ಭಗವಂತನೇ ಮಳೆ ಕರ್ತೃ

ಮನುಕುಲವು ಸಂಪೂರ್ಣವಾಗಿ ಪ್ರಕೃತಿಯ ಅಧೀನದಲ್ಲಿರುವುದು ಕೃಷಿಕನಿಗೆ ಗೊತ್ತು, ಅನ್ಯರಿಗಲ್ಲ. ರೈತನು ಬೆಳೆಯನ್ನಲ್ಲ, ಹತ್ಯೆಗಾಗಿ ತನ್ನ ಗೋವುಗಳನ್ನು ಮಾರಾಟ ಮಾಡಿ ಜೀವಿಸಿದರೂ ಅವುಗಳ ಮೇವಿಗೆ ಭೂಮಿಯ ಕೊಡುಗೆಯ ಮೇಲೆ ತಾನು ಅವಲಂಬಿತ ಎಂದು ಅವನಿಗೆ ಗೊತ್ತು. ಉದಾಹರಣೆಗೆ ಮೇವಿನ ಹುಲ್ಲನ್ನು ಕಡಿದ ಮೇಲೆ ಅವನಿಗೆ ಅದನ್ನು ಒಣಗಿಸಲು ಎರಡು ದಿನ ಬೇಕು. ಮತೊಮ್ಮೆ ಕಡಿಯಲು ಅಗತ್ಯವಾದ ಹುಲ್ಲು ಬೆಳೆಯಲು ಇನ್ನಷ್ಟು ಮಳೆ ಬೇಕು. ಅವನು ತನ್ನ ಭೂಮಿಗೆ ನೀರಾವರಿ ಸೌಲಭ್ಯವನ್ನು ಬಳಸಿದರೂ ಮಳೆ ಬರದಿದ್ದರೆ ನದಿ ಅಥವಾ ಬಾವಿಯು ಬತ್ತಿ ಹೋಗುತ್ತದೆ.

ನಮ್ಮ ಜೀವನವೇ ಕ್ರಮವಾದ ಮಳೆಯನ್ನು ಅವಲಂಬಿಸಿರುವುದರಿಂದ, ಮಳೆ ಹೇಗೆ ಬರುತ್ತದೆ ಎಂದು ನಾವು ಕೇಳಬಹುದು.

ಸೂರ್ಯನು ಭೂಮಿಯ ಮೇಲ್ಮೈನಿಂದ, ಮುಖ್ಯವಾಗಿ ಸಮುದ್ರದಿಂದ ತೇವವನ್ನು ಆವಿಯಾಗಿಸಿ ಮೋಡವಾಗಲು ಆಕಾಶಕ್ಕೆ ಎಳೆದೊಯ್ಯುತ್ತಾನೆ ಎಂಬುದು ಪ್ರತಿಯೊಂದು ಮಗುವಿಗೂ ಗೊತ್ತು. ಈ ತೇವಾಂಶವು ಘನೀಕರಿಸಲ್ಪಟ್ಟಾಗ, ಮೋಡವು ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಕೃತಿಯು ಈ ನೀರನ್ನು ಮಂಜು ಮತ್ತು ಮಂಜುಗಡ್ಡೆಯ ರೂಪದಲ್ಲಿ ಪರ್ವತದ ಶಿಖರಗಳ ಮೇಲೆ ಶೇಖರಿಸಿಡುತ್ತದೆ. ಈ ಮಂಜು ಮತ್ತು ಮಂಜುಗಡ್ಡೆಯು ಬೇಸಗೆಯಾದ್ಯಂತ ಕ್ರಮೇಣ ಕರಗಿ ಬೀಳುತ್ತದೆ. ಆಗ ನೀರು ನದಿಗಳ ಮೂಲಕ ಹರಿದು ಪುನಃ ಸಾಗರಕ್ಕೆ ಹರಿಯುತ್ತದೆ.

ಆದುದರಿಂದ ಮಳೆಯು ಸಾಗರದಿಂದ ಆರಂಭಗೊಂಡು ಸಾಗರದಲ್ಲಿಯೇ ಅಂತ್ಯಗೊಳ್ಳುತ್ತದೆ. ಆದರೆ ಸಮುದ್ರ ಎಲ್ಲಿಂದ ಬಂದಿತು?

ಹರೇ ಕೃಷ್ಣ ಆಂದೋಲನದ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ಹೇಳುತ್ತಾರೆ, “ನೀರು ಜಲಜನಕ ಮತ್ತು ಆಮ್ಲಜನಕದ ಸಂಯೋಜನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಅಗಾಧವಾದ ಸಮುದ್ರವನ್ನು ನೋಡಿದಾಗ ಅಷ್ಟೊಂದು ಪ್ರಮಾಣದಲ್ಲಿ ಜಲಜನಕ ಮತ್ತು ಅಮ್ಲಜನಕ ಎಲ್ಲಿಂದ ಬಂದಿರಬಹುದೆಂದು ಗೊಂದಲಕ್ಕೆ ಒಳಗಾಗುತ್ತಾರೆ. ಎಲ್ಲವೂ ರಾಸಾಯನಿಕಗಳಿಂದ ಉತ್ಪತ್ತಿಯಾಗುತ್ತವೆ ಎಂದು ಅವರು ಭಾವಿಸುತ್ತಾರೆ. ಆದರೆ ರಾಸಾಯನಿಕಗಳು ಎಲ್ಲಿಂದ ಬಂದವು? ರಾಸಾಯನಿಕಗಳು ಜೀವಿಗಳಿಂದ ಉತ್ಪಾದನೆಯಾಗುವುದನ್ನು ನಾವು ನೋಡುತ್ತೇವೆ. ಉದಾಹರಣೆಗೆ, ನಿಂಬೆ ಮರವು ಟನ್‌ಗಟ್ಟಲೆ ಸಿಟ್ರಿಕ್‌ ಆಮ್ಲವನ್ನು ಉತ್ಪಾದಿಸುತ್ತದೆ. ಸಿಟ್ರಿಕ್‌ ಆಮ್ಲವು ಮರಕ್ಕೆ ಕಾರಣವಲ್ಲ. ಬದಲಿಗೆ, ಮರವು ಸಿಟ್ರಿಕ್‌ ಆಮ್ಲಕ್ಕೆ ಕಾರಣವಾಗಿದೆ. ಅದೇ ರೀತಿ ದೇವೋತ್ತಮ ಪರಮ ಪುರುಷನು ಎಲ್ಲದರ ಕಾರಣನು. ಸಿಟ್ರಿಕ್‌ ಆಮ್ಲವನ್ನು ಉತ್ಪಾದಿಸುವ ಮರಕ್ಕೆ ಅವನೇ ಕಾರಣನು. ಅವನು ರಾಸಾಯನಿಕಗಳಿಗೆ ಕಾರಣನು.”

ಪ್ರಕೃತಿಯ ನಿರಾಕಾರ ಮತ್ತು ಯಾಂತ್ರಿಕ ದೃಷ್ಟಿಯಿಂದ ದಣಿದಿರುವ ಲೌಕಿಕ ವಿಜ್ಞಾನಿಗಳು ಅಂತಿಮವಾಗಿ ಮಳೆಯು ಭಗವಂತನ ಶಕ್ತಿ ಎಂಬುವುದನ್ನು ನಿರಾಕರಿಸುತ್ತಾರೆ. ನಾವು ಮಳೆ ಅಥವಾ ಯಾವುದರ ಬಗೆಗೂ ನಿರ್ದಿಷ್ಟವಾಗುವುದು ಸಾಧ್ಯವಿಲ್ಲ ಎಂದು ಅವರು ಅಂತಿಮವಾಗಿ ಹೇಳುತ್ತಾರೆ. ಮತ್ತು ನಾವು ಅವರಿಗೆ ಕಿವಿಗೊಟ್ಟರೆ, ಅಂತಿಮವಾಗಿ, ಸಂದೇಹವಿಲ್ಲದೆ, ಅವರು ಹೇಳಿದ್ದು ಸರಿ ಎಂದು ಕಾಣುತ್ತದೆ.

ಕೆಲವು ವರ್ಷಗಳ ಹಿಂದೆ, ಕ್ಯಾಲಿಫೋರ್ನಿಯಾದಲ್ಲಿ ಅತ್ಯಂತ ಭೀಕರ ಬರ ಪರಿಸ್ಥಿತಿ ಉಂಟಾಗಿತ್ತು. ವೈಜ್ಞಾನಿಕ ಮನಸುಳ್ಳ ರಾಜಕಾರಣಿಯೊಬ್ಬರು ಉತ್ತರ ಧ್ರುವ ಪ್ರದೇಶದಿಂದ ಹಿಮಗುಡ್ಡ, ನೀರ್ಗಲ್ಲು ಬಂಡೆಯನ್ನು ಎಳೆದು ತರೋಣವೆಂದು ಸಲಹೆ ಮಾಡಿದ್ದರು. ಈ ಮಧ್ಯೆ ದಯೆಯಿಂದ ಮಳೆ ಬಂದಿತು. ಮಳೆಯಾದಾಗ ನಾನು ಸಂತ ಬರ್ಬರಾದಲ್ಲಿ ಇದ್ದೆ. ಅಲ್ಲಿ ನಾನು ಜಿವುಸ್‌ ಎಂಬ ವ್ಯಕ್ತಿಯನ್ನು ಭೇಟಿ ಮಾಡಿದೆ. ಅವನು ಸ್ಥಳೀಯ ಹವಾಮಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ.

ಜಿವುಸ್‌ ಹೇಳಿದ, “ಮಾನವನು ತನ್ನ ಜೀನು ಮತ್ತು ಪರಿಸರದ ಒಂದು ಉತ್ಪನ್ನ. ಆದರೆ (ಪಿಸುಗುಟ್ಟುತ್ತ) ಅದನ್ನು ನಿರ್ಬಂಧಿಸಲು ಅವನಿಗೆ ಗೊತ್ತಿರುವುದಕ್ಕಿಂತ ಹೆಚ್ಚು ಸಾಮರ್ಥ್ಯ ಅವನಿಗಿದೆ.”

ನಾನು ಕೇಳಿದೆ, “ಮಾನವನು ಈಗ ಹವಾಮಾನವನ್ನೂ ನಿರ್ಬಂಧಿಸಲಿರುವನೇ?”

“ಸಂಭವನೀಯ! ಏಕೆ, ಕಳೆದ ವಾರವಷ್ಟೇ ನಾವು ಕ್ಯಟಾಲೀನದ ಎಲ್ಲೆಡೆ ಸ್ವಲ್ಪ ಮೋಡವನ್ನು ಬಿತ್ತಿದೆವು. ಭಾರಿ ಪ್ರಮಾಣದಲ್ಲಿ ಮಳೆಯಾಯಿತು.”

ನಾನು ಹೊರಗಿನ ಚಂಡಮಾರುತದತ್ತ ತೋರಿಸಿ ಕೇಳಿದೆ, “ನೀವು ಅದನ್ನು ನಿಲ್ಲಿಸಬಲ್ಲಿರಾ?”

ಜಿವುಸ್‌ ತನ್ನ ಕಣ್ಣು ಮತ್ತು ಬಾಯನ್ನು ದೊಡ್ಡದಾಗಿ ತೆರೆದನು, ತೋರು ಬೆರಳನ್ನು ಮೇಲಕ್ಕೆತ್ತಿದನು ಮತ್ತು ಒಂದೇ ಸಮನೆ ಸೀನತೊಡಗಿದ. ಅವನಿಗೆ ಮಳೆಯನ್ನು ನಿಲ್ಲಿಸಲೂ ಅಗಲಿಲ್ಲ, ಹಾಗೆಯೆ ಸಾಮಾನ್ಯ ನೆಗಡಿಯನ್ನೂ ನಿಲ್ಲಿಸಲಾಗಲಿಲ್ಲ.

ಜಿವುಸ್‌ ಹೇಳಿದ ಮೋಡ ಬಿತ್ತನೆಯು ಒಣ ಮಂಜುಗಡ್ಡೆ ಹರಳನ್ನು ಅಥವಾ ಬೆಳ್ಳಿಯ ಅಯೊಡೈಡ್‌ ಹೊಗೆಯನ್ನು ಮೋಡದ ಮೂಲಕ ವಿತರಿಸುವ ತಂತ್ರಜ್ಞಾನವು ಹವಾಮಾನದಷ್ಟೆ ನಂಬಲರ್ಹ ಎಂದು ಸಾಬೀತಾಗಿದೆ. ಆಗಿನ ದಾಖಲೆ ಪ್ರಮಾಣದ ಪ್ರವಾಹ ಮತ್ತು ಬರ ಸ್ಥಿತಿಗೆ ಹವಾಮಾನ ತಜ್ಞರು ಸಾಗರದ ಹರಿವು, ಜ್ವಾಲಾಮುಖಿಯ ಧೂಳು, ಸೌರಕಲೆ ಮತ್ತು ಗ್ರಹಗಳ ಹೊಂದಿಕೆಯನ್ನೂ ದೂಷಿಸಿದರು. ಆದರೆ ಪ್ರಿಯ ಓದಗರೆ, ದೋಷವು ನಮ್ಮ ಗ್ರಹಗತಿಯಲ್ಲಿ ಇಲ್ಲ, ನಮ್ಮಲ್ಲೇ ಇದೆ.

ಕೃಷ್ಣ ಪ್ರಜ್ಞೆ ರೈತ

ವಿಪರೀತ ಹವಾಮಾನವನ್ನು ಕುರಿತು ಕೃಷ್ಣ ಪ್ರಜ್ಞೆಯ ರೈತನನ್ನು ಕೇಳಿದಾಗ ಅವನು ನಾವು ಭೂಮಿಯ ಮೇಲೆ ಏನು ಮಾಡುತ್ತೇವೆ ಮತ್ತು ಆಕಾಶದಲ್ಲಿ ಏನಾಗುತ್ತಿದೆ ಎಂಬುದರ ನಡುವಣ ಸಂಬಂಧದ ಬಗೆಗೆ ಯೋಚಿಸುತ್ತಾನೆ. ಅಕ್ರಮ ಲೈಂಗಿಕ ಸಂಬಂಧ, ಮದ್ಯಪಾನ, ಗರ್ಭಪಾತ ಮತ್ತು ಪ್ರಾಣಿ ಹತ್ಯೆಯಂತಹ ಅತ್ಯಂತ ಹೀನ ಪಾಪ ಕರ್ಮಗಳಿಗೆ ಪ್ರಕೃತಿಯ ಪ್ರತಿಕ್ರಿಯೆಯನ್ನು ಕುರಿತಂತೆ ವೈದಿಕ ಸಾಹಿತ್ಯದ ವಿವರಣೆಯ ಮೇಲೆ ಅವನು ಧ್ಯಾನಿಸುತ್ತಾನೆ. ಭಗವದ್ಗೀತೆಯಲ್ಲಿ (3.14) ದೇವೊತ್ತಮ ಪರಮ ಪುರುಷ ಶ್ರೀ ಕೃಷ್ಣನು ಹೇಳಿರುವ ಮಾತುಗಳನ್ನು ಅವನು ತನ್ನ ಜೀವನ ಸೂತ್ರ ಎಂದು ಭಾವಿಸುತ್ತಾನೆ; “ಎಲ್ಲ ಜೀವಿಗಳು ಆಹಾರ ಧಾನ್ಯಗಳಿಂದ ಬದುಕುತ್ತಾರೆ. ಧಾನ್ಯಗಳನ್ನು ಮಳೆಯಿಂದ ಉತ್ಪಾದಿಸಲಾಗುತ್ತದೆ. ಮತ್ತು ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ.”

ತನ್ನ ಪವಿತ್ರ ನಾಮಗಳ ಜಪವು ಅತ್ಯುತ್ತಮ ಯಜ್ಞ (10.25), ಅವನಿಗೆ ಪ್ರೀತಿಯಿಂದ ಶರಣಾಗುವುದು ಅತ್ಯುತ್ತಮ ಗುರಿ (18.66) ಹಾಗೂ ಆಹಾರ ಉತ್ಪಾದನೆ, ಗೋ ಸಂರಕ್ಷಣೆ ಮತ್ತು ವ್ಯಾಪಾರವು ರೈತನು ತನಗೆ ಮಾಡುವ ಅತ್ಯುತ್ತಮ ಸೇವೆ ಎಂದು ಕೃಷ್ಣನು ಸೂಚಿಸಿದ್ದಾನೆ.

ಸೃಷ್ಟಿಕರ್ತನಾದ ಭಗವಂತನೇ ನಿಜವಾದ ಮಾಲೀಕ ಎನ್ನುವುದು ಕೃಷ್ಣನ ರೈತನಿಗೆ ಗೊತ್ತು. ಭಗವಂತನು ಮಳೆ, ಸೂರ್ಯನ ಬೆಳಕು, ಚಂದ್ರನ ಬೆಳಕು, ಭೂಮಿ, ಗಾಳಿಗಳನ್ನಲ್ಲದೆ ಅವನಿಗೆ ಸೇವೆ ಮಾಡಲೆಂದು ನಮಗೆ ಲೌಕಿಕ ದೇಹಗಳನ್ನೂ ಪೂರೈಸಿದ್ದಾನೆ. ನಾವು ಪ್ರಭುವನ್ನು ನಿರ್ಲಕ್ಷಿಸಿ ನಮ್ಮ ಉದ್ದೇಶಗಳಿಗಾಗಿ ಅವನ ಆಸ್ತಿಯನ್ನು ಕಳ್ಳರಂತೆ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವನ ಆದೇಶದಂತೆ ಪ್ರಕೃತಿಯು ಪ್ರವಾಹ, ಬರ, ಚಂಡಮಾರುತ, ಬಿರುಗಾಳಿ ಮತ್ತಿತರ ನೂರಾರು ವಿಪತ್ತುಗಳನ್ನು ಕಳುಹಿಸುತ್ತದೆ. ಪ್ರಕೃತಿ ಮಾತೆಯು ಅಷ್ಟು ಶಕ್ತಿಶಾಲಿಯಾಗಿದ್ದರೂ ಕೃಷ್ಣನ ರೈತನು ಕಿಂಚಿತ್ತೂ ಹೆದರದೆ ಅವಳ ಮಡಿಲಲ್ಲಿ ಜೀವಿಸುತ್ತಾನೆ ಮತ್ತು ಬೀಜ-ಪ್ರದ ತಂದೆಯ ಮೇಲೆ ಅವಲಂಬಿತನಾಗಿರುತ್ತಾನೆ.

ಜಪಿಸಿದರೆ ವರ್ಷ

ಅನೇಕ ವರ್ಷಗಳ ಹಿಂದೆ ಶ್ರೀಲ ಪ್ರಭುಪಾದರು ಅನೇಕ ಬಾವಿಗಳನ್ನು ತೋಡುವ ಅಗತ್ಯವಿಲ್ಲ ಎಂದು ಹೈದರಾಬಾದಿನ ಹರೇ ಕೃಷ್ಣ ಕೃಷಿ ಕೇಂದ್ರದಲ್ಲಿ ತಮ್ಮ ಶಿಷ್ಯರಿಗೆ ಹೇಳಿದ್ದರು. ಹರೇ ಕೃಷ್ಣ ಕೀರ್ತನೆಯನ್ನು ನಡೆಸಿದರೆ ಮತ್ತು ಪ್ರಸಾದವನ್ನು ಹಂಚಿದರೆ ಸಾಕು, ಸಾಕಷ್ಟು ಮಳೆ ಸುರಿಯುತ್ತದೆ ಎಂದು ಅವರು ಹೇಳಿದ್ದರು.

ತೇಜಸ್‌ ದಾಸ ನೆನಪು ಮಾಡಿಕೊಂಡರು, “ಒಂದು ದಿನ ನಾವು ದೊಡ್ಡ ಕೀರ್ತನೆ ಮಾಡಿದೆವು ಮತ್ತು ಪ್ರಸಾದವನ್ನು ವಿತರಿಸಿದೆವು. ಮೊದಲಿಗೆ ಆಕಾಶದಲ್ಲಿ ಮೋಡವೇ ಇರಲಿಲ್ಲ. ಆದರೆ ದಿಢೀರನೆ ಈ ಮೋಡಗಳು ಕಾಣಿಸಿಕೊಂಡವು ಮತ್ತು ನಾವು ಎಂದೂ ಅನುಭವಿಸದ ಭಾರಿ ಮಳೆಯನ್ನು ಅಂದು ಕಂಡೆವು. ಮಂದಿರದ ಹಿಂದೆ ಇದ್ದ ಜಲಾಶಯವು ಪೂರ್ಣವಾಗಿ ತುಂಬಿತು. ನಾವು ಭಾವಪರವಶರಾದೆವು ಮತ್ತು ಮಳೆಯಲ್ಲಿ ಸುಮಾರು ಎರಡು ತಾಸು ಹರೇ ಕೃಷ್ಣ ಮಂತ್ರವನ್ನು ಜಪಿಸಿದೆವು. ಕೃಷ್ಣನನ್ನು ಸ್ಮರಿಸುವುದರ ಶಕ್ತಿಗೆ ಇದೇ ಸಾಕ್ಷಿ.”

ಆದರೆ ಭೌತಿಕವಾದಿಗಳು ಆಧ್ಯಾತ್ಮಿಕ ವಿಧಾನದಿಂದ ಮಳೆಯನ್ನು ಪಡೆಯುವುದನ್ನು ನಂಬುವುದಿಲ್ಲ. ಅವರು ನಂಬಲಿ ಅಥವಾ ಬಿಡಲಿ, ಅವರು ಮಳೆಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬುವುದಂತೂ ವಾಸ್ತವ. ಅವರು `ಮಳೆ ನೃತ್ಯ’ ದ ಬಗೆಗೆ ತಮಾಷೆ ಮಾಡಬಹುದು, ಆದರೆ ಅವರ ಕೈಯಲ್ಲಾಗುವುದು ಮೋಡ ಬಿತ್ತನೆ ಮತ್ತು ಹಿಮದ ಗಡ್ಡೆಗಳನ್ನು ಎಳೆಯುವುದು. ಅವರಲ್ಲಿ ಉಪಗ್ರಹ, ಕಂಪ್ಯೂಟರ್‌ ಮತ್ತು ರಡಾರ್‌ಗಳಿದ್ದರೂ, ಪ್ರಕೃತಿಯು ನಮಗೆ ಮುಂದೆ ಎಲ್ಲಿ ಆಘಾತ ನೀಡುತ್ತದೆ ಎಂದಷ್ಟೆ ನಮಗೆ ಅವರು ಹೇಳಲು ಪ್ರಯತ್ನಿಸುತ್ತಾರೆ. “ಈ ವರ್ಷ ಆಘಾತವು ತೀವ್ರವಾಗಿದೆ” ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ವಿಪರ್ಯಾಸವೆಂದರೆ, ನಾವು ನಮಗೇ ಆಘಾತ ಮಾಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ, ಪ್ರಕೃತಿಯ ಸಂಪನ್ಮೂಲದ ದುರ್ಬಳಕೆಗೆ ನಾವು ದೊಡ್ಡ ಕಾರ್ಖಾನೆಗಳನ್ನು ನಡೆಸುತ್ತಿದ್ದೇವೆ. ಇವು ನಮ್ಮ ವಾತಾವರಣಕ್ಕೆ ಅಪಾರ ಪ್ರಮಾಣದಲ್ಲಿ ಮಲಿನಕಾರಿ ವಸ್ತುಗಳನ್ನು ತುಂಬುತ್ತಿವೆ. ಕೆಲವು ಬಾರಿ ಈ ಮಾಲಿನ್ಯವು `ಅನಿಲ ಮಳೆ’ಯಾಗಿ ಪರಿಣಮಿಸುತ್ತವೆ ಮತ್ತು ಅವು ಮರ ಮತ್ತು ಗಿಡಗಳನ್ನು, ಮಣ್ಣನ್ನು ಹಾಳು ಮಾಡುತ್ತವೆಯಲ್ಲದೆ ನಮ್ಮ ಕೆರೆ ತೊರೆಗಳನ್ನು ವಿಷಪೂರಿತಗೊಳಿಸುತ್ತವೆ.

ಈಗಾಗಲೇ ನಗರದ ತಂತ್ರಜ್ಞಾನದಿಂದ ಅಲಕ್ಷ್ಯ ಮತ್ತು ಶೋಷಣೆಗೆ ಒಳಗಾಗಿರುವ ಭಾವನೆ ಉಳ್ಳ ರೈತನಿಗೆ ಈ ಕಿತಾಪತಿ ಕಿರಿಕಿರಿ ಉಂಟುಮಾಡುತ್ತದೆ. `ನೀವು ರೈತರನ್ನು ಬಾಯಿತುಂಬ ದೂರಬೇಡಿ’ ಎಂದು ಗ್ರಾಮಗಳಲ್ಲಿ ಅಂಟಿಸಿದ ಪ್ರಕಟಣೆ ಸಾರುತ್ತದೆ. ಆದರೆ ರೈತನೂ ದೋಷ ಮುಕ್ತನಲ್ಲ. ಕ್ಷಿಪ್ರ ಲಾಭಕ್ಕಾಗಿ ಭೂಮಿಯನ್ನು ಉಳುವ ಟ್ರ್ಯಾಕ್ಟರ್‌ ಹಾಗೂ ಬಳಸುವ ರಾಸಾಯನಿಕಗಳಿಗೆ ಅವನು ಆ ಕಾರ್ಖಾನೆಗಳ ಮೇಲೆಯೇ ಅವಲಂಬಿತನಾಗಿ ಭೂಮಿಯನ್ನು ಹಾಳು ಮಾಡಿಕೊಳ್ಳುತ್ತಾನೆ. ಆದರೆ ಮಳೆ ಇಲ್ಲದಿದ್ದರೆ ಟ್ರ್ಯಾಕ್ಟರ್‌ ಮತ್ತು ರಾಸಾಯನಿಕಗಳು ನಿರುಪಯುಕ್ತ.

ಇತ್ತೀಚೆಗೆ ನಾನು ಒಂದು ಅಂಗಡಿಗೆ ಹೋಗಿದ್ದೆ. ಯಾವುದೋ ಬೀಜವನ್ನು ಕೊಳ್ಳಲು ಒಬ್ಬ ವ್ಯಕ್ತಿ ಅಲ್ಲಿಗೆ ಬಂದ.

ಅವನು ಕೇಳಿದ, “ಈ ಬೀಜವು ಬೆಳೆಯ ಖಾತ್ರಿ ಕೊಡುತ್ತದೆಯೆ?”

ಅಂಗಡಿಯವನೆಂದ, “ಭಗವಂತನು ಮಳೆಯನ್ನು ಕಳುಹಿಸಿದರೆ ಖಂಡಿತ ಖಾತ್ರಿ.”

ಆಗ ಆ ವ್ಯಕ್ತಿ ಹೇಳಿದ, “ನನಗೆ ಅದರ ಅಗತ್ಯವಿಲ್ಲ. ನನ್ನ ಬಳಿ ಸಿಂಪಡಿಸುವ ಸಾಧನವಿದೆ. ಆ ಬೆಳೆ ಬಂದಾಗ ಮತ್ತು ಅದನ್ನು ನನ್ನ ಮೇಜಿನ ಮೇಲೆ ಇಟ್ಟಾಗ, ನಾನು ದೇವರನ್ನು ಭೋಜನಕ್ಕೂ ಆಹ್ವಾನಿಸುವುದಿಲ್ಲ.”

ಅಂಗಡಿಯವ ಸವಾಲು ಹಾಕಿದ, “ಸೂರ್ಯನ ಬಗೆಗೆ ಏನು ಹೇಳುವೆ?”

ಆ ವ್ಯಕ್ತಿ ನಗುತ್ತಾ ಹೊರಟ. ಆದರೆ ಎಂದಾದರೊಂದು ದಿನ ವಿಜ್ಞಾನವು ನಮಗೆ ಸುಧಾರಿತ ಹೊಸ ಸೂರ್ಯನನ್ನು ನೀಡಬಹುದೆಂಬ ವಿಶ್ವಾಸ ತನಗಿದೆ ಎಂದು ಅವನು ಹೋಗುವಾಗ ಹೇಳಿದ.

ಹಳೆಯ ಮಾತೊಂದಿದೆ, “ಎಲ್ಲರೂ ಹವಾಮಾನದ ಬಗೆಗೆ ಮಾತನಾಡುತ್ತಾರೆ. ಆದರೆ ಅದರ ಬಗೆಗೆ ಯಾರೂ ಏನೂ ಮಾಡುವುದಿಲ್ಲ.” ಅದನ್ನು ಪ್ರಯತ್ನಿಸುವುದು ಮೂರ್ಖತನ ಎಂದು ಕೃಷ್ಣನ ರೈತನಿಗೆ ಗೊತ್ತು. ಅವನು ಭಗವಂತನಿಗಾಗಿ ಕಷ್ಟಪಟ್ಟು ದುಡಿಯುತ್ತಾನೆ ಮತ್ತು ಏನೇ ಬಂದರೂ ಅದನ್ನು ಪ್ರಭುವಿನ ಕೃಪೆ ಎಂದು ಸ್ವೀಕರಿಸುತ್ತಾನೆ. ಏನೇ ಸಂಭವಿಸಲಿ, ರೈತನು ಕೃಷ್ಣನನ್ನು ನೆನಪು ಮಾಡಿಕೊಳ್ಳುತ್ತಾನೆ ಮತ್ತು ಅವನಿಗಾಗಿ ಶಾಂತಿ, ಸಮೃದ್ಧಿ ಮತ್ತು ಪ್ರೀತಿಯ ಫಸಲನ್ನು ಸಂಗ್ರಹಿಸುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi