ಈ ಮಾನವ ಜನ್ಮವನ್ನು ಹಾಳುಮಾಡಬೇಡಿ

ಶ್ರೀ  ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ

ಸೆಪ್ಟೆಂಬರ್‌, 1969ರಲ್ಲಿ  ಇಂಗ್ಲೆಂಡ್‌ನ ಟೈಟನ್‌ಹರ್ಸ್ಟ್‌ನಲ್ಲಿ ನೀಡಿದ ಉಪನ್ಯಾಸ

ನಾಯಂ ದೇಹೋ ದೇಹಭಾಜಾಂ ನೃಲೋಕೇ

ಕಷ್ಟಾನ್‌ ಕಾಮಾನರ್ಹತೇ ವಿಡ್ಭುಜಾಂ ಯೇ

ತಪೋ ದಿವ್ಯಂ ಪುತ್ರಕಾ ಯೇನ ಸತ್ತ್ವಂ

ಶುದ್ಧ್ಯೇದ್ಯಸ್ಮಾದ್‌ ಬ್ರಹ್ಮಸೌಖ್ಯಂ ತ್ವನಂತಮ್‌ ।।

ಶ್ರೀ ಋಷಭದೇವನು ತನ್ನ ಪುತ್ರರಿಗೆ ಹೇಳಿದನು  ನನ್ನ ಪ್ರಿಯ ಮಕ್ಕಳೇ, ಈ ಜಗತ್ತಿನಲ್ಲಿ ಭೌತಿಕ ದೇಹಧಾರಣೆ ಮಾಡಿದ ಎಲ್ಲ ಜೀವಿಗಳಲ್ಲಿ ಈ ಮಾನವ ದೇಹವನ್ನು ಪಡೆದವನು ಮಲಭಕ್ಷಕರಾದ ಹಂದಿ ನಾಯಿಗಳಿಗೂ ಕೂಡ ಲಭ್ಯವಾದ ಕೇವಲ ಇಂದ್ರಿಯ ತುಷ್ಟಿಗಾಗಿ ಹಗಲಿರುಳೂ ಶ್ರಮಿಸಕೂಡದು.  ವ್ಯಕ್ತಿಯು ಭಕ್ತಿಸೇವೆಯ ದಿವ್ಯಸ್ಥಾನವನ್ನು ಹೊಂದಲು ವ್ರತ ತಪಸ್ಸುಗಳಲ್ಲಿ ತೊಡಗಬೇಕು.  ಅಂತಹ ಕ್ರಿಯೆಗಳಿಂದ ಅವನ ಹೃದಯವು ಶುದ್ಧವಾಗುತ್ತದೆ ಮತ್ತು ಈ ಸ್ಥಾನವನ್ನೇರಿದಾಗ ಅವನು ಲೌಕಿಕ ಸೌಖ್ಯಕ್ಕೆ ಅತೀತವಾದ ಮತ್ತು ನಿರಂತರವಾಗಿ ಮುಂದುವರಿಯುವ ಶಾಶ್ವತವಾದ ಆನಂದಮಯ ಜೀವನವನ್ನು ಹೊಂದುತ್ತಾನೆ.

 (ಭಾಗವತ: 5.5.1)

ಈ ಶ್ಲೋಕವನ್ನು ಋಷಭದೇವ ಮಹಾರಾಜನು ತನ್ನ  ಪುತ್ರರಿಗೆ ಹೇಳಿದನು. ಋಷಭದೇವ ಮಹಾರಾಜನು ಕೃಷ್ಣನ ಒಂದು ಅವತಾರ. ಅವನು ಬಹಳ ಕಾಲದ ಹಿಂದೆ ಜೀವಿಸಿದ್ದನು. ಅವನು ಸಮಸ್ತ ಜಗತ್ತಿಗೇ ಚಕ್ರವರ್ತಿಯಾಗಿದ್ದನು. ಋಷಭದೇವ ಮಹಾರಾಜನು ತಾನು ನಿವೃತ್ತನಾಗುವ ಮುನ್ನ ತನ್ನ ನೂರು ಜನ ಪುತ್ರರಿಗೆ ಉಪದೇಶಿಸುತ್ತಿದ್ದನು.

ಈಗ ಪ್ರಶ್ನೆಯೆಂದರೆ, ರಾಜ ಏಕೆ ನಿವೃತ್ತನಾಗುತ್ತಿದ್ದ? ಅದು ವೈದಿಕ ಪದ್ಧತಿ. ಒಬ್ಬ ವ್ಯಕ್ತಿಯು ರಾಜನಾಗಿರಲಿ ಅಥವಾ ಸಾಧಾರಣ ಮನುಷ್ಯನಾಗಿರಲಿ, ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅವನು ನಿವೃತ್ತನಾಗಬೇಕು ಮತ್ತು ಕೃಷ್ಣನನ್ನು ಅರಸಿಕೊಂಡು ಹೋಗಬೇಕು. ನೀವು ಒಬ್ಬ ರಾಜನಾಗಿದ್ದರೆ ಮತ್ತು ಇಂದ್ರಿಯ ತುಷ್ಟಿಗೆ ಹೇರಳವಾದ ಅವಕಾಶಗಳಿದ್ದರೆ, ಗೃಹಸ್ಥ ಜೀವನದಿಂದ ನಿವೃತ್ತನಾಗದೆ, ಮರಣವನ್ನಪ್ಪುವ ಸಮಯದವರೆಗೂ ಇಂದ್ರಿಯ ಭೋಗಗಳಲ್ಲಿ ನಿರತನಾಗಿರಬೇಕು ಎಂದೇನಲ್ಲ. ಅದು ಸರಿಯಲ್ಲ.

ವೈದಿಕ ಪದ್ಧತಿಯ ಗುರಿಯೇನೆಂದರೆ ಕೃಷ್ಣಪ್ರಜ್ಞೆಯ ಪರಿಪೂರ್ಣತೆಗೆ ವ್ಯಕ್ತಿಯು ತನ್ನನ್ನು ಉನ್ನತೀಕರಿಸಿಕೊಳ್ಳುವುದು. ಭಗವದ್ಗೀತೆಯಲ್ಲಿ (15.15) ಕೃಷ್ಣ ಹೇಳುತ್ತಾನೆ, ವೇದೈಶ್ಚ ಸರ್ವೈರಹಮೇವ ವೇದ್ಯಃ “ವ್ಯಕ್ತಿಯು ನನ್ನನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗುವಂತೆ ಸಮಸ್ತ ವೈದಿಕ ಪದ್ಧತಿಯನ್ನು ವಿನ್ಯಾಸಗೊಳಿಸಲಾಗಿದೆ.” ಆದ್ದರಿಂದ ನೀವು ವೈದಿಕ ಪದ್ಧತಿಯನ್ನು ಅನುಸರಿಸಿದರೆ, ನಿಮ್ಮ ಜೀವನದ ಆತ್ಯಂತಿಕ ಗುರಿಯು ಕೃಷ್ಣನನ್ನು ಅರಿಯುವುದೇ ಆಗಬೇಕಾಗುತ್ತದೆ. ಅದನ್ನು ವೇದಗಳ ಮೂಲ ಸಂಕಲನಕಾರನಾದ ಸ್ವತಃ ಪ್ರಭು ಕೃಷ್ಣನೇ ಸ್ಥಿರಪಡಿಸಿದ್ದಾನೆ.

ದುರದೃಷ್ಟವಶಾತ್‌, ಇಂದಿನ ಆಧುನಿಕ ನಾಗರಿಕತೆ ಎನ್ನುವುದರಲ್ಲಿ ನೇತಾರರಾಗಲಿ ಅಥವಾ ಗೃಹಸ್ಥರಾಗಲಿ ನಿವೃತ್ತರಾಗಿ ಕೃಷ್ಣನನ್ನು ಅರಸಿಕೊಂಡು ಹೋಗುವುದಿಲ್ಲ. ಅತ್ಯಂತ ಕಷ್ಟದಿಂದ ತನ್ನ ಸಂಸಾರ ಜೀವನ ನಡೆಸುತ್ತಿರುವ ಬಡವ ಕೂಡ, ನೀನು ನಿವೃತ್ತನಾಗು ಎಂದು ಹೇಳಿದರೆ ನಿವೃತ್ತನಾಗುವುದಿಲ್ಲ. ಅವನು ಅದಕ್ಕೆ ಒಪ್ಪುವುದಿಲ್ಲ. ಅವನು ಯಾತನೆಪಡುತ್ತಿದ್ದಾನೆ, ತನ್ನ ಕುಟುಂಬದ ಸದಸ್ಯರೊಡನೆ ಜೀವಿಸುವುದರಲ್ಲಿ ಅವನು ಸಂತುಷ್ಟನಾಗಿಯೇನು ಇಲ್ಲ. ಆದರೆ ನಾನು ಅವನನ್ನು, “ಸಂಸಾರದಲ್ಲಿ ಏಕೆ ಇಷ್ಟೊಂದು ಕಷ್ಟಗಳನ್ನು ಹೊರುತ್ತಿದ್ದೀಯೆ? ಏಕೆ ಕೃಷ್ಣಪ್ರಜ್ಞಾ ಸಂಘಕ್ಕೆ ಬಂದು ನಮ್ಮೊಡನೆ ವಾಸಿಸಬಾರದು?” ಎಂದು ಕೇಳಿದರೆ ಅವನು ಒಪ್ಪುವುದಿಲ್ಲ. ಏಕೆಂದರೆ ಅವನಿಗೆ ವೈದಿಕ ತರಬೇತಿ ಇಲ್ಲ. ತನ್ನ ಜೀವನದ ಕೊನೆಯವರೆಗೂ ಅವನು ತನ್ನ ಕುಟುಂಬಕ್ಕೆ ಅಂಟಿಕೊಂಡಿರುತ್ತಾನೆ.

ನಮ್ಮ ದೇಶದಲ್ಲಿ ನಾವು ಅನೇಕ ರಾಜಕಾರಣಿಗಳನ್ನು – ಎಪ್ಪತ್ತೈದು, ಎಂಬತ್ತು ವರ್ಷದವರು – ನೋಡಿದ್ದೇವೆ. ಅವರು ನಿವೃತ್ತರಾಗಲು ನಿರಾಕರಿಸುತ್ತಾರೆ. ಇಂಗ್ಲೆಂಡಿನಲ್ಲಿ, ಸಾವು ಸೆಳೆದೊಯ್ಯುವವರೆಗೂ ಮಿ. ಚರ್ಚಿಲ್‌ ರಾಜಕೀಯವನ್ನು ಬಿಡಲಿಲ್ಲ. ನಮ್ಮ ಗಾಂಧಿಯನ್ನು ಪ್ರತಿಪಕ್ಷವೊಂದು ಕೊಂದು ಹಾಕಿತು, ಆಗ ಅವರು ಬಲಾತ್ಕಾರವಾಗಿ ನಿವೃತ್ತರಾಗಬೇಕಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಾನು ಗಾಂಧಿಗೆ ಒಂದು ಪತ್ರವನ್ನು ಬರೆದೆ: “ಮಹಾತ್ಮ ಗಾಂಧಿ, ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕು ಮತ್ತು ಭಾರತೀಯರಿಗೆ ಅವರ ಸ್ವಾತಂತ್ರ್ಯ ದೊರಕಬೇಕು ಎಂದು ನೀವು ಅವರೊಡನೆ ಹೋರಾಟ ಪ್ರಾರಂಭಿಸಿದಿರಿ. ಈಗ ನೀವು ಸ್ವಾತಂತ್ರ್ಯವನ್ನು ಗಳಿಸಿದ್ದೀರಿ. ಬ್ರಿಟಿಷರು ಹೊರಟು ಹೋಗಿದ್ದಾರೆ. ಆದ್ದರಿಂದ ನೀವು ಈಗ ಭಗವದ್ಗೀತೆಯನ್ನು ಬೋಧಿಸಿ. ನಿಮಗೆ ಒಂದಿಷ್ಟು ಪ್ರಭಾವವಿದೆ. ಸಂತಸದೃಶ ವ್ಯಕ್ತಿಯೆಂದು ಜಗತ್ತಿನಾದ್ಯಂತ ನೀವು ಪ್ರಖ್ಯಾತರಾಗಿದ್ದೀರಿ. ಅಲ್ಲದೆ ಭಗವದ್ಗೀತೆಯ ಮಹಾಪಂಡಿತರಾಗಿಯೂ ನೀವು ತೋರ್ಪಡಿಸಿಕೊಂಡಿದ್ದೀರಿ. ನೀವು ಏಕೆ ಭಗವದ್ಗೀತೆಯನ್ನು ಕೈಗೆತ್ತಿಕೊಂಡು ಬೋಧಿಸಲು ಆರಂಭಿಸಬಾರದು?”

ಅದಕ್ಕೆ ಉತ್ತರ ಬರಲಿಲ್ಲ. ಅವರು ರಾಜಕಾರಣದಲ್ಲಿ ಎಷ್ಟು ವ್ಯಸ್ತರಾಗಿದ್ದರೆಂದರೆ ಅವರ ಸಹಾಯಕರಿಗೇ ಜುಗುಪ್ಸೆಯುಂಟಾಯಿತು. ಲೌಕಿಕ ಜೀವನದ ಅಮಲು ಹೇಗಿರುತ್ತದೆ ನೋಡಿ! ಅವರನ್ನು ಮಹಾತ್ಮ ಎಂದು ಪರಿಗಣಿಸಲಾಗಿತ್ತು. ಅವರು ಅವರ ಸ್ವರಾಜ್ಯವನ್ನು ಪಡೆದಿದ್ದರು. ಆದರೂ ಬಲಾತ್ಕಾರವಾಗಿ ಕೊನೆಗೊಳಿಸುವವರೆಗೂ ಅವರು ರಾಜಕಾರಣವನ್ನು ತ್ಯಾಗಮಾಡಲಿಲ್ಲ. ಅದೇ ರೀತಿಯಲ್ಲಿ, ಜವಾಹರಲಾಲ್‌ ನೆಹರೂ ಕೂಡ ನಿವೃತ್ತರಾಗಲು ನಿರಾಕರಿಸಿದರು.

ಆದ್ದರಿಂದ ಯಾರಿಂದಲಾದರೂ ಹತ್ಯೆಯಾಗುವವರೆಗೂ ಅಥವಾ ಪ್ರಕೃತಿಯ ನಿಯಮಗಳಿಂದ ಮೃತರಾಗುವವರೆಗೂ ಯಾರೂ ನಿವೃತ್ತರಾಗುವುದಿಲ್ಲ. ಇದೊಂದು ರೋಗ: ಯಾರು ಕೂಡ ತನ್ನ ಸ್ಥಾನ, ತನ್ನ ಕುಟುಂಬದ ಸದಸ್ಯರು ಮತ್ತು ತನ್ನ ಸಂಪತ್ತನ್ನು ಬಿಟ್ಟುಕೊಡುವುದಿಲ್ಲ. ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ “ಲೌಕಿಕ ಶಕ್ತಿಯು ಬಹಳ ಬಲಿಷ್ಠವಾದದ್ದು. ಅದನ್ನು ಜಯಿಸಲು ಯಾರಿಂದಲೂ ಸಾಧ್ಯವಿಲ್ಲ.” ಮಾಯೆ ಎಷ್ಟು ಪ್ರಬಲವಾದುದೆಂದರೆ, ತಾನೊಬ್ಬ ಬಹಳ ಧರ್ಮಶ್ರದ್ಧೆಯವನೆಂದು ಪ್ರಚಾರ ಮಾಡಿಕೊಳ್ಳುತ್ತಿದ್ದ ಒಬ್ಬ ಮುದುಕ ಕೂಡ ರಾಜಕಾರಣವನ್ನು ತೊರೆಯಲಾಗಲಿಲ್ಲ. ಅವನು ಯೋಚಿಸುತ್ತಾನೆ, “ನಾನು ರಾಜಕಾರಣ ಕ್ಷೇತ್ರವನ್ನು ತೊರೆದರೆ, ನನ್ನ ದೇಶಬಾಂಧವರು ಯಾತನೆಪಡುತ್ತಾರೆ ಮತ್ತು ಅನೇಕ ವಿಪತ್ತುಗಳು ಸಂಭವಿಸುತ್ತವೆ.” ಆದರೆ ವಾಸ್ತವದಲ್ಲಿ, ಅವನಿಲ್ಲದೆಯೂ ಕೆಲಸ ಕಾರ್ಯಗಳು ಬಹಳ ಸಾಂಗವಾಗಿ ನೆರವೇರುತ್ತವೆ. ನಿಮ್ಮ ದೇಶದಲ್ಲಿ ಅನೇಕ ಮಹಾನ್‌ ರಾಜಕಾರಣಿಗಳು ಬಂದು ಹೋಗಿದ್ದಾರೆ. ಆದರೆ ಜನರು ಇನ್ನೂ ಜೀವಿಸುತ್ತಿದ್ದಾರೆ ಮತ್ತು ಕೆಲಸ ಕಾರ್ಯಗಳು ನಡೆಯುತ್ತಾ ಇವೆ. ಅದೇ ರೀತಿಯಲ್ಲಿ ಭಾರತದಲ್ಲಿ ಅನೇಕ ಗಾಂಧಿಗಳು ಬಂದು ಹೋಗಿದ್ದಾರೆ, ಆದರೂ ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ.

ಕೆಲಸ ಕಾರ್ಯಗಳು ಹೇಗೆ ನಡೆಯುತ್ತವೆ ಎಂದು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ (3.27):

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ

ಅಹಙ್ಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ

ಪ್ರತಿಯೊಂದು ಕಾರ್ಯವನ್ನೂ ದೇವರ ಮೇಲುಸ್ತುವಾರಿಯಲ್ಲಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ನೀವು ಯಾವುದನ್ನು ಬದಲಿಸಲು ಸಾಧ್ಯವಿಲ್ಲ. ಒಂದು ಯೋಜನೆಯಿದೆ – ದೇವರ ಯೋಜನೆ – ಅದು ನೆರವೇರುತ್ತದೆ. ನಾನಿಲ್ಲದೆ ಎಲ್ಲವೂ ತಲೆಕೆಳಗಾಗಿಬಿಡುತ್ತದೆ ಎಂದು ನೀವು ಯೋಚನೆ ಮಾಡಬೇಕಾದ ಅವಶ್ಯಕತೆಯಿಲ್ಲ. ಇಲ್ಲ, ನೀವು ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ನಾಯಕತ್ವ ಅತ್ಯಂತ ಅನಿವಾರ್ಯ ಎಂದು ನೀವು ಸುಮ್ಮನೆ ಯೋಚಿಸುತ್ತಿದ್ದೀರಿ ಅಷ್ಟೆ. ಅದು ಹಾಗಿಲ್ಲ.

ನಾನೂ ಕೂಡ ಹಾಗೆಯೇ ಯೋಚಿಸುತ್ತಿದ್ದೆ. ನಾನು ಗೃಹಸ್ಥನಾಗಿದ್ದಾಗ, ನಾನು ಸಂಸಾರ ಜೀವನವನ್ನು ತೊರೆದು ಸಂನ್ಯಾಸಿ ಆಗಬೇಕೆಂದು ಮತ್ತು ಈ ಕೃಷ್ಣಪ್ರಜ್ಞಾ ಆಂದೋಲನವನ್ನು ಪ್ರಚಾರ ಮಾಡಬೇಕೆಂದು ನನ್ನ ಗುರು ಮಹಾರಾಜರು ಅನೇಕ ಸಲ ನನಗೆ ಸೂಚನೆಯನ್ನು ಕೊಟ್ಟರು. ಆದರೆ, “ನಾನು ಹೊರಟುಹೋದರೆ ನನ್ನ ಪತ್ನಿ ಮತ್ತು ನನ್ನ ಮಕ್ಕಳು ದುಃಖವನ್ನು ಅನುಭವಿಸುತ್ತಾರೆ” ಎಂದು ನಾನು ಯೋಚಿಸುತ್ತಿದ್ದೆ. ಆದರೆ ದಿಟದಲ್ಲಿ, ನಾನು ನನ್ನ ಕುಟುಂಬವನ್ನು ಹದಿನೈದು ವರ್ಷಗಳ ಹಿಂದೆ 1954ರಲ್ಲಿ ತೊರೆದರೂ ಅವರು ಇನ್ನೂ ಜೀವನ ಮಾಡುತ್ತಿದ್ದಾರೆ ಮತ್ತು ನಾನೂ ಇನ್ನೂ ಜೀವಿಸಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಅವರು ಸಾಯುತ್ತಿಲ್ಲ, ಮತ್ತು ನಾನೂ ಕೂಡ ನನ್ನ ಕುಟುಂಬದೊಡನೆ ಇಲ್ಲ ಎಂಬ ಕಾರಣಕ್ಕೆ ಯಾತನೆಯನ್ನು ಅನುಭವಿಸುತ್ತಿಲ್ಲ. ಮತ್ತೂ ಯೋಚಿಸಿದರೆ, ಈಗ ನನಗೆ ಇನ್ನೂ ಉತ್ತಮವಾದ ಕುಟುಂಬ ಸದಸ್ಯರು ದೊರೆತಿದ್ದಾರೆ. ವಿದೇಶದಲ್ಲಿ ನನಗೆ ಅನೇಕ ಮಕ್ಕಳಿದ್ದಾರೆ, ಅವರು ನನ್ನನ್ನು ಚೆನ್ನಾಗಿ ಪೋಷಣೆ ಮಾಡುತ್ತಿದ್ದಾರೆ. ಸ್ವಂತ ಮಕ್ಕಳಿಂದಲೇ ಅಂತಹ ಪೋಷಣೆಯನ್ನು ನಾನು ನಿರೀಕ್ಷಿಸಲಾರೆ.

ಇದು ದೇವರ ಅನುಗ್ರಹ. ನಾವು ಕೃಷ್ಣನ ಮೇಲೆ ಅವಲಂಬಿಸಬೇಕು. ಕೃಷ್ಣನು ನಮ್ಮೊಡನೆ ಸಂತುಷ್ಟನಾದರೆ, ನಾವು ಎಲ್ಲೇ ಹೋಗಲಿ ಪ್ರತಿಯೊಬ್ಬರೂ ಸಂತುಷ್ಟರಾಗಿರುತ್ತಾರೆ, ಪ್ರತಿಯೊಬ್ಬರೂ ಕರುಣಾಶಾಲಿಗಳಾಗಿರುತ್ತಾರೆ. ಕೃಷ್ಣನು ನಮ್ಮೊಡನೆ ಅಸಂತುಷ್ಟನಾಗಿದ್ದರೆ, ನಮ್ಮ ಕುಟುಂಬ ಜೀವನದಲ್ಲಿ ಕೂಡ ನಾವು ನೆಮ್ಮದಿಯಾಗಿರುವುದಿಲ್ಲ.

ಹೀಗೆ, ಋಷಭದೇವ ಮಹಾರಾಜನು ನಿವೃತ್ತನಾಗುತ್ತಿದ್ದ. ಅವನಿಗೆ ನೂರು ಜನ ವಿಧೇಯರಾದ ಪುತ್ರರಿದ್ದರು. ಆವನು ಇಡೀ ಜಗತ್ತಿಗೇ ಚಕ್ರವರ್ತಿಯಾಗಿದ್ದ. ಅವನು ದೇವರ ಒಂದು ಅವತಾರವಾಗಿದ್ದ. ಎಲ್ಲವೂ ಅವನ ಅಧೀನದಲ್ಲಿತ್ತು – ಆದರೂ ಅವನು ನಿವೃತ್ತನಾಗುತ್ತಿದ್ದ. ಅದೇ ವೈದಿಕ ಪದ್ಧತಿ. ಇಂತಹ ಅನೇಕ ಪ್ರಸಂಗಗಳಿವೆ. ಋಷಭದೇವ ಮಹಾರಾಜನ ಮಗ ಭರತ ಮಹಾರಾಜ ಕೂಡ ನಿವೃತ್ತನಾದ. ಹಾಗೆಯೇ ಪರೀಕ್ಷಿತ ಮಹಾರಾಜ ಮತ್ತು ಅವನ ಅಜ್ಜ ಯುಧಿಷ್ಠಿರ ಕೂಡ ನಿವೃತ್ತರಾದರು. ಅವರು ಸ್ವಯಂಪ್ರೇರಣೆಯಿಂದ ನಿವೃತ್ತರಾದರು.

ವೈದಿಕ ಸಾಮಾಜಿಕ ಪದ್ಧತಿಯಲ್ಲಿ ನೀವು ರಾಜನ ಮಗನಾಗಿರಲಿ ಅಥವಾ ಒಬ್ಬ ಸಾಮಾನ್ಯ ಮನುಷ್ಯನ ಮಗನಾಗಿರಲಿ, ಬಹಳ ಚಿಕ್ಕವಯಸ್ಸಿನಲ್ಲಿಯೇ ಗುರುಗಳ ಆಶ್ರಮಕ್ಕೆ ಹೋಗಿ ಅಲ್ಲಿ ಅವರ ಸೇವಕನಾಗಿ ಬಾಳಬೇಕು. ಅದನ್ನು ಬ್ರಹ್ಮಚರ್ಯ ಎನ್ನುತ್ತಾರೆ. ಬ್ರಹ್ಮಚಾರಿಯ ಜೀವನವೆಂದರೆ ಮನೆಗೆಲಸದ ಆಳಾಗಿ ಗುರುಗಳಿಗೆ ಸೇವೆ ಸಲ್ಲಿಸಬೇಕು. ಗುರುಗಳು ಏನು ಹೇಳಲಿ, ಬ್ರಹ್ಮಚಾರಿಯು ಅದನ್ನು ಮಾಡುತ್ತಾನೆ. ಅದು ಬಹಳ ಕಟ್ಟುನಿಟ್ಟಾದದ್ದು. ಬ್ರಹ್ಮಚಾರಿ ಏನನ್ನು ಸಂಗ್ರಹಿಸುತ್ತಾನೋ ಅದನ್ನು ಗುರುಗಳಿಗೆ ಒಪ್ಪಿಸಬೇಕು. ಅದು ಗುರುಗಳ ಸ್ವತ್ತು, ಅವನದಲ್ಲ. – “ನನ್ನ ಪ್ರಿಯ ಪುತ್ರ, ಬಾ ನಿನ್ನ ಪ್ರಸಾದವನ್ನು ಸ್ವೀಕರಿಸು” – ಎಂದು ಗುರುವು ಶಿಷ್ಯನನ್ನು ಊಟಕ್ಕೆ ಕರೆಯಲು ಮರೆತರೆ ಶಿಷ್ಯನು ಪ್ರಸಾದವನ್ನು ತೆಗೆದುಕೊಳ್ಳಬಾರದು. ಅವನು ಉಪವಾಸ ಮಾಡಬೇಕು. ಸಹಜವಾಗಿಯೇ ಗುರುಗಳು ಮರೆಯುವುದಿಲ್ಲ. ಆದರೆ ಇವು ಅನೇಕ ಕಟ್ಟಳೆಗಳಲ್ಲಿ ಕೆಲವು. ಬ್ರಹ್ಮಚರ್ಯವು ಜೀವನದ ಪ್ರಾರಂಭ. ಒಬ್ಬನು ರಾಜನ ಮಗನಾಗಿರಲಿ ಅಥವಾ ಸ್ವತಃ ದೇವೋತ್ತಮ ಪರಮಪುರುಷನೇ ಆಗಿರಲಿ, ಈ ಕಟ್ಟಳೆಗಳನ್ನು ಪಾಲಿಸಲೇಬೇಕು. ಕೃಷ್ಣನು ಬ್ರಹ್ಮಚಾರಿಯಾಗಿದ್ದಾಗ ಈ ಶಿಸ್ತನ್ನು ಪರಿಪಾಲಿಸುತ್ತಿದ್ದ.

ಅನಂತರ, ಬ್ರಹ್ಮಚಾರಿ ಜೀವನವಾದ ಮೇಲೆ, ವ್ಯಕ್ತಿಯು ವಿವಾಹವಾಗಿ ತನ್ನ ಪತ್ನಿ ಮತ್ತು ಮಕ್ಕಳೊಡನೆ ಬಾಳಬಹುದು. ಆದರೆ ಇದು ಗರಿಷ್ಠ ಇಪ್ಪತ್ತೈದು ವರ್ಷಗಳು. ಅನಂತರ ಅವನು ನಿವೃತ್ತನಾಗಬೇಕು. ಗಂಡ ಮತ್ತು  ಹೆಂಡತಿ ಒಂದು ಯಾತ್ರಾಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣ ಮಾಡುತ್ತಾರೆ. ಅವರ ಮನಸ್ಸು ಈಗ  ಪ್ರಶಾಂತವಾಗಿರುತ್ತದೆ. ಏಕೆಂದರೆ ಅವರ ಮಕ್ಕಳು ದೊಡ್ಡವರಾಗಿ ತಮ್ಮನ್ನು ತಾವೇ ನೋಡಿಕೊಳ್ಳಬಲ್ಲರು. ಪತಿಯು ಕುಟುಂಬದ ಎಲ್ಲ ಬಂಧನಗಳಿಂದ ಸಂಪೂರ್ಣ ಮುಕ್ತನಾದಾಗ, ಸಂನ್ಯಾಸವನ್ನು ಸ್ವೀಕರಿಸುತ್ತಾನೆ. ಇದು ಸಂಪೂರ್ಣ ಲೌಕಿಕ ಸಂಬಂಧ ತ್ಯಾಗ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ – ಇದೇ ಪ್ರಕ್ರಿಯೆ.

ಈಗ, ನಿವೃತ್ತನಾಗುವುದಕ್ಕೆ ಮೊದಲು ತಂದೆಯು ತನ್ನ ಮಕ್ಕಳಿಗೆ ಅವರ ಕುಟುಂಬದ ವ್ಯವಹಾರಗಳನ್ನು ಹೇಗೆ ನೋಡಿಕೊಳ್ಳಬೇಕು, ಅವರ ವೈಯಕ್ತಿಕ ವ್ಯವಹಾರಗಳು ಮತ್ತು ಅವರ ಆಧ್ಯಾತ್ಮಿಕ ಪ್ರಗತಿ – ಹೀಗೆ ಪ್ರತಿಯೊಂದನ್ನೂ ಹೇಗೆ ನೋಡಿಕೊಳ್ಳಬೇಕೆಂದು ಬೋಧಿಸುವುದು ಅವನ ಕರ್ತವ್ಯ. ಆದ್ದರಿಂದ ಋಷಭದೇವನು ಉಪದೇಶಿಸುತ್ತಿದ್ದಾನೆ, “ನನ್ನ ಪ್ರೀತಿಯ ಪುತ್ರರೇ, ಈ ಮಾನವ ದೇಹವು ನಾಯಿ ಬೆಕ್ಕು ಹಂದಿಗಳ ದೇಹಕ್ಕೆ ಸಮಾನವಾದುದು ಎಂದು ಯೋಚಿಸಬೇಡಿ. ಅವನು ನಿರ್ದಿಷ್ಟವಾಗಿ ವಿಡ್‌ಭುಜಾಮ್‌ “ಅಮೇಧ್ಯ ಭಕ್ಷಕರು” ಅಥವಾ ಹಂದಿಗಳನ್ನು ಪ್ರಸ್ತಾವಿಸುತ್ತಾನೆ. ಮಾನವ ಸಮಾಜದಲ್ಲಿ ಶ್ವಾನಭಕ್ಷಕನನ್ನು ಅತ್ಯಂತ ಕೀಳು ದರ್ಜೆಯವನೆಂದು ಪರಿಗಣಿಸುವಂತೆ, ಪ್ರಾಣಿಸಮಾಜದಲ್ಲಿ ಅಮೇಧ್ಯ ಭಕ್ಷಕ ಹಂದಿಯನ್ನು ಅತ್ಯಂತ ಕೀಳೆಂದು ಭಾವಿಸಲಾಗುತ್ತದೆ. ಮನುಷ್ಯ ಜೀವಿಗಳಂತೆ ಪ್ರಾಣಿಗಳಲ್ಲಿ ಕೂಡ ಅವುಗಳ ಆಹಾರ ಸೇವನೆಯ ಕ್ರಮದಂತೆ ವಿವಿಧ ವರ್ಗಗಳಿವೆ. “ನೀವು ಏನು ತಿನ್ನುತ್ತೀರೋ ಅದಕ್ಕೆ ತಕ್ಕಂತೆಯೇ ಇರುತ್ತೀರಿ” ಎಂಬ ಹೇಳಿಕೆಯೇ ಇದೆ.

ಆದ್ದರಿಂದ ಆಹಾರ ಸೇವನೆ ಬಹಳ ಮುಖ್ಯವಾದದ್ದು. ನೀವು ಬೆಕ್ಕುಗಳು ಮತ್ತು ನಾಯಿಗಳಂತೆ ತಿಂದರೆ, ಮನುಷ್ಯ ಜನ್ಮದಲ್ಲಿರುವಾಗಲೇ ನೀವು ನಾಯಿ ಬೆಕ್ಕುಗಳಾಗುತ್ತೀರಿ. ನೀವು ಬೆಕ್ಕುಗಳು ಮತ್ತು ನಾಯಿಗಳಂತೆ ವರ್ತಿಸಿದರೆ, ಮನುಷ್ಯ ಜನ್ಮದಲ್ಲಿರುವಾಗಲೇ ನೀವು ನಾಯಿಬೆಕ್ಕುಗಳಾಗುತ್ತೀರಿ. ಅದೇ ರೀತಿಯಲ್ಲಿ ನೀವು ಬಹಳ ಕಷ್ಟಪಟ್ಟು ಬೆಕ್ಕುಗಳು, ನಾಯಿಗಳು ಅಥವಾ ಹಂದಿಗಳಂತೆ ಕೆಲಸ ಮಾಡಿದರೆ, ಆಗ ನಿಮ್ಮ ಮಾನವ ಜನ್ಮದ ಮೌಲ್ಯವೇನಾಯಿತು? ಮನುಷ್ಯ ಜೀವನವು ತುಂಬ ಸ್ತಿಮಿತವಾಗಿರಬೇಕು, ಶಾಂತವಾಗಿರಬೇಕು, ಜ್ಞಾನಪೂರ್ಣವಾಗಿರಬೇಕು, ಆನಂದಪೂರ್ಣವಾಗಿರಬೇಕು, ಕೃಷ್ಣನಿಗೆ ಮುಡಿಪಾಗಿರಬೇಕು. ಇವು ಪರಿಶುದ್ಧತೆಯ ಲಕ್ಷಣಗಳು. ಕೇವಲ ಪ್ರಾಣಿಯಂತೆ ಕಷ್ಟಪಟ್ಟು ಕೆಲಸಮಾಡುವುದು ಮತ್ತು ಪ್ರಾಣಿಯಂತೆ ತಿನ್ನುವುದು ಎಂದರೆ – ಅದು ಯುಕ್ತವಲ್ಲ.

ಋಷಭದೇವನು ತನ್ನ ಪುತ್ರರಿಗೆ ಉಪದೇಶಿಸಿದ, “ನನ್ನ ಪೀತಿಯ ಪುತ್ರರೆ, ಈ ಮಾನವ ರೂಪದ ಜನ್ಮವು ಹಂದಿಗಳಂತೆ ಜೀವಿಸುವುದಕ್ಕೆ ಉದ್ದಿಷ್ಟವಾದದ್ದಲ್ಲ.” ಪ್ರತಿಯೊಂದು ಜೀವಿಗೂ ಒಂದು ದೇಹವಿದೆ. ಆದರೆ ಮಾನವ ದೇಹವು ವಿಶೇಷವಾದದ್ದು. ಒಬ್ಬ ಮಾನವ ಜೀವಿಯು ಹಂದಿಗಳಂತೆ ಜೀವಿಸಬಾರದು. ಇಡೀ ದಿನ ಮತ್ತು ರಾತ್ರಿ ಹಂದಿಗಳು ಅಮೇಧ್ಯ ಮತ್ತು ಕಾಮಕ್ಕಾಗಿ ಹುಡುಕುತ್ತಿರುತ್ತವೆ. ಒಬ್ಬ ಮಾನವ ಜೀವಿಯು ಇಡೀ ದಿನ ಮತ್ತು ರಾತ್ರಿ ಆಹಾರ ಮತ್ತು ಕಾಮಕ್ಕಾಗಿ ಹುಡುಕುತ್ತಿದ್ದರೆ, ಆಗ ಅವನು ಮಾನವ ಜೀವನದ ಅವಕಾಶವನ್ನು ಕಳೆದುಕೊಳ್ಳುತ್ತಾನೆ.

ಮಾನವ ಜೀವನವು ನಿಯಂತ್ರಿತವಾಗಿರಬೇಕು. ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು, ಒಂದು ನಿರ್ದಿಷ್ಟ ರೀತಿಯಲ್ಲಿ ಕಾಮವನ್ನು ಅನುಭವಿಸಬೇಕು, ಒಂದು ನಿರ್ದಿಷ್ಟ ರೀತಿಯಲ್ಲಿ ನಿದ್ದೆಯನ್ನು ಮಾಡಬೇಕು, ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡಬೇಕು, ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚನೆ ಮಾಡಬೇಕು. ನೀವು ನಿರಂಕುಶವಾಗಿ ವರ್ತಿಸುವುದಕ್ಕಾಗುವುದಿಲ್ಲ. ಕಾನೂನು ಪುಸ್ತಕಗಳು ಇರುವುದು ಮಾನವ ಸಮಾಜಕ್ಕೆ ವಿನಾ ಪ್ರಾಣಿ ಸಮಾಜಕ್ಕಲ್ಲ. ಮಾನವ ಸಮಾಜವು ಯಾವುದೇ ಕಾನೂನುಗಳಿಗೆ ಬದ್ಧವಾಗಿಲ್ಲದಿದ್ದರೆ, ಅದು ಮಾನವ ಸಮಾಜವಲ್ಲ, ಪ್ರಾಣಿ ಸಮಾಜ.

ಹಾಗಾದರೆ ನಾವು ಹಂದಿಗಳಂತೆ ವರ್ತಿಸಿ ಈ ಮಾನವ ರೂಪದ ಜೀವನವನ್ನು ಹಾಳು  ಮಾಡಬಾರದು ಎಂದರೆ, ಮಾನವ ಜೀವನದ ಉದ್ದೇಶವಾದರೂ ಏನು? ಋಷಭದೇವ ಮಹಾರಾಜನು ಹೇಳುತ್ತಾನೆ, ತಪೋದಿವ್ಯಮ್‌ ತಪಸ್ಸು ಮತ್ತು ಕಠಿಣವಾದ ವ್ರತಾಚರಣೆಗಳು. ನೀವು ಕೆಲವು ನಿಯಂತ್ರಕ ತತ್ತ್ವಗಳನ್ನು ಸ್ವಯಂಪ್ರೇರಣೆಯಿಂದ ಸ್ವೀಕರಿಸಬೇಕು – ನಿಮಗೆ ಅವು ಬಹಳವಾಗಿ ಇಷ್ಟವಿಲ್ಲದಿದ್ದರೂ. ಉದಾಹರಣೆಗೆ, ನಮ್ಮ ವಿದ್ಯಾರ್ಥಿಗಳು ತಮ್ಮ ಜೀವನದ ಆರಂಭದಿಂದಲೂ ಕೆಲವು ಹವ್ಯಾಸಗಳಿಗೆ ಒಗ್ಗಿಕೊಂಡಿರುತ್ತಾರೆ. ಆದರೂ ನಾವು, “ನೀವು ಇದನ್ನು ಮಾಡಬಾರದು” ಎಂದು ಹೇಳುತ್ತೇವೆ. ಅವರು ನಮ್ಮ ಸೂಚನೆಗಳನ್ನು ಅನುಸರಿಸುತ್ತಾರೆ. ಇದು ತಪಸ್ಯಾ. ಉದಾಹರಣೆಗೆ ಒಬ್ಬನು ಧೂಮಪಾನದ ಹವ್ಯಾಸ ಮಾಡಿಕೊಂಡಿರುತ್ತಾನೆ. ಗುರುಗಳು ಅವನಿಗೆ ಹೇಳುತ್ತಾರೆ, “ನೀನು ಧೂಮಪಾನ ಮಾಡುವಂತಿಲ್ಲ.” ಆಗ ವಿದ್ಯಾರ್ಥಿಯು ಧೂಮಪಾನ ಮಾಡುವುದನ್ನು ತ್ಯಜಿಸಿದರೆ ಅವನಿಗೆ ಕೊಂಚ ಕಷ್ಟವಾಗಬಹುದು, ಇರಿಸುಮುರಿಸಾಗಬಹುದು. ಆದರೆ ಗುರುಗಳು ಆಜ್ಞೆ ಮಾಡಿರುವುದರಿಂದ ಅವನು ಅದನ್ನು ತ್ಯಜಿಸುತ್ತಾನೆ. ಇದು ತಪಸ್ಯಾ.

ಒಬ್ಬ ಆಧ್ಯಾತ್ಮ ಗುರುಗಳನ್ನು ಒಪ್ಪಿಕೊಳ್ಳುವುದೆಂದರೆ ಸ್ವಯಂ ಪ್ರೇರಣೆಯಿಂದ ಆ ಮಹಾಪುರುಷರ ವಿಧಿ ನಿಯಮಗಳಿಗೆ ಬದ್ಧನಾಗಿರಲು ಸಮ್ಮತಿಸಿದಂತೆ. ಶಿಷ್ಯ ಎಂದರೆ ಅರ್ಥ ಇದೇ – ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳುವುದು, “ಆಗಲಿ ಪೂಜ್ಯರೆ, ನೀವು ಏನು ಹೇಳುತ್ತೀರೋ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ.” ಸಂಸ್ಕೃತ ಶಬ್ದ `ಶಿಷ್ಯ’ ಎಂದರೆ ನಿಯಮಗಳಿಗೆ ಬದ್ಧನಾದವನು. ಇಂಗ್ಲಿಷ್‌ನಲ್ಲಿ `ಡಿಸೈಪಲ್‌’ ಎಂಬ ಶಬ್ದವಿದೆ. ಅದು `ಡಿಸಿಪ್ಲಿನ್‌’ ಎಂಬ ಶಬ್ದಕ್ಕೆ ಸಂಬಂಧಪಟ್ಟಿದೆ. ಹೀಗೆ ಒಬ್ಬ ಶಿಷ್ಯನು ಗುರುಗಳ ಶಿಸ್ತಿಗೆ ಒಳಪಡುತ್ತಾನೆ. “ನನ್ನ ವೈಯಕ್ತಿಕ ಸೌಕರ್ಯಕ್ಕೆ ಅನನುಕೂಲವಾದರೂ ನಾನು ನನ್ನ ಗುರುಗಳ ಆಜ್ಞೆಗಳಿಗೆ ಬದ್ಧನಾಗಿರಬೇಕು.” ಒಬ್ಬ ಶಿಷ್ಯನು ಹೀಗೆ ಯೋಚಿಸುತ್ತಾನೆ.

ಯಾವ ಆದೇಶಗಳನ್ನು ಕೊಡಬೇಕೆಂದು ಗುರುಗಳಿಗೆ ಹೇಗೆ ಗೊತ್ತಾಗುತ್ತದೆ? ಯಾವುದೇ ವಿಧಿ ನಿಯಮಗಳನ್ನು ಅವರು ಸೃಷ್ಟಿಸುವುದಿಲ್ಲ. ಅವರು ಶಾಸ್ತ್ರಗಳನ್ನು ಉಲ್ಲೇಖಿಸುತ್ತಾರೆ. ಆದ್ದರಿಂದ ನರೋತ್ತಮ ದಾಸ ಠಾಕುರರು ಹೇಳುತ್ತಾರೆ, ಸಾಧು ಶಾಸ್ತ್ರ ಗುರು ವಾಕ್ಯ ಹೃದಯ ಕರಿಯಾ ಐಕ್ಯ “ಸಂತರ, ಶಾಸ್ತ್ರದ ಮತ್ತು ಗುರುಗಳ ನುಡಿಗಳನ್ನು ಹೃದ್ಗತ ಮಾಡಿಕೊಳ್ಳಿ.” ಯಾರಾದರೊಬ್ಬರು ಗುರುಗಳೇ ಎಂದು ನೀವು ತಿಳಿದುಕೊಳ್ಳಬೇಕಾಗಿದ್ದರೆ ಅವರ ನುಡಿಗಳನ್ನು ಶಾಸ್ತ್ರಗಳು ಮತ್ತು ಸಂತರ ನುಡಿಗಳೊಡನೆ ಒರೆಹಚ್ಚಿ ನೋಡಿ. ಈ ಮೂರು – ಗುರು, ಶಾಸ್ತ್ರ , ಸಾಧು – ಪರಸ್ಪರ ತಾರ್ಕಣೆಯಾಗಬೇಕು. ಗುರುಗಳು ಶಾಸ್ತ್ರದಲ್ಲಿ ಇಲ್ಲದ್ದನ್ನು ಹೇಳಿದರೆ ಅದು ಒಳಿತಲ್ಲ. ಅದೇ ರೀತಿಯಲ್ಲಿ ಒಬ್ಬ ಸಾಧುವು ಶಾಸ್ತ್ರದ ನಿಯಂತ್ರಕ ತತ್ತ್ವಗಳನ್ನು ಅಗೌರವಿಸುವುದಿಲ್ಲ. ಭಗವದ್ಗೀತೆಯಲ್ಲಿ (16.23) ಕೃಷ್ಣ ಹೇಳುತ್ತಾನೆ, ಯಃ ಶಾಸ್ತ್ರ ವಿಧಿಮ್‌ ಉತ್ಸೃಜ್ಯ, “ಶಾಸ್ತ್ರದ ನಿಯಮಗಳಿಗೆ ವಿಧೇಯನಾಗಿರುವುದನ್ನು ತೊರೆಯುವ ಒಬ್ಬ ವ್ಯಕ್ತಿಯು”, ವರ್ತತೇ ಕಾಮಕಾರತಃ “ತನ್ನ ಅನಿಸಿಕೆಗಳಿಗೆ ತಕ್ಕಂತೆ ಕರ್ಮ ಮಾಡುವನೋ”, ನ ಸ ಸಿದ್ಧಿಮ್‌ ಅವಾಪ್ನೋತಿ, “ಅವನು ಪರಿಪೂರ್ಣತೆಯನ್ನು ಪಡೆಯುವುದಿಲ್ಲ,” ನ ಸುಖಂ ನ ಪರಾಂ ಗತಿಮ್‌, “ಅವನು ಸುಖವಾಗಿಯೂ ಇರುವುದಿಲ್ಲ, ಇನ್ನು ಮುಕ್ತಿಯನ್ನು ಪಡೆಯುವುದನ್ನು ಕುರಿತು ಹೇಳುವುದೇನು?”

ಆದ್ದರಿಂದ ತಪಸ್ಯಾ ಎಂದರೆ ಸ್ವಪ್ರೇರಣೆಯಿಂದ ಶಾಸ್ತ್ರಗಳು, ಗುರುಗಳು ಮತ್ತು ಸಾಧು ಸಂತರ ನಿಯಮಗಳಿಗೆ ವಿಧೇಯನಾಗಿರುವುದು ಮತ್ತು ಆ ರೀತಿಯಲ್ಲಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದು, ಋಷಭದೇವನು ಹೀಗೆ ತನ್ನ ಪುತ್ರರಿಗೆ ಉಪದೇಶಿಸುತ್ತಿದ್ದಾನೆ: “ನನ್ನ ಪ್ರೀತಿಯ ಪುತ್ರರೆ, ಬೆಕ್ಕುಗಳು, ನಾಯಿಗಳು ಮತ್ತು ಹಂದಿಗಳಂತೆ ಬಾಳುತ್ತಾ ನಿಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಸ್ವಪ್ರೇರಣೆಯಿಂದ ಶಾಸ್ತ್ರ, ಗುರು ಮತ್ತು ಸಾಧು ಸಂತರ ನಿಯಮಗಳನ್ನು ಅಂಗೀಕರಿಸುವ ಮೂಲಕ ನಿಮ್ಮ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ.”

ಈಗ ಒಂದು ಪ್ರಶ್ನೆ ಏಳಬಹುದು, “ಈ ಕಟ್ಟಳೆ ಏಕೆ? ನಾನು ಏಕೆ ಒಂದು ಪ್ರಾಣಿಯಂತೆ ಜೀವಿಸಬಾರದು? ಶಾಸ್ತ್ರಗಳು, ಸಾಧು ಸಂತರು ಮತ್ತು ಗುರುಗಳ ನಿಯಂತ್ರಕ ತತ್ತ್ವಗಳ ಅಧೀನದಲ್ಲಿ ನಾನು ಏಕೆ ಬಾಳಬೇಕು?”

ಋಷಭದೇವ ಉತ್ತರಿಸುತ್ತಾನೆ, ಯೇನ ಸತ್ತ್ವಂ ಶುದ್ಧ್ಯೇದ್‌ “ನೀವು ಜೀವನದ ಈ ತತ್ತ್ವಗಳನ್ನು ಅಂಗೀಕರಿಸಿದರೆ ನಿಮ್ಮ ಅಸ್ತಿತ್ವದ ಪರಿಸ್ಥಿತಿಯು ಪರಿಶುದ್ಧವಾಗುತ್ತದೆ.” ಪ್ರಸ್ತುತ ಸನ್ನಿವೇಶದಲ್ಲಿ ನಾವು ಪ್ರಕೃತಿಗುಣಗಳಿಂದ ಕಲುಷಿತರಾಗಿದ್ದೇವೆ. ಅವುಗಳಲ್ಲಿ ಹೆಚ್ಚಿನ ಪಾಲು ರಜೋಗುಣ ಮತ್ತು ತಮೋಗುಣದಿಂದ ಹೀಗೆ ಆಗಿದೆ. ಆದ್ದರಿಂದ ಋಷಭದೇವನು ತನ್ನ ಪುತ್ರರು ಶಾಸ್ತ್ರ, ಗುರು ಮತ್ತು ಸಾಧುಗಳ ನಿಯಮಗಳಿಗೆ ಬದ್ಧರಾದರೆ ಈ ಪ್ರಕೃತಿಗುಣಗಳಿಂದ ವಿಮೋಚಿತರಾಗಿ ಪರಿಶುದ್ಧರಾಗುತ್ತಾರೆ ಎಂದು ಉಪದೇಶಿಸುತ್ತಾನೆ.

“ಪರಿಶುದ್ಧಿಯಾಗುವ ಆವಶ್ಯಕತೆ ಏನಿದೆ?” ಎಂಬ ಪ್ರಶ್ನೆ ಈಗ ಏಳಬಹುದು. ಇದಕ್ಕೆ ಉತ್ತರ: ಯಸ್ಮಾದ್‌ ಬ್ರಹ್ಮ ಸೌಖ್ಯಂ ತ್ವ ಅನನ್ತಮ್‌ “ ನಿಮ್ಮ ಅಸ್ತಿತ್ವದ ಪರಿಸ್ಥಿತಿಯು ಪರಿಶುದ್ಧವಾದರೆ ಆನಂದ ಜೀವನದ ಲೋಕೋತ್ತರ ನೆಲೆಯಲ್ಲಿ ನೀವು ನೆಲೆಗೊಳ್ಳುತ್ತೀರಿ.” ನೀವು ಸಂತುಷ್ಟಿ ಮತ್ತು ಆನಂದಗಳಿಗಾಗಿ ಹಾತೊರೆಯುತ್ತಿದ್ದೀರಿ. ಆದ್ದರಿಂದ ನಿಮ್ಮ ಅಸ್ತಿತ್ವವು ಪರಿಶುದ್ಧವಾದ ಮೇಲೆ ಮತ್ತು ಲೋಕೋತ್ತರ ನೆಲೆಯಲ್ಲಿ ನೀವು ಸ್ಥಿತರಾದ ಮೇಲೆ, ನೀವು ಶಾಶ್ವತ ಸುಖವನ್ನು ಅನುಭವಿಸುತ್ತೀರಿ.

ಪ್ರತಿಯೊಬ್ಬನೂ ಸಂತೋಷಕ್ಕಾಗಿ ಅರಸುತ್ತಿದ್ದಾನೆ. ಈ ಲೌಕಿಕ ಅಸ್ತಿತ್ವದಲ್ಲಿ ಇಷ್ಟು ಕಷ್ಟಪಟ್ಟು ನೀನು ಏಕೆ ಹೆಣಗಾಡುತ್ತಿದ್ದೀಯೆ? ಸಂತೋಷಕ್ಕಾಗಿ. ಇಂದ್ರಿಯ ತುಷ್ಟಿಯನ್ನು ನೀನು ಏಕೆ ಬೆನ್ನಟ್ಟಿದ್ದೀಯೆ? ಸಂತೋಷಕ್ಕಾಗಿ. ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನೀನು ಏಕೆ ಬಯಸುತ್ತೀಯೆ? ಸಂತೋಷಕ್ಕಾಗಿ. ನೀನು ಸುಂದರವಾಗಿರಬೇಕೆಂದು ಏಕೆ ಬಯಸುತ್ತೀಯೆ? ಸಂತೋಷಕ್ಕಾಗಿ. ಅನೇಕ ಪದಾರ್ಥಗಳನ್ನು ತಿನ್ನಲು ನೀನು ಏಕೆ ಬಯಸುತ್ತೀಯೆ? ಸಂತೋಷಕ್ಕಾಗಿ. ಪ್ರತಿಯೊಂದರಲ್ಲೂ ಸಂತೋಷವೇ ನಿನ್ನ ಅಂತಿಮ ಗುರಿಯಾಗಿದೆ.

ಆದರೆ ಈಗ ನೀವು ಪಡೆಯುತ್ತಿರುವ ಸಂತೋಷ ತಾತ್ಕಾಲಿಕವಾದದ್ದು. ಮದ್ಯಪಾನದಿಂದ ನೀವು ಸಂತೋಷಗೊಳ್ಳಬಹುದು. ಆದರೆ ಎಷ್ಟು ಕಾಲ? ಆ ಸಂತೋಷವು ತಾತ್ಕಾಲಿಕ. ಕಾಮದಲ್ಲಿ ತೊಡಗುವುದರಿಂದ ನೀವು ಸಂತೋಷಗೊಳ್ಳಬಹುದು. ಆದರೆ ಎಷ್ಟು ಕಾಲ? ಆ ಸಂತೋಷವು ಕೆಲವೇ ಕ್ಷಣಗಳು ಅಥವಾ ಕೆಲವೇ ನಿಮಿಷಗಳು ಇರುತ್ತದೆಯಷ್ಟೆ. ಆದರೆ ನೀವು ಶಾಶ್ವತವಾದ ಮತ್ತು ನಿರಂತರವಾದ ಸಂತೋಷವನ್ನು ಬಯಸಿದರೆ ನೀವು ನಿಮ್ಮ ಅಸ್ತಿತ್ವದ ಪರಿಸ್ಥಿತಿಯನ್ನು ಪರಿಶುದ್ಧಗೊಳಿಸಿಕೊಳ್ಳಬೇಕು ಮತ್ತು ಲೋಕೋತ್ತರ ನೆಲೆಯಲ್ಲಿ ನಿಮ್ಮನ್ನು ಇರಿಸಿಕೊಳ್ಳಬೇಕು. ಆಗ ನಿಮಗೆ ಶಾಶ್ವತವಾದ ಸಂತೋಷದ ಅನುಭವವಾಗುತ್ತದೆ.

ವೈದಿಕ ಸಾಹಿತ್ಯವು ಹೇಳುತ್ತದೆ, ರಮನ್ತೇಯೋಗಿನೋಽನನ್ತೇ ಯೋಗಿಗಳು ಇಂದ್ರಿಯ ತುಷ್ಟಿಯನ್ನು ಅನುಭೋಗಿಸುತ್ತಾರೆ. ಆದರೆ ಎಲ್ಲಿ? ಅನಂತೇ – ಸರ್ವೋಚ್ಚನಲ್ಲಿ. ರಮಂತೇ ಎಂಬ ಶಬ್ದಕ್ಕೆ “ಇಂದ್ರಿಯ ತುಷ್ಟಿಯನ್ನು ಅನುಭೋಗಿಸುವುದು” ಎಂದು ಅರ್ಥ. ಉದಾಹರಣೆಗೆ, ಪ್ರಭು ಕೃಷ್ಣನ ಒಂದು ಹೆಸರು ರಾಧಾರಮಣ. ಇದರ ಅರ್ಥ ಅವನು ಶ್ರೀಮತಿ ರಾಧಾರಾಣಿಯೊಡನೆ ಇಂದ್ರಿಯ ತುಷ್ಟಿಯನ್ನು ಅನುಭೋಗಿಸುತ್ತಾನೆ ಎಂದು. ಆದರೆ ಅವನ ಇಂದ್ರಿಯ ತುಷ್ಟಿಯು ನಮ್ಮದರಂತಲ್ಲ. ಅದು ಹಾಗೆಂದು ನಾವು ಯೋಚಿಸಬಾರದು. ಲೌಕಿಕ ಇಂದ್ರಿಯ ತುಷ್ಟಿಯು ಆಧ್ಯಾತ್ಮಿಕ ಇಂದ್ರಿಯ ತುಷ್ಟಿಯ ವಿಕೃತ ಪ್ರತಿಬಿಂಬ.

ಭಕ್ತಿಸೇವೆಯ ಇಡೀ ಪ್ರಕ್ರಿಯೆಯು ಪ್ರಭು ಕೃಷ್ಣನ ಇಂದ್ರಿಯಗಳನ್ನು ಸಂತುಷ್ಟಿಗೊಳಿಸುವ ಗುರಿಯನ್ನು ಹೊಂದಿದೆ. (ಹೃಷೀಕೇಣ ಹೃಷೀಕೇಶ ಸೇವನಂ). ಹೃಷೀಕೇಣ ಎಂದರೆ “ಇಂದ್ರಿಯಗಳೊಡನೆ” ಮತ್ತು ಹೃಷೀಕೇಶ ಸೇವನಂ ಎಂದರೆ “ಇಂದ್ರಿಯಗಳ ಒಡೆಯನಿಗೆ ಸೇವೆ ಸಲ್ಲಿಸುವುದು.” ಇಂದ್ರಿಯಗಳ ಒಡೆಯನು ಕೃಷ್ಣ. ಆದ್ದರಿಂದ ಕೃಷ್ಣನ ಇಂದ್ರಿಯ ತುಷ್ಟಿಯ ಸೇವೆಗೆ ನಿಮ್ಮ ಇಂದ್ರಿಯಗಳನ್ನು ಅನ್ವಯಿಸಿದರೆ ಅದು ಲೋಕೋತ್ತರವಾದುದು. ನಿಮ್ಮ ಇಂದ್ರಿಯಗಳನ್ನು ನಿಮ್ಮದೇ ಆದ ಇಂದ್ರಿಯ ತುಷ್ಟಿಗೆ ತೊಡಗಿಸಿದರೆ ಅದು ಲೌಕಿಕವಾದುದು. ಅದೇ ವ್ಯತ್ಯಾಸ.

ನೀವು ಲೋಕೋತ್ತರ ನೆಲೆಯಲ್ಲಿ ಸ್ಥಿತರಾದಾಗ, ನಿಮ್ಮ ಅಸ್ತಿತ್ವದ ಪರಿಸ್ಥಿತಿಯು ತಪಸ್ಯೆಯಿಂದ ಪರಿಶುದ್ಧವಾದಾಗ, ಸ್ವಪ್ರೇರಣೆಯಿಂದ ಗುರುಗಳು, ಶಾಸ್ತ್ರಗಳು ಮತ್ತು ಸಾಧು ಸಂತರ ಮಾರ್ಗದರ್ಶನದಲ್ಲಿ ತಪಸ್ಸು ಮತ್ತು ಕಠಿಣ ವ್ರತಗಳನ್ನು ಸ್ವೀಕರಿಸಿದಾಗ -ಅಂತಹ ಸಂದರ್ಭದಲ್ಲಿ ಕೃಷ್ಣನ ಇಂದ್ರಿಯಗಳನ್ನು ಸಂತುಷ್ಟಿಪಡಿಸಲು ನಿಮಗೆ ಸಾಧ್ಯವಾಗುತ್ತದೆ, ಆಗ ನಿಮಗೆ ಸಂಪೂರ್ಣವಾದ ತೃಪ್ತಿ ದೊರೆಯುತ್ತದೆ. ಹೇಗೆ? ಇಲ್ಲಿ ಒಂದು ಉದಾಹರಣೆ ಇದೆ: ನಿಮ್ಮ ದೇಹದ ವಿವಿಧ ಅಂಗಗಳು ನಿಮ್ಮ ಇಡೀ ದೇಹವನ್ನು ಬಿಟ್ಟು ಸ್ವತಂತ್ರವಾಗಿ ಸುಖವನ್ನು ಅನುಭೋಗಿಸಲಾರವು. ನಿಮ್ಮ ಕೈ ಬೆರಳುಗಳು ಒಂದು ಸೊಗಸಾದ ಕೇಕಿನ ತುಂಡನ್ನು ಎತ್ತಿಕೊಳ್ಳಬಹುದು. ಆದರೆ ಅವು ಅದನ್ನು ಅನುಭೋಗಿಸಲಾರವು. ಆದರೆ ಕೈ ಬೆರಳುಗಳು ಕೇಕಿನ ತುಂಡನ್ನು ಎತ್ತಿಕೊಂಡು ಬಾಯಲ್ಲಿಟ್ಟುಕೊಂಡರೆ ಅದು ಹೊಟ್ಟೆಯೊಳಗೆ ಹೋಗುತ್ತದೆ. ಅನಂತರ ಅಲ್ಲಿ ಜೀರ್ಣರಸ ಸ್ರವಿಸಿ ಅದು ರಕ್ತಗತವಾಗುತ್ತದೆ. ಅನಂತರ ರಕ್ತವು ದೇಹದ ವಿವಿಧ ಅಂಗಗಳಿಗೆ ಪರಿಚಲನೆಯಾಗುತ್ತದೆ. ಆಗ ನಿಮ್ಮ ಕೈ ಬೆರಳುಗಳಿಗೂ ಪುಷ್ಟಿ ದೊರೆಯುತ್ತದೆ. ದೇಹದ ವಿವಿಧ ಅಂಗಗಳನ್ನು ಸಂತುಷ್ಟಿಗೊಳಿಸುವ ಪ್ರಕ್ರಿಯೆ ಇದು.

ಅದೇ ರೀತಿಯಲ್ಲಿ ನಾವು ಇಂದ್ರಿಯ ತುಷ್ಟಿಯನ್ನು ಅನುಭೋಗಿಸಬಹುದು – ಆದರೆ ಕೃಷ್ಣನ ಮೂಲಕ. ನೀವು ಕೃಷ್ಣನ ಇಂದ್ರಿಯಗಳನ್ನು ಸಂತುಷ್ಟಿಗೊಳಿಸಿದರೆ, ನಿಮಗೆ ಸಂಪೂರ್ಣ ಇಂದ್ರಿಯ ತುಷ್ಟಿಯ ಅನುಭವವಾಗುವುದು. ಗೋಪಿಯರು (ಕೃಷ್ಣನ ಆಧ್ಯಾತ್ಮಿಕ ಧಾಮದಲ್ಲಿದ್ದ ಗೋಪಾಲ ಬಾಲೆಯರು) ಇದಕ್ಕೊಂದು ಪರಿಪೂರ್ಣ ನಿದರ್ಶನ. ಎಲ್ಲ ಭಕ್ತರಲ್ಲಿ ಗೋಪಿಯರು ಸರ್ವೋಚ್ಚರು.

ಆದ್ದರಿಂದ, ಇದು ಮಾನವ ಜನ್ಮದ ಪ್ರಕ್ರಿಯೆ: ಗುರುಗಳು, ಶಾಸ್ತ್ರಗಳು ಮತ್ತು ಸಾಧು ಸಂತರು ನೀಡುವ ನಿಯಂತ್ರಕ ತತ್ತ್ವಗಳನ್ನು ಸ್ವಪ್ರೇರಣೆಯಿಂದ ಸ್ವೀಕರಿಸುವ ಮೂಲಕ ನಾವು ನಮ್ಮ ಪ್ರಸ್ತುತ ಅಸ್ತಿತ್ವವನ್ನು ಪರಿಶುದ್ಧಗೊಳಿಸಿಕೊಳ್ಳಬೇಕು. ಆಗ ನಾವು ಪರಿಶುದ್ಧರಾಗುತ್ತೇವೆ. ಆ ಸಮಯದಲ್ಲಿ ನಾವು ನಮ್ಮ ಇಂದ್ರಿಯಗಳನ್ನು ಪ್ರಭು ಕೃಷ್ಣನ ಸೇವೆಯಲ್ಲಿ ತೊಡಗಿಸುತ್ತೇವೆ. ಆಗ ನಾವು ದಿಟದಲ್ಲೂ ಲೋಕೋತ್ತರವಾದ ಇಂದ್ರಿಯ ತುಷ್ಟಿಯನ್ನು ಅನುಭೋಗಿಸುತ್ತೇವೆ.

ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi