ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಬ್ರಿಟಿಷ್ ವಿದ್ಯಾರ್ಥಿ ಮಧ್ಯೆ ಲಂಡನ್ನಿನಲ್ಲಿ, ಬೆಳಗಿನ ವಾಯು ಸಂಚಾರದ ಸಮಯದಲ್ಲಿ ನಡೆದ ಸಂವಾದ.
ಶ್ರೀಲ ಪ್ರಭುಪಾದ: ಕೃಷ್ಣ ಪ್ರಜ್ಞೆಯ ಸಂದೇಶವು ಆಧ್ಯಾತ್ಮಿಕ ಜಗತ್ತಿನಿಂದ ಬರುತ್ತದೆ. ಅದು ಈ ಲೌಕಿಕ ಪ್ರಪಂಚದ್ದಲ್ಲ. ಆದ್ದರಿಂದ ಕೆಲವು ಸಂದರ್ಭಗಳಲ್ಲಿ ಜನರು ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಆದುದರಿಂದ ನಾವು ಅದನ್ನು ಚೆನ್ನಾಗಿ ವಿವರಿಸಬೇಕು. ಆತ್ಮ ಏನೆಂಬುದನ್ನೂ ಅವರು ಅರ್ಥ ಮಾಡಿಕೊಳ್ಳಲಾರರು. ದೊಡ್ಡ ದೊಡ್ಡ ವಿಜ್ಞಾನಿಗಳು. ದೊಡ್ಡ ದೊಡ್ಡ ತತ್ತ್ವಜ್ಞಾನಿಗಳು. ಅವರ ಬಳಿ ಅಧ್ಯಾತ್ಮ ಅಥವಾ ಆಧ್ಯಾತ್ಮಿಕ ಜಗತ್ತಿನ ಬಗೆಗೆ ಮಾಹಿತಿಗಳಿಲ್ಲ. ಆದುದರಿಂದ ಕೆಲವು ಬಾರಿ ಇದನ್ನು ಅರ್ಥ ಮಾಡಿಕೊಳ್ಳಲು ಅವರು ಹೆಣಗಾಡುತ್ತಾರೆ.

ವಿದ್ಯಾರ್ಥಿ: ವೇದಗಳ ಕಾಲವನ್ನು ಕುರಿತಂತೆ ನಾನು ಒಂದಷ್ಟು ಸಂಶೋಧನೆ ಮಾಡುತ್ತಿದ್ದೇನೆ. ಹರಪ್ಪ ಮತ್ತು ಮೊಹೆಂಜೋದಾರೊದ ಶೋಧನೆಗಳಿಂದ ದೊರೆತ ಪುರಾವೆಗಳು ವೇದಗಳು ಹಿಂದೆ ಚಿಂತಿಸಿದ್ದಕ್ಕಿಂತಲೂ ಇತ್ತೀಚಿನವು ಎಂದು ತೋರಿಸುತ್ತವೆಂದು ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ವೇದಗಳು ಸ್ವಲ್ಪಮಟ್ಟಿನ ಅಧಿಕೃತತೆಯನ್ನು ಕಳೆದುಕೊಳ್ಳಬಹುದು. ಏಕೆಂದರೆ, ಅವುಗಳಿನ್ನು ಜಗತ್ತಿನ ಅತ್ಯಂತ ಪುರಾತನ ಧರ್ಮಗ್ರಂಥಗಳಂತೆ ಕಾಣುವುದಿಲ್ಲ.
ಶ್ರೀಲ ಪ್ರಭುಪಾದ: ವೇದ ಎಂದರೆ `ಧರ್ಮ’ ಎಂದು ಅರ್ಥವಲ್ಲ. ವೇದ ಎಂದರೆ `ಜ್ಞಾನ’. ಆದುದರಿಂದ ನೀವು ಜ್ಞಾನದ ಇತಿಹಾಸವನ್ನು ಹುಡುಕಿದರೆ, ನೀವು ವೇದದ ಮೂಲದ ಕಾಲವನ್ನೂ ಪತ್ತೆ ಹಚ್ಚಬಹುದು. ಜ್ಞಾನ ಎಂದು ಆರಂಭವಾಯಿತೆಂಬುದನ್ನು ನೀವು ಪತ್ತೆ ಹಚ್ಚಬಲ್ಲಿರಾ? ನೀವು ಹುಡುಕುವಿರಾ?
ವಿದ್ಯಾರ್ಥಿ: ನಮಗೆ ಸಾಧ್ಯವಾದೀತೆಂದು ನಾನು ಭಾವಿಸಲಾರೆ.
ಶ್ರೀಲ ಪ್ರಭುಪಾದ: ಹಾಗಾದರೆ ನೀವು ವೇದಗಳ ಚರಿತ್ರೆಯನ್ನು ಹೇಗೆ ಹುಡುಕುವಿರಿ? ವೇದಗಳೆಂದರೆ ಜ್ಞಾನ. ಆದುದರಿಂದ ಮೊದಲು ಜ್ಞಾನ ಆರಂಭವಾದ ದಿನವನ್ನು ಪತ್ತೆ ಹಚ್ಚಿ. ಅನಂತರ ನೀವು ವೇದಗಳ ಕಾಲವನ್ನು ಕಂಡು ಹಿಡಿಯಿರಿ.
ಈ ಲೌಕಿಕ ಜಗತ್ತಿನ ಸೃಷ್ಟಿಯ ಕಾಲದೊಂದಿಗೆ ವೇದಗಳ ಚರಿತ್ರೆ ಆರಂಭವಾಯಿತು. ಸೃಷ್ಟಿಯ ಕಾಲವನ್ನು ಯಾರೂ ಕೊಡಲಾರರು. ಸೃಷ್ಟಿಯು ಬ್ರಹ್ಮನ ಹುಟ್ಟಿನಿಂದ ಆರಂಭವಾಗುತ್ತದೆ, ಮತ್ತು ಬ್ರಹ್ಮನ ಒಂದು ದಿನವನ್ನೂ ನಿಮಗೆ ಲೆಕ್ಕ ಹಾಕುವುದು ಸಾಧ್ಯವಿಲ್ಲ. ಬ್ರಹ್ಮನ ರಾತ್ರಿ ವೇಳೆ, ವಿಶ್ವವು ಸ್ವಲ್ಪ ಮಟ್ಟಿಗೆ ನಾಶವಾಗುತ್ತದೆ, ಮತ್ತು ಅವನ ಹಗಲಿನಲ್ಲಿ ಮತ್ತೆ ಸೃಷ್ಟಿಯಾಗುತ್ತದೆ. ಎರಡು ರೀತಿಯ ವಿನಾಶಗಳಿವೆ. ಒಂದು ವಿನಾಶವು ಬ್ರಹ್ಮನ ರಾತ್ರಿ ವೇಳೆಯಲ್ಲಿ ಸಂಭವಿಸುತ್ತದೆ. ಅಂತಿಮ ವಿನಾಶವು ಇಡೀ ಭೌತಿಕ ಸೃಷ್ಟಿಯನ್ನೇ ಸಂಪೂರ್ಣ ನಿರ್ನಾಮ ಮಾಡಿಬಿಡುತ್ತದೆ. ಆದರೆ ಈ ಚಿಕ್ಕ ಪುಟ್ಟ ಜನಗಳು ವೇದಗಳ ಕಾಲದ ಬಗೆಗೆ ಊಹಾಪೋಹಾ ಮಾಡುತ್ತಾರೆ. ಅದು ಹಾಸ್ಯಾಸ್ಪದ.
ರಾತ್ರಿಯಲ್ಲಿ ಬೆಳೆಯುವ ಕೆಲವು ಸೂಕ್ಷ್ಮಜೀವಿಗಳಿವೆ. ಅವು ಬೆಳಗಾಗುತ್ತಿದ್ದಂತೆ ಸಾಯುತ್ತವೆ. ಅವುಗಳ ಇಡೀ ಜೀವನ ಒಂದು ರಾತ್ರಿ ಮಾತ್ರ. ನಮ್ಮ ಬದುಕೂ ಅಷ್ಟೇ. ಚರಿತ್ರೆ ಏನು ಬರೆಯಬಹುದು? ಆದುದರಿಂದ ನಾವು ವೇದ ಜ್ಞಾನವನ್ನು ವೈದಿಕ ತಜ್ಞರಿಂದ ಪಡೆಯುತ್ತೇವೆ.
ಯಾರೂ ಕೂಡ ಮಂಡೂಕ ತತ್ತ್ವಜ್ಞಾನಿಯಾಗಬಾರದು.
ನಿಮಗೆ ಮಂಡೂಕ ತತ್ತ್ವಜ್ಞಾನದ ಬಗೆಗೆ ಗೊತ್ತಾ? ಡಾ. ಫ್ರಾಗ್ ಅಟ್ಲಾಂಟಿಕ್ ಸಾಗರವನ್ನು ನೋಡಿರಲಿಲ್ಲ. ಅವರಿಗೆ ಯಾರೋ ಹೇಳಿದರು, `ನಾನು ಅಷ್ಟು ಅಗಾಧವಾದ ಜಲ (ಸಾಗರ) ವನ್ನು ಕಂಡೆ’ ಎಂದು.

ಆಗ ಡಾ. ಫ್ರಾಗ್ ಕೇಳಿದರು, `ಓ! ಅದು ಈ ಬಾವಿಗಿಂತ ದೊಡ್ಡದೇ?’
ವಿದ್ಯಾರ್ಥಿ: ಹೌದು, ಅದು ಅವರ ಊಹೆಗೆ ನಿಲುಕದ್ದು.
ಶ್ರೀಲ ಪ್ರಭುಪಾದ: ಹೌದು. ಆದುದರಿಂದ ಈ ವಿದ್ವಾಂಸರು ತಮ್ಮ ಬಾವಿಗಳಲ್ಲಿ ಕೊಳೆಯುತ್ತಿರುವ ಕಪ್ಪೆಗಳಂತೆ. ಅವರು ವೇದ ಜ್ಞಾನದ ಬಗೆಗೆ ಏನು ತಾನೇ ಅರ್ಥ ಮಾಡಿಕೊಳ್ಳುವುದು ಸಾಧ್ಯ?
ವಿದ್ಯಾರ್ಥಿ: ಹಾ, ಹೌದು. ವಿಷಯಾಂತರವಾಗಿ, ಬದುಕಿನ ಅತ್ಯಂತ ನಿಜವಾದ ರೂಪ, ಬದುಕಿನ ಅತ್ಯಂತ ಶುದ್ಧವಾದ ರೂಪವು ಪ್ರಕೃತಿಯೊಡನೆ ಜೀವಿಸಿದ್ದು, ಪ್ರಕೃತಿಯ ವಿರೋಧವಾಗಿ ಅಲ್ಲ ಎಂದು ವೇದಗಳು ಒಪ್ಪುತ್ತವೆ ಎಂದು ನೀವು ಭಾವಿಸುವಿರೋ ಇಲ್ಲವೋ ಗೊತ್ತಿಲ್ಲ.
ಶ್ರೀಲ ಪ್ರಭುಪಾದ: ಓ! ಹೌದು. ನಿಜವಾದ ಬದುಕೆಂದರೆ ನೀವು ನಿಮ್ಮ ದೈಹಿಕ ಚಟುವಟಿಕೆಗಳನ್ನು ಆದಷ್ಟೂ ಕಡಮೆಗೊಳಿಸಬೇಕು. ಈ ಮೂಲಕ ನೀವು ನಿಮ್ಮ ಸಮಯ ಉಳಿಸಿ ಆಧ್ಯಾತ್ಮಿಕ ಗ್ರಹಿಕೆಗೆ ಸದುಪಯೋಗಪಡಿಸಿಕೊಳ್ಳಬೇಕು. ಅದು ನಿಜವಾದ ಜೀವನ. ಮತ್ತು ಪ್ರಸ್ತುತದ, ದೇಹಾತ್ಮ ಬುದ್ಧಿಯ ಉದ್ದೇಶದ ನಾಗರಿಕತೆಯು ಪ್ರಾಣಿ ಬದುಕು. ಇದು ನಾಗರಿಕ ಬದುಕಲ್ಲ.

ಅಥಾತೋ ಬ್ರಹ್ಮ-ಜಿಜ್ಞಾಸ ನಾಗರಿಕ ಬದುಕು ಯಾವಾಗ ಆರಂಭವಾಗುತ್ತದೆ? ಆಧ್ಯಾತ್ಮಿಕ ಆತ್ಮದ ಬಗೆಗೆ ಕೇಳುವಷ್ಟು ಮುಂದುವರಿದಾಗ ನಾಗರಿಕ ಜೀವನ ಆರಂಭವಾಗುತ್ತದೆ. ಆದರೆ ಅಂತಹ ಪ್ರಶ್ನೆ ಇಲ್ಲವಾದರೆ, ಆಧ್ಯಾತ್ಮಿಕ ಆತ್ಮ ಎಂದರೇನೆಂದು ಜನರು ಕೇಳದಿದ್ದರೆ, ಅವರು ಬೆಕ್ಕು, ನಾಯಿಗಳಂತೆ.
ದೈಹಿಕ ತೊಂದರೆ, ಗೊಂದಲಗಳಿಂದ ಸಾಧ್ಯವಾದಷ್ಟೂ ಮುಕ್ತರಾಗುವುದನ್ನು ವೈದಿಕ ಬದುಕು ಬೋಧಿಸುತ್ತದೆ. ಆದುದರಿಂದ, ವೈದಿಕ ಶಿಕ್ಷಣವು ಬ್ರಹ್ಮಚರ್ಯದಿಂದ ಆರಂಭವಾಗುತ್ತದೆ. ಹೌದಲ್ಲವೇ? ಆದರೆ ಈ ಮೂರ್ಖರು ತಮ್ಮ ಲೈಂಗಿಕ ಬದುಕನ್ನು ತಡೆಯಲಾರರು. ಅವರ ಬದುಕಿನ ತತ್ತ್ವವೆಂದರೆ, ಅನಿಯಂತ್ರಿತವಾಗಿ ಲೈಂಗಿಕ ಬದುಕನ್ನು ನಡೆಸುವುದು ಮತ್ತು ಗರ್ಭ ಧರಿಸಿದರೆ ಮಗುವನ್ನು ಕೊಲ್ಲುವುದು.
ವಿದ್ಯಾರ್ಥಿ: ಹೌದು.
ಶ್ರೀಲ ಪ್ರಭುಪಾದ: ಅದು ಅವರ ಮೂರ್ಖ ಸಿದ್ಧಾಂತ. ಅವರಿಗೆ ಗೊತ್ತಿಲ್ಲ, ತರಬೇತಿಯಿಂದ ಲೈಂಗಿಕ ಜೀವನವನ್ನು ಮರೆಯಬಹುದೆಂದು. ಲೈಂಗಿಕ ಬದುಕನ್ನು ಮರೆತರೆ ಗರ್ಭಪಾತದ ಪ್ರಶ್ನೆ ಎಲ್ಲಿಯದು? ಆದರೆ ಅವರು ಹಾಗೆ ಮಾಡುವುದಿಲ್ಲ. ಆದುದರಿಂದ, ಹೀಗೆ ಹೇಳುತ್ತಾರೆ, ಅದಾಂತಾ-ಗೋಬಿರ್ ವಿಶತಾಂ ತಮಿಶ್ರಂ, ಅನಿಯಂತ್ರಿತ ಇಂದ್ರಿಯ ಸಂತುಷ್ಟಿಯಿಂದ ಅವರು ಕ್ರಮೇಣ ಪ್ರಾಣಿ ಬದುಕಿನತ್ತ ಜಾರುತ್ತಿದ್ದಾರೆ.

ಗರ್ಭಪಾತದಲ್ಲಿ ತೊಡಗುವ, ಗರ್ಭದಲ್ಲೇ ಭ್ರೂಣವನ್ನು ಕೊಲ್ಲುವ ವ್ಯಕ್ತಿಯನ್ನು ಅವನ ಮುಂದಿನ ಜನ್ಮದಲ್ಲಿ ಗರ್ಭದೊಳಗೆ ಹಾಕಲಾಗುವುದು. ಮತ್ತು ಯಾರಾದರೂ ಅವನನ್ನು ಕೊಲ್ಲುವರು. ಅವನೆಷ್ಟು ಭ್ರೂಣಗಳನ್ನು ಕೊಂದಿರುತ್ತಾನೋ ಅಷ್ಟು ಜನ್ಮಗಳನ್ನು ಅವನು ಸ್ವೀಕರಿಸಿ ಹತ್ಯೆಗೀಡಾಗಬೇಕು. ಆದುದರಿಂದ ನೂರಾರು ವರ್ಷಗಳ ಕಾಲ ಅವನಿಗೆ ಹಗಲನ್ನು ನೋಡುವುದು ಸಾಧ್ಯವಿಲ್ಲ. ಅವನು ಗರ್ಭದಲ್ಲಿಯೇ ಇದ್ದು ಕೊಲೆಗೀಡಾಗುತ್ತಾನೆ. ಜನರಿಗೆ ಪ್ರಕೃತಿಯ ನಿಯಮಗಳು ಗೊತ್ತಿಲ್ಲ. ಪ್ರಕೃತಿಯ ನಿಯಮಗಳನ್ನು ಸರ್ಕಾರದ ಕಾನೂನಿನಂತೆ ಯಾರೂ ಉಲ್ಲಂಘಿಸಲಾಗದು. ಉದಾಹರಣೆಗೆ, ನೀವು ಯಾರನ್ನಾದರೂ ಕೊಲ್ಲುತ್ತೀರಿ – ನೀವು ಏನೋ ತಂತ್ರದಿಂದ ಪಾರಾಗಬಹುದು. ಆದರೆ ನೀವು ಪ್ರಕೃತಿಯ ನಿಯಮದಿಂದ ತಪ್ಪಿಸಿಕೊಳ್ಳಲಾರಿರಿ. ಎಷ್ಟು ಬಾರಿ ನೀವು ಕೊಂದಿರುತ್ತೀರೋ ಅಷ್ಟು ಬಾರಿ ನೀವು ಗರ್ಭದಲ್ಲಿ ಕೊಲ್ಲಲ್ಪಡಬೇಕು. ಅದು ಪ್ರಕೃತಿ ನಿಯಮ.
ವಿದ್ಯಾರ್ಥಿ: ಲಂಡನ್ನಿನ ಮುಖ್ಯ ಆಸ್ಪತ್ರೆಯ ಗರ್ಭಪಾತ ವಾರ್ಡ್‌ನಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರ ಜೊತೆ ಕಳೆದ ವಾರವಷ್ಟೇ ನಾನು ಮಾತನಾಡುತ್ತಿದ್ದೆ. ಅದು ಭಯಾನಕ. ಕೆಲವು ಭ್ರೂಣಗಳು ಎಷ್ಟು ಬೆಳವಣಿಗೆ ಸ್ಥಿತಿಯಲ್ಲಿರುತ್ತವೆ ಎಂದರೆ ಜೀವ ಸಾಧ್ಯತೆ ಹೆಚ್ಚು ಎಂದು ಸ್ಪಷ್ಟವಾಗುತ್ತದೆ.
ಶ್ರೀಲ ಪ್ರಭುಪಾದ: ಸಾಧ್ಯತೆ ಪ್ರಶ್ನೆ ಎಂಬುದೆ ಇಲ್ಲ. ಲೈಂಗಿಕ ಪ್ರಕ್ರಿಯೆಯ ಆರಂಭದ ಜೊತೆಗೇ ಜೀವವೂ ಶುರುವಾಗುತ್ತದೆ. ಜೀವಿಯು ತುಂಬ ಚಿಕ್ಕದು. ಪ್ರಕೃತಿ ನಿಯಮದಂತೆ, ಅವನ ಕರ್ಮದಂತೆ, ಅವನನ್ನು ತಂದೆಯ ವೀರ್ಯದೊಳಗೆ ಕಳುಹಿಸಲಾಗುತ್ತದೆ. ಮತ್ತು ತಾಯಿಯ ಗರ್ಭಾಶಯದೊಳಗೆ ಅದನ್ನು ಸೇರಿಸಲಾಗುತ್ತದೆ. ಪುರುಷ ಮತ್ತು ಸ್ತ್ರೀಯ ವೀರ್ಯ ಮತ್ತು ಅಂಡಾಣು ಬೆರೆಯುವ ಪ್ರಕ್ರಿಯೆಯಾಗಿ ಬಟಾಣಿ ಕಾಳಿನಂತಹ ದೇಹ ರಚನೆಯಾಗುತ್ತದೆ. ಅನಂತರ ಈ ಕಾಳಿನಂತಹ ರೂಪವು ಕ್ರಮೇಣ ಬೆಳೆಯುತ್ತದೆ. ಮೊದಲ ಹಂತವು 9 ತೂತುಗಳ ರೂಪ – ಕಿವಿ, ಕಣ್ಣು, ಮೂಗು, ಬಾಯಿ , ಜನನಾಂಗ ಮತ್ತು ಗುದ. ಅನಂತರ ಕ್ರಮೇಣ ಇಂದ್ರಿಯಗಳು ಬೆಳವಣಿಗೆ ಹೊಂದುತ್ತವೆ. ಆರೂವರೆ ತಿಂಗಳ ವೇಳೆಗೆ ಎಲ್ಲವೂ ಪೂರ್ಣಗೊಂಡು ಜೀವಿಯ ಪ್ರಜ್ಞೆ ಮರಳುತ್ತದೆ. ದೇಹ ರಚನೆಗೆ ಮುನ್ನ ಜೀವಿಯು ಪ್ರಜ್ಞಾಹೀನವಾಗಿರುತ್ತದೆ, ಅನಸ್ತೀಶಿಯಾ ತರಹ. ಅನಂತರ ಅವನು ಕನಸು ಕಾಣುತ್ತಾನೆ, ಕ್ರಮೇಣ ಪ್ರಜ್ಞೆ ಬರುತ್ತದೆ. ಆ ಸಂದರ್ಭದಲ್ಲಿ ಅವನು ಹೊರಬರಲು ಬಹಳ ಹೆಣಗಾಡುತ್ತಾನೆ. ಆದರೆ ಪ್ರಕೃತಿಯು ಅವನಿಗೆ ನೂಕುವ ನೆರವು ನೀಡುತ್ತದೆ. ಆಗ ಅವನು ಹೊರಬರುತ್ತಾನೆ. ಇದು ಜನನದ ವಿಧಾನ.

ಇದು ವೇದ ಜ್ಞಾನ. ವೈದಿಕ ಸಾಹಿತ್ಯದಲ್ಲಿ ಪ್ರತಿಯೊಂದನ್ನೂ ವಿವರಿಸಿರುವುದನ್ನು ನೀವು ನೋಡಬಹುದು. ಆದುದರಿಂದ ವೇದವನ್ನು ಚರಿತ್ರೆಗೆ ಹೇಗೆ ಒಳಪಡಿಸುವುದು? ಆದರೆ ಕಷ್ಟವೆಂದರೆ, ನಾವು ಆಧ್ಯಾತ್ಮಿಕವಾದ ವಿಷಯವನ್ನು ಮಾತನಾಡುತ್ತಿದ್ದೇವೆ. ಆದುದರಿಂದ ಕೆಲವು ವೇಳೆ ಲೌಕಿಕರಿಗೆ ಅರ್ಥಮಾಡಿಕೊಳ್ಳುವುದು ಕಷ್ಟ. ಅವರು ಎಷ್ಟು ಮಂಕು ಮಂಡೆಯವರಾಗಿರುತ್ತಾರೆಂದರೆ ಅವರಿಗೆ ಅರ್ಥವೇ ಆಗುವುದಿಲ್ಲ.






Leave a Reply