(ಗೀತಾ ಜಯಂತಿಯ ವಿಶೇಷ ಉಪನ್ಯಾಸ)
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ
ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
ಲಾಸ್‌ಏಂಜಲೀಸ್‌ನಲ್ಲಿ 1973ರ ಆಗಸ್ಟ್ 17ರಂದು ನೀಡಿದ ಉಪನ್ಯಾಸ.
ಶ್ರೀ ಭಗವಾನುವಾಚ
ಅಶೋಚ್ಯಾನ್ ಅನ್ವಶೋಚಸ್ತಂ ಪ್ರಜ್ಞಾ ವಾದಾಂಶ್ಚ ಭಾಷಸೇ ।
ಗತಾಸೂನ್ ಅಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ॥
“ದೇವೋತ್ತಮ ಪರಮ ಪುರುಷನು ಹೇಳಿದನು – ನೀನು ವಿದ್ವಾಂಸರಂತೆ ಮಾತುಗಳನ್ನಾಡುತ್ತಿದ್ದೀಯೆ; ಆದರೆ ಶೋಕಕ್ಕೆ ಯೋಗ್ಯವಲ್ಲದ್ದನ್ನು ಕುರಿತು ಶೋಕಿಸುತ್ತಿದ್ದೀಯೆ. ಪಂಡಿತರು ಸತ್ತವರಿಗಾಗಲಿ ಬದುಕಿರುವವರಿಗಾಗಲಿ ಪ್ರಲಾಪಿಸುವುದಿಲ್ಲ.”
– ಭಗವದ್ಗೀತೆ 2.11
ಜೀವಿಸುವುದು ಅಥವಾ ಸಾಯುವುದು ಏನು? ಅದುವೇ ದೇಹ. ಕೃಷ್ಣನು ಅರ್ಜುನನನ್ನು ಬೈದನು : “ನಿನ್ನ ವರ್ತನೆಯು ವಿದ್ವಾಂಸನದಂತಿಲ್ಲ.” ನಾನುಶೋಚಂತಿ ಪಂಡಿತಾಃ ಪರೋಕ್ಷವಾಗಿ ಕೃಷ್ಣನು ಹೇಳುತ್ತಾನೆ, “ನಿನಗೆ ವಿಷಯಗಳ ಬಗೆಗೆ ಗೊತ್ತಿಲ್ಲ. ನೀನು ವಿದ್ವಾಂಸನಲ್ಲ. ನೀನು ಮೂರ್ಖ.” ತನ್ನ ಬಂಧುಗಳನ್ನು ಕೊಲ್ಲಬಾರದೆಂಬ ಇಚ್ಛೆಯ ಪರವಾಗಿ ಅರ್ಜುನನು ವಾದಮಾಡಿದರೂ ಕೃಷ್ಣನು ಅವನನ್ನು ದೈಹಿಕ ಜೀವನ ಕಲ್ಪನೆಯಲ್ಲಿದ್ದಾನೆಂದು ಬೈದನು.

ದೇಹಾತ್ಮ ಬುದ್ಧಿಯವರು ಅನೇಕ ವಿಷಯಗಳ ಬಗೆಗೆ ವಿದ್ವತ್ ಪೂರ್ಣವಾಗಿ ಮಾತನಾಡಬಲ್ಲರು. ಆದರೆ ಅವರು ಮೂರ್ಖರು.
ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿ ಧಾತುಕೇ
ಸ್ವಧೀಃ ಕಲತ್ರಾದಿಷು ಭೌಮ ಇಜ್ಯ ಧೀಃ ।
ಯತ್ ತೀರ್ಥ ಬುದ್ಧಿಃ ಸಲಿಲೇ ನ ಕರ್ಹಿಚಿತ್
ಜನೇಷ್ವ ಅಭಿಜ್ಞೇಷು ಸ ಏವ ಗೋ ಖರಃ ॥
“ಯಾವ ಮನುಷ್ಯನು ತ್ರಿಧಾತುಗಳಿಂದ ಆದ ಈ ದೇಹವನ್ನು ತನ್ನ ಆತ್ಮದೊಂದಿಗೆ ಒಂದಾಗಿ ಗುರುತಿಸುವನೋ, ದೇಹದ ಉತ್ಪಾದನೆಗಳನ್ನು ತನ್ನ ಬಂಧುಗಳೆಂದು ಪರಿಗಣಿಸುವನೋ, ತಾನು ಹುಟ್ಟಿದ ಭೂಮಿಯನ್ನು ಪೂಜಾರ್ಹವೆಂದು ಭಾವಿಸುವನೋ ಮತ್ತು ಆಧ್ಯಾತ್ಮಿಕ ತಿಳಿವಳಿಕೆ ಉಳ್ಳವರನ್ನು ಭೇಟಿ ಮಾಡದೆ ಸ್ನಾನ ಮಾಡುವುದಕ್ಕಾಗಿ ಮಾತ್ರ ಯಾತ್ರಾ ಸ್ಥಳಕ್ಕೆ ಹೋಗುವನೋ ಅವನನ್ನು ಒಂದು ಕತ್ತೆಯಂತೆ ಅಥವಾ ಹಸುವಿನಂತೆ ಪರಿಗಣಿಸಬೇಕು.”
ದೇಹ ಎಂದರೇನು? ಕುಣಪೇ ತ್ರಿ ಧಾತುಕೇ. ಇದು ಮೂರು ಅಂಶಗಳ ಚೀಲ : ಕಫ, ಪಿತ್ತ ಮತ್ತು ವಾಯು, ಅಥವಾ ಲೋಳೆ, ಪಿತ್ತ ರಸ ಮತ್ತು ವಾಯು, ಅಥವಾ ಮಾಂಸ, ಮೂಳೆ, ರಕ್ತ, ಲೋಳೆ, ಮಲ, ಮೂತ್ರ ಮುಂತಾದವುಗಳ ಸಂಯೋಜನೆ. ಆದರೆ ಮೂರ್ಖರು ಈ ಮೂಳೆ ಮಾಂಸದ ಮುದ್ದೆಯನ್ನು ಆತ್ಮವೆಂದು ಭಾವಿಸುತ್ತಾರೆ : “ನಾನು ಈ ದೇಹ” ಎಂದು.
ವಿದ್ವಾಂಸರಾರೂ ಹಾಗೆ ಯೋಚಿಸುವುದಿಲ್ಲ. ಆದರೆ ಇಡೀ ಜಗತ್ತನ್ನು ಈ ಕಲ್ಪನೆಯಿಂದ ತಪ್ಪುದಾರಿಗೆ ಎಳೆಯಲಾಗಿದೆ. ಇದು ಪ್ರಾಣಿ ಮನಃಸ್ಥಿತಿ. ವಿದ್ವಾಂಸರದ್ದಲ್ಲ. ಪ್ರಾಣಿಗಳು ಹಾಗೆ ಯೋಚಿಸುತ್ತವೆ. ವಿದ್ವಾಂಸರು ಅಹಂ ಬ್ರಹ್ಮಾಸ್ಮಿ, “ನಾನು ಆಧ್ಯಾತ್ಮಿಕ ಆತ್ಮ. ನಾನು ಭಗವಂತನ ಸೇವಕ” ಎಂದು ಹೇಳುತ್ತಾರೆ. ವಿದ್ವಾಂಸರು ಹೀಗೆ ಹೇಳುತ್ತಾರೆ, “ನಾನು ಈ ದೇಹವಲ್ಲ.”

ಅರ್ಜುನನು ಕೃಷ್ಣನನ್ನು ತನ್ನ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿದ್ದಾನೆ. ಶಿಕ್ಷಕರು ಅಥವಾ ತಂದೆಗೆ ಇರುವ ಹಕ್ಕಿನಂತೆ ಆಧ್ಯಾತ್ಮಿಕ ಗುರುವಿಗೆ ತನ್ನ ಶಿಷ್ಯನಿಗೆ ಸೂಕ್ತ ಮಾರ್ಗದರ್ಶನ ನೀಡಲು ಗದರಿಸುವ, ದಂಡಿಸುವ ಹಕ್ಕು ಇದೆ. ಕೃಷ್ಣ ಮತ್ತು ಅರ್ಜುನ ಮಿತ್ರರಾದರೂ ಅರ್ಜುನನು ಕೃಷ್ಣನನ್ನು ತನ್ನ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿದ್ದಾನೆ. ಮಿತ್ರರ ನಡುವೆ ಇರುವಂತೆ ಆಧ್ಯಾತ್ಮಿಕ ಗುರುವು ಯಾವುದೇ ಹೊಂದಾಣಿಕೆ ಮಾತುಗಳನ್ನಾಡಬಾರದು. ಅವರು ಸರಿಯಾದುದನ್ನು ಹೇಳಬೇಕು : “ನಿನ್ನದು ತಪ್ಪು. ಅಸಂಬದ್ಧವಾಗಿ ಮಾತನಾಡಬೇಡ. ನೀನು ವಿದ್ವಾಂಸನಂತೆ ಮಾತನಾಡುತ್ತಿರುವೆ, ಆದರೆ ನಿನಗೆ ಏನೂ ಗೊತ್ತಿಲ್ಲ.”
ದೇಹದ ಸ್ಥಿತಿ
ದೇಹವು ಎರಡು ಸ್ಥಿತಿಯಲ್ಲಿರುತ್ತದೆ : ಜೀವ ಶಕ್ತಿಯು ಇದ್ದಾಗ ಮತ್ತು ಜೀವ ಶಕ್ತಿಯು ಹೋದಾಗ. ಜೀವ ಶಕ್ತಿಯು ಇರುವುದರಿಂದ ದೇಹವು ಚಲಿಸುತ್ತದೆ. ಜೀವ ಶಕ್ತಿಯು ಹೊರಟುಹೋದ ಕೂಡಲೇ ಈ ದೇಹವು ಚಲಿಸದು. ಅದು ಕೊಳೆತುಹೋಗುತ್ತದೆ.
ಭೂಮಿ, ನೀರು, ಬೆಂಕಿ, ವಾಯು, ಆಕಾಶ – ಈ ಐದು ಸ್ಥೂಲ ಅಂಶಗಳು ದೇಹದ ವಸ್ತುಗಳು. ಆತ್ಮವು ದೇಹದಿಂದ ಹೊರಹೋದ ಕೂಡಲೇ ಭೂ ಶಕ್ತಿಯು ಭೂಮಿಗೆ ಹೋಗುತ್ತದೆ, ನೀರಿನ ಶಕ್ತಿಯು ನೀರಿಗೆ ಇತ್ಯಾದಿ. ಅದು ಶಕ್ತಿ ಸಂರಕ್ಷಣೆ ಎಂದು ಕರೆಯುವ ವೈಜ್ಞಾನಿಕ ಕಾನೂನು. ಶಕ್ತಿಯು ಎಂದೂ ಕಳೆದುಹೋಗುವುದಿಲ್ಲ. ಅದು ತನ್ನ ಮೂಲಕ್ಕೇ ಹೋಗುತ್ತದೆ.
ಜೀವ ಶಕ್ತಿ ಇಲ್ಲದ ದೇಹವನ್ನು ಸತ್ತಿದೆ ಎಂದು ಕರೆಯುತ್ತೇವೆ. ಜೀವ ಶಕ್ತಿ ಇರುವ ದೇಹವನ್ನು ಜೀವಿತ ಎನ್ನುತ್ತೇವೆ. ಈ ಎರಡೂ ಸಂದರ್ಭಗಳಲ್ಲಿ ವಿದ್ವಾಂಸನು ಗೋಳಾಡುವುದಿಲ್ಲ. ವಿದ್ವಾಂಸನಿಗೆ ಬ್ರಹ್ಮನ್ ಅಥವಾ ಆತ್ಮ ಏನೆಂದು ಗೊತ್ತು. ಅವನು ಬ್ರಹ್ಮನ್ ಸಾಕ್ಷಾತ್ಕಾರ ಪಡೆದಿದ್ದಾನೆ. ಬ್ರಹ್ಮ ಭೂತಃ ಪ್ರಸನ್ನಾತ್ಮಾ. ಬ್ರಹ್ಮ ಭೂತ ಹಂತದಲ್ಲಿರುವವರು “ನಾನು ದೇಹವಲ್ಲ: ನಾನು ದೇಹದಿಂದ ಪ್ರತ್ಯೇಕ” ಎಂಬುವುದನ್ನು ಅರ್ಥಮಾಡಿಕೊಳ್ಳುತ್ತಾರೆ.
ಹಿಂದಿನ ಕಾಲದಲ್ಲಿ, ಇದು ಸಾಮಾನ್ಯ ಜ್ಞಾನವಾಗಿತ್ತು. ಕುರುಕ್ಷೇತ್ರ ಯುದ್ಧ ನಡೆದಾಗ, ಐದು ಸಾವಿರ ವರ್ಷಗಳ ಹಿಂದೆ ಇದರ ಪ್ರದರ್ಶನವನ್ನು ನಾವು ನೋಡಬಹುದು. ಕ್ಷತ್ರಿಯರು ಅಥವಾ ಯೋಧರು ಪರಸ್ಪರ ತೀವ್ರ ಹೋರಾಟದಲ್ಲಿ ತೊಡಗಿದ್ದರೂ, ಅವರು ಬದುಕಿನ ಬಗೆಗೆ ದೈಹಿಕ ಪರಿಕಲ್ಪನೆಯಲ್ಲಿ ಇರಲಿಲ್ಲ. ಆದರೆ ಕ್ಷತ್ರಿಯನಾದ ಅರ್ಜುನನು ಬದುಕನ್ನು ಕುರಿತ ದೈಹಿಕ ಪರಿಕಲ್ಪನೆಯಿಂದ ಎಷ್ಟು ಪ್ರಭಾವಿತನಾಗಿದ್ದನೆಂದರೆ, ಕೃಷ್ಣನು ಅವನನ್ನು “ನೀನು ವಿದ್ವಾಂಸನಂತೆ ಮಾತನಾಡುತ್ತಿರುವೆ. ಆದರೆ ನೀನು ವಿದ್ವಾಂಸನಲ್ಲ” ಎಂದು ಬೈದನು.

ಬದುಕಿನ ದೈಹಿಕ ಪರಿಕಲ್ಪನೆಯಲ್ಲಿರುವವರು ವಿದ್ವಾಂಸರಲ್ಲ, ಅವರು ಮೂರ್ಖರು ಎಂದು ನಾವು ಕೃಷ್ಣನ ಮಾತುಗಳಿಂದ ತೀರ್ಮಾನಿಸುತ್ತೇವೆ. ಈ ಜಗತ್ತು ಈಗ ಮೂರ್ಖರ ಸ್ವರ್ಗ. ಯಾರೂ ಕೂಡ ವಿದ್ವಾಂಸರಲ್ಲ. ಪ್ರತಿಯೊಬ್ಬರೂ ಬದುಕಿನ ದೈಹಿಕ ಪರಿಕಲ್ಪನೆಯಡಿ ಕೆಲಸ ಮಾಡುತ್ತಿದ್ದಾರೆ.
ಅರ್ಜುನನನ್ನು ದಂಡಿಸುವುದರಲ್ಲಿ ಕೃಷ್ಣನು ಅವನಿಗೆ ಶಿಕ್ಷಣ ನೀಡುವ ಮೊದಲ ಹೆಜ್ಜೆ ಇಟ್ಟನು. ಹೇಗೆಂದರೆ, ಶಿಕ್ಷಕನು ಪಾಠ ಆರಂಭಿಸುವ ಮುನ್ನ ತನ್ನ ಶಿಷ್ಯನಿಗೆ, “ನೀನು ತಪ್ಪಾಗಿ ಬರೆಯುತ್ತಿರುವೆ” ಎಂದು ಹೇಳಿದಂತೆ.
ಈ ಶ್ಲೋಕದಿಂದ ಭಗವದ್ಗೀತೆಯು ದಿಟವಾಗಿ ಪ್ರಾರಂಭವಾಗುತ್ತದೆ. ಕೃಷ್ಣನು ಅರ್ಜುನನಿಗೆ ಮೊದಲ ತತ್ತ್ವವನ್ನು ಹೇಳುತ್ತಾನೆ : “ನಿನಗೆ ಏನೂ ಗೊತ್ತಿಲ್ಲ. ವಿದ್ವಾಂಸನಂತೆ ಮಾತನಾಡಬೇಡ.”
ಮೂರು ಗುಣಗಳು
ನಾವೆಲ್ಲರೂ ಅರ್ಜುನ ಇದ್ದ ಸ್ಥಾನದಲ್ಲಿಯೇ ಇದ್ದೇವೆ, ವಿದ್ವಾಂಸರಂತೆ ಮಾತನಾಡುತ್ತೇವೆ. ನಿನ್ನೆ ಇಬ್ಬರು ಯುವಕರು ನನ್ನನ್ನು ನೋಡಲು ಬಂದರು. ಅವರು ಯಾವ ಸಿದ್ಧಾಂತವನ್ನೂ ಮಾತನಾಡಲಿಲ್ಲ, ಬರೀ ಅಸಂಬದ್ಧವಾದುದನ್ನೇ ಹೇಳಿದರು. ಅವರಲ್ಲಿ ಒಬ್ಬನು ಹೊಟ್ಟೆಗಿಲ್ಲದ ಸ್ಥಿತಿಯನ್ನು (ಹಸಿವು) ತಡೆಯುವ ಗುತ್ತಿಗೆ ತೆಗೆದುಕೊಂಡಂತೆ ಅಂತಹ ಪರಿಸ್ಥಿತಿಯನ್ನು ತಡೆಯುವ ಬಗೆಗೆ ಮಾತನಾಡುತ್ತಿದ್ದ. ಹೊಟ್ಟೆಗೆ ಆಹಾರವೇ ಇಲ್ಲದ ಪರಿಸ್ಥಿತಿಗೆ ಪ್ರಕೃತಿ ನಿಯಮ ಕಾರಣ. ಅದನ್ನು ನೀವು ತಡೆಯಲಾರಿರಿ.

ಪ್ರಕೃತಿಯ ಮೂರು ಗುಣಗಳಿವೆ – ಸತ್ತ್ವ, ರಜಸ್ ಮತ್ತು ತಮಸ್. ಪ್ರಕೃತಿಯ ಕಾನೂನುಗಳು ಈ ಗುಣಗಳಡಿ ಸಾಗುತ್ತವೆ. ಆದುದರಿಂದ ನಾವು ಯಾವಾಗಲೂ ಜೀವನ ಸ್ಥಿತಿಯಲ್ಲಿ ಮೂರು ವರ್ಗಗಳು ಅಥವಾ ಮೂರು ಸ್ಥಾನಗಳನ್ನು ಕಾಣುತ್ತೇವೆ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಮೂರು ಗುಣಗಳು ಎಲ್ಲೆಡೆ ಕಾರ್ಯತತ್ಪರವಾಗಿರುವುದರಿಂದ ಬದುಕಿನ ವಿವಿಧ ಜಾತಿ ವರ್ಗಗಳು ಎಲ್ಲ ಕಡೆ ಇವೆ. ಉದಾಹರಣೆಗೆ, ಕೆಲವು ಒಳ್ಳೆಯ ಮರಗಳಿವೆ. ಅವು ಒಳ್ಳೆಯ ಹಣ್ಣು ಹೂವುಗಳನ್ನು ನೀಡುತ್ತವೆ. ಕೆಲವು ಮರಗಳಲ್ಲಿ ಹಣ್ಣೂ ಇಲ್ಲ ಹೂವೂ ಇಲ್ಲ. ಅವು ದೀರ್ಘಕಾಲ ಬದುಕಿರಬಹುದು. ಆದರೆ ಅವು ಯಾವ ಉಪಯುಕ್ತ ಸೇವೆ ಸಲ್ಲಿಸುವುದಿಲ್ಲ. ಯಾವ ಮರವು ನಮಗೆ ಒಳ್ಳೆಯ ಹಣ್ಣು ಅಥವಾ ಹೂವನ್ನು ನೀಡುವುದಿಲ್ಲವೋ ಅದು ಪಾಪಿ.
ಪುಣ್ಯ ಮತ್ತು ಪಾಪದ ಪ್ರಾಣಿಗಳೂ ಇವೆ. ಹಸು ಪುಣ್ಯದ ಪ್ರಾಣಿ. ನಾಯಿ ಪಾಪದ ಪ್ರಾಣಿ. ಪಕ್ಷಿಗಳಲ್ಲಿ ಕಾಗೆಯು ಪಾಪಿ ಮತ್ತು ಹಂಸ, ನವಿಲು ಮುಂತಾದವು ಪುಣ್ಯವಾದವು.
ಅದೇ ರೀತಿ ಮಾನವ ಸಮಾಜದಲ್ಲಿ ಪಾಪಿಗಳೂ ಇದ್ದಾರೆ, ಪುಣ್ಯ ಜೀವಿಗಳೂ ಇದ್ದಾರೆ. ಯಾರ ಬಳಿಯಾದರೂ ಸಂಪತ್ತು, ಸೌಂದರ್ಯ, ಉನ್ನತ ಜನ್ಮ ಅಥವಾ ಒಳ್ಳೆಯ ಶಿಕ್ಷಣವಿದ್ದರೆ, ಇವು ಅವರು ಹಿಂದಿನ ಜನ್ಮದಲ್ಲಿ ಪುಣ್ಯ ಜೀವಿಗಳಾಗಿದ್ದರೆಂಬುವುದರ ಚಿಹ್ನೆಗಳು. ಇದರ ವಿರುದ್ಧವಾದುದು ಹಿಂದಿನ ಜನ್ಮದಲ್ಲಿ ಪಾಪಿಗಳಾಗಿದ್ದನ್ನು ಸೂಚಿಸುತ್ತದೆ.
ಆದುದರಿಂದ ಮೂರು ಗುಣಗಳು ಎಲ್ಲೆಡೆ ಕೆಲಸ ಮಾಡುತ್ತಿವೆ. ಹೀಗಾಗಿ, ಮೂರು ವರ್ಗಗಳಿರಬೇಕು : ಉನ್ನತ, ಮಧ್ಯ ಮತ್ತು ಕೆಳ ವರ್ಗಗಳು. ನೀವು ಯಾರನ್ನೂ ವರ್ಗರಹಿತರನ್ನಾಗಿ ಮಾಡುವುದು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಬದುಕಿನ ದೈಹಿಕ ಪರಿಕಲ್ಪನೆ ಇರುವವರೆಗೂ ಈ ಮೂರು ವರ್ಗಗಳು ಇರಲೇಬೇಕು. ಮತ್ತು ದಂಡನೆಗೆ ಗುರಿಯಾದವರು ಅನುಭವಿಸಲೇಬೇಕು. ಲೌಕಿಕ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಖಂಡಿಸಲ್ಪಟ್ಟವರೇ. ಆದರೆ ಮೊದಲ ವರ್ಗದ ಖಂಡಿಸಲ್ಪಟ್ಟವರು, ಎರಡನೆಯ ವರ್ಗದ ಖಂಡಿಸಲ್ಪಟ್ಟವರು ಮತ್ತು ಮೂರನೆಯ ವರ್ಗದ ಖಂಡಿಸಲ್ಪಟ್ಟವರು ಇದ್ದಾರೆ.
ನಿಯತಿ ಬದಲಾಗದು
ಪ್ರಥಮ ವರ್ಗ, ದ್ವಿತೀಯ ವರ್ಗ ಮತ್ತು ತೃತೀಯ ವರ್ಗಗಳು ಸಹಜವಾಗಿ ಸಂಭವಿಸುವುದನ್ನು ನೀವು ತಡೆಯಲಾಗದು. ಉದಾಹರಣೆಗೆ, 50 ವರ್ಷಗಳ ಹಿಂದೆ ನಾನು ಮುಂಬಯಿಯಲ್ಲಿದ್ದಾಗ, ಪಾದಚಾರಿ ರಸ್ತೆಯಲ್ಲಿ ಒಂದು ವರ್ಗದ ಜನರು ವಾಸಿಸುತ್ತಿದ್ದರು. ಈಗಲೂ ಅದೇ ವರ್ಗದ ಜನರು ಅಲ್ಲಿದ್ದಾರೆ. ಈಗ ಎಲ್ಲರಿಗೂ ಹೆಚ್ಚು ಹಣ ಸಿಗುತ್ತಿದೆ, ಆದರೆ ಪರಿಸ್ಥಿತಿ ಮಾತ್ರ ಹಾಗೇ ಇದೆ. ನಿಮಗೆ ಹೆಚ್ಚು ಹಣ ದೊರೆತರೂ ಬೇರೆ ಸಂದರ್ಭಗಳು ನಿಮ್ಮನ್ನು 50 ವರ್ಷಗಳ ಹಿಂದಿನ ಸ್ಥಿತಿಯಲ್ಲೇ ಇರುವಂತೆ ಮಾಡುತ್ತವೆ. ಅದನ್ನೇ ವಿಧಿ, ನಿಯತಿ ಎನ್ನುವರು. ನೀವು ನಿಮ್ಮ ನಿಯತಿಯನ್ನು ಬದಲಿಸಲಾರಿರಿ. ಅದು ಸಾಧ್ಯವಿಲ್ಲ.
ಆದುದರಿಂದ ನಿಮ್ಮ ನಿಯತಿಯನ್ನು ಬದಲಿಸಲು ಪ್ರಯತ್ನಿಸಬೇಡಿ ಎಂದು ಶ್ರೀಮದ್ ಭಾಗವತವು ಹೇಳುತ್ತದೆ. “ನಾನು ಬಡವ. ನಾನು ತುಂಬ ಶ್ರೀಮಂತನಾಗಬೇಕು.” ಆದರೆ ನೀವು ನಿಮ್ಮ ವಿಧಿಯನ್ನು ಬದಲಿಸುವುದು ಸಾಧ್ಯವಿಲ್ಲ.
ಈ ಲೋಕದಲ್ಲಿ ನಾವೆಲ್ಲರೂ ಕರ್ಮ, ವಿಧಿಯ ಕಾನೂನುಗಳ ಪರಿಮಿತಿಗೆ ಒಳಪಟ್ಟಿದ್ದೇವೆ. ನಿಯತಿಯಂತೆ ನಮಗೆ ಸ್ವಲ್ಪ ಪ್ರಮಾಣದ ಸುಖ ಮತ್ತು ನೋವು ಲಭಿಸಬೇಕು. ಯಾವಾಗಲೂ ನಲಿವು ಮತ್ತು ನೋವಿನ ಮಿಶ್ರಣವಿರುತ್ತದೆ. ಇಲ್ಲಿ ನಿಮಗೆ ಶುದ್ಧ ಸುಖ ಎಂಬುದಿಲ್ಲ. ಮಿಶ್ರಿತವಲ್ಲದ, ನಿಜವಾದ ಸುಖವನ್ನು ಆಧ್ಯಾತ್ಮಿಕ ಲೋಕದಲ್ಲಿ ಪಡೆಯಬಹುದು, ಲೌಕಿಕ ಲೋಕದಲ್ಲಿ ಸಾಧ್ಯವಿಲ್ಲ. ಇಲ್ಲಿ ನಾವು ಸ್ವಲ್ಪ ಪ್ರಮಾಣದ ಸುಖ ಮತ್ತು ಸ್ವಲ್ಪ ಪ್ರಮಾಣದ ನೋವನ್ನು ಅನುಭವಿಸಬೇಕು. ಅದನ್ನು ನಾವು ಬದಲಿಸಲಾಗದು. ಅದು ಲೌಕಿಕ ಲೋಕದಲ್ಲಿ ಪ್ರಕೃತಿ ನಿಯಮ. ತಸ್ಯೈವ ಹೇತೋಃ ಪ್ರಯತೇತ ಕೋವಿದೋ ನ ಲಭ್ಯತೇ ಯದ್ ಭ್ರಮತಾಂ ಉಪರಿ ಅಧಃ. ಜನರು ಲೌಕಿಕ ಲೋಕದಲ್ಲಿ ಬದುಕಿನ ಭಿನ್ನ ರೂಪದಲ್ಲಿ ಭಿನ್ನ ಪರಿಸ್ಥಿತಿಯಲ್ಲಿ ಅಲೆದಾಡುತ್ತಿದ್ದಾರೆ. ಆದರೆ ಅವರಿಗೆ ಕೃಷ್ಣನ ಬಗೆಗೆ ಮಾಹಿತಿ ದೊರೆಯುತ್ತಿಲ್ಲ. ಅದು ಅವರ ದುರದೃಷ್ಟ. ಆದುದರಿಂದ ಬದುಕಿನ ವಿವಿಧ ಜಾತಿ ವರ್ಗದಲ್ಲಿ, ಬೇರೆ ಬೇರೆ ಗ್ರಹಗಳಲ್ಲಿ ಈ ನಿರಂತರ ಅಲೆದಾಟದ ಅವಧಿಯಲ್ಲಿ ದೇವೋತ್ತಮನೊಂದಿಗೆ ಸೇರಬೇಕೆಂಬ ಕಳಕಳಿ ಉಳ್ಳ ಅದೃಷ್ಟವಂತರು ಗುರುವನ್ನು ಸಂಪರ್ಕಿಸುವರು. ಈ ಪ್ರಜ್ಞೆ, ಭಗವಂತನೊಂದಿಗೆ ಸೇರಬೇಕೆಂಬ ಅಪೇಕ್ಷೆ ಹೇಗೆ ಬರುತ್ತದೆ? ಭಕ್ತರೊಂದಿಗೆ ಸಹವಾಸ ಮಾಡುವುದರಿಂದ. ನಾವು ಈ ತರಗತಿಯನ್ನು ನಡೆಸುತ್ತಿದ್ದೇವೆ. ಇಲ್ಲಿಗೆ ಬರುವ ಹೊರಗಿನವರೂ ಕೂಡ ಗ್ರಹಿಸಿಕೊಳ್ಳಬಹುದು ಮತ್ತು ದೇವರನ್ನು ಅರ್ಥ ಮಾಡಿಕೊಳ್ಳಲು ಹಾಗೂ ಭಗವದ್ಧಾಮಕ್ಕೆ ಹಿಂದಿರುಗುವ ಬಗೆಗೆ ಗಂಭೀರ ಚಿಂತನೆ ನಡೆಸಬಹುದು. ಆಗ ಕೃಷ್ಣನು ಸಹಾಯ ಮಾಡುತ್ತಾನೆ. ಅದೇ ವಿಧಾನ.

ಕೃಷ್ಣನು ನಿಮ್ಮ ಹೃದಯದಲ್ಲಿದ್ದಾನೆ. ನೀವು ಸ್ವಲ್ಪ ಗಂಭೀರವಾದರೆ, ಕೃಷ್ಣನು ಸಿದ್ಧ. ಅವನು ನಿಮ್ಮ ಸ್ನೇಹಿತನಾಗಿ ಕುಳಿತಿದ್ದಾನೆ. ಅವನ ಬಳಿಗೆ ಹಿಂದಿರುಗುವ ಆಯ್ಕೆಯನ್ನು ನೀವು ಮಾಡಿಕೊಂಡಾಗ ನಿಮಗೆ ಸಹಾಯ ಮಾಡಲು ಕಾಯುತ್ತಿದ್ದಾನೆ. ಅದು ಕೃಷ್ಣ. ಅವನು ಸದಾ ನಿಮ್ಮೊಂದಿಗೆ ಕುಳಿತಿದ್ದಾನೆ. ಆದರೆ ನಮಗೆ ಮನೆಗೆ, ಭಗವದ್ಧಾಮಕ್ಕೆ ಹಿಂದಿರುಗುವ ಇಚ್ಛೆ ಇಲ್ಲ. ಲೌಕಿಕ ಲೋಕದಲ್ಲಿ ದೇವರಾಗಬೇಕೆಂಬ ಇರಾದೆ ನಮ್ಮದು. ಅದು ನಮ್ಮ ನಿಲವು. ಮನೆಗೆ, ಭಗವದ್ಧಾಮಕ್ಕೆ ಹಿಂದಿರುಗುವ ಬದಲು, ಭಗವಂತನೊಂದಿಗೆ ಇರಲು ಹೋಗುವ ಬದಲು ನಾವು ಇಲ್ಲಿಯೇ ದೇವರಾಗಬಯಸುತ್ತೇವೆ. ಅದು ನಮ್ಮ ಸ್ಥಿತಿ. ಆದುದರಿಂದ ನಾವು ನೋವು ಅನುಭವಿಸುತ್ತಿದ್ದೇವೆ.
ದೇವರ ಸೇವಕರು
ಎಲ್ಲಿಯೂ ನೀವು ದೇವರಾಗುವುದು ಸಾಧ್ಯವಿಲ್ಲ. ದೇವರು ಒಬ್ಬನೇ. ಯಾರೂ ಕೂಡ ಅವನಿಗೆ ಸಮಾನರಲ್ಲ ಅಥವಾ ಮೇಲಿನವರಲ್ಲ. ಎಲ್ಲರೂ ಭಗವಂತನಿಗೆ ಅಧೀನ. ಆದರೆ ವಿದ್ವಾಂಸರಲ್ಲದ ಮೂರ್ಖರು ಹೊಂದಾಣಿಕೆಯಿಂದ ಮತ್ತು ದೇವರಾಗಲು ಪ್ರಯತ್ನಿಸುತ್ತ ಲೌಕಿಕ ಲೋಕದಲ್ಲಿ ಸುಖವಾಗಿರಲು ಪ್ರಯತ್ನಿಸುತ್ತಾರೆ. ಅದು ನಾಸ್ತಿಕವಾದ ಮತ್ತು ಆಸುರೀ ಪ್ರವೃತ್ತಿ. ಆದರೆ ಜ್ಞಾನಾಭಿವೃದ್ಧಿ ಹೊಂದಿರುವವರಿಗೆ, “ನಾವು ಶಾಶ್ವತವಾಗಿ ಭಗವಂತನ ಸೇವಕರು. ನಾವು ದೇವರಾಗಲು ಸಾಧ್ಯವಿಲ್ಲ. ಪ್ರಭುವಿನ ಸೇವಕರಾಗಿಯೇ ಉಳಿಯೋಣ. ಅದು ನಮ್ಮ ಸುಖ ಸಂತೋಷ” ಎಂಬುವುದು ಗೊತ್ತು.

ನಾವು ಭಗವಂತನ ಶಾಶ್ವತ ಸೇವಕರು ಎಂಬ ಈ ನಿಜವಾದ ಜ್ಞಾನದಲ್ಲಿ ದೈಹಿಕ ಜೀವನ ಕಲ್ಪನೆಯಲ್ಲಿರುವವರು ಮುನ್ನಡೆ ಸಾಧಿಸಲಾರರು, ಅದು ನಮ್ಮ ಸ್ವರೂಪ ಸ್ಥಿತಿ. “ನಾನು ಸೇವಕನಲ್ಲ” ಎಂದು ಹೇಳಿದರೆ, ಆಗ ನಾನು ಭಗವಂತನ ಭ್ರಮಾ ಶಕ್ತಿ ಮಾಯೆಯ ಸೇವಕನಾಗುತ್ತೇನೆ. ನಾನು ಸೇವಕನಾಗಿಯೇ ಉಳಿಯಬೇಕು. ಅದು ನನ್ನ ಸ್ವರೂಪ ಸ್ಥಿತಿ.
ಮೊದಲು ನಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬೇಕು. ಕೃಷ್ಣನು ನೀಡಿರುವ ಮೊದಲ ಪಾಠ ಅದು : “ನೀನು ದೇಹಕ್ಕಾಗಿ ಗೋಳಾಡುತ್ತಿರುವೆ. ಆದರೆ ದೇಹವು ನಿನ್ನ ವ್ಯಕ್ತಿತ್ವ ಅಲ್ಲ. ನೀನು ತಪ್ಪಾಗಿ ಯೋಚಿಸುತ್ತಿರುವೆ.”
ನಿಮ್ಮ ಕೋಟು ಹಾಳಾದರೆ ನೀವು ಹಾಳಾದಿರೆಂದು ಅರ್ಥವಲ್ಲ. ನಿಮ್ಮ ಕಾರು ನಾಶವಾದರೆ ನೀವು ನಿರ್ನಾಮವಾದಿರೆಂದು ಅರ್ಥವಲ್ಲ. “ನಾನು ಕಾರು ಅಲ್ಲ, ನಾನು ಕೋಟು ಅಲ್ಲ. ನಾನು ದೇಹವಲ್ಲ” ಎಂದು ತಿಳಿದುಕೊಳ್ಳುವುದೇ ನಿಜವಾದ ಜ್ಞಾನ. ಕೆಲವು ವೇಳೆ ನಾವು ಕಾರು, ಕೋಟು ಅಥವಾ ದೇಹದ ಬಗೆಗೆ ಆಶಾಭಂಗ ಹೊಂದಿದರೂ ನಮ್ಮ ಗುರುತು ಇವುಗಳಿಗಿಂತ ಭಿನ್ನ. ಆದುದರಿಂದ ಕೃಷ್ಣನು ಹೇಳುತ್ತಾನೆ, “ನೀನು ವಿದ್ವಾಂಸನಂತೆ ಮಾತನಾಡುತ್ತಿರುವೆ. ಆದರೆ ನಿನಗೆ ನಿನ್ನ ಗುರುತೇ ಗೊತ್ತಿಲ್ಲ. ನೀನು ದೇಹವಲ್ಲ.”
ಮೂರ್ಖ ಮಾತು
ಪರಿಪೂರ್ಣ ಜ್ಞಾನವಿಲ್ಲದವರು ವಿದ್ವಾಂಸನಂತೆ ಮಾತನಾಡಬಾರದು. ಅದು ವಂಚನೆ. ಅದು ಮೂರ್ಖತನ. ಮೊಟ್ಟಮೊದಲು ವಿಷಯವನ್ನು ಅದಿರುವಂತೆ ತಿಳಿದುಕೊಳ್ಳಿ. ಅನಂತರ ಮಾತನಾಡಿ. ಇಲ್ಲವಾದರೆ, ಮೂರ್ಖತನದಿಂದ ಮಾತನಾಡುವುದಕ್ಕಿಂತ ಮಾತನಾಡದಿರುವುದೇ ಒಳ್ಳೆಯದು. ಆದುದರಿಂದ, ಆಧ್ಯಾತ್ಮಿಕ ಉನ್ನತಿಯಲ್ಲಿ ಕೆಲವು ಬಾರಿ ಒಂದು ವಿಧಾನವನ್ನು ಬಳಸುತ್ತಾರೆ. ಅದನ್ನು ಮೌನಂ, ಮಾತನಾಡದಿರುವುದು ಎಂದು ಕರೆಯುತ್ತಾರೆ. ಶಿಷ್ಯನು ಮೂರ್ಖನಾಗಿದ್ದರೆ, ಆಧ್ಯಾತ್ಮಿಕ ಗುರುವು “ಮಾತನಾಡಬೇಡ. ದಯೆಯಿಟ್ಟು ಮೌನವಾಗಿರು” ಎಂದು ಆದೇಶಿಸಬಹುದು. ಏಕೆಂದರೆ ಅವನು ಅಸಂಬದ್ಧವಾದುದನ್ನು ಮಾತನಾಡುತ್ತಾನೆ. ಅಂತಹ ಅಸಂಬದ್ಧ ಮಾತಿನಿಂದ ಅವನು ಏಕೆ ತನ್ನ ಶಕ್ತಿಯನ್ನು ಹಾಳುಮಾಡಿಕೊಳ್ಳಬೇಕು. ಧ್ಯಾನವೂ ಹಾಗೆಯೇ. ಅಸಂಬದ್ಧವಾದುದನ್ನು ಮಾತನಾಡುವ ಅಥವಾ ಮಾಡುವ ಬದಲು ವ್ಯಕ್ತಿಯು ಸ್ವಲ್ಪ ಸಮಯ ಮೌನವಾಗಿರಬೇಕು. ಅದು ಅವನಿಗೆ ಒಳ್ಳೆಯದು.
ಧ್ಯಾನ ಮತ್ತು ಮೌನವು ಭಕ್ತರಿಗಲ್ಲ. ಅದು ಕಡಮೆ ಬುದ್ಧಿವಂತರಿಗೆ. ಕೃಷ್ಣನ ಬಗೆಗೆ ಸದಾ ಮಾತನಾಡುವುದೇ ಭಕ್ತರ ಕೆಲಸ. ಅವರೇಕೆ ಮಾತನಾಡುವುದನ್ನು ನಿಲ್ಲಿಸಬೇಕು? ಮೌನ? ಇಲ್ಲ. ಕೀರ್ತನೀಯಃ ಸದಾ ಹರಿಃ. ದಿನದ 24 ಗಂಟೆಯೂ ಕೃಷ್ಣನ ಬಗೆಗೆ ಜಪಿಸಬೇಕು ಮತ್ತು ಮಾತನಾಡಬೇಕು ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ. ಹಾಗಾದರೆ ಮೌನದ ಪ್ರಶ್ನೆ ಎಲ್ಲಿ? ಮೌನವು ಅವಿವೇಕಿಗಳಿಗೆ. ಆದರೆ ಮುನ್ನಡೆ ಸಾಧಿಸಿದ್ದವರಿಗೆ, ಅಂತಹ ನಿರ್ಬಂಧಗಳಿಲ್ಲ. ವಾಚಾಂಸಿ ವೈಕುಂಠಃ ಗುಣಾನುವರ್ಣನೆ. ನಾವು ನಮ್ಮ ವಾಕ್ ಶಕ್ತಿಯನ್ನು ಭಗವಂತನ ವೈಭವವನ್ನು ವರ್ಣಿಸಲು ಬಳಸಬೇಕು. ಅದು ಕೀರ್ತನ.

ತಾನು ಏಳು ದಿನಗಳೊಳಗೆ ಸಾಯುವೆನೆಂಬುದನ್ನು ಅರಿತಾಗ ಪರೀಕ್ಷಿತ ಮಹಾರಾಜನು ಶುಕದೇವ ಗೋಸ್ವಾಮಿ ಅವರಿಂದ ದಿನದ 24 ತಾಸೂ ಭಾಗವತವನ್ನು ಕೇಳತೊಡಗಿದನು. ಅವನು ಆಹಾರವನ್ನೂ ಅಥವಾ ನೀರನ್ನೂ ಸೇವಿಸುತ್ತಿರಲಿಲ್ಲ. ಅವರಿಬ್ಬರಿಗೂ ಮುಕ್ತಿ ದೊರೆಯಿತು. ಅವರು ಭಗವದ್ಧಾಮಕ್ಕೆ ಹಿಂದಿರುಗಿದರು. ಹೇಗೆ ? ಒಬ್ಬರು ಕೇಳುತ್ತಿದ್ದರು, ಮತ್ತೊಬ್ಬರು ಪಠಿಸುತ್ತಿದ್ದರು. ವಿಷಯವಾದರೂ ಏನು? ಕೃಷ್ಣ, ಅಷ್ಟೆ.
ಕೃಷ್ಣನ ವಿಷಯ ಎಷ್ಟು ಚೆಂದ ಎಂದರೆ ನೀವು ಏನೂ ಮಾಡಬೇಕಾಗಿಲ್ಲ, ಸುಮ್ಮನೆ ಕೇಳಬೇಕು. ನಿಮಗೆ ದೈವದತ್ತ ಕಿವಿಗಳಿವೆ. ನೀವು ಸುಮ್ಮನೆ ಕುಳಿತು ಕೇಳಬಹುದು. ಸತಾಂ ಪ್ರಸಂಗಾನ್ ಮಮ ವೀರ್ಯ ಸಂವಿದೋ ಭವಂತಿ ಹೃತ್ ಕರ್ಣ ರಸಾಯನಾಃ ಕಥಾಃ. ಸತ್ ಸಂ ಎಂದರೆ ಕೃಷ್ಣನ ಬಗೆಗೆ ಮಾತನಾಡುವುದು, ಕೃಷ್ಣನ ಬಗೆಗೆ ಕೇಳುವುದು. ಇದು ಹಣ ಪಡೆದ ವಾಚನಕಾರನಿಂದ ಅಲ್ಲ. ಇದು ಭಗವಂತನಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸಾಕ್ಷಾತ್ಕಾರಗೊಂಡ ಭಕ್ತನಿಂದ. ಸತಾಂ ಎಂದರೆ ಭಕ್ತರು. ಸತ್ಸಂಗ ಎಂದರೆ “ಭಕ್ತರ ಸಹವಾಸ.” ಸತ್ ಎಂದರೆ ಭಕ್ತ, ದೇವರು ಅಥವಾ ಆಧ್ಯಾತ್ಮಿಕ. ಆದುದರಿಂದ ಸತ್ಸಂಗ ಎಂದರೆ “ಆಧ್ಯಾತ್ಮಿಕ ಸಹವಾಸ.” ನೀವು ಸತ್, ಭಕ್ತರ ಸಹವಾಸ ಹೆಚ್ಚು ಪಡೆದಷ್ಟೂ ನೀವು ಹೆಚ್ಚು ಮುಕ್ತರಾಗುವಿರಿ.
ಲೌಕಿಕ ಲೋಕದಲ್ಲಿ ನಾವು ಕೆಟ್ಟ ಸಹವಾಸ, ದುಸ್ಸಂಗದಲ್ಲಿದ್ದೇವೆ. ಈ ಕೆಟ್ಟ ಸಹವಾಸದಿಂದ ಹೊರಬರಬೇಕಾದರೆ ನಾವು ಭಕ್ತರ ಸಹವಾಸ ಮಾಡಬೇಕು. ಸತ್ ಸಂಗಾತ್ ಮುಕ್ತ ದುಸ್ಸಂಗ.

ಅರ್ಜುನನಿಗೆ ಅತ್ಯುತ್ತಮ ಅವಕಾಶ. ಅವನು ದೇವೋತ್ತಮ ಪರಮ ಪುರುಷನಿಂದ ಕೇಳುತ್ತಿದ್ದಾನೆ. ಅವನೆಷ್ಟು ಅದೃಷ್ಟವಂತ. ಅವನು ದೇವೋತ್ತಮನೊಂದಿಗೆ ಮುಖಾಮುಖಿ, ನೇರವಾಗಿ ಮಾತನಾಡುತ್ತಿದ್ದಾನೆ. ಅರ್ಜುನನ ಹೆಜ್ಜೆಯನ್ನು ಅನುಸರಿಸುವುದು ನಮ್ಮ ಕೆಲಸ. ಹೇಗೆ? ಅರ್ಜುನನು ಭಗವದ್ಗೀತೆಯನ್ನು ಅರ್ಥಮಾಡಿಕೊಂಡ, ಅದೇ ರೀತಿ ಗ್ರಹಿಸಿಕೊಳ್ಳಲು ಪ್ರಯತ್ನಿಸಿ. ಅರ್ಜುನನು ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಿದ. ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ : “ಕೃಷ್ಣ, ನೀನು ಪರಮ ಪುರುಷ, ಅತ್ಯಂತ ಪರಿಶುದ್ಧನು.” ನಮಗೆ ಭಗವದ್ಗೀತೆ ಅರ್ಥವಾಗದಿದ್ದರೂ ನಾವು ಅರ್ಜುನನನ್ನು ಅನುಸರಿಸಿದರೆ ನಮಗೆ ಅರ್ಥವಾಗುತ್ತದೆ: “ಅರ್ಜುನನು ಹೀಗೆ ಅರ್ಥಮಾಡಿಕೊಂಡ – ಕೃಷ್ಣನು ಪರಮ ಬ್ರಹ್ಮನ್, ದೇವೋತ್ತಮ ಪರಮ ಪುರುಷ.” ಅದನ್ನು ಗುರು ಶಿಷ್ಯ ಪರಂಪರೆಯಲ್ಲಿ ಜ್ಞಾನವನ್ನು ಪಡೆಯುವುದೆಂದು ಕರೆಯುತ್ತಾರೆ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಮಗೆ ಅಲ್ಪ ಬುದ್ಧಿ ಇರುವುದರಿಂದ ನಮಗೆ ಆ ರೀತಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಅರ್ಜುನ ಹೇಳುವುದನ್ನು ನಾವು ಸುಮ್ಮನೆ ಒಪ್ಪಿಕೊಂಡರೆ, ಆಗ ನಾವು ಪರಿಪೂರ್ಣರು.
ಅಧಿಕೃತರನ್ನು ಅನುಸರಿಸಿದರೆ ನಿಮಗೆ ಅರ್ಥವಾಗುತ್ತದೆ. ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ. ವಾಸ್ತವವಾಗಿ ಧರ್ಮ ಏನೆಂದು ಅರ್ಥಮಾಡಿಕೊಳ್ಳುವುದು ಕಷ್ಟ. ಜನರು ಗೊಂದಲಗೊಂಡಿದ್ದಾರೆ. ಆದರೆ ಶ್ರೇಷ್ಠ ಆಧ್ಯಾತ್ಮಿಕ ಅಧಿಕೃತರನ್ನು, ಮಹಾಜನರನ್ನು ನಾವು ಅನುಸರಿಸಿದರೆ ನಾವು ಅರ್ಥಮಾಡಿಕೊಳ್ಳಬಹುದು. ವೈದಿಕ ಸಾಹಿತ್ಯವು 12 ಮಹಾಜನರನ್ನು ಉಲ್ಲೇಖಿಸುತ್ತದೆ. ಬ್ರಹ್ಮ, ಶಿವ, ಮನು, ಕಪಿಲ, ಕುಮಾರರು ಅದರಲ್ಲಿ ಸೇರಿದ್ದಾರೆ. ನಾವು ಅವರ ಹೆಜ್ಜೆಯನ್ನು ಅನುಸರಿಸಿದರೆ, ಧರ್ಮ ಏನೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಅಥವಾ ನಾವು ಅರ್ಜುನನ್ನು ಅನುಸರಿಸಬಹುದು : “ಅರ್ಜುನನು ಈ ರೀತಿ ಅರ್ಥಮಾಡಿಕೊಂಡಿದ್ದ. ಅದೇ ರೀತಿ ನಾವೂ ಅರ್ಥಮಾಡಿಕೊಳ್ಳೋಣ” ಅಷ್ಟೆ. ಆಗ ನಾವು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳದೆ ವಿದ್ವಾಂಸರಂತೆ ಮಾತನಾಡಲು ನಾವು ಬಯಸಿದರೆ, ಅದು ಸಮಯ ವ್ಯರ್ಥ.
ವಿದ್ವಾಂಸ ಮತ್ತು ತತ್ತ್ವಜ್ಞಾನಿಗಳೆನಿಸಿಕೊಂಡ ಅನೇಕ ಜನರು ಹಾಗೆ ಮಾಡುತ್ತಿದ್ದಾರೆ. ಅವರು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಅವರು ಅಸಂಬದ್ಧವಾದುದನ್ನು ಮಾತನಾಡುತ್ತಾರೆ ಮತ್ತು ಇತರರು ಅಂತಹ ಮಾತುಗಳನ್ನು ಮೆಚ್ಚುತ್ತಾರೆ. ಅದನ್ನು ಭಾಗವತದಲ್ಲಿ ವಿವರಿಸಲಾಗಿದೆ : ಶ್ವ ವಿಡ್ ವರಾಹ ಉಷ್ಟ್ರ ಖರೈಃ ಸಂಸ್ತುತಃ ಪುರುಷಃ ಪಶುಃ. ವಿದ್ವಾಂಸರೆಂದು ಕರೆಸಿಕೊಳ್ಳುವವರು, ಅವತಾರವೆಂದು ಹೇಳಿಕೊಳ್ಳುವವರು – ಈ ಮೂರ್ಖರನ್ನು ಅದೇ ವರ್ಗದ ಪ್ರಾಣಿಗಳು ಸ್ವೀಕರಿಸುತ್ತವೆ. ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಆಧ್ಯಾತ್ಮಿಕ ಗುರುಗಳ ಹೆಜ್ಜೆಯನ್ನು ಅನುಸರಿಸುವುದೇ ವೈದಿಕ ವಿಧಾನ. ಆಗ ನಾವೂ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಮ್ಮ ಬದುಕು ಯಶಸ್ವಿಯಾಗುತ್ತದೆ. ವಂದನೆಗಳು.






Leave a Reply