ಕರ್ಮದಿಂದ ಮುಕ್ತಿ ಹೇಗೆ?

– ಆಂಗ್ಲ ಮೂಲ : ನಾರದ ಋಷಿ ದಾಸ

ಐಹಿಕ ಲೋಕದಲ್ಲಿ ಭಗವಂತನ ಪರಿಶುದ್ಧ ಭಕ್ತರನ್ನು ಬಿಟ್ಟು ಎಲ್ಲರೂ ಕರ್ಮದ ನಿಯಮಗಳಿಗೆ ಒಳಪಟ್ಟಿದ್ದಾರೆ.

ಲೌಕಿಕ ಚಟುವಟಿಕೆಗಳು ಮತ್ತು ಅವುಗಳಿಗೆ ಪ್ರತಿಕ್ರಿಯೆಗಳನ್ನು ಕರ್ಮ ಎಂದು ವಿಶಾಲವಾಗಿ ವಿವರಿಸಲಾಗಿದೆ. “ಮಾಡಿದ್ದುಣ್ಣೋ ಮಾರಾಯ” ಎಂಬ ಮಾತಿನಿಂದ ಇದನ್ನು ಅರ್ಥಮಾಡಿಕೊಳ್ಳಬಹುದು.

ಭಗವಂತನ ಸೇವಕರಾಗಿ ನಮ್ಮ ವ್ಯಕ್ತಿತ್ವ, ನಮ್ಮ ಅಗತ್ಯ ಸ್ವರೂಪ ಅಥವಾ ರೂಪವನ್ನು, ಮರೆತಿರುವುದರಿಂದ ಕರ್ಮ ಉದಯಿಸುತ್ತದೆ ಎಂದು ಶ್ರೀ ಚೈತನ್ಯ ಶಿಕ್ಷಾಮೃತದಲ್ಲಿ ಹೇಳಲಾಗಿದೆ. ಕರ್ಮವನ್ನು ಅರ್ಥ ಮಾಡಿಕೊಳ್ಳದೆ ಜೀವಿಯು ಲೌಕಿಕ ಪ್ರಕೃತಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುತ್ತಾನೆ ಮತ್ತು ಇದರ ಪರಿಣಾಮ ಸಂಕಷ್ಟ. ಲೌಕಿಕ ಚಟುವಟಿಕೆಗಳು ನಮ್ಮನ್ನು ಪುನರಪಿ ಜನನಂ ಪುನರಪಿ ಮರಣಂ ಎಂಬ ಮುರಿಯದ ಸರಪಳಿಯೊಳಗಿನ ಐಹಿಕ ರಾಜ್ಯದೊಳಗೆ ನಿರ್ಬಂಧದಲ್ಲಿಟ್ಟಿದೆ. ಬೇಟೆಗಾರನ ಬಲೆಯಲ್ಲಿ ಸಿಕ್ಕಿ ಬೀಳುವ ಹಕ್ಕಿಯು ತನ್ನ ರೆಕ್ಕೆಗಳನ್ನು ವ್ಯರ್ಥವಾಗಿ ಬಡಿಯುವಂತೆ ಸರಿಯಾದ ನಿರ್ದೇಶನವಿಲ್ಲದ ಜೀವಿಯು ಪಾರಾಗಲಾರ. ಲೌಕಿಕ ಲೋಕದೊಳಗೇ ಅಂಟಿಕೊಂಡು, ಲೌಕಿಕ ಪ್ರಕೃತಿಯ ಮೂರು ಗುಣಗಳಲ್ಲಿ ಸಿಕ್ಕಿಬಿದ್ದಿರುವ ಜೀವಿಯು ಇಂದ್ರಿಯ ಸುಖವೇ ಅಂತಿಮ ಗುರಿ ಎಂದು ಯೋಚಿಸುತ್ತಾನೆ.

ಕರ್ಮದ ಕಾನೂನು ಕ್ಲಿಷ್ಟವಾದುದು ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಪುರಾತನ ವೈದಿಕ ಸಾಹಿತ್ಯವು ಲೌಕಿಕ ಪ್ರಕೃತಿಯಲ್ಲಿ ತೊಡಕನ್ನು ಸ್ಪಷ್ಟವಾಗಿ ವಿವರಿಸಿ ಅದರಿಂದ ಮುಕ್ತವಾಗುವ ಬಗೆಯನ್ನೂ ಹೇಳಿದೆ. ಗುರು ಪರಂಪರೆಯ ಪರಿಶುದ್ಧ ಗುರುಗಳು ಬೋಧಿಸಿರುವಂತೆ ವೈದಿಕ ಸಿದ್ಧಾಂತದ ಆದೇಶಗಳನ್ನು ಅನುಸರಿಸುವ ಮೂಲಕ ನಾವು ಕರ್ಮದ ನಿರ್ಬಂಧಗಳನ್ನು ಬಿಡಿಸಿಕೊಳ್ಳಬಹುದು ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಬಹುದು.

ಆಸೆಯ ಹಿಡಿತದಲ್ಲಿ

ದೇವೋತ್ತಮನ ಭಾಗವಾಗಿ ಜೀವಿಯು ಸ್ವಭಾವತಃ ಅಧ್ಯಾತ್ಮನು. ಆದರೆ ಇಂದ್ರಿಯ ತೃಪ್ತಿಯ ಆಸೆಯೇ ಲೌಕಿಕ ಬಂಧನಕ್ಕೆ ಕಾರಣವಾಗಿದೆ. ಲೌಕಿಕ ಜೀವನದಲ್ಲಿ ಆನಂದವನ್ನು ಅನುಭವಿಸಲು ಪ್ರಯತ್ನಿಸುತ್ತ ಜೀವಿಯು ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗದ ಮುರಿಯದ ವೃತ್ತದಲ್ಲಿಯೇ ಇರುತ್ತಾನೆ. ಲೌಕಿಕ ಚಟುವಟಿಕೆಗಳಲ್ಲಿ ತೊಡಗುತ್ತ ಆತ್ಮವು ಅಂತ್ಯವಿಲ್ಲದಂತೆ ಒಂದು ಜೀವಜಾತಿಯಿಂದ ಮತ್ತೊಂದರತ್ತ ಸುತ್ತುತ್ತಿರುತ್ತದೆ. ಇದನ್ನು ಪುನರ್‌ಜನ್ಮ ಅಥವಾ ಸಂಸಾರ ಚಕ್ರ, ಹುಟ್ಟು-ಸಾವಿನ ಚಕ್ರ ಎನ್ನುವರು.

ಅನೇಕ ವೇಳೆ ಜನರಿಗೆ ಪುನರ್‌ಜನ್ಮದ ಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ. ಮೊದಲನೆಯದಾಗಿ ಆತ್ಮ, ದೇವರು ಮತ್ತು ಅವುಗಳ ಬಾಂಧವ್ಯವನ್ನು ಅರ್ಥಮಾಡಿಕೊಳ್ಳಬೇಕು. ಆತ್ಮವು ತನ್ನ ಶಾಶ್ವತವಾದ ಭಾಗವೆಂದು ಕೃಷ್ಣನು ಹೇಳುತ್ತಾನೆ. ಆ ರೀತಿಯಲ್ಲಿ, ದೇವರು ಮತ್ತು ಆತ್ಮ ಎರಡೂ ಕೂಡ ಶಾಶ್ವತ ಮತ್ತು ಅವರ ಬಾಂಧವ್ಯ ಕೂಡ. ದೇವರನ್ನು ತಿರಸ್ಕರಿಸಿ ಆತ್ಮವು ಒಂದರ ಅನಂತರ ಮತ್ತೊಂದು ದೇಹವನ್ನು ಪಡೆಯುತ್ತದೆ. ಭಗವಂತನಿಂದ ಪ್ರತ್ಯೇಕವಾಗಿ ಆನಂದಿಸಬೇಕೆಂಬ ಆತ್ಮದ ಅಪೇಕ್ಷೆಗೆ ಪ್ರತಿಕ್ರಿಯೆಯಾಗಿ ಭಗವಂತನು ದೇಹಗಳನ್ನು ಪೂರೈಸುತ್ತಾನೆ. ಇದು ಪುನರ್‌ಜನ್ಮ. ಈ ಬಂಧನದಿಂದ ಮುಕ್ತರಾಗಲು ನಾವು ಭಗವಂತನೊಂದಿಗೆ ನಮ್ಮ ಶಾಶ್ವತ ಬಾಂಧವ್ಯವನ್ನು ಪುನರ್‌ ಸ್ಥಾಪಿಸಲು ಪ್ರಯತ್ನಿಸಬೇಕು.

ನಾವು ಲೌಕಿಕ ಲೋಕದಲ್ಲಿ ನೆಲೆಸುತ್ತೇವೆ. ಏಕೆಂದರೆ, ಅದು ಸುಂದರ ಮತ್ತು ಆಕರ್ಷಿತವಾಗಿರುವಂತೆ ಕಾಣುತ್ತದೆ. ಆದರೆ ಅದರಲ್ಲಿ ಅನೇಕ ಕ್ರೂರತನಗಳಿವೆ ಎಂಬುವುದನ್ನು ಅನುಭವ ನಮಗೆ ಕಲಿಸಬೇಕು. ಕರ್ಮದ ಕಾನೂನಿನಂತೆ, ನಾವು ನಮ್ಮದೇ ಕ್ರಿಯೆಗಳಿಂದ ಸಂಕಟಪಡುತ್ತೇವೆ. ಭಗವಂತನು ನಮಗೆ ನಮ್ಮ ವೈಯಕ್ತಿಕ ಪ್ರವೃತ್ತಿಗಳ ಪ್ರಕಾರ ನಡೆಯುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ ಮತ್ತು ನಾವು ಫಲ ಪಡೆಯುತ್ತೇವೆ. ಅತ್ಯಂತ ವಿನಾಶಕಾರಿಯಾದ ಕರ್ಮದ ಪ್ರತಿಕ್ರಿಯೆ ಎಂದರೆ ಅತ್ಯಂತ ಅಪಾಯಕಾರಿ ಸ್ಥಳವಾದ ಲೌಕಿಕ ಲೋಕದಲ್ಲಿ ಅಂತ್ಯವಿಲ್ಲದ ಬಂಧನ. ಧರ್ಮ ಗ್ರಂಥಗಳು ಜೀವೋ ಜೀವಸ್ಯ ಜೀವನಂ ಎಂದು ಹೇಳಿವೆ. ಅಂದರೆ, ಒಬ್ಬ ಜೀವಿಯು ಮತ್ತೊಬ್ಬ ಜೀವಿಯ ಮೇಲೆ ಬದುಕುಳಿಯುತ್ತಾನೆ. ಅರಣ್ಯದಲ್ಲಿ ಹುಲಿಯು ಜಿಂಕೆಯನ್ನು ಬೇಟೆಯಾಡುತ್ತದೆ ಮತ್ತು ಆಹಾರವನ್ನು ಆನಂದಿಸುತ್ತದೆ.

ಹುಲಿಯು ತನ್ನ ಬೇಟೆಯನ್ನು ಕೊಂದು ತಿಂದರೆ ಅದು ಪಾಪದ ಪ್ರತಿಕ್ರಿಯೆ ಅಥವಾ ಕೆಟ್ಟ ಕರ್ಮದಿಂದ ಮುಕ್ತ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ. ಪ್ರಾಣಿಗಳು ಬದುಕಲು ತಮ್ಮ ಸ್ವಾಭಾವಿಕ ಧರ್ಮ ಅಥವಾ ಪ್ರವೃತ್ತಿಯಂತೆ ನಡೆದುಕೊಳ್ಳುತ್ತವೆ. ಮತ್ತೊಂದೆಡೆ, ಮಾನವನು ಗೋಹತ್ಯೆ ಅಥವಾ ಒಂದು ಕೀಟವನ್ನೂ ಕೊಂದರೆ, ಅವನು ಶಿಕ್ಷಾರ್ಹ.

ಮಾನವ ಜೀವಿಗಳು ಬೆಳವಣಿಗೆಯಾದ ಮಿದುಳನ್ನು ಹೊಂದಿದ್ದಾರೆ ಮತ್ತು ಉನ್ನತ ಜ್ಞಾನವನ್ನು ಬೆಳೆಸಿಕೊಳ್ಳುವ ಮತ್ತು ಭಗವಂತನೊಂದಿಗೆ ತಮ್ಮ ಬಾಂಧವ್ಯವನ್ನು ಪುನರ್‌ ಸ್ಥಾಪಿಸಿಕೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. 8,400,000 ಜೀವಿಗಳಲ್ಲಿ ಮಾನವರು ಶ್ರೇಷ್ಠ. ಏಕೆಂದರೆ, ಅವರು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆ ಜ್ಞಾನದಲ್ಲಿ ಅವರು ನಡೆದುಕೊಳ್ಳುವ ಮೂಲಕ ಕರ್ಮದ ಬಂಧದಿಂದ ಮುಕ್ತರಾಗಬಹುದು. ನಾವು ಮನಃಪೂರ್ವಕವಾಗಿ ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಿದರೆ, ನಾವು ನಮ್ಮ ಕರ್ಮ ಬಂಧವನ್ನು ಕಡಿದುಹಾಕಬಹುದು ಮತ್ತು ಸಂಪೂರ್ಣವಾಗಿ ಸ್ವಾತಂತ್ರ್ಯ, ಸಂತೋಷ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಬಹುದು.

ಮೃಗಾರಿಯ ಪರಿವರ್ತನೆ

ಕೆಲವು ಪ್ರಾಣಿಗಳನ್ನು ಕೊಲ್ಲುತ್ತ, ಉಳಿದವನ್ನು ನೋವು ಅನುಭವಿಸಲು ಅರ್ಧ ಕೊಲ್ಲುತ್ತಿದ್ದ ಬೇಟೆಗಾರ ಮೃಗಾರಿಯನ್ನು ಕುರಿತ ಸ್ಕಾಂದ ಪುರಾಣದ ಕಥೆಯೊಂದನ್ನು ಚೈತನ್ಯ ಚರಿತಾಮೃತವು ನಿರೂಪಿಸುತ್ತದೆ. ಅವನು ಶ್ರೇಷ್ಠ ಭಕ್ತರಾದ ನಾರದ ಮುನಿಗಳ ಆಶ್ರಯ ಪಡೆದಾಗ ಮತ್ತು ಅವರು ಅವನ ಆಧ್ಯಾತ್ಮಿಕ ಗುರುಗಳಾದಾಗ ಅವನು ತನ್ನ ಎಲ್ಲ ಪಾಪದ ಕ್ರಿಯೆಗಳನ್ನು ತ್ಯಜಿಸಿದನಲ್ಲದೆ ಒಂದು ಇರುವೆಯ ಮೇಲೂ ಪಾದ ಊರುತ್ತಿರಲಿಲ್ಲ. ನಾರದ ಮುನಿಗಳ ಆದೇಶದಂತೆ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತ ಅವನು ಆಧ್ಯಾತ್ಮಿಕ ಉನ್ನತ ಸ್ಥಾನ ಪಡೆದನು. ಅವನ ಭಕ್ತಿ ಸೇವೆಯು ಅವನ ಪಾಪ ಕ್ರಿಯೆಯ ಕರ್ಮ ಪ್ರತಿಕ್ರಿಯೆಯನ್ನು ನಾಶಪಡಿಸಿತು.

ಮೃಗಾರಿಯು ಕೃಷ್ಣನ ಪ್ರತಿನಿಧಿ ನಾರದ ಮುನಿಗಳ ಆಶ್ರಯ ಪಡೆದು ಕಾಪಾಡಲ್ಪಟ್ಟ. ಕೃಷ್ಣನತ್ತ ನೋಟ ಹರಿಸಲು ಅದೇ ಅಧಿಕೃತ ಮಾರ್ಗ. ಭಗವದ್ಗೀತೆಗೆ ನೀಡಿರುವ ವ್ಯಾಖ್ಯಾನದಲ್ಲಿ ಶ್ರೀಲ ಪ್ರಭುಪಾದರು ಮರದ ಮೇಲೆ ಕುಳಿತಿದ್ದ ಎರಡು ಹಕ್ಕಿಗಳ ಮಾತನ್ನು ಹೇಳುತ್ತಾರೆ. ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸುವ ಒಂದು ಹಕ್ಕಿಯು ತಿನ್ನುತ್ತಿದೆ. ಹೃದಯದಲ್ಲಿರುವ ಕೃಷ್ಣನನ್ನು ಪ್ರತಿನಿಧಿಸುವ ಮತ್ತೊಂದು ಹಕ್ಕಿಯು ಸುಮ್ಮನೆ ನೋಡುತ್ತಿದೆ. ತಿನ್ನುತ್ತಿರುವ ಗಿಣಿಯು ಮರದಲ್ಲಿನ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ ಹಣ್ಣುಗಳನ್ನು (ಕರ್ಮ) ಆಸ್ವಾದಿಸುತ್ತಿದೆ. ಆದರೆ ಅದು ತನ್ನ ಮಿತ್ರ ಕೃಷ್ಣನತ್ತ ತಿರುಗಿದ ಕೂಡಲೇ ಅದು ತನ್ನ ಕರ್ಮದಿಂದ ಮುಕ್ತಿ ಪಡೆಯುತ್ತದೆ. ಕೃಷ್ಣನಿಗೆ ಶರಣಾಗಲೇಬೇಕೆಂಬ ಉನ್ನತ ಸತ್ಯವನ್ನು ಅರಿಯುವವರೆಗೂ ಆತ್ಮಗಳು ಭಗವಂತನ ಭಕ್ತರ ಮೂಲಕ ಅವನ ಆಶ್ರಯ ಪಡೆಯದೆ ತಮ್ಮ ಕ್ರಿಯೆಗಳ ಫಲದ ನೋವನ್ನು ಅನುಭವಿಸುತ್ತಾರೆ.

ಕೃಷ್ಣನು ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಆದರೆ ಅದರ ದುರುಪಯೋಗದ ಪರಿಣಾಮವು ಲೌಕಿಕ ಜಗತ್ತಿನಲ್ಲಿ ಬಂಧನ. ಲೌಕಿಕ ಶಕ್ತಿಯು ಅಜ್ಞಾನದಲ್ಲಿ ನಾವು ಕೆಲವು ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಅಲೌಕಿಕ ಜ್ಞಾನದ ಕೊರತೆಯಿಂದ ಬಂಡಾಯ ಆತ್ಮಗಳು ಪದೇ ಪದೇ ಹುಟ್ಟುತ್ತವೆ. ಏಕೆಂದರೆ ಅವು ಪದೇ ಪದೇ ಪಾಪ ಕೃತ್ಯಗಳನ್ನು ಎಸಗುತ್ತವೆ. ಅವು ಇಂದ್ರಿಯಗಳ ಒಡೆಯ ಹೃಷೀಕೇಶನಾದ ಪರಮ ಪ್ರಭುವಿನ ಭಕ್ತಿ ಸೇವೆಯಲ್ಲಿ ನಿರತರಾಗುವ ಬದಲು ನಿರಂತರವಾಗಿ ತಮ್ಮ ಇಂದ್ರಿಯ ತೃಪ್ತಿಯ ಕ್ರಿಯೆಗಳಲ್ಲಿ ತೊಡಗಿರುತ್ತವೆ.

ಜೀವಿಗಳು ಭಗವಂತನ ಶಾಶ್ವತ ಸೇವಕರು. ಅವನ ನೇರ ಸೇವೆಯನ್ನು ತಿರಸ್ಕರಿಸುವವರು ಅವನ ಸೇವೆ ಮಾಡಲೇಬೇಕಾಗುವುದು. ಬದ್ಧ ಬದುಕಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅವರು ಭಗವಂತನ ಲೌಕಿಕ ಶಕ್ತಿ (ಮಾಯ) ಗೆ ಬಲವಂತವಾಗಿ ಸೇವೆ ಸಲ್ಲಿಸುತ್ತಾರೆ. ಅವರು ಭಗವಂತನ ಭಕ್ತರಂತಲ್ಲ. ಅವರು ಕರ್ಮದ ಸಾಗರದಲ್ಲಿ ಈಜುವರು ಮತ್ತು ಅದರಿಂದ ಎಂದಿಗೂ ಮುಕ್ತರಾಗುವುದಿಲ್ಲ.

ಪರಿಶುದ್ಧ ಸೇವೆ ಮಾತ್ರ ಕೊನೆಗಾಣದ ಕರ್ಮದ ಬಂಧಗಳನ್ನು ಬಿಡಿಸಬಲ್ಲುದು. ಕೃಷ್ಣನೇ ಶಿಫಾರಸು ಮಾಡುತ್ತಾನೆ, “ನೀನು ಏನನ್ನೇ ಮಾಡು, ಏನನ್ನೇ ಭುಂಜಿಸು, ಏನ್ನನ್ನೇ ಅರ್ಪಿಸು ಅಥವಾ ಮತ್ತು ಯಾವುದೇ ತಪಸ್ಸನ್ನು ಮಾಡು ಅದನ್ನು ಕಾಣಿಕೆಯಾಗಿ ನನಗೆ ಅರ್ಪಿಸು.” (ಭಗವದ್ಗೀತೆ 9.27) ನಮ್ಮೆಲ್ಲ ಚಟುವಟಿಕೆಗಳನ್ನು ಅವನಿಗಾಗಿ ಮಾಡಬೇಕೆಂಬುವುದು ಕೃಷ್ಣನ ಇಚ್ಛೆ.

ವಿಧಿಸಿದ ನಡೆವಳಿಕೆ

ಭಗವಂತನ ಪರಿಶುದ್ಧ ಭಕ್ತರಾಗಲು ನಾವು ಕ್ರಮ ಬದ್ಧವಾಗಿ ಕೆಲವು ವಿಧಾನಗಳನ್ನು ಆಚರಿಸಬೇಕು ಎಂದು ವೈದಿಕ ಧರ್ಮ ಶಾಸ್ತ್ರಗಳು ಶಿಫಾರಸು ಮಾಡಿವೆ.

ನಾವು ಸದಾ ಭಗವಂತನ ಪವಿತ್ರ ನಾಮಗಳನ್ನು ಜಪಿಸಬೇಕು : ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ. ನಮ್ಮ ಹೃದಯ, ಮನಸ್ಸು ಮತ್ತು ಇಂದ್ರಿಯಗಳನ್ನು ಅನೇಕ ಜನ್ಮಗಳ ಕೊಳೆಯಿಂದ ಮುಕ್ತಗೊಳಿಸಲು ಅಥವಾ ಶುದ್ಧೀಕರಿಸಲು ಈ ಮಂತ್ರವೇ ಪ್ರಧಾನ ವಿಧಾನ. ಕೊಳೆ ಎಂದರೆ ಲೌಕಿಕ ಪ್ರತಿಕ್ರಿಯೆಗಳು ಮತ್ತು ಅಪೇಕ್ಷೆಗಳು.

ಆತ್ಮ, ಭಗವಂತನೊಂದಿಗೆ ಅದರ ಬಾಂಧವ್ಯ, ಕರ್ಮದ ಕ್ಲಿಷ್ಟತೆಗಳು, ಪುನರ್ಜನ್ಮದ ವಿಧಾನ ಮತ್ತು ವಿಮೋಚನೆ ಸೇರಿದಂತೆ ಉನ್ನತ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ನಾವು ಭಗವದ್ಗೀತೆ, ಶ್ರೀಮದ್‌ ಭಾಗವತ ಮತ್ತು ಪರಮ ಪ್ರಭುವಿನೆಡೆಗೆ ಪರಿಶುದ್ಧ ಭಕ್ತಿಯನ್ನು ಉತ್ತೇಜಿಸುವ ಇತರ ವೈದಿಕ ಗ್ರಂಥಗಳ ಕ್ರಮಬದ್ಧ ಅಧ್ಯಯನ ಮಾಡಬೇಕು.

ಒಳ್ಳೆಯ ಮತ್ತು ಕೆಟ್ಟದಾದ ಎಲ್ಲ ಕರ್ಮಗಳಿಂದ ಮುಕ್ತರಾಗಲು ನಾವು ಕೃಷ್ಣನಿಗೆ ಅರ್ಪಿಸಿದ ಆಹಾರವನ್ನು ಮಾತ್ರ ಸೇವಿಸಬೇಕು. ಅವನು ಪರಿಶುದ್ಧ ಸಸ್ಯಾಹಾರವನ್ನಷ್ಟೇ ಸ್ವೀಕರಿಸುತ್ತಾನೆ. ಉಳಿಕೆಯನ್ನು ನಾವು ಅವನ ಕೃಪೆ (ಪ್ರಸಾದ) ಎಂದು ಸ್ವೀಕರಿಸಬಹುದು. ಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ, “ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.” (ಗೀತೆ 9.26) ಅವನು ಸ್ವೀಕರಿಸುವುದು ಶುದ್ಧ ಸಸ್ಯಾಹಾರಿ ಆಹಾರವನ್ನು. ಮಾಂಸ, ಮೀನು, ಮೊಟ್ಟೆ ಅಥವಾ ಮದ್ಯಗಳನ್ನಲ್ಲ. ಪ್ರೀತಿ, ಭಕ್ತಿ ಮತ್ತು ದೃಢ ನಂಬಿಕೆಯಿಂದ ನಾವು ಅರ್ಪಿಸಿದರೆ ನಮ್ಮ ಅರ್ಪಣೆಯು ಪಾಪ ಮತ್ತು ಕರ್ಮ ಪ್ರತಿಕ್ರಿಯೆಗಳಿಂದ ಮುಕ್ತವಾಗುತ್ತದೆ. ತಮಗಾಗಿ ಅಥವಾ ಇಂದ್ರಿಯ ತೃಪ್ತಿಗಾಗಿಯೇ ಆಹಾರವನ್ನು ಸಿದ್ಧಪಡಿಸಿಕೊಳ್ಳುವವರು ಪಾಪಗಳನ್ನು ಮಾತ್ರ ಸೇವಿಸುವರು.

ಸಸ್ಯಾಹಾರ ತುಂಬ ಮುಖ್ಯ, ಏಕೆಂದರೆ ಅದರಿಂದ ನಾವು ಪ್ರಾಣಿ ವಧೆ ಅಥವಾ ಪ್ರಾಣಿ ಹತ್ಯೆಯ ಜೊತೆ ಸಂಪರ್ಕಹೊಂದುವುದನ್ನು ತಡೆಯಬಹುದು. ಯಾರು ಪ್ರಾಣಿ ವಧೆ ಮಾಡಿ ಅದನ್ನು ಭಕ್ಷಿಸುವರೋ ಅಂತಹವರು ಮುಂದಿನ ಜನ್ಮದಲ್ಲಿ ಕೊಲ್ಲಲ್ಪಡುವರು ಮತ್ತು ಭಕ್ಷಿಸಲ್ಪಡುವರು ಎಂದು ಕರ್ಮದ ಕಾನೂನು ಆದೇಶಿಸುತ್ತದೆ.

ಕರ್ಮದಿಂದ ಮುಕ್ತರಾಗಲು ಪ್ರಯತ್ನಿಸುತ್ತಿರುವ ಭಕ್ತರ ಸಹವಾಸವನ್ನೂ ನಾವು ಮಾಡಬೇಕು. ರೋಗಿಯೊಂದಿಗೆ ಸಂಪರ್ಕ ಮಾಡಿದರೆ ಹೇಗೆ ಅವನು ರೋಗವನ್ನು ನಮಗೂ ಅಂಟಿಸಬಹುದೋ ಅದೇ ರೀತಿ ಕೃಷ್ಣನೊಂದಿಗೆ ಅಥವಾ ಅವನ ಪರಿಶುದ್ಧ ಭಕ್ತರ ಜೊತೆ ಸಹವಾಸ ಮಾಡಿದರೆ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನಕ್ಕೆ ಏರಬಹುದು. ಆಗ ನಾವು ಶ್ರೀಲ ಪ್ರಭುಪಾದರು ಕರೆದ “ಲೌಕಿಕ ರೋಗ”ದಿಂದ ಗುಣಮುಖರಾಗಬಹುದು. ನಮ್ಮ ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳಿಂದ ನೋವು ಮತ್ತು ನಲಿವು ಎರಡೂ ಆಹ್ವಾನವಿಲ್ಲದೆ ಬರುತ್ತವೆ ಎಂಬುವುದನ್ನು ಕೃಷ್ಣ ಪ್ರಜ್ಞೆ ನೆನಪಿಸುತ್ತದೆ. ಆದರೆ ಭಗವಂತನ ಪರಿಶುದ್ಧ ಭಕ್ತಿಯು ಎಲ್ಲವನ್ನೂ ಮೀರುತ್ತದೆ.

ಕೃಷ್ಣನು ಭಕ್ತವತ್ಸಲ, ಅಂದರೆ ತನ್ನ ಭಕ್ತರಿಗೆ ಕರುಣಾಮೂರ್ತಿ. ಭಗವಂತನ ಬಗೆಗೆ ನಾವು ಕಾತರ ತೋರುವುದಕ್ಕಿಂತ ಅವನೇ ನಾವು ಭಗವದ್ಧಾಮಕ್ಕೆ ಮರಳುವುದರ ಬಗೆಗೆ ಕಾತರ ತೋರುತ್ತಾನೆ. ನಾವು ಈ ದುಃಖಕರ ಲೌಕಿಕ ಜಗತ್ತಿನಿಂದ ಹೊರ ಬಂದು ಶಾಶ್ವತ ಧಾಮದಲ್ಲಿ ಅವನೊಡಗೂಡಬೇಕೆಂಬುವುದು ಭಗವಂತನ ಇಚ್ಛೆ. “ಯಾರು ನನಗೆ ಹೇಗೆ ಶರಣಾಗತರಾಗುವರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ” ಎಂದು ಕೃಷ್ಣನು ಹೇಳಿದ್ದಾನೆ. (ಗೀತೆ 4.11)

ಬ್ರಾಹ್ಮಣ ಮತ್ತು ಮೋಚಿ

ಇಲ್ಲಿ ಭಗವಂತನ ಇಬ್ಬರು ಭಕ್ತರ ಉದಾಹರಣೆ ಇದೆ. ಪ್ರಭುವು ಗೀತೆಯಲ್ಲಿ ಹೇಳಿರುವಂತೆ ಅವರ ಭಕ್ತಿಯನ್ನು ಹೇಗೆ ಕಂಡ ಮತ್ತು ಅದರಂತೆ ಅವರನ್ನು ಹೇಗೆ ಅನುಗ್ರಹಿಸಿದ ಎಂಬುವುದನ್ನು ಇದು ಬಿಂಬಿಸುತ್ತದೆ.

ಒಮ್ಮೆ ನಾರದ ಮುನಿಗಳು ಶ್ರೀಮನ್ನಾರಾಯಣನನ್ನು ನೋಡಲು ಆಧ್ಯಾತ್ಮಿಕ ಲೋಕಕ್ಕೆ ತೆರಳುತ್ತಿದ್ದರು. ಒಬ್ಬ ಸ್ಮಾರ್ತ ಬ್ರಾಹ್ಮಣ (ವಿಧಿಗಳಿಗೆ ಅಂಟಿಕೊಂಡು ಭಕ್ತಿಯಲ್ಲಿ ಕೊರತೆ ಹೊಂದಿರುವವ) ಮತ್ತು ಒಬ್ಬ ಮೋಚಿ ಇಬ್ಬರೂ ನಾರದ ಮುನಿಗಳಲ್ಲಿ ವಿನಂತಿಸಿಕೊಂಡರು, “ನಾನು ಯಾವಾಗ ಭಗವದ್ಧಾಮಕ್ಕೆ ಮರಳುವೆ ಎಂದು ದಯೆಯಿಟ್ಟು ಭಗವಂತನಲ್ಲಿ ಕೇಳಿ ತಿಳಿದುಕೊಂಡು ಬನ್ನಿ.” ಅಲ್ಲದೆ ನಾರದರು ಭೇಟಿ ನೀಡಿದಾಗ ಭಗವಂತ ಏನು ಮಾಡುತ್ತಿದ್ದ ಎಂಬುದನ್ನೂ ತಿಳಿಸಲು ಅವರಿಬ್ಬರೂ ಕೋರಿದರು.

ನಾರದರು ಹೊರಟ ಮೇಲೆ ಬ್ರಾಹ್ಮಣನು ಸಂಪತ್ತು ಮತ್ತು ಪರಿಪೂರ್ಣತೆಯ ಗುರಿಹೊಂದಿದ ವಿಧಿಗಳ ಆಚರಣೆಯಲ್ಲಿ ನಿರತನಾದನು. ಬಡವನಾದ ಮೋಚಿಯು ತನ್ನ ಕುಟುಂಬ ನಿರ್ವಹಣೆಗೆ ಚಪ್ಪಲಿಗಳನ್ನು ಹೊಲಿಯುತ್ತಿದ್ದ ಮತ್ತು ಹರೇ ಕೃಷ್ಣ ಮಂತ್ರ ಜಪಿಸುತ್ತಿದ್ದ.

ನಾರದ ಮುನಿಗಳು ಹಿಂತಿರುಗಿದರು. ಬ್ರಾಹ್ಮಣನು ಕೇಳಿದ, “ನನ್ನ ಪ್ರೀತಿಯ ನಾರದ ಮುನಿಗಳೇ, ನೀವು ಅಲ್ಲಿ ಹೋದಾಗ ನನ್ನ ದೇವರು ಏನು ಮಾಡುತ್ತಿದ್ದ?”

“ಓ! ಭಗವಂತನು ಸೂಜಿಯ ಕಣ್ಣಿನಲ್ಲಿ ಆನೆಯನ್ನು ತೂರಿಸುತ್ತಿದ್ದ” ಎಂದು ನಾರದರು ಉತ್ತರಿಸಿದರು.

ಹುಸಿ ಅಹಂ ಮತ್ತು ನಕಲಿ ಭಕ್ತಿಯಿಂದ ಅಂಧನಾಗಿದ್ದ ಬ್ರಾಹ್ಮಣನು, “ಅದು ಅಸಾಧ್ಯ! ಸೂಜಿಯ ಕಣ್ಣಿನಲ್ಲಿ ಆನೆ ತೂರುವುದು ಹೇಗೆ ಸಾಧ್ಯ?” ಎಂದು ಉದ್ಗರಿಸಿದ.

ತಾನು ಭಗವದ್ಧಾಮಕ್ಕೆ ಹೋಗುವುದು ಯಾವಾಗ ಎಂದು ಬ್ರಾಹ್ಮಣ ಕೇಳಿದಾಗ, ಹುಣಸೇ ಮರದಲ್ಲಿ ಎಲೆಗಳಿರುವಷ್ಟು ಸಹಸ್ರಾರು ವರ್ಷಗಳು ಬೇಕಾಗುತ್ತದೆ ಎಂದು ನಾರದರು ನುಡಿದರು.

ಸೂಜಿಯ ಕಣ್ಣಲ್ಲಿ ಭಗವಂತನು ಆನೆಯನ್ನು ತೂರಿಸುತ್ತಿದ್ದ ಎಂಬುವುದನ್ನು ಕೇಳಿ ಮೋಚಿ ಉದ್ಗರಿಸಿದ, “ಹೌದು! ಅದು ಸಾಧ್ಯ! ನನ್ನ ದೇವರು ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲನು. ಅವನಿಗೆ ಅಸಾಧ್ಯ ಎನ್ನುವುದೇ ಇಲ್ಲ. ಹುಣಸೆ ಮರದ ಬೀಜಗಳಲ್ಲಿ ಅಸಂಖ್ಯ ಮರಗಳನ್ನು ಇಡುವಂತೆ ಅವನು ಸೂಜಿಯ ಕಣ್ಣಲ್ಲಿ ಸುಲಭವಾಗಿ ಆನೆಯನ್ನು ತೂರಿಸಬಲ್ಲ.”

ಪ್ರಸಕ್ತ ಜನ್ಮದ ಅನಂತರ ಅವನು ಭಗವದ್ಧಾಮಕ್ಕೆ ಮರಳುವನು ಎಂದು ನಾರದರು ಮೋಚಿಗೆ ತಿಳಿಸಿದರು.

ದೇವೋತ್ತಮನ ವ್ಯವಸ್ಥೆ ಎಂತಹ ಅದ್ಭುತ! ಮೋಚಿಯ ಸರಳ ಭಕ್ತಿಯು ಅವನು ಕರ್ಮದ ವೃತ್ತದಿಂದ ಮುಕ್ತನಾಗಿ ಭಗವದ್ಧಾಮಕ್ಕೆ ಮರಳುವ ಅರ್ಹತೆ ನೀಡಿತು. ಬ್ರಾಹ್ಮಣನ ಅಹಂಕಾರ ಹಾಗೂ ನಟನೆಯು ಅವನ ಆಧ್ಯಾತ್ಮಿಕ ಯಶಸ್ಸಿಗೆ ತಡೆ ಉಂಟುಮಾಡಿದವು.

ಮೋಚಿಯಂತೆ ಕೃಷ್ಣ ಪ್ರಜ್ಞೆಯ ಸರಳ ವಿಧಾನವನ್ನು ಅರಿತರೆ ಮತ್ತು ಕೃಷ್ಣನಲ್ಲಿ ಸ್ವಲ್ಪ ಪ್ರೀತಿ ಮತ್ತು ಭಕ್ತಿಯನ್ನು ತೋರಿದರೆ ಅವರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉಳಿದವರು, ಬ್ರಾಹ್ಮಣನಂತೆ ಅನೇಕ ವಿಷಯಗಳನ್ನು ತಿಳಿದಿದ್ದರೂ ಸೋಲುತ್ತಾರೆ. ಬ್ರಾಹ್ಮಣನು ತನ್ನ ತಪ್ಪು ಉದ್ದೇಶಗಳಿಂದ ವಿಫಲನಾದನು. ದೀನ ವೃತ್ತಿಯಲ್ಲಿದ್ದರೂ ಮೋಚಿಯು ಭಗವಂತನ ಒಲವು ಪಡೆದನು ಮತ್ತು ಶಾಶ್ವತ ಧಾಮಕ್ಕೆ ಮರಳಲು ಅರ್ಹತೆ ಗಳಿಸಿದನು.

ನಾವೂ ಯಾಕೆ ಆಗಬಾರದು? ನಾವು ನಮ್ಮ ಎಲ್ಲ ಕರ್ಮಗಳಿಂದ ಮುಕ್ತರಾಗೋಣ. ಒಬ್ಬ ಬಡ ಮೋಚಿಗೆ ಸಾಧ್ಯವಾಗುವುದಾದರೆ ನಮಗೂ ಖಂಡಿತ ಸಾಧ್ಯ. ಮತ್ತು ನಾವು ಅದನ್ನು ಮನಃಪೂರ್ವಕವಾಗಿ ಮಾಡೋಣ. ಶ್ರೀಮಂತರಿರಲಿ, ಬಡವರಿರಲಿ ಎಲ್ಲರೂ ಕರ್ಮದ ನಿಯಮಗಳಿಗೆ ಒಳಪಡುತ್ತಾರೆ. ಆದರೆ, ಕೃಷ್ಣ ಪ್ರಜ್ಞೆಯಲ್ಲಿ ಇರುವವರು ಅದನ್ನೆಲ್ಲ ಮೀರಿ ಸಾಗುತ್ತಾರೆ. ದೊಡ್ಡ ಉದ್ಯಮಿ ಅಥವಾ ಕಡು ಬಡವನಿರಬಹುದು, ಯಾರು ಪ್ರಾಮಾಣಿಕವಾಗಿ ಹರೇ ಕೃಷ್ಣ ಮಂತ್ರವನ್ನು ಜಪಿಸುವರೋ ಅವರು ಭಗವದ್ಧಾಮವನ್ನು ಹೊಂದಬಹುದು. ಅರಣ್ಯ ಬೆಂಕಿಯು ಹೇಗೆ ಬೃಹತ್‌ ಮರಗಳನ್ನು ಸುಟ್ಟು ಬೂದಿ ಮಾಡಬಲ್ಲನೋ, ಹೇಗೆ ಸೂರ್ಯನು ತನ್ನ ಕಿರಣಗಳಿಂದ ಮಂಜನ್ನು ಕರಗಿಸಬಲ್ಲದೋ ಅದೇ ರೀತಿ ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ನಮ್ಮೆಲ್ಲ ಕರ್ಮವು ನಾಶವಾಗಬಲ್ಲುದು ಎಂದು ಭಾಗವತವು ಆಶ್ವಾಸನೆ ನೀಡುತ್ತದೆ.

ಆಧ್ಯಾತ್ಮಿಕ ಚಟುವಟಿಕೆಗಳು ಕರ್ಮದ ನಿಯಮಗಳಿಗಾಚೆ ಇರುವುದರಿಂದ, ಲೌಕಿಕ ಲೋಕದೊಳಗೆ ಪರಿಶುದ್ಧ ಭಕ್ತರನ್ನು ಯಾವುದೇ ಬಂಧನವು ತಡೆ ಒಡ್ಡುವುದು ಸಾಧ್ಯವಿಲ್ಲ. ನಾವೂ ಕೂಡ ನಿರಂತರ, ಅಳುಕಿಲ್ಲದ ಮತ್ತು ದೃಢವಾದ ಭಕ್ತಿ ಸೇವೆಯ ಮೂಲಕ ಅಂತ್ಯ ಕಾಣದ ಕರ್ಮದ ಬಂಧವನ್ನು ಕತ್ತರಿಸಿ ಪಾರಾಗಬಹುದು. ಆ ಸೇವೆಯು ನಾವು ಕೃಷ್ಣನ ಶಾಶ್ವತ ಸೇವಕರೆಂಬ ನಮ್ಮ ಸ್ವಾಭಾವಿಕ ಸ್ಥಾನವನ್ನು ಸದಾ ನೆನಪಿಸುತ್ತದೆ. ಅವನ ಧಾಮಕ್ಕೆ ಮರಳಲು ಇದು ಸಕಾರಾತ್ಮಕ ಮಾರ್ಗ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi