ಇಲ್ಲಿ ವಿವಿಧ ತರಕಾರಿಗಳ ಸಬ್ಜಿಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ಈ ಪಲ್ಯಗಳು ಪೌಷ್ಟಿಕಾಂಶದಿಂದ ಕೂಡಿವೆ. ಚಪ್ಪಾತಿ, ಪೂರಿ, ದೋಸೆ, ರೊಟ್ಟಿಯಲ್ಲದೆ ಅನ್ನದೊಂದಿಗೆ ಕೂಡ ತಿನ್ನಬಹುದು. ಊಟದ ಡಬ್ಬಿಗೆ ಸೊಗಸಾದ ಪಲ್ಯಗಳು. ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿ ಜೊತೆ ಸೇವಿಸಿ.
ಗಸಗಸೆಯಲ್ಲಿ ನುಗ್ಗೆಕಾಯಿ

ಬೇಕಾಗುವ ಪದಾರ್ಥಗಳು
ನುಗ್ಗೆಕಾಯಿ – 15
ನೀರು – 2 ಬಟ್ಟಲು
ತುಪ್ಪ – 35 ಎಂಎಲ್
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ತುರಿದ ಶುಂಠಿ – 2 ಟೇಬಲ್ ಚಮಚ
ಇಂಗು – 1 ಟೀ ಚಮಚ
ಉಪ್ಪು – 1 1/2 ಟೀ ಚಮಚ
ಅರಿಶಿನ – 1 ಟೀ ಚಮಚ
ಗಸಗಸೆ – 3/4 ಬಟ್ಟಲು
ಸಾಸಿವೆ ಪುಡಿ – 2 ಟೀ ಚಮಚ (ಕಡ್ಡಾಯವಲ್ಲ)
ಮಾಡುವ ವಿಧಾನ : ನುಗ್ಗೇಕಾಯಿಯನ್ನು ಚೆನ್ನಾಗಿ ತೊಳೆದು ಮೃದುವಾಗಿ ಸಿಪ್ಪೆ ತೆಗೆಯಿರಿ. 4.5 ಸೆಂಟಿ ಮೀಟರ್ ಉದ್ದಕ್ಕೆ ಕತ್ತರಿಸಿ ಪಾತ್ರೆಯಲ್ಲಿ ಹಾಕಿಡಿ. ನಾನ್‌ಸ್ಟಿಕ್ ಬಾಣಲೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಕತ್ತರಿಸಿದ ಹಸಿ ಮೆಣಸಿನ ಕಾಯಿ, ತುರಿದ ಶುಂಠಿ, ಇಂಗು ಹಾಕಿ ಕಲಸಬೇಕು. ಅನಂತರ ನುಗ್ಗೇಕಾಯಿಯನ್ನು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ 15 ನಿಮಿಷ ಬೇಯಿಸಿ. ಅದು ಬೇಯುತ್ತಿದ್ದಾಗ, ಇತ್ತ ಗಸಗಸೆಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅದನ್ನು ಬೇಯುತ್ತಿರುವ ತರಕಾರಿಗೆ ಹಾಕಿ. ರುಚಿ ಹೆಚ್ಚಿಸಲು ಸಾಸಿವೆ ಪುಡಿಯನ್ನು ಹಾಕಿ (ಕಡ್ಡಾಯವಲ್ಲ). ನುಗ್ಗೇಕಾಯಿ ಭಾಗಶಃ ಬೆಂದಾಗ ಇನ್ನಷ್ಟು ನೀರು ಹಾಕಿ 5 ನಿಮಿಷ ಬೇಯಿಸಿ. ಚೆನ್ನಾಗಿ ಕಲಸಿ ಉಪಯೋಗಿಸಿ.
ಕುಂಬಳಕಾಯಿ ಮತ್ತು ಪನ್ನೀರ್

ಬೇಕಾಗುವ ಪದಾರ್ಥಗಳು
ಕುಂಬಳಕಾಯಿ – 1.2 ಕೆಜಿ
ಹಾಲು – 2.2 ಲೀಟರ್
ನಿಂಬೆ ರಸ – 180 ಎಂಎಲ್
ತುಪ್ಪ – 45 ಎಂಎಲ್
ಒಣ ಕೆಂಪು ಮೆಣಸಿನಕಾಯಿ – 2
ಜೀರಿಗೆ – 2 ಟೀ ಚಮಚ
ಪಲಾವ್ ಎಲೆ – 2
ಇಂಗು – 1/2 ಟೀ ಚಮಚ
ಅರಿಶಿನ – 1/2 ಟೀ ಚಮಚ
ಉಪ್ಪು – 1 1/2 ಟೀ ಚಮಚ
ತಾಜಾ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ : ಹಾಲನ್ನು ಉಪಯೋಗಿಸಿ ಪನ್ನೀರ್ ಮಾಡಿಕೊಳ್ಳಿ ಅಥವಾ ಅಂಗಡಿಯಲ್ಲಿ ಸಿಗುವ ಪನ್ನೀರ್ ಅನ್ನು ತಂದು ಕತ್ತರಿಸಿಟ್ಟುಕೊಳ್ಳಿ. ಕುಂಬಳಕಾಯಿಯನ್ನು ಎರಡು ಭಾಗವಾಗಿ ಕತ್ತರಿಸಿ ಬೀಜಗಳನ್ನು ತೆಗೆಯಿರಿ. ಕುಂಬಳಕಾಯಿ ಸಿಪ್ಪೆ ತೆಗೆದು ಮಧ್ಯಮ ಅಳತೆಯಲ್ಲಿ ಚೂರು ಮಾಡಿ ಪಾತ್ರೆಗೆ ಹಾಕಿಡಿ. ಒಂದು ದೊಡ್ಡ ಪ್ಯಾನ್‌ಗೆ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಹಾಕಿ. ಅದು ಸಿಡಿಯಲಿ. ಪಲಾವ್ ಎಲೆ, ಇಂಗು, ಅರಿಶಿನ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ಕುಂಬಳಕಾಯಿ ಚೂರುಗಳನ್ನು ಹಾಕಿ 15 ನಿಮಿಷ ಬೇಯಿಸಿ. ಕುಂಬಳಕಾಯಿಯಿಂದಲೇ ನೀರು ಬರುವುದರಿಂದ ಬೇರೆ ನೀರು ಹಾಕುವ ಅಗತ್ಯವಿಲ್ಲ. ಅಂತ್ಯದಲ್ಲಿ ಪನ್ನೀರ್ ಚೂರುಗಳನ್ನು ಹಾಕಿ. ಐದು ನಿಮಿಷ ಕಲಸಿ. ಅನಂತರ ಕತ್ತರಿಸಿದ
ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.
ಮೊಸರಿನಲ್ಲಿ ಕರಿದ ಮಿಶ್ರ ತರಕಾರಿ

ಬೇಕಾಗುವ ಪದಾರ್ಥಗಳು
ಆಲೂಗೆಡ್ಡೆ – 2 ದೊಡ್ಡದು
ಕ್ಯಾರೆಟ್ – 4
ಕ್ಯಾಪ್ಸಿಕಮ್ (ಹಳದಿ, ಕೆಂಪು) – 2
ಬ್ರಾಕಲಿ – 1 ದೊಡ್ಡದು ಅಥವಾ 2 ಸಣ್ಣದು
ಮೊಸರು – 700 ಎಂಎಲ್
ತುಪ್ಪ – 45 ಎಂಎಲ್
ಸಾಸಿವೆ – 1 ಟೀ ಚಮಚ
ಕಲೊಂಜಿ ಬೀಜ – 1 ಟೀ ಚಮಚ
ಶುಂಠಿ ಪುಡಿ – 1/2 ಟೀ ಚಮಚ
ಇಂಗು – 1/2 ಟೀ ಚಮಚ
ಪಪ್ರಿಕ ಪುಡಿ (ಕೆಂಪು ಮೆಣಸಿನ ಪುಡಿ) – 1/2 ಟೀ ಚಮಚ
ಧನ ಜೀರ – 1/2 ಟೀ ಚಮಚ
ಕರಿ ಮೆಣಸು – 1/4 ಟೀ ಚಮಚ
ಉಪ್ಪು – 1 1/2 ಟೀ ಚಮಚ
ಅರಿಶಿನ – 1 ಟೀ ಚಮಚ
ಮಾಡುವ ವಿಧಾನ : ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಆಲೂಗೆಡ್ಡೆ ಮತ್ತು ಕ್ಯಾರೆಟ್ ಸಿಪ್ಪೆ ತೆಗೆದು ಉದ್ದಾಗಿ ಕತ್ತರಿಸಿ. ಪ್ರತ್ಯೇಕ ಪಾತ್ರೆಗಳಲ್ಲಿ ಹಾಕಿಡಿ. ಹಳದಿ ಅಥವಾ ಕೆಂಪು ಕ್ಯಾಪ್ಸಿಕಮ್ ಉದ್ದನೆಯ ಚೂರು ಮಾಡಿ ಬೀಜ ತೆಗೆಯಿರಿ. ಅದನ್ನು ಕತ್ತರಿಸಿ ಪ್ರತ್ಯೇಕ ಪಾತ್ರೆಯಲ್ಲಿಡಿ. ಬ್ರಾಕಲಿಯನ್ನು ಸಣ್ಣ ಹೂವುಗಳಾಗಿ ಕತ್ತರಿಸಿ. ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ 5-7 ನಿಮಿಷ ಕುದಿಸಿ. ನೀರು ಬಸಿದು ಪಕ್ಕದಲ್ಲಿಡಿ.
ಬಾಣಲೆ ಅಥವಾ ಪ್ಯಾನ್‌ನಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಮೊದಲು ಚೂರು ಮಾಡಿದ ಆಲೂಗೆಡ್ಡೆಯನ್ನು ಕರಿದು ಎಣ್ಣೆ ಹೀರುವ ಕಾಗದ ಹಾಕಿದ ತಟ್ಟೆಗೆ ಹಾಕಿ. ಅನಂತರ ಕ್ಯಾರೆಟ್ ಅನ್ನು ಕರಿಯಿರಿ ಮತ್ತು ಆಲೂಗೆಡ್ಡೆ ಹಾಕಿದ ತಟ್ಟೆಗೆ ಹಾಕಿ. ಈಗ ಇನ್ನೊಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಕಾಯಿಸಿ. ಮೊದಲು ಸಾಸಿವೆ ಹಾಕಿ ಸಿಡಿಸಿ. ಅನಂತರ ಕಲೊಂಜಿ ಬೀಜ, ಶುಂಠಿ, ಇಂಗು ಮತ್ತು ಪಪ್ರಿಕ ಪುಡಿಯನ್ನು ಹಾಕಿ ಕಲಸಿ. ಕ್ಯಾಪ್ಸಿಕಮ್ ಹಾಕಿ ಐದು ನಿಮಿಷ ಬೇಯಿಸಿ. ಅನಂತರ ಬ್ರಾಕಲಿಯನ್ನು ಹಾಕಿ ಕಲಸಿದ ಮೇಲೆ ಆಲೂಗೆಡ್ಡೆ ಮತ್ತು ಕ್ಯಾರೆಟ್ ಅನ್ನು ಹಾಕಿ. ಉಪ್ಪು, ಅರಿಶಿನ, ಧನಾ ಜೀರ ಮತ್ತು ಕರಿಮೆಣಸನ್ನು ಚಿಮಿಕಿಸಿ. ಚೆನ್ನಾಗಿ ಕಲಸಿ 2-3 ನಿಮಿಷ ಕಾಯಿಸಿ. ಒಲೆಯಿಂದ ಇಳಿಸಿ ಮೊಸರು ಹಾಕಿ ಕಲಸಿ.






Leave a Reply