ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತವೇದಾಂತ ಸ್ವಾಮಿ ಪ್ರಭುಪಾದ ಅವರು ಪ್ಯಾರಿಸ್‌ನಲ್ಲಿ, ಜೂನ್ 26, 1971 ರಲ್ಲಿ ನೀಡಿದ ಉಪನ್ಯಾಸ.
ಮಹಿಳೆಯರೇ ಮತ್ತು ಮಹನೀಯರೇ, ಕೃಷ್ಣಪ್ರಜ್ಞಾ ಆಂದೋಲನದಲ್ಲಿ ನೀವು ತೋರುತ್ತಿರುವ ಆಸಕ್ತಿಗೆ ವಂದನೆಗಳು. ಬದುಕಿನ ಧ್ಯೇಯವನ್ನು ಫಲಪ್ರದಗೊಳಿಸಲು ಮಾನವ ಸಮಾಜದಲ್ಲಿ ಗಂಭೀರವಾಗಿರುವವರಿಗೆ ಈ ಆಂದೋಲನವು ಅನ್ವಯವಾಗುವುದು. ಮಾನವ ಮತ್ತು ಪ್ರಾಣಿಗಳ ಬದುಕಿನಲ್ಲಿ ವ್ಯತ್ಯಾಸವಿದೆ. ಪ್ರಾಣಿ ಬದುಕೆಂದರೆ, ದೇಹದ ಮಾಲೀಕ ಯಾರೆಂದು ಗೊತ್ತಿಲ್ಲದಿರುವುದು. ಲೌಕಿಕ ದೇಹವೇ ಆತ್ಮ ಎಂಬ ಗ್ರಹಿಕೆ ಉಳ್ಳವರು ಪ್ರಾಣಿಗಳಂತೆ. ಆದರೆ ಮಾನವ ರೂಪದ ಬದುಕಿನಲ್ಲಿ ವ್ಯಕ್ತಿಯು ಲೌಕಿಕ ದೇಹವಲ್ಲ, ಆದರೆ ಆಧ್ಯಾತ್ಮಿಕ ಮೌಲ್ಯ ಉಳ್ಳ ಪ್ರತ್ಯೇಕ ಗುರುತುಳ್ಳವನು ಎಂದು ಅರ್ಥಮಾಡಿಕೊಳ್ಳಬಹುದು.

ಜನನ ಪ್ರಕ್ರಿಯೆ
ನಾವು ಸ್ವಲ್ಪ ಗಮನ ನೀಡಿದರೆ ಈ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಜೀವನ ಆರಂಭದಿಂದಲೂ ನಾವು ನಮ್ಮ ದೇಹವನ್ನು ಬದಲಿಸುತ್ತಲೇ ಇದ್ದೇವೆ. ಸ್ತ್ರೀ-ಪುರುಷರ ಲೈಂಗಿಕ ಪ್ರಕ್ರಿಯೆಯಾದ ಮೇಲೆ, ಅದು ಫಲಪ್ರದವಾದರೆ, ಜೀವಿಯನ್ನು ಎರಡು ಸ್ರಾವಗಳ ಮಿಶ್ರಣದಲ್ಲಿ ಇಡಲಾಗುವುದು. ಮತ್ತು ಮೊದಲ ರಾತ್ರಿ ದೇಹವು ಬಟಾಣಿ ಬೀಜದ ಆಕಾರ ಪಡೆಯುತ್ತದೆ. ಜೀವಿಯು ಅಲ್ಲಿರುವುದರಿಂದ, ದೇಹವು ಕ್ರಮೇಣ ಬೆಳೆಯುತ್ತದೆ ಮತ್ತು ಒಂಬತ್ತು ರಂಧ್ರಗಳು ಸೃಷ್ಟಿಯಾಗುತ್ತವೆ. ಮುಂದೆ ಅವು ಎರಡು ಕಣ್ಣು, ಎರಡು ಕಿವಿ, ಮೂಗಿನ ಎರಡು ಹೊಳ್ಳೆಗಳು, ಒಂದು ಬಾಯಿ, ಒಂದು ಗುದನಾಳ ಮತ್ತು ಒಂದು ಜನನಾಂಗಗಳಾಗಿ ಬೆಳೆಯುತ್ತವೆ.
ದೇಹ ಸಂಪೂರ್ಣವಾದ ಮೇಲೆ ಜೀವಿಯು ಪ್ರಜ್ಞಾವಂತವಾಗುತ್ತದೆ. ದೇಹ ಪೂರ್ಣವಾಗುವವರೆಗೆ ಈ ಪ್ರಜ್ಞಾವಂತ ಸ್ಥಿತಿಯು ಹೆಚ್ಚೂ ಕಮ್ಮಿ ನಿಶ್ಚೇತ. ಆ ಸ್ಥಿತಿಯನ್ನು ಸುಷುಪ್ತಿ ಅಥವಾ ಗಾಢ ನಿದ್ರೆ ಎನ್ನುವರು. ಅನಂತರ, ಕ್ರಮೇಣ ಪ್ರಜ್ಞಾ ಸ್ಥಿತಿ ಬರುತ್ತಿದ್ದಂತೆ ಗರ್ಭದಲ್ಲಿನ ಮಗುವು ಅಹಿತವನ್ನು ಅನುಭವಿಸಿ ಹೊರಬರಲು ತವಕಿಸುತ್ತದೆ. ಆದುದರಿಂದ ಗರ್ಭದ ಏಳನೇ ತಿಂಗಳಿನಲ್ಲಿ ಕೆಲವು ಬಾರಿ ಮಗುವು ಸಂಚರಿಸಲಾರಂಭಿಸುತ್ತದೆ.
ಇದು ಬೆಳವಣಿಗೆಯ ವಿಧಾನ. ಗರ್ಭದಿಂದ ಹೊರಬಂದಮೇಲೆ ದೇಹದ ಬೆಳವಣಿಗೆ ಮುಂದುವರಿಯುತ್ತದೆ. ಆದರೆ ಮಗುವು ಸತ್ತು ಹೊರಬಂದರೆ ದೇಹದ ಬೆಳವಣಿಗೆಯಾಗುವುದಿಲ್ಲ. ಆದುದರಿಂದ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ಅಧ್ಯಾತ್ಮ ಆತ್ಮದ ಇರುವಿಕೆಯ ಕಾರಣ ದೇಹ ಬೆಳೆಯುತ್ತದೆ ಅಥವಾ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗುತ್ತದೆ. ಪ್ರತಿ ಕ್ಷಣವೂ ದೇಹದಲ್ಲಿ ಬದಲಾವಣೆಯಾಗುತ್ತದೆಂದು ವಿದ್ವಾಂಸರು ತೀರ್ಮಾನಿಸಿದ್ದಾರೆ. ಆದರೆ ಜೀವದ ಆರಂಭದಿಂದಲೂ ಆತ್ಮವಿದ್ದೇ ಇದೆ ಮತ್ತು ದೇಹ ಮುಂದುವರಿಯದಿದ್ದಾಗ ಆತ್ಮವು ಮತ್ತೊಂದು ದೇಹಕ್ಕೆ ಪಲ್ಲಟಗೊಳ್ಳುತ್ತದೆ. ಇದನ್ನು ಆತ್ಮದ ದೇಹಾಂತರ ಅಥವಾ ಪುನರ್‌ಜನ್ಮ ಎಂದು ಕರೆಯುತ್ತಾರೆ.

ಪುನರ್‌ಜನ್ಮವು ವಾಸ್ತವ, ಆದರೆ ಆಧುನಿಕ ನಾಗರಿಕತೆಯು ಈ ವಿಷಯದ ಬಗೆಗೆ ವ್ಯವಹರಿಸುವುದಿಲ್ಲ. ಜನರಲ್ಲಿ ದೇಹವೇ ಆತ್ಮ ಎಂಬ ತಪ್ಪು ಗ್ರಹಿಕೆ ಇದೆ. ನಾನು ಅನೇಕ ವಿದ್ವಾಂಸರೊಂದಿಗೆ ಮಾತನಾಡಿದ್ದೇನೆ. ಅವರಲ್ಲಿಯೂ ಅದೇ ಗ್ರಹಿಕೆಯನ್ನು ಕಂಡೆ. ದೇಹದ ಅಂತ್ಯದೊಂದಿಗೆ ಎಲ್ಲವೂ ಮುಕ್ತಾಯ ಎಂಬ ಗ್ರಹಿಕೆಯದು. ಆದರೆ ವಾಸ್ತವಾಂಶವೇ ಭಿನ್ನವಾಗಿದೆ. ನಾವು ನಮ್ಮ ಶಿಶು ದೇಹವನ್ನು ನೆನಪು ಮಾಡಿಕೊಳ್ಳಬಲ್ಲೆವು. ಬಾಲಕನಾಗಿದ್ದಾಗಿನ ದೇಹವೂ ನೆನಪಿನಲ್ಲಿ ಉಳಿದಿರುತ್ತದೆ. ಆ ದೇಹಗಳು ಈಗ ಇಲ್ಲವಾದರೂ ನಾನು, ಅಧ್ಯಾತ್ಮ ಆತ್ಮ, ದೇಹದ ವಾಸಿ, ಅಥವಾ ದೇಹದ ಮಾಲೀಕ ಉಪಸ್ಥಿತನಾಗಿರುತ್ತೇನೆ.
ಮಾನವ ಸಮಾಜ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಆತ್ಮದ ದೇಹಾಂತರ. ದುರದೃಷ್ಟವೆಂದರೆ, ಈ ಮುಖ್ಯವಾದ ಅಂಶವನ್ನು ಅರಿಯಲು ವಿಶ್ವವಿದ್ಯಾಲಯವಿಲ್ಲ, ಜ್ಞಾನ ವಿಭಾಗಗಳಿಲ್ಲ. ಈ ಲೋಪವು ಅಪಾಯಕಾರಿ.

ಆತ್ಮವು ಒಂದರಿಂದ ಮತ್ತೊಂದಕ್ಕೆ ದೇಹಾಂತರಗೊಳ್ಳುತ್ತಿದೆ ಮತ್ತು 84,00,000 ಜೀವ ಜಾತಿಗಳಿವೆ. ಈ ದೇಹವನ್ನು ಬಿಟ್ಟ ಮೇಲೆ ನಾವು ಈ ಜೀವ ಜಾತಿಗಳಲ್ಲಿ ಯಾವುದಾದರೂ ಒಂದನ್ನು ಸ್ವೀಕರಿಸಬಹುದು. ಯಾವುದೆಂದು ನಮಗೆ ತಿಳಿಯದು. ಪ್ರಸ್ತುತದ ನಮ್ಮ ಕರ್ಮದ ಮೇಲೆ ಅದು ಅವಲಂಬಿತ. ವಾಸ್ತವವಾಗಿ ನಾವು ನಮ್ಮ ಭವಿಷ್ಯದ ದೇಹಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮ ಕರ್ಮ ಮತ್ತು ಮನಸ್ಥಿತಿಯಂತೆ ನಮಗೆ ನಿರ್ದಿಷ್ಟ ದೇಹ ದೊರೆಯುತ್ತದೆ. ಆದುದರಿಂದ ನಾವು ತುಂಬ ಜಾಗೃತರಾಗಿರಬೇಕು. ಭವಿಷ್ಯದ ಬದುಕನ್ನು ಈಗ ಸಿದ್ಧಗೊಳಿಸಲಾಗುವುದು ಎಂಬುದನ್ನು ಬುದ್ಧಿವಂತ ವ್ಯಕ್ತಿ ಅರ್ಥಮಾಡಿಕೊಳ್ಳಬಲ್ಲ. ಬಾಲಕನು ತನ್ನ ಭವಿಷ್ಯದ ಬದುಕಿನ ಸಿದ್ಧತೆಗೆ ಶಾಲೆ ಮತ್ತು ಕಾಲೇಜಿಗೆ ಹೋಗುವಂತೆ ಮಾನವ ರೂಪವು ನಮ್ಮ ಭವಿಷ್ಯದ ಬದುಕಿಗೆ ಸಿದ್ಧತಾ ವೇದಿಕೆಯಾಗಿದೆ.
ಸುಲಭ ಯಾತ್ರೆ
ಭಗವದ್ಗೀತೆಯ ಪ್ರಕಾರ ನಾವು ಇತರ ಗ್ರಹಗಳಿಗೂ ಹೋಗಬಹುದು. ಅದನ್ನು `ಇತರ ಗ್ರಹಗಳಿಗೆ ಸುಲಭ ಯಾತ್ರೆ’ ಎಂಬ ನಮ್ಮ ಪುಸ್ತಕದಲ್ಲಿ ವಿವರಿಸಲಾಗಿದೆ. ಮಾನವನು ಈಗ ಚಂದ್ರನಲ್ಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾನೆ. ಆದರೆ ಯಾಂತ್ರಿಕ ವ್ಯವಸ್ಥೆಯಿಂದ ನಾವು ಚಂದ್ರನಲ್ಲಿಗೆ ವರ್ಗವಾಗುವುದು ಸಾಧ್ಯವಿಲ್ಲ ಎಂದು ನಮಗೆ ವೈದಿಕ ಸಾಹಿತ್ಯದಿಂದ ತಿಳಿದುಬರುತ್ತದೆ. ಅದು ನಿಷ್ಫಲ ಪ್ರಯತ್ನ. ಪ್ರತಿ ಗ್ರಹದಲ್ಲಿಯೂ ಭಿನ್ನವಾದ ವಾತಾವರಣವಿರುತ್ತದೆ. ಆದುದರಿಂದ ಒಂದು ನಿರ್ದಿಷ್ಟ ಗ್ರಹ ಪ್ರವೇಶಿಸಲು ನಾವು ಸಿದ್ಧತೆ ಮಾಡಿಕೊಳ್ಳಬೇಕು. ವಿದೇಶಕ್ಕೆ ಹೋಗಲೂ ಕೂಡ ನಾವು ಪಾಸ್‌ಪೋರ್ಟ್, ವಿಸಾ ಪಡೆದು ಸಿದ್ಧರಾಗಬೇಕಾಗುತ್ತದೆ. ನಾವು ಈ ಗ್ರಹದಲ್ಲಿ ಇಷ್ಟು ನಿರ್ಬಂಧಿತರಿದ್ದಲ್ಲಿ, ಸಿದ್ಧತೆ ಮಾಡಿಕೊಳ್ಳದೆ ಬೇರೊಂದು ಗ್ರಹಕ್ಕೆ ಹೋಗುವ ಪ್ರಯತ್ನ ಎಷ್ಟು ಮೂರ್ಖತನದ್ದು.

ಒಬ್ಬ ಬುದ್ಧಿವಂತನು ಯಾವುದೇ ಐಹಿಕ ಗ್ರಹವನ್ನು ಪ್ರವೇಶಿಸಲು ಇಷ್ಟಪಡುವುದಿಲ್ಲ. ಏಕೆಂದರೆ, ಲೌಕಿಕ ಜಗತ್ತಿನಲ್ಲಿ ನಾವು ಹೋದೆಡೆಯಲ್ಲೆಲ್ಲ ಅಸ್ತಿತ್ವದ ನಾಲ್ಕು ಸಂಕಷ್ಟ ಸ್ಥಿತಿ ಇದ್ದೇ ಇರುತ್ತದೆ – ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗ. ನಾವು ವಿಶ್ವದ ಅತ್ಯುನ್ನತ ಗ್ರಹ ವ್ಯವಸ್ಥೆ, ಬ್ರಹ್ಮಲೋಕವನ್ನು ಪ್ರವೇಶಿಸಿದರೂ ಈ ನಾಲ್ಕು ತತ್ತ್ವಗಳು ಇರುತ್ತವೆ ಎಂದು ನಾವು ಭಗವದ್ಗೀತೆಯಿಂದ ಅರಿಯುತ್ತೇವೆ.
ಬ್ರಹ್ಮಲೋಕದ ಒಂದು ದಿನ ನಮ್ಮ ಲೆಕ್ಕಾಚಾರದ ಲಕ್ಷಾಂತರ ವರ್ಷಗಳೆಂದೂ ಭಗವದ್ಗೀತೆಯಿಂದ ನಾವು ಅರಿಯುತ್ತೇವೆ. ಅಲ್ಲಿಗೆ ಹೋಗಲು 40 ಸಾವಿರ ವರ್ಷಗಳು ಬೇಕೆಂದು ವಿಜ್ಞಾನಿಗಳು ಹೇಳುತ್ತಾರೆ. 40 ಸಾವಿರ ವರ್ಷ ಯಾರು ಪ್ರಯಾಣಿಸುತ್ತಾರೆ? ಆದರೆ ವೈದಿಕ ಸಾಹಿತ್ಯದ ಪ್ರಕಾರ, ಸರಿಯಾಗಿ ಸಿದ್ಧತೆ ಮಾಡಿಕೊಂಡರೆ ನಾವು ಯಾವ ಗ್ರಹವನ್ನೂ ಪ್ರವೇಶಿಸುವುದು ಸಾಧ್ಯ. ಭಗವದ್ಗೀತೆಯ ಪದಗಳೆಂದರೆ –
ಯಾಂತಿ ದೇವವ್ರತಾ ದೇವಾನ್ ಪಿತೃನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಂ ॥
ದೇವತೆಗಳು ವಾಸಿಸುತ್ತಾರೆಂದು ಹೇಳುವ ಉನ್ನತ ಗ್ರಹ ವ್ಯವಸ್ಥೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿದರೆ ಅಲ್ಲಿಗೆ ಹೋಗುವುದು ಸಾಧ್ಯ. ಅದೇ ರೀತಿ ನಾವು ಪಿತೃಲೋಕಕ್ಕೆ (ನಮ್ಮ ಪೂರ್ವಜರ ಗ್ರಹ) ಹೋಗಿ ಅಲ್ಲಿಯೇ ನೆಲೆಸಬಹುದು. ನಾವು ಇಚ್ಛಿಸಿದರೆ ನಾವು ದೇವೋತ್ತಮ ಪರಮ ಪುರುಷನ ಗ್ರಹವನ್ನೂ ಪ್ರವೇಶಿಸಬಹುದು. ಇದೆಲ್ಲಾ ಸಿದ್ಧತೆಯ ವಿಷಯವಷ್ಟೆ.
ಆದರೆ ಐಹಿಕ ಜಗತ್ತಿನ ವ್ಯಾಪ್ತಿಯೊಳಗಿನ ಯಾವುದೇ ಗ್ರಹ ವ್ಯವಸ್ಥೆಯು ತಾತ್ಕಾಲಿಕ ಎಂಬುವುದನ್ನು ನಾವು ಪರಿಗಣಿಸಬೇಕು. ಉನ್ನತ ಗ್ರಹ ವ್ಯವಸ್ಥೆಗಳು ದೀರ್ಘಾವಧಿಯಾಗಿದ್ದರೂ ಕೂಡ ಅವು ನಮ್ಮ ದೇಹಗಳಂತೆ ನಾಶವಾಗುತ್ತವೆ. ವಿಧ ವಿಧವಾದ ದೇಹಗಳಿವೆ. ಮಾನವ ದೇಹವು 100 ವರ್ಷ ಇರಬಹುದು, ಆದರೆ ಕೀಟವೊಂದರ ದೇಹ 12 ತಾಸು ಮಾತ್ರ ಅಸ್ತಿತ್ವದಲ್ಲಿರಬಹುದು. ಆದುದರಿಂದ ದೇಹಗಳು ಅಲ್ಪ ಅಥವಾ ದೀರ್ಘ ಅವಧಿಯಲ್ಲಿ ಅಸ್ತಿತ್ವದಲ್ಲಿರಬಹುದು. ಆದರೆ ಅವು ನಾಶವಾಗುತ್ತವೆ. ಆದರೆ ಆಧ್ಯಾತ್ಮಿಕ ಗ್ರಹ ವೈಕುಂಠ ಲೋಕವನ್ನು ಯಾರು ಪ್ರವೇಶಿಸುವರೋ ಅವರಿಗೆ ಸಂಪೂರ್ಣ ಜ್ಞಾನದ ಆನಂದದ ಬದುಕು ಲಭ್ಯವಾಗುತ್ತದೆ.

ಮಾನವ ಜೀವಿಯು ಪ್ರಯತ್ನಿಸಿದರೆ ಅಂತಹ ಪರಿಪೂರ್ಣತೆಯನ್ನು ಹೊಂದಬಹುದು. ಅದು ತುಂಬ ಸರಳ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ :
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ।।
“ಅರ್ಜುನ, ಯಾರು ಹೀಗೆ ನನ್ನ ಜನ್ಮ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವರೋ ಅವರು ದೇಹತ್ಯಾಗ ಮಾಡಿದ ಮೇಲೆ ಪುನಃ ಈ ಲೌಕಿಕ ಲೋಕದಲ್ಲಿ ಹುಟ್ಟುವುದಿಲ್ಲ. ಅವರು ನನ್ನ ಶಾಶ್ವತ ಧಾಮಕ್ಕೆ ಬರುತ್ತಾರೆ.” `ದೇವರು ದೊಡ್ಡವನು’ ಎಂದು ಜನರು ಹೇಳುತ್ತಾರೆ. ಆದರೆ ದೇವರು ಹೇಗೆ ದೊಡ್ಡವನೆಂದು ತಿಳಿಯಬೇಕೆಂದರೆ ಅದು ಅಧಿಕೃತ ಧರ್ಮ ಗ್ರಂಥಗಳಿಂದ ಸಾಧ್ಯ. ಭಗವದ್ಗೀತೆಯಲ್ಲಿ ಭಗವಂತನೇ ತನ್ನ ಬಗೆಗೆ ವಿವರಿಸುತ್ತಾನೆ. ಅವನು ಹೇಳುತ್ತಾನೆ,
“ನನ್ನ ಆವಿರ್ಭಾವ, ಅಥವಾ ಮಾನವ ಜೀವಿಯಂತೆ ನಾನು ಜನ್ಮ ತಾಳುವುದು ಅಲೌಕಿಕ.” ಭಗವಂತನ ದೇಹವು ಮನುಷ್ಯನ ದೇಹದಂತೆಯೇ ಅಲ್ಲ, ಆದರೆ ಅವನೆಷ್ಟು ಕರುಣಾಳುವೆಂದರೆ ಅವನು ನಮ್ಮ ಮುಂದೆ ಸಾಮಾನ್ಯ ಮನುಷ್ಯನಂತೆ ಬರುತ್ತಾನೆ. ದುರ್ದೈವದ ಸಂಗತಿ ಎಂದರೆ, ಕೃಷ್ಣ ಅಥವಾ ದೇವರ ಬಗೆಗೆ ಗೊತ್ತಿಲ್ಲದವರು ಅವನೂ ನಮ್ಮಂತೆಯೇ ಒಬ್ಬ ಎಂದು ಭಾವಿಸುತ್ತಾರೆ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅವಜಾನಂತಿ ಮಾಂ ಮೂಢಃ – “ಯಾರು ಮೂಢರೋ, ಮೂರ್ಖರೋ ಅವರು ನನ್ನನ್ನು ಒಬ್ಬ ಮಾನವ ಜೀವಿಯೆಂದು ಭಾವಿಸುತ್ತಾರೆ.” ವಾಸ್ತವವಾಗಿ ಕೃಷ್ಣನು ಮಾನವ ಜೀವಿಯಲ್ಲ.

ನಾವು ಸರಿಯಾದ ಸಾಹಿತ್ಯವನ್ನು ಸರಿಯಾದ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದರೆ ನಮಗೆ ಭಗವಂತನನ್ನು ಅರಿಯುವ ಅವಕಾಶವಿದೆ. ಇದು ಸರಳ. ಕೃಷ್ಣ ಅಥವಾ ದೇವರ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದರಿಂದ ನೀವು ಮುಕ್ತರಾಗಬಹುದು. ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ನಮಗಿರುವ ಬುದ್ಧಿಶಕ್ತಿಯಲ್ಲಿ ನಾವು ದೇವೋತ್ತಮ ಪರಮ ಪುರುಷನನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಭಗವದ್ಗೀತೆ, ದೇವೋತ್ತಮ ಪರಮ ಪುರುಷನ ಹೇಳಿಕೆ, ಮತ್ತು ಆಧ್ಯಾತ್ಮಿಕ ಗುರುವಿನ ನೆರವಿನಿಂದ ನಾವು ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಭಗವಂತನನ್ನು ಅರ್ಥಮಾಡಿಕೊಳ್ಳಬಹುದು. ಅವನನ್ನು ಅರಿಯುತ್ತಿದಂತೆಯೇ ನಾವು ನಮ್ಮ ದೇಹ ತ್ಯಜಿಸಿದಾಗ ಅವನ ಧಾಮವನ್ನು ಪ್ರವೇಶಿಸುತ್ತೇವೆ.
ಆಂದೋಲನದ ಧ್ಯೇಯ
ಈ ಉನ್ನತ ವೈಜ್ಞಾನಿಕ ಚಿಂತನೆಯನ್ನು ಜನಸಾಮಾನ್ಯರಲ್ಲಿ ಪ್ರಚುರ ಪಡಿಸಲೆಂದೇ ಕೃಷ್ಣ ಪ್ರಜ್ಞಾ ಆಂದೋಲನ ಇರುವುದು. ಮತ್ತು ಇದರ ವಿಧಾನ ತುಂಬ ಸರಳ. ಹರೇ ಕೃಷ್ಣ , ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ – ಭಗವಂತನ ಈ ಪವಿತ್ರ ನಾಮವನ್ನು ಜಪಿಸುವುದರಿಂದ ವ್ಯಕ್ತಿಯು ತನ್ನ ಹೃದಯದಲ್ಲಿನ ಕಶ್ಮಲವನ್ನು ಶುದ್ಧಗೊಳಿಸಿಕೊಳ್ಳುತ್ತಾನೆ ಮತ್ತು ತಾನು ಭಗವಂತನ ಅವಿಭಾಜ್ಯ ಅಂಗ ಮತ್ತು ಅವನ ಸೇವೆಗೈಯುವುದು ತನ್ನ ಕರ್ತವ್ಯ ಎಂದು ಅರ್ಥಮಾಡಿಕೊಳ್ಳಬಹುದು. ಈ ವಿಧಾನ ಕೂಡ ತುಂಬ ಆಹ್ಲಾದಕರ. ನಾವು ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತೇವೆ, ಲಯಬದ್ಧವಾಗಿ ನರ್ತಿಸುತ್ತೇವೆ ಮತ್ತು ಕೃಷ್ಣನಿಗೆ ಅರ್ಪಿಸಿದ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ನಾವು ಈ ಬದುಕನ್ನು ಆನಂದಿಸುತ್ತೇವೆ ಮತ್ತು ಮುಂದಿನ ಬದುಕಿಗೆ ಭಗವದ್ಧಾಮವನ್ನು ಸೇರಲು ಸಿದ್ಧರಾಗುತ್ತೇವೆ.

ಈ ಚರ್ಚೆಗಳೆಲ್ಲ ಕಟ್ಟು ಕತೆಗಳಲ್ಲ. ಅವು ಜನಸಾಮಾನ್ಯರಿಗೆ ಕತೆಗಳಂತೆ ಕಂಡರೂ ಅವೆಲ್ಲ ವಾಸ್ತವಾಂಶಗಳು. ನೀವು ಗಂಭೀರವಾಗಿದ್ದರೆ, ಭಗವಂತ ಅಥವಾ ಕೃಷ್ಣನು ಆಂತರಿಕವಾಗಿ ಸಹಾಯಮಾಡುತ್ತಾನೆ, ಆಧ್ಯಾತ್ಮಿಕ ಗುರು ಕೂಡ ನೆರವಾಗುತ್ತಾನೆ. ಆಧ್ಯಾತ್ಮಿಕ ಗುರುವನ್ನು ಭಗವಂತನ ಬಾಹ್ಯ ರೂಪವೆಂದು ಕರೆಯುತ್ತಾರೆ. ಭಗವಂತನು ಎಲ್ಲರ ಹೃದಯದಲ್ಲಿಯೂ ಪರಮಾತ್ಮನಾಗಿ ಸ್ಥಾಪಿತಗೊಂಡಿದ್ದಾನೆ. ಮತ್ತು ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಬೇಕೆಂಬ ಗಾಂಭೀರ್ಯ ನಿಮ್ಮಲ್ಲಿದ್ದರೆ ಆಧ್ಯಾತ್ಮಿಕ ಗುರು ನಿಮಗೆ ಸಹಾಯ ಮಾಡುತ್ತಾನೆ. ಈ ರೀತಿ ಒಬ್ಬ ಅಭ್ಯರ್ಥಿಗೆ ಆಂತರಿಕ ಮತ್ತು ಬಾಹ್ಯ ನೆರವು ಲಭ್ಯ.

ಕೃಷ್ಣ ಪ್ರಜ್ಞಾ ಆಂದೋಲನ ಇರುವುದು ಈ ಉದ್ದೇಶಕ್ಕಾಗಿ. ಆಧ್ಯಾತ್ಮಿಕ ಗುರು ಅಥವಾ ಕೃಷ್ಣನ ಪ್ರತಿನಿಧಿಯಾಗಿ ಬಾಹ್ಯದಿಂದ ಸಹಾಯ ಮಾಡಿದರೆ ಪರಮಾತ್ಮ ಅಥವಾ ಕೃಷ್ಣ ಆಂತರಿಕವಾಗಿ ಸಹಾಯಮಾಡುತ್ತಾನೆ. ಜೀವಿಯು ಈ ಎರಡೂ ಮಾರ್ಗಗಳ ಲಾಭ ಪಡೆದುಕೊಂಡು ತನ್ನ ಬದುಕನ್ನು ಹಸನುಗೊಳಿಸಿಕೊಳ್ಳಬಹುದು. ಈ ಸಂಬಂಧದಲ್ಲಿ ಅನೇಕ ಪುಸ್ತಕಗಳಿವೆ. ಕೃಷ್ಣ ಪ್ರಜ್ಞಾ ಆಂದೋಲನವು ಭಗವದ್ಗೀತೆಯಲ್ಲಿ ಮತ್ತು ಇತರ ಅನೇಕ ಗ್ರಂಥಗಳಲ್ಲಿ ಸಾರಾಂಶವಾಗಿ ನಿರೂಪಿಸಿರುವ ವೇದಗಳ ಅಧಿಕೃತತೆ ಮೇಲೆ ಆಧಾರಿತವಾಗಿದೆ. ನಾವು ಭಗವದ್ಗೀತೆ ಯಥಾ ರೂಪ, ಶ್ರೀ ಚೈತನ್ಯರ ಬೋಧನೆಗಳು, ಭಕ್ತಿ ರಸಾಮೃತ ಸಿಂಧು, ಶ್ರೀಮದ್ ಭಾಗವತ ಮತ್ತು ಕೃಷ್ಣ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ನಾವು ನಮ್ಮ ಪತ್ರಿಕೆ `ಬ್ಯಾಕ್ ಟು ಗಾಡ್‌ಹೆಡ್’ ಅನ್ನೂ ಪ್ರಕಟಿಸುತ್ತಿದ್ದೇವೆ. ಈ ಅಧಿಕೃತ ಸಾಹಿತ್ಯವನ್ನು ಓದಿ ನಮ್ಮ ಈ ಆಂದೋಲನವನ್ನು ಅರ್ಥಮಾಡಿಕೊಳ್ಳಬೇಕೆಂದು ನಾವು ಕೋರುತ್ತೇವೆ. ಮಾನವ ಸಮಾಜಕ್ಕೆ ಸೇವೆ, ಪುನಃ ಜನನ, ಮರಣ ವೃತ್ತ ಪ್ರವೇಶಿಸುವ ಸಂಕಷ್ಟದಿಂದ ಜನರ ರಕ್ಷಣೆ ನಮ್ಮ ಕಾರ್ಯಕ್ರಮ. ಅದು ನಮ್ಮ ದೊಡ್ಡ ಧ್ಯೇಯ.






Leave a Reply