ಸಾಮಾನ್ಯವಾಗಿ, ಕಾಳಸಂತೆ ನಡೆಸುವವರು ಅವಶ್ಯಕತೆಯಿಲ್ಲದಿದ್ದರೂ ಹಣ ಸಂಚಯ ಮತ್ತು ಸಾಮಗ್ರಿಗಳ ಸಂಗ್ರಹವನ್ನು ಹಣದಾಹದಿಂದ, ತಮ್ಮ ಸುಖೋಪಭೋಗಕ್ಕಷ್ಟೇ ಅಲ್ಲದೆ, ತಮ್ಮ ಮುಂದಿನ ಪೀಳಿಗೆಗಾಗಿಯೂ ಮಾಡುತ್ತಾರೆ. ಮಾನವ ಜನ್ಮದ ಉತ್ಕೃಷ್ಟ ಮೌಲ್ಯವನ್ನು ಅರಿಯದ ಇಂತಹ ಭವರೋಗ ಪೀಡಿತರು ಹಣ ಸಂಚಯವನ್ನು ಅನವಶ್ಯಕವಾಗಿ ಮತ್ತು ಅನೈತಿಕವಾಗಿ ಕೇವಲ ಇಂದ್ರಿಯ ತೃಪ್ತಿಗಾಗಿ ಮಾಡುತ್ತಾರೆ. ಇವರನ್ನು ಭಗವದ್ಗೀತೆಯಲ್ಲಿ ಅಸುರರೆಂದು ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಅಸುರರು ದೇವೋತ್ತಮ ಪರಮ ಪುರುಷನಲ್ಲಿ ಶ್ರದ್ಧೆಯಿಲ್ಲದವರು ಮತ್ತು ಅವನ ಅಸ್ತಿತ್ವವನ್ನು ಒಪ್ಪಿಕೊಳ್ಳದವರು.

ಕೇವಲ ಇಂದ್ರಿಯ ತೃಪ್ತಿಗಾಗಿ ಹಣ ಸಂಚಯ ಮಾಡುವ ಇವರು ಆತ್ಮೋದ್ಧಾರವನ್ನು ಲೆಕ್ಕಿಸುವುದಿಲ್ಲ. ಅವರ ಏಕೈಕ ವ್ಯವಹಾರ, ನಿನ್ನೆ ತಮ್ಮ ಖಾತೆಯಲ್ಲಿ ಎಷ್ಟು ಹಣವಿತ್ತು ಮತ್ತು ಇಂದು ಅದು ಎಷ್ಟು ಹೆಚ್ಚಿದೆ ಎನ್ನುವುದು ಮಾತ್ರ ಆಗಿರುತ್ತದೆ. ತಮ್ಮ ಐಶ್ವರ್ಯದಿಂದ ಜೀವನದ ಪರಿಪೂರ್ಣತೆಯನ್ನು ಹೊಂದಿದ್ದೇವೆಂಬ ಭ್ರಮೆಯಲ್ಲಿ, ಇಂದು ಒಬ್ಬ ಶತ್ರುವನ್ನು ಕೊಂದು, ನಾಳೆ ಮಿಕ್ಕವರನ್ನು ಕೊಲ್ಲುತ್ತೇವೆಂದು ಯೋಚಿಸುತ್ತಾರೆ. ಆದರೆ ಅಂತಹ ಅಸುರರು ಯಾವಾಗಲೂ ಪ್ರಕೃತಿಯ ನಿಯಮಗಳಿಗೆ ಮತ್ತು ಕರ್ಮದ ಚಕ್ರಕ್ಕೆ ಒಳಪಟ್ಟಿರುವುದನ್ನು ತಿಳಿದಿರುವುದಿಲ್ಲ. ಇಂತಹವರನ್ನು ನರಾಧಮರೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ಆದ್ದರಿಂದ, ಈ ಅಸುರರು ಭಾಗ್ಯಶಾಲಿಗಳಂತೆ ಕಾಣಿಸಿಕೊಂಡರೂ ವಾಸ್ತವವಾಗಿ ಅತ್ಯಂತ ನತದೃಷ್ಟ ವ್ಯಕ್ತಿಗಳು. ಐಶ್ವರ್ಯವನ್ನು ಭಗವಂತನ ಅಂತರಂಗ ಶಕ್ತಿಯೆಂದೂ, ಎಲ್ಲ ಸಂಪತ್ತಿನ ದೇವತೆಯೆಂದೂ ಪರಿಗಣಿಸಲಾಗಿದೆ. ಲಕ್ಷ್ಮಿಯು ಪರಮ ಪುರುಷನಾದ ನಾರಾಯಣನ ನಿತ್ಯ ಸಂಗಾತಿ. ಆದ್ದರಿಂದ, ನಾರಾಯಣ ಎಲ್ಲಿದ್ದರೂ ಆತನ ನಿತ್ಯ ಸಂಗಾತಿ ಲಕ್ಷ್ಮಿ ಖಂಡಿತವಾಗಿಯೂ ಅಲ್ಲಿ ನೆಲೆಸಿರುತ್ತಾಳೆ. ಆದರೆ, ಎಲ್ಲಿ ನಾರಾಯಣನ ಸಾಕ್ಷಾತ್ಕಾರವಿರುವುದಿಲ್ಲವೋ, ಅಲ್ಲಿ ಲಕ್ಷ್ಮಿಯ ತೋರಿಕೆ ಅಸ್ತಿತ್ವವು ಅವಳ ಮಿಥ್ಯ ಅಸ್ತಿತ್ವದ ಪ್ರತಿನಿಧಿಯಾಗಿರುತ್ತದೆ.

ರಜೋಗುಣ ಮತ್ತು ತಮೋಗುಣದ ಪ್ರಭಾವದಿಂದ ಕಾಳಸಂತೆ ನಡೆಸುವವರು ಭಗವಂತನ ಯೋಜನೆಗಳಿಂದ ಪ್ರಭಾವಿತರಾಗುವುದಿಲ್ಲ. ಸತ್ತ್ವಗುಣದ ಸಂಸ್ಕಾರವಿಲ್ಲದಿರುವ ಕಾರಣ, ಅವರು ರಜೋ ತಮೋಗುಣಗಳ ಫಲವಾದ ಐಶ್ವರ್ಯದ ಆಕಾಂಕ್ಷೆಗಳಿಗೆ ಒಳಗಾಗುತ್ತಾರೆ. ಸತ್ತ್ವಗುಣ ಮಾತ್ರ ಮನುಷ್ಯರಿಗೆ ಸರಿಯಾದ ದೃಷ್ಟಿಕೋನ ಮತ್ತು ಜೀವನದ ಜ್ಞಾನವನ್ನು ಕೊಡಬಲ್ಲದು.
ಸರ್ಕಾರ ಕಾಳಸಂತೆಯನ್ನು ಕೇವಲ ಪೊಲೀಸರ ಕಾರ್ಯಾಚರಣೆಯಿಂದ ತಡೆಗಟ್ಟಲು ಅಥವಾ ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ರಜೋ ತಮೋಗುಣಗಳು ವಾತಾವರಣವನ್ನು ಸಂಪೂರ್ಣವಾಗಿ ಆವರಿಸಿವೆ. ಇಂದಿನ ಪೀಳಿಗೆಯ ಸಾಮಾಜಿಕ ಜೀವನದಲ್ಲಿ ಸತ್ತ್ವಗುಣವು ಪೂರ್ತಿಯಾಗಿ ಹೊರದೂಡಲ್ಪಟ್ಟಿದೆ. ಭಗವದ್ಗೀತೆಯಲ್ಲಿ ಸತ್ತ್ವಗುಣವು ಹೊಂದುವುದರ ಬಗ್ಗೆ ವಿಶದ ಮಾಹಿತಿಯನ್ನು ಒದಗಿಸಲಾಗಿದೆ. ದೈಹಿಕ, ಮಾನಸಿಕ ಮತ್ತು ವಾಚಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಸಾತ್ತ್ವಿಕ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ರೀತಿ ಸತ್ತ್ವ ಗುಣಗಳಿಂದ ಶಿಕ್ಷಿತರಾದ ನಾಯಕರಿಂದ ಈ ಪ್ರಪಂಚವು ಆಳಲ್ಪಟ್ಟಾಗ ಮಾತ್ರ ಲೋಭವನ್ನೊಳಗೊಂಡಂತೆ ಇತರ ಸಾಮಾಜಿಕ ಬೇನೆಗಳನ್ನು ನಿಯಂತ್ರಿಸಿ, ಶಾಂತಿ ಮತ್ತು ಸಮಾಧಾನ ಹೊಂದಲು ಸಾಧ್ಯ.






Leave a Reply