
ಮಹಾಕೃತಿ ಮಹಾಭಾರತವನ್ನು ಬರೆಯುವಂತೆ ಬ್ರಹ್ಮನು ಶ್ರೀ ವ್ಯಾಸ ಋಷಿಗಳಿಗೆ ಸೂಚಿಸಿದ. ಇದಕ್ಕಾಗಿ ಗಣೇಶನ ನೆರವು ಪಡೆಯಬಹುದೆಂದೂ ಬ್ರಹ್ಮ ಹೇಳಿದ. ವ್ಯಾಸರು ಕಥೆ ಹೇಳುತ್ತಾ ಹೋದರೆ, ಗಣೇಶ ಬರೆದುಕೊಳ್ಳುತ್ತ ಹೋಗಬಹುದೆಂದು ಬ್ರಹ್ಮ ವಿವರಿಸಿದ. ಗಣೇಶನು ಬ್ರಹ್ಮನ ಬಳಿಗೆ ಬಂದು ಮಹಾಭಾರತ ಬರೆದುಕೊಳ್ಳಲು ಒಪ್ಪಿದ. ಆದರೆ ಒಂದು ಷರತ್ತಿನ ಮೇಲೆ ತಾನು ಬರೆದುಕೊಳ್ಳುವುದಾಗಿ ತಿಳಿಸಿದ. ವ್ಯಾಸ ಮಹರ್ಷಿಗಳು ಯಾವುದೇ ತಡೆ, ವಿರಾಮ ಇಲ್ಲದೆ ಸತತವಾಗಿ ಕಥೆ ಹೇಳುತ್ತಾ ಹೋಗಬೇಕು ಎಂಬುದೇ ಆ ಷರತ್ತು.
ವ್ಯಾಸರು ಇದಕ್ಕೆ ಒಪ್ಪಿದರು. ಆದರೆ ಅವರೂ ಒಂದು ಷರತ್ತು ಹಾಕಿದರು. ತಾವು ಹೇಳುವ ಪ್ರತಿ ಶಬ್ದವನ್ನೂ ಬರೆಯುವ ಮುನ್ನ ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಹಾಭಾರತ ಕಥೆ ಹೇಳುವ, ಬರೆಯುವ ಕಾರ್ಯ ನಡೆಯಿತು. ಗಣೇಶ ಪದ್ಯವೊಂದನ್ನು ಬರೆದು ಮುಗಿಸಿದ ಕೂಡಲೇ ವ್ಯಾಸರು ಕ್ಲಿಷ್ಟಕರ ಪದ್ಯ ಹೇಳುತ್ತಿದ್ದರು. ಗಣೇಶ ಅದನ್ನು ಅರ್ಥ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ವ್ಯಾಸರಿಗೆ ಮುಂದಿನ ಪದ್ಯ ರಚಿಸಲು ಕಾಲಾವಕಾಶ ಸಿಗುತ್ತಿತ್ತು. ಗಣೇಶ ಹಿಂದಿನ ಪದ್ಯವನ್ನು ಅರ್ಥ ಮಾಡಿಕೊಂಡು ಬರೆದ ಮೇಲೆ ಈ ಮುಂದಿನ ಪದ್ಯ ಬರೆಯಲು ಆರಂಭಿಸುತ್ತಿದ್ದ. ಈ ರೀತಿ ಜಗತ್ತಿನ ಬೃಹತ್ ಮಹಾ ಕಾವ್ಯವನ್ನು ಮಹರ್ಷಿ ವ್ಯಾಸ ಮತ್ತು ಗಣೇಶ ಬರೆದರು. ಗಣೇಶ ತನ್ನ ಮುರಿದ ದಂತವನ್ನು ಬರೆಯಲು ಬಳಸಿದ ಎನ್ನಲಾಗಿದೆ.






Leave a Reply