ಕೃಷ್ಣ ಪಾಕಶಾಲೆ
– ಎಸ್.ವಿ.ಗಾಯತ್ರಿ ಶೆಣೈ
ಬಟಾಟೆ ನು ಶಾಕ್
(ಟೊಮ್ಯಾಟೊ ಹಾಗೂ ಗುಜರಾತಿ ಮಸಾಲೆಗಳೊಂದಿಗೆ ಮಾಡಿದ ಆಲೂಗಡ್ಡೆ ಖಾದ್ಯ)

ಬೇಕಾಗುವ ಪದಾರ್ಥಗಳು:
ಸಿಪ್ಪೆ ತೆಗೆದು ಚಿಕ್ಕದಾಗಿ ತುಂಡರಿಸಿದ ಆಲೂಗಡ್ಡೆ – 250 ಗ್ರಾಂ
ಸಾಸಿವೆ – ½ ಚಿಕ್ಕ ಚಮಚ
ಜೀರಿಗೆ – ½ ಚಿಕ್ಕ ಚಮಚ
ಇಂಗಿನ ಪುಡಿ – 2 ಚಿಟಿಕೆ
ಅಚ್ಚ ಮೆಣಸಿನಕಾಯಿ ಪುಡಿ – 1 ಚಿಕ್ಕ ಚಮಚ
ರುಬ್ಬಿದ ಹಸಿಮೆಣಸಿನಕಾಯಿ, ಶುಂಠಿ ಮಸಾಲೆ – ½ ಚಿಕ್ಕ ಚಮಚ
ಧನಿಯಾ – ಜೀರಿಗೆ ಪುಡಿ – 1 ದೊಡ್ಡ ಚಮಚ
ಸಕ್ಕರೆ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪಿನ ಚೂರು – 2 ದೊಡ್ಡ ಚಮಚ
ಅಡಿಗೆ ಎಣ್ಣೆ – 2 ದೊಡ್ಡ ಚಮಚ
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಜೀರಿಗೆ, ಇಂಗಿನ ಪುಡಿ ಒಗ್ಗರಣೆ ಮಾಡಿ. (ಬೇಕಾದರೆ ಒಗ್ಗರಣೆಗೆ ಕರಿಬೇವನ್ನು ಸೇರಿಸಬಹುದು). ಅರಿಶಿನ ಪುಡಿ, ಅಚ್ಚ ಮೆಣಸಿನಕಾಯಿ ಪುಡಿ, ಹಸಿಮೆಣಸಿನಕಾಯಿ – ಶುಂಠಿ ಮಸಾಲೆ ಹಾಕಿ ಸ್ವಲ್ಪ ಹುರಿಯಿರಿ. ಟೊಮ್ಯಾಟೊ ಹೋಳುಗಳನ್ನು ಮಸಾಲೆಯಲ್ಲೇ ಹಾಕಿ ಹುರಿಯಿರಿ.
ಅನಂತರ ಚೂರು ಮಾಡಿದ ಆಲೂಗಡ್ಡೆ ಹೋಳುಗಳನ್ನು ಬೆರೆಸಿ. ಅನಂತರ 2 ಬಟ್ಟಲು ನೀರು, ಸಕ್ಕರೆ ಮತ್ತು ಉಪ್ಪು ಸೇರಿಸಿ. ಮಸಾಲೆಯಲ್ಲಿ ಆಲೂಗಡ್ಡೆ ಬೇಯುವವರೆಗೂ ಮುಚ್ಚಳ ಮುಚ್ಚಿಡಿ. ಬೆಂದ ಆಲೂ ಮಸಾಲೆಗೆ ಧನಿಯಾ ಮತ್ತು ಜೀರಿಗೆ ಪುಡಿ ಹಾಕಿ ಚೆನ್ನಾಗಿ ಬೆರೆಸಿ, ಕೊತ್ತಂಬರಿ ಸೊಪ್ಪಿನ ಚೂರಗಳನ್ನು ಉದುರಿಸಿ, ಅಲಂಕರಿಸಿ. ಇದನ್ನು ಚಪಾತಿ ಅಥವಾ ಗೋಧಿ ರೊಟ್ಟಿ ಜೊತೆ ಶ್ರೀರಾಧಕೃಷ್ಣನಿಗರ್ಪಿಸಿ ಸೇವಿಸುವುದನ್ನು ಮರೆಯಬೇಡಿ.
ಬಾಸುಂದಿ
(ಉತ್ತರ ಭಾರತದ “ರಬ್ಡಿ”ಯಂತೆ ಗಟ್ಟಿ ಹಾಲಿನಿಂದ ಮಾಡುವ ಸಿಹಿ ತಿನಿಸು)

ಬೇಕಾಗುವ ಪದಾರ್ಥಗಳು:
ಗಟ್ಟಿ ಹಾಲು – 1 ಲೀಟರ್
ಸಕ್ಕರೆ – ½ ಬಟ್ಟಲು
ಏಲಕ್ಕಿ ಪುಡಿ – ½ ಚಿಕ್ಕ ಚಮಚ
ಪಿಸ್ತಾ ಚೂರು – 25 ಗ್ರಾಂ
ಬಾದಾಮಿ ಚೂರು – 25 ಗ್ರಾಂ
ಮಾಡುವ ವಿಧಾನ: ನಾನ್ ಸ್ಟಿಕ್ ಪಾತ್ರೆ ಅಥವಾ ದಪ್ಪ ತಳವಿರುವ ಅಗಲವಾದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ. ಕಾಯುತ್ತಿರುವ ಹಾಲು ಅದರ ಅರ್ಧ ಪ್ರಮಾಣದಲ್ಲಿ ಕಡಮೆಯಾಗುವವರೆಗೂ (ಬತ್ತುವವರೆಗೂ) ಸಣ್ಣ ಉರಿಯಲ್ಲಿ ಕುದಿಸುತ್ತಾ, ತಳ ಹತ್ತದಂತೆ ನೋಡಿಕೊಳ್ಳಿ. ಈಗ ಬತ್ತಿದ ಹಾಲಿಗೆ ಸಕ್ಕರೆ ಸೇರಿಸಿ.
ಸಕ್ಕರೆ ಕರಗಿದ ನಂತರ ಹಾಲು ಕುದಿದು ಮತ್ತಷ್ಟು ದಪ್ಪವಾಗುವವರೆಗೂ ತಳ ಹತ್ತದಂತೆ ಕಾಯಿಸಿ. ದಪ್ಪವಾಗಿ “ರಬ್ಡಿ”ಯಂತಾದ ಸಕ್ಕರೆ ಬೆರೆತ ಹಾಲಿಗೆ ಪರಿಮಳಕ್ಕಾಗಿ ಏಲಕ್ಕಿ ಪುಡಿ ಬೆರೆಸಿ. ಈ ಬಾಸುಂದಿ ಮೇಲೆ ಪಿಸ್ತಾ ಹಾಗೂ ಬಾದಾಮಿಯ ಚಿಕ್ಕ ಚಿಕ್ಕ ಚೂರುಗಳನ್ನು ಹಾಕಿ ಅಲಂಕರಿಸಬಹುದು. ಬೇಕಾದಲ್ಲಿ ಕೇಸರಿ ದಳಗಳನ್ನು ಸೇರಿಬಹುದು. ಈಗ ಸಿದ್ಧವಾದ ಬಾಸುಂದಿಯನ್ನು ಶ್ರೀಕೃಷ್ಣನಿಗರ್ಪಿಸಿ ತಿನ್ನುವುದನ್ನು ಮರೆಯದಿರಿ.
ಬಿಂಡಾ ಸಾಂಬಾರಿಯ
(ತೆಂಗಿನಕಾಯಿ ಹಾಗೂ ಕೊತ್ತಂಬರಿ ಮಸಾಲೆ ತುಂಬಿ ಮಾಡಿದ ಬೆಂಡೇಕಾಯಿ ಎಣೆಗಾಯಿ)

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – 250 ಗ್ರಾಂ
ತೆಂಗಿನ ತುರಿ – 6 ದೊಡ್ಡ ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – 6 ದೊಡ್ಡ ಚಮಚ
ಸಕ್ಕರೆ – 3 ಚಿಕ್ಕ ಚಮಚ
ರುಬ್ಬಿದ ಹಸಿಮೆಣಸಿನಕಾಯಿ, ಶುಂಠಿ ಮಸಾಲೆ – 1 ಚಿಕ್ಕ ಚಮಚ
ಅರಿಶಿನ ಪುಡಿ – 1 ಚಿಕ್ಕ ಚಮಚ
ಧನಿಯಾ – ಜೀರಿಗೆ ಪುಡಿ – 2 ಚಿಕ್ಕ ಚಮಚ
ಗರಂ ಮಸಾಲೆ ಪುಡಿ – 1 ಚಿಕ್ಕ ಚಮಚ
ಕರಿ ಎಳ್ಳು – 1 ಚಿಕ್ಕ ಚಮಚ
ಲಿಂಬೆ ರಸ – 2 ದೊಡ್ಡ ಚಮಚ
ಅಡಿಗೆ ಎಣ್ಣೆ – 6 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಇಂಗಿನ ಪುಡಿ – ½ ಚಿಕ್ಕ ಚಮಚ
ಮಾಡುವ ವಿಧಾನ: ಬೆಂಡೆಕಾಯಿಯನ್ನು ಶುಭ್ರವಾದ ತೆಳುಬಟ್ಟೆಯಲ್ಲಿ ಒರೆಸಿಟ್ಟುಕೊಳ್ಳಿ. ಅನಂತರ ಸುಮಾರು ಎರಡು ಇಂಚು ಉದ್ದದಷ್ಟು ಕತ್ತರಿಸಿ ಹೋಳುಗಳನ್ನು ಮಾಡಿ. ಈ ಎರಡು ಇಂಚಿನ ಬೆಂಡೆ ಹೋಳುಗಳನ್ನು ಮಧ್ಯೆ ಚಾಕುವಿನಿಂದ ನಾಲ್ಕೂ ಬದಿಗೂ ಸೀಳಿ. ಸೀಳುವಾಗ ಸಂಪೂರ್ಣವಾಗಿ ಬೆಂಡೆ ಬೇರೆಯಾಗದಂತೆ ಸುಮಾರು ¾ ಭಾಗದಷ್ಟು ಮಾತ್ರ ಸೀಳಿ.
ಒಂದು ಬಾಣಲೆಯಲ್ಲಿ 2 ದೊಡ್ಡ ಚಮಚ ಅಡುಗೆ ಎಣ್ಣೆಯನ್ನು ಬಿಸಿಮಾಡಿ ಇಂಗನ್ನು ಬಿಟ್ಟು ಉಳಿದೆಲ್ಲ ಮಸಾಲೆ ಪದಾರ್ಥ – ತೆಂಗಿನಕಾಯಿ ತುರಿಯನ್ನು ಕಾದ ಬಿಸಿ ಎಣ್ಣೆಗೆ ಬೆರೆಸಿ. ಈ ತೆಂಗಿನ ಮಸಾಲೆಯನ್ನು ಸೀಳಿಟ್ಟ ಬೆಂಡೆಕಾಯಿಯಲ್ಲಿ ತುಂಬಿಟ್ಟುಕೊಳ್ಳಿ. ಅನಂತರ ದಪ್ಪ ತಳದ ಅಗಲವಾದ ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿಮಾಡಿ, ಇಂಗಿನ ಪುಡಿಯನ್ನು ಹಾಕಿ ಒಗ್ಗರಣೆ ಕೊಡಿ.
ಇಂಗಿನ ಒಗ್ಗರಣೆಯಲ್ಲಿ ಮಸಾಲೆ ತುಂಬಿಟ್ಟ ಬೆಂಡೆಕಾಯಿ ಒಂದೊಂದೇ ಇಟ್ಟು ಬೆಂಡೆಕಾಯಿ ಬೇಯುವವರೆಗೂ ತಳ ಹತ್ತದಂತೆ ನೋಡಿಕೊಂಡು ಆಗಾಗ ಮಗಚುತ್ತಿರಿ. ಇದನ್ನೂ ಸಹ ಗೋಧಿರೊಟ್ಟಿ ಅಥವಾ ಚಪಾತಿಯೊಂದಿಗೆ ಶ್ರೀಕೃಷ್ಣನಿಗೆ ಸಮರ್ಪಿಸಿ ಸ್ವೀಕರಿಸಿ.






Leave a Reply