ಧರ್ಮ ಸಿಂಹಾಸನದ ಮರ್ಮ: ಶ್ರೀರಾಮ ಮತ್ತು ಶ್ವಾನದ ಆಖ್ಯಾನ

– ಮೂಲ: ವಾಲ್ಮೀಕಿ ವಿರಚಿತ ರಾಮಾಯಣ (ಉತ್ತರಕಾಂಡ)

ಶ್ರೀರಾಮಚಂದ್ರನ ಧರ್ಮಪಾಲನೆಯು ಕೇವಲ ಮಾನವಕುಲಕ್ಕೆ ಸೀಮಿತವಾಗಿರದೆ, ಅಬೋಧ ಪ್ರಾಣಿಗಳಿಗೂ ಸಂರಕ್ಷಣೆಯನ್ನು ನೀಡುವಂತಹ ಸುಶಾಸನವಾಗಿತ್ತು. ರಾಮರಾಜ್ಯದ ಆ ಅಪ್ರತಿಮ ನ್ಯಾಯವೈಖರಿಯನ್ನು ಈ ಘಟನೆಯು ಮನೋಜ್ಞವಾಗಿ ಪ್ರತಿಪಾದಿಸುತ್ತದೆ.

ಅಂದು ಅಯೋಧ್ಯೆಯ ರಾಜಸಭೆಯು ಬ್ರಹ್ಮಲೋಕದಂತೆ ಶೋಭಿಸುತ್ತಿತ್ತು. ವಸಿಷ್ಠ-ಕಶ್ಯಪಾದಿ ಮಹರ್ಷಿಗಳು, ವೇದಪಾರಂಗತ ವಿಪ್ರರು ಹಾಗೂ ಕುಶಲ ಮಂತ್ರಿಗಳ ಮಧ್ಯೆ ಕಮಲನಯನ ಶ್ರೀರಾಮನು ಮರ್ಯಾದಾ ಪುರುಷೋತ್ತಮನಾಗಿ ವಿರಾಜಮಾನನಾಗಿದ್ದನು.

“ಲಕ್ಷ್ಮಣ, ಪ್ರಜಾಹಿತವೇ ನಮಗೆ ಪರಮಧರ್ಮ. ರಾಜ್ಯದ ಕಟ್ಟಕಡೆಯ ಪ್ರಜೆಯೂ ಅನ್ಯಾಯಕ್ಕೊಳಗಾಗದಂತೆ ಎಚ್ಚರವಹಿಸು. ದ್ವಾರದ ಬಳಿ ಹೋಗಿ, ಆರ್ತರಾರಾದರೂ ಬಂದಿದ್ದರೆ ಅವರನ್ನು ಗೌರವದಿಂದ ಸಭೆಗೆ ಆಹ್ವಾನಿಸು,” ಎಂದು ರಾಮನು ಆದೇಶಿಸಿದನು.

ಸೌಮಿತ್ರಿಯು ದ್ವಾರಕ್ಕೆ ತೆರಳಿದಾಗ, ಅಲ್ಲಿ ಯಾವುದೇ ಮನುಷ್ಯರಿರಲಿಲ್ಲ; ಬದಲಾಗಿ ತೀವ್ರವಾಗಿ ಗಾಯಗೊಂಡಿದ್ದ ಒಂದು ಶ್ವಾನವು ಕರುಣಾಜನಕವಾಗಿ ಮರುಗುತ್ತಿತ್ತು. ಅದರ ಮಸ್ತಕದಿಂದ ರಕ್ತದ ಧಾರೆ ಹರಿಯುತ್ತಿತ್ತು. ಆ ಶ್ವಾನವು ತನ್ನ ಅಳಲನ್ನು ಸಾರ್ವಭೌಮನ ಮುಂದೆ ನಿವೇದಿಸಲು ಅನುಮತಿ ಕೋರಿತು. ರಾಮನ ಅಪ್ಪಣೆಯಂತೆ ಸಭೆಯನ್ನು ಪ್ರವೇಶಿಸಿದ ಆ ಪ್ರಾಣಿಯು, ಅರಮನೆಯ ಪಾವಿತ್ರ್ಯಕ್ಕೆ ಚ್ಯುತಿ ಬರದಂತೆ ವಿನಯದಿಂದ ನಮಸ್ಕರಿಸಿ ತನ್ನ ದೂರನ್ನು ಮಂಡಿಸಿತು.

“ಪ್ರಭು ರಾಮಚಂದ್ರ, ನಿನ್ನ ಆಳ್ವಿಕೆಯಲ್ಲಿ ಅಧರ್ಮಕ್ಕೆ ತಲೆಯೆತ್ತಲು ಅವಕಾಶವಿಲ್ಲವೆಂಬುದು ಜಗಜ್ಜಾಹೀರು. ಆದರೆ, ನಿರಪರಾಧಿಯಾದ ನನ್ನ ಮೇಲೆ ‘ಸರ್ವಾರ್ಥಸಿದ್ಧ’ನೆಂಬ ವಿಪ್ರನು ಕಾರಣವಿಲ್ಲದೆ ಕೋಲಿನಿಂದ ಪ್ರಹರಿಸಿದ್ದಾನೆ. ಈ ಘೋರ ಅನ್ಯಾಯಕ್ಕೆ ನ್ಯಾಯ ಒದಗಿಸು,” ಎಂದು ಆ ಶ್ವಾನವು ಮನುಷ್ಯವಾಣಿಯಲ್ಲಿ ಪ್ರಾರ್ಥಿಸಿತು.

ರಾಮನು ತಕ್ಷಣವೇ ಆ ಬ್ರಾಹ್ಮಣನನ್ನು ಸಭೆಗೆ ಕರೆಸಿದನು. ಕ್ರೋಧದ ಆವೇಶದಲ್ಲಿ ತಾನು ಮಾಡಿದ ತಪ್ಪನ್ನು ಆತನು ಮುಕ್ತವಾಗಿ ಒಪ್ಪಿಕೊಂಡನು. ಶಾಸ್ತ್ರವಿಧಿಯಂತೆ ಬ್ರಾಹ್ಮಣನಿಗೆ ದೈಹಿಕ ಶಿಕ್ಷೆ ನೀಡುವಂತಿರಲಿಲ್ಲ. ಆಗ ರಾಮನು ಆ ಶ್ವಾನವನ್ನೇ ಕೇಳಿದನು—”ಈ ಅಪರಾಧಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ನೀನೇ ಸೂಚಿಸು.”

ಸಭಿಕರೆಲ್ಲರೂ ಬೆಚ್ಚಿಬೀಳುವಂತೆ ಶ್ವಾನವು ತನ್ನ ನಿರ್ಣಯವನ್ನು ಪ್ರಕಟಿಸಿತು: “ರಾಘವ, ಬ್ರಾಹ್ಮಣನನ್ನುಕಲಂಜರಮಹಾಸಂಸ್ಥಾನದ ಕುಲಪತಿಯನ್ನಾಗಿ ನೇಮಿಸು. ಇದೇ ಅವನಿಗೆ ತಕ್ಕ ಶಾಸ್ತಿ!

ಬ್ರಾಹ್ಮಣನು ಅತ್ಯಂತ ಸಂಭ್ರಮದಿಂದ ಮಠಾಧೀಶನ ಪದವಿಯನ್ನು ಸ್ವೀಕರಿಸಿ, ರಾಜಗಜದ ಮೇಲೆ ಕುಳಿತು ವೈಭವದಿಂದ ಹೊರಟುಹೋದನು. ಆದರೆ ಮಂತ್ರಿಮಂಡಲವು ದಿಗ್ಭ್ರಮೆಯಾಯಿತು. “ಶಿಕ್ಷೆಯೆಂದರೆ ಅಧಿಕಾರ ನೀಡುವಿಕೆಯೇ?” ಎಂಬ ಪ್ರಶ್ನೆಗೆ ಉತ್ತರವಾಗಿ ಆ ಜ್ಞಾನಿ ಶ್ವಾನವು ಮಾರ್ಮಿಕವಾಗಿ ವಿವರಿಸಿತು:

“ರಾಮನೇ, ನಾನು ಕಳೆದ ಜನ್ಮದಲ್ಲಿ ಅದೇ ಮಠದ ಕುಲಪತಿಯಾಗಿದ್ದೆ. ಧರ್ಮನಿಷ್ಠೆಯಿಂದಲೇ ಕಾರ್ಯನಿರ್ವಹಿಸಿದರೂ, ಆ ಉನ್ನತ ಅಧಿಕಾರ ಸ್ಥಾನದಲ್ಲಿದ್ದಾಗ ಸಹಜವಾಗಿ ಬರುವ ಅಹಂಕಾರ ಮತ್ತು ಲೋಪದೋಷಗಳು ನನ್ನನ್ನು ಇಂದು ಈ ಶ್ವಾನ ಜನ್ಮಕ್ಕೆ ತಳ್ಳಿವೆ.

ಈಗ ಈ ಬ್ರಾಹ್ಮಣನು ಕ್ರೋಧಕ್ಕೆ ವಶನಾದವನು, ಸಂಯಮಶೂನ್ಯನು. ಇಂತಹ ವ್ಯಕ್ತಿಗೆ ಮಠದ ಆಡಳಿತ, ದೇವಸ್ವ ಮತ್ತು ಜವಾಬ್ದಾರಿಗಳನ್ನು ವಹಿಸಿಕೊಡುವುದೆಂದರೆ ಅವನ ಅಧಃಪತನಕ್ಕೆ ರತ್ನಗಂಬಳಿ ಹಾಸಿದಂತೆ. ಆ ಕುರ್ಚಿಯ ಮೇಲಿನ ಮದದಿಂದ ಅವನು ಮಾಡುವ ತಪ್ಪುಗಳು ಅವನನ್ನೂ, ಅವನ ಹದಿನಾಲ್ಕು ತಲೆಮಾರುಗಳನ್ನೂ ಘೋರ ನರಕಕ್ಕೆ ದೂಡುತ್ತವೆ.

ಸಿದ್ಧತೆಯಿಲ್ಲದವನಿಗೆ ಸಿಗುವ ‘ಅಧಿಕಾರ’ವು ಹೊರನೋಟಕ್ಕೆ ಹೂಮಾಲೆಯಂತೆ ಕಂಡರೂ, ವಾಸ್ತವದಲ್ಲಿ ಅದು ಆತ್ಮವನ್ನು ಸುಡುವ ಕಿಚ್ಚು!” ಈ ಸತ್ಯದರ್ಶನದಿಂದ ಇಡೀ ರಾಜಸಭೆಯು ಸ್ತಬ್ಧವಾಯಿತು. ಅಧಿಕಾರವೆಂಬುದು ಅನುಭವಿಸಲಿಕ್ಕಲ್ಲ, ಬದಲಾಗಿ ಅತೀವ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ‘ಜವಾಬ್ದಾರಿ’ ಎಂಬ ಮಹಾನ್ ಸಂದೇಶವನ್ನು ಆ ಶ್ವಾನವು ಸಾರಿತು. ಮುಂದೆ ಆ ಶ್ವಾನವು ವಾರಣಾಸಿಯ ಪುಣ್ಯಕ್ಷೇತ್ರದಲ್ಲಿ ಪ್ರಾಯೋಪವೇಶ ಮಾಡಿ ಮುಕ್ತಿಯನ್ನು ಹೊಂದಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi