ಶಿಕ್ಷಣ ಸಾಮ್ರಾಟ್

– ಪತಿತ ಪಾವನ ದಾಸ

“ಭಗವದ್ಗೀತೆಯು ಈ ದೇಹದ ಸಾವಿನಲ್ಲಿ ನಾವು ಸಾಯದೇ, ಬದುಕುವುದನ್ನು ಮುಂದುವರಿಸುತ್ತೇವೆಂದು ಬೋಧಿಸುವ ಮೂಲಕ ನಮ್ಮ ನಿಜವಾದ ಶಿಕ್ಷಣವನ್ನು ಆರಂಭಿಸುತ್ತದೆ.”

ಇತ್ತೀಚೆಗೆ ಹೆಸರಾಂತ ಪ್ರಾಧ್ಯಾಪಕರೊಬ್ಬರು 50,000 ವಿದ್ಯಾರ್ಥಿ ಪ್ರೇಕ್ಷಕರೊಂದಿಗೆ ನಡೆಸಿದ ಬೃಹತ್‌ ಸಭೆಯ ಬಗೆಗಿನ ಒಂದು ವಿಡಿಯೋ  ಅಂತರ್ಜಾಲದ  ಸಾಮಾಜಿಕ ಮಾಧ್ಯಮದ ತಾಣಗಳಲ್ಲಿ ತೇಲಾಡುತ್ತಿತ್ತು. ಹೊರನೋಟಕ್ಕೆ ಆ ಪ್ರಾಧ್ಯಾಪಕರು ಶಿಕ್ಷಣದಿಂದ ಯುವಕರನ್ನು ಸಬಲೀಕರಿಸುವುದರ ಧ್ಯೇಯ ಹೊತ್ತಿದ್ದರು. ನಾವು ನಮ್ಮ ಸುತ್ತಲೂ ನೋಡಿದರೆ ಇಂದು ಭಾರತದಲ್ಲಿ, ಸಾಕ್ಷರತೆಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಇಂಥ ಅನೇಕ ಶಿಕ್ಷಣತಜ್ಞರು ಮತ್ತು ಲೋಕೋಪಕಾರಿಗಳಿದ್ದಾರೆ.  ಉಚಿತ / ರಿಯಾಯಿತಿ ಶಿಕ್ಷಣವನ್ನು ನೀಡಲು ಇಂತಹ ವ್ಯಕ್ತಿಗಳು ಆರಂಭಿಸಿರುವ ಅನೇಕ ಸಂಸ್ಥೆಗಳಿವೆ.  ಇವರಲ್ಲಿನ ಅತ್ಯುತ್ತಮರು `ಶಿಕ್ಷಣ ಸಾಮ್ರಾಟ’ ಎಂದು ಕರೆಸಿಕೊಳ್ಳಲು ಅರ್ಹರಾಗಿದ್ದಾರೆಯೇ?  ಬನ್ನಿ ಅವಲೋಕಿಸೋಣ…

ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ರಾಜಕೀಯ, ಕಲೆ, ಮುಂತಾದ ವಿಷಯಗಳಲ್ಲಿ ಶಿಕ್ಷಣ ಪಡೆದು ಒಂದು ಯೋಗ್ಯ ಉದ್ಯೋಗ ದೊರಕಿಸಿಕೊಂಡು ಆರಾಮದಾಯಕ ಜೀವನ ನಡೆಸುವ ಉದ್ದೇಶದಿಂದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಆದ್ದರಿಂದ ಈ ರೀತಿಯ ಶಿಕ್ಷಣದ ಉದ್ದೇಶ ದೇಹ ಮತ್ತು ಅದರ ಅಗತ್ಯಗಳ ನಿರ್ವಹಣೆಯಾಗಿರುತ್ತದೆ ಎಂದು ಹೇಳಬಹುದು.  ಒಬ್ಬ ವ್ಯಕ್ತಿಯು ಕೇವಲ ಜೀವನೋಪಾಯ ಮಾತ್ರವನ್ನು ಮೀರಿ ದೊಡ್ಡದೇನನ್ನೋ ಸಾಧಿಸಿ ಸಮಾಜದಲ್ಲಿ ಹೆಸರು ಗಳಿಸಿದ್ದಾನೆಂದುಕೊಳ್ಳೋಣ.  ಅವನು ತೀರಿಕೊಂಡಾಗ, ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಂತಾಪ ಸೂಚಿಸಲು ಒಟ್ಟಾದರೂ, ಕೊಳೆಯುತ್ತಿರುವ ಆ ದೇಹದ ವಾಸನೆ ಅಸಹನೀಯವಾಗುವ ಮೊದಲು ಅದನ್ನು ವರ್ಜಿಸಲು ಪ್ರಯತ್ನಿಸುತ್ತಾರೆ!  ಹಾಗಾದರೆ ಅಷ್ಟೇ ಜೀವನವೇ?  ಅಂತಿಮವಾಗಿ ಸುಡಲ್ಪಡುವ, ಸಮಾಧಿ ಮಾಡಲ್ಪಡುವ ಅಥವಾ ರಣಹದ್ದುಗಳಿಗೆ ಆಹಾರವಾಗುವ ಈ ನಶ್ವರ ದೇಹಕ್ಕಾಗಿ ಜೀವನವಿಡೀ ಶ್ರಮ ಪಡಬೇಕೇ?  ಇದೇ ಈ ಶಿಕ್ಷಣದ ಉದ್ದೇಶವೇ?

ಭಗವದ್ಗೀತೆ  `ಇಲ್ಲ’ವೆನ್ನುತ್ತದೆ.  ಗೀತೆಯು ನಾವು ಈ ದೇಹಗಳಾಗಿರದೇ, ಜೀವಾತ್ಮಗಳಾಗಿದ್ದೇವೆಂದು; ಈ ದೇಹದ ಸಾವಿನಲ್ಲಿ ನಾವು ಸಾಯದೇ, ಬದುಕುವುದನ್ನು ಮುಂದುವರಿಸುತ್ತೇವೆಂದು ಬೋಧಿಸುವ ಮೂಲಕ ನಮ್ಮ ನಿಜವಾದ ಶಿಕ್ಷಣವನ್ನು ಆರಂಭಿಸುತ್ತದೆ.  ವಿಶ್ವವಿದ್ಯಾಲಯಗಳು ವಿವಿಧ ವಿಷಯಗಳನ್ನು ಕಲಿಸಿದರೂ ಅವು ಯಾವವೂ ಗೀತೆಯ ಈ ಜ್ಞಾನವನ್ನು, ದೇಹ ಮತ್ತು ಆತ್ಮದ ನಡುವಿನ ವ್ಯತ್ಯಾಸವನ್ನು ಬೋಧಿಸುವುದಿಲ್ಲ: ಆದ್ದರಿಂದ ಗೀತೆಯ ಆರಂಭದಲ್ಲಿ ಈ ಜ್ಞಾನವನ್ನು  `ಗೌಪ್ಯ ಜ್ಞಾನ’ ಎಂದು ಕರೆಯಲಾಗಿದೆ.

ನಾವು ಈ ದೇಹವಲ್ಲವೆಂದಲ್ಲಿ ಕೆಲವರು, ಈ ದೇಹ ಕೊನೆಗೊಂಡ ಅನಂತರ ಆತ್ಮವು ಶೂನ್ಯವಾಗುತ್ತದೆಂದು ಭಾವಿಸಬಹುದು.  ಆದರೆ ಇದು ವಾಸ್ತವವಲ್ಲ.  ಒಬ್ಬ ವ್ಯಕ್ತಿಯು ಬದುಕಿದ್ದಾಗ ಚೈತನ್ಯಯುಕ್ತನಾಗಿರುತ್ತಾನೆ ಮತ್ತು ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾನೆ; ಹಾಗೂ ಈ ದೇಹದಿಂದ ಬಿಡುಗಡೆಗೊಂಡ  ಅನಂತರ ಅಥವಾ ಮುಕ್ತಿ ಹೊಂದಿದ ಅನಂತರ, ಅವನು ಜಡ ಮತ್ತು ಶೂನ್ಯವಾಗುತ್ತಾನೆಯೇ?  ಇಲ್ಲ. ಅವನು ಸಕ್ರಿಯನಾಗಿರುವುದನ್ನು ಮುಂದುವರಿಸುತ್ತಾನಾದರೂ ಆ ಚಟುವಟಿಕೆಗಳು ಆಧ್ಯಾತ್ಮಿಕ ನೆಲೆಯ ಮೇಲಿರುತ್ತವೆ.  ಗೀತೆಯ 7ನೇ ಮತ್ತು 8ನೇ ಅಧ್ಯಾಯಗಳು ಇದನ್ನು ವಿವರಿಸುತ್ತವೆ.  ಆದ್ದರಿಂದ ಈ ಜ್ಞಾನವನ್ನು `ಅಧಿಕ ಗೌಪ್ಯವಾದ ಜ್ಞಾನ’ ವೆಂದು ಕರೆಯಲಾಗುತ್ತದೆ.

ನಾವು ಈ ದೇಹವಲ್ಲದೇ ಜೀವಾತ್ಮಗಳಾಗಿದ್ದೇವೆನ್ನುವ ಜ್ಞಾನ `ಗೌಪ್ಯ’ವಾಗಿದ್ದಲ್ಲಿ, ಜೀವಾತ್ಮವು ಯಾವತ್ತೂ ನಿಷ್ಕ್ರಿಯವಾಗಿರದೇ ಎಂದಿಗೂ ಸಕ್ರಿಯವಾಗಿರುತ್ತದೆನ್ನುವ ಜ್ಞಾನ `ಹೆಚ್ಚು ಗೌಪ್ಯ’ವಾಗಿದ್ದಲ್ಲಿ, ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ಆತ್ಮದ ನಿಜವಾದ ಆಧ್ಯಾತ್ಮಿಕ ಭಕ್ತಿ ಚಟುವಟಿಕೆಗಳ ಜ್ಞಾನ `ಅತ್ಯಂತ ಗೌಪ್ಯವಾದ ಜ್ಞಾನ’ವಾಗಿದೆ.  ಹಾಗಿದ್ದಲ್ಲಿ ಇದನ್ನು ಕಲಿಸುವ ಭಗವದ್ಗೀತೆಯ 9ನೇ ಅಧ್ಯಾಯ ಎಲ್ಲ ತತ್ತ್ವಗಳು, ವೇದಾಂತಗಳು ಮತ್ತು ಜ್ಞಾನದ ಸಾರವಾಗಿರುವ ಕಾರಣ ನಿಜವಾದ `ಶಿಕ್ಷಣದ ದೊರೆ’ಯಾಗಿದೆ.

9ನೇ ಅಧ್ಯಾಯದ ಪ್ರಾರಂಭದಲ್ಲಿ ಶ್ರೀಕೃಷ್ಣ ಹೇಳುತ್ತಾನೆ, “ಪ್ರಿಯ ಅರ್ಜುನನೇ, ನೀನು ನನ್ನ ಬಗ್ಗೆ ಯಾವತ್ತೂ ಮತ್ಸರ ಹೊಂದಿಲ್ಲದಿದ್ದರಿಂದ ನಾನು ನಿನಗೆ ಅತ್ಯಂತ ಗೌಪ್ಯವಾದ ಈ ಜ್ಞಾನ ಮತ್ತು ಅರಿವನ್ನು ನೀಡುತ್ತೇನೆ ಹಾಗೂ ನೀನು ಇದನ್ನು ತಿಳಿದುಕೊಂಡು ಲೌಕಿಕ ಅಸ್ತಿತ್ವದ ಕಷ್ಟಗಳಿಂದ  ಬಿಡುಗಡೆ ಹೊಂದಬಹುದು.” ಮುಂದೆ ಅವನು ಹೇಳುತ್ತಾನೆ, “ಈ ಜ್ಞಾನ ಶಿಕ್ಷಣದ ದೊರೆಯಾಗಿದೆ, ಹಾಗೂ ಎಲ್ಲ ರಹಸ್ಯಗಳ ರಹಸ್ಯವಾಗಿದೆ. ಇದು ಅತ್ಯಂತ ಪರಿಶುದ್ಧ ಜ್ಞಾನವಾಗಿದೆ, ಮತ್ತು ಇದು ಅರಿವಿನ ಮೂಲಕ ಸ್ವಂತದ ನೇರ ಗ್ರಹಿಕೆಯನ್ನು ನೀಡುವುದರಿಂದ ಧರ್ಮದ ಪರಿಪೂರ್ಣತೆಯಾಗಿದೆ.  ಇದು ಶಾಶ್ವತವಾಗಿದೆ ಹಾಗೂ ಇದನ್ನು ಸುಸುಖವಾಗಿ ಮಾಡಲಾಗುತ್ತದೆ.”

ಭಗವಂತನ ವೈಭವದ ಜ್ಞಾನವನ್ನು 9ನೇ ಅಧ್ಯಾಯದಲ್ಲಿ ನಿರೂಪಿಸಲಾಗಿದೆ ಮತ್ತು ಈ ಜ್ಞಾನ ಅಥವಾ ಶಿಕ್ಷಣ ಕೃಷ್ಣನ ಭಕ್ತಿಪೂರ್ಣ ಸೇವೆಯಲ್ಲಿ ಕೊನೆಗೊಳ್ಳುತ್ತದೆ.  ಇಲ್ಲಿ ನಾವು ಈ ಜಗತ್ತು ಕೃಷ್ಣನ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಕೇವಲ ಅವನ ಸರ್ವೋಚ್ಚ ಇಚ್ಛೆಯಿಂದಲೇ ಎಲ್ಲವೂ ಸೃಷ್ಟಿಯಾಗುತ್ತದೆ, ನಿರ್ವಹಿಸಲ್ಪಡುತ್ತದೆ, ಅಥವಾ ನಾಶವಾಗುತ್ತದೆ ಎಂದು ತಿಳಿದುಕೊಳ್ಳುತ್ತೇವೆ.  ಸೂರ್ಯ, ಚಂದ್ರ ಮತ್ತು ಗ್ರಹಗಳು ತಮ್ಮ ಕಕ್ಷೆಯಲ್ಲಿ ಚಲಿಸುತ್ತವೆ, ಎಲ್ಲೆಡೆ ಗಾಳಿ ಬೀಸುತ್ತದೆ, ಬಲಶಾಲಿಯಾದ ಸಾಗರ ಅದರ ಗಡಿಯೊಳಗೇ ಉಳಿಯುತ್ತದೆ, ಮತ್ತು ಎಲ್ಲವೂ ಭಗವಂತನಾದ ಕೃಷ್ಣನ ಸರ್ವೋಚ್ಚ  ಇಚ್ಛೆಯ ಮೇರೆಗೆ ಒಂದು ಕ್ರಮದಲ್ಲಿರುತ್ತದೆ.  ನಿಜ ಹೇಳಬೇಕೆಂದರೆ, ಒಂದು ಹುಲ್ಲು ಕಡ್ಡಿಯೂ ಅವನ ಇಚ್ಛೆಗೆ ವಿರುದ್ಧವಾಗಿ ಚಲಿಸುವುದಿಲ್ಲ.

ಈ ಸಂಬಂಧವಾಗಿ ಒಂದು ಕುತೂಹಲಕಾರಿ ಐತಿಹ್ಯವಿದೆ.  ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಚರ್ಚ್‌ಗೆ ಹೋಗುವವರ ಒಂದು ಪಾಳೆಯದ ಜೊತೆ ಚುನಾವಣಾ ಪ್ರಚಾರಕ್ಕಾಗಿ ಹೋಗುತ್ತಿದ್ದ ಒಬ್ಬ ನಾಸ್ತಿಕ ರಾಜಕಾರಣಿ ಮಾತುಕತೆಗಿಳಿದ.  ನಾಸ್ತಿಕನು ಬಡ ಹಳ್ಳಿಗರು ಚರ್ಚಿನಲ್ಲಿ ಯಾವುದಕ್ಕಾಗಿ ಪ್ರಾರ್ಥಿಸಿದರೋ ಅದು ಸಿಕ್ಕಿತೋ ಇಲ್ಲವೋ ಎಂದು ಕೇಳಿದಾಗ ಅವರು ತಾವು ಅಹಾರಕ್ಕಾಗಿ ಬೇಡಿಕೊಂಡರು. ಆದರೆ  ಆದು ಸಿಗಲಿಲ್ಲ ಎಂದರು.  ತನ್ನೊಂದಿಗೆ ಮಣಗಟ್ಟಲೇ ಅಹಾರ ತಂದಿದ್ದ ಕುತಂತ್ರಿ ರಾಜಕಾರಣಿಯು ಅವುಗಳನ್ನು ಈ ಪ್ರಶ್ನೆಯ ಜೊತೆ ಹಳ್ಳಿಗರಿಗೆ ನೀಡಿದ: “ಯಾರು ಉತ್ತಮರು ದೇವರೋ ಅಥವಾ ನಾನೋ?”  ಸರಳವಾದ ಆ ಹಳ್ಳಿಗರು ಚುರುಕಾಗಿದ್ದಲ್ಲಿ, ಅವನ ಮೋಸವನ್ನು ಕಂಡುಹಿಡಿದಿರುತ್ತಿದ್ದರು.  ಏನೇ ಆದರೂ, ಮನುಷ್ಯನು ತನ್ನ ಕಾರ್ಖಾನೆಗಳಲ್ಲಿ ಆಹಾರ ತಯಾರಿಸುವುದಿಲ್ಲ; ಅವನು ಹೊಲದಲ್ಲಿ ಧಾನ್ಯ ಉತ್ಪಾದಿಸಲು ಪ್ರಯತ್ನಿಸಬಹುದು; ಆದರೆ ದೇವರು ಬಯಸಿದಲ್ಲಿ ಮಾತ್ರ ಧಾನ್ಯಗಳು ಬೆಳೆಯುತ್ತವೆ ಮತ್ತು ಅವು ಆಹಾರವಾಗಿ ಪರಿವರ್ತನೆ ಹೊಂದುತ್ತವೆ.

`ಶಿಕ್ಷಿತನಾದ’ ಆಧುನಿಕ ಮನುಷ್ಯ ಕೇವಲ ಅನ್ನ  ಮತ್ತು ಸಾರಿಗಾಗಿ ಮಾತ್ರ ಕೆಲಸ ಮಾಡುತ್ತಾನೆ ಮತ್ತು ಈ ಅಗತ್ಯವನ್ನು ಪೂರೈಸಲು ಅವನು ತುಂಬ ಶ್ರಮಪಡುತ್ತಾನೆ.  ಆದ್ದರಿಂದ ಅವನ ದೇಹದ ನಿರ್ವಹಣೆ ಅವನ ಜೀವನದ ಉದ್ದೇಶವಾಗಿದೆಯೆಂದು ತೋರುತ್ತದೆ. ಎಂಥ ದುರಂತ!  ಕಾಡಿನಲ್ಲಿನ ಪ್ರಾಣಿಗಳು ಮತ್ತು ಪಕ್ಷಿಗಳು ಕೂಡ ತಮ್ಮ ಆಹಾರವನ್ನು ನಿರಾತಂಕವಾಗಿ ಪಡೆದರೂ, `ನಾಗರಿಕ’ ಮನುಷ್ಯ ಜೀವನ ಸಾಗಿಸಲು ತುಂಬ ಶ್ರಮ ಪಡಬೇಕು.

ಏಕೋ ಬಹೂನಾಮ್‌ ಯೋ ವಿದಧಾತಿ ಕಾಮಾನ್‌ – ಎನ್ನುವ ಪವಿತ್ರ ಸೂಕ್ತಿಯಲ್ಲಿ ಘೋಷಿಸಲಾದ ಹಾಗೆ ದೇವರು ಅಥವಾ ಕೃಷ್ಣ ಎಲ್ಲರಿಗೂ ಜೀವನದ ಎಲ್ಲ ಆವಶ್ಯಕತೆಗಳನ್ನು ಪೂರೈಸುತ್ತಿದ್ದಲ್ಲಿ ಹಾಗೂ ನಾವು ಅವನ ಭಕ್ತರಾಗುವ ಮೂಲಕ ಆತನ ಕರುಣೆ ಮತ್ತು ಆರೈಕೆಯನ್ನು ಅವಲಂಬಿಸಿದ್ದಲ್ಲಿ, ಅವನು ನಮ್ಮ ಬಗ್ಗೆ ಏಕೆ ಕಾಳಜಿ ತೆಗೆದುಕೊಳ್ಳುವುದಿಲ್ಲ?  ಅವನು ಖಂಡಿತವಾಗಿಯೂ ಕಾಳಜಿ ತೆಗೆದುಕೊಳ್ಳುತ್ತಾನೆ.

ಆದ್ದರಿಂದ ಭಗವದ್ಗೀತೆ ನಮಗೆ ನಿಜವಾದ ಬದುಕುವ ಕಲೆಯ ಬಗ್ಗೆ ಅತ್ಯಂತ ಗೌಪ್ಯ ಜ್ಞಾನದಲ್ಲಿ ತಿಳಿಸುತ್ತದೆ.  ಎಷ್ಟೇ ಕಷ್ಟಪಟ್ಟರೂ ಕೃಷ್ಣನ ದಯೆಯಿಲ್ಲದೇ ಆರಾಮವಾಗಿರಲು ಅಥವಾ ಶಾಂತಿಯಿಂದಿರಲು ಸಾಧ್ಯವಿಲ್ಲವೆಂದು ಜನರು ಅರ್ಥಮಾಡಿಕೊಂಡು ಭಗವಾನ್‌ ಕೃಷ್ಣನ ಭಕ್ತಿ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ, ಅವರು ಕೃಷ್ಣನ ಜೊತೆ ಅವನ ನೆಲೆಯಲ್ಲಿ, ಈ ಜೀವನ ಮತ್ತು ಮುಂದಿನ ಜೀವನದಲ್ಲಿ ಸಂತೋಷವಾಗಿರುತ್ತಾರೆ. ಹಾಗಾದರೆ ಇದೇ, ಇದೇ ಅಲ್ಲವೇ `ಶಿಕ್ಷಣ ಸಾಮ್ರಾಟ’?

ಹರೇ ಕೃಷ್ಣ  ಮಂತ್ರ ಪಠಿಸಿ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi