ವಿಶ್ವ ಯಂತ್ರದ ಚಾಲಕ

ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ, ಮೇ 1975 ರಲ್ಲಿ, ಮುಂಜಾನೆಯ ವಾಯುವಿಹಾರ  ಸಮಯದಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ದೇವರಿಲ್ಲ, ಈ ಬೃಹತ್‌ ವಿಶ್ವ ಯಂತ್ರಕ್ಕೆ ನಿರ್ವಾಹಕನಿಲ್ಲ ಎಂದು ನಾಸ್ತಿಕರು ಹೇಳುತ್ತಾರೆ. ಆದರೆ ಯಾವುದೇ ಯಂತ್ರ ನಿರ್ವಾಹಕ / ಚಾಲಕನಿಲ್ಲದೆ ಕೆಲಸ ಮಾಡುವುದನ್ನು ಈ ನಾಸ್ತಿಕರು ಅನುಭವಿಸಿದ್ದಾರೆಯೆ?

ಭಕ್ತ : ಇಲ್ಲ. ಆದರೆ ನೀವು ಈ ಇಡೀ ವಿಶ್ವವನ್ನು ಯಾವುದೇ ಮಾನವ ನಿರ್ಮಿತ ಯಂತ್ರಕ್ಕೆ ಹೋಲಿಸಲಾಗದು.

ಶ್ರೀಲ ಪ್ರಭುಪಾದ : ಯಾಕೆ? ಅಂದು ನಾವು ಜಪಾನಿನಲ್ಲಿ ಬೃಹತ್‌ ಮುದ್ರಣಾಲಯವನ್ನು ನೋಡಿದೆವು. ಅಲ್ಲಿ ಮುದ್ರಣ ಯಂತ್ರವು ಮುದ್ರಿಸುತ್ತಿತ್ತು, ಹಾಳೆಗಳನ್ನು ಒಟ್ಟುಗೂಡಿಸಿ ಸಂಗ್ರಹಿಸಿಕೊಳ್ಳುತ್ತಿತ್ತು. ಎಷ್ಟೊಂದು ಕೆಲಸಗಳು ವ್ಯವಸ್ಥಿತವಾಗಿ ಯಂತ್ರದಿಂದಲೇ ನಡೆಯುತ್ತಿತ್ತು. ಅದೇ ರೀತಿ ವಿಶ್ವ ಯಂತ್ರದಿಂದ ಸೂರ್ಯೋದಯ, ಚಂದ್ರೋದವಾಗುತ್ತಿದೆ, ಸಾಗರದ ನೀರು ಅಲೆಗಳಾಗಿ ಸಾಗುತ್ತಿದೆ. ಹೀಗೆ ಋತುಮಾನ ಬದಲಾವಣೆಗಳಾಗುತ್ತಿವೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ, ಸೂರ್ಯ ಮತ್ತು ಚಂದ್ರ ಸಮಯಕ್ಕೆ ಸರಿಯಾಗಿ ಉದಯಿಸುತ್ತಿದ್ದಾರೆ, ಕಾಲಕ್ಕೆ ಸರಿಯಾಗಿ ಋತುಗಳ ಆಗಮನವಾಗುತ್ತದೆ. ಯಂತ್ರ ಕೆಲಸ ಮಾಡುವುದು ಇದೇ ರೀತಿಯಲ್ಲವೆ?

ಭಕ್ತ : (ನಾಸ್ತಿಕನ ಪಾತ್ರ ವಹಿಸಿ) ಆದರೆ ಈ ವಿಶ್ವ ಯಂತ್ರವು ಎಂತಹ ಅದ್ಭುತವೆಂದರೆ ಅದು ನಿರ್ವಾಹಕನಿಲ್ಲದೆ ಕೆಲಸ ಮಾಡುತ್ತಲೇ ಇರುತ್ತದೆ.

ಶ್ರೀಲ ಪ್ರಭುಪಾದ : ನೀನು ಮೂರ್ಖ. ವಿಶ್ವ ಯಂತ್ರದ ಚಾಲನೆಯನ್ನು ಯಾರೋ ಒಬ್ಬರು ಮಾಡುತ್ತಿದ್ದಾರೆಂಬುವುದು ನಿನಗೆ ಅರ್ಥವಾಗದು.  ವ್ಯಕ್ತಿ ಇಲ್ಲದೆ ಯಂತ್ರ ಕೆಲಸಮಾಡುವುದು ನಮ್ಮ ಅನುಭವದಲ್ಲಿ ಇಲ್ಲ. ನಿರ್ವಾಹಕನಿಲ್ಲದೆ ಈ ಬೃಹತ್‌ ವಿಶ್ವ ಯಂತ್ರ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯವನ್ನೇಕೆ ತರುತ್ತಿರುವೆ? ಅದು ತಪ್ಪು ಅಭಿಪ್ರಾಯ.

ಭಕ್ತ : ಸ್ವಯಂ ಚಾಲಿತ ಯಂತ್ರಗಳಿವೆ.

ಶ್ರೀಲ ಪ್ರಭುಪಾದ : ಇಲ್ಲ. ಪ್ರತಿಯೊಂದು ಯಂತ್ರಕ್ಕೂ ನಿರ್ವಾಹಕರಿದ್ದಾರೆ.

ಭಕ್ತ : ಯಾರಾದರೂ ಅದಕ್ಕೆ ಚಾಲನೆ ನೀಡಬೇಕು, ನಿಲ್ಲಿಸಬೇಕು.

ಶ್ರೀಲ ಪ್ರಭುಪಾದ : ಹೌದು. ಸ್ವಯಂ ಚಾಲಿತ ಯಂತ್ರ ಎಂಬುದೇನಿಲ್ಲ. ಅದು ನಿರಾಕಾರವಾದ.

ಭಕ್ತ : ಈ ಸಣ್ಣ ಯಂತ್ರಗಳ ನಿರ್ವಾಹಕನನ್ನು ನಾವು ನೋಡಬಹುದು. ಆದರೆ ವಿಶ್ವ ಯಂತ್ರದ ನಿರ್ವಾಹಕನನ್ನು ನೋಡಲಾಗುವುದಿಲ್ಲ.

ಶ್ರೀಲ ಪ್ರಭುಪಾದ : ವಿದ್ಯುತ್‌ ಶಕ್ತಿ ಕೇಂದ್ರದ ನಿರ್ವಾಹಕನನ್ನು ನೀವು ನೋಡಿರುವಿರಾ? ಈ ವಿದ್ಯುತ್‌ ಕೇಂದ್ರವು ಸ್ವಯಂ ಚಾಲಿತವೇ?

ಭಕ್ತ : ಹೋ, ನಮಗೆ ಬೇಕೆನಿಸಿದರೆ ನಾವು ಅವನನ್ನು ನೋಡಬಹುದು. ಈಗಲೇ ಹೋಗಿ ನೋಡಬಹುದು.

ಶ್ರೀಲ ಪ್ರಭುಪಾದ : ನೀವು ಕೃಷ್ಣನಲ್ಲಿಗೂ ಹೋಗಿ ನೋಡಬಹುದು. ಆದರೆ ಮೊದಲು ಅದಕ್ಕೆ ಅರ್ಹತೆ ಪಡೆದುಕೊಳ್ಳಬೇಕು.

ಭಕ್ತ : ಅದು ಅಷ್ಟು ಸುಲಭವಲ್ಲ.

ಶ್ರೀಲ ಪ್ರಭುಪಾದ : ಅದು ತುಂಬ ಸುಲಭ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ, ಬಹವೋ ಜ್ಞಾನತಪಸಾ ಪೂತಾ ಮದ್‌ ಭಾವಂ ಆಗತಾಃ – “ಈ ಹಿಂದೆ ಜ್ಞಾನ ಮತ್ತು ತಪಸ್ಸಿನ ಮೂಲಕ ಶುದ್ಧವಾಗಿ ಅನೇಕ ಭಕ್ತರು ನನ್ನ ಬಳಿಗೆ ಬಂದಿದ್ದಾರೆ.” ಆದುದರಿಂದ ನೀನು ಯಾಕೆ ನಿರಾಶನಾಗುವೆ? ನೀನು ಕೃಷ್ಣನ ಬಳಿಗೆ ಹೋಗಬಹುದು. ಸ್ತ್ರೀಯೋ ವೈಶ್ಯಾಸ್‌ ತಥಾ ಶೂದ್ರಾಃ – ಸ್ತ್ರೀಯರು, ವೈಶ್ಯರು, ಶೂದ್ರರಂತಹ ಕೀಳು ಜನ್ಮದವರೂ  ಕೃಷ್ಣನ ಬಳಿಗೆ ಹೋಗಬಹುದು. ಕೃಷ್ಣನು ಎಲ್ಲರಿಗೂ ಮುಕ್ತನು. ನೀವು ಅರ್ಹತೆ ಹೊಂದಬೇಕಷ್ಟೆ. ಎಂತಹ ಅರ್ಹತೆ? ಕೃಷ್ಣ ಹೇಳುತ್ತಾನೆ, ಮನ್‌ ಮನಾ ಭವ ಮದ್‌ ಭಕ್ತೋ ಮದ್ಯಾಜೀ ಮಾಂ ನಮಸ್ಕುರು – ಯಾವಾಗಲೂ ನನ್ನ ಬಗೆಗೆ ಚಿಂತಿಸು. ನನ್ನ ಭಕ್ತನಾಗು. ನನ್ನನ್ನು ಪೂಜಿಸು. ಮತ್ತು ನನಗೆ ನಮಸ್ಕರಿಸು. ಈ ನಾಲ್ಕು ವಿಷಯಗಳನ್ನು ನೀನು ಮಾಡಬೇಕು. ಈ ಉದ್ದೇಶಕ್ಕಾಗಿಯೇ ನಾವು ನಮ್ಮ ಮಂದಿರಗಳನ್ನು ತೆರೆದಿದ್ದೇವೆ. ಇದರಿಂದ ನೀವು ಸದಾ ಕೃಷ್ಣನ ಬಗೆಗೆ ಚಿಂತಿಸಬಹುದು, ಪೂಜಿಸಬಹುದು, ಪ್ರಣಾಮ ಸಲ್ಲಿಸಬಹುದು ಮತ್ತು ಅವನ ಭಕ್ತನಾಗಬಹುದು. ಆಗ ಮಾಂ ಏವೈಷ್ಯತಿ ಅಸಂಶಯಃ – ಯಾವುದೇ ಸಂಶಯವಿಲ್ಲದೆ ನೀನು ಅವನ ಬಳಿಗೆ ಹೋಗುವೆ. ಕಷ್ಟವೇನು?

ಭಕ್ತ : ಈ ವಿದ್ಯುತ್‌ ಕೇಂದ್ರದ ನಿರ್ವಾಹಕನು ಅದನ್ನು ನೋಡಿಕೊಳ್ಳುತ್ತಿದ್ದಾನೆ. ಆದರೆ ಅವನನ್ನು ಹೋಗಿ ನೋಡುವ ಅಗತ್ಯವೇನೂ ಇಲ್ಲ. ವಿದ್ಯುತ್‌ ಕೇಂದ್ರವು ಒದಗಿಸುವ ವಿದ್ಯುತ್‌ ಅನ್ನು ಬಳಸಿ ನಾವು ಆನಂದಿಸಬಹುದು.

ಶ್ರೀಲ ಪ್ರಭುಪಾದ : ನೀವೊಬ್ಬ ಮೂರ್ಖರಾದರೆ ಅದನ್ನೇ ಮಾಡುವಿರಿ. ಆದರೆ ನೀವು ಬುದ್ಧಿವಂತರಾಗಿದ್ದರೆ “ಯಾರು ನಿರ್ವಾಹಕರು? ನಾನು ನೋಡ ಬಯಸುವೆ” ಎಂದು ಹೇಳುವಿರಿ. ಇದೇ ಬುದ್ಧಿವಂತ ಮತ್ತು ಮಂಕಾದ ವ್ಯಕ್ತಿಗಳಲ್ಲಿನ ವ್ಯತ್ಯಾಸ.

ಈ ಸಂದರ್ಭದಲ್ಲಿ ಡ್ರಮ್‌ ಬಾರಿಸುತ್ತಿದ್ದ ಬಾಲಕನ ಕತೆ ನೆನಪಾಗುತ್ತಿದೆ. ಈ ಬಾಲಕನು ಡ್ರಮ್‌ ಬಾರಿಸುವಾಗ “ಇದರಲ್ಲಿ ಶಬ್ದ ಎಲ್ಲಿಂದ ಬರುತ್ತದೆ? ಇದರೊಳಗೆ ಯಾರೋ ಇರಬೇಕು” ಎಂದು ಕುತೂಹಲ ತೋರಿದ. ಆಗ ಅವನು ಡ್ರಮ್‌ ತೆರೆಯುವ ದಾರಿ ಕಂಡುಕೊಂಡು ಒಳಗೆ ನೋಡಿದ. ಅದು ಜಾಣರ ಲಕ್ಷಣ. ದಡ್ಡ ವಿದ್ಯಾರ್ಥಿಯು, `ಓ, ಶಬ್ದ ಬರುತ್ತಿದೆ’ ಎಂದಷ್ಟೇ ಯೋಚಿಸುವನು. ಆದರೆ ಬುದ್ಧಿವಂತ ಬಾಲಕನು, “ಅಪ್ಪಾ ಇದೇನು? ಅದೇನು?” ಎಂದು ಸದಾ ಕೇಳುತ್ತಿರುತ್ತಾನೆ. ಹೀಗಾಗಿ, ಮಂಕಾದ ವ್ಯಕ್ತಿಯು ಈ ವಿಶ್ವ ಯಂತ್ರದ ಹಿಂದಿರುವ ನಿರ್ವಾಹಕನ ಬಗೆಗೆ ಕೇಳುವುದಿಲ್ಲ. ಮಾನವ ಜೀವಿಯು ಕುತೂಹಲದ ಪ್ರಶ್ನೆಗಳನ್ನು ಕೇಳಬೇಕು. ಇಲ್ಲವಾದರೆ ನೀವು ನಾಯಿ, ಬೆಕ್ಕುಗಳಾಗಿ ಉಳಿಯುವಿರಿ.

ಭಕ್ತ : ದೇಹದ ಬಗೆಗೆ ಏನು ಹೇಳುವಿರಿ? ಅದೂ ಕೂಡ ಯಂತ್ರವಲ್ಲವೆ?

ಶ್ರೀಲ ಪ್ರಭುಪಾದ : ಹೌದು.

ಭಕ್ತ : ಈ ದೇಹವು ಯಾವುದೇ ಯಂತ್ರಕ್ಕಿಂತ ಹೆಚ್ಚು ಜಟಿಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ದೇಹವು ಚಿಂತಿಸಬಲ್ಲದು, ಭಾವನೆ ತೋರಬಲ್ಲದು ಮತ್ತು ಮನಸ್ಸುಳ್ಳದ್ದು. ಆದರೆ ಯಂತ್ರಗಳು ಅದನ್ನೆಲ್ಲ ಮಾಡಲಾರವು.

ಶ್ರೀಲ ಪ್ರಭುಪಾದ : ಚಿಂತನೆ, ಭಾವನೆ ಮತ್ತು ಮಾಡುವ ಇಚ್ಛೆಯು ಯಂತ್ರದ ನಿರ್ವಾಹಕ, ಆತ್ಮದಿಂದ ಬರುತ್ತಿದೆ ಎಂಬುವುದನ್ನು ಈ ವಿಜ್ಞಾನಿಗಳು ಅರ್ಥಮಾಡಿಕೊಳ್ಳಲಾರರು. ದೇಹಿನೋ ಅಸ್ಮಿನ್‌ ಯಥಾ ದೇಹೇ, ದೇಹ ಯಂತ್ರದಲ್ಲಿ ನಾನು ನಿರ್ವಾಹಕ, ಅಂದರೆ ಆತ್ಮ ಇದ್ದಾನೆ.

ಭಕ್ತ : ತನ್ನ ಡ್ರಮ್‌ನಲ್ಲಿ ಶಬ್ದಕ್ಕೆ ಕಾರಣ ಕಂಡು ಕೊಳ್ಳಲು ಮಗುವು ಪ್ರಯತ್ನಿಸಿದಂತೆ ವಿಜ್ಞಾನಿಗಳು ಲೌಕಿಕ ಲೋಕದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಬುದ್ಧಿವಂತಿಕೆಯಲ್ಲವೆ?

ಶ್ರೀಲ ಪ್ರಭುಪಾದ : ಹೌದು. ಆದರೆ ಅವರು  ಅಂತಿಮ ಗುರಿ ತಲಪಿಲ್ಲ.

ಭಕ್ತ : ಆದರೆ ಅವರು ಪ್ರಯತ್ನಿಸುತ್ತಿದ್ದಾರೆ.

ಶ್ರೀಲ ಪ್ರಭುಪಾದ : ಅವರು ಪ್ರಯತ್ನಿಸುತ್ತಿದ್ದಾರೆ ಎಂಬುವುದನ್ನು ಒಪ್ಪೋಣ. ಆದರೆ ನಿರ್ವಾಹಕನಿಲ್ಲ ಎಂಬ ತೀರ್ಮಾನಕ್ಕೆ ಅವರು ಬರುತ್ತಿದ್ದಾರೆ. ಅದು ಅವರ ಮೂರ್ಖತನ. ಅವರು ಇನ್ನಷ್ಟು ಮುಂದುವರಿಯಬೇಕು. `ನಿರ್ವಾಹಕನಿದ್ದಾನೆ’ ಎಂಬ ತೀರ್ಮಾನಕ್ಕೆ ಬರುವವರೆಗೂ ಅವರು ಮುಂದುವರಿಯಬೇಕು. ಅದು ಅವರ ಸಂಶೋಧನೆಯ ಅಂತಿಮ ಗುರಿಯಾಗಬೇಕು. ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ, ಬಹೂನಾಂ ಜನ್ಮನಾಮ್‌ ಅನ್ತೇ ಜ್ಞಾನವಾನ್‌ ಮಾಂ ಪ್ರಪದ್ಯತೇ, “ಅನೇಕ ಜನ್ಮಗಳ ಅನಂತರ ವಾಸ್ತವದಲ್ಲಿ ಜ್ಞಾನವಿರುವವನು ನನಗೆ ಶರಣಾಗುತ್ತಾನೆ.” ಮತ್ತು ವಾಸುದೇವಃ ಸರ್ವಂ ಇತಿ, “ `ವಾಸುದೇವನೇ (ಕೃಷ್ಣ) ಸಮಸ್ತ’ ಎಂಬುವುದನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.”

ಆದರೆ ಈ ವಿಜ್ಞಾನಿಗಳು ಕಾಲ ಹರಣ ಮಾಡುತ್ತಿದ್ದಾರೆ. “ಇಲ್ಲಿ ನೋಡಿ ಕೃಷ್ಣ, ವಿಶ್ವದ ನಿರ್ವಾಹಕ” ಎಂದು ನಾವು ಹೇಳಿದರೆ ಅವರು ಒಪ್ಪುವುದಿಲ್ಲ. ಅದಕ್ಕೆ ಬದಲಾಗಿ ಅವರು ಜನ್ಮದಿಂದ ಜನ್ಮಕ್ಕೆ ಅಲೆದಾಡುತ್ತ ಕಾಲ ಹರಣ ಮಾಡುತ್ತಾರೆ. ಆದರೆ ಒಂದು ದಿನ ಕೃಷ್ಣ ಈ ವಿಶ್ವ ಯಂತ್ರದ ನಿರ್ವಾಹಕ ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi