ದುರ್ವಾಸ ಮುನಿ

ಭಾಗವತದ ಪಾತ್ರ ಪರಿಚಯ : ಋಷಿ ಪರಂಪರೆ

(ಆಧಾರ – ಶ್ರೀಲ ಪ್ರಭುಪಾದರ ಭಾವಾರ್ಥಗಳು; ಭಾಗವತ: ಪ್ರಥಮ ಸ್ಕಂಧ; 15ನೇ ಅಧ್ಯಾಯ)

ದುರ್ವಾಸ ಮುನಿ ಒಬ್ಬ ಸಮರ್ಥ ಬ್ರಾಹ್ಮಣ ತಪಸ್ವಿಗಳು. ಧರ್ಮತತ್ತ್ವಗಳನ್ನು ವ್ರತದಂತೆ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದವರು. ಅವರಿಗೆ ಸಂಬಂಧಿಸಿದಂತೆ ಅನೇಕ ಐತಿಹಾಸಿಕ ಘಟನೆಗಳ ಉಲ್ಲೇಖವಿದೆ. ಈ ತಪಸ್ವಿಯನ್ನು ಭಗವಾನ್ ಶಿವನಂತೆಯೇ ಅತಿ ಸುಲಭವಾಗಿ ತೃಪ್ತಿಪಡಿಸಬಹುದಾಗಿತ್ತು; ಅಷ್ಟೇ ಸುಲಭವಾಗಿ ಅವರು ಕ್ರುದ್ಧರಾಗುವಂತೆ ಮಾಡಬಹುದಾಗಿತ್ತು.

ಸಂತುಷ್ಟರಾದಾಗ ತಮ್ಮ ಸೇವೆ ಮಾಡಿದವರಿಗೆ ಬೇಕಾದ ಹಾಗೆ ಒಳ್ಳೆಯದು ಮಾಡುತ್ತಿದ್ದರು; ಅಸಂತುಷ್ಟರಾದಾಗ ಅಷ್ಟೇ ಮಟ್ಟಿಗೆ ಹಾನಿಯನ್ನುಂಟು ಮಾಡುತ್ತಿದ್ದರು. ಕುಮಾರಿ ಕುಂತಿಯು ಇನ್ನೂ ತಂದೆಯ ಮನೆಯಲ್ಲಿದ್ದಾಗ, ಅಲ್ಲಿಗೆ ಬರುತ್ತಿದ್ದ ಬ್ರಾಹ್ಮಣರಿಗೆ ವಿಶೇಷವಾದ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿದ್ದಳು.

ಹಾಗೆ ಒಮ್ಮೆ ಸತ್ಕೃತರಾದ ದುರ್ವಾಸಮುನಿಯು ಅವಳ ಸದ್ವರ್ತನೆ, ಸೇವಾ ಭಾವಗಳನ್ನು ಮೆಚ್ಚಿ ತನಗಿಷ್ಟ ಬಂದ ದೇವತೆಯನ್ನು ಆಹ್ವಾನಿಸುವ ವರವನ್ನು ಕುಂತಿಗೆ ಕೊಟ್ಟರು. ಅವರು ಪರಶಿವನ ಅಂಶಾವತಾರವೇ ಎಂದು ಭಾವಿಸಲಾಗಿದೆ. ಸುಲಭ ತೃಪ್ತರೂ, ಸುಲಭ ಕೋಪಿಯೂ ಆಗಿದ್ದ ಅವರು ಪರಮೇಶ್ವರನ ಮಹಾಭಕ್ತರು.

ಶಿವನ ಆದೇಶದಂತೆ, ಶ್ವೇತಕೇತು ಮಹಾರಾಜನು ಮಾಡಿದ ನೂರು ವರ್ಷಗಳ ಮಹಾಯಾಗದ ಅಧ್ವರ್ಯುವಾದರು. ಆಗಾಗ ಅವರು ದೇವೇಂದ್ರನ ಸಭೆಗೂ ಹೋಗಿ ಬರುತ್ತಿದ್ದರು. ತಮಗಿದ್ದ ಯೋಗಬಲದಿಂದ ಅವರು ಸುಲಭವಾಗಿ ಆಕಾಶದಲ್ಲಿ ಸಂಚರಿಸಬಲ್ಲವರಾಗಿದ್ದರು.

ಗಗನಸಂಚಾರಿಯಾಗಿ ಅವರು ಭೌತಾಕಾಶದಿಂದ ಆಚೆಗೆ ವೈಕುಂಠದವರೆಗೂ ಹೋಗಿ ಬರುತ್ತಿದ್ದರು. ಒಮ್ಮೆ ಭೂಲೋಕದ ಚಕ್ರವರ್ತಿಯೂ ಭಕ್ತ ಶಿರೋಮಣಿಯೂ ಆಗಿದ್ದ ಅಂಬರೀಷನೊಡನೆ ಜಗಳವಾಡಿದ್ದಾಗ, ಒಂದೇ ವರ್ಷದಲ್ಲಿ ಅತಿ ದೀರ್ಘ ಪ್ರಯಾಣಗಳನ್ನು ದುರ್ವಾಸರು ಕೈಗೊಂಡಿದ್ದರು.

ದುರ್ವಾಸರಿಗೆ ಸುಮಾರು ಹತ್ತು ಸಾವಿರ ಜನ ಶಿಷ್ಯರು. ಅವರು ಎಲ್ಲಿ ಹೋದರೂ ಕ್ಷತ್ರಿಯ ರಾಜರ ಅತಿಥಿಯಾಗಿ ನಿಲ್ಲುತ್ತಿದ್ದರು. ಅವರ ಜೊತೆಗೆ ಶಿಷ್ಯರೂ ನಿಲ್ಲುತ್ತಿದ್ದರು. ಹೀಗೆ ಒಮ್ಮೆ ದುರ್ವಾಸರು ಯುಧಿಷ್ಠಿರನ ದಾಯಾದಿಯಾದ ದುರ್ಯೋಧನನ ಮನೆಗೆ ಹೋದರು. ದುರ್ಯೋಧನ ಬಹಳ ಚಾಣಾಕ್ಷನಾದ ವ್ಯಕ್ತಿ. ಈ ತಪಸ್ವಿಗೆ ಎಲ್ಲ ಬಗೆಯಿಂದಲೂ ತೃಪ್ತಿಯಾಗುವಂತೆ ಸತ್ಕರಿಸಿದನು.

ಸಂತೃಪ್ತರಾದ ಮಹರ್ಷಿಯು ಅವನಿಗೆ ಏನಾದರೂ ವರವನ್ನು ನೀಡಲು ಬಯಸಿದರು. ಕುಪಿತರಾದರೆ ಅತ್ಯುಗ್ರಶಾಪವನ್ನು ಕೊಡಬಲ್ಲ ಮುನಿಯ ಶಕ್ತಿ ದುರ್ಯೋಧನನಿಗೆ ಗೊತ್ತಿತ್ತು. ಆದ್ದರಿಂದ ಅವನು ದುರ್ವಾಸರ ಕ್ರೋಧವು ತನ್ನ ವೈರಿಗಳಾದ ಪಾಂಡವರ ಮೇಲೆ ಹರಿಯುವಂತೆ ಮಾಡಿ ಅವರು ಮುನಿಶಾಪಕ್ಕೆ ತುತ್ತಾಗುವಂತೆ ಮಾಡಲು ಉಪಾಯವನ್ನು ಆಲೋಚಿಸಿದನು.

ತಮಗೆಲ್ಲ ಹಿರಿಯನಾದ ಯುಧಿಷ್ಠಿರ ಮಹಾರಾಜನ ಮನೆಗೆ ಮಹರ್ಷಿಯು ಶಿಷ್ಯಸಮೇತರಾಗಿ ಭೋಜನಕ್ಕೆ ದಯಮಾಡಿಸಬೇಕೆಂಬುದೇ ತನ್ನ ಕೋರಿಕೆ ಎಂದನು. ಆದರೆ ಒಂದು ವಿಶೇಷ ಪ್ರಾರ್ಥನೆಯುಂಟು. ಯುಧಿಷ್ಠಿರನು ತನ್ನ ಪತ್ನಿ ದ್ರೌಪದಿಯೊಂದಿಗೆ ಊಟಮಾಡಿ ಮುಗಿಸಿದ ಆನಂತರವೇ ಮುನಿಯು ಅಲ್ಲಿಗೆ ಭೇಟಿ ನೀಡಬೇಕು ಎಂದು ಕೇಳಿದನು.

ದ್ರೌಪದಿಯ ಊಟ ಮುಗಿಯಿತೆಂದರೆ ಆಮೇಲೆ ಈ ಬ್ರಾಹ್ಮಣ ಸಮೂಹವನ್ನು ಉಪಚರಿಸಿ ಸತ್ಕರಿಸಲು ಯುಧಿಷ್ಠಿರನು ಅಸಮರ್ಥನಾಗುತ್ತಾನೆ, ಬಹು ಸುಲಭವಾಗಿ ಅವರ ಕ್ರೋಧಕ್ಕೆ ಬಲಿಯಾಗುತ್ತಾನೆ ಎನ್ನುವುದು ದುರ್ಯೋಧನನ ದುಷ್ಟ ಹಂಚಿಕೆಯಾಗಿತ್ತು. ದುರ್ವಾಸರು ಅವನ ಕೋರಿಕೆಯನ್ನು ಒಪ್ಪಿದರು. ದುರ್ಯೋಧನನು ಕೇಳಿದ್ದಂತೆಯೇ, ಯುಧಿಷ್ಠಿರನೂ ದ್ರೌಪದಿಯೂ ಊಟಮಾಡಿ ಮುಗಿಸಿದ ಅನಂತರ ಅರಣ್ಯದಲ್ಲಿದ್ದ ಯುಧಿಷ್ಠಿರನ ಆಶ್ರಮಕ್ಕೆ ತಮ್ಮ ಅಪಾರ ಶಿಷ್ಯ ಸಮೂಹದೊಂದಿಗೆ ಹೋದರು.

ಯುಧಿಷ್ಠಿರನು ದುರ್ವಾಸ ಮುನಿವರರನ್ನೂ ಅವರ ಶಿಷ್ಯ ಸಮೂಹವನ್ನೂ ಬಹು ಗೌರವದಿಂದ ಸ್ವಾಗತಿಸಿದನು; ಭೋಜನವು ಸಿದ್ಧವಾಗುವ ಹೊತ್ತಿಗೆ ನದಿಯಲ್ಲಿ ಮಾಧ್ಯಾಹ್ನಿಕ ಕ್ರಿಯೆಗಳನ್ನು ಆಚರಿಸಿ ಬರಬಹುದು ಎಂದು ಸೂಚಿಸಿದನು. ಋಷಿಗಳು ಸ್ನಾನ ಮಾಡಲು ನದಿಗೆ ತೆರಳಿದರು. ಇತ್ತ ಈ ಅತಿಥಿಗಳಿಗೆ ಭೋಜನವಿತ್ತು ಸತ್ಕರಿಸುವುದು ಹೇಗೆಂದು ತಿಳಿಯದ ಯುಧಿಷ್ಠಿರನು ಕಳವಳಿಸತೊಡಗಿದನು.

ದ್ರೌಪದಿಯು ಎಲ್ಲಿಯವರೆಗೆ ಊಟ ಮಾಡಿ ಮುಗಿಸಿರುವುದಿಲ್ಲವೋ ಅಲ್ಲಿಯವರೆಗೆ ಎಷ್ಟು ಜನಕ್ಕೆ ಬೇಕಾದರೂ ಆಹಾರವನ್ನು ನೀಡಬಹುದಾಗಿದ್ದಿತು. ಆದರೆ ದುರ್ಯೋಧನನ ಕುಟಿಲ ಸಲಹೆಯಂತೆ ಮುನಿಯು ಆಕೆಯ ಊಟ ಮುಗಿದ ಮೇಲೆಯೇ ಬಂದಿದ್ದಾರೆ.

ಕಷ್ಟಕ್ಕೆ ಸಿಲುಕಿದಾಗ ಭಕ್ತರು ಭಗವಂತನನ್ನು ಉತ್ಕಟವಾಗಿ ನೆನೆಯುವ ಅವಕಾಶ ದೊರಕುತ್ತದೆ. ಮಹಾ ಗಂಡಾಂತರವು ಸನ್ನಿಹಿತವಾಗಿದ್ದ ಆ ಸನ್ನಿವೇಶದಲ್ಲಿ ದ್ರೌಪದಿಯು ಪ್ರಭು ಕೃಷ್ಣನನ್ನು ನೆನೆದಳು. ಸರ್ವವ್ಯಾಪಿಯಾದ ಭಗವಂತನಿಗೆ ತನ್ನ ಭಕ್ತರಿಗೊದಗಿದ ಅಪಾಯವು ಕೂಡಲೇ ತಿಳಿಯಿತು.

ಕೃಷ್ಣನು ಅಲ್ಲಿಗೆ ಧಾವಿಸಿ ಬಂದವನೇ, ಪಾತ್ರೆಯಲ್ಲಿ ಏನಾದರೂ ಆಹಾರವು ಉಳಿದಿದ್ದರೆ ತನಗೆ ಕೊಡಬೇಕೆಂದು ದ್ರೌಪದಿಯನ್ನು ಕೇಳಿದನು; ದ್ರೌಪದಿಗೆ ದುಃಖವು ಕಟ್ಟೆಯೊಡೆದು ಹರಿಯಿತು. ದೇವೋತ್ತಮ ಪ್ರಭುವೇ ಆಹಾರ ಕೇಳುತ್ತಿದ್ದಾನೆ; ಕೊಡಲು ತನ್ನ ಬಳಿ ಏನೂ ಇಲ್ಲ.

ಸೂರ್ಯ ಭಗವಾನನು ಕೊಟ್ಟಿರುವ ಅಕ್ಷಯ ಪಾತ್ರೆಯು ತನ್ನ ಊಟವಾಗುವರೆಗೆ ಎಷ್ಟು ಜನಕ್ಕೆ ಬೇಕಾದರೂ ಆಹಾರವನ್ನು ಒದಗಿಸಬಲ್ಲುದು; ಅಂದು ತನ್ನ ಊಟ ಮುಗಿದು ಹೋಗಿದೆ. ಆದರಿಂದಲೇ ಈಗ ಗಂಡಾಂತರದಲ್ಲಿ ಸಿಲುಕಿಕೊಂಡಿದ್ದೇವೆ. ಇಷ್ಟು ಹೇಳಿ ದ್ರೌಪದಿಯು, ಹೆಂಗಸರಿಗೆ ಅಂತಹ ಸ್ಥಿತಿಯಲ್ಲಿ ಸಹಜವಾಗಿರುವಂತೆ, ಅಳತೊಡಗಿದಳು.

ಹೇಗಾದರಾಗಲಿ ಮೊದಲು ಆ ಪಾತ್ರೆಯನ್ನು ತನ್ನ ಬಳಿಗೆ ತೆಗೆದುಕೊಂಡು ಬರಬೇಕೆಂದು ಕೃಷ್ಣನು ಅವಳನ್ನು ಕೇಳಿದನು. ಅದರಲ್ಲೇನಾದರೂ ಆಹಾರದ ತುಣುಕು ಅಂಟಿಕೊಂಡಿರುವುದೋ ಹೇಗೆ, ನೋಡಬೇಕೆಂದು ಬಯಸಿದನು. ದ್ರೌಪದಿಯು ಪಾತ್ರೆಯನ್ನು ತಂದಳು.

ಅದರ ಒಂದು ತುದಿಯಲ್ಲಿ ತರಕಾರಿಯ ಒ೦ದು ಸಣ್ಣಚೂರು ಮೆತ್ತಿಕೊಂಡಿರುವುದು ಶ್ರೀಕೃಷ್ಣನಿಗೆ ಕಾಣಿಸಿತು. ಅವನು ಒಡನೆಯೇ ಅದನ್ನೆತ್ತಿಕೊಂಡು ತಿಂದುಬಿಟ್ಟನು. ಈಗ ದುರ್ವಾಸರನ್ನೂ ಅವರ ಶಿಷ್ಯಸಮೂಹವನ್ನೂ ಊಟಕ್ಕೆ ಬರುವಂತೆ ಹೇಳಿ ಕಳುಹಿಸು ಎಂದು ದ್ರೌಪದಿಗೆ ಹೇಳಿದನು.

ಅತಿಥಿಗಳನ್ನು ನದಿಯ ಬಳಿಯಿಂದ ಕರೆದು ತರಲು ಭೀಮನನ್ನು ಕಳುಹಿಸಿದರು. ಭೀಮನು ದುರ್ವಾಸರ ಬಳಿಗೆ ಬಂದು, “ಸ್ವಾಮಿ, ಏಕೆ ತಡಮಾಡುತ್ತಿದ್ದೀರಿ? ಬೇಗನೆ ದಯಮಾಡಿಸಿರಿ, ಭೋಜನವು ಸಿದ್ಧವಾಗಿದೆ” ಎಂದು ನುಡಿದನು. ಕೃಷ್ಣನು ಆಹಾರದ ಕಣವನ್ನು ತಿಂದಷ್ಟರಿಂದಲೇ ಬ್ರಾಹ್ಮಣರೆಲ್ಲರಿಗೂ ಪುಷ್ಕಳವಾದ ಊಟಮಾಡಿದ ಅನುಭವವಾಗಿ ಬಿಟ್ಟಿತ್ತು.

ನದಿಯಲ್ಲಿ ಮೀಯುತ್ತಿರುವಾಗಲೇ ಅವರಿಗೆ ಹೊಟ್ಟೆ ತುಂಬಿ ಹೋಗಿತ್ತು. ತಮಗಾಗಿ ಯುಧಿಷ್ಠಿರ ಮಹಾರಾಜನು ಬಗೆಬಗೆಯಾದ ಅಡಿಗೆಯನ್ನು ಬೇಕಾದಷ್ಟು ಸಿದ್ಧಪಡಿಸಿರಬಹುದು, ಆದರೆ ತಮಗೆ ಸ್ವಲ್ಪವೂ ಹಸಿವೆಯೇ ಇಲ್ಲವಾದ್ದರಿಂದ ಏನನ್ನೂ ತಿನ್ನುವ ಸ್ಥಿತಿಯಲ್ಲಿಲ್ಲ.

ತಿನ್ನದೆ ಹೋದರೆ ಮಹಾರಾಜನಿಗೆ ತುಂಬ ದುಃಖವಾಗುತ್ತದೆ. ಅದಕ್ಕೆ ಅವಕಾಶ ಕೊಡುವುದೇ ಬೇಡ, ಅಲ್ಲಿಗೆ ಹೋಗದಿರುವುದೇ ಮೇಲು ಎಂದು ತೀರ್ಮಾನಿಸಿ ಹೊರಟುಹೋದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi