ಶಿಕ್ಷಣದ ಸೋಲು

ಪ್ರಸ್ತುತ ಇಡೀ ಜಗತ್ತಿನಾದ್ಯಂತ ಕಾಣುತ್ತಿರುವ ಶಿಕ್ಷಣದ ಅವ್ಯವಸ್ಥಾ ಸ್ಥಿತಿಯು ಇಂದಿನ ಆಧುನಿಕ ಶಿಕ್ಷಣವು ಇಟ್ಟುಕೊಂಡಿರುವ ಗುರಿಗಳು ( ಅಥವಾ ಗುರಿಗಳಿಲ್ಲದಿರುವಿಕೆಯ) ಫಲ. ಇದು ನಮ್ಮ ಗುರಿರಹಿತ ನಾಗರಿಕತೆಯ ಪ್ರತಿಬಿಂಬವೇ ಹೊರತು ಬೇರೇನೂ ಅಲ್ಲ. ಪೇಪರ್‌ಗಳಲ್ಲಿ, ಪುಸ್ತಕಗಳಲ್ಲಿ ನಾವು ಎಣಿಸಲಾರದ ವರ್ಷಗಳ ವಿಕಾಸವಾದದ ಪರಿಣಾಮದಿಂದ ಜ್ಞಾನ, ಸುಖ, ಸಂತೋಷ ಭದ್ರತೆಯಲ್ಲಿ ಮೇರು ಶಿಖರವನ್ನು ತಲಪಿದ್ದೇವೆ ಎಂದು ತೋರಿಸಲಾಗುತ್ತದೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ತಗ್ಗಿ ಕುಗ್ಗಿ ಹೋರಾಡಿದ ಹಳೆಯ ಜನಾಂಗದವರು ಕೂಡ ಇದನ್ನೇ ನಿಶ್ಚಿತವಾದ ಸತ್ಯವೆಂದುಕೊಳ್ಳುತ್ತಿದ್ದಾರೆ. ಆದರೆ ಈಗಿನ ಯುವ ಜನಾಂಗದಲ್ಲಿ ನಿಷ್ಕಪಟಿಗಳಾಗಿರುವ ವ್ಯಕ್ತಿಗಳು ಇದರ ನಿರರ್ಥಕತೆಯನ್ನು ಬಲ್ಲರು. ಅವರ ಹಿರಿಯರು ಏಕೆ ತಾವು ಬೋಧಿಸಿದ್ದನ್ನು ಆಚರಿಸುತ್ತಿಲ್ಲ? ಏಕೆ ಅವರ ಬಾಳು ನಿರರ್ಥಕ ಹಾಗೂ ಅಸಂತೃಪ್ತವಾಗಿದೆ? ಎಂದೆಲ್ಲಾ ಯೋಚನೆ ಮಾಡುತ್ತಿದ್ದಾರೆ.

ಪುಸ್ತಕಗಳ ಕಾಗದದ ಮೇಲೆ ಈ ನಾಗರಿಕತೆಯೆಂಬುದು ಉಚ್ಛ್ರಾಯ ಸ್ಥಿತಿಯಲ್ಲಿ ನಿಂತಿದೆ. ಆದರೆ ಸತ್ಯವೇನೆಂದರೆ ಆಧುನಿಕ ನಾಗರಿಕತೆಗೆ ಸಂಪೂರ್ಣ ಸೋಲಾಗಿದೆ. ಹಾಗೆ ನೋಡಿದರೆ ಬೆತ್ತಲೆಯಾಗಿದ್ದ ಆದಿಮಾನವರು ಕಾಡಿನಲ್ಲಿ, ಮರುಗಾಡಿನಲ್ಲಿ ವಾಸಿಸುತ್ತಾ ಈಗಿನ ಆಧುನಿಕ ಮಾನವರಿಗಿಂತಲೂ ಸಂತೋಷವಾಗಿದ್ದರು.

ಈಗ ನಮ್ಮಲ್ಲಿ ತುಂಬಿಕೊಂಡಿರುವ ಅತೃಪ್ತಿ, ಅಸಮಾಧಾನ, ಅಶಾಂತಿ ಇತಿಹಾಸದಲ್ಲೇ ಯಾವತ್ತೂ ಕಂಡಿಲ್ಲ. ಕ್ಷಣಿಕವಾಗಿ ಇಂದ್ರಿಯ ತೃಪ್ತಿಯೇ ನಮ್ಮ ಬದುಕಾಗಿ ಹೋಗಿದೆ. ಕೇವಲ ಅನಿಯಮಿತವಾದ ಇಂದ್ರಿಯಭೋಗದ ಜೀವನ, ಜೀವಿಸಲು ಯೋಗ್ಯವಲ್ಲ. ಕೇವಲ ಕ್ಷಣಿಕ ಸುಖವನ್ನು ಕೊಡಬಲ್ಲ ಇಂದ್ರಿಯತೃಪ್ತಿಯ ಜೀವನ ಬುದ್ಧಿವಂತ ಮನುಷ್ಯನನ್ನು ತೃಪ್ತಿಗೊಳಿಸಲಾಗುವುದಿಲ್ಲ.

ಬದುಕಿಗೆ ದಿವ್ಯವಾದ ಉದ್ದೇಶವಿಲ್ಲದೆ- ಎಲ್ಲ ಪ್ರ‍ಶ್ನೆಗಳಿಗೆ ಉತ್ತರಗಳನ್ನು ಕೊಡುವ ದಿಕ್ಕಿಲ್ಲದಿದ್ದರೆ, ಶಾಶ್ವತ ಮತ್ತು ಪರಮ ಸತ್ಯದೆಡೆಗೆ ದಿಕ್ಕಿಲ್ಲದಿದ್ದರೆ – ಮನುಷ್ಯ ಜನ್ಮದ ಉದ್ದೇಶ ವಿಫಲವಾಗುತ್ತದೆ. ಮಾನವನ ಆಸೆಗಳೆಲ್ಲ ನಿರಾಶೆಯಾಗುತ್ತವೆ. ಶಾಶ್ವತ ಜೀವನವೆಂಬುದು ಅಸಮಾಧಾನ, ಅತೃಪ್ತಿಯಿಂದಾಗಿ ಸಂತೃಪ್ತಿಗೆ ಮೀಸಲಾಗದ ಜೀವನ ಅಂತಿಮವಾಗಿ ಸಾವಿಗೆ ಮೀಸಲಾಗಬೇಕಾಗುತ್ತದೆ.

ಆದುದರಿಂದ ಜೀವನಕ್ಕೆ ಪೂರ್ಣತೆ ಬರಬೇಕಾದರೆ ಸತ್ಯದ ದರ್ಶನವಾಗಬೇಕು. ಈ ಆಧುನಿಕ ನಾಗರಿಕತೆ ಅವನತಿ ಹೊಂದಬಾರದೆಂದರೆ ಉನ್ನತ ಮಾನವ ಜನ್ಮದ ಉದ್ದೇಶಗಳನ್ನು ಪೂರೈಸಬೇಕು. ಇಂದು ಆಧುನಿಕ ಜನಾಂಗಕ್ಕೆ ಶಿಕ್ಷಣ ಕೊಡುವುದು ಎಂದರೆ ಅವರಿಗೆ ಆತ್ಮಸಾಕ್ಷಾತ್ಕಾರ ಜ್ಞಾನದ ( ಎಂದರೆ ಭಗವಂತನ ಅರಿಯುವಿಕೆ ಮತ್ತು ಪ್ರೇಮಮಯ ಸೇವೆಯ) ಪರಿಪೂರ್ಣತೆಯನ್ನು ಸಾಧಿಸಲು ಮಾರ್ಗದರ್ಶನ ಕೊಡುವುದು.

ಹೀಗಾಗದೇ ಇದ್ದಲ್ಲಿ, ಶಿಕ್ಷಣವೆಂಬುದು ಕೇವಲ ಯಂತ್ರಗಳು ತಯಾರಿಸುವಂತೆ ಕಾರ್ಮಿಕರನ್ನು ತಯಾರಿಸುವ ಕಾರ್ಖಾನೆಗಳಿಗಿಂತ ಮಿಗಿಲಾದ ಮಟ್ಟಕ್ಕೆ ತರದಿದ್ದಲ್ಲಿ, ಈ ನಾಗರಿಕತೆ ಮತ್ತು ಶಿಕ್ಷಣವು ಅವ್ಯವಸ್ಥೆಯ, ನಿಷ್ಪ್ರಯೋಜಕತೆಯ ಹಾಗೂ ಆಶಾರಹಿತತೆಯ ಅತ್ಯಂತ ಹೀನ ಸ್ಥಿತಿಗಳೆಡೆಗೆ ಹರಿಯುತ್ತವೆ.

ಇವೆಲ್ಲಕ್ಕಿಂತಲೂ ಮೇಲಾಗಿ, ಶಿಕ್ಷಣದಲ್ಲಿ ಅಧಿಕಾರ ಸ್ಥಾನಗಳಲ್ಲಿ ಜನರು ತಮ್ಮ ವೈಯಕ್ತಿಕ ಜೀವನಗಳನ್ನು ದುಶ್ಚಟಗಳಿಂದ ಮತ್ತು ಭ್ರಷ್ಟತೆಯಿಂದ ಮುಕ್ತರಾಗಿಟ್ಟಿರಬೇಕು. ಇದಲ್ಲದೇ ಇವರು ಮಾನವರು ಪ್ರಜ್ಞೆಯ ಉತ್ತಮ ಚಟುವಟಿಕೆಗಳಲ್ಲಿ ಸ್ವತಃ ತೊಡಗಿರಬೇಕು. ಅಥವಾ ಇಲ್ಲೇನಾದರೂ, ವಿದ್ಯಾರ್ಥಿಗಳಿಗೆ ಒಂದು ನಿಯಮ ಮತ್ತು ಶಿಕ್ಷಕರಿಗೆ ಇನ್ನೊಂದು ನಿಯಮವಿದೆಯೋ?

ಅಥವಾ ನಮ್ಮ ಗುಣಗಳ ಮಟ್ಟವು ಎಷ್ಟು ಕೀಳಾಗಿದೆ ಎಂದರೆ, ನಿಷ್ಠಾವಂತರ ಸ್ಥಾನಮಾನಗಳ ಮೇಲೆ ಹಕ್ಕನ್ನು ಸಾಧಿಸುವ ಜನರಿಂದ ನಿಷ್ಠೆಯನ್ನು ನಿರೀಕ್ಷಿಸುವುದಿಲ್ಲವೋ? ಅಥವಾ ಮಾನವನ ಪರಿಸ್ಥಿತಿ “ಸುಧಾರಣೆ” ಕೇವಲ ಆಡಂಭರದ ಮಾತುಗಳೋ?

ಅಮೆರಿಕಾದ ದೇಶದ ಪೇಪರ್‌ಗಳಲ್ಲಿ ಕಂಡುಬರುವ ಏರುತ್ತಿರುವ ಅಪರಾಧಗಳ ಸಂಖ್ಯೆ, ಐಹಿಕ ಆಸೆಗಳನ್ನೇ ಕೇಂದ್ರವಾಗಿಟ್ಟುಕೊಂಡಿರುವ ನಾಗರಿಕತೆಯಲ್ಲಿ ಧ್ಯೇಯವೇ ಇಲ್ಲದಿರುವುದನ್ನು ಸಾಬೀತು ಮಾಡುತ್ತದೆ. ಇದರ ಬಗ್ಗೆ ಚಿಂತಿಸುವವರಿಗೆ ಮಿಲಿಯಗಟ್ಟಲೆ ಹಣವನ್ನು ಪೊಲೀಸ್‌ ಇಲಾಖೆಗಳಿಗೆ ಮತ್ತು ಸುಧಾರಕ ಗೃಹಗಳಿಗೆ ವ್ಯಯ ಮಾಡುವ ಬದಲು ತಮ್ಮ ಶಕ್ತಿಗಳನ್ನು ಇನ್ನೂ ಅರ್ಥಪೂರ್ಣ ಕಾನೂನುಗಳನ್ನು ರಚಿಸುವಡೆಗೆ ಕೇಂದ್ರಿಕರಿಸಬೇಕೆಂಬ ಸರಳ ವಿಷಯ ಹೊಳೆಯದಿರುವುದು ಖೇದದ ಸಂಗತಿ.

ಕಾನೂನು ಯಾವುದು ಸರಿ ಯಾವುದು ತಪ್ಪು, ಯಾವುದು ಕಾಯಿದೆಬದ್ಧವಾದುದು, ಹಾಗೂ ಯಾವುದು ಕಾಯಿದೆ ವಿರುದ್ಧವಾದುದು ಎಂಬುದನ್ನು ಬೆಟ್ಟುಮಾಡಿ ತೋರಿಸುತ್ತದೆ. ಆದರೆ ಈಗಿನ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿ ಹೋಗಿದೆಯೆಂದರೆ ಯಾರಿಗೂ ಕಾನೂನಿನ ನಿಬಂಧನೆಗಳಿಗೆ ಕಿಂಚಿತ್‌ ಗೌರವವೂ ಇಲ್ಲ ಮತ್ತು ಎಲ್ಲೆಲ್ಲೂ ಅರಾಜಕತೆ ಮನೆ ಮಾಡಿದೆ.

ಇಂತಹ ಸ್ಥಿತಿಯು ಉಂಟಾಗಿರುವುದಕ್ಕೆ ಕಾರಣ – ಆರ್ಥಿಕ ಪ್ರಗತಿಯನ್ನೇ ಧ್ಯೇಯವಾಗಿಟ್ಟುಕೊಂಡು ವ್ಯಾಪಾರಿಗಳು ಕಾಯ್ದೆಗಳನ್ನು ಚಾಲ್ತಿಯಲ್ಲಿಟ್ಟಿರುವುದು. ಆದರೆ ಬ್ಯಾಂಕ್‌ನಲ್ಲಿ ಹಣ ಸಂಗ್ರಹ ಮಾಡು, ಕೋಕ್‌ ಪಾನೀಯ ಕುಡಿಯುತ್ತ ದೂರದರ್ಶನ ಪರದೆಯನ್ನು ಮೂಕರಂತೆ ನೋಡುತ್ತಾ ಕೂರುವುದೇ ಮನುಷ್ಯ ಜನ್ಮವಲ್ಲ.

ಮನುಷ್ಯನ ಜೀವನದ ಶ್ರಮಗಳನ್ನು ಭಗವಂತನ ಪ್ರೇಮಯುತ ಸೇವೆಗೆ ಮೀಸಲಾಗಿಡುವಲ್ಲಿ ವಿಫಲತೆ ಹಾಗೂ ದುಃಖದಲ್ಲಿ ಕೊನೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಮನುಷ್ಯನ ಜೀವನವು ತನ್ನ ಶ್ರಮ ಮತ್ತು ಸಮಯಗಳನ್ನೆಲ್ಲಾ ಭಗವಂತನ ಪ್ರೇಮಯುತ ಸೇವೆಗೆ ಉಪಯೋಗಿಸಬೇಕು.

ಮನುಷ್ಯನು ಕೇವಲ ಈಗಿನ ಆರ್ಥಿಕ ಕಟ್ಟಡದ ಅಂಶವಲ್ಲ. ಇನ್ನೂ ಆಳವಾದ, ಅರ್ಥಗರ್ಭಿತವಾದ ಮತ್ತು ಕೊನೆಯದಾಗಿ ಇನ್ನೂ ತುರ್ತಾದ ಅಗತ್ಯವೇನೆಂದರೆ – ಭಗವಂತನನ್ನು ಸಂತೈಸುವುದು ಮತ್ತು ಅರ್ಥೈಸಿಕೊಳ್ಳುವುದು. ಮನುಷ್ಯನ ಅಗತ್ಯವನ್ನು ಪೂರೈಸದಿದ್ದಲ್ಲಿ ಸಮಾಜವು ದೃಢವಾಗಿ ನಿಲ್ಲಲು ಅಸಾಧ್ಯ.

ಯೋಗಿಗಳಿಗೆ ಒಂದು ಸೂಚನೆ: ಯೋಗ, ಮಂತ್ರ, ‍ಧ್ಯಾನ ಮತ್ತು ಇತ್ಯಾದಿ ತರಗತಿಗಳಿಗೆ ಹಣವನ್ನು ವ್ಯಯ ಮಾಡುವುದರಲ್ಲಿ ತೊಡಗಿರುವವರು ದಿನಕ್ಕೆ ಒಮ್ಮೆಯಾದರೂ ತಾವು ಮಾಡುತ್ತಾ ಇರುವುದೆಲ್ಲಾ ಏನು ಎಂದು ಆಲೋಚಿಸಬೇಕು. ಯೋಗ ಎಂದರೇನು? ಅದರ ಉದ್ದೇಶವೇನು? ಇದು ನಿಮಗೆ ಗೊತ್ತಿಲ್ಲದಿದ್ದರೆ ನೀವು ಏನು ಮಾಡುತ್ತಿದ್ದೀರ ಏತಕ್ಕೆ ಹಣವನ್ನು ವೆಚ್ಚ ಮಾಡುತ್ತಿದ್ದೀರ ಎಂದು ತಿಳಿದುಕೊಳ್ಳಬೇಕು.

ಪುರಾತನ ಕಾಲದ ಭಾರತದ ಋಷಿಗಳಿಂದ ತಿಳಿದು ಬಂದ ನಿಜವಾದ ಯೋಗ ಪದ್ಧತಿಯು ಯೋಗಿಯನ್ನು ಸಮಾಧಿಸ್ಥಿತಿಗೆ ಒಯ್ದು ಹೋಗಬೇಕೆಂಬ ಉದ್ದೇಶದಿಂದ ಕೂಡಿತ್ತು. ಸಮಾಧಿಸ್ಥಿತಿ ಎಂದರೆ ಮನಸ್ಸನ್ನು ಹೃದಯದಲ್ಲಿರುವ ಚತುರ್ಭುಜಧಾರಿ ನಾರಾಯಣ ಮೇಲೆ ಧ್ಯಾನಿಸುವುದು.

ದೇಹಾತ್ಮ ಬುದ್ಧಿಯಿಂದ ಸಂಪೂರ್ಣವಾಗಿ ಎಲ್ಲ ಆಸಕ್ತಿಯನ್ನು ತೊರೆಯುವುದು. ತಾನು ಈ ಭೌತಿಕ ಪ್ರಕೃತಿಯ ಉತ್ಪನ್ನನಲ್ಲ ಆದರೆ ಶುದ್ಧ ಚೇತನಾತ್ಮ ಎಂದು ನಮ್ಮನ್ನು ನಾವೇ ತಿಳಿದುಕೊಳ್ಳುವುದೇ ನಿಜವಾದ ಯೋಗದ ಉದ್ದೇಶ. ಇದೇ ಆತ್ಮಜ್ಞಾನ, ಆತ್ಮ ಸಾಕ್ಷಾತ್ಕಾರ.

ಬೊಜ್ಜನ್ನು ಇಳಿಸುವುದು, ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಅಥವಾ ಇದ್ದಂತೆ ಉಳಿಸಿಕೊಳ್ಳುವುದು, ಒಳ್ಳೆಯ ಆರೋಗ್ಯವನ್ನು ಪಡೆಯುವುದು, ಮಾಂತ್ರಿಕ ಶಕ್ತಿಗಳನ್ನು ಪಡೆಯುವುದರಲ್ಲಿ ಮನಸ್ಸಿರುವ ವ್ಯಕ್ತಿಗಳಿಗೆ ಯೋಗದ ಈ ಗುರಿಯನ್ನು ತಲುಪಲು ಬಹುಕಷ್ಟ ಅಸಾ‍ಧ್ಯವೆಂದೇ ಹೇಳಬಹುದು.

ಒಂದು ಕಾಲದಲ್ಲಿ ಪಾಶ್ಚಾತ್ಯರು – ಕೆಲವರು ಲೂಟಿ ಮಾಡಲೆಂದು ಮತ್ತು ಇನ್ನಿತರರು ಧರ್ಮ ಬೋಧನೆ ಮಾಡಲೆಂದು ಪೂರ್ವಕ್ಕೆ ಬಂದರು. ಈಗ ಈ ಪ್ರವೃತ್ತಿ ತಿರುಗಿದಂತಿದೆ. ಆಧುನಿಕ ಮೌಲ್ಯಗಳನ್ನು ಆಶ್ರಯಿಸುವವರಿಗೆ ಲೂಟಿಗಾರರಿಗೂ ಮತ್ತು ಧರ್ಮ ಪ್ರಚಾರಕರಿಗೂ ಇರುವ ವ್ಯತ್ಯಾಸ ತಿಳಿಯುವುದು ಕಷ್ಟವಾಗಿದೆ.

ನಿಮ್ಮ ಪರಿಶ್ರಮದ ದುಡಿಮೆಯನ್ನು ಅಥವಾ ನಿಮ್ಮ ಅಮೂಲ್ಯವಾದ ಸಮಯ ವೆಚ್ಚ ಮಾಡುವ ಮೊದಲೇ ನೀವು ಏನು ಮಾಡಲು ಹೊರಟಿದ್ದೀರಿ ಎಂದು ವಿಚಾರ ಮಾಡಿ ನೋಡಿ. ಧ್ಯೇಯವು ಶುದ್ಧ ಪ್ರಜ್ಞೆ, ಕೃಷ್ಣ ಅಥವಾ ದೈವಪ್ರಜ್ಞೆ ಇಲ್ಲವಾದರೆ ಅದು ಯೋಗವಲ್ಲ, ಅಪಹಾಸ್ಯ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi