ಹಸುಗಳು ಅಲೆದಾಡುತ್ತಾ ತಾಳವನವೆಂಬ ಒಂದು ಕಾಡನ್ನು ಪ್ರವೇಶಿಸಿದವು. ಕೃಷ್ಣ ಮತ್ತು ಅವನ ಗೆಳೆಯರು ಅದನ್ನು ಗಮನಿಸಿದರು. ಕತ್ತೆಯ ರೂಪದ ರಾಕ್ಷಸ ಧೇನುಕಾಸುರ ಎನ್ನುವವನು ಅಲ್ಲಿ ವಾಸವಾಗಿದ್ದ. ಕೃಷ್ಣನನ್ನು ಕೊಲ್ಲಲು ಅವನನ್ನು ಕಂಸನೇ ಕಳಿಸಿದ್ದ. ಅವನೊಂದು ಬೃಹದಾಕಾರದ ಕತ್ತೆ. ಮೊನಚಾದ ಹಲ್ಲುಗಳು. ಬಲಿಷ್ಠವಾದ ಕಾಲುಗಳು. ಅವನು ಬಹಳ ದುಷ್ಟ. ತಾಳವನಕ್ಕೆ ಪ್ರವೇಶಿಸಲು ಯಾರಿಗೂ ಅವಕಾಶ ಕೊಡುತ್ತಿರಲಿಲ್ಲ. ಆದರೆ ಅಲ್ಲಿನ ತಾಳ ವೃಕ್ಷಗಳಲ್ಲಿ ರುಚಿಕರವಾದ ತಾಳೆಯ ಹಣ್ಣುಗಳಿವೆ ಎಂದು ಬಾಲಕರಿಗೆ ಗೊತ್ತಿತ್ತು. ಏನಾದರೂ ಮಾಡಿ ಅವುಗಳನ್ನು ಸವಿಯಬೇಕು ಎನ್ನುವುದು ಅವರ ಆಸೆ. ಕೃಷ್ಣ ಮತ್ತು ಬಲರಾಮ ಬಹಳ ಬಲಶಾಲಿಗಳು ಎಂದು ಅವರಿಗೆ ಗೊತ್ತಿತ್ತು. ತಾವು ಅಪಾಯದಲ್ಲಿ ಸಿಕ್ಕಿಹಾಕಿಕೊಂಡರೂ ಈ ವೀರ ಸೋದರರು ತಮ್ಮನ್ನು ಪಾರುಮಾಡುತ್ತಾರೆ ಎನ್ನುವುದು ಅವರ ವಿಶ್ವಾಸ.

ಅವರೆಲ್ಲ ತಾಳವನಕ್ಕೆ ಹೋದರು. ಅಲ್ಲಿ ಮರಗಳಲ್ಲಿ ಮಾಗಿದ ತಾಳೆಹಣ್ಣುಗಳ ಗೊಂಚಲು ತೂಗಿಬಿದ್ದಿದ್ದವು. ಹಣ್ಣುಗಳ ಮಧುರವಾದ ಸುವಾಸನೆ ಅಲ್ಲೆಲ್ಲ ಹಬ್ಬಿತ್ತು. ಆ ಮರಗಳು ಬಹಳ ಎತ್ತರವಾಗಿದ್ದವು. ಹತ್ತುವುದು ಸುಲಭವಾಗಿರಲಿಲ್ಲ. ಕೃಷ್ಣ ಮತ್ತು ಬಲರಾಮರು ತಮ್ಮ ಬಲಿಷ್ಠವಾದ ಕೈಗಳಿಂದ ಮರಗಳನ್ನು ಅಲ್ಲಾಡಿಸಲು ತೊಡಗಿದರು. ಮರಗಳಿಂದ ಹಣ್ಣುಗಳ ಮಳೆಯೇ ಸುರಿಯಿತು. ಬಾಲಕರು ಸಂತೋಷದಿಂದ ಅವುಗಳನ್ನು ಆರಿಸಿಕೊಂಡರು. ಎಷ್ಟು ಆರಿಸಿದರೂ ಮುಗಿಯದಷ್ಟು ಹಣ್ಣುಗಳು ಬಿದ್ದಿದ್ದವು!
ಇದ್ದಕ್ಕಿದ್ದಂತೆಯೇ ಭೂಮಿ ನಡುಗಲಾರಂಭಿಸಿತು. ಗೊರಸಿನ ಸದ್ದು ಹತ್ತಿರ ಹತ್ತಿರಕ್ಕೆ ಬರುವುದು ಬಾಲಕರಿಗೆ ಕೇಳಿಸಿತು. ಅವರು ತಲೆ ಎತ್ತಿ ನೋಡಿದರು. ಬೃಹದಾಕಾರದ ಕತ್ತೆಗಳ ಒಂದು ದೊಡ್ಡ ಗುಂಪೇ ಅವರ ಕಡೆಗೆ ಓಡಿ ಬರುತ್ತಿತ್ತು. ಅವುಗಳ ಕಣ್ಣುಗಳು ಕೆಂಡದ ಉಂಡೆಯಂತಿದ್ದವು. ಇವು ತಾಳವನದ ಕತ್ತೆಯಾಕಾರದ ರಾಕ್ಷಸರು. ಅವುಗಳ ಮುಖಂಡ ಧೇನುಕಾಸುರನ ನಾಯಕತ್ವದಲ್ಲಿ ಅವು ಮುನ್ನುಗ್ಗುತ್ತಿದ್ದವು!

ಕೃಷ್ಣನ ಗೆಳೆಯರು ನುಗ್ಗಿ ಬರುತ್ತಿದ್ದ ಕತ್ತೆಗಳಿಂದ ಪಾರಾಗಲು ದಿಕ್ಕಾಪಾಲಾಗಿ ಓಡಿದರು. ಆದರೆ ಕೃಷ್ಣ ಮತ್ತು ಬಲರಾಮರು ಕತ್ತೆಗಳು ಬರುತ್ತಿದ್ದ ದಾರಿಯಲ್ಲಿಯೇ ನಿಂತು ಆ ರಾಕ್ಷಸರಿಗೆ ಮುಖಾಮುಖಿಯಾದರು. ಮೊದಲು ಧೇನುಕಾಸುರನು ಬಲರಾಮನ ಬಳಿಗೆ ಹೋಗಿ ಕರ್ಕಶವಾಗಿ ಕಿರಿಚುತ್ತಾ ಅವನನ್ನು ಬೆದರಿಸಲು ಪ್ರಯತ್ನಿಸಿತು. ಅದು ಬಲರಾಮನನ್ನು ಕೊಲ್ಲಲು ಅವನ ಎದೆಗೆ ಮತ್ತೆ ಮತ್ತೆ ಕಾಲಿನಿಂದ ಹೊಡೆಯಿತು. ಆದರೆ ಬಲರಾಮ ಅದರ ಹಿಂಗಾಲುಗಳನ್ನು ಲೀಲಾಜಾಲವಾಗಿ ಹಿಡಿದುಕೊಂಡ. ಕಾಡು ಕುದುರೆಯನ್ನು ಹಿಡಿಯಲು ಗೊಲ್ಲನು ನೇಣುಹಗ್ಗವನ್ನು ತಿರುಗಿಸುವಂತೆ ಅದನ್ನು ಗಿರಗಿರನೆ ತಿರುಗಿಸಿದನು. ಆಮೇಲೆ ಬಲರಾಮನು ಧೇನುಕಾಸುರನನ್ನು ಒಂದು ತಾಳೆಯ ಮರದ ಮೇಲಕ್ಕೆ ಎಸೆದನು. ಧೇನುಕಾಸುರನ ಗೋಣು ಮುರಿಯಿತು. ಅವನು ಅಲ್ಲೇ ಸತ್ತುಹೋದನು. ಉಳಿದ ರಾಕ್ಷಸರನ್ನೂ ಈ ಸೋದರರು ಅದೇ ರೀತಿಯಲ್ಲಿ ಕೊಂದು ಹಾಕಿದರು. ಅವರ ಬೃಹದಾಕಾರದ ದೇಹಗಳನ್ನೂ ತಾಳೆ ಮರಗಳ ಮೇಲೆ ಎಸೆದರು.
ಸ್ವಲ್ಪ ಕಾಲದಲ್ಲಿಯೇ ವೃಂದಾವನ ಗ್ರಾಮದ ಇತರ ಜನರು ತಾಳವನಕ್ಕೆ ಬಂದರು. ಯಾವ ಭಯವೂ ಇಲ್ಲದೆ ತಮಗೆ ಬೇಕಾದಷ್ಟು ತಾಳೆಯ ಹಣ್ಣುಗಳನ್ನು ಆರಿಸಿಕೊಂಡರು. ಅವರನ್ನು ಹೆದರಿಸಲು ಕತ್ತೆಯಾಕಾರದ ರಾಕ್ಷಸರು ಇನ್ನೇನೂ ಅಲ್ಲಿ ಉಳಿದಿರಲಿಲ್ಲ. ಇದೆಲ್ಲಾ ವೃಂದಾವನದ ರಕ್ಷಕರಾಗಿದ್ದ ಕೃಷ್ಣ ಮತ್ತು ಬಲರಾಮರ ಕೃಪೆಯಾಗಿತ್ತು. ಎಲ್ಲರೂ ಅವರಿಗೆ ಕೃತಜ್ಞರಾಗಿದ್ದರು.






Leave a Reply