ದಕ್ಷಿಣೋತ್ತರ ವೈಷ್ಣವ ಸಂತ ಪರಂಪರೆಯ ಉಗಮ – ವಿಕಾಸ

-ಡಾ.ಕೆ. ಗೋಕುಲನಾಥ, ಎಂ.ಎ., ಪಿಎಚ್.ಡಿ.

ಪ್ರಾಂಶುಪಾಲರು (ನಿವೃತ್ತ), ಸಿಂಡಿಕೇಟ್ ಸದಸ್ಯರು, ಬೆಂಗಳೂರು ವಿಶ್ವವಿದ್ಯಾಲಯ

ಆಗಸ್ಟ್ 19ಭಾನುವಾರದಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬೆಂಗಳೂರು ಇಸ್ಕಾನ್, ‘ದಾಸಪಂಥ ಮತ್ತು ಚೈತನ್ಯ ಪಂಥ’ ವಿಚಾರ ಸಂಕಿರಣ ಆಯೋಜಿಸಿತ್ತು. ನಾಡಿನ ಹೆಸರಾಂತ ಪ್ರಾಜ್ಞರು ವಿಚಾರ ಸಂಕಿರಣದಲ್ಲಿ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡನೆ ಮಾಡಿದ್ದರು. ಪ್ರಬಂಧಗಳನ್ನು ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ನೀಡಲಾಗುವುದು.

ಸಾರಾಂಶ

ಭಾರತ ದೇಶದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ, ಬಂಗಾಳ, ಒರಿಸ್ಸಾ ಮೊದಲಾದ ರಾಜ್ಯಗಳಲ್ಲಿ ವೈಷ್ಣವ ಸಂತ ಪರಂಪರೆ ಪ್ರಾಚೀನ ಕಾಲದಿಂದಲೂ ಇದ್ದು ಈ ಸಂತರು ತಮ್ಮ ತಮ್ಮ ಮಾತೃ ಭಾಷೆಯಲ್ಲಿ ವೈಷ್ಣವ ಭಕ್ತಿ ಸಾಹಿತ್ಯವನ್ನು ರಚಿಸಿರುವರು.

ತಮಿಳುನಾಡಿನ ಆಳ್ವಾರರು, ಕರ್ನಾಟಕದ ಹರಿದಾಸರು, ಆಂಧ್ರದ ವಾಗ್ಗೇಯಕಾರರು ಮಹಾರಾಷ್ಟ್ರದ ಸಂತರು, ಬಂಗಾಳದ ಚೈತನ್ಯ ಪಂಥೀಯರು, ಉತ್ತರ ದೇಶದ ಕಬೀರ್, ಮೀರಾ, ಸೂರದಾಸ್, ಬಂಗಾಳದ ಚೈತನ್ಯ ಪಂಥೀಯ ಸಂತರು ಮೂರು ಮಹತ್ಕಾರ್ಯಗಳನ್ನು ನಡೆಸಿದರು.

1. ಪೂರ್ವಜ ಸಂತ ಸಾಹಿತ್ಯ ಅಧ್ಯಯನ ಮತ್ತು ಪ್ರಸಾರ.

2. ಜ್ಞಾನ, ಭಕ್ತಿ, ವೈರಾಗ್ಯ ಭರಿತ ಜೀವನದಿಂದ ದೊರೆತ ಆನಂದಾನುಭವದ ಹಿನ್ನೆಲೆಯಲ್ಲಿ ಸಾಹಿತ್ಯ ನಿರ್ಮಾಣ.

3. ವೇದ ಉಪನಿಷತ್ತು, ಭಾರತ, ರಾಮಾಯಣ, ಭಾಗವತಗಳಲ್ಲಿ ಅಡಗಿರುವ ವಿಷ್ಣುಭಕ್ತಿ ತತ್ತ್ವಗಳ ಪ್ರಸಾರ.

ಭಾರತದ ದಕ್ಷಿಣೋತ್ತರ ರಾಜ್ಯಗಳ ಸಂತರು ತಾವು ಒಪ್ಪಿದ ಶಂಕರ, ರಾಮಾನುಜ, ಮಧ್ವಾಚಾರ್ಯರ ಹಾಗೂ ಚೈತನ್ಯ ಪಂಥೀಯರ ತತ್ತ್ವಜ್ಞಾನವನ್ನು ಮೂಲಾಧಾರವಾಗಿಟ್ಟುಕೊಂಡು ಸಾಹಿತ್ಯವನ್ನು ರಚಿಸಿದರು. ಈ ವಿವಿಧ ರಾಜ್ಯಗಳ ಸಂತರು ಸಾಹಿತ್ಯ ರಚನೆಗೆ ಬಳಸಿಕೊಂಡ ಮಾಧ್ಯಮ, ವಿಷಯ ನಿರೂಪಣಾ ಬಗೆ ಹಾಗೂ ಅವಲಂಬಿಸಿದ ಛಂದೋರೂಪಗಳು ಕಾಲಕಾಲಕ್ಕೆ ಭಿನ್ನವಾಗಿ ಸ್ವೋಪಜ್ಞತೆಯನ್ನು ಪ್ರಕಟಿಸಿರುವುದು ಗಮನಾರ್ಹ.

ಇವರು ಪ್ರಬಂಧ, ಕೀರ್ತನೆ, ಸುಳಾದಿ, ಉಗಾಭೋಗ ಹಾಡು, ಗದ್ಯ, ಯಕ್ಷಗಾನ, ನಾಟಕವೇ ಮೊದಲಾದ ಸಾಹಿತ್ಯ ರೂಪಗಳ ಮೂಲಕ ತಮ್ಮ ದಿವ್ಯಾನುಭವವನ್ನು ಪ್ರಕಾಶನಗೊಳಿಸಿದ್ದಾರೆ. ಯಾರು ವೈಷ್ಣವ ತತ್ತ್ವ ಜ್ಞಾನವನ್ನು ಹೊಂದಿ ಮನಶ್ಯಾಂತಿಯನ್ನು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ರಕ್ಷಿಸಿಕೊಂಡು, ಇತರರ ಹಾಗೂ ಸಮಾಜದ ಜೀವನವೂ ಶಾಂತವಾಗಿ ಮುಂದುವರಿಯಲು ಸಹಾಯ-ಪ್ರೇರಣೆ ನೀಡುವರೋ ಅವರನ್ನೇ ‘ಸಂತ’ರೆಂದು ಕರೆಯಲಾಗಿದೆ.

ವಿಶ್ವಶಾಂತಿಗೆ ಸಂತರ ತತ್ತ್ವಜ್ಞಾನ – ಜೀವನಮಾರ್ಗಗಳು ಮಾರ್ಗದರ್ಶನ ಸೂತ್ರಗಳಾಗಿವೆ ಎಂಬುದನ್ನು ಎಲ್ಲ ರಾಜ್ಯಗಳ ಸಂತ ಪರಂಪರೆಯ ಜೀವನ ಮತ್ತು ಸಾಹಿತ್ಯದಿಂದ ಅರಿತುಕೊಳ್ಳಬಹುದಾಗಿದೆ. ಈ ಸಂತರು ವಿಷ್ಣುವಿನ ಧ್ಯಾನ, ಪೂಜೆ, ತೀರ್ಥಯಾತ್ರೆ, ಭಜನೆ, ಗಾಯನ, ನೃತ್ಯ, ಹರಿಕಥೆಗಳ ಮೂಲಕ ವಿಷ್ಣುಭಕ್ತಿ ಪ್ರಜ್ಞೆಯನ್ನು ಇತರ ಜನರಲ್ಲಿ ಜಾಗೃತಗೊಳಿಸಿದರೆಂಬುದು ಗಮನಾರ್ಹ. ಈ ಎಲ್ಲ ಅಂಶಗಳ ಪರಾಮರ್ಶೆಯೇ ವಿಸ್ತೃತ ಪ್ರಬಂಧದ ಧ್ಯೇಯವಾಗಿರುತ್ತದೆ.

ದಕ್ಷಿಣೋತ್ತರ ವೈಷ್ಣವ ಸಂತ ಪರಂಪರೆಯ ಉಗಮ – ವಿಕಾಸ

ವಿಷ್ಣುವನ್ನು ಸರ್ವೋತ್ತಮನೆಂದು ಭಾವಿಸಿ ಅವನು ಸಕಲ ಚರಾಚರ ವಸ್ತುಗಳಲ್ಲಿ ಅದೃಶ್ಯನಾಗಿದ್ದು ಅವನ ಸಂಕಲ್ಪವಿಲ್ಲದೆ ‘ತೇನವಿನಾ ತೃಣಮಪಿ ನ ಚಲತಿ’ ಎಂದು ನಂಬಿ, ಸೃಷ್ಟ್ಯಾದಿ ಅಷ್ಟಕರ್ತೃತ್ವವುಳ್ಳ ಆ ಪರಾತ್ಪರ ಶಕ್ತಿಯ ಸಾಕ್ಷಾತ್ಕಾರಕ್ಕಾಗಿ ಭಕ್ತಿ ಮಾರ್ಗದಲ್ಲಿ ಪ್ರವೃತ್ತರಾಗುವವರೇ ವೈಷ್ಣವ ಸಂತರು.

“ಬಹುಧರ್ಮಧೇನು ನಿವಹ” ಗಳಿಗೆ ಆಡುಂಬೊಲವಾಗಿರುವ ಭಾರತ ದೇಶದಲ್ಲಿ ಮಿನುಗಿದ ಶಂಕರ, ರಾಮಾನುಜ, ಮಧ್ವರೇ ಮೊದಲಾದ ದಾರ್ಶನಿಕರ ತತ್ತ್ವಗಳ ಹಿನ್ನೆಲೆಯಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸುವ ಹಂತದಲ್ಲಿ ಪಡೆದುಕೊಂಡ ಅನುಭವಗಳನ್ನು ಕಲಾತ್ಮಕವಾಗಿ ಅವರವರ ದೇಸೀ ಭಾಷೆಯಲ್ಲಿ ಅಭಿವ್ಯಕ್ತಗೊಳಿಸುವುದರ ಮೂಲಕ ‘ಸಂತ’ರೆನಿಸಿಕೊಂಡವರು ಭಾರತದ ದಕ್ಷಿಣೋತ್ತರದ ಎಲ್ಲ ರಾಜ್ಯಗಳಲ್ಲಿ ಅಸಂಖ್ಯಾತರಾಗಿದ್ದು ಇವರ ಪರಂಪರೆ ಹಲವು ರಾಜ್ಯಗಳಲ್ಲಿ ಅವಿಚ್ಛಿನ್ನವಾಗಿ ಇಂದಿಗೂ ಮುಂದುವರಿದಿದೆ.

ಬದುಕಿನ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಮನಶ್ಯಾಂತಿಯನ್ನು ಕಳೆದುಕೊಳ್ಳದೆ, ಧರ್ಮವನ್ನು ಬಿಡದೆ ಭಕ್ತಿಯ ಶಕ್ತಿಯಿಂದ ಸಂತರೆನಿಸಿಕೊಂಡವರ ನಡೆ-ನುಡಿಗಳನ್ನು ತಿಳಿದವರು, ಅನುಸರಿಸಿದವರು ಶಾಂತ ಜೀವನವನ್ನು ನಡೆಸಬಹುದಾಗಿದೆ. ಸಂತರ ನಡೆ-ನುಡಿಗಳು ನಮ್ಮನ್ನೂ, ನಮ್ಮ ಸುತ್ತ ಮುತ್ತಲಿರುವವರನ್ನೂ ಶಾಂತಿ, ಸೌಹಾರ್ದಗಳಿಂದ ಜೀವಿಸುವ ಹಾಗೆ ಮಾಡುವ ಶಕ್ತಿಯನ್ನು ಹೊಂದಿರುವುದರಿಂದ ಇಂದೂ ಸಂತರ ಉಪದೇಶಗಳು ಪ್ರಸ್ತುತವಾಗಿವೆ ಎನಿಸುತ್ತದೆ.

ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಕೇರಳ ಹಾಗೂ ಉತ್ತರ ಭಾರತದ ಬಂಗಾಳ, ಒರಿಸ್ಸಾ, ಅಸ್ಸಾಂ, ಉತ್ತರಪ್ರದೇಶ, ಬಿಹಾರ್, ಮಧ್ಯಪ್ರದೇಶ, ಗುಜರಾತ್, ರಾಜಾಸ್ಥಾನ್‌ ರಾಜ್ಯಗಳಲ್ಲಿ ಕಾಲ ಕಾಲಕ್ಕೆ ಉದಯಿಸಿದ ವೈಷ್ಣವ ಸಂತರು ವಿಷ್ಣು ಭಕ್ತಿಯುಕ್ತ ಅನುಭಾವ ಸಾಹಿತ್ಯ ನಿರ್ಮಾಣಕ್ಕೆ ವಿಷ್ಣು ಪಾರಮ್ಯವನ್ನು ವಿವರಿಸುವ ವೇದ, ಉಪನಿಷತ್ತು, ಪಾಂಚರಾತ್ರ, ವಿಷ್ಣುಪುರಾಣ, ಭಾರತ, ರಾಮಾಯಣ, ಭಾಗವತ,

ಭಗವದ್ಗೀತೆ ಮೊದಲಾದ ಸಂಸ್ಕೃತ ಸಾಹಿತ್ಯವನ್ನು ಅವರವರು ಒಪ್ಪಿಕೊಂಡ ಅಥವಾ ಪ್ರಭಾವಿತರಾದ ದ್ವೈತಾದ್ವೈತ, ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಸಿದ್ಧಾಂತದ ಬೆಳಕಿನಲ್ಲಿ ಅಧ್ಯಯನ ಮಾಡಿ ಪಡೆದ ಜ್ಞಾನದಿಂದ ಭಗವಂತನ ಉಪಾಸನೆ ಗೈದು, ಹಳೆಯ ಕಂದಾಚಾರಗಳನ್ನು ಮೂಢನಂಬಿಕೆಗಳನ್ನು ವಿಮರ್ಶಿಸಿ ಶೋಧಿಸಿ, ಜಾತಿ-ಮತ-ಲಿಂಗ-ವರ್ಗ ಭೇದ ತಾರತಮ್ಯಗಳನ್ನು ನಿರಾಕರಿಸಿ ಎಲ್ಲರೂ ವಿಷ್ಣು ಭಕ್ತಿಯನ್ನು ಹೊಂದಿ,

ಸಂತರಾಗಿ ಲೋಕದಲ್ಲಿ ಶಾಂತವೂ ಗೌರವಯುತವೂ ಆದ ಬದುಕನ್ನು ನಡೆಸಲು ಮಾರ್ಗದರ್ಶಿಯಾಗಬಹುದಾದ ಸಾಹಿತ್ಯವನ್ನು ಭಾರತದ ಬಹುತೇಕ ಎಲ್ಲ ಮಾತೃ ಭಾಷೆಗಳಲ್ಲಿಯೂ ರಚಿಸಿರುವರು. ಭಾರತದ ದಕ್ಷಿಣೋತ್ತರ ರಾಜ್ಯಗಳ ವಿವಿಧ ಭಾಷೆಗಳ ವಿಭಿನ್ನ ವೈಷ್ಣವ ಪಂಥಗಳ ಸಂತರ ಸಾಹಿತ್ಯವನ್ನು ತೌಲನಿಕವಾಗಿ ಅಧ್ಯಯನ ಮಾಡಿದಾಗ ಒಂದು ಭಾಷೆಯ ಸಂತರ ಸಾಹಿತ್ಯದಲ್ಲಿರುವ ಅಂಶಗಳು ಮತ್ತೊಂದು ಭಾಷೆಯ ಸಂತರ ಸಾಹಿತ್ಯದಲ್ಲಿ ಗೋಚರಿಸಿರುವುದುಂಟು.

ಇದು ಸಂತರ ಆಲೋಚನಾ ಕ್ರಮಗಳಲ್ಲಿರುವ ಸಾಮ್ಯತೆಗೆ ನಿದರ್ಶನ ಹಾಗೂ ಇವರ ಜ್ಞಾನಕ್ಕೆ ಮೂಲಾಧಾರವಾದ ಸಂಸ್ಕೃತ ಸಾಹಿತ್ಯ ಆಗರವೆನಿಸುತ್ತದೆ. ದಕ್ಷಿಣೋತ್ತರ ರಾಜ್ಯಗಳಲ್ಲಿ ಮೂಡಿದ ಸಂತರ ಸಾಹಿತ್ಯರೂಪ ಒಂದೇ ಆಗದಿದ್ದರೂ ಎಲ್ಲವೂ ಗೇಯತೆಯನ್ನು ಹೊಂದಿರುವ ಸಾಹಿತ್ಯ ಎನ್ನಬಹುದು.

ಸಂತರ ಸಾಹಿತ್ಯ ಸಂಕೀರ್ತನ ಸಾಹಿತ್ಯವಾಗಲು ಭಾಗವತದಲ್ಲಿ “ಕಲೌ ತದ್ಹರಿ ಕೀರ್ತನಾತ್; ಕೀರ್ತನಾ ದೇವ ಕೃಷ್ಣಸ್ಯ ಮುಕ್ತ ಸಂಗಃ ಪರಂ ವ್ರಜೇತ್” (ಭಾಗವತ ಸ್ವಂಧ 12, ಅಧ್ಯಾಯ 3.51) ಎಂಬ ವಾಕ್ಯಗಳು ಪ್ರೇರಕವೆಂದು ಪ್ರಸಿದ್ಧವಾಗಿದೆ.

ಹರಿದಾಸ ಪಂಥದ ಶ್ರೀಪಾದರಾಜರು ‘ಧ್ಯಾನವು ಕೃತಯುಗದಲ್ಲಿ ಯಜನ ಯಜ್ಞವು ತ್ರೇತಾಯುಗದಲ್ಲಿ, ದಾನವಾಂತಕನ ದೇವತಾರ್ಚನೆಯು ದ್ವಾಪರ ಯುಗದಲ್ಲಿ, ಕಲಿಯುಗದಿ ಗಾನದಿ ಕೇಶವಾ ಎಂದರೆ ಕೈಗೂಡುವನು ರಂಗವಿಠಲ’ ಎಂದು ಹೇಳುವುದರ ಮೂಲಕ ವಿಷ್ಣುವಿನ ಗುಣಗಾನವೇ ಈಗ ಮುಕ್ತಿಗೆ ಸೋಪಾನವೆಂದಿದ್ದಾರೆ.

ಆದ್ದರಿಂದ ತಮಿಳುನಾಡಿನ ಆಳ್ವಾರರು ‘ಪಾಶುರ – ದಿವ್ಯಪ್ರಬಂಧಮ್’ ಗಳನ್ನು ಹಾಡಿದರು. ತೆಲುಗಿನ ತ್ಯಾಗರಾಜರೇ ಮೊದಲಾದವರು ಸಂಗೀತೋಪಾಸನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡರು. ಕರ್ನಾಟಕದ ಹರಿದಾಸರು ‘ಕೀರ್ತನೆ-ಪದ- ಸುಳಾದಿ – ಉಗಾಭೋಗ’ ಗಳೆಂಬ ಸಂಗೀತ ಬದ್ಧರೂಪಗಳನ್ನು ಸಾಹಿತ್ಯರಚನೆಗೆ ಬಳಸಿಕೊಂಡರು.

ಮರಾಠಿಯ ಸಂತರು ಅಭಂಗಗಳನ್ನು, ಗೀತೆಗಳನ್ನು ರಚಿಸಿದರು. ಬಂಗಾಳಿಯ ಸಂತರು ಚರ್ಯಾಪದಗಳನ್ನು, ಚೈತನ್ಯ ಪಂಥೀಯರು ಪದಗಳನ್ನು, ಅಸ್ಸಾಮಿಯ ಸಂತರು ವರ್ಜಿತ ಹಾಗೂ ಕೀರ್ತನ ರೂಪದ ಸಾಹಿತ್ಯವನ್ನು, ಗುಜರಾತಿನ ಹಲವು ಸಂತರು ಪ್ರಭಾತೀಯ ಛಂದೋರೂಪದ ಗೇಯ ಕೃತಿಗಳನ್ನೂ ಗರಬಿಗಳನ್ನೂ ರಚಿಸಿದರು. ಹಿಂದಿ ಭಾಷೆಯಲ್ಲಿ ಗೇಯತೆಗೆ ಇಂಬುಗೊಡುವ ಎಲ್ಲ ಬಗೆಯ ಛಂದೋರೂಪಗಳನ್ನು ಬಳಸಿ ಭಜನೆಗಳನ್ನು ರಚಿಸಿದರು.

ದಕ್ಷಿಣೋತ್ತರ ಭಾರತದ ವಿವಿಧ ಭಾಷಾ ಸಂತರು ಹೇಗೆ ವೈವಿಧ್ಯಪೂರ್ಣವಾದ ಸಾಹಿತ್ಯರೂಪಗಳನ್ನು ಬಳಸಿ ಅನುಭಾವ ಸಾಹಿತ್ಯವನ್ನು ರಚಿಸಿದರೋ ಅದರಂತೆ ಸ್ವತಂತ್ರ ಆಲೋಚನೆ, ವೈಚಾರಿಕತೆ, ಜನ ಸಾಮಾನ್ಯರ ಬದುಕಿಗೆ ಶಾಂತಿ-ತೃಪ್ತಿಗಳನ್ನು ಧೈರ್ಯವನ್ನು ಕೊಡುವಂತಹ ಸಂಪ್ರದಾಯ ವಿರೋಧಿ ಅಂಶಗಳುಳ್ಳ ವಿಚಾರಪೂರ್ಣ ಸಾಹಿತ್ಯವನ್ನು ರಚಿಸಿದ್ದು ಇವು ಗೇಯಾತ್ಮಕ ರಚನೆಗಳಾಗಿವೆ.

ಕೆಲವು ಸಂತರು ಸಂಗೀತದ ರಾಗ, ತಾಳಗಳನ್ನು ನಿರ್ದೆಶಿಸಿರುವುದಾದರೆ ಹಲವರು ರಾಗ ತಾಳಗಳಿಗೆ ಹೊಂದಿಕೊಳ್ಳುವ ಪ್ರಾಸಾನುಪ್ರಾಸಗಳ ಮೇಳದಿಂದ ನಾದ ಮಾಧುರ್ಯದಿಂದ ಝೇಂಕರಿಸುವ ಗೀತೆಗಳನ್ನು ರಚಿಸಿದ್ದಾರೆ. ಚಾರಿತ್ರಿಕ ದೃಷ್ಟಿಯಿಂದ ಪರಿಶೀಲಿಸಿದಾಗ ತಮಿಳುನಾಡಿನ ಆಳ್ವಾರರು ಸಂತ ಪರಂಪರೆಗೆ ಆದ್ಯರೆನಿಸಿದ್ದಾರೆ.

ಕ್ರಿ.ಶ. 700 ರಿಂದ 900ರವರೆಗೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಉದಯಿಸಿದ ಹನ್ನೆರಡು ಜನ ಆಳ್ವಾರರು ರಾಮಾನುಜರ ಶರಣಾಗತಿ – ಪ್ರಪತ್ತಿ ಮಾರ್ಗಾವಲಂಬಿಗಳಾಗಿ ಅಂತರಂಗದ ವಿಷ್ಣು ಭಕ್ತಿಯನ್ನು ದಿವ್ಯ ಪ್ರಬಂಧಂ – ಪಾಶುರಗಳ ಮೂಲಕ ಅಭಿವ್ಯಕ್ತಗೊಳಿಸಿದರು.

‘ಆಳ್ವಾರ್’ ಎಂದರೆ ಭಕ್ತಿಯಲ್ಲಿ ಮುಳುಗಿರುವವರು ಎಂದರ್ಥ. ಪೊಯ್ಗೃ, ಪೂದತ್ತಾರ್‌‌, ಪೆರಿಯಾರ್, ತಿರುಮಳಶೈ, ನಮ್ಮಾಳ್ವಾರ್, ಮಧುರ, ಕುಲಶೇಖರ, ಪೇಯಾ, ಆಂಡಾಳ್ (ಗೋದಾ) ತೊಂಡಿರಡಿಪ್ಪೊಡಿ, ತಿರುಪ್ಪಾಣಿ, ತಿರುಮಂಗೈ ಎಂಬ ಹನ್ನೆರಡು ಆಳ್ವಾರರು ರಚಿಸಿರುವ ಒಟ್ಟು ನಾಲ್ಕು ಸಾವಿರ ಪಾಶುರಗಳು ದೊರೆತಿವೆ.

ಈ ಆಳ್ವಾರರಲ್ಲಿ ತಿರುಪ್ಪಾಣಿ ದಲಿತ ವರ್ಗಕ್ಕೂ, ಕುಲಶೇಖರ ಆಳ್ವಾ‌ ಕ್ಷತ್ರಿಯ ವರ್ಗಕ್ಕೂ, ನಮ್ಮಾಳ್ವಾರ್ ಹಾಗೂ ತಿರುಮಂಗೈ ಆಳ್ವಾರ್ ವೆಳ್ಳಾಳ ಗುಂಪಿಗೂ ಸೇರಿದವರಾಗಿದ್ದು , ಆಂಡಾಳ್ ಮಹಿಳೆಯಾಗಿದ್ದಾಳೆ. ವೇದಾಂತ ದೇಶಿಕರೆಂಬ ತತ್ವಜ್ಞಾನಿಗಳು
ಆಂಡಾಳನ್ನು ಕುರಿತು ಗೋದಾಸ್ತುತಿಯನ್ನು ರಚಿಸಿ ಈಕೆಯನ್ನು

ಶ್ರೀ ವಿಷ್ಣುಚಿತ್ತ ಕುಲನಂದನ ಕಲ್ಪವಲ್ಲೀ

ಶ್ರೀರಂಗರಾಜ ಹರಿಚಂದನ ಯೋಗ ದೃಶ್ಯಾಂ

ಸಾಕ್ಷಾತ್ ಕ್ಷಮಾಂ ಕರುಣಯಾ ಕಮಲಾಮಿವಾನ್ಯಾಂ

ಗೋದಾಮನನ್ಯ ಶರಣಾಶ್ಯರಣಂ ಪ್ರಪದ್ಯೇ ||

ಎಂದು ವಂದಿಸಿದ್ದಾರೆ.

ಪೆರಿಯಾಳ್ವಾರ್ ಮಧುರ ಭಕ್ತಿಭಾವ ಭರಿತವಾದ 500 ಪಾಶುರಗಳನ್ನು ರಚಿಸಿದ್ದು ತಿರುಪ್ಪಲ್ಲಾಂಡು’ ಎಂದೇ ಖ್ಯಾತವಾಗಿದೆ.

ಆಳ್ವಾರರ ದಿವ್ಯ ಪ್ರಬಂಧಗಳನ್ನು “ತಿರುಮ – ಪೆರಿಯತಿರುಮ ಇಯರಿಪ್ಪಾ ಹಾಗೂ ತಿರುವಾಯ್ಮೊಳೆ” ಎಂಬ ನಾಲ್ಕು ವಿಭಾಗಗಳನ್ನು ಮಾಡಿ ಅಧ್ಯಯನ ಮಾಡುವ ಸಂಪ್ರದಾಯವಿದೆ. ಕ್ರಿ.ಶ. 15-16ನೆಯ ಶತಮಾನಗಳಲ್ಲಿ ಆಳ್ವಾರರ ದಿವ್ಯಪ್ರಬಂಧಗಳಿಗೆ ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಅನೇಕರು ವ್ಯಾಖ್ಯಾನಗಳನ್ನು ರಚಿಸಿದ್ದು ಇದನ್ನು ʼಭಗವದ್ವಿಷಯ’ ಎನ್ನುತ್ತಾರೆ.

ನಮ್ಮಾಳ್ವಾರರ ‘ತಿರುವಾಯ್ಮೊಳೆ’ಯನ್ನು ಕುರಿತು ‘ಆರಾಯಿರಪ್ಪಡಿ, ಒಂಬದು ನಾಯಿರಪ್ಪಡಿ, ಪದಿನೇಟ್ವಾಯಿರಪ್ಪಡಿ, ಇರುವತ್ತು ನಾಲಾಯಿರಪ್ಪಡಿ, ಮುಪ್ಪತ್ತಾರಾಯಿರಪ್ಪಡಿ’ ಎಂದು ಹಲವು ವ್ಯಾಖ್ಯಾನಗಳಿದ್ದು ಇವುಗಳ ಅಧ್ಯಯನ ಇಂದಿಗೂ ಜಾರಿಯಲ್ಲಿದೆ.

ಭಗವಂತನ ಅನುಗ್ರಹ ಸಂಪಾದನೆಗೆ ಜಾತಿ, ಮತ, ಧರ್ಮ, ಉದ್ಯೋಗ ಯಾವುದೂ ಮುಖ್ಯವಲ್ಲ. ವಿಷ್ಣುವಿನ ಗುಣಗಣಗಳನ್ನು ಕುರಿತು ಅವನ ಧ್ಯಾನ, ಕೀರ್ತನೆ, ಪೂಜೆಯೇ ಮೊದಲಾದ ಭಕ್ತಿ ಕೈಂಕರ್ಯಗಳ ಸಾಧನೆಯೇ ಮುಖ್ಯವೆಂದು ಆಳ್ವಾರರು ಉಪದೇಶಿಸಿದ್ದಾರೆ.

ವೈಷ್ಣವ ಸಂತರ ಪರಂಪರೆ ಇಂದಿಗೂ ಜೀವಂತವಾಗಿರುವ ರಾಜ್ಯ ಕರ್ನಾಟಕ. ಉಡುಪಿಯ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಅಡಿಪಾಯದ ಮೇಲೆ ಹುಟ್ಟಿಕೊಂಡ ‘ದಾಸಕೂಟ’ದ ಆರಂಭ ಕ್ರಿ.ಶ. ಹದಿಮೂರನೆಯ ಶತಮಾನದ ನರಹರಿತೀರ್ಥರಿಂದಾಯಿತೆನ್ನಬಹುದಾದರೂ ಇದರಿಂದ ಪರಂಪರೆ ಮುಂದುವರಿಸಿರುವುದಕ್ಕೆ ಚಾರಿತ್ರಿಕ ಆಧಾರಗಳು ದೊರೆತಿಲ್ಲ.

ಆದ್ದರಿಂದ ಕ್ರಿ.ಶ. 1400ರಲ್ಲಿದ್ದ ಮುಳುಬಾಗಿಲಿನ ಶ್ರೀಪಾದರಾಜರನ್ನು ಹರಿದಾಸ ಪಂಥದ ಪ್ರವರ್ತಕರೆಂದು ಹಲವರು ಸಮ್ಮತಿಸಿದ್ದಾರೆ. “ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೇ, ನಮಃ ಪುರಂದರಾರ್ಯಾಯ ವಿದ್ಯಾದಾಯತೇ “ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೇ, ನಮಃ ಪರಂದರಾರ್ಯಾಯ ವಿದ್ಯಾದಾಯತೇ ನಮಃ” ಎಂಬ ಪ್ರಾಚೀನವಾದಂತಹ ಶ್ಲೋಕ, ನಾಲ್ವರು ಹರಿದಾಸರನ್ನು ಮುಖ್ಯರನ್ನಾಗಿ ಮತ್ತು ಅವರ ಇತಿಹಾಸವನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತದೆ ಎನ್ನಬಹುದು.

ಇವರು ರಚಿಸಿರುವ 101 ಕೀರ್ತನೆಗಳು ದೊರೆತು ಪ್ರಕಟವಾಗಿದೆ. ಸಂನ್ಯಾಸಿಗಳಾಗಿದ್ದ ಇವರು ಶ್ರೀ ಮಠದ ಪೂಜಾ ಕಾಲದಲ್ಲಿ ಕನ್ನಡ ಕೀರ್ತನೆಗಳನ್ನು ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು. ಭಜನೆ, ನೃತ್ಯಸೇವೆಯ ಮೂಲಕ ಹರಿಭಕ್ತಿ ಬೆಳವಣಿಗೆಯ ಕ್ರಮವನ್ನು ರೂಢಿಸಿದರು.

ಇವರ ಶಿಷ್ಯರಾದ ವ್ಯಾಸರಾಜರಿಂದ ಹುದಾಸ ಪರಂಪರೆ ಮುಂದುವರಿಯಿತು. ಅಪೇಕ್ಷಿತರಿಗೆ ಅಂಕಿತೋಪದೇಶದ ಮೂಲಕ ದಾಸದೀಕ್ಷೆ ನೀಡುವ ಸಂಪ್ರದಾಯವನ್ನು ಆರಂಭಿಸಿ, ಗುರು-ಶಿಷ್ಯ ಪರಂಪರೆ ಮುಂದುವರಿಯುವ ಹಾಗೆ ಮಾಡಿದರು. ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರೇ ಮೊದಲಾದವರಿಂದ ಹರಿದಾಸ ಪರಂಪರೆ ಮುಂದುವರಿಯಿತು.

ಇವರಲ್ಲಿ ಪುರಂದರದಾಸರ ಕೃತಿಗಳು ಸಾಹಿತ್ಯ, ಸಂಗೀತ, ಭಕ್ತಿ, ತತ್ತ್ವಜ್ಞಾನಗಳೆಲ್ಲ ದೃಷ್ಟಿಯಿಂದಲೂ ಉತ್ಕೃಷ್ಟವಾಗಿದ್ದು ‘ಪುರಂದರೋಪನಿಷತ್ತು’ ಎಂಬ ಮಾನ್ಯತೆಯನ್ನು ಹೊಂದಿದೆ. ಬೇಡ ಅಥವಾ ಕುರುಬ ಜನಾಂಗಕ್ಕೆ ಸೇರಿದ ಕನಕದಾಸರು ಪುರಂದರರ ಸಮಕಾಲೀನರಾಗಿ, ಒಡನಾಡಿಗಳಾಗಿ ಅಪರೋಕ್ಷ ಜ್ಞಾನಿಗಳೆಂದು ಪ್ರಸಿದ್ಧರಾಗಿದ್ದಾರೆ.

ಕೀರ್ತನೆಗಳೊಡನೆ ಸ್ವತಂತ್ರ ಕಾವ್ಯಗಳನ್ನು ಬಡವರ ಪರವಾಗಿ ನಿಂತ ರಾಮಧಾನ್ಯಚರಿತೆಯನ್ನು ಅವರು ರಚಿಸಿದ್ದಾರೆ. ಹರಪನಹಳ್ಳಿ ಭೀಮವ್ವ, ಹೆಳವನ ಕಟ್ಟೆ ಗಿರಿಯಮ್ಮ ಎಂಬ ಮಹಿಳೆಯರೂ ಹರಿದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.

ಕ್ರಿ.ಶ. ಹದಿನೆಂಟನೆಯ ಶತಮಾನದ ಮಾನವಿಯ ಜಗನ್ನಾಥದಾಸರ ‘ಹರಿಕಥಾಮೃತಸಾರ’ ಅತ್ಯುದಾತ್ತ ಚೇತನವೊಂದರ ಸತತ ಸಾಧನೆಯ ಫಲವಾಗಿ ಮೂಡಿ ಬ೦ದ ಶಾಶ್ವತ ಸಂಪತ್ತೆಂಬ ಪ್ರಶಂಸೆಯನ್ನು ಸಾಹಿತ್ಯ ಮತ್ತು ಆಧ್ಯಾತ್ಮ ಪ್ರಪಂಚದಲ್ಲಿ ಗಳಿಸಿದ್ದು ಇದರ ಅರ್ಧಲಕ್ಷ ಪ್ರತಿಗಳು 20ನೇ ಶತಮಾನದಲ್ಲಿ ಮಾರಾಟವಾಗಿರುವುದು ಇದರ ಜನಪ್ರಿಯತೆಯನ್ನು ಮನವರಿಕೆ ಮಾಡಿಕೊಡುತ್ತದೆ.

ಕಳೆದ ಐದು ಶತಮಾನಗಳಲ್ಲಿ ವಿಕಾಸಗೊಂಡು ಲಭ್ಯವಿರುವ ಹದಿನೈದು ಸಾವಿರ ಕೀರ್ತನೆಗಳನ್ನು ಇತ್ತೀಚೆಗೆ ಕನ್ನಡ ಸಂಸ್ಕೃತಿ ಇಲಾಖೆಯು ಐವತ್ತು ಸಂಪುಟಗಳಲ್ಲಿ – ಮೂವತ್ತು ಸಾವಿರ ಪುಟಗಳಲ್ಲಿ ಪ್ರಕಟಿಸಿರುವುದಲ್ಲದೆ ಈ ಸಂಪುಟಗಳು ಬಹುಬೇಗ ಮಾರಾಟವಾಗಿವೆ ಎಂದರೆ ಸಂತರ ಸಾಹಿತ್ಯದಲ್ಲಿ ಇಂದಿನ ಜನಕ್ಕೂ ಇರುವ ಆಸಕ್ತಿ ಎಷ್ಟೆಂದು ಮನವರಿಕೆಯಾಗುತ್ತದೆ.

ಕರ್ನಾಟಕದ ಒಳಗೆ-ಹೊರಗೆ 700 ಭಜನಾ ಮಂಡಲಿಗಳಿವೆ. ಉಡುಪಿ, ಪಂಢರಪುರ, ತಿರುಪತಿಗಳಲ್ಲಿ ನಡೆಯುವ ರಥೋತ್ಸವಗಳಲ್ಲಿ ಹರಿದಾಸ ಭಜನಾಮಂಡಲಿಗಳ ತಂಡವು ಭಜನೆ ಮಾಡುವ, ನೃತ್ಯ ಗೈಯುವ ದೃಶ್ಯವು ವೈಷ್ಣವ ಸಂತ ಪರಂಪರೆಯ ಜೀವಂತಿಕೆಗೆ ಸಾಕ್ಷಿಯಾಗಿದೆ. ರಂಗವಿಠಲ, ವಿಜಯ ಸಂಪದ, ಹರಿದಾಸ ವಾಹಿನಿ ಎಂಬ ಮಾಸಪತ್ರಿಕೆಗಳು ಕನ್ನಡ ಹರಿದಾಸ ಸಾಹಿತ್ಯ ಪ್ರಚಾರದಲ್ಲಿ ನಿರತವಾಗಿವೆ.

ಕನ್ನಡ ಸಂತ ಸಾಹಿತ್ಯಕ್ಕೆ ಶಂಕರಾಚಾರ್ಯರ ಅದ್ವೈತ ಸಂಪ್ರದಾಯದ ಹಾಡುಗಳನ್ನು ಬರೆದ ಚಿದಾನಂದವಧೂತ, ವೆಂಕಟದಾಸಾರ್ಯ, ನರಸಾರ್ಯ, ಪಾವಂಜೆ ಲಕ್ಷ್ಮೀನಾರಾಯಣಪ್ಪ, ಕೆಳದಿ ವೆಂಕಣ್ಣ ಮೊದಲಾದವರೂ, ರಾಮಾನುಜಾಚಾರ್ಯರ ಶ್ರೀವೈಷ್ಣವ ಪರಂಪರೆಗೆ ಸೇರಿದ ನಾರಾಯಣಶರ್ಮ, ರಂಗದಾಸ, ಯದುಗಿರಿಯಮ್ಮ, ಆಸೂರಿ ರಾಮಸ್ವಾಮಿಯೇ ಮೊದಲಾದವರು ವಿಫುಲವಾಗಿ ಕೀರ್ತನ ಸಾಹಿತ್ಯವನ್ನು ರಚಿಸಿ ದಾಸ ಸಾಹಿತ್ಯವನ್ನು ಪುಷ್ಟಿಗೊಳಿಸಿದ್ದಾರೆ.

ಕರ್ನಾಟಕದ ನೆರೆ ರಾಜ್ಯವಾಗಿರುವ ಆಂಧ್ರಪ್ರದೇಶದಲ್ಲಿ ತೆಲುಗು ಭಾಷೆಯಲ್ಲಿ ಕ್ರಿ.ಶ. ಹದಿನೈದನೆಯ ಶತಮಾನದಲ್ಲಿ ತಾಳ್ಳಪಾಕಂ ಅನ್ನಮಾಚಾರ್ಯರಿಂದ ಸಂತ ಸಾಹಿತ್ಯೋದಯವಾಯಿತು ಎನ್ನಬಹುದು. ಇವರು ಮೂವತ್ತೆರಡು ಸಾವಿರ ‘ಭಕ್ತಿಗೀತೆ’ ಗಳನ್ನು ರಚಿಸಿರುವರು. ಇವರ ಕೀರ್ತನೆಗಳನ್ನು ತಾಮ್ರಪಟಗಳ ಮೇಲೆ ಬರೆದಿಡಲಾಗಿದೆ. ಇವರದು ಬಹುತೇಕ ಸ್ತೋತ್ರರೂಪದ ಸಾಹಿತ್ಯ.

ಕ್ರಿ.ಶ. ಹದಿನಾರು – ಹದಿನೇಳನೆಯ ಶತಮಾನದಲ್ಲಿ ಜೀವಿಸಿದ್ದ ತ್ಯಾಗರಾಜರು ವಾಗ್ಗೇಯಕಾರರೂ ಹೌದು, ವಿಷ್ಣುಭಕ್ತರೂ ಹೌದು. ಸಂಗೀತವನ್ನು ಭಕ್ತಿಯ ಬೆಳವಣಿಗೆಗೆ ಮಾಧ್ಯಮವನ್ನಾಗಿ ಮಾಡಿಕೊಂಡವರು ತ್ಯಾಗರಾಜರು. ‘ಸಂಗೀತ ಜ್ಞಾನ ವಿಹೀನಲಕು ಮೋಕ್ಷಮು ಗಲದಾ’ ಎಂದು ಪ್ರಶ್ನಿಸಿರುವ ತ್ಯಾಗರಾಜರು ಹಿರಿಯ ರಾಮಭಕ್ತರಾಗಿದ್ದರು.

ಹದಿಮೂರು ಕೋಟಿ ರಾಮನಾಮ ಬರೆದಿಟ್ಟ ಚರಿತ್ರೆ ಇವರದು. ಇವರು ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ. ಇವರ ಸಮಕಾಲೀನರೇ ಆದ ಕ್ಷೇತ್ರಜ್ಞನು ‘ಮುವ್ವ ಗೋಪಾಲ ಪದಂ’ ರಚಿಸಿದ್ದು ಸಂತ ಸಾಹಿತ್ಯ ಪರಂಪರೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರ್ನಾಟಕ ಸಂಗೀತ ಕಚೇರಿಗಳಲ್ಲಿ ತ್ಯಾಗರಾಜರ ಕೃತಿಗಳು ಇಂದಿಗೂ ವಿಜೃಂಭಿಸುತ್ತಿವೆ.

ಆಂಧ್ರಪ್ರದೇಶದ ತಿರುಪತಿ ದೇವಾಲಯವು ‘ದಾಸ ಸಾಹಿತ್ಯ ಪ್ರಾಜೆಕ್ಟ್’ ಎಂಬ ವಿಭಾಗದ ಮೂಲಕ ಹರಿದಾಸ ಸಾಹಿತ್ಯ ಸಂಪ್ರದಾಯಗಳ ಪ್ರಚಾರವನ್ನು ಕೈಗೊಂಡಿದೆ. ಈ ವಿಭಾಗದ್ದು ಪ್ರತಿವರ್ಷ ಏರ್ಪಡಿಸುವ ‘ಮೆಟ್ಟಿಲೋತ್ಸವ’ ದಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ವಿಷ್ಣು ಭಕ್ತರೂ, ದಾಸಪಂಥೀಯ ಸಂಘದ ಸದಸ್ಯರೂ ಭಾಗವಹಿಸಿ ಭಜನೆ – ನೃತ್ಯ – ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಈ ಸಂಸ್ಥೆಯು ದಕ್ಷಿಣ ಭಾರತದ ಹಲವೆಡೆಗಳಲ್ಲಿ ದಾಸೋತ್ಸವಗಳನ್ನು ಏರ್ಪಡಿಸಿ ದಾಸ ಸಾಹಿತ್ಯವನ್ನು ಪ್ರಚಾರ ಮಾಡುತ್ತಿದೆ.

ಮಹಾರಾಷ್ಟ್ರದ ರಾಜ್ಯ ಭಾಷೆ ಮರಾಠಿ. ವಿಠಲೋಪಾಸಕರಾಗಿ ಪಂಢರಪುರದ ವಿಠ್ಠಲನನ್ನು ಆರಾಧ್ಯ ದೈವವನ್ನಾಗಿ ಮಾಡಿಕೊಂಡ ಮರಾಠಿ ಸಂತರ ಸಾಹಿತ್ಯ ಚರಿತ್ರೆ ಕ್ರಿ.ಶ. ಹದಿಮೂರನೆಯ ಶತಮಾನದಿಂದ ಆರಂಭವಾಗುತ್ತದೆ. ಈ ಶತಮಾನದ ಸಂತ ಕವಿ ಜ್ಞಾನೇಶ್ವರ. ಇವನು ‘ವಾರಕರಿ’ ಎಂಬ ದಾಸ ಪಂಥವನ್ನು ಸ್ಥಾಪಿಸಿದನು.

ವಿಷ್ಣು (ವಿಠ್ಠಲ) ಭಕ್ತಿಗೀತೆಗಳೊಡನೆ ಭಗವದ್ಗೀತಾ ವ್ಯಾಖ್ಯಾನವಾದ ‘ಜ್ಞಾನೇಶ್ವರಿ ಮತ್ತು ಅಮೃತಾನುಭವ’ ಗ್ರಂಥಗಳನ್ನು ರಚಿಸಿದನು. ಅಮೃತಾನುಭವವು ಶಂಕರರ ಸಿದ್ಧಾಂತದ ಮೇಲೆ ರೂಪುಗೊಂಡಿದೆ.

ಜ್ಞಾನೇಶ್ವರನ ಸಮಕಾಲೀನವಾದ ನಾಮದೇವ ದರ್ಜಿ ಗುಂಪಿಗೆ ಸೇರಿದ್ದು ವಿಪುಲ ಸಂಖ್ಯೆಯಲ್ಲಿ ಭಕ್ತಿಗೀತೆಗಳನ್ನು ವಿಠಲನನ್ನು ಕುರಿತು ರಚಿಸಿದನು. ಈ ಹಾಡುಗಳನ್ನು ಹಾಡಿ ಹಾಡಿ ಪ್ರಚಾರ ಮಾಡಿದನು. ಅನಂತರ ನೃಸಿಂಹ ಸರಸ್ವತಿ, ಜನಾರ್ದನ ಸರಸ್ವತಿಯರು ಸ್ತೋತ್ರ ಗೀತೆಗಳನ್ನು ರಚಿಸಿ ಭಕ್ತಿ ಪಂಥವನ್ನು ಮಹಾರಾಷ್ಟ್ರದಲ್ಲಿ ಮುಂದುವರಿಸಿದರು.

ಕ್ರಿ.ಶ. ಹದಿನಾರನೆಯ ಶತಮಾನದಲ್ಲಿ ಏಕನಾಥ ಹಾಗೂ ದಾಸೋಪಂತರು ಭಕ್ತಿಗೀತೆಗಳನ್ನೂ, ಗೀತಾ ವ್ಯಾಖ್ಯಾನ ಗಂಥಗಳನ್ನೂ ರಚಿಸಿದರು. ಏಕನಾಥನ ʼಏಕನಾಥೀ ಭಾಗವತ’ ಮರಾಠಿ ಸಾಹಿತ್ಯದ ಕಾವ್ಯರತ್ನವೆಂಬ ಪ್ರಶಂಸೆ ಪಡೆದಿದೆ. ಏಕನಾಥನು ಭಕ್ತನಾಗಿದ್ದುದರೊಡನೆ ಸಮಾಜ ಸುಧಾರಕನಾಗಿದ್ದನು.

ಸಂಪ್ರದಾಯಸ್ಥರ ಆಗ್ರಹಕ್ಕೆ ಪಾತ್ರನಾದನು. ಏಕನಾಥನು, ‘ಸಂಸ್ಕೃತ ದೇವ ಭಾಷೆಯಾದರೆ, ಮರಾಠಿ ಚೋರ ಭಾಷೆಯೇ?’ ಎಂದು ಪ್ರಶ್ನಿಸುವ ಮೂಲಕ ಮರಾಠಿಯನ್ನು ದೇವಭಾಷೆಯನ್ನಾಗಿಸುವ ಮೂಲಕ ಭಕ್ತಿ ಸಾಹಿತ್ಯವನ್ನು ಹರಡಿದನು. ಏಕನಾಥನ ಮೊಮ್ಮಗ ಮುಕ್ತೇಶ್ವರ (ಕ್ರಿ.ಶ. 1608) ಸಂಸ್ಕೃತ ಛಂದೋರೂಪಗಳಲ್ಲಿ ಭಕ್ತಿಗೀತೆಗಳನ್ನು ಮರಾಠಿಯಲ್ಲಿ ರಚಿಸಿದನು. ಅನಂತರ ರಮಾವಲ್ಲಭದಾಸ್‌, ಶಿವಕಲ್ಯಾಣ ಹಾಗೂ ಲೋಲುಂಬ ರಾಜರು ಭಕ್ತಿ ಸಾಹಿತ್ಯವನ್ನು ರಚಿಸಿದರು.

ಕ್ರಿ.ಶ. ಹದಿನೇಳನೆಯ ಶತಮಾನದ ಸಂತ ತುಕಾರಾಮ್ ಮರಾಠಿ ಭಕ್ತಿ ಸಾಹಿತ್ಯ ಸೌಧಕ್ಕೆ ಕಳಶವಿಟ್ಟನು. ತುಕರಾಂ ಕವಿ, ಭಕ್ತ, ಪವಾಡ ಪುರುಷನೆಂದು ಪ್ರಸಿದ್ಧ. ಇವನು ಆಶುಕವಿ. ಇವನ ಸಮಕಾಲೀನನಾದ ರಾಮದಾಸ್ ಭಕ್ತ ಕವಿಯಾಗಿದಿದ್ದು, ರಾಜಕೀಯ ವಲಯದಲ್ಲಿ ವಿಶೇಷ ಪ್ರಭಾವವನ್ನು ಹೊಂದಿದ್ದನು. ಶಿವಾಜಿಗೆ ಆಪ್ತನಾಗಿದ್ದನು ಇವನ ‘ದಾಸಬೋಧ’ ಜನಪ್ರಿಯತೆಯನ್ನು ಚೆನ್ನಾಗಿ ಗಳಿಸಿದ್ದಿತು.

ಮರಾಠಿಯ ಬಹುತೇಕ ಸಂತರು ಓವಿ ಮತ್ತು ಆಭಂಗ ಛಂದೋರೂಪದಲ್ಲಿ ಭಕ್ತಿಗೀತೆಗಳನ್ನು ಬರೆದಿರುವುದರಿಂದ ಇದನ್ನು ಓವಿ ಮತ್ತು ಆಭಂಗಗಳೆಂದೇ ಕರೆಯುವ ವಾಡಿಕೆ ಇದೆ.

ಭಾರತದ ಉತ್ತರ ರಾಜ್ಯಗಳಲ್ಲಿ ವೈಷ್ಣವ ಭಕ್ತಿ ಸಾಹಿತ್ಯ ಸಂತರ ಮೂಲಕ ಹಾಗೂ ಸಾಂಪ್ರದಾಯಿಕ ಕವಿಗಳ ಮೂಲಕ ದಕ್ಷಿಣ ಭಾರತಕ್ಕಿಂತ ಅಧಿಕ ಸಂಖ್ಯೆಯಲ್ಲಿ ರಚಿತವಾಗಿದೆ. ಉತ್ತರ ಭಾರತದ ಬಂಗಾಳದಲ್ಲಿ ವೈಷ್ಣವ ಸಂತರ ಪರಂಪರೆ ಕ್ರಿ.ಶ. ಹದಿನೈದನೆಯ ಶತಮಾನದಿಂದ ಇಂದಿನವರೆಗೆ ಮುಂದುವರಿದಿರುವುದು ಗಮನಾರ್ಹ.

ಮಧ್ವಾಚಾರ್ಯರ ಪ್ರಭಾವದಿಂದ ಅವರ ಸಿದ್ಧಾಂತದ ಬಹು ಅಂಶಗಳನ್ನು ಮೈಗೂಡಿಸಿಕೊಂಡ ವಲ್ಲಭಾಚಾರ್ಯರು ಹಾಗೂ ಚೈತನ್ಯರು ಆರಂಭಿಸಿದ ಸಂತರ ಪರಂಪರೆಯನ್ನು ಸೃಷ್ಟಿಸುವುದರಲ್ಲಿ ಸಫಲರಾದರು. ಇವರದು ಕೃಷ್ಣಭಕ್ತಿ. ಇವರಿಗಿಂತ ಪೂರ್ವದಲ್ಲಿ ಮಾಲಾಧರವಸು ಬಂಗಾಳಿಯಲ್ಲಿ ʼಶ್ರೀಕೃಷ್ಣ ವಿಜಯ’ವನ್ನು ರಚಿಸಿರುವುದು ಉಲ್ಲೇಖಾರ್ಹ.

ಕ್ರಿ.ಶ ಹದಿನೈದನೆಯ ಶತಮಾನದಲ್ಲಿ ಜನಿಸಿದ ಶ್ರೀ ಚೈತನ್ಯ ಪ್ರಭುಗಳು ತಾವು ವಿಷ್ಣು ಭಕ್ತರಾಗುವುದರೊಡನೆ ಇತರರನ್ನೂ ಕೃಷ್ಣಭಕ್ತನನ್ನಾಗಿ ಮಾಡಿದರು. “ಕೃಷ್ಣಕೀರ್ತನೆ – ಕೃಷ್ಣನೃತ್ಯ – ಕೃಷ್ಣಜಪ’ ದ ಮೂಲಕ ಕೃಷ್ಣಭಕ್ತಿ ಪ್ರಜ್ಞೆಯನ್ನು ಚೈತನ್ಯರು ಬೆಳೆಸಿದರು. ಇವರ ಶಿಷ್ಯರಾದ ಗೋಸ್ವಾಮಿಗಳು ನರೋತ್ತಮದಾಸ, ಶ್ಯಾಮಾನಂದ ದಾಸ, ರಘುನಾಥದಾಸ ಮೊದಲಾದವರು ಕೆಳವರ್ಗದಿಂದ ಬಂದವರಾಗಿದ್ದು ಕೃಷ್ಣ ನಾಮಾಮೃತದಿಂದ ಪಾವನರಾದರು.

ಬಂಗಾಳಿ ಸಂತರು ಪ್ರಾಚೀನ ಕಾಲದಲ್ಲಿ ರಚಿಸಿದ ಎರಡು ಸಾವಿರಕ್ಕೂ ಅಧಿಕವಾದ ಪದಗಳು ದೊರೆತಿವೆ. ಕೃಷ್ಣಭಕ್ತಿ ಇಲ್ಲಿ ಬಹುಬಗೆಯಲ್ಲಿ ವಿಜೃಂಭಿಸಿದೆ. ಬಂಗಾಲದ ಸಂತರು ಚೈತನ್ಯ ಪ್ರಭುಗಳ ಅನುಯಾಯಿಗಳಾಗಿದ್ದು ಕೃಷ್ಣನ ಭಜನೆ, ಕೃಷ್ಣದೇವಾಲಯಗಳ ಸ್ಥಾಪನೆ, ಪುರಿಯ ಜಗನ್ನಾಥನ ರಥಯಾತ್ರೆಯಲ್ಲಿ ಭಾಗವಹಿಸುವುದು, ಭಾಗವತ ಪುರಾಣ ಕಥೆಗಳ ಉಪನ್ಯಾಸದ ಮೂಲಕ ಕೃಷ್ಣಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಿದರು.

ಶ್ರೀ ಚೈತನ್ಯ ಪ್ರಭುಗಳ ಸಂತ ಪರಂಪರೆಯಲ್ಲಿ ಶ್ರೀ ಭಕ್ತಿವಿನೋದ ಠಾಕುರರು ಬಹು ದೊಡ್ಡ ಸಾಧಕರು. ಇವರು ಒಂದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳನ್ನು ರಚಿಸಿ, ಭಕ್ತಿ ಪ್ರಚಾರಕ್ಕಾಗಿ ʼಸಜ್ಜನ ತೋಷಿಣಿ’ ಮಾಸ ಪತ್ರಿಕೆಯನ್ನು ಆರಂಭಿಸಿ ‘ಶ್ರೀ ವಿಶ್ವ ವೈಷ್ಣವರಾಜಸಭೆ’ ಯನ್ನು ಸ್ಥಾಪಿಸಿದರು.

ಇವರ ಪುತ್ರರಾದ ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿಯವರು 64 ಮಠಗಳನ್ನು ಸ್ಥಾಪಿಸಿ, 70 ಪುಸ್ತಕಗಳನ್ನು ಬರೆದು, ಕೀರ್ತನ ಸಂಘಗಳ ಮುಂದಾಳತ್ವವನ್ನು ವಹಿಸಿ, ಬೀದಿ ಬೀದಿಗಳಲ್ಲಿ ಮೃದಂಗ ನುಡಿಸುತ್ತಾ ಕೀರ್ತನೆಗಳನ್ನು ಹಾಡುತ್ತಾ ಕೃಷ್ಣಭಕ್ತಿಯನ್ನು ಪ್ರಚಾರ ಮಾಡಿದರು. ಇವರ ತರುವಾಯು ಕ್ರಿ.ಶ. 1896ರಲ್ಲಿ ಜನಿಸಿದ ಶ್ರೀಲ ಪ್ರಭುಪಾದರು ಇಪ್ಪತ್ತನೆಯ ಶತಮಾನದಲ್ಲಿ ಕೃಷ್ಣಭಕ್ತಿ ಪ್ರಚಾರ ಗೈಯಲು 108 ಕೃಷ್ಣ ದೇವಾಲಯಗಳನ್ನು ವಿಶ್ವದಾದ್ಯಂತ ಸ್ಥಾಪಿಸಿದರಲ್ಲದೆ ‘ಇಸ್ಕಾನ್’ ಸಂಸ್ಥೆಯನ್ನು ಹುಟ್ಟುಹಾಕಿದರು.

ಹದಿಮೂರು ಬಾರಿ ವಿಶ್ವ ಪರ್ಯಟನೆ ಗೈದು ಕೃಷ್ಣ ನಾಮಾಮೃತವನ್ನು ಪ್ರಚಾರ ಮಾಡಿದ್ದಲ್ಲದೆ ಅಸಂಖ್ಯಾತ ಸಾಮಾಜಿಕ ಕಾರ್ಯಗಳನ್ನು ಮಾಡಿದರು.

ಇವರ ನೇತೃತ್ವದಲ್ಲಿ ಇಸ್ಕಾನ್ ಬಹುಮುಖಿಯಾಗಿ ವಿಕಾಸಗೊಂಡಿರುವುದಲ್ಲದೆ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಜೀವನವನ್ನೇ ಮುಡುಪಾಗಿಟ್ಟ ದೊಡ್ಡ ವಿದ್ಯಾವಂತ ತಂಡ ಟೊಂಕ ಕಟ್ಟಿ ಸೇವೆಗೆ ನಿಂತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ‘ಇಸ್ಕಾನ್’ನ ಅಕ್ಷಯ ಪಾತ್ರೆ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪುಷ್ಟಿಯನ್ನು ನೀಡುತ್ತಿದೆ.

ಓರಿಸ್ಸಾ ರಾಜ್ಯದ ಜನರ ಭಾಷೆ ಒರಿಯಾ. ಒರಿಸ್ಸಾ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಪುರಿಯ ಜಗನ್ನಾಥ ಮತ್ತು ಅವನ ರಥಯಾತ್ರೆ ಹಾಗೂ ಜಯದೇವನ ‘ಗೀತ ಗೋವಿಂದʼ, ಒರಿಸ್ಸಾ ರಾಜ್ಯದ ಸಂತರ ಮೇಲೆ ಕರ್ನಾಟಕದ ನರಹರಿ ತೀರ್ಥರ ಹಾಗೂ ರಾಮಾನುಜಾಚಾರ್ಯರ ಪ್ರಭಾವ ಉಂಟೆಂಬುದನ್ನು ಹಲವು ವಿದ್ವಾಂಸರು ಗುರುತಿಸಿದ್ದಾರೆ.

ಬಲರಾಮದಾಸ, ಜಗನ್ನಾಥದಾಸ, ಅನಂತದಾಸ, ಯಶೋವಂತ ದಾಸ, ಅಚ್ಯುತಾನಂದ ದಾಸ ಎಂಬ ಐವರು ಸಂತರು ಬಹು ಪ್ರಸಿದ್ಧವಾಗಿದ್ದು ಇವರನ್ನು ‘ಪಂಚಸಖ’ ರೆಂದು ಸಮಾಜ ಗುರುತಿಸಿದೆ. ಇವರು ವೈಷ್ಣವಜ್ಞಾನ ಪ್ರಸಾರಕ್ಕೆ ಸಾಧಕವಾದ ಗ್ರಂಥಗಳನ್ನು ಗೀತೆಗಳನ್ನು ಒರಿಯಾ ಭಾಷೆಯಲ್ಲಿ ರಚಿಸಿದ್ದಾರೆ.

ಒರಿಸ್ಸಾ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ‘ಭಾಗವತ ಘರ್’ ಎಂಬಂತಹ ಕಟ್ಟಡ ನಿರ್ಮಿಸಿ, ಅಲ್ಲಿ ಜಗನ್ನಾಥದಾಸರ ಭಾಗವತ ಗ್ರಂಥಗಳನ್ನಿಟ್ಟು ಪೂಜಿಸುವ ಪರಿಪಾಠವಿದೆ. ಜೊತೆಗೆ ಅದರ ಪಾರಾಯಣ, ಪ್ರವಚನ ನಿತ್ಯ ನಡೆಯುತ್ತದೆ. ಜಗನ್ನಾಥದಾಸರಿಗೆ ‘ಅತಿವರ್ಧಿ’ ಎಂಬ ಬಿರುದನ್ನು ಚೈತನ್ಯರು ನೀಡಿದ್ದರು.

ಜನಾರ್ದನದಾಸ ಗೋಪಿಯರ ವಿರಹವನ್ನು ‘ಗೋಪಿ ಭಾಷಾ’ ದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕ್ರಿ.ಶ. ಹದಿಮೂರರಿಂದ ಹದಿನಾರನೆಯ ಶತಮಾನದವರೆಗೆ ಒರಿಸ್ಸಾದಲ್ಲಿ ವೈಷ್ಣವ ಸಂತರು ವಿಜೃಂಭಿಸಿದರು.

ಭಾರತದ ಈಶಾನ್ಯ ಮೂಲೆಯಲ್ಲಿರುವ ರಾಜ್ಯ ಅಸ್ಸಾಂ. ಅಸ್ಸಾಮೀಯ ಸಾಹಿತ್ಯದ ನಿಜವಾದ ಸ್ಥಾಪಕ ಎಂದೇ ಖ್ಯಾತರಾದ ಶಂಕರದೇವ ಮೂವತ್ತು ಕೃತಿಗಳನ್ನು ರಚಿಸಿದ್ದು ಇದರಲ್ಲಿ ‘ಕೀರ್ತನಾ ಘೋಷʼ ಉತ್ಕೃಷ್ಟವಾಗಿದ್ದು ಅವರ ಭಕ್ತಿ ಚೈತನ್ಯದ ಕುರುಹಾಗಿದೆ. ಇವರ ಶಿಷ್ಯನಾದ ಮಾಧವ ದೇವನ ‘ವೈಷ್ಣವ ಕೀರ್ತನ’ ಮತ್ತು ‘ವರ್ಜಿತ’ಗಳಲ್ಲಿ ಇವನ ವಿಷ್ಣುಭಕ್ತಿ ಪ್ರತಿಬಿಂಬಿತವಾಗಿದೆ.

‘ಹರಿಭಕ್ತಿಯೊಂದೇ ಈ ಪ್ರಪಂಚದ ಎಲ್ಲ ಕಷ್ಟಗಳ ಬಿಡುಗಡೆಗೆ ಸಾಧನ, ಎಂದಿದ್ದಾನೆ. ಅಸ್ಸಾಮಿಯ ಭಾಷಾ ಸಾಹಿತ್ಯದಲ್ಲಿ ಕೃಷ್ಣಭಕ್ತಿಗೆ ಮೇಲಾದ ಸ್ಥಾನವಿದ್ದು ಇದು ಇತರ ರಾಜ್ಯಭಾಷಾ ಸಾಹಿತ್ಯವನ್ನು ಮೀರಿಸುತ್ತದೆ. ವೈಷ್ಣವ ಕವಿಗಳು ಪದಛಂದಸ್ಸೆಂಬ ದ್ವಿಪದಿಯಲ್ಲಿ ಗ್ರಂಥ ರಚನೆ ಮಾಡಿದ್ದಾರೆ.

ವೈಷ್ಣವ ಭಕ್ತಿ ಚಳವಳಿಯ ಪ್ರಭಾವದಿಂದ ಹುಟ್ಟಿಕೊಂಡ ‘ಚರಿತ ಪ್ರಥಿ’ ಗಳೆಂಬ ಸಾಹಿತ್ಯ ರೂಪದಲ್ಲಿ ಸಂತರ ಜೀವನ ಚರಿತ್ರೆಗಳನ್ನು ಚಿತ್ರಿಸಲಾಗಿದೆ. ಅಸ್ಸಾಮಿಯಾದ ‘ವಧಕಾವ್ಯ’ಗಳು ಧರ್ಮವು ಅಧರ್ಮವನ್ನು ಹೇಗೆ ನಾಶಪಡಿಸುವುದೆಂಬುದನ್ನು ಸಾಂಕೇತಿಕವಾಗಿ ನಿರೂಪಿಸುತ್ತದೆ.

ಕೃಷ್ಣನ ಬಾಲಲೀಲೆಗೆ ಸಂಬಂಧಿಸಿದ ಧರ್ಮಪ್ರಧಾನವೂ ಭಕ್ತಿ ಭೂಯಿಷ್ಠವೂ ಆದ ‘ವರ್ಜಿತಗಳನ್ನು ಶಂಕರದೇವ, ಮಾಧವದೇವ ಹಾಗೂ ಅವರ ಶಿಷ್ಯರು ರಚಿಸಿದ್ದಾರೆ. ಕ್ರಿ.ಶ. ಹದಿನೈದನೆಯ ಶತಮಾನದಲ್ಲಿ ವೈಷ್ಣವ ಭಕ್ತಿ ಸಾಹಿತ್ಯ ಇಲ್ಲಿ ರಚನೆಗೊಂಡಿತು ಎಂದು ಹೇಳಬಹುದು.

ಗುಜರಾತಿನ ವೈಷ್ಣವ ಸಂತ ಪರಂಪರೆ ಹಿರಿದಾದುದು. ಕ್ರಿ.ಶ. ಹದಿನಾರನೆಯ ಶತಮಾನದ ಮೀರಾಬಾಯಿ ಗುಜರಾತಿನ ಭಕ್ತಿ ಸಾಹಿತ್ಯದ ಬೆಳವಣಿಗೆಗೆ ಕಾರಣಳಾದವಳು. ಈಕೆ ಗುಜರಾತಿ ಭಾಷೆಯಲ್ಲಿ ಭಕ್ತಿ ಸಾಹಿತ್ಯವನ್ನು ರಚಿಸಿದ್ದರೂ ಹಿಂದೀ ಭಾಷೆಯವರು ಈಕೆಯನ್ನು ತಮ್ಮ ಕವಿಯಿತ್ರಿ ಎಂದು ಗೌರವಿಸುತ್ತಾರೆ.

ಬಾಲ್ಯದಿಂದಲೂ ಕೃಷ್ಣಭಕ್ತೆಯಾಗಿದ್ದ ಮೀರಾ ಯೌವ್ವನೋದಯದಲ್ಲಿಯೇ ವಿಧವೆಯಾದ ಮೇಲೆ ಅವಳು ವಿರಕ್ತಳಾಗಿ ಸಂಪೂರ್ಣವಾಗಿ ತನ್ನ ಮನಸ್ಸನ್ನು ಕೃಷ್ಣನ ಪೂಜೆ, ಭಜನೆ, ಭಕ್ತಿ ಸಾಹಿತ್ಯ ರಚನೆಗೆ ಅರ್ಪಿಸಿಕೊಂಡಳು. ಅರಮನೆಯ ವೈಭವದ ಜೀವನವನ್ನು ತ್ಯಜಿಸಿ ಮೀರಾ ಕೊನೆಯವರೆಗೆ ದ್ವಾರಕೆಯಲ್ಲಿ ನೆಲೆಸಿ ಕೃಷ್ಣನ ಭಕ್ತಿಯಲ್ಲಿ ಜನ್ಮವನ್ನು ಸಾರ್ಥಕ ಪಡಿಸಿಕೊಂಡಳು.

ಮೀರಾ ತುಲಸಿದಾಸರೊಡನೆ ಭಕ್ತಿ ಸಂಭಾಷಣೆಯನ್ನು ನಡೆಸುತ್ತಿದ್ದಳು. ‘ಗಿರಿಧರ’ ಅಂಕಿತದಲ್ಲಿ ರಚನೆಯಾಗಿರುವ ‘ಮೀರಾಭಜನೆ’ ಇಂದಿಗೂ ಭಾರತದಾದ್ಯಂತ ಪ್ರತಿಧ್ವನಿಸುತ್ತಿದೆ. ಮೀರಾ ಕೃಷ್ಣ ದೇವಾಲಯಗಳಲ್ಲಿ ನೃತ್ಯವನ್ನು ಮಾಡಿ ಭಕ್ತಿಯನ್ನು ಸಮರ್ಪಿಸುತ್ತಿದ್ದಳು.

ಮೀರಳ ಸಾಹಿತ್ಯದ ತುಂಬ ಮಧುರ ಭಕ್ತಿ ಭಾವ ತುಂಬಿ ತುಳುಕಿದೆ. ಜನ್ಮ ಜನ್ಮಗಳಲ್ಲಿ ಕೃಷ್ಣಭಕ್ತಿ ತನಗೆ ದೊರಕಲೆಂದು ಹಾರೈಸಿದ ಮೀರಾ, ಪ್ರಪಂಚದಲ್ಲಿರುವ ಎಲ್ಲ ಸ್ತ್ರೀ ಪುರುಷರೂ ಗೋಪಿಕೆಯರೇ, ಕೃಷ್ಣನೊಬ್ಬನೆ ಪುರುಷ ಎಂದು ಹೇಳುವುದರ ಮೂಲಕ ಭಕ್ತಿ ಭಾವವನ್ನು ವ್ಯಕ್ತಪಡಿಸುತ್ತ, ಜೀವರ ದಾಸತ್ವವನ್ನು ಎತ್ತಿ ಹಿಡಿದಿದ್ದಳು.

ವಲ್ಲಭಾಚಾರ್ಯರ ಪ್ರಭಾವದಿಂದ ಗುಜರಾತ್‌ ನಲ್ಲಿ ರಾಮ, ಕೃಷ್ಣರ ಭಕ್ತಿ ಸಾಹಿತ್ಯ ವಿಕಾಸವಾಯಿತು. ವಿಠಲನಾಥ ಗೋಪಾಲದಾಸ, ನರಸಿಂಹ ಮೆಹ್ತ ಮೊದಲಾದ ಸಂತರು ಇಲ್ಲಿ ಸಂತ ಸಾಹಿತ್ಯವನ್ನು ವಿಕಾಸಗೊಳಿಸಿದರು. ನರಸಿಂಹನ ‘ಶೃಂಗಾರಮಾಲಾ’ 740 ಪದಗಳನ್ನುಳ್ಳ ಕೃತಿ. ನರಸಿಂಹನು ಮೀರಳಂತೆ ಮಧುರ ಭಕ್ತಿಯನ್ನೆ ಪ್ರಕಟಿಸಿದ್ದಾನೆ.

ಇವನ ‘ದಾಸ ಸಹಸ್ರಪದಿ’ ಯು ಭಾಗವತವನ್ನು ಆಧರಿಸಿದ ಭಕ್ತಿಭಾವಗೀತೆ. ‘ಶ್ರೀಕೃಷ್ಣ ಜನ್ಮ, ಬಾಲಲೀಲಾ, ನಾಗದಮನ, ದಾನಲೀಲ, ಮಾನಲೀಲ’ ಮುಂತಾದ ಕೃತಿಗಳಲ್ಲಿ ಭಕ್ತಿ ಮಡುಗಟ್ಟಿದೆ. ಪ್ರಭಾತೀಯ ಛಂದಸ್ಸಿನ ಇವನ ಗೀತೆಗಳನ್ನು ಜನ ಇಂದಿಗೂ ಹಾಡುತ್ತಿದ್ದಾರೆ.

ಕ್ರಿ.ಶ 19ನೇ ಶತಮಾನದಲ್ಲಿ ರಾಮಾನುಜಾಚಾರ್ಯರ ಪ್ರಭಾವದಿಂದ ಅವರ ಸಿದ್ಧಾಂತದ ತತ್ತ್ವಗಳನ್ನು ಅಳವಡಿಸಿಕೊಂಡ ಸಹಜಾನಂದನು ಭಕ್ತಿ ಸಾಹಿತ್ಯವನ್ನು – ಮಾರ್ಗವನ್ನು ಗುಜರಾತಿನ ಹಳ್ಳಿ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿದನು. ಇವನ ಶಿಷ್ಯರಾದ ಮುಕ್ತಾನಂದ, ಬ್ರಹ್ಮಾನಂದ, ಪ್ರೇಮಾನಂದ ಸಖಿ ಅವರು ನೈತಿಕ ಪದಗಳನ್ನು, ಗರಬಿಗಳನ್ನು ರಚಿಸಿದ್ದು ಇವು ಭಕ್ತಿಪೂರ್ಣವಾಗಿವೆ.

ಭಾರತದ ಮಧ್ಯಪ್ರದೇಶ, ಉತ್ತರ ಪ್ರದೇಶವೇ ಮೊದಲಾದ ಹನ್ನೊಂದು ಪ್ರಾಂತ್ಯಗಳ ಭಾಷೆಯಾಗಿರುವ ಹಿಂದಿ ಭಾಷೆಯಲ್ಲಿ – ರಾಜ್ಯಗಳಲ್ಲಿ ಸಂತರಿಗೆ ಕೊರತೆ ಇಲ್ಲ. ಕ್ರಿ.ಶ. ಎಂಟನೆಯ ಶತಮಾನದಿಂದ ಹಿಂದೀ ಭಾಷಾ ಸಾಹಿತ್ಯ ದೊರೆತಿದ್ದು ಇಲ್ಲಿಯ ಭಕ್ತಿ ಸಾಹಿತ್ಯದಲ್ಲಿ ರಾಮಭಕ್ತಿ ವಿಶೇಷವಾಗಿ ಮಿನುಗಿದೆ.

ಕ್ರಿ.ಶ. ಹದಿನೈದನೆಯ ಶತಮಾನದ ರಮಾನಂದರಿಂದ ಹಿಂದಿಯಲ್ಲಿ ಭಕ್ತಿ ಸಾಹಿತ್ಯ – ಸಂತ ಸಾಹಿತ್ಯ ಆರಂಭವಾಯಿತು. ರಮಾನಂದರ ಭಕ್ತಿಗೀತೆಗಳಲ್ಲಿ ಮೋಕ್ಷವು ಎಲ್ಲ ಜಾತಿ ಮತದವರಿಗೂ ಲಭ್ಯವೆಂದು ಸಾರಿದ್ದಾರೆ. ಇವರ ಶಿಷ್ಯ ವರ್ಗದಲ್ಲಿ ಶೂದ್ರ, ಚಾಂಡಾಲ, ಮಹಮ್ಮದೀಯರೂ, ಸ್ತ್ರೀಯರೂ ಇದ್ದಾರೆ. ಪೀಪಾ, ಧಾನಾ, ಸೇನ್, ಭವಾನಂದ, ದಾಸ್ ಗೀತೆಗಳನ್ನು ರಚಿಸಿದ್ದಾರೆ.

ರಮಾನಂದರ ಶಿಷ್ಯರಲ್ಲಿ ಶ್ರೇಷ್ಠ ಸಂತನೆನಿಸಿಕೊಂಡವನು ಕಬೀರ್ ದಾಸ್. ಕಬೀರ್ ದಾಸ್ ಹಾಡಿದ ಗೀತೆಗಳನ್ನು ಅವರ ಅನಂತರದ ಕಾಲದಲ್ಲಿ ಸಂಕಲಿಸಲಾಯಿತು. ಕಬೀರರ ಹೆಸರಿನಲ್ಲಿ 5000 ಗೀತೆಗಳಿವೆ. ವಿದ್ಯಾವತಿ ಠಾಕುರ, ಸೂರದಾಸ್, ಕೃಷ್ಣದಾಸ್, ಪಯಾಹಾರಿ, ಪರಮಾನಂದ ದಾಸ್‌, ಕುಂಭನ್‌ ದಾಸ್, ಚತುರ್ಭೂದಾಸ್, ಚೀತ್‌ ಸ್ವಾಮಿ, ನಂದದಾಸ್, ಗೋವಿಂದ ದಾಸ್ ಮೊದಲಾದವರು ವಿಪುಲ ಭಕ್ತಿ ಸಾಹಿತ್ಯವನ್ನು ಹಿಂದಿ ಭಾಷೆಯಲ್ಲಿ ರಚಿಸಿದ್ದಾರೆ.

ಸೂರದಾಸರು 75,000 ಶ್ಲೋಕಗಳನ್ನು ರಚಿಸಿದರೆಂದು ಪ್ರತೀತಿ ಇದೆ. ಇದನ್ನು ‘ಸೂರದಾಸರ, ಸೂರಾವಳಿ’ ಎಂದು ಸಂಗ್ರಹಿಸಲಾಗಿದೆ. ಕೇಶವದಾಸ, ಭಗವಾನ್, ಹಿತಹರಿದಾಸ್, ವಿಠಲವಿಪುಲ್, ಬಿಹಾರಿದಾಸ್, ಗದಾಧರ ಭಟ್ಟ, ಭೀಷ್ಮ, ಭಕ್ಷಿ ಹಂಸರಾಜ್, ಮಾನ್ ಮೊದಲಾದವರು ಕೀರ್ತನ ಶೈಲಿಯಲ್ಲಿ ಕೃಷ್ಣ ಭಜನೆಗಳನ್ನು ರಚಿಸಿದ್ದಾರೆ.

ಬೀಬೀ ರತನ್ ಮಹಿಳೆಯಾಗಿದ್ದು ಈಕೆಯ ಕಾಣಿಕೆ ಭಕ್ತಿ ಸಾಹಿತ್ಯಕ್ಕೆ ವಿಪುಲವಾಗಿದೆ. ಹಿಂದಿ ಭಾಷೆಯಲ್ಲಿ ಕ್ರಿ.ಶ. 14ರಿಂದ 17ನೆಯ ಶತಮಾನದವರೆಗಿನ ಕಾಲವನ್ನು ಭಕ್ತಿ ಸಾಹಿತ್ಯ ಯುಗ ಎಂದೇ ಕರೆಯಲಾಗಿದೆ. ತುಲಸಿ ದಾಸರು ಸಂತರಾಗಿದ್ದು, ಇವರು ರಚಿಸಿದ ‘ರಾಮಚರಿತ ಮಾನಸ’ ವಿಶ್ವವಿಖ್ಯಾತವಾಗಿದೆ.

ಛಂದೋವೈವಿಧ್ಯ, ಕಲಾಭಿಜ್ಞತೆ, ನಾದ ಮಾಧುರ್ಯ, ಭಕ್ತಿಭಾವಗಳು ಇಲ್ಲಿ ಅನ್ಯಾದೃಶವಾಗಿದೆ. ವಲುಕ್‌ ದಾಸ್ ರಚಿಸಿರುವ ‘ದಾಸರತ್ನʼ ಭಕ್ತ ವತ್ಸಲ್, ಹಾಗೂ ಬಿಡಿ ಪದ್ಯಗಳು, ಮುಕ್ತಕಗಳು ಶ್ರೇಷ್ಠ ಸಂತ ಸಾಹಿತ್ಯವಾಗಿದೆ. ಸಂತರ ಸಾಹಿತ್ಯ ಹಿಂದೀ ಭಾಷೆಯಲ್ಲಿ ರಾಶಿರಾಶಿಯಾಗಿ ವಿಕಾಸವಾಯಿತು.

ದಕ್ಷಿಣೋತ್ತರ ರಾಜ್ಯಗಳ ಸಂತರ ಇತಿಹಾಸವನ್ನು ಒಟ್ಟಾಗಿ ಪರಿಶೀಲಿಸಿದಾಗ ಬಂಗಾಳದ ಚೈತನ್ಯ ಪಂಥ ಹಾಗೂ ಕರ್ನಾಟಕದ ಹರಿದಾಸ ಪಂಥ ಇಂದಿನವರೆಗೆ ಅವಿಚ್ಛಿನ್ನವಾಗಿ ಮುಂದುವರಿದಿದೆ ಎಂದು ವಿಧಿತವಾಗುತ್ತದೆ. ಸಂತರು ಹಾಗೂ ಸಂತರ ಸಂಸ್ಥೆಗಳು ಎಲ್ಲ ವರ್ಗಗಳ ಜನರಿಗೂ ಆತ್ಮೋದ್ಧಾರಕ್ಕೆ ಮಾರ್ಗದರ್ಶನ ಮಾಡುವುದರೊಡನೆ ಜೊತೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿರುವುದು ಮೆಚ್ಚುವ ಸಂಗತಿಯಾಗಿದೆ.

ಇಸ್ಕಾನ್ ಅಂತಹ ಸಂಸ್ಥೆಗಳನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಎಲ್ಲ ಭಕ್ತಿ ಪಂಥಗಳೂ ಬೆಳೆಸಿ, ಪರಸ್ಪರ ಸೌಹಾರ್ದತೆಯಿಂದ ಸಾಮಾಜಿಕ ಕಾರ್ಯಗಳಿಗೂ ಗಮನ ಕೊಟ್ಟು ದೇಶದ ಏಕತೆ ಹಾಗೂ ಅಭಿವೃದ್ಧಿಗೆ ಸಹಾಕಾರಿಯಾಗುವಂತಾಗಲೆಂದು ಹಾರೈಸೋಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi