ಮಹಾಭಕ್ತ ಹನುಮಂತ

ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿ ಮಹಾನ್‌‍ ಭಕ್ತ ಹನುಮಂತನ ಚಟುವಟಿಕೆಯನ್ನು ಸುಂದರವಾಗಿ ವರ್ಣಿಸಲಾಗಿದೆ.

ಆಧ್ಯಾತ್ಮಿಕ ಜೀವನಕ್ಕೆ ಯಾರು ಅರ್ಹರು? ಬ್ರಾಹ್ಮಣರು ಮಾತ್ರವೇ? ಕೇವಲ ಸಂನ್ಯಾಸಿಗಳೇ ಅಥವಾ ಮಾನವ ಜೀವಿಗಳೇ ಅಥವಾ ವಿದ್ವಾಂಸರೇ ಅಥವಾ ತ್ಯಾಗಿಯೇ? ಪ್ರತಿಯೊಬ್ಬರೂ ಭಗವಂತನ ಮಕ್ಕಳು. ಆದುದರಿಂದ ಭಗವಂತನನ್ನು ಪ್ರೀತಿಸುವುದು ಮತ್ತು ಅವನಿಗೆ ಸೇವೆಸಲ್ಲಿಸುವುದು ಪ್ರತಿಯೊಂದು ಜೀವಿಯ ಧರ್ಮ.

ಭಾರತದ ಪುರಾತನ ಧರ್ಮಗ್ರಂಥಗಳಲ್ಲಿ ವ್ಯಕ್ತವಾಗಿರುವ ಇತಿಹಾಸವು ಅನರ್ಹ ಹಿನ್ನೆಲೆಯಿಂದ ಬಂದವರಂತೆ ತೋರುವ ಮತ್ತು ಶುದ್ಧ ಭಕ್ತರ ಸಹವಾಸದ ಮೂಲಕ ಆಧ್ಯಾತ್ಮಿಕ ಲೋಕವನ್ನು ಪಡೆದಿರುವ ಅನೇಕ ಭಕ್ತರ ಉದಾಹರಣೆಯನ್ನು ನೀಡುತ್ತದೆ.

ಪಕ್ಷಿಯಾದ ಗರುಡನು ವಿಷ್ಣುವಿನ ವಾಹಕನಾದನು. ಗಜೇಂದ್ರ ಆನೆ, ಅದು ಶ್ರೀ ಹರಿಗೆ ನಿರಂತರ ಪ್ರಾರ್ಥನೆ ಸಲ್ಲಿಸಿತು. ಅನಂತರ ಪ್ರಭುವು ಗಜೇಂದ್ರನನ್ನು ಮೊಸಳೆಯಿಂದ ರಕ್ಷಿಸಲು ಬಂದನು. ಧ್ರುವನು ಕೇವಲ ಐದು ವರ್ಷದ ಬಾಲಕ. ತನ್ನ ದೃಢವಾದ ಭಕ್ತಿಯ ಆಚರಣೆಯಿಂದ ಅವನು ಕೇವಲ ಆರು ತಿಂಗಳಿನಲ್ಲಿ ಶ್ರೀ ವಿಷ್ಣುವಿನ ದರ್ಶನ ಪಡೆದನು. ಪ್ರಹ್ಲಾದನು ಅಸುರರ ಕುಟುಂಬದಲ್ಲಿ ಜನಿಸಿದನು. ವಿಷ್ಣುವು ಅವನಿಗಾಗಿ ನರಸಿಂಹನ ರೂಪದಲ್ಲಿ ಅವತರಿಸಿ ಹಿರಣ್ಯಕಶಿಪುವನ್ನು ಸಂಹರಿಸಿದನು. ಪ್ರಹ್ಲಾದನ ಮೊಮ್ಮಗ ಬಲಿಯು ಅಸುರರ ರಾಜನಾಗಿದ್ದನು. ಆದರೂ ಅವನು ವಾಮನದೇವನ ಕೃಪೆಯನ್ನು ಪಡೆದನು. ಪ್ರಭು ಅವನ ದ್ವಾರಪಾಲಕನಾದನು!

ವೃಂದಾವನದಲ್ಲಿ ಹಣ್ಣು ಮಾರುವ ವೃದ್ಧೆಯು ಪ್ರೀತಿಯಿಂದ ಕೃಷ್ಣನಿಗೆ ಕೈತುಂಬಾ ಹಣ್ಣನ್ನು ನೀಡಿದಳು. ಮತ್ತು ಬುಟ್ಟಿ ತುಂಬಾ ಆಭರಣಗಳನ್ನು ಪಡೆದಳು. ಕುಬ್ಜೆಯು ಗೂನು ಬೆನ್ನಿನ ಸೇವಕಿಯಾಗಿದ್ದಳು. ಅವಳು ಕೃಷ್ಣನಿಗೆ ಅಲ್ಪ ಸೇವೆ ಸಲ್ಲಿಸಿದಳು . ಕೃಷ್ಣನು ಅವಳಿಗೆ ಸುಂದರ ರೂಪವನ್ನು ಮತ್ತು ತನ್ನ ಸಹವಾಸವನ್ನು ನೀಡಿದನು.

ಶ್ರೀ ರಾಮನ ಮಿತ್ರ ಯಾರಾಗಬಹುದು?

ಭಗವಾನ್‌‍ ಶ್ರೀ ರಾಮಚಂದ್ರನ ಕಥೆಯನ್ನು ಹೇಳುವ ರಾಮಾಯಣದಲ್ಲಿ ವಿವಿಧ ಹಿನ್ನೆಲೆಗಳಿಂದ ಬಂದ ಅನೇಕ ಭಕ್ತರನ್ನು ನೋಡಬಹುದು. ನಿಸ್ವಾರ್ಥದಿಂದ ಅವನಿಗೆ ಸೇವೆ ಸಲ್ಲಿಸಿದರು. ರಾಮಾಯಣವನ್ನು ಬರೆದ ವಾಲ್ಮೀಕಿ ಋಷಿಗಳು ಮೊದಲು ಬೇಡನಾಗಿದ್ದರು. ಅನಂತರ ಭಕ್ತರ ಕೃಪೆಯಿಂದ ಅವರು ಭಗವಂತನ ಲೀಲೆಗಳ ಅಲೌಕಿಕ ಕರ್ತೃವಾದರು. ರಾಮನು ಅರಣ್ಯಕ್ಕೆ ಹೊರಟಾಗ ಗುಹ ಎನ್ನುವ ಗಿರಿಜನ ನಾಯಕನು ನದಿ ದಾಟಲು ರಾಮನಿಗೆ ಸಹಾಯ ಮಾಡಿದನು. ಆದುದರಿಂದ ರಾಮನು ಗುಹನನ್ನು ತನ್ನ ಪ್ರೀತಿಯ ಮಿತ್ರನೆಂದು ಭಾವಿಸಿದನು. ದುಷ್ಟ ರಾವಣನು ಸೀತೆಯನ್ನು ಅಪಹರಿಸಿದಾಗ, ಜಟಾಯು ಎನ್ನುವ ಪಕ್ಷಿಯು ಲಂಕಾಪತಿಯ ಜೊತೆ ಹೋರಾಡಿತು. ಆದರೆ ಜಟಾಯು ತನ್ನ ಪ್ರಾಣ ಕಳೆದುಕೊಂಡಿತು. ಶ್ರೀರಾಮನು ತನ್ನ ತಂದೆಯ ಅಂತಿಮ ಸಂಸ್ಕಾರವನ್ನು ಮಾಡುವಂತೆ ಜಟಾಯುವಿನ ಸಂಸ್ಕಾರ ಮಡಿದನು.

ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಹೋಗುವಾಗ ಭಕ್ತೆ ಶಬರಿಯನ್ನು ಭೇಟಿ ಮಾಡುತ್ತಾರೆ. ಅತ್ಯಂತ ಪ್ರೀತಿಯಿಂದ ರಾಮ ಲಕ್ಷ್ಮಣರನ್ನು ಸ್ವಾಗತಿಸುವ ಶಬರಿಯು ರಾಮನಿಗೆ ಹಣ್ಣನ್ನು ಕೊಡುತ್ತಾಳೆ. ಮೊದಲು ಅವಳು ರುಚಿ ನೋಡಿ ಅನಂತರ ಹಣ್ಣನ್ನು ರಾಮನಿಗೆ ನೀಡುತ್ತಾಳೆ. ಅವಳ ಮುಗ್ಧ ಮತ್ತು ಗಾಢ ಪ್ರೇಮವನ್ನು ಕಂಡು ರಾಮನು ಮೂಕನಾಗುತ್ತಾನೆ.

ರಾಜ ಸುಗ್ರೀವನು ಅರಣ್ಯ ಮತ್ತು ಬೆಟ್ಟಗಳಲ್ಲಿ ವಾಸಿಸುತ್ತಿದ್ದನು. ಅವನು ರಾಮನ ಪ್ರೀತಿಯ ಮಿತ್ರನಾದನು ಮತ್ತು ಸೀತೆಯ ಶೋಧದಲ್ಲಿ ಮತ್ತು ರಾಮನೊಂದಿಗಿನ ಯುದ್ಧದಲ್ಲಿ ತನ್ನ ವಾನರ ಸೇನೆಯನ್ನು ತೊಡಗಿಸಿದನು, ಜಾಂಬವಂತನು ಒಬ್ಬ ಕರಡಿಯಾಗಿದ್ದನು ಮತ್ತು ಅವನು ಅನೇಕ ರೀತಿಯಲ್ಲಿ ಪ್ರಭು ರಾಮನಿಗೆ ಸೇವೆ ಸಲ್ಲಿಸಿದನು. ಲಂಕೆಗೆ ಹೋಗಲು ಸಮುದ್ರದ ಮೇಲೆ ಸೇತುವೆ ನಿರ್ಮಿಸುತ್ತಿದ್ದಾಗ ಅಳಿಲು ಸಣ್ಣ ಸಣ್ಣ ಕಲ್ಲುಗಳನ್ನು ಮತ್ತು ಮರಳನ್ನು ತಂದುಕೊಡುತ್ತಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿತು. ಅಸುರನಾದ ವಿಭೀಷಣನು ರಾವಣನ ಸೋದರ. ಆದರೆ ಅವನ ಭಕ್ತಿಯನ್ನು ಕಂಡು ರಾಮನು ಅವನನ್ನು ತನ್ನ ಮಿತ್ರನಾಗಿ ಸ್ವೀಕರಿಸಿದನು. ಹನುಮಾನ್‌‍ ಒಬ್ಬ ವಾನರ. ರಾಮನ ಸೇವಕರಲ್ಲಿ ಪರಮೋಚ್ಛ ಮತ್ತು ಭಕ್ತ. ಅವನು ಸೀತೆಯನ್ನು ಲಂಕಾದಲ್ಲಿ ಭೇಟಿಯಾದನು ಮತ್ತು ರಾಮ – ರಾವಣರ ಸಮರದಲ್ಲಿ ಅಪರಿಮಿತ ಸೇವೆಯನ್ನು ಸಲ್ಲಿಸಿದನು.

ನಿಷ್ಠಾವಂತ ಸೇವಕ

ಶ್ರೀ ರಾಮಚಂದ್ರನಿಗೆ ಹನುಮಂತನ ಸೇವೆಯು ಅಸೀಮಿತವಾದುದು. ಅವನ ಗಾಢ ಭಕ್ತಿಯು ಅತಿಶಯವಾದುದು. ಹನುಮಾನ್‌‍ ಸಾಮರ್ಥ್ಯ, ಶಿಷ್ಟಾಚಾರ ಬುದ್ಧಿ ಮತ್ತು ಮಾನಸಿಕ ಸಮತೋಲನದ ಸಮ್ಮಿಲನವಾಗಿದೆ. ಅವನು ವೇದಗಳನ್ನು ಚೆನ್ನಾಗಿ ಅರಿತಿದ್ದನು. ಶತ ಶತಮಾನಗಳಿಂದ ಸ್ತ್ರೀ ಪುರುಷರು, ಮಕ್ಕಳು, ವೃದ್ಧರು ಹೀಗೆ ಎಲ್ಲ ರೀತಿಯ ಪ್ರೇಕ್ಷಕರಿಗೆ ಅವನು ರಾಮಾಯಣದ ಪ್ರೀತಿಯ ಪಾತ್ರನಾಗಿದ್ದಾನೆ.

ರಾಮಾಯಣದ ಅತ್ಯಂತ ಸುಂದರವಾದ ಭಾಗವೆಂದರೆ ಸುಂದರಕಾಂಡ. ಅದರಲ್ಲಿ ಅವನ ಸಾಹಸ ಕಾರ್ಯಗಳನ್ನು ವಿವರಿಸಲಾಗಿದೆ. ಅಗಲಿಕೆಯ ಕಾರಣ ರಾಮ ಮತ್ತು ಸೀತೆ ದುಃಖಿಗಳಾಗಿದ್ದಾಗ, ಅವರಿಬ್ಬರಿಗೆ ಪರಸ್ಪರರ ಮಾಹಿತಿಯನ್ನು ನೀಡುವ ಮೂಲಕ ಹನುಮಾನ್‌‍ ಅವರಿಬ್ಬರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದ. ರಾಮನಿಂದ ಸೀತೆ ಮತ್ತು ಸೀತೆಯಿಂದ ರಾಮನತ್ತ ಅವನ ಯಾತ್ರೆ ಅದ್ಭುತ. ಇದು ಸುಂದರಕಾಂಡದ ಕಥಾವಸ್ತು. ಶ್ರೀ ರಾಮನು ರಾಮಾಯಣದ ನಾಯಕನಾದರೆ ಹನುಮಾನ್‌‍ ರಾಮನ ಅನುಗ್ರಹದಿಂದ ಸುಂದರಕಾಂಡದ ನಾಯಕ. ತನಗಿಂತ ತನ್ನ ಭಕ್ತರನ್ನು ಕೊಂಡಾಡುವುದನ್ನು ಭಗವಂತ ಇಷ್ಟಪಡುತ್ತಾನೆ.

ಹತಾಶ ಸ್ಥಿತಿಯಲ್ಲಿ ಆಶಾಕಿರಣ

ಸುಗ್ರೀವನು ಹನುಮಂತನನ್ನು ಜಾಂಬವಂತ, ನೀಲ, ಅಂಗದ ಮತ್ತಿತರ ವಾನರರೊಂದಿಗೆ ಸೀತೆಯನ್ನು ದಕ್ಷಿಣದಲ್ಲಿ ಹುಡುಕಲು ಕಳುಹಿಸಿದನು. ಹನುಮಂತನ ಅತಿಮಾನವ ಶಕ್ತಿ ಮತ್ತು ಸಾಹಸ, ಬುದ್ಧಿ ಮತ್ತು ಸಂಪನ್ಮೂಲದ ಕಾರಣ ಸೀತೆಯನ್ನು ಪತ್ತೆ ಹಚ್ಚಲು ಅವನೇ ಸಮರ್ಥ ಎಂದು ಸುಗ್ರೀವ ಭಾವಿಸಿದ್ದನು.

ತನ್ನ ಪ್ರಿಯ ಸೀತೆಯನ್ನು ಹನುಮಾನ್‌‍ ಪತ್ತೆ ಹಚ್ಚುವನೆಂದು ರಾಮನಿಗೂ ಮನವರಿಕೆಯಾಗಿತ್ತು. ಆದುದರಿಂದ ಅವನು ತನ್ನ ಉಂಗುರವನ್ನು ಹನುಮಾನ್‌‍ಗೆ ನೀಡಿ ಹೇಳಿದನು, “ಇದರಲ್ಲಿ ನನ್ನ ಹೆಸರಿದೆ. ನೀನು ಸೀತೆಯನ್ನು ಕಂಡಾಗ ಇದನ್ನು ಅವಳಿಗೆ ಕೊಡು. ಆಗ ಅವಳಿಗೆ ನೀನು ನನ್ನ ಪ್ರತಿನಿಧಿ ಎನ್ನುವುದು ಮನವರಿಕೆಯಾಗುತ್ತದೆ.”

ಹನುಮಾನ್‌‍ ತಂಡವು ಎಲ್ಲ ಕಡೆ ಸೀತೆಗಾಗಿ ಹುಡುಕಾಟ ನಡೆಸಿತು. ಆದರೆ ಸೀತೆ ಸಿಗದೆ ಅವರಿಗೆ ನಿರಾಶೆಯಾಯಿತು. ಸಮುದ್ರದ ದಡಕ್ಕೆ ಬಂದ ಅವರು ಸಾಯುವವರೆಗೂ ನಿರಶನ ನಡೆಸಲು ನಿರ್ಧರಿಸಿದರು. ಆಗ ಜಟಾಯು ಸೋದರ ಸಂಪಾತಿಯು ವಾನರರಿಗೆ “ಸೀತೆಯು ಲಂಕೆಯಲ್ಲಿದ್ದಾಳೆ, ರಾವಣನ ಲಂಕೆಯಲ್ಲಿ” ಎಂದು ಹೇಳಿ ಅವರಲ್ಲಿ ಉತ್ಸಾಹ ತುಂಬಿದನು.

ಸಮುದ್ರವನ್ನು ನೋಡಿದಾಗ ಮತ್ತೊಂದು ನಿರಾಶೆಯ ಅಲೆ ಅವರನ್ನು ಕಾಡಿತು. ಒಂದು ನೂರು ಯೋಜನೆಯ (ಒಂದು ಯೋಜನೆ 8 ಮೈಲಿಗಳು) ಸಮುದ್ರವನ್ನು ದಾಟುವುದು ಹೇಗೆ? ಸೀತೆಯನ್ನು ಕಾಪಾಡಲು ನೂರು ಯೋಜನೆಯನ್ನು ಹಾರಲು ಯಾರಿಗೆ ಸಾಧ್ಯ ? ವಾನರರಲ್ಲಿ ಚರ್ಚೆಯಾಯಿತು. ಕೆಲವರು ಹತ್ತು, ಇಪ್ಪತ್ತು ಯೋಜನೆಗಳಷ್ಟು ಹಾರಬಲ್ಲೆನೆಂದು ಹೇಳಿದರು. ಆಗ ಜಾಂಬವಂತನು ಹೇಳಿದನು, “ಚಿಂತೆ ಬೇಡ, ನಮ್ಮ ಬಳಿ ಹನುಮಾನ್‌‍ ಇದ್ದಾನೆ. ಅವನು ಗರುಡನಿಗೆ ಸಮ. ನಮ್ಮ ಧ್ಯೇಯವನ್ನು ಸಾಧಿಸುವುದು ಅವನಿಂದ ಮಾತ್ರ ಸಾಧ್ಯ.” ಜಾಂಬವಂತನು ಹನುಮಂತನ ಅಸಾಮಾನ್ಯ ಸಾಮರ್ಥ್ಯವನ್ನು ಕೊಂಡಾಡಿದನು. ಅವನಲ್ಲಿ ಉತ್ಸಾಹ ತುಂಬಿದನು. ಹೀಗೆ ಉತ್ತೇಜಿತನಾದ ಹನುಮಾನ್‌‍ ತನ್ನನ್ನು ಬೃಹದಾಕಾರವಾಗಿ ವಿಸ್ತರಿಸಿಕೊಂಡನು. ಮುಂದೆ ಲಂಕಾದಲ್ಲಿ ಸೀತೆಯೊಂದಿಗೆ ಮಾತನಾಡುವಾಗ ಅವಳು ವಾನರ ಸೈನ್ಯದ ಶಕ್ತಿಯನ್ನು ಕುರಿತು ಸಂದೇಹ ವ್ಯಕ್ತಪಡಿಸಿದಳು. ಆಗ ಹನುಮಾನ್‌‍ ಹೇಳಿದನು, “ಸುಗ್ರೀವನ ಸೇನೆಯಲ್ಲಿ ಎಲ್ಲ ವಾನರರು ನನಗೆ ಸಮ ಅಥವಾ ನನಗಿಂತ ಹೆಚ್ಚು ಸಮರ್ಥರು. ಅವರು ತುಂಬಾ ಸುಲಭವಾಗಿ ಲಂಕೆಯನ್ನು ಮುಟ್ಟುತ್ತಾರೆ.” ಇದು ಒಬ್ಬ ಭಕ್ತನ ನಡವಳಿಕೆ.

ಸೌಲಭ್ಯದ ಆತಿಥ್ಯ ಬೇಡ

ಹನುಮಾನ್‌‍ ಸಮುದ್ರದ ಮೇಲೆ ಹಾರುವ ಮುನ್ನ ತನ್ನ ತಂದೆ ವಾಯುವಿಗೆ, ಗುರು ಸೂರ್ಯನಿಗೆ ಹಾಗೂ ಇಂದ್ರನಿಗೆ ಪ್ರಣಾಮ ಸಲ್ಲಿಸಿದನು. ತನ್ನ ಧ್ಯೇಯ ಸಫಲವಾಗಲಿ ಎಂದು ಅವರಲ್ಲಿ ಕೋರಿದನು.

ಹನುಮಾನ್‌‍ ಆಕಾಶದ ಮೂಲಕ ಬಹಳ ಎತ್ತರಕ್ಕೆ ಹಾರಿದನು. ಸಮುದ್ರ ರಾಜನು ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದೂ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದೂ ಕೋರಿದನು. ತನ್ನ ಧ್ಯೇಯದತ್ತ ಸಂಪೂರ್ಣವಾಗಿ ದೃಷ್ಟಿ ನೆಟ್ಟಿದ್ದ ಹನುಮಾನ್‌‍ ಹೇಳಿದನು, “ದಯೆಯಿಟ್ಟು ಕ್ಷಮಿಸು. ನನಗೆ ಸಮಯ ಹೆಚ್ಚಾಗಿಲ್ಲ. ನಿನ್ನ ಆತಿಥ್ಯ ಸ್ವೀಕರಿಸಲು ನಿಲ್ಲಲಾರೆ.”

ಧ್ಯೇಯವನ್ನು ಸಾಧಿಸಬೇಕಾಗಿರುವಾಗ ಯಾವುದೇ ಸೌಲಭ್ಯದ ಆತಿಥ್ಯವನ್ನು ಸ್ವೀಕರಿಸಬಾರದು. ಹನುಮಾನ್‌‍ ಮಾಡಿದ್ದು ಅದನ್ನೇ.

ಹನುಮಾನ್‌‍ ತನ್ನ ಯಾತ್ರೆಯನ್ನು ಮುಂದುವರಿಸುತ್ತಿದ್ದಾಗ, ಸುರಸಾ ಎನ್ನುವ ಬೃಹತ್‌‍ ಆಕಾರದ ರಾಕ್ಷಸಿಯು ಅವನನ್ನು ತಡೆದಳು. ಅವಳು ಅವನಿಗೆ ಹೇಳಿದಳು, “ನನ್ನ ಮುಂದೆ ಯಾರೇ ಬಂದರೂ ಯಾವುದೇ ಬಂದರೂ ಅವರನ್ನು ನಾನು ತಿನ್ನಬಹುದು ಎಂದು ನನಗೆ ಬ್ರಹ್ಮನಿಂದ ಪಡೆದ ವರವಿದೆ. ವಾನರನೇ, ಈಗ ನೀನು ನನ್ನ ಬಾಯೊಳಗೆ ಪ್ರವೇಶಿಸು.”

ಹನುಮಾನ್‌‍ ಉತ್ತರಿಸಿದನು, “ಶ್ರೀರಾಮನ ಪತ್ನಿ ಸೀತಾದೇವಿಯನ್ನು ಅಪಹರಿಸಲಾಗಿದೆ. ಅವಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದೇನೆ. ಅವಳನ್ನು ಪತ್ತೆಹಚ್ಚಿದ ಮೇಲೆ, ರಾಮನಿಗೆ ವಿಷಯವನ್ನು ಅರುಹುತ್ತೇನೆ. ಅನಂತರ ವಾಪಸಾಗಿ ನಾನು ನಿನ್ನ ಬಾಯೊಳಗೆ ಬರುತ್ತೇನೆ.”

ಆದರೆ ಆ ರಾಕ್ಷಸಿಯು ಅದಕ್ಕೆ ಒಪ್ಪಲಿಲ್ಲ. ಆ ಕೂಡಲೇ ಅವನು ತನ್ನ ಬಾಯೊಳಗೆ ಬರಬೇಕೆಂದು ಪಟ್ಟು ಹಿಡಿದಳು. ಅವಳು ಹತ್ತು ಯೋಜನೆಯಷ್ಟು ತನ್ನ ಬಾಯನ್ನು ತೆರೆದಳು ಮತ್ತು ಹನುಮಂತನ ದಾರಿಗೆ ತಡೆ ಹಾಕಿದಳು. ಹನುಮಾನ್‌‍ ಕೂಡ ಹತ್ತು ಯೋಜನೆಗಳಷ್ಟು ತನ್ನ ದೇಹವನ್ನು ವಿಸ್ತರಿಸಿಕೊಂಡು ಅವಳಿಗೆ ಸವಾಲು ಒಡ್ಡಿದನು. ಅವಳು ನೂರು ಹೋಜನೆಗಳಷ್ಟು ವಿಸ್ತರಿಸಿಕೊಂಡಾಗ ಹನುಮಾನ್‌‍ ಅತ್ಯಂತ ಬುದ್ಧಿವಂತಿಕೆಯನ್ನು ತೋರಿ ತನ್ನ ದೇಹವನ್ನು ಕಿರಿದಾಗಿಸಿಕೊಂಡು ಅವಳ ಬಾಯೊಳಗೆ ಹೋಗಿ ತತ್ಕ್ಷಣ ಹೊರಗೆ ಬಂದನು! “ನಿನ್ನ ವರದ ಷರತ್ತು ಪೂರ್ಣಗೊಂಡಿದೆ. ನನ್ನ ಯಾತ್ರೆಯನ್ನು ಮುಂದುವರಿಸುವೆ.”

ಸುರಸಾ ಮೇಲೆ ಅವನ ಬುದ್ಧಿವಂತಿಕೆ ಪ್ರಭಾವ ಬೀರಿತು. ಅವಳಿಗೆ ಆನಂದವಾಯಿತು. ತನ್ನ ಮೂಲ-ಆಕಾರಕ್ಕೆ ಬಂದು ಅವಳು ಹೇಳಿದಳು, “ಹನುಮಾನ್‌‍, ನೀನು ತುಂಬಾ ಬುದ್ಧಿವಂತ. ನಿನ್ನನ್ನು ಪರೀಕ್ಷಿಸಲು ದೇವತೆಗಳು ನನ್ನನ್ನು ಕಳುಹಿಸಿದ್ದರು. ಶ್ರೀರಾಮನಿಗೆ ನಿನ್ನ ಸೇವೆಯಲ್ಲಿ ಯಶಸ್ವಿಯಾಗು ಎಂದು ಹಾರೈಸುವೆ.”

ಯಾರಾದರೂ ಸವಾಲು ಒಡ್ಡಿದಾಗ ಅದನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕು. ಹನುಮಾನ್‌‍ ತನ್ನ ಧ್ಯೇಯ ಯಾತ್ರೆಗೆ ಯಾವುದೇ ತಡೆ ಉಂಟಾಗದಂತೆ ಸುರಸಾಳನ್ನು ತೃಪ್ತಿಪಡಿಸಿದನು. ಅದೇ ಸರಿಯಾದ ಕ್ರಮ.

ಹನುಮಾನ್‌‍ ಆಕಾಶದಲ್ಲಿ ಹಾರಾಡಲು ಪುನರಾರಂಭಿಸಿದನು. ಆದರೆ ಅವನಿಗೆ ಮುಂದುವರಿಯಲಾಗಲಿಲ್ಲ. ತಾನು ಶಕ್ತಿಯನ್ನು ಕಳೆದುಕೊಳ್ಳುತ್ತಿರುವೆನೆಂದು ಅವನು ಮೊದಲು ಭಾವಿಸಿದನು. ಆದರೆ ಬೃಹದಾಕಾರ ವ್ಯಕ್ತಿಯು ಸಮುದ್ರದೊಳಗಿನಿಂದ ಎದ್ದು ಬಂದಳು. ಅವಳು ಸಿಂಹಿಕ ರಾಕ್ಷಸಿ. ಅವಳಿಗೆ ವಿಶೇಷ ಶಕ್ತಿ ಇತ್ತು ಮತ್ತು ಅವಳು ಹನುಮಾನ್‌‍ ನೆರಳನ್ನು ಹಿಡಿದುಕೊಂಡು ಅವನನ್ನು ತಡೆದಳು. ಅವಳು ಅವನನ್ನು ನುಂಗಲು ತನ್ನ ಬಾಯನ್ನು ದೊಡ್ಡದಾಗಿ ತೆರೆದಳು. ಹನುಮಾನ್‌‍ ಕೂಡ ದೇಹವನ್ನು ವಿಸ್ತರಿಸಿಕೊಂಡನು. ಆದರೆ ಸಂಹಿಕಳ ಬಾಯಿ ಇನ್ನೂ ವಿಸ್ತಾರವಾಗಿರುವುದನ್ನು ಕಂಡು ಸಮಯಪ್ರಜ್ಞೆ ತೋರಿ ತನ್ನ ಶರೀರನ್ನು ಕಿರಿದುಗೊಳಿಸಿದನು ಮತ್ತು ಅವಳ ಬಾಯೊಳಗೆ ಪ್ರವೇಶಿಸಿದನು. ಅನಂತರ ಅವಳ ಎದೆಯನ್ನು ಬಗೆದು ಚೂರು ಚೂರು ಮಾಡಿದನು. ಸಿಂಹಿಕಳು ಸತ್ತು ಬಿದ್ದಳು. ದೇವತೆಗಳು ಹನುಮಾನ್‌‍ ಅನ್ನು ಕೊಂಡಾಡಿದರು.

ಗುರಿ ಸಾಧನೆ

ಈ ರೀತಿ ಹನುಮಾನ್‌‍ ಎಲ್ಲ ಅಡೆತಡೆಗಳನ್ನು ದಾಟಿ ಲಂಕಾನಗರವನ್ನು ತಲಪಿದನು. ನೂರು ಯೋಜನೆಗಳ ಹಾರಾಟದ ಅನಂತರವೂ ಹನುಮಾನ್ಗೆ ಆಯಾಸವಾಗಲಿಲ್ಲ. ಅವನ ಹೃದಯದಲ್ಲಿ ರಾಮನನ್ನು ಕುರಿತು ಪ್ರೀತಿ ತುಂಬಿತ್ತು. ಅವನ ಶರೀರ, ಮನಸ್ಸು ಮತ್ತು ಬುದ್ಧಿ ರಾಮನ ಸೇವೆಯಲ್ಲಿ ಕೇಂದ್ರೀಕೃತವಾಗಿತ್ತು. ಹೀಗಾಗಿ ಆಯಾಸವೆಲ್ಲಿಯದು? ಭಗವಂತನನ್ನು ಪ್ರಸನ್ನಗೊಳಿಸಲು ನಿಸ್ವಾರ್ಥವಾಗಿ ಭಕ್ತಿಸೇವೆಯನ್ನು ಸಲ್ಲಿಸಿದರೆ ಬೇಸರ ಅಥವಾ ಆಯಾಸವಾಗುವುದೇ ಇಲ್ಲ. ತನ್ನ ಈ ಮಹಾನ್‌‍ ಯಾತ್ರೆಯಲ್ಲಿ ಹನುಮಾನ್‌‍ ಅನೇಕ ಅಡೆತಡೆಗಳನ್ನು ಎದುರಿಸದರೂ ಯಶಸ್ವಿಯಾದನು.

ಅನಂತರ ಹನುಮಾನ್‌‍ ಸೀತೆಯನ್ನು ಕಂಡನು ಮತ್ತು ರಾಮನ ಸಂದೇಶವನ್ನು ತಲಪಿಸಿದನು. ಅವನು ಲಂಕಾ ದಹನ ಮಾಡಿದನು. ಶ್ರೀರಾಮನ ಬಳಿಗೆ ಹಿಂದಿರುಗಿ ಸೀತೆಯ ವಿಷಯವನ್ನು ಅರುಹಿದನು. ರಾಮನು ಪ್ರೀತಿಯಿಂದ ಹನುಮಾನ್‌‍ ಅನ್ನು ಆಲಿಂಗಿಸಿಕೊಂಡನು. ಮಹಾನ್‌‍ ಭಕ್ತನಿಗೆ ದೊರೆತ ಅನುಗ್ರಹ ಅದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi