ದೃಢಸಂಕಲ್ಪದ ಆದರ್ಶ ಹನುಮಂತ

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ಲಂಕೆಗೆ ಹೋಗುವಾಗ ಸಾಗರದ ಮೇಲೆ ಮಹಾನ್‌ ಭಕ್ತ ಹನುಮಂತನ ಹಾರಾಟವನ್ನು ಕುರಿತು ಒಂದು ಚಿಂತನೆ.

ವಾಲ್ಮೀಕಿ ರಾಮಾಯಣದ ಅನೇಕ ನಾಟಕೀಯ ದೃಶ್ಯ ಘಟನೆಗಳಲ್ಲಿ ರಾಮ ಭಕ್ತ ಹನುಮಾನ್‌ ಲಂಕೆಗೆ ಹೋಗುವಾಗ ಸಾಗರದ ಮೇಲೆ ನಡೆಸಿದ ಹಾರಾಟವು ಅತ್ಯಂತ ಪ್ರಮುಖವೆನ್ನಿಸಿದೆ. ರಾಕ್ಷಸ ರಾಜ ರಾವಣನು ಸೀತೆಯನ್ನು ಅಪಹರಿಸಿ ಲಂಕಾದಲ್ಲಿ ಬಂಧಿಸಿಟ್ಟಿದ್ದನು. ಈ ವಾಯುಯಾನದ ಸಂದರ್ಭದಲ್ಲಿ ಹನುಮಂತನ ಚಿಂತನೆ ಮತ್ತು ಅನೇಕ ಅಡಚಣೆಗಳನ್ನು ಅವನು ಎದುರಿಸಿದ ರೀತಿಗಳು ನಮಗೆ ನಾವು ನಮ್ಮ ಬದುಕಿನಲ್ಲಿ, ಮುಖ್ಯವಾಗಿ ನಮ್ಮ ಆಧ್ಯಾತ್ಮಿಕ ಬದುಕಿನಲ್ಲಿ ಸವಾಲುಗಳನ್ನು ಎದುರಿಸುವಾಗ ಮಾರ್ಗದರ್ಶನ ನೀಡಬಹುದು.

ಹನುಮಂತನು ಭಾರತದ ಸಮುದ್ರ ತೀರದಿಂದ ಹೊರಟಾಗ ಅವನು ತನ್ನ ಮನಸ್ಸನ್ನು ರಾಮನಲ್ಲಿ ನೆಟ್ಟಿದ್ದನು. ಸೀತೆಗೆ ನೀಡಲು ಗುರುತಿನ ಉಂಗುರವನ್ನು ಕೊಡುವಾಗ ರಾಮನು ದುಃಖಪೂರಿತ, ಆದರೆ ಆಶಯದ ಮಾತುಗಳನ್ನಾಡಿದನು. ಅದು ಹನುಮಂತನಿಗೆ ಸಮುದ್ರದ ಮೇಲೆ ಹಾರುವಾಗ ನೆನಪಾಯಿತು. ಸೀತೆಗಾಗಿ ಶೋಧಿಸಲು ನಾಲ್ಕೂ ದಿಕ್ಕಿಗೆ ತಂಡಗಳನ್ನು ಕಳುಹಿಸಿದಾಗ ರಾಮನು ಅಂತಹ ಯಾವುದೇ ಗುರುತಿನ ವಸ್ತುವನ್ನು ಬೇರೆ ಯಾರಿಗೂ ನೀಡಿರಲಿಲ್ಲ. ಹನುಮಂತನು ಸೀತೆಯನ್ನು ಖಂಡಿತ ಕಂಡು ಹಿಡಿಯುವನೆಂಬ ವಿಶ್ವಾಸವು ರಾಮನು ಅವನಿಗೆ ನೀಡಿದ ಆ ಉಂಗುರದಲ್ಲಿ ಪ್ರತಿಬಿಂಬಿಸುತ್ತದೆ. ರಾಮನು ತನ್ನಿಲ್ಲಿಟ್ಟರುವ ವಿಶ್ವಾಸವನ್ನು ನೆನಪು ಮಾಡಿಕೊಳ್ಳುತ್ತ ಅವನು ಎಷ್ಟು ವೇಗವಾಗಿ ಸಾಧ್ಯವೋ ಅಷ್ಟು ವೇಗವಾಗಿ ಶ್ರೀ ಲಂಕಾವನ್ನು ಮುಟ್ಟಲು ತನಗೆ ಅದು ಹೆಚ್ಚಿನ ಶಕ್ತಿಯನ್ನು ಕೊಡುತ್ತಿದೆ ಎಂದು ಭಾವಿಸಿದನು. ತಮ್ಮ ದೇವರಿಗೆ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾನೆಂದು ವಾಯುದೇವನು ಪುತ್ರ ಹನುಮಂತನಿಗೆ ನೆರವಾಗಲು ಬಯಸಿದನು. ಅದರಂತೆ ಹನುಮಂತನು ವೇಗವಾಗಿ ಹಾರಲು ಸಾಧ್ಯವಾಗುವಂತೆ ಅವನ ಹಿಂದೆ ಗಾಳಿ ಬಲವಾಗಿ ಬೀಸಿತು.

ಹಾರಾಡುತಿದ್ದಂತೆಯೇ ಹನುಮಂತನಿಗೆ ತನ್ನ ಕೆಳಗಿನ ವಿಶಾಲ ಸಮುದ್ರವನ್ನು ಕಂಡು ರಾಮ ನಾಮದ ಶಕ್ತಿಯ ನೆನಪಾಯಿತು. ಭಗವಂತನ ಪವಿತ್ರ ನಾಮಗಳನ್ನು ಜಪಿಸುವುದರಿಂದ ಲೌಕಿಕ ಅಸ್ತಿತ್ವದ ಸಾಗರವನ್ನೇ ದಾಟಬಹುದೆಂದು ಧರ್ಮಗ್ರಂಥಗಳು ಸಾರುತ್ತವೆ. ಇನ್ನು ಆ ಭೌತಿಕ ಅಸ್ತಿತ್ವದಲ್ಲಿ ಇರುವ ಒಂದು ಸಮುದ್ರವನ್ನು ದಾಟುವುದಕ್ಕೆ ಕಷ್ಟವೇನಿದೆ?

ತನ್ನ ತಂಡದ ಇತರ ವಾನರರು ತನ್ನ ಯಶಸ್ಸಿಗಾಗಿ ಹೇಗೆ ಪ್ರಾರ್ಥನೆ ಮಾಡುತ್ತಿದ್ದಾರೆ ಮತ್ತು ತಪಸ್ಸು ನಡೆಸುತ್ತಿದ್ದಾರೆ ಎಂದು ಹನುಮಂತನು ಸಾಗರದಲ್ಲಿನ ಜಲಚರಗಳನ್ನು ನೋಡುತ್ತ ಯೋಚಿಸಿದನು. ಅವನು ಹಿಂದಿರುಗಿ ಬರುವವರೆಗೂ ತಾವು ತಪಸ್ಯೆ ಮಾಡುತ್ತಿರುವುದಾಗಿ ಅವರು ಶ್ರೀ ಲಂಕಾಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹನುಮಂತನಿಗೆ ತಿಳಿಸಿದ್ದರು. ಒಂಟಿ ಕಾಲಿನ ಮೇಲೆ ನಿಂತು ಮಾಡುವ ತಮ್ಮ ತಪಸ್ಸಿನ ಫಲವು ಅವನಿಗೆ ಅವನ ಗುರಿ ಮುಟ್ಟಲು ಸಹಾಯ ಮಾಡಲೆಂದು ಅವರು ಪ್ರಾರ್ಥಿಸುತ್ತಿದ್ದರು. ಈ ಯೋಚನೆಗಳೆಲ್ಲ ಅವನ ಕ್ರಿಯೆಗೆ ಶಕ್ತಿಯನ್ನು ತುಂಬುತ್ತಿತ್ತು. ಆಗ ಅವನು ತನ್ನ ಗುರಿಯಾದ ಶ್ರೀ ಲಂಕಾದತ್ತ ವೇಗವಾಗಿ ಹಾರುತ್ತಿದ್ದ.

ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ನಮಗೆ ಸವಾಲೊಡ್ಡುವ ಯಾವುದನ್ನೇ ಯಾವಾಗ ಮಾಡಿದರೂ ನಮ್ಮ ಯೋಚನೆಗಳು ನಮ್ಮನ್ನು ಬೆಂಬಲಿಸಬೇಕೇ ವಿನಾ ವಿಘ್ನ ಉಂಟುಮಾಡಬಾರದು. ನಮ್ಮನ್ನು ನಿರುತ್ಸಾಹಗೊಳಿಸುವ ಯೋಚನೆಗಳನ್ನು ಬಿಟ್ಟು, ನಮ್ಮನ್ನು ಹುರಿದುಂಬಿಸುವ ವಿಚಾರಗಳನ್ನು ಕುರಿತು ಧ್ಯಾನಿಸಿದರೆ ಅಂತಹ ಯೋಚನೆಗಳು ನಮ್ಮ ಕಾರ್ಯಗಳಿಗೆ ಸಹಾಯವಾಗುತ್ತವೆ.

ಭರವಸೆ ನಮ್ಮಲ್ಲಿರುವ ಅಗತ್ಯವಿದೆ. ನಮಗೆ ಸ್ಫೂರ್ತಿ ನೀಡುವ ವಿಷಯಗಳನ್ನು ಅವಲೋಕಿಸಿದರೆ, ವಿಷಯಗಳು ನಮ್ಮಲ್ಲಿ ನಿರುತ್ಸಾಹ ಉಂಟುಮಾಡುವುದಿಲ್ಲ, ನಮ್ಮ ಚಿಂತನೆಯು ನಮ್ಮ ಕ್ರಿಯೆಗಳ ಜೊತೆಯಲ್ಲಿ ಕೆಲಸ ಮಾಡಬಹುದು.

ಹನುಮಾನ್‌ ಸಾಗರದ ಮೇಲೆ ವೇಗವಾಗಿ ಹಾರುತ್ತಿದ್ದಾಗ ತನ್ನ ಮುಂದೆ ಪರ್ವತವೊಂದು ಮೇಲೇಳುತ್ತಿರುವಂತೆ ಅವನಿಗೆ ಕಂಡಿತು. ತಾನು ರಾಮನ ತಂದೆ ದಶರಥನ ಮಿತ್ರ ಎಂದು ಸಾಕಾರಗೊಂಡಿದ್ದ ಪರ್ವತ, ವೃದ್ಧ ಮೈನಕನು ಹೇಳಿದನು. ರಾಮನ ಸೇವಕ, ವಿಶೇಷವಾಗಿ ಹನುಮಂತನಂತಹ ನಿಷ್ಠಾವಂತ ಸೇವಕನಿಗೆ ಸೇವೆ ಸಲ್ಲಿಸುವ ಮೂಲಕ ತಾನು ರಾಮನಿಗೆ ಸೇವೆ ಸಲ್ಲಿಸಲು ಬಯಸಿರುವುದಾಗಿ ಮೈನಕನು ನುಡಿದನು. ಕಷ್ಟದ ಹಾರಾಟವನ್ನು ಮುಂದುವರಿಸುವ ಮುನ್ನ ಪರ್ವತದ ಮೇಲೆ ವಿಶ್ರಮಿಸಲು ಮೈನಕನು ಹೇಳಿದನು.

ರಾಮನಿಗೆ ಸೇವೆ ಸಲ್ಲಿಸಬೇಕೆಂಬ ಮೈನಕನ ಅಪೇಕ್ಷೆಯೊಂದಿಗೆ ವಿನಿಮಯ ಮಾಡಿಕೊಳ್ಳುವುದು ಹನುಮಂತನಿಗೆ ತಪ್ಪೆನಿಸಲಿಲ್ಲ. ಬದಲಿಗೆ ಅದು ಸರಿಯಾದ ನಡವಳಿಕೆ. ಭಕ್ತರು ಎಲ್ಲರೊಂದಿಗೂ ಸೌಹಾರ್ದಯುತವಾಗಿರಬೇಕು ಎನ್ನುವ ನಿರೀಕ್ಷೆ ಉಂಟು. ಇನ್ನು ಇತರ ಭಕ್ತರೊಂದಿಗಿನ ವಿಷಯದ ಬಗೆಗೆ ಹೇಳುವುದೇನು? ಆದರೆ ಹನುಮಾನ್‌ಗೆ ವಿಶ್ರಾಂತಿಗಿಂತ ಬಹಳ ದೊಡ್ಡ ಧ್ಯೇಯವಿತ್ತು. ಸೀತೆಯೊಂದಿಗಿನ ಅಗಲಿಕೆಯಿಂದ ರಾಮನೆಷ್ಟು ದುಃಖದಲ್ಲಿರವನೆಂದು ಅವನಿಗೆ ತಿಳಿದಿತ್ತು. ಅದೇ ರೀತಿ ಸೀತೆ ಕೂಡ ಅಗಲಿಕೆಯಿಂದ ಎಷ್ಟು ದುಃಖಿತಳಾಗಿದ್ದಾಳೆ ಎನ್ನುವುದನ್ನು ಅವನು ಊಹಿಸಿಕೊಳ್ಳಬಲ್ಲವನಾಗಿದ್ದ. ಈಗ ಸೀತಾದೇವಿಯ ಬಳಿಗೆ ಹೋಗಲು ಇಷ್ಟು ಸಮೀಪದಲ್ಲಿರುವಾಗ ಅವನಿಗೆ ಒಂದು ಕ್ಷಣವನ್ನೂ ವ್ಯರ್ಥ ಮಾಡಲು ಇಷ್ಟವಿರಲಿಲ್ಲ.

ಅದೂ ಅಲ್ಲದೆ, ಶೋಧನಾ ತಂಡಗಳು ಒಂದು ತಿಂಗಳಿನಲ್ಲಿ ಹಿಂದಿರುಗಬೇಕೆಂದು ಶೋಧನಾ ಕಾರ್ಯದ ಮೇಲ್ವಿಚಾರಣೆ ವಹಿಸಿದ್ದ ವಾನರ ರಾಜ ಸುಗ್ರೀವನು ಆದೇಶಿಸಿದ್ದ. ಹನುಮಂತ ಮತ್ತು ಅವನ ತಂಡ ಅದಕ್ಕಿಂತ ಹೆಚ್ಚಿನ ಸಮಯದಿಂದ ಶೋಧನಾ ಕಾರ್ಯದಲ್ಲಿ ನಿರತವಾಗಿತ್ತು. ಇನ್ನಷ್ಟು ವಿಳಂಬವಾಗುವಂತಹುದನ್ನು ಮಾಡಲು ಅವನಿಗೆ ಇಷ್ಟವಿರಲಿಲ್ಲ. ಆದರೂ ಮೈನಕನ ಸೇವೆಯನ್ನು ತಿರಸ್ಕರಿಸುವ ಮನಸ್ಸೂ ಇರಲಿಲ್ಲ. ಪುಣ್ಯಜೀವಿಯಾದ ಮೈನಕನು ತನ್ನಂತೆ ರಾಮಭಕ್ತನಲ್ಲವೇ?

ಆದುದರಿಂದ ಹನುಮಂತನು ತನ್ನ ಹಾರಾಟದ ಪಥದಿಂದ ಸ್ವಲ್ಪ ಕೆಳಗೆ ಬಂದನು ಮತ್ತು ಗೌರವ ಸೂಚಿಸಲು ಪರ್ವತವನ್ನು ಸ್ಪರ್ಶಿಸಿದನು. ಪುನಃ ಮೇಲೇಳುತ್ತ ತನ್ನ ತುರ್ತು ಸೇವೆಯ ಅಗತ್ಯವನ್ನು ತಿಳಿಸಿ ತನ್ನ ಯಾತ್ರೆ ಮುಂದುವರಿಸಲು ಅನುಮತಿ ಕೋರಿದನು. ರಾಮನಿಗೆ ಅವಿಶ್ರಾವಂತವಾದ ಸೇವೆಯನ್ನು ಸಲ್ಲಿಸಬೇಕೆಂಬ ಹನುಮಂತನ ಕಾತರತೆಯನ್ನು ಕಂಡು ಮೈನಕನು ಸಂಪ್ರೀತನಾದನು.

ಯಾರಾದರೂ ಭಕ್ತಿಯಿಂದ ಅತ್ಯಲ್ಪವಾದುದನ್ನು ಅರ್ಪಿಸಿದರೂ ಭಗವಂತನು ಅದನ್ನು ಸ್ವೀಕರುಸುತ್ತಾನೆಂದು ಭಗವದ್ಗೀತೆಯಲ್ಲಿ (9.26) ತಿಳಿಸಲಾಗಿದೆ. ಏಕೆಂದರೆ ಪ್ರಭುವು ಭಕ್ತಿಯಿಂದ ಅರ್ಪಿಸಿದ್ದನ್ನು ಮಾತ್ರ ನೋಡುತ್ತಾನೆ. ಭಗವಂತನ ಭಕ್ತನಾಗಿ ಹನುಮಾನ್‌ ಮೈನಕನ ಭಕ್ತಿಯನ್ನು ಸ್ವೀಕರಿಸಿದನು. ಅದೇ ವೇಳೆ ಆಚರಣೆಯಲ್ಲಿ ತನ್ನ ಸೇವೆಯು ವಿಳಂಬವಾಗದಂತೆಯೂ ನೋಡಿಕೊಂಡನು. ಹೀಗೆ ಹನುಮಾನ್‌ ಶಿಷ್ಟಾಚಾರವನ್ನೂ ಗೌರವಿಸಿದನು ಮತ್ತು ತನ್ನ ಉದ್ದೇಶದಲ್ಲಿ ಮನಸ್ಸನ್ನೂ ನೆಟ್ಟನು.

ನಾವು ಭಗವಂತನಿಗೆ ತುಂಬ ಮುಖ್ಯವಾದ ಮತ್ತು ಕಷ್ಟವಾದ ಸೇವೆಯನ್ನು ಸಲ್ಲಿಸುತ್ತಿರುವಾಗ, ನಮಗೆ ಸಹಾಯ ಮಾಡಲು ಬಯಸುವವರು ಸೌಕರ್ಯಗಳನ್ನು ನೀಡಬಹುದು. ನಮ್ಮ ಕಠಿಣ ಶ್ರಮಕ್ಕೆ ಸೂಕ್ತವಾದ ಫಲವೆಂದು ನಾವು ಆ ಸೌಲಭ್ಯಗಳನ್ನು ಆನಂದಿಸುವ ಒಲವು ತೋರಬಹುದು. ಆದರೆ ನಾವು ನಮ್ಮ ಉದ್ದೇಶ, ಧ್ಯೇಯವನ್ನು ಆದ್ಯತೆಯಲ್ಲಿಟ್ಟರೆ, ನಾವು ಆ ಸೌಲಭ್ಯಗಳಿಂದ ಪ್ರಭಾವಿತರಾಗುವುದಿಲ್ಲ. ಅದೇ ವೇಳೆ ತದ್ವಿರುದ್ಧ ಮಾರ್ಗ ಹಿಡಿಯುವುದರ ಬಗೆಗೂ ಎಚ್ಚರದಿಂದ ಇರಬೇಕು. ನಮ್ಮ ತ್ಯಾಗದ ಪ್ರದರ್ಶನವಾಗಿ ಆ ಸೌಲಭ್ಯಗಳನ್ನು ನಿರಾಕರಿಸುವ ಪ್ರೇರಣೆಯೂ ಆಗಬಹುದು. ಹನುಮಂತನ ಉದಾಹರಣೆಯು ನಮಗೆ ಸೌಜನ್ಯವಾಗಿ ಇರಬೇಕೆನ್ನುವುದನ್ನು ನೆನಪಿಸುತ್ತದೆ. ಇಲ್ಲ ಎಂದು ಹೇಳುವಾಗಲೂ ಅವರ ಸೇವೆಯ ಉದ್ದೇಶವನ್ನು ಮೆಚ್ಚಬೇಕು.

ಯಾವ ಹೋರಾಟ?

ಹನುಮಂತನು ಹಾರುತ್ತಿದ್ದಾಗ, ಅವನು ಬೃಹದಾಕಾರದ ಜೀವಿಯನ್ನು ನೋಡಿದನು. ತಾನು ರಾಕ್ಷಸಿ ಸುರಸ ಎಂದು ಅವಳು ತನ್ನ ಪರಿಚಯ ಮಾಡಿಕೊಂಡಳು. ವಾಸ್ತವವಾಗಿ ಅವಳು ದೇವತೆ, ನಾಗರ ತಾಯಿ ಮತ್ತು ಬ್ರಹ್ಮನ ಮೂಲಜನಕ ಪುತ್ರ ದಕ್ಷನ ಪುತ್ರಿ. ಹನುಮಂತನನ್ನು ಪರೀಕ್ಷಿಸಲು ದೇವತೆಗಳು ಅವಳಿಗೆ ಆದೇಶಿಸಿದ್ದರು. ಮುಖ್ಯವಾಗಿ ಹನುಮಂತನ ಶಕ್ತಿ ಮತ್ತು ಬುದ್ಧಿಯನ್ನು ಅವಳು ಪರೀಕ್ಷಿಸಬೇಕಾಗಿತ್ತು. ಶ್ರೀ ಲಂಕಾದಲ್ಲಿ ಯಶಸ್ವಿಯಾಗಲು ಅವನಿಗೆ ಈ ಎರಡೂ ಸಂಪನ್ಮೂಲಗಳ ಅಗತ್ಯವಿತ್ತು.

ತಾನು ಹನುಮಂತನನ್ನು ಭಕ್ಷಿಸುವುದಾಗಿ ಸುರಸ ಹೇಳಿದಳು. ಈ ಪ್ರದೇಶದಲ್ಲಿ ಹೋಗುವ ಜೀವಿಯು ಅವಳ ಬಾಯಿಯನ್ನು ಪ್ರವೇಶಿಸಬೇಕು ಎನ್ನುವ ಅನುಗ್ರಹವು ಬ್ರಹ್ಮನಿಂದ ದೊರೆತಿರುವುದರಿಂದ ಯಾರಿಗೂ ಪಾರಾಗುವುದು ಸಾಧ್ಯವಿಲ್ಲ ಎಂದು ಅವಳು ಹೇಳಿದಳು.

ದೊಡ್ಡದಾಗಿ ತೆರೆದಿದ್ದ ಬಾಯಿಯ ಈ ಭಯಾನಕ ರಾಕ್ಷಸಿಯನ್ನು ಕಂಡಾಗ ಹನುಮಾನ್‌ ಮೊದಲು ಅವಳ ಮೇಲೆ ಆಕ್ರಮಣ ಮಾಡುವವನಿದ್ದನು. ಆದರೆ ಅವಳು ಮಾತನಾಡಲಾರಂಭಿಸಿದಾಗ ಅವನು ತನ್ನ ಕಾರ್ಯ ವಿಧಾನವನ್ನು ಬದಲಿಸಿದ. ಸೀತೆಗೆ ರಾಮನ ಸಂದೇಶವನ್ನು ನೀಡಿ ಹಿಂದಿರುಗುವಾಗ ಅವಳ ಬಾಯಿಯನ್ನು ಪ್ರವೇಶಿಸುವುದಾಗಿ ಅವನು ಮನವಿ ಮಾಡಿಕೊಂಡನು. ಅವಳು ಮಣಿಯಲಿಲ್ಲ. ಅವನಿಗೆ ಅಗತ್ಯವಾದಷ್ಟು ಅವಳು ತನ್ನ ಬಾಯಿಯನ್ನು ತೆರೆದರೆ ತಾನು ಅದರೊಳಗೆ ಪ್ರವೇಶಿಸುವುದಾಗಿ ಅವನು ಹೇಳಿದನು. ಅವನು ತನ್ನ ಆಕಾರವನ್ನು ಹೆಚ್ಚಿಸಿಕೊಳ್ಳತೊಡಗಿದಾಗ ಅವಳೂ ಬಾಯಿಯನ್ನು ಹಿಗ್ಗಿಸಿಕೊಂಡಳು. ಇಬ್ಬರೂ ತಮ್ಮ ಆಕಾರ ಬದಲಾವಣೆ ಸಾಮರ್ಥ್ಯವನ್ನು ತೋರಿದರು.

ಈ ವಿಸ್ತರಣೆ ಸ್ಪರ್ಧೆಯು ಸುಮ್ಮನೆ ಮುಂದುವರಿಯುತ್ತಿದೆ ಎನ್ನುವುದನ್ನು ಕಂಡುಕೊಂಡಾಗ, ಹನುಮಂತನು ತನ್ನ ತಂತ್ರವನ್ನು ಬದಲಿಸಿದನು. ಅವನು ತತ್‌ಕ್ಷಣ ತನ್ನ ಆಕಾರವನ್ನು ಕುಗ್ಗಿಸಿಕೊಂಡು ಅವಳ ಬಾಯಿಯನ್ನು ಪ್ರವೇಶಿಸಿದನು ಮತ್ತು ಅವಳು ತನ್ನ ಬಾಯಿಯನ್ನು ಮುಚ್ಚುವುದರೊಳಗಾಗಿ ಹೊರಬಂದನು. ಅನಂತರ ಅವಳ ಮುಂದೆ ಕೈಜೋಡಿಸಿ ನಿಂತು, ತಾನು ಬ್ರಹ್ಮನ ವರವನ್ನು ಗೌರವಿಸಿರುವುದರಿಂದ ಮುಂದುವರಿಯಲು ಅವಳು ಅನುಮತಿ ನೀಡಬೇಕೆಂದು ಹೇಳಿದನು. ಪ್ರಸನ್ನಗೊಂಡ ಅವಳು ತನ್ನ ನಿಜವಾದ ಗುರುತು ಮತ್ತು ಉದ್ದೇಶವನ್ನು ಹೊರಗೆಡಹಿದಳು. ಅವನನ್ನು ಅನುಗ್ರಹಿಸಿ ಕಳುಹಿಸಿದಳು.

ಹನುಮಾನ್‌ ಈ ರೀತಿ ದೇವತೆಗಳ ಪರೀಕ್ಷೆಯಲ್ಲಿ ಉತ್ತೀರ್ಣನಾದನು. ಅವನು ತನ್ನ ದೇಹವನ್ನು ವಿಸ್ತರಿಸಿಕೊಳ್ಳುತ್ತ ಬಲವನ್ನು ಪ್ರದರ್ಶಿಸಿದನು. ತನ್ನ ಉದ್ದೇಶದ ಪಟ್ಟು ಸಡಿಲಿಸದೆ ಬ್ರಹ್ಮನ ವರವನ್ನೂ ಗೌರವಿಸಿದನು.

ಹನುಮಂತನು ಇಲ್ಲಿ ತನ್ನ ಹೋರಾಟವನ್ನು ಬುದ್ಧಿವಂತಿಕೆಯಿಂದ ಆಯ್ಕೆಮಾಡಿಕೊಂಡಿದ್ದಾನೆ. ಒಬ್ಬ ಯೋಧನಾಗಿ ಅವನು ಸುರಸಾಳ ಸವಾಲನ್ನು ಹೋರಾಟದ ಪ್ರಚೋದನೆಯಾಗಿ ನೋಡಬಹುದಿತ್ತು. ಆದರೆ ಅವನು ಬುದ್ಧಿವಂತಿಕೆಯನ್ನು ತೋರಿದನು. ಬಹುಶಃ ಅಂತ್ಯ ಕಾಣದ ಸಮರದಲ್ಲಿ ಭಾಗಿಯಾಗುವ ಬದಲು ಅವನು ತನ್ನ ಆಕಾರವನ್ನು ಕುಗ್ಗಿಸಿಕೊಳ್ಳುವ ವಿನಯತೆಯ ನಿಲುವು ತಾಳಿದನು. ಅನಂತರ ತನ್ನ ಧ್ಯೇಯದಲ್ಲಿ ಮುಂದುವರಿದನು. ಹನುಮಾನ್‌ಗೆ ತನ್ನ ಶ್ರೇಷ್ಠತೆಯನ್ನು ಸಾಬೀತು ಪಡಿಸುವುದಕ್ಕಿಂತ ತನ್ನ ಧ್ಯೇಯವನ್ನು ಸಾಕಾರಗೊಳಿಸುವುದು ಮುಖ್ಯವಾಗಿತ್ತು.

ನಾವು ಕೂಡ ನಮ್ಮ ಹೋರಾಟವನ್ನು ಆಯ್ಕೆ ಮಾಡಿಕೊಳ್ಳುವಾಗ ಅದೇ ರೀತಿ ಬುದ್ಧಿವಂತರಾಗಬೇಕು. ಭಗವಂತನಿಗೆ ಸಲ್ಲಿಸುವ ಶುದ್ಧಭಕ್ತಿಯ ಗುರಿಯತ್ತ ಸಾಗುವಾಗ ಉದ್ಭವಿಸಬಹುದಾದ ಹೋರಾಟಗಳ ಮಧ್ಯೆ ನಾವು ಯಾವುದನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ಬಿಟ್ಟುಬಿಡಬೇಕು ಎನ್ನುವುದರ ಬಗೆಗೆ ವಿವೇಚನೆ ತೋರುವ ಅಗತ್ಯವಿದೆ. ನಮ್ಮ ಸುತ್ತಮುತ್ತ ಅನೇಕ ಕೆಡುಕುಗಳಿರಬಹುದು. ಅವುಗಳನ್ನೆಲ್ಲ ಸರಿಪಡಿಸಬೇಕೆಂದೂ ನಮಗನ್ನಿಸಬಹುದು. ಆದರೆ ನಾವು ಸೀಮಿತ ಸಮಯ, ಶಕ್ತಿ ಮತ್ತು ಸಂಪನ್ಮೂಲದ ಸೀಮಿತ ಜೀವಿಗಳು. ನಾವು ನಮ್ಮ ಮುಂದೆ ಬರುವ ಪ್ರತಿಯೊಂದಕ್ಕೂ ಹೋರಾಟ ಮಾಡಲು ಬಯಸಿದರೆ, ನಾವು ಕೊನೆಯೇ ಇಲ್ಲದಂತೆ ಹೋರಾಡುತ್ತಿರುತ್ತೇವೆ, ಸಂಪೂರ್ಣವಾಗಿ ಬರಿದಾಗುತ್ತೇವೆ, ನಮ್ಮ ಭಕ್ತಿಯನ್ನು ಪೋಷಿಸಲು ಬಳಸಬಹುದಾಗಿದ್ದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತೇವೆ.

ಉದಾಹರಣೆಗೆ ನಮ್ಮ ಪ್ರೀತಿಪಾತ್ರರೊಂದಿಗೆ ಏನೋ ಚರ್ಚಿಸುತ್ತಿದ್ದೇವೆ ಎಂದುಕೊಳ್ಳಿ. ಅಂತಹ ಮುಖ್ಯವಲ್ಲದ ವಿಷಯವನ್ನು ಕುರಿತು ಬಿಸಿಬಿಸಿ ಚರ್ಚೆ ಮಾಡುತ್ತೇವೆ. ಅಂತಹ ಸಮಯದಲ್ಲಿ ಮುಖಾಮುಖಿಯಲ್ಲಿ ಸಿಕ್ಕಿಕೊಳ್ಳುವ ಬದಲು ನಾವು ಮಾನಸಿಕವಾಗಿ ಒಂದು ಹೆಜ್ಜೆಯನ್ನು ಹಿಂದಕ್ಕೆ ಇಡಬೇಕು ಮತ್ತು ಆದ್ಯತೆಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಬಾಂಧವ್ಯಗಳು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ನೆರವಾಗಬೇಕು ಮತ್ತು ಅವರು ಯಾವುದೋ ತಾತ್ಕಾಲಿಕ ವಿಷಯಗಳಿಗಿಂತ ಹೆಚ್ಚಿನವು. ನಮ್ಮ ಆಧ್ಯಾತ್ಮಿಕ ಯಾತ್ರೆಯ ಸಂದರ್ಭದಲ್ಲಿ ನಮ್ಮ ಕುಟುಂಬ, ಸ್ನೇಹಿತರು, ಮತ್ತು ಸಹವರ್ತಿಗಳಿಗೆ ನಮ್ಮ ಪ್ರೀತಿಯು ನಮ್ಮನ್ನು ಪ್ರತಿಯೊಂದು ವಾದದಲ್ಲಿಯೂ ಸರಿ ಎನ್ನುವ ಅಗತ್ಯದಿಂದ ಮುಕ್ತಗೊಳಿಸಬೇಕು.

ಅಹಂಗಳ ಸಮರಕ್ಕೆ ಅಂತ್ಯವಿಲ್ಲ ಎನ್ನುವುದು ತಿಳಿದಿರುವುದರಿಂದ ನಾವು ವಿನಯಶೀಲ ನಿಲುವು ತಾಳಬೇಕು. ನಮ್ರತೆ ಎಂದರೆ ನಮ್ಮನ್ನು ತುಳಿತಕ್ಕೆ ಒಡ್ಡಿಕೊಳ್ಳುವುದು ಎಂದು ಅರ್ಥವಲ್ಲ. ನಮ್ಮ ಉದ್ದೇಶಗಳ ದಾರಿಯಲ್ಲಿ ನಮ್ಮ ಅಹಂ ಅಡ್ಡಿಯಾಗಬಾರದು ಎಂದು ಅರ್ಥ.

ತೆರೆದ ಬಾಗಿಲು

ಹಾರುತ್ತಿದ್ದ ಹನುಮಾನ್‌ಗೆ ದಿಢೀರನೆ ಶಕ್ತಿಹೀನನಾದೆನೆನ್ನಿಸಿತು. ತನ್ನೆಲ್ಲ ಬಲವನ್ನು ಕ್ರೋಡೀಕರಿಸಿಕೊಂಡರೂ ಅವನಿಗೆ ಮುಂದಕ್ಕೆ ಚಲಿಸಲಾಗಲಿಲ್ಲ. ಕೆಳಗೆ ನೋಡಿದಾಗ ಅಲ್ಲಿ ಅವನಿಗೆ ವಿಕಾರ ರೂಪದ ರಾಕ್ಷಸಿ, ಸಿಂಹಿಕ ಕಂಡು ಬಂದಳು. ಅವಳು ಅವನತ್ತ ನೋಡುತ್ತ ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತಿದ್ದಳು. ಅವಳು ಅತೀಂದ್ರಿಯ ಶಕ್ತಿಯ ಮೂಲಕ ತನ್ನ ಛಾಯೆಯಿಂದ ನನ್ನನ್ನು ವಶಪಡಿಸಿಕೊಂಡಿದ್ದಾಳೆ ಎನ್ನುವುದು ಹನಮಂತನಿಗೆ ಅರ್ಥವಾಯಿತು. ತನ್ನ ಪ್ರಗತಿಯನ್ನು ತಡೆಯುವುದೇ ಅವಳ ಉದ್ದೇಶ ಎನ್ನುವುದೂ ಅವನಿಗೆ ತಿಳಿಯಿತು. ಅವನು ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಅವಳು ಅವನನ್ನು ಬಾಯಿ ತೆರೆದುಕೊಂಡು ತನ್ನತ್ತ ಎಳೆದುಕೊಳ್ಳತೊಡಗಿದಳು. ಅವನನ್ನು ಕಡಿದು ತಿನ್ನುವುದು ಅವಳ ಉದ್ದೇಶವಾಗಿತ್ತು.

ಹನುಮಾನ್‌ ಅದ್ಭುತ ಚಿತ್ತಸ್ಥೈರ್ಯವನ್ನು ತೋರಿದನು. ಅವಳು ಅವನನ್ನು ಎಳೆಯುತ್ತಿದ್ದಾಗಿನ ಕ್ಷಣವನ್ನು ಬಳಸಿಕೊಂಡು ಅವನು ಅವಳ ಬಾಯೊಳಗೆ ಪ್ರವೇಶಿಸಿಬಿಟ್ಟನು. ಅವಳಿಗೆ ಏನಾಗುತ್ತಿದೆ ಎನ್ನುವುದು ಅರ್ಥವಾಗುವ ವೇಳೆಗೆ ಅವನು ಅವಳ ಉದರದ ಆಳಕ್ಕೆ ಹೋಗಿ ಅಲ್ಲಿಂದಲೇ ಆಕ್ರಮಣ ಮಾಡಿದನು. ಕೊನೆಗೆ ಅವಳ ಉದರವನ್ನು ಹರಿಯುತ್ತ ಹೊರಗೆ ಬಂದನು. ಕಿಂಚಿತ್ತೂ ಗಾಯಗೊಳ್ಳದೆ ಅವನು ಜಯಶಾಲಿಯಾದನು. ರಾಕ್ಷಸಿಯು ಕಿರುಚುತ್ತ ಸಾಗರದೊಳಗೆ ಬೀಳುತ್ತಿದ್ದಂತೆ ಹನುಮಂತನು ತನ್ನ ಹಾರಾಟವನ್ನು ಮುಂದುವರಿಸಿದನು.

ತಮ್ಮ ಅಸೂಯೆಗೆ ಕಾರಣರಾದ ವ್ಯಕ್ತಿಗಳನ್ನು ನಾಶಪಡಿಸಲು ಪ್ರಯತ್ನಿಸುವ ಜನರನ್ನು ಸಿಂಹಿಕ ಪ್ರತಿನಿಧಿಸುತ್ತಾಳೆ. ಸಿಂಹಿಕಳು ಹನುಮಂತನ ಛಾಯೆಯನ್ನು ಹಿಡಿದುಕೊಂಡಂತೆ, ಅಸೂಯೆ ಉಳ್ಳ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ವ್ಯಕ್ತಿಗಳಲ್ಲಿ ಗೌಣ ಅಥವಾ ಕ್ಷುಲ್ಲಕವಾದ ದೋಷಗಳನ್ನು ಹಿಡಿದುಕೊಳ್ಳುತ್ತಾರೆ. ಆದರೆ ಹನುಮಂತನನ್ನು ಕೆಳಗೆ ಎಳೆದುಕೊಳ್ಳಲು ಸಿಂಹಿಕಾಳು ಉಪಯೋಗಿಸಿದ ಶಕ್ತಿಯೇ ಅವಳ ನಾಶಕ್ಕೆ ಕಾರಣವಾಯಿತು. ಅಸೂಯೆಪಡುವವವರ ಕುತಂತ್ರವು ಅವರಿಗೇ ತಿರುಗುಬಾಣವಾಗುತ್ತದೆ. ಭಗವಂತನ ಭಕ್ತರ ವಿರುದ್ಧ ಅಸೂಯೆ ತೋರಿದವರ ನಾಶವನ್ನು ಕುರಿತಂತೆ ವೈದಿಕ ಸಾಹಿತ್ಯದಲ್ಲಿ ಅನೇಕ ಉದಾಹರಣೆಗಳಿವೆ.

ಕೆಲವು ಬಾರಿ ಈ ಅಸೂಯೆಯ ಜನರು ನಾವು ಎದುರಿಸಲು ಸಾಧ್ಯವಾಗದಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹನುಮಂತನಿಗೆ ಮುಂದಕ್ಕೆ ಚಲಿಸುವುದೂ ಸಾಧ್ಯವಾಗದಂತಹ ಸಮಸ್ಯೆ. ಅದರಿಂದ ಎದೆಗುಂದುವ ಬದಲು ಹನಮಂತನಂತೆ ನಾವು ನಮ್ಮ ಬುದ್ಧಿಯನ್ನು ಚುರುಕಾಗಿಟ್ಟುಕೊಳ್ಳಬೇಕು. ಭಗವಂತನ ಕೃಪೆಯಿಂದ ಮುಂದಿನ ದಾರಿ ಮೂಡುತ್ತದೆ.

ಸಾಮಾನ್ಯವಾಗಿ ಹೇಳಬೇಕೆಂದರೆ, ನಮ್ಮ ಜೀವನ ಯಾತ್ರೆಯಲ್ಲಿ ಒಂದು ಬಾಗಿಲು ಮುಚ್ಚಿದರೆ ನಾವು ಹತಾಶರಾಗುತ್ತೇವೆ. ಆ ಬಾಗಿಲಿನತ್ತ ದಿಟ್ಟಿಸಿ ನೋಡುವ ಬದಲು ನಾವು ತೆರೆಯುತ್ತಿರುವ ಬೇರಾವುದೋ ಬಾಗಿಲನ್ನು ಹುಡುಕುವುದು ಒಳ್ಳೆಯದು. ಅಸಮಾಧಾನ ಅಥವಾ ಕೋಪವು ನಮ್ಮನ್ನು ಅಂಧರಾಗುವಂತೆ ಮಾಡಲು ಬಿಟ್ಟರೆ ನಾವು ತೆರೆದ ಬಾಗಿಲನ್ನು ಕಳೆದುಕೊಳ್ಳುತ್ತೇವೆ. ಸಾಮಾನ್ಯವಾಗಿ ಇದು ನಮ್ಮ ಭಕ್ತಿ ಮತ್ತು ಸೇವೆಯನ್ನು ಹೆಚ್ಚಿಸಿಕೊಳ್ಳಲು ಭಗವಂತನ ಆಹ್ವಾನದ ಬಾಗಿಲಾಗಿರುತ್ತದೆ.

ಜೀವನದಲ್ಲಿ ಒಂದು ನಿರ್ದಿಷ್ಟ ಬಾಗಿಲಿಗೆ ನಕಾರ ಸೂಚಿಸಿದರೆ ಬದುಕಿಗೆ ನಕಾರ ಸೂಚಿಸಿದಂತೆ ಅಲ್ಲ. ವಿಫಲವಾದ ಆಧ್ಯಾತ್ಮಿಕ ಜೀವನವು ಆಧ್ಯಾತ್ಮಿಕ ಜೀವನದ ವೈಫಲ್ಯಗಳಿಗೆ ಸಮನಾಗುವುದಿಲ್ಲ. ಭಗವಂತನಿಗೆ ಸಾಧ್ಯವಾದಷ್ಟೂ ಉತ್ತಮ ಸೇವೆಯನ್ನು ನೀಡಲು ಶ್ರಮಿಸುತ್ತ ನಾವು ನಮ್ಮ ಸೇವಾ ಮನಸ್ಥಿತಿಯಲ್ಲಿ ಸತತ ಪ್ರಯತ್ನ ಮಾಡಿದರೆ ಎಷ್ಟೇ ಬಾಗಿಲುಗಳು ಮುಚ್ಚಿದರೂ ಎಲ್ಲೋ ಒಂದು ಕಡೆ ಯಾವುದೋ ಒಂದು ಬಾಗಿಲು ತೆರೆದುಕೊಳ್ಳುತ್ತದೆ. ದೇವರನ್ನು ಕುರಿತ ಪ್ರಜ್ಞೆಯಲ್ಲಿಯೇ ನೆಲೆಸಿರುವವರಿಗೆ ಭಗವಂತನು ಎಲ್ಲ ಕಷ್ಟಗಳನ್ನು ಎದುರಿಸುವ ಅನುಗ್ರಹವನ್ನು ನೀಡುತ್ತಾನೆ ಎಂದು ಭಗವದ್ಗೀತೆಯು ಹೇಳುತ್ತದೆ (18.58).

ಶಕ್ತಿಹೀನರೆಂದು ಬಾಹ್ಯದಲ್ಲಿ ಅನ್ನಿಸಿದರೂ ನಾವು ಆಂತರಿಕವಾಗಿ ಹತಾಶರಾಗುವ ಅಗತ್ಯವಿಲ್ಲ. ನಾವು ನಿಷ್ಠೆಯಿಂದ ಆಶಾಭರಿತರಾದರೆ, ಆ ನಿಷ್ಠೆಯ ಆಂತರಿಕ ಶಕ್ತಿಯು ಪರಮ ಪ್ರಭುವನ್ನು ಆಕರ್ಷಿಸುತ್ತದೆ ಮತ್ತು ಯಾರೂ ನಿರ್ಗಮಿಸಲು ಕಾಣದಂತಹ ಮಾರ್ಗವನ್ನು ಅವನು ತೋರುತ್ತಾನೆ.

ಹಾರಾಡುತ್ತ ಕೊನೆಗೆ ಹನಮಾನ್‌ ಲಂಕೆಯನ್ನು ತಲಪಿದನು. ದೊಡ್ಡ ದ್ವೀಪದ ಮಧ್ಯದಲ್ಲಿ ಕೋಟೆಯಂತಹ ನಗರವನ್ನು ಕಂಡ. ಎಲ್ಲ ಕಡೆಯೂ ಬೃಹತ್‌ ಗೋಡೆಗಳನ್ನು ನಿರ್ಮಿಸಲಾಗಿತ್ತು. ನಗರವನ್ನು ಪ್ರವೇಶಿಸಲು ಅವನು ತನ್ನ ಆಕಾರವನ್ನು ಕುಗ್ಗಿಸಿಕೊಂಡನು. ದಿಢೀರನೆ ರಾಕ್ಷಸಿಯೊಬ್ಬಳು ಅವನನ್ನು ತಡೆದಳು. ತಾನು ಲಂಕಾದ ರಕ್ಷಕಿ ಲಂಕಿಣಿ ಎಂದು ತನ್ನನ್ನು ಪರಿಚಯಿಸಿಕೊಂಡಳು. ಒಳಗೆ ನುಗ್ಗಲು ಪ್ರಯತ್ನಿಸಿದ ಅವನನ್ನು ತರಾಟೆಗೆ ತೆಗೆದುಕೊಂಡಳು. ಪ್ರಬಲ ಯೋಧನಾಗಿ ಹನುಮಂತನಿಗೆ ತನ್ನ ಎದುರಾಳಿಯ ಸಾಮರ್ಥ್ಯವನ್ನು ಅಳೆಯುವುದು ಸಾಧ್ಯವಿತ್ತು. ಲಂಕಿಣಿಯ ಶಕ್ತಿಯನ್ನು ಅಂದಾಜು ಮಾಡುತ್ತ ಅವನು ಅವಳ ಕೆನ್ನೆಗೆ ಬಾರಿಸಿದನು. ಅವಳು ಕೆಳಗೆ ಬಿದ್ದಳು. ಆದರೆ ಅವನು ಅವಳನ್ನು ಸಾಯಿಸಲಿಲ್ಲ.

ಪುನಃ ಅವನಿಗೆ ಅವನ ಮನಸ್ಸಿನಲ್ಲಿ ಇದ್ದದ್ದು ಅವನ ಉದ್ದೇಶ ಮಾತ್ರ. ಆದಷ್ಟು ಶೀಘ್ರವಾಗಿ ಸೀತೆಯನ್ನು ಪತ್ತೆ ಮಾಡಲು ಅವನು ಬಯಸಿದ್ದ. ಮಂಗನಿಂದ ಕೆಳಗೆ ಬೀಳಿಸಲ್ಪಟ್ಟ ದಿಗ್ಭ್ರಮೆಯಿಂದ ಲಂಕಿಣಿಯು ಹೊರಬರುವ ಮೊದಲೇ ಅವನು ವೇಗವಾಗಿ ಹಾರುತ್ತ ಲಂಕಾವನ್ನು ಪ್ರವೇಶಿಸಿದನು. ಮಂಗವೊಂದು ಹೇಗೆ ತನ್ನನ್ನು ಜಯಿಸಿತೆಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಲಂಕಿಣಿಗೆ ಪುರಾತನ ಭವಿಷ್ಯವಾಣಿಯೊಂದು ನೆನಪಾಯಿತು. ಮಂಗನಿಂದ ತಾನು ಸೋತರೆ ಲಂಕಾವು ನಾಶವಾಗುತ್ತದೆ. ದುರದೃಷ್ಟವು ಸನ್ನಿಹಿತವಾಗಿದೆ ಎಂದುಕೊಳ್ಳುತ್ತ ಲಂಕಿಣಿಯು ರಾವಣನನ್ನು ಎಚ್ಚರಿಸಲು ಹೊರಟಳು. ಆದರೆ ವಿಧಿ ಸಂಕಲ್ಪವನ್ನು ಯಾರೂ ತಡೆಯಲಾಗದೆಂದು ಅವಳಿಗೆ ಗೊತ್ತಿತ್ತು.

ಲಂಕಾಗೆ ಹನಮಂತನ ಸಾಹಸಮಯ ಹಾರಾಟದಿಂದ ಮುಖ್ಯವಾದ ಪಾಠವೆಂದರೆ, ಭಗವಂತನಿಗೆ ಸೇವೆ ಸಲ್ಲಿಸಬೇಕೆಂಬ ಉದ್ದೇಶದಲ್ಲಿ ಅವನ ಏಕಾಗ್ರತೆ. ತನಗೆ ತಡೆಯೊಡ್ಡಲು ವಿಘ್ನಗಳಿಗೆ ಅವಕಾಶ ನೀಡುವ ಬದಲು ಅವನು ಅವುಗಳ ಒಳಗಿನಿಂದ ಮಾರ್ಗವನ್ನು ಕಂಡುಕೊಂಡನು. ಅದೇ ರೀತಿ ನಮ್ಮ ಆಧ್ಯಾತ್ಮಿಕ ಪ್ರಗತಿಗೆ ನಾವು ಅಡೆತಡೆಗಳನ್ನು ಎದುರಿಸಿದಾಗ, ಅಡಚಣೆ-ಪ್ರಜ್ಞಾವಂತರಾಗುವುದಕ್ಕಿಂತ ಉದ್ದೇಶ-ಪ್ರಜ್ಞಾವಂತರಾದರೆ ನಾವು ಮುನ್ನಡೆಯಲು ಭಗವಂತನು ನಮಗೆ ಮಾರ್ಗವನ್ನು ತೋರಿಸುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi