ಒಂದು ವೈಚಾರಿಕ ಚಿಂತನೆ
ಭಗವಂತನು ಆತ್ಮ ಅಥವಾ ಚೇತನವೆಂದು ವಿವರಿಸಲ್ಪಡುತ್ತಾನೆ. ಚೇತನದ ವಿವರಣೆ ಏನು? ಅದು ಸರ್ವ ಸಂಚಾರಿಯಾದದ್ದು. ಎಲ್ಲದರಲ್ಲಿಯೂ ಇರುವಂಥದ್ದು. ‘ಬ್ರಹ್ಮ’ ಎಂದರೆ ಅತ್ಯುನ್ನತ. ಅವನ ಔನ್ನತ್ಯವು ಎಲ್ಲೆಡೆ ಕಂಡು ಬರುತ್ತದೆ. ಈ ಔನ್ನತ್ಯವು ಯಾವುದು? ಪ್ರಜ್ಞೆ. ನಮಗೆ ಪ್ರಜ್ಞೆಯ ಅನುಭವವಿದೆ.

ಅದು ನಮ್ಮ ದೇಹವನ್ನು ವ್ಯಾಪಿಸಿಕೊಂಡಿದೆ. ನಮ್ಮ ದೇಹದ ಪ್ರತಿರೋಮ ಕೂಪದಲ್ಲೂ ನಾವು ಪ್ರಜ್ಞೆಯನ್ನು ಅನುಭವಿಸುತ್ತೇವೆ. ಇದು ವ್ಯಕ್ತಿಗತ ಪ್ರಜ್ಞೆ. ಇದರಂತೆಯೇ ಪರಮ ಪ್ರಜ್ಞೆಯೊಂದಿದೆ. ಇದಕ್ಕೆ ಉದಾಹರಣೆಯಾಗಿ ನಾವು ದೀಪದ ಬೆಳಕು ಮತ್ತು ಸೂರ್ಯನ ಬೆಳಕನ್ನು ಪರಿಗಣಿಸಬಹುದು.
ಸೂರ್ಯನ ಬೆಳಕು ಕೋಣೆಯ ಒಳಗೂ, ಇಡಿಯ ವಿಶ್ವವನ್ನೂ ಏಕಕಾಲಕ್ಕೆ ವ್ಯಾಪಿಸಿರುತ್ತದೆ. ಆದರೆ ದೀಪದ ಬೆಳಕು ಸೀಮಿತ ವ್ಯಾಪ್ತಿಯಲ್ಲಿ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಹೀಗೆಯೇ ನಮ್ಮ ಪ್ರಜ್ಞೆಯು ನಮ್ಮ ನಿರ್ದಿಷ್ಟ ದೇಹಕ್ಕೆ ಸೀಮಿತವಾಗಿರುತ್ತದೆ. ಆದರೆ ಪರಮ ಪ್ರಜ್ಞೆಯು, ಅಥವಾ ಭಗವಂತನ ಅಸ್ತಿತ್ವವು ಎಲ್ಲೆಡೆ ಕಂಡು ಬರುತ್ತದೆ.
ಭಗವಂತನ ಅಸ್ತಿತ್ವಕ್ಕೆ ಸಾಕ್ಷಿಯೇನು?
ಭಗವಂತನ ಅಸ್ತಿತ್ವವು ಪುರಾವೆಗಳನ್ನು ಅವಲಂಭಿಸಿಲ್ಲ.
-ಕಾರ್ಲ್‌ಜಂಗ್
ಭಗವಂತನು ಸತ್ತಿರುವನು, ಪಿಶಾಚಿಗಳು ಬದುಕಿರುವವು ಎಂದು ಹೇಳುವ ಸಮಾಜವನ್ನು ಕುರಿತು ನೀವು ಏನು ಹೇಳುವಿರಿ?
-ಅನಾನ್
ಭಗವಂತನ ಆಸ್ತಿತ್ವವನ್ನು ನಂಬದಿರಲು ಯಾವುದೇ ಕಾರಣಗಳಿಲ್ಲ, ಮತ್ತು ಆತನನ್ನು ನಂಬಲು ಪ್ರತಿಯೊಂದೂ ಕಾರಣಗಳೇ ಆಗಿವೆ. ಮನುಷ್ಯನು ತಾನು ದೇವರನ್ನು ನಂಬುವುದಿಲ್ಲವೆಂದು ಹೇಳಬಹುದು. ಆದರೆ ಅವನಿಗೆ ಹೀಗೆ ಮಾತನಾಡುವ ಶಕ್ತಿ ಕೊಟ್ಟವರು ಯಾರು? ಯಾವಾಗ ಸಾವು ಬಂದೆರಗುತ್ತದೆಯೋ ಆಗ ಮಾತಿನ ಶಕ್ತಿ ಹೊರಟು ಹೋಗುತ್ತದೆ.
ಹಾಗಾದರೆ ಮಾತನಾಡುವ ಶಕ್ತಿಯನ್ನು ನೀಡಿದವರು ಯಾರು? ಈ ಶಕ್ತಿ ಯಾಂತ್ರಿಕವಾಗಿ ಕಲ್ಲಿನಿಂದ ಒದಗಿಬಂತೇ? ಮಾತನಾಡುವ ಶಕ್ತಿಯನ್ನು ಪರಮ ಅಧಿಕಾರಿಯು ಸೆಳೆದುಕೊಂಡಾಗ ದೇಹವು ಕಲ್ಲಿಗಿಂತ ಬೇರೆಯಾಗಿ ಉಳಿಯುವುದಿಲ್ಲ. ಮಾತಿನ ಶಕ್ತಿಯು ಪ್ರತಿಯೊಂದನ್ನೂ ಕರುಣಿಸುವ ಪರಮ ಶಕ್ತಿವಂತನ ಇರುವಿಕೆಯನ್ನು ಸಾಕ್ಷೀಕರಿಸುತ್ತದೆ, ಕೃಷಪ್ರಜ್ಞಾವಂತ ವ್ಯಕ್ತಿಗೆ ತನ್ನಲ್ಲಿರುವ ಯಾವುದರ ಮೇಲೂ ತನ್ನ ನಿಯಂತ್ರಣವಿರುವುದಿಲ್ಲ ಎನ್ನುವುದರ ಅರಿವಿರುತ್ತದೆ.

ನಾವು ದೇವರನ್ನು ನಂಬುವುದಿಲ್ಲ ಎಂದಾದರೆ, ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನಿಯಂತ್ರಿಸುತ್ತಿರುವ ಯಾವುದಾದರೊಂದು ಶಕ್ತಿಯ ಮೇಲಾದರೂ ನಂಬಿಕೆಯಿಡಲೇಬೇಕು. ಆ ಶಕ್ತಿಯನ್ನು ದೇವರು ಅಥವಾ ಪ್ರಕೃತಿ ಅಥವಾ ಬೇರೆ ಏನಾದರೂ ಕರೆಯಬಹುದು. ಈ ವಿಶ್ವದಲ್ಲಿ ನಿಯಂತ್ರಕ ಶಕ್ತಿಯೊಂದಿದೆ. ಅದನ್ನು ಯಾವ ಬುದ್ಧಿವಂತ ಮನುಷ್ಯನೂ ತಿರಸ್ಕರಿಸಲಾಗುವುದಿಲ್ಲ.
ಭಗವಂತನನ್ನು ಕಾಣಲು ವಿಶಿಷ್ಟವಾದ ಕಣ್ಣುಗಳು ಬೇಕಾಗುತ್ತವೆ. ದೇವರನ್ನು ಭೌತಿಕ ಇಂದ್ರಿಯಗಳ ಮೂಲಕ ನೋಡಲಾಗುವುದಿಲ್ಲ. ಭಕ್ತಿಯೋಗದ ಮೂಲಕ ಇಂದ್ರಿಯಗಳನ್ನು ಶುದ್ಧೀಕರಿಸಿಕೊಂಡ ಬಳಿಕವಷ್ಟೆ ದೇವರನ್ನು ನೋಡಲು ಸಾಧ್ಯ. ನಮಗೆ ನೋಡುವ, ಕೇಳುವ, ಸ್ಪರ್ಶಿಸುವ, ರುಚಿನೋಡುವುದೇ ಮೊದಲಾದ ಶಕ್ತಿಯು ನೀಡಲ್ಪಟ್ಟಿದೆ.
ಆದರೆ ಮೊಂಡಾದ ಇಂದ್ರಿಯಗಳಿಂದ ಭಗವಂತನನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೃಷ್ಣಪ್ರಜ್ಞೆಯು ಈ ಇಂದ್ರಿಯಗಳನ್ನು ನಿಯಮಿತ ತತ್ತ್ವಗಳ ಮೂಲಕ ವಿಶೇಷವಾಗಿ ಹರೇಕೃಷ್ಣ ಮಂತ್ರದ ಜಪದಿಂದ ತರಬೇತುಗೊಳಿಸುತ್ತದೆ.
ಭಗವಂತನನ್ನು ನೋಡಲು ಏನು ಬೇಕು?
ದಾನವರು ಕೆಲವು ಬಾರಿ ಭಕ್ತರನ್ನು ಕುರಿತು, ತಾವು ದೇವರನ್ನು ನೋಡಿಲ್ಲವಾದ್ದರಿಂದ ಆತನ ಅಸ್ತಿತ್ವವನ್ನು ನಂಬುವುದಿಲ್ಲವೆಂದು ಘೋಷಿಸುತ್ತಾರೆ. ಆದರೆ ಭಗವಂತನ ಆಂತರ್ಯ ಈ ಆತತಾಯಿಗಳಿಗೇನು ಗೊತ್ತು? ಸ್ವತಃ ಭಗವಂತನೇ ಭಗವದ್ಗೀತೆಯಲ್ಲಿ(7.25) ನಾಹಮ್ ಪ್ರಕಾಶ ಸರ್ವಸ್ಯ ಯೋಗಮಾಯಾ ಸಮಾವೃತಾಃ – “ನಾನು ಮೂರ್ಖರಿಗೆ ಮತ್ತು ಮೂಢರಿಗೆ ಕಾಣಿಸಿಕೊಳ್ಳುವುದಿಲ್ಲ.
ಏಕೆಂದರೆ, ಅವರ ಪಾಲಿಗೆ ನಾನು ಯೋಗಮಾಯೆಯಿಂದ ಆವೃತನಾಗಿರುತ್ತೇನೆ.” ಭಗವಂತನು ಭಕ್ತರ ದೃಷ್ಟಿಗೆ ತೆರೆದುಕೊಂಡಿರುತ್ತಾನೆ. ಆದರೆ ಭಕ್ತರಲ್ಲದವರು ಅವನನ್ನು ನೋಡಲು ಸಾಧ್ಯವಿಲ್ಲ. ಭಗವಂತನನ್ನು ನೋಡಲು ಕೂಡ ವಿಶೇಷ ಅರ್ಹತೆ ಬೇಕು.
ಅದನ್ನು ಬ್ರಹ್ಮ ಸಂಹಿತೆಯಲ್ಲಿ (5.38)ಹೇಳಲಾಗಿದೆ “ಪ್ರೇಮಾಂಜನಚ್ಛುರಿತ ಭಕ್ತಿ ವಿಲೋಚನೇನ ಸಂತಃ ಸದೈವ ಹೃದಯೇಷು ವಿಲೋಕಯಂತಿ” ಯಾವ ಭಕ್ತನು ಕೃಷ್ಣನೆಡೆಗೆ ತೀವ್ರ ಪ್ರೇಮವನ್ನು ಹೊಂದಿರುತ್ತಾನೋ, ಅವನು ಆತನನ್ನು ಎಲ್ಲೆಡೆಯೂ ಕಾಣಬಲ್ಲ. ಆದರೆ ಅಸುರನಿಗೆ ಪರಮಪ್ರಭುವಿನ ಕುರಿತು ಸ್ಪಷ್ಟ ತಿಳುವಳಿಕೆ ಇರದ ಕಾರಣ ಆತನನ್ನು ಕಾಣುವುದು ಸಾಧ್ಯವಾಗದು.
ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲುವುದಾಗಿ ಬೆದರಿಸುತ್ತಿರುವಾಗ ಪ್ರಹ್ಲಾದನು ತನ್ನ ಬೆಂಬಲವಾಗಿ, ತನಗೆ ಧೈರ್ಯ ನೀಡುವ ಸಲುವಾಗಿಯೇ ಭಗವಂತನು ಸ್ತಂಭದಲ್ಲಿ ಉಪಸ್ಥಿತನಿರುವುದನ್ನು ಕಂಡುಕೊಂಡ. ಭಕ್ತನನ್ನು ರಕ್ಷಿಸುವ ಸಲುವಾಗಿ ಭಗವಂತನು ಅಲ್ಲಿ ಕಾಣಿಸಿಕೊಂಡ. ಹಿರಣ್ಯಕಶಿಪುವು ಪ್ರಹ್ಲಾದನನ್ನು ಕುರಿತು, “ನಿನ್ನ ಭಗವಂತನೆಲ್ಲಿ?’ ಎಂದು ಅಬ್ಬರಿಸಿದಾಗ, ಆ ಪುಟ್ಟ ಬಾಲಕನು ” ಅವನು ಎಲ್ಲೆಡೆಯೂ ಇರುವನು” ಎಂದು ಉತ್ತರಿಸಿದ.

ಹಿರಣ್ಯಕಶಿಪುವಿಗೆ ತನ್ನ ಹಿಂದಿನ ಸ್ತಂಭದಲ್ಲಿದ್ದ ಭಗವಂತ ಕಾಣಿಸಲಿಲ್ಲ. ಅವನು ಮೂರ್ಖತನದಿಂದ, ”ಈ ಕಂಬದಲ್ಲೇಕೆ ನಿನ್ನ ಭಗವಂತನಿಲ್ಲ?’ ಎಂದು ಪ್ರಶ್ನಿಸಿದ. ಭಕ್ತರಿಗೆ ಭಗವಂತನು ಎಲ್ಲ ಸಂದರ್ಭಗಳಲ್ಲಿ ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಭಕ್ತರಲ್ಲದವರಿಗೆ ಮಾತ್ರ ಅವನನ್ನು ಕಾಣಲು ಸಾಧ್ಯವಿಲ್ಲ.
ನಾಸ್ತಿಕರಿಗಾಗಿ ಕೆಲವು ಪುರಾವೆಗಳು
ನಾಸ್ತಿಕರಿಗೆ ಭಗವಂತನ ಅಸ್ತಿತ್ವದ ಪುರಾವೆ ಬೇಕೆಂದಾದದಲ್ಲಿ, ಆತನು ಸಾವಿನ ರೂಪದಲ್ಲಿ ಬಂದು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವುದನ್ನು ಪರಿಗಣಿಸಬಹುದು. ಆದರೆ ಭಗವಂತನು ಅಶ್ರದ್ಧಾವಂತರ ಎದುರಿಗೆ ತನ್ನ ಆಂತರಿಕ ಶಕ್ತಿಯ ಸ್ವರೂಪದಿಂದ ಪ್ರಕಟಗೊಳ್ಳುವುದಿಲ್ಲ.
ಆದ್ದರಿಂದ, ವೇದಾಂತ ಸೂತ್ರವು ಹೇಳುತ್ತದೆ; ಈ ಮಾನವ ಶರೀರವು ಸರ್ವಕಾರಣ ಕಾರಣವಾದ ಪರಮಸತ್ಯವನ್ನು ಅರಿಯುವುದಕ್ಕಾಗಿಯೇ ಇದೆ.” ಒಂದಲ್ಲ ಒಂದು ಕಾರಣ ಇದ್ದೇ ಇದೆ. ಅದು ಇರಲಿಕ್ಕೇ ಬೇಕು. ಇದು ಶಿಕ್ಷಣ. ನಿಮ್ಮ ಸ್ವರೂಪವು ನಿಮ್ಮ ತಂದೆಯಿಂದ ಒದಗಿಬಂದಿರುವಂತೆ, ಅವರ ಸ್ವರೂಪವು ಅವರ ತಂದೆಯಿಂದ ಒದಗಿರುವಂತೆ, ಹೀಗೆಯೇ ನೀವು ಸಂಶೋಧಿಸುತ್ತಾ ಸಾಗಬಹುದು.
ಅವರ ತಂದೆ, ಅವರ ತಂದೆ, ಮತ್ತವರ ತಂದೆ…. ಅಂತಿಮವಾಗಿ ನೀವು ಮೂಲ ತಂದೆಯ ಬಳಿಗೆ ಬರುತ್ತೀರಿ. ಯಾರನ್ನು ನೀವು ಕೃಷ್ಣ ಎಂದು ಕರೆಯುವಿರೋ, ಭಗವಂತನೆನ್ನುವಿರೋ, ಅಥವಾ ನೀವೇನು ಕರೆಯುವಿರೋ ಆ ಪರಮಪುರುಷನಡೆಗೆ ಬರುತ್ತೀರಿ.
ನೀವು ಭಗವಂತನ ಅಸ್ತಿತ್ವವನ್ನು ಅಲ್ಲಗಳೆದ ಮಾತ್ರಕ್ಕೆ ನಿಮ್ಮ ಹಾಗೂ ಭಗವಂತನ ನಡುವಿನ ಸ೦ಬ೦ಧ ಸುಳ್ಳಾಗಿಬಿಡುವುದಿಲ್ಲ. ಹಾಗೆಂದುಕೊಳ್ಳುವುದು ಅರಿವಿನ ಕೊರತೆಯನ್ನು ತೋರಿಸುತ್ತದೆಯಷ್ಟೆ. ಸೂರ್ಯನನ್ನು ಮರೆಮಾಚುವುದು ಸಾಧ್ಯವಿಲ್ಲ. ಇಬ್ಬನಿ ಮೋಡವು ಸೂರ್ಯನ ಪ್ರಕಾಶವೆಂಥದ್ದು! ಪರಿಧಿ ಎಂಥದ್ದು!? ಅಂತಹ ವಿಸ್ತಾರವಾದ ಸೂರ್ಯನನ್ನು ಮೋಡದ ತುಣುಕೊಂದು ಆವರಿಸಿತು ಎಂದು ನಾವು ಬಗೆಯುತ್ತೇವೆ.
ಅದು ತಪ್ಪು. ಹಾಗೆ ತಿಳಿಯುವುದು ನಮ್ಮ ಮೌಢ್ಯವಷ್ಟೆ. ವಾಸ್ತವವಾಗಿ ಮೋಡ ಆವರಿಸುವುದು ನಮ್ಮ ಕಣ್ಣನ್ನು. ಮತ್ತು ನಾವೆಂದುಕೊಳ್ಳುತ್ತೇವೆ. “ಮೋಡ ಸೂರ್ಯನನ್ನು ಆವರಿಸಿದೆ” ಎಂದು! ಬೇರೆ ದೊಡ್ಡ ಪ್ರಾಣಿಯು ಬ೦ದಾಗ ಮೊಲವು ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದೆ ಕಣ್ಣುಗಳನ್ನು ಮುಚ್ಚಿಕೊಂಡು ಬಿಡುತ್ತದೆ. ಮತ್ತು ತಿಳಿಯುತ್ತದೆ, “ನನ್ನ ಶತ್ರು ಹೊರಟು ಹೋದ” ಎಂದು!
ಲೌಕಿಕ ವಿಜ್ಞಾನಿಗಳು ಮೌಢ್ಯದಿಂದ ತುಂಬಿದ್ದರೂ ಮತ್ಸರದಿ೦ದ ಭಗವ೦ತನ ಅಸ್ತಿತ್ವವನ್ನು ನಿರಾಕರಿಸುವಂತಹ ಭೌತಿಕ ನಿಯಮಗಳ ಸಂಶೋಧನೆಯಲ್ಲಿ ತೊಡಗುತ್ತಾರೆ. ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರು ಸ್ಪಷ್ಟಪಡಿಸಿರುವಂತೆ ಜಗತ್ತು ಭಗವಂತನಿಂದಲೇ ಉಂಟಾಗಿರುವಂಥದ್ದು.
ಆದ್ದರಿಂದ ಆತನೊಂದಿಗೆ ಆಧ್ಯಾತ್ಮಿಕ ಸಾಮ್ಯವನ್ನು ಹೊಂದಿದೆ. ಜಗತ್ತಿನಲ್ಲಿ ಯಾವ ಕಡೆಯಲ್ಲಿಯೂ ದೇವೋತ್ತಮ ಪರಮಪುರುಷನಾದ ಭಗವಂತನಿಗೆ ವ್ಯತಿರಿಕ್ತವಾದ ಯಾವುದೇ ಭೌತಿಕ ನಿಯಮ, ತತ್ತ್ವ ಅಥವಾ ವಾದಗಳು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ವಾಸ್ತವವಾಗಿ, ಆಧ್ಯಾತ್ಮಿಕ ಆಕಾಶವನ್ನೂ ಒಳಗೊಂಡಂತೆ ಇಡಿಯ ವಿಶ್ವವು ಪರಮಪ್ರಭು ಶ್ರೀಕೃಷ್ಣನ ಅನಿಯಮಿತ ವೈಭವಕ್ಕೆ ನಿತ್ಯ ಸಾಕ್ಷಿಯಾಗಿ ಅಸ್ತಿತ್ವದಲ್ಲಿರುವಂಥದ್ದಾಗಿದೆ.






Leave a Reply