣ್ಣ ಬರುವವರೆಗೂ ಕರಿಯಿರಿ.
ಮಸಾಲೆ ಬೆಂಡಾ ಪೋಡಿ

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ 500 ಗ್ರಾಂ (ಎಳೆಯದು)
ಅಕ್ಕಿಹಿಟ್ಟು 200 ಗ್ರಾಂ
ಕಡಲೆಹಿಟ್ಟು 50 ಗ್ರಾಂ
ಗರಂ ಮಸಾಲೆಪುಡಿ 1 ಚಿಕ್ಕ ಚಮಚ
ಒಣ ಮೆಣಸಿಕಾಯಿ ಪುಡಿ ರುಚಿಗೆ ತಕ್ಕಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಖಾದ್ಯತೈಲ ಕರಿಯಲು ಬೇಕಾಗುವಷ್ಟು
ಮಾಡುವ ವಿಧಾನ: ಬೆಂಡೆಕಾಯಿಯನ್ನು ಶುಭ್ರವಾದ ತೆಳುಬಟ್ಟೆಯಲ್ಲಿ ಒರೆಸಿ. ಮೇಲಿನ ತೊಟ್ಟನ್ನು ಕತ್ತರಿಸಿ, ಮಧ್ಯದವರೆಗೂ ಎರಡು ಬದಿಯಿಂದ ಸೀಳಿ (ಅರ್ಧದವರೆಗೆ) ಉಪ್ಪುಹಚ್ಚಿ 5 ನಿಮಿಷ ಮುಚ್ಚಿಡಿ.
ಅನಂತರ ಅಕ್ಕಿಹಿಟ್ಟು ಕಡಲೆಹಿಟ್ಟು ಗರಂ ಮಸಾಲೆಪುಡಿ, ಒಣಮೆಣಸಿನಕಾಯಿ ಪುಡಿ, ಅಗತ್ಯಕ್ಕೆ ತಕ್ಕ ಉಪ್ಪು ಬೆರೆಸಿ ಹಾಗೂ ಸ್ವಲ್ಪ ನೀರುಹಾಕಿ ಬೋಂಡಾ ಹಿಟ್ಟಿಗಿಂತಲೂ ತುಸು ಗಟ್ಟಿ ಬರುವಂತೆ ಮಾಡಿಕೊಂಡು ಒಂದೊಂದೇ ಬೆಂಡೆಕಾಯಿಯಲ್ಲಿ ಈ ಮಸಾಲೆಯನ್ನು ತುಂಬಿಡಿ.
ದಪ್ಪತಳದ ಬಾಣಲೆಯಲ್ಲಿ ಕರಿಯಲು ಎಣ್ಣೆಯಿಟ್ಟು ಬಿಸಿಯಾದ ನಂತರ ಮಸಾಲೆ ಬೆಂಡೆಕಾಯಿಯನ್ನು ಹಾಕಿ ತುಸು ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಇದೇ ರೀತಿ ನುಗ್ಗೇಕಾಯಿ (ನಾರು ತೆಗೆದು) ಯ ಮಸಾಲೆ ಪೋಡಿಯನ್ನು ಮಾಡಬಹುದು.
ಈ ಎಲ್ಲ ವಿಶೇಷ ಪೋಡಿಗಳನ್ನು ಶ್ರೀ ರಾಧಾಕೃಷ್ಣರಿಗೆ ಸಮರ್ಪಿಸಿ ಸ್ವೀಕರಿಸಲು ಮರೆಯದಿರಿ.






Leave a Reply