ವಿವಿಧ ತಿನಿಸುಗಳು

ಶ್ರೀ ಕೃಷ್ಣ ಪಾಕಶಾಲೆ

– ಸುಭದ್ರಾ ಪ್ರಕಾಶ್‌

ಮೊಳಕೆ ಕಾಳಿನ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಮೊಳಕೆ ಕಾಳು – 1 ಬಟ್ಟಲು

ಕ್ಯಾರೆಟ್ ತುರಿ – 1 ಬಟ್ಟಲು

ತೆಂಗಿನ ತುರಿ -1 ಬಟ್ಟಲು

ಸೌತೇಕಾಯಿ – 1 ಮೀಡಿಯಂ ಗಾತ್ರದ್ದು

ಹಸಿಮೆಣಸಿನಕಾಯಿ – 3

ದಾಳಿಂಬೆ -1 ಬಟ್ಟಲು

ನಿಂಬೆರಸ -1/2 ಹೋಳು

ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ – ಎಣ್ಣೆ ಸಾಸಿವೆ, ಕರಿಬೇವು

ಮಾಡುವ ವಿಧಾನ : ಮೊಳಕೆ ಬರಿಸಿದ ಹೆಸರುಕಾಳನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ. ಸೌತೇಕಾಯಿಯನ್ನು ಸಣ್ಣತುಂಡುಗಳಾಗಿ ಕತ್ತರಿಸಿ, ದಾಳಿಂಬೆ ಹಣ್ಣನ್ನು ಬಿಡಿಸಿಕೊಂಡು ಎಲ್ಲ ಸಾಮಗ್ರಿಗಳನ್ನು ಮೊಳಕೆ ಕಾಳಿನ ಜತೆ ಸೇರಿಸಿ, ಚೆನ್ನಾಗಿ ಕಲೆಸಿ.

ಒಂದು ಬಾಣಲೆಗೆ 4 ಚಮಚ ಎಣ್ಣೆ ಹಾಕಿ. ಕಾದನಂತರ ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಸೊಪ್ಪನ್ನು ಹಾಕಿ ಬಾಡಿಸಿ ಕೋಸಂಬರಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಶ್ರೀಕೃಷ್ಣನಿಗೆ ನೈವೇದ್ಯ ಮಾಡಿ ಸೇವಿಸಿ.

ಖಾರಾ ದೋಸೆ

ಬೇಕಾಗುವ ಪದಾರ್ಥಗಳು :

ಅಕ್ಕಿ – 2 ಲೋಟ

ತೆಂಗಿನಕಾಯಿ – ½ ಹೋಳು

ಒಣಮೆಣಸಿನಕಾಯಿ – 8

ಹುಣಸೆಹಣ್ಣು –  ಸ್ವಲ್ಪ

ಉಪ್ಪು – ರುಚಿಗೆ

ಸಕ್ಕರೆ – ½ ಚಮಚ

ಇಂಗು – ಸ್ವಲ್ಪ

ಕಡಲೆಬೇಳೆ – 1 ಚಮಚ

ಎಣ್ಣೆ, ಸಾಸಿವೆ, ಕರಿಬೇವು

ಮಾಡುವ ವಿಧಾನ: ಅಕ್ಕಿಯನ್ನು 5-6 ಗಂಟೆಗಳ ಕಾಲ ನೆನೆಸಿ. ಕಡಲೆಬೇಳೆಯನ್ನು ಬೇರೆಯಾಗಿ ನೆನೆಸಿ. ತೆಂಗಿನಕಾಯಿ ತುರಿಯಿರಿ. ನೆನೆದ ಅಕ್ಕಿಯ ಜೊತೆ ಮೆಣಸಿಕಾಯಿ, ತೆಂಗಿನ ತುರಿ, ಹುಣಸೆಹಣ್ಣು, ಇಂಗು, ಸಕ್ಕರೆ ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ.

ನೆನೆಸಿದ ಕಡಲೆಬೇಳೆಯನ್ನು ರುಬ್ಬಿದ ಹಿಟ್ಟಿಗೆ ಸೇರಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲೆಸಿ. ಕಾವಲಿಗೆ ಎಣ್ಣೆ ಸವರಿ ದೋಸೆ ಹಾಕಿ, ಮೇಲೆ ಒಂದು ಪ್ಲೇಟನ್ನು ಮುಚ್ಚಿ ಹದವಾಗಿ ಬೇಯಿಸಿ. (ಹಿಟ್ಟನ್ನು ರುಬ್ಬಿದ ತತ್‌ಕ್ಷಣ ದೋಸೆ ಮಾಡಬಹುದು) ಶ್ರೀ ಕೃಷ್ಣನಿಗೆ ಅರ್ಪಿಸಿ, ಸೇವಿಸಿ.

ಸಿಹಿ ದೋಸೆ

ಬೇಕಾಗುವ ಪದಾರ್ಥಗಳು

ಅಕ್ಕಿ – 2 ಲೋಟ

ಬೆಲ್ಲ – 2 ಲೋಟ

ತೆಂಗಿನಕಾಯಿ – 1/2 ಹೋಳು

ಏಲಕ್ಕಿ – 2 ರಿಂದ 3

ತುಪ್ಪ – 1 ಬಟ್ಟಲು

ಮಾಡುವ ವಿಧಾನ:  ಅಕ್ಕಿಯನ್ನು 5-6 ಗಂಟೆಗಳ ಕಾಲ ನೆನೆಸಿ. ಬೆಲ್ಲವನ್ನು ಪುಡಿಮಾಡಿ. ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಏಲಕ್ಕಿಯನ್ನು ಪುಡಿಮಾಡಿ ನೆನೆಸಿದ ಅಕ್ಕಿಯ ಜೊತೆ ಎಲ್ಲವನ್ನೂ ಸೇರಿಸಿ ರುಬ್ಬಿಕೊಳ್ಳಿ. ಕಾವಲಿಗೆ ಎಣ್ಣೆ ಅಥವಾ ತುಪ್ಪ ಸವರಿ ದೋಸ ಹಾಕಿ.

ಮೇಲೆ ಒಂದು ಪ್ಲೇಟನ್ನು ಮುಚ್ಚಿ. ಹದವಾಗಿ ಬೇಯಿಸಿ. (ಹಿಟ್ಟನ್ನು ರುಬ್ಬಿದ ತತ್‌ ಕ್ಷಣ ದೋಸೆ ಹಾಕಬಹುದು) ಗೋವಿಂದನಿಗೆ ಅರ್ಪಿಸಿ, ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi