ಕೃಷ್ಣನು ನಮ್ಮ ಬದುಕಿಗಾಗಿ ದುಡಿಮೆಯನ್ನು ಪ್ರೋತ್ಸಾಹಿಸುತ್ತಾನಲ್ಲದೆ, ಬದುಕಿನ ನಿಜವಾದ ಸಮಸ್ಯೆಗಳನ್ನು ಪರಿಹರಿಸಲೂ ದುಡಿಯಬೇಕೆಂದು ಉತ್ತೇಜಿಸುತ್ತಾನೆ.
ಒಮ್ಮೆ ವರದಿಗಾರನೊಬ್ಬನು ಶ್ರೀಲ ಪ್ರಭುಪಾದರನ್ನು, “ಸ್ವಾಮಿ, ನೀವು ಅದ್ವೈತಿಗಳೋ ದ್ವೈತಿಗಳೋ?” ಎಂದು ಪ್ರಶ್ನಿಸಿದ. ಅವನ ಧ್ವನಿಯಲ್ಲಿ ಹುಸಿ ಬುದ್ಧಿವಂತಿಕೆಯನ್ನು ಗುರುತಿಸಿದ ಶ್ರೀಲ ಪ್ರಭುಪಾದರು ಉತ್ತರಿಸಿದರು, “ಅಂತಹ ವಿಷಯಗಳನ್ನು ಚರ್ಚಿಸುವುದರಲ್ಲಿ ಏನು ಅರ್ಥವಿದೆ?… ಕೃಷ್ಣನು ಹೇಳುತ್ತಾನೆ, ಅನ್ನಾದ್ ಭವಂತಿ ಭೂತಾನಿ. ಅನ್ನಾದ್ ಎಂದರೆ ಧಾನ್ಯಗಳು. ಜನರ ಬಳಿ ಧಾನ್ಯಗಳಿಲ್ಲ. ಧಾನ್ಯಗಳನ್ನು ಮಳೆ ಉತ್ಪತ್ತಿ ಮಾಡುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಆದುದರಿಂದ ಯಜ್ಞವನ್ನು ಆಚರಿಸಿ.”
ಅರ್ಜುನನು ಒಬ್ಬ ಕ್ಷತ್ರಿಯನಾಗಿ ಹೋರಾಡಬೇಕೆಂದು ಶ್ರೀ ಕೃಷ್ಣನು ಹುರಿದುಂಬಿಸುತ್ತಾನೆ. ಶ್ರೀ ಕೃಷ್ಣನು ಯಜ್ಞವನ್ನು ಅನೇನ ಪ್ರಸವಿಷ್ಯಧ್ವಂ ಎಂದು ವಿವರಿಸುತ್ತಾನೆ, “ಜನರನ್ನು ಹೆಚ್ಚು ಹೆಚ್ಚು ಸಮೃದ್ಧಗೊಳಿಸುತ್ತದೆ.” ಏಷ ವೋಽಸ್ತ್ವಿಷ್ಟಕಾಮಧುಕ್, “ನಿಮಗೆ ಇಷ್ಟಕಾಮಗಳೆಲ್ಲ ಸಿದ್ಧಿಸುತ್ತವೆ ಮತ್ತು ಮುಕ್ತಿ ಸಾಧನೆಯು ಕೈಗೂಡುತ್ತದೆ.”
ವ್ಯಕ್ತಿಯ ಧರ್ಮ – ವೇದವಿಹಿತ ವೃತ್ತಿಯು ಸಮೃದ್ಧಿಯನ್ನು (ಅರ್ಥ) ತಂದರೂ ಆಧ್ಯಾತ್ಮಿಕ ಮಾರ್ಗದರ್ಶನವಿಲ್ಲದೆ ನಾವು ಜೀವನದ ಗುರಿಯು ಆರ್ಥಿಕ ಅಭಿವೃದ್ಧಿ ಮಾತ್ರ ಎಂದುಕೋಳ್ಳುತ್ತೇವೆ. ಯೇಸು ಕ್ರಿಸ್ತನು ಎಚ್ಚರಿಸಿದಂತೆ, “ವ್ಯಕ್ತಿಯು ಇಡೀ ಜಗತ್ತನ್ನೇ ಗೆದ್ದು, ತನ್ನ ಶಾಶ್ವತ ಆತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ?”
ನಿಜವಾದ ಸಮಸ್ಯೆ
ನಮ್ಮ ಬದುಕಿನ ನಿಜವಾದ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಂಡಾಗ, ಆರ್ಥಿಕ, ಸಾಮಾಜಿಕ ಅಥವಾ ರಾಜಕೀಯ ಹೊಂದಾಣಿಕೆಯಿಂದ ನಾವು ಪಡೆಯುವ ಸುಖದ ಮಿತಿಯು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಉದಾಹರಣೆಗೆ, ನನ್ನ ಭಾರತೀಯ ಮಿತ್ರನೊಬ್ಬನು ಅಮೆರಿಕಕ್ಕೆ ವಲಸೆ ಹೋಗಲು ಪೂರ್ಣ ಮಗ್ನನಾದನು. ತನಗೆ ಇರುವ ಅವಕಾಶಗಳು ತುಂಬ ಕಡಮೆ ಎಂಬುವುದು ತಿಳಿದು ಅವನು ತನ್ನ ವ್ಯವಹಾರದಲ್ಲಿ ಆಸಕ್ತಿಯನ್ನು ಕಳೆದುಕೊಂಡ. ಆಗ ನಾನು ಅವನಿಗೆ ಶ್ರೀ ಕೃಷ್ಣನು ಜನ್ಮ, ಮೃತ್ಯು, ಜರಾ, ವ್ಯಾಧಿ, ದುಃಖ ದೋಷಾನುದರ್ಶನಂ ಎಂದು ಹೇಳಿರುವ ಭಗವದ್ಗೀತೆಯ ಶ್ಲೋಕವನ್ನು ಓದಲು ಹೇಳಿದೆ. ಜ್ಞಾನ ಉಳ್ಳ ವ್ಯಕ್ತಿಯು ಜನ್ಮ, ಸಾವು, ಮುಪ್ಪು ಮತ್ತು ರೋಗಗಳನ್ನು ನಿಜವಾದ ಸಮಸ್ಯೆಗಳೆಂದು ನೋಡುತ್ತಾನೆ.”
ಅನಂತರ ನಾನು ಅವನಿಗೆ ಈ ಪ್ರಶ್ನೆಗಳ ಬಗೆಗೆ ಯೋಚಿಸಲು ಹೇಳಿದೆ : ಅಮೆರಿಕದಲ್ಲಿ ಬದುಕುವುದರಿಂದ ನೀವು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್‌ನಿಂದ ಪ್ರತಿರಕ್ಷಣೆ ಪಡೆಯುತ್ತೀರಾ? ಅಮೆರಿಕದ ಜನರೂ ವೃದ್ಧರಾಗಿ ಸಾಯುವುದಿಲ್ಲವೇ? ಅನಂತರ ಅವನು ನನಗೆ ತಾನೆಷ್ಟು ಮೂರ್ಖನಾಗಿಬಿಟ್ಟಿದ್ದೆ ಎಂದು ಹೇಳಿಕೊಂಡ. ಭೌಗೋಳಿಕ ಹೊಂದಾಣಿಕೆಯು ತನ್ನ ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ತಾನು ಯೋಚಿಸಿದ್ದು ಎಷ್ಟು ಮೂರ್ಖತನ ಎಂದು ಅವನು ಹೇಳಿದ.
ಆದರೆ ಆ ನಿಜವಾದ ಸಮಸ್ಯೆಗಳಿಗೆ ಪರಿಹಾರವನ್ನು ಅಷ್ಟು ಸುಲಭವಾಗಿ ಗ್ರಹಿಸುವುದು ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ, ಅರ್ಜುನನು ದೊಡ್ಡ ಗೊಂದಲವನ್ನು ಎದುರಿಸುತ್ತಾನೆ. ಸಾಮ್ರಾಜ್ಯವನ್ನು ಗೆಲ್ಲಲು ಯುದ್ಧ ಮಾಡಿದರೆ, ತಾನು ಯಾರೊಂದಿಗೆ ತನ್ನ ರಾಜತ್ವವನ್ನು ಅನುಭವಿಸಲು ಅಪೇಕ್ಷಿಸಿದ್ದನೋ ಅವರನ್ನು ಪರಾಜಯಗೊಳಿಸಬೇಕಾಗುತ್ತದೆ. ಆದರೆ ಅವನು ಯುದ್ಧವನ್ನು ತ್ಯಜಿಸಿದರೆ, ಅವನು ತನ್ನ ವರಮಾನವನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಕ್ಷತ್ರಿಯನಾಗಿ ತನ್ನ ಧರ್ಮವನ್ನು ನಿರ್ಲಕ್ಷಿಸಿದಂತಾಗುತ್ತದೆ. ಹತಾಶ ದೃಷ್ಟಿಯು ಅವನಿಗೆ ಒಂದು ಮುಖ್ಯವಾದ ಗ್ರಹಿಕೆಯನ್ನು ನೀಡುತ್ತದೆ : “ನನ್ನ ಇಂದ್ರಿಯಗಳನ್ನು ಒಣಗಿಸುತ್ತಿರುವ ಈ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ ಸಮೃದ್ಧವಾದ, ಸಾಟಿಯೇ ಇಲ್ಲದ ರಾಜ್ಯವನ್ನು ಗೆದ್ದುಕೊಂಡರೂ ಮತ್ತು ಸ್ವರ್ಗದಲ್ಲಿರುವ ದೇವತೆಗಳ ಪ್ರಭುತ್ವದಂತಹ ಪ್ರಭುತ್ವವನ್ನು ಪಡೆದುಕೊಂಡರೂ ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ.” ಇದಕ್ಕೆ ಉತ್ತರವಾಗಿ ಶ್ರೀಕೃಷ್ಣನು ಬದುಕಿನ ಗೊಂದಲಗಳನ್ನು ಅಲೌಕಿಕ ಜ್ಞಾನದಿಂದ ಹೋಗಲಾಡಿಸಿಕೊಳ್ಳಬಹುದು ಎಂಬುವುದನ್ನು ತೋರಿಸಲು ಭಗವದ್ಗೀತೆಯನ್ನು ಬೋಧಿಸುತ್ತಾನೆ.
ಅರ್ಜುನನಂತೆ ನಮ್ಮಲ್ಲಿ ಯಾರೇ ಆದರೂ ಭಗವದ್ಗೀತೆಯ ಮಾರ್ಗದರ್ಶನದಲ್ಲಿ ಗೊಂದಲದಿಂದ ಅರಿವಿನತ್ತ ಸಾಗಬಹುದು. ಆದರೆ, ಕೇವಲ ಆರ್ಥಿಕ ಮಹದಾಸೆಯ ಮಾರ್ಗದರ್ಶನದಲ್ಲಿ ನಡೆಯುವವರು ಭ್ರಮೆಯತ್ತ ಸಾಗುತ್ತಾರೆ. ವೈದಿಕ ಇತಿಹಾಸಗಳು ಅಂತಹ ಭ್ರಮೆಯಲ್ಲಿ ಮುಳುಗಿರುವ ವ್ಯಕ್ತಿಗಳ ಉದಾಹರಣೆಗಳಿಂದ ತುಂಬಿವೆ. ಆಧುನಿಕ ಜಗತ್ತು ಪ್ರತಿದಿನ ಅಂತಹ ಉದಾಹರಣೆಗಳನ್ನು ನೀಡುತ್ತಿದೆ. ಹಳೆಯ ಎರಡು ಪ್ರಸಂಗಗಳು ನೆನಪಾಗುತ್ತಿವೆ.
ಸಾವಿಗೆ ತಡೆಯೇ?
ವಿಶ್ವವಿದ್ಯಾಲಯದಲ್ಲಿ ಮೂರನೆಯ ವರ್ಷದಲ್ಲಿ ಕಲಿಯುತ್ತಿದ್ದಾಗ ನಾನು ನನ್ನ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಹೋದೆ. ಆಗ ನಾನು ಅಮೆರಿಕದ ಅತ್ಯಂತ ಶ್ರೀಮಂತ, ಕೈಗಾರಿಕೋದ್ಯಮಿ ಹೊವಾರ್ಡ್ ಹ್ಯೂಗ್ ಅವರ ಬಗೆಗೆ ವರದಿಯೊಂದನ್ನು ಕೇಳಿದೆ. ಅವರು ಸರಿ-ಸುಮಾರು 10 ವರ್ಷಗಳಿಂದ ಸಾರ್ವಜನಿಕರಿಂದ ದೂರವಾಗಿ, ನಿಗೂಢವಾಗಿ ಏಕಾಂತವಾಗಿ ಇದ್ದುಬಿಟ್ಟಿದ್ದರು. ರೋಗಗಳಿಗೆ ಭಯಪಟ್ಟುಕೊಂಡು ಅವರು ತಮ್ಮ ಬಂಗಲೆಯ ಸೂಕ್ಷ್ಮಜೀವಿರಹಿತ (sterile) ಕೋಣೆಗಳಲ್ಲಿ ಇದ್ದರು. ತಮ್ಮ ಸೇವಕರ ಮೂಲಕ ಮಾತ್ರ ಅವರು ಹೊರ ಜಗತ್ತಿನ ಸಂಪರ್ಕ ಹೊಂದಿದ್ದರು. ಈ ಸೇವಕರು ಬಿಳಿ ಉಡುಗೆ ತೊಟ್ಟು ಕೈಗಳಿಗೆ ವೈದ್ಯಕೀಯ ಗವಸು ಹಾಕಿಕೊಂಡು ದಿನಕ್ಕೆ ಮೂರು ಬಾರಿ ಅತ್ಯಂತ ಜಾಗರೂಕತೆಯಿಂದ ತಯಾರಿಸಿದ ಊಟವನ್ನು ತರುತ್ತಿದ್ದರು. ಆದರೆ ಹ್ಯೂಗ್ ಇನ್‌ಫ್ಲುಯೆನ್ಸಾದಿಂದ (ಸಾಂಕ್ರಾಮಿಕ ತೀವ್ರ ನೆಗಡಿ) ಅಸು ನೀಗಿದರು. ರೋಗವನ್ನು ಗೆಲ್ಲಲು ಮತ್ತು ಸಾವಿಗೆ ತಡೆ ಒಡ್ಡುವ ಹ್ಯೂಗ್ ಅವರ ಪ್ರಯತ್ನವು ಎಂತಹ ಮೂರ್ಖತನದ್ದು ಎಂಬುವುದು ಸುದ್ದಿ ವಾಚಕನಿಗೆ ಅರ್ಥವಾಗಿದ್ದು ಅವನ ಟೀಕೆ ಟಿಪ್ಪಣಿಗಳಿಂದ ವ್ಯಕ್ತವಾಯಿತು.
ಮತ್ತೊಂದು ಪ್ರಸಂಗವು ಡಲ್ಲಾಸ್‌ನಲ್ಲಿರುವ ನಮ್ಮ ಹರೇಕೃಷ್ಣ ಕೇಂದ್ರದಲ್ಲಿ ನಾನು ಇದ್ದಾಗ ನಡೆದದ್ದು. ಒಂದು ದಿನ ನಾನು ಕೆಲವು ಭಕ್ತರೊಂದಿಗೆ ಸಮೀಪದಲ್ಲಿಯೇ ಇದ್ದ ತೈಲ ದೊರೆ ಎಚ್. ಎಲ್. ಹಂಟ್ ಅವರ ಎಸ್ಟೇಟ್‌ಗೆ ಹೋದೆ. ಅವರಿಗೆ ನಮ್ಮ ಭಗವದ್ಗೀತೆಯ ಇತ್ತೀಚಿನ ಮುದ್ರಣದ ಪ್ರತಿಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಉದ್ದೇಶ ಒಳ್ಳೆಯದಿದ್ದರೂ ಬಿಗಿ ಭದ್ರತಾ ವ್ಯವಸ್ಥೆಯ ಕಾರಣ ಅವರ ರಕ್ಷಣಾ ಸಿಬ್ಬಂದಿಯು ನಮ್ಮನ್ನು ಪ್ರವೇಶ ದ್ವಾರದ ಬಳಿಯೇ ತಡೆದರು. ದುರದೃಷ್ಟವೆಂದರೆ, ಅವರ ಭದ್ರತಾ ಸಿಬ್ಬಂದಿಗೆ ಅವರ ಸಾವನ್ನು ತಡೆಯಲಾಗಲಿಲ್ಲ. ಒಂದು ವಾರದ ಅನಂತರ, ಅವರು ಅನಿರೀಕ್ಷಿತವಾಗಿ ಸಾವಿಗೀಡಾದರು.
ಆದರೆ ಶ್ರೀಮಂತಿಕೆಯು ಕೆಡಕಾಗಬೇಕಾದ ಅಗತ್ಯವಿಲ್ಲ. ಉಪಯೋಗವೇ ಮೌಲ್ಯವನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಚಾಕುವನ್ನು ಮಾರಕಾಸ್ತ್ರವಾಗಿ ಉಪಯೋಗಿಸಬಹುದು ಅಥವಾ ಕುಶಲಕರ್ಮಿಯ ಸಾಧನವಾಗಬಹುದು. ಅದೇ ರೀತಿ ನಮ್ಮ ಬಿಡುವಿಲ್ಲದ ಚಟುವಟಿಕೆಗಳು ನಮ್ಮನ್ನು ಈಗ ಅಧ್ಯಾತ್ಮದಿಂದ ಬೇರೆ ಕಡೆಗೆ ತಿರುಗಿಸಬಹುದು. ಆದರೆ ಅದೇ ಚಟುವಟಿಕೆಗಳನ್ನು ನಮ್ಮ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಚಟುವಟಿಕೆಗಳಿಗೆ ತಿರುಗಿಸಬಹುದೆಂದು ಭಗವದ್ಗೀತೆಯು ನಮಗೆ ಬೋಧಿಸುತ್ತದೆ. ಆದುದರಿಂದ ಶ್ರೀ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ, “ನೀನು ಏನೇ ಮಾಡು, ಏನೇ ಸೇವಿಸು, ಏನೇ ಅರ್ಪಿಸು ಅಥವಾ ಕೊಡು ಮತ್ತು ಏನೇ ವ್ರತಾಚರಣೆ ಮಾಡಿದರೂ ಅದನ್ನು ನನಗೆ ಅರ್ಪಣೆಯಾಗಿ ಮಾಡು. ಈ ರೀತಿ ನೀನು ದುಡಿಮೆಯ ಬಂಧನದಿಂದ ಮತ್ತು ಅದರ ಶುಭ ಮತ್ತು ಅಶುಭ ಫಲದಿಂದ ಮುಕ್ತನಾಗುವೆ.”
ಲೌಕಿಕ ಸಂಪನ್ಮೂಲವು ಹೇಗೆ ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗಬಹುದು ಎಂಬುವುದನ್ನು ಇಲ್ಲಿ ನೋಡಿ : ಅಂಧನಿಗೆ ಏನೂ ಕಾಣದು. ಕುಂಟನಿಗೆ ನಡೆಯಲಾಗದು. ಆದರೆ ಅಂಧನು ಹೆಳವನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗಬಲ್ಲ.
ಹೀಗೆ ಅವರಿಬ್ಬರು ಜೊತೆಯಾಗಿ ಸಾಗಬಹುದು. ಅದೇ ರೀತಿ ನಾವು ನಮ್ಮ ಬದುಕಿನ ವೈಯಕ್ತಿಕ ಮತ್ತು ಸಾಮೂಹಿಕ ಸಮಸ್ಯೆಗಳನ್ನು ಪರಿಹರಿಸಕೊಳ್ಳಬಹುದು. ಹೇಗೆ? ನಮ್ಮ ಲೌಕಿಕ ಆಸ್ತಿ, ಸಂಪತ್ತು – ಇವು ಆಧ್ಯಾತ್ಮಿಕ ದೃಷ್ಟಿಯ ಮಾರ್ಗದರ್ಶನ ಪಡೆದಾಗ.
ಪರಸ್ಪರ ಸಹಕಾರ
ಶ್ರೀಲ ಪ್ರಭುಪಾದರು ಭಾರತವನ್ನು ಕುಂಟ ಎಂದು ಕರೆದರು. ಏಕೆಂದರೆ, ಭಾರತದ ಆಧ್ಯಾತ್ಮಿಕ ದೃಷ್ಟಿಯು ಶ್ರೇಷ್ಠವಾಗಿದ್ದರೂ ಅದು ಆರ್ಥಿಕವಾಗಿ ದುರ್ಬಲ. ಮತ್ತೊಂದು ಕಡೆ, ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳು ಕುರುಡಾಗಿವೆ. ಏಕೆಂದರೆ ಅವು ಶ್ರೀಮಂತವಾಗಿದ್ದರೂ ಅವುಗಳಿಗೆ ಮಾರ್ಗದರ್ಶನ ಮತ್ತು ಸೂಕ್ತವಾದ ದೃಷ್ಟಿ ಇಲ್ಲ. ಆದುದರಿಂದ ಕೈಗಾರಿಕೀಕರಣಗೊಂಡ ದೇಶಗಳ ಸಂಪನ್ಮೂಲಗಳನ್ನು ಭಾರತದ ಆಧ್ಯಾತ್ಮಿಕ ಒಳದೃಷ್ಟಿಯಂತೆ ಉಪಯೋಗಿಸಿದರೆ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅವರು ಬೋಧಿಸಿದರು.
ಅವರು ಈ ತತ್ತ್ವವನ್ನು ಆಚರಣೆಗೆ ತಂದರು. ತಮ್ಮ ಪಾಶ್ಚಿಮಾತ್ಯ ಶಿಷ್ಯರ ನಿಧಿಯಿಂದ ಅವರು ಭಗವದ್ಗೀತೆಯ ಶತ ಕೋಟಿಗೂ ಹೆಚ್ಚು ಪ್ರತಿಗಳನ್ನು 40 ಭಾಷೆಗಳಲ್ಲಿ ಮುದ್ರಿಸಲು ಅವರನ್ನು ಸಂಘಟಿಸಿದರು. ಈ ಜ್ಞಾನದ ಗ್ರಂಥಗಳನ್ನು ವಿಶ್ವಾದ್ಯಂತ ಹಂಚಲು ವ್ಯವಸ್ಥೆ ಮಾಡಿದರು.